'ಕನಸುಗಳಲ್ಲಿ ಸಮಸ್ಯೆ ಪರಿಹಾರ ಸಾಧ್ಯವೆ?' – ಜೆ ಬಾಲಕೃಷ್ಣ ಬರೀತಾರೆ

(ಈ ಲೇಖನದ ಹಿಂದಿನ ಭಾಗ ಇಲ್ಲಿದೆ)J Balakrishna

ಜೆ ಬಾಲಕೃಷ್ಣ

ಜರ್ಮನ್ ರಾಸಾಯನ ಶಾಸ್ತ್ರಜ್ಞ ಫ್ರೆಡರಿಕ್ ಕೆಕುಲೆ ಬೆಂಜೀನ್ನ ರಾಸಾಯನಿಕ ರಚನೆ ರೂಪಿಸಲು ಹಲವಾರು ವರ್ಷಗಳಿಂದ ಹೆಣಗಾಡುತ್ತಿದ್ದರೂ ಸಾಧ್ಯವಾಗಿರಲಿಲ್ಲ. ಅದೇ ಪ್ರಯತ್ನದಲ್ಲಿ 1865ರ ಒಂದು ರಾತ್ರಿ ಅಧ್ಯಯನದಿಂದ ಆಯಾಸಗೊಂಡು ರಾತ್ರಿ ಬೆಂಕಿಯ ಮುಂದೆ ಚಳಿ ಕಾಯಿಸಿಕೊಳ್ಳುತ್ತಾ ತೂಕಡಿಸುತ್ತಿದ್ದ. ಆತನ ಕನಸಿನಲ್ಲಿ ಪರಮಾಣುಗಳ ಚುಕ್ಕಿಗಳ ಹಾಗೆ ಮಿಂಚುತ್ತಾ ಒಂದರ ಹಿಂದೊಂದು ಸರಪಳಿಗಳ ಹಾಗೆ, ಹಾವುಗಳ ಹಾಗೆ ಅತ್ತಿತ್ತ ಓಡಾಡುತ್ತಿರುವುದು ಕಾಣುತ್ತಿತ್ತು. ಅವುಗಳಲ್ಲಿ ಒಂದು ಹಾವು ತನ್ನ ಬಾಲವನ್ನೇ ಕಚ್ಚಿ ವೃತ್ತಾಕಾರದಲ್ಲಿ ಗಿರಗಿರನೆ ತಿರುಗತೊಡಗಿತು. ಮಿಂಚು ಹೊಡೆದಂತೆ ಕೆಕುಲೆಗೆ ಎಚ್ಚರವಾಯಿತು. ಬೆಂಜೀನ್ನ ರಾಸಾಯನಿಕ ರಚನೆ ಒಂದು ಷಡ್ಭುಜ ಎಂದು ಹೊಳೆದು ಆತನ ಹಲವಾರು ವರ್ಷಗಳ ಸಮಸ್ಯೆಗೆ ಪರಿಹಾರ ಕನಸಿನಲ್ಲಿ ದೊರಕಿತ್ತು.
ಬೌದ್ಧಿಕ ಸಮಸ್ಯೆಗಳಿಗೆ ಕನಸುಗಳಲ್ಲಿ ಪರಿಹಾರ ಸಿಗುವುದು ಸಾಧ್ಯವೆ? ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು. ಎಚ್ಚೆತ್ತಿರುವಾಗ ನಮ್ಮ ಬುದ್ಧಿಗೆ ಹೊಳೆಯದ ಹಲವಾರು ವಿಷಯಗಳು ನಾವು ನಿದ್ರೆಯಲ್ಲಿ ಕನಸು ಕಾಣುತ್ತಿರುವಾಗ ಹೊಳೆಯುತ್ತವೆ ಎನ್ನುತ್ತಾರೆ ವಿಜ್ಞಾನಿ ಎರಿಕ್ ಫ್ರಾಮ್.
1
ಮಾರ್ಟನ್ ಶಾಜ್ಮನ್ ಎಂಬ ಅಮೆರಿಕದ ಮನೋವಿಜ್ಞಾನಿ ಒಮ್ಮೆ ವೈದ್ಯ ಗೆಳೆಯರೊಬ್ಬರಿಗೆ ಒಂದು ಪ್ರಶ್ನೆ ಕೊಟ್ಟರು. ‘ಯಾವ ಇಂಗ್ಲಿಷ್ ಪದಗಳು  ಊಇನಿಂದ ಶುರುವಾಗಿ ಊಇನಿಂದಲೇ ಕೊನೆಗೊಳ್ಳುತ್ತವೆ?’ ಉತ್ತರ ಕೊಡಲು ಆ ವೈದ್ಯ ಯೋಚಿಸಿದರು. ಹೊಳೆಯಲಿಲ್ಲ. ಅದರ ಬಗ್ಗೆ ಯೋಚಿಸುತ್ತಾ ಮಲಗುತ್ತೇನೆ. ನೋಡೋಣ ಉತ್ತರ ಕನಸಿನಲ್ಲಿ ಹೊಳೆಯುತ್ತದೇನೋ ಎಂದರು. ಮರುದಿನ ಮಲಗಿ ಎಚ್ಚೆತ್ತಾಗ ಆತನಿಗೆ ಕನಸೊಂದು ಕಂಡ ನೆನಪಿತ್ತು. ಅವರು ವಿವರಿಸಿರುವ ಕನಸು ಹೀಗಿದೆ:
ನಾನು ತೋಟದಲ್ಲಿ ಹೂ ಕೊಯ್ಯುತ್ತಿದ್ದೆ. ಇದ್ದಕ್ಕಿದ್ದಂತೆ ತೀವ್ರ ಎದೆ ನೋವಾಗಿ ನಾನು ಕೆಳಗೆ ಬಿದ್ದು ಬಿಟ್ಟೆ. ನನ್ನ ಪತ್ನಿ ಮನೆಯಿಂದ ಹೊರಬಂದವಳೆ ನನ್ನನ್ನು ನೋಡಿ ನಗತೊಡಗಿದಳು. ಅವಳ ನಗು ನನಗೆ ಅಚ್ಚರಿ ತರಿಸಿತು. ನನಗೆ ಅವಳ ಕನಿಕರ ಬೇಕಿತ್ತು. ಅವಳ ನಗುವಿನಿಂದ ನನ್ನ ನೋವು ಹೆಚ್ಚಾಯಿತು. ಆಕೆ ಆಂಬುಲೆನ್ಸ್ ಕರೆಸಿದಳು. ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ನೋವು ಹೆಚ್ಚಾಗಿದ್ದುದರಿಂದ ಆಂಬುಲೆನ್ಸ್ ಡ್ರೈವರ್ನಿಗೆ ವೇಗವಾಗಿ ಹೋಗಲು ತಿಳಿಸಿದೆ. ಅದಕ್ಕೆ ಆತ ರಸ್ತೆಯಲ್ಲಿ ಮಿದುಳೊಂದು ಬಿದ್ದಿದೆಯೆಂದೂ ಅದನ್ನು ತೆಗೆಯದೆ ಯಾವುದೇ ವಾಹನ ಮುಂದುವರಿಯುವಂತಿಲ್ಲವೆಂದು ಹೇಳಿದ.
ನನ್ನನ್ನು ಆಸ್ಪತ್ರೆಯೊಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಬಹಳಷ್ಟು ಜನರಿದ್ದರು. ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದರು. ನನ್ನ ಕಿವಿಗಳನ್ನು ಮುಚ್ಚಿಕೊಳ್ಳಲು ಯತ್ನಿಸಿದೆ, ಆದರೆ ಸಾಧ್ಯವಾಗಲೇ ಇಲ್ಲ. ಒಬ್ಬ ಡಾಕ್ಟರು, ‘ನಿನಗೆ ಏನಾಗಿದೆಯೆಂದು ನನಗೆ ಗೊತ್ತು’ ಎಂದರು.
‘ನನ್ನ ನೋವು ಕಡಿಮೆ ಮಾಡಿ’ ನಾನೆಂದೆ.
‘ಕಡಿಮೆ ಮಾಡಬಲ್ಲೆ, ಆದರೆ ಮಾಡುವುದಿಲ್ಲ. ಮೊದಲಿಗೆ ನಿನಗೇನಾಗಿದೆಯೆಂದು ಹೇಳು. ನಂತರ ನೋವು ಕಡಿಮೆಯಾಗಿ ನೀನು ಮನೆಗೆ ಹೋಗಬಲ್ಲೆ’ ಎಂದರು.
‘ನನಗೆ ಕಾರೋನರಿ ಪೇನ್ (ಎದೆನೋವು) ಆಗಿದೆ’ ಎಂದೆ.
‘ಆ ತರಹದ ವೈದ್ಯಕೀಯ ಪದ ಬಳಸಬೇಡ’ ಎಂದರು ಆ ವೈದ್ಯರು.
‘ನಾನೊಬ್ಬ ವೈದ್ಯ. ಆದ್ದರಿಂದ ತಾಂತ್ರಿಕ ಪದ ಬಳಸುತ್ತಿದ್ದೇನೆ’ ನಾನಂದೆ.
‘ಹಾಗಾದರೆ ನಿನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ. ನಿನಗೆ  ಏನಾಗಿದೆಯೆಂದು ಸಾಮಾನ್ಯ ಭಾಷೆಯಲ್ಲಿ ತಿಳಿಸು’ ಎಂದ. ಆತ ತನ್ನ ಕೈ ಬಾಯಿಗೆ ಅಡ್ಡ ಇಟ್ಟುಕೊಂಡು ನಗುತ್ತಲೇ ಇದ್ದ. ನನಗೆ ಸಿಟ್ಟು ಬಂತು.
‘ನೀ ಏಕೆ ನಗುತ್ತಿರುವೆ? ನನ್ನ ನೋವು ಸಹಿಸಲು ನನಗೆ ಸಾಧ್ಯವಿಲ್ಲ. ಸಾಮಾನ್ಯ ಭಾಷೆಯಲ್ಲಿ ನೀನು ಅದನ್ನೇನಾದರೂ ಅನ್ನು, ಎದೆ ನೋವಾದರೂ  ಅನ್ನು’ ನಾನೆಂದೆ.
ಆ ವೈದ್ಯ ತಕ್ಷಣ ನಗುವುದನ್ನು ನಿಲ್ಲಿಸಿ, ‘ನೀನಿನ್ನು ಮನೆಗೆ ಹೋಗಬಹುದು’ ಎಂದ.
ಆದರೆ ನನಗಿನ್ನೂ ನೋವಿತ್ತು. ಆದರೆ ಎಲ್ಲೆಂದು ತಿಳಿದಿರಲಿಲ್ಲ. ‘ನನಗಿನ್ನೂ ನೋವು ವಾಸಿಯಾಗಿಲ್ಲ’ ಎಂದೆ.
‘ಹಾಗಾದರೆ ನೀನು ಮತ್ತೊಬ್ಬ ವೈದ್ಯರನ್ನು ಕಾಣಬೇಕು, ಒಬ್ಬ ಪದಗಳ ವಿಶೇಷಜ್ಞರನ್ನು’ ಎಂದ.
ನಾನು ಆಸ್ಪತ್ರೆ ಬಿಟ್ಟು ಹೊರಬಂದೆ. ಅಷ್ಟರಲ್ಲಿ ಮಾರ್ಟನ್ ಶಾಜ್ಮನ್ ಬಂದು (ಆ ವೈದ್ಯನಿಗೆ ಪ್ರಶ್ನೆ ಕೊಟ್ಟಾತ), ‘ನಿನಗೆ ಮೈ ಹುಷಾರಿಲ್ಲವಂತೆ. ನಾನು ಮೊದಲೇ ಹೇಳಿದ್ದೆ, ನಿನ್ನಲ್ಲಿ ಎರಡು ತೊಂದರೆಗಳು ಇವೆಯೆಂದು.’
‘ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಾನು ನಿದ್ರೆ ಮಾಡಬೇಕು’ ನಾನೆಂದೆ.
‘ನಿನಗೆ ಬೇಕಾದಾಗ ನೀನಿ ನಿದ್ರೆ ಮಾಡಬಹುದು. ಆದರೆ ಪದಗಳನ್ನು ಮತ್ತು ನೋವನ್ನು ಅದಲು ಬದಲು ಮಾಡುವುದನ್ನು ಕಲಿಯಬೇಕು’ ಎಂದರು ಶಾಜ್ಮನ್.
‘ಒಗಟುಗಳು ನನಗೆ ತಲೆನೋವು ತರುತ್ತವೆ’ ಎಂದೆ. ತಕ್ಷಣ ನನ್ನೆಲ್ಲ ನೋವು ಮಾಯವಾಯಿತು.
ಅಲ್ಲಿಗೆ ಆತ ನಿದ್ದೆಯಿಂದ ಎಚ್ಚರಗೊಂಡ. ಆತನ ಸಮಸ್ಯೆಗೆ ಉತ್ತರ ದೊರಕಿತ್ತು.
ಕನಸಿನ ಯಾವ ಹಂತದಲ್ಲಿ ಆತನ ಸಮಸ್ಯೆಗೆ ಉತ್ತರ ದೊರಕಿತು? ಕನಸಿನಲ್ಲಿನ ವೈದ್ಯ ‘ನೀನು ಸಾಮಾನ್ಯ ಭಾಷೆಯಲ್ಲಿ ನಿನಗೇನಾಗಿದೆಯೆಂದು ಹೇಳು’ ಎಂದಾಗ ಉತ್ತರ ದೊರಕಿಸುವ ದಿಕ್ಕಿನಲ್ಲಿ ಕನಸು ಸಾಗಿತ್ತು. ಕನಸಿನಲ್ಲಿ ಪ್ರಶ್ನೆ ಕೊಟ್ಟಾತ ಬಂದು, ‘ನೀನು ಪದಗಳನ್ನು ಮತ್ತು ನೋವನ್ನು ಅದಲು ಬದಲು ಮಾಡುವುದನ್ನು ಕಲಿಯಬೇಕು’ ಎಂದಾಗ ಸಹ ಕನಸು ಅವನಿಂದ ಉತ್ತರ ಹೊರಡಿಸುವ ಪ್ರಯತ್ನ ನಡೆಸುತ್ತಿತ್ತು. ಅಂದರೆ ಅವನ ಮನಸ್ಸಿನ ಯಾವುದೋ ಮೂಲೆಗೆ ಉತ್ತರ ಮೊದಲೇ ತಿಳಿದಿದ್ದರೂ ಆತನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿತ್ತು. ಅಲ್ಲದೆ ಆತನಿಗೆ ಕನಸಿನಲ್ಲಿ ನಾಟಕೀಯವಾಗಿ ಸಮಸ್ಯೆಗೆ ಉತ್ತರವನ್ನು ದೊರಕಿಸಿಕೊಟ್ಟಿತ್ತು.
2
ಎಷ್ಟೋ ಸಾರಿ ನಮ್ಮೆಲ್ಲರಲ್ಲೂ ಹಲವಾರು ಸಮಸ್ಯೆಗಳಿಗೆ ಕನಸುಗಳಲ್ಲಿ ಪರಿಹಾರ ದೊರಕಿರಬಹುದು. ಆದರೆ ಬಹುಪಾಲು ಕನಸುಗಳು ಸ್ಮೃತಿಪಟಲದಲ್ಲಿ ಉಳಿಯುವುದಿಲ್ಲವಾದುದರಿಂದ ಆ ಪರಿಹಾರಗಳು ನಮಗೆ ತಿಳಿಯುವುದೇ ಇಲ್ಲ. ಅಲ್ಲದೆ ಕನಸುಗಳ ನೆನಪಾದರೂ ಸಹ ಅವುಗಳಲ್ಲಿ ನಮ್ಮ ಸಮಸ್ಯೆಗಳಿಗೆ ಉತ್ತರ ಯಾವುದೆಂಬುದನ್ನು ಗುರುತಿಸಲು ನಮ್ಮಿಂದ ಸಾಧ್ಯವಾಗದೆಯೂ ಇರಬಹುದು.
ಒಮ್ಮೆ ವಿಲಿಯಂ ಡಿಮೆಂಟ್ ಎಂಬ ವಿಜ್ಞಾನಿ ತಮ್ಮ ವಿದ್ಯಾರ್ಥಿಯೊಬ್ಬನಿಗೆ ಕನಸಿನಲ್ಲಿ ಬಿಡಿಸಲು ಒಂದು ಸಮಸ್ಯೆ ಕೊಟ್ಟರು. ಅವರ ಪ್ರಶ್ನೆ ಹೀಗಿತ್ತು: ‘ಊ, , ಎ, ಏ, ಐ, ಒ, ಓ, ಔ- ಈ ಅಕ್ಷರಗಳಿಗೆ ಉತ್ತರ ಒಂದೇ ಪದದಲ್ಲಿದೆ. ಏನದು?’ ಆ ವಿದ್ಯಾಥರ್ಿಗೆ ಹಲವಾರು ಕನಸುಗಳು ಕಂಡಿದ್ದವು. ಅವುಗಳೆಲ್ಲದರಲ್ಲೂ ನೀರಿರುವ ಅಂಶವಿದ್ದೇ ಇತ್ತು. ಒಂದು ಕನಸಿನಲ್ಲಿ ಸಮುದ್ರದಲ್ಲಿ ಶಾಕರ್್ಗಳ ಬೇಟೆಗೆ ಹೋಗಿದ್ದ. ಇನ್ನೊಂದರಲ್ಲಿ ನೀರಿನಲ್ಲಿ ಈಜಾಡಿದ್ದರೆ ಮತ್ತೊಂದರಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು. ಇನ್ನೂ ಒಂದು ಕನಸಲ್ಲಿ ಆತ ಸಮುದ್ರದಲ್ಲಿ ತೇಲುದೋಣಿಯ ಮೇಲೆ ಹೊರಟಿದ್ದ.
ಅದಾದನಂತರ ಆ ವಿದ್ಯಾರ್ಥಿ ಸಮಸ್ಯೆಗೆ ಉತ್ತರವನ್ನು ಅಕ್ಷರಗಳು ಎಂದಷ್ಟೇ ಕೊಟ್ಟ. ಆದರೆ ಡಿಮೆಂಟ್ರ ಸಮಸ್ಯೆಗೆ ಉತ್ತರ ಅದಾಗಿರಲಿಲ್ಲ. ಉತ್ತರ ‘ನೀರು’ ಎಂದಿರಬೇಕಿತ್ತು. ಏಕೆಂದರೆ ಅವರ ಸಮಸ್ಯೆಯಲ್ಲಿನ ಅಕ್ಷರಗಳು Hರಿಂದ Oವರೆಗೆ ಇದ್ದವು. ಅಂದರೆ ಇಂಗ್ಲಿಷಿನಲ್ಲಿ H2O ಅಥವಾ ನೀರು ಎಂದಾಗಬೇಕಿತ್ತು. ನೀರಿನ ರಾಸಾಯನ ಸೂತ್ರ H2O. ಆ ವಿದ್ಯಾರ್ಥಿಗೆ ಕನಸಿನಲ್ಲಿ ಉತ್ತರ ದೊರಕಿದ್ದರೂ ಆತ ಅದನ್ನು ಗುರುತಿಸುವಲ್ಲಿ ವಿಫಲನಾಗಿದ್ದ.
ವೈಜ್ಞಾನಿಕ ಪತ್ರಿಕೆ ‘ನ್ಯೂ ಸೈಂಟಿಸ್ಟ್’ನಲ್ಲಿ ಮಾರ್ಟನ್ ಶಾಜ್ಮನ್ ಎರಡು ಸಮಸ್ಯೆ ಕೊಟ್ಟು ಓದುಗರಿಗೆ ಅವುಗಳಿಗೆ ಉತ್ತರವನ್ನು ಕನಸಿನಲ್ಲಿ ಕಂಡುಕೊಂಡು ನಂತರ ಅವರಿಗೆ ಬರೆಯಲು ತಿಳಿದಿದ್ದರು. ಅದರಲ್ಲಿ ಒಂದು ಸಮಸ್ಯೆ ಹೀಗಿದೆ: ‘ಈ ಕೆಳಗಿನ ವಾಕ್ಯದ ವಿಶೇಷತೆಯೇನು? I am not very happy acting pleased whenever prominent scientists over magnify intellectual enlightenment
ಕನಸಿನಲ್ಲಿ ಈ ಸಮಸ್ಯೆಗೆ ಉತ್ತರ ಕಂಡುಕೊಂಡ ಹಲವಾರು ಜನ ಅವರಿಗೆ ಪತ್ರಗಳನ್ನು ಬರೆದಿದ್ದರು. ಆ ಕನಸುಗಳ ಕೆಲವು ಉದಾಹರಣೆಗಳು ಹೀಗಿವೆ:
‘ನಾನಿ ನಿದ್ರೆ ಮಾಡುವ ಮುನ್ನ ಆ ವಾಕ್ಯವನ್ನು ಹತ್ತಾರು ಬಾರಿ ಓದಿದೆ. ಆ ರಾತ್ರಿ ನಿದ್ರೆಯಲ್ಲಿ ಕನಸೊಂದು ಕಂಡೆ.
‘ನಾನು ವಶೀಕರಣದ ಬಗ್ಗೆ ಹಲವಾರು ವಿಜ್ಞಾನಿಗಳಿಗೆ ಭಾಷಣ ಮಾಡುತ್ತಿದ್ದೆ. ಒಂದು ದೊಡ್ಡ ಸಭಾಂಗಣದಲ್ಲಿ ದುಂಡು ಮೇಜುಗಳ ಬಳಿ ವಿಜ್ಞಾನಿಗಳೆಲ್ಲಾ ಕೂತಿದ್ದರು. ಆದರೆ ಯಾರೂ ನನ್ನ ಭಾಷಣ ಕೇಳುತ್ತಿರಲಿಲ್ಲ. ನನಗೆ ಸಿಟ್ಟು ಬಂತು. ಜೋರಾಗಿ ಅವರ ನಡತೆ ಸರಿಯಿಲ್ಲವೆಂದು ಕೂಗಿ ಹೇಳಿದೆ. ನನ್ನ ಹತ್ತಿರದ ಮೇಜುಗಳ ಬಳಿ ಕುಳಿತಿದ್ದ ವಿಜ್ಞಾನಿಗಳ ನನ್ನ ಕಡೆ ತಲೆಯೆತ್ತಿ ನೋಡಿದರು.
‘ನನಗೆ ತಕ್ಷಣ ಎಚ್ಚರವಾಯಿತು. ಕನಸನ್ನು ಪುನಃ ನೆನೆಪಿಸಿಕೊಳ್ಳಲು ಯತ್ನಿಸಿದೆ. ತಲೆಯೆತ್ತಿ ನೋಡಿದ ವಿಜ್ಞಾನಿಗಳು ಐದು ಮೇಜುಗಳ ಬಳಿ ಕೂತಿದ್ದರು. ಮೊದಲೆ ಮೇಜಿನ ಬಳಿ ಒಬ್ಬರು, ಎರಡನೇ ಮೇಜಿನ ಬಳಿ ಇಬ್ಬರು, ಮೂರನೇ ಮೇಜಿನ ಬಳಿ ಮೂವರು ಹಾಗೆಯೇ 5ನೇ ಮೇಜಿನವರೆಗೂ ಕೂತಿದ್ದರು. ಈ ಸಂಖ್ಯೆಗೂ ವಾಕ್ಯದ ಸಮಸ್ಯೆಗೂ ಏನೋ ಸಂಬಂಧವಿದೆಯೆನ್ನಿಸಿತು. ಆ ವಾಕ್ಯದ ಪದಗಳಲ್ಲಿನ ಅಕ್ಷರಗಳನ್ನು ಎಣಿಸಿದಾಗ ಮೊದಲನೇ ಪದದಲ್ಲಿ ಒಂದಕ್ಷರ, ಎರಡನೇ ಪದದಲ್ಲಿ ಎರಡು, ಮೂರನೆಯದರಲ್ಲಿ ಮೂರು ಹೀಗೆ ಹದಿಮೂರರವರೆಗೂ ಇತ್ತು. ಇದೇ ಆ ಸಾಲಿನ ವೈಶಿಷ್ಟ್ಯ.
ದೂರ ಸಂಪರ್ಕ ವಿಭಾಗದಲ್ಲಿ ಟೆಲಿಪ್ರಿಂಟರಿನ ಕೆಲಸ ಮಾಡುತ್ತಿದ್ದ ಮತ್ತೊಬ್ಬಾತನ ಕನಸು ಹೀಗಿತ್ತು: ‘ನಾನು ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಸೂಪರ್ವೈಸರ್ ಬಂದು ಟೆಲಿಪ್ರಿಂಟರ್ ತೊಂದರೆ ಕೊಡುತ್ತಿದೆ, ಪರೀಕ್ಷಿಸು ಬಾ ಎಂದು ಕರೆದ. ನಾನು ಆ ಟೆಲಿಪ್ರಿಂಟರ್ನ ಬಳಿ ಹೋಗಿ ಅದನ್ನು ಪರೀಕ್ಷಿಸಲು The quick brown fox jumps over the lazy dog ಎಂದು ಟೈಪ್ ಮಾಡತೊಡಗಿದೆ. ಏಕೆಂದರೆ ಆ ಸಾಲಿನಲ್ಲಿ A ಯಿಂದ Z ವರೆಗಿನ ಅಕ್ಷರಗಳೂ ಇವೆ. ಆದರೆ ನನ್ನ ಸೂಪರ್ವೈಸರ್, ಅದು ಬೇಡ. 123456789 ಟೈಪ್ ಮಾಡು ಎಂದು ಬಲವಂತ ಮಾಡಿದ. ಅಲ್ಲದೆ ಅದನ್ನೇ ಟೈಪ್ ಮಾಡುತ್ತಿರು ಎನ್ನುತ್ತಾನೆ. ನಾವು ವಾದ ಮಡುತ್ತೇನೆ. ಆದರೆ ಆತ ಒಪ್ಪುವುದೇ ಇಲ್ಲ.
‘ನನಗೆ ತಕ್ಷಣ ಎಚ್ಚರವಾಯಿತು. ಸಮಸ್ಯೆಯ ವಾಕ್ಯವನ್ನು ಓದಿದೆ. ಅದರ ಪದಗಳ ಅಕ್ಷರಗಳು 1, 2, 3, 4…. ಹೀಗೆ ಇದ್ದವು.’
ಕನಸುಗಳಲ್ಲಿ ಸಮಸ್ಯೆಗಳಿಗೆ ಉತ್ತರ ಸಿಗುವುದಾದಲ್ಲಿ ಆ ಉತ್ತರಗಳು ಎಲ್ಲಿಂದ ಬರುತ್ತವೆ? ಮಿದುಳಿನ ಯಾವ ಭಾಗದಲ್ಲಿ ಉತ್ತರ ಹೊಳೆಯುತ್ತದೆ? ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನಾವು ಎಚ್ಚೆತ್ತಿರುವಾಗ ಮತ್ತು ನಿದ್ರೆಯಲ್ಲಿರುವಾಗ ಮಿದುಳು ಒಂದೇ ರೀತಿಯಲ್ಲಿ ಕೆಲಸಮಾಡುತ್ತದೆಯೆ? ಹಲವಾರು ಉದಾಹರಣೆಗಳನ್ನು ಗಮನಿಸಿದರೆ ಉತ್ತರ ವ್ಯಕ್ತಪಡಿಸಲು ಮಿದುಳು ಎಚ್ಚೆತ್ತಿರುವಾಗ ಮತ್ತು ನಿದ್ರೆಯಲ್ಲಿರುವಾಗ ಬೇರೆ ಬೇರೆ ರೀತಿ ಕೆಲಸಮಾಡುತ್ತದೆಯೆಂದು ತೋರುತ್ತದೆ.
ಬಹುಪಾಲು ಕನಸುಗಳಲ್ಲಿ ಉತ್ತರ ದೊರಕಿದಾಕ್ಷಣ ಏಕೆ ನಿದ್ರೆಯಿಂದ ಎಚ್ಚರವಾಗುತ್ತದೆ? ಈ ರೀತಿ ಎಚ್ಚರವಾಗುವುದು ಆಕಸ್ಮಿಕವೆ ಅಥವಾ ಮನಸ್ಸಿನ ಯಾವುದೋ ಭಾಗ ಈ ಉತ್ತರವನ್ನು ಗುರುತಿಸಿ ಅದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಲೆಂದೇ ನಮ್ಮನ್ನು ನಿದ್ರೆಯಿಂದ ಎಚ್ಚರಿಸುತ್ತದೆಯೆ?
ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ವಿಜ್ಞಾನಿಗಳ ನಿರಂತರ ಅನ್ವೇಷಣೆ ನಡೆದೇ ಇದೆ. ಈ ಪ್ರಶ್ನೆಗಳಿಗೂ ಉತ್ತರ ಯಾವುದಾದರೂ ವಿಜ್ಞಾನಿಗೆ ಕನಸಿನಲ್ಲೇ ಹೊಳೆಯಬಹುದೆ?
ಕನಸುಗಳು ಭವಿಷ್ಯ ಸೂಚಕವೆ?
ಪ್ರಪಂಚದಾದ್ಯಂತ ಬಹಳ ಜನ ಕನಸುಗಳು ಕೇವಲ ಭೂತ ಕಾಲದ ಅಥವಾ ವರ್ತಮಾನದ ಅನುಭವ ಮಾತ್ರವಲ್ಲ, ಅವು ಭವಿಷ್ಯ ಸೂಚಕ ಎಂದು ನಂಬುತ್ತಾರೆ. ತಾವು ಕನಸಿನಲ್ಲಿ ಕಂಡ ಕೆಲವಾರು ಸಂಗತಿಗಳು ಮುಂದೆ ಹೇಗೆ ನಿಜವಾದವು ಎಂದು ಉದಾಹರಣೆ ಸಹಿತ ವಿವರಿಸುತ್ತಾರೆ. ತಮಗೆ ಬಿದ್ದ ಕನಸನ್ನು ವಿವರಿಸಿ, ಮುಂದಾಗಲಿರುವ ಒಳ್ಳೆಯ ಅಥವಾ ಕಷ್ಟದಾಯಕ ಭವಿಷ್ಯವನ್ನು ತಿಳಿದುಕೊಳ್ಳಲು, ಗುರುಜನರನ್ನು ಭವಿಷ್ಯ ಹೇಳುವವರನ್ನು ಕಾಣುತ್ತಾರೆ. ಅನೇಕ ಅಪಘಾತಗಳೂ, ನಷ್ಟಗಳು, ಸಾವುಗಳು ತಮಗೆ ಕನಸಿನಲ್ಲಿ ಮೊದಲೇ ಕಂಡಿದ್ದವು, ಆದರೆ ಅರ್ಥಮಾಡಿಕೊಳ್ಳಲಾಗಲಿಲ್ಲ ಎಂದು ಹಲಬುತ್ತಾರೆ. ಆದರೆ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ಕನಸುಗಳು ಭವಿಷ್ಯ ಸೂಚಕವಲ್ಲ. ಮನಸ್ಸಿನ ತಾಕಲಾಟಗಳ ಪ್ರತಿಬಿಂಬ ಅಷ್ಟೆ. ಕಾಲರ್್ಯೂಂಗ್ ಹೇಳುವಂತೆ ವ್ಯಕ್ತಿ ನೇರವಾಗಿ ಅಥವಾ ಅಂತರಾಳದಲ್ಲಿ ಏನಾಗಬೇಕೆಂದು ಬಯಸುತ್ತಾನೋ ಅದು ಕನಸಿನಲ್ಲಿ ಬಿಂಬಿತವಾಗುತ್ತದೆ. ಅದು ಹಾಗೆಯೇ ನಡೆದುಬಿಟ್ಟರೆ ಕನಸು ಭವಿಷ್ಯ ಸೂಚಕದಂತೆ ಭಾಸವಾಗುತ್ತದೆ. ಆದರೆ ಕೆಲವರಿಗಾದರೂ ಈ ಎಲ್ಲ ಸಾಮಾನ್ಯ ವಿವರಣೆಗಳನ್ನು ಮೀರಿ, ಅವರ ಅನುಭವ, ಆಲೋಚನೆಯನ್ನು ಮೆಟ್ಟಿ, ಅದ್ಭುತವಾದ, ನಂಬಲು ಕಷ್ಟವಾಗುವ ರೀತಿಯಲ್ಲಿ ಅವರ ಕನಸು ಮುಂದೆ ನಡೆಯಲಿರುವ ಘಟನೆಯ ಮುನ್ಸೂಚನೆಯಾಗುವುದನ್ನು ಜಗತ್ತಿನಾದ್ಯಂತ ಹಲವರು ದಾಖಲು ಮಾಡಿದ್ದಾರೆ. ಇದು ಕಾಕತಾಳೀಯವೆ ಅಥವಾ ಕನಸುಗಳು ನಿಜವಾಗಿಯೂ ಭವಿಷ್ಯ ಸೂಚಕವೇ ಎಂಬುದರ ಬಗೆಗೆ ಸಂಶೋಧನೆಗಳು ನಡೆಯುತ್ತಲೇ ಇವೆ.
ನೆನಪಿನಲ್ಲಿಡಿ
* ಕನಸು ನಿದ್ರೆಯ ಒಂದು ಅವಿಭಾಜ್ಯ ಅಂಗ. ನಿದ್ರಾ ಅವಧಿಯ ಶೇ.10ರಿಂದ 12ರಷ್ಟು ಕಾಲ ನಾವು ಕನಸು ಕಾಣುತ್ತೇವೆ. ಆದರೆ ಬಹುಪಾಲು ಕನಸುಗಳು ನೆನಪಿನಲ್ಲಿ ಉಳಿಯುವುದಿಲ್ಲ.
* ನಿದ್ರೆಯ ಕಣ್ಣು ಚಲಿಸಾಟದ ಅವಧಿಯಲ್ಲಿ (ರೆಮ್ ನಿದ್ರೆ) ನಾವು ಕನಸು ಕಾಣುತ್ತೇವೆ.
* ನಮ್ಮ ಸುಪ್ತ ಮನಸ್ಸಿನ ಹಾಗೂ ಜಾಗೃತ ಮನಸ್ಸಿನ ತಾಕಲಾಟಗಳು ಆಸೆ- ನಿರಾಶೆಗಳು, ಅನುಭವಗಳು ಕನಸುಗಳಲ್ಲಿ ನೇರವಾಗಿ ಅಥವಾ ಸಾಂಕೇತಿಕವಾಗಿ ಪ್ರತಿಬಿಂಬಿತವಾಗುತ್ತವೆ. ಕನಸುಗಳ ವಿಶ್ಲೇಷಣೆಯಿಂದ ಮನಸ್ಸನ್ನು ಅರಿಯಲು ಸಾಧ್ಯವಿದೆ.
* ನಿದ್ರೆಯ ಪ್ರಾರಂಭದಲ್ಲಿ ಬರುವ ಕನಸುಗಳು ನಮ್ಮ ಇತ್ತೀಚಿನ ದಿನಗಳ ಅನುಭವಗಳಿಂದ ಪ್ರೇರಿತವಾದದ್ದಾದರೆ, ನಿದ್ರೆ ದೀರ್ಘ ಹಾಗೂ ಗಾಢವಾಗತೊಡಗಿದಂತೆ ನಮ್ಮ ಬಾಲ್ಯದ ಅಥವಾ ಸುಪ್ತಮನಸ್ಸಿನಲ್ಲಿನ ಅನುಭವಗಳಿಂದ ಪ್ರೇರಿತವಾಗುತ್ತವೆ.
* ಕನಸುಗಳು ಕೇವಲ ದೃಶ್ಯಗಳ ಸರಮಾಲೆ ಅಲ್ಲ. ಜೀವಂತ ಘಟನೆಗಳ ಭಾವನಾತ್ಮಕ ಅನುಭವ.
* ಕನಸುಗಳು ನಮ್ಮ ಮಾನಸಿಕ ಸಮತೋಲನ ಕಾಪಾಡಲು ನೆರವಾಗುತ್ತವೆ.
* ಕನಸಿನಲ್ಲಿ ಪದೇ ಪದೇ ದುಃಖ, ನೋವು, ಭಯವನ್ನುಂಟು ಮಾಡುವ ವಿಷಯಗಳು ಬರುವುದು ಮಾನಸಿಕ ತಳಮಳದ ಸೂಚಿಯಾಗಬಲ್ಲದು.
* ಕನಸುಗಳಲ್ಲಿ ಬರುವ ವಿಷಯ ವಸ್ತುಗಳನ್ನು ಲಾಭ-ನಷ್ಟದ ಅಥವಾ ಸುಖ-ದುಃಖದ ಸೂಚಕ ಎಂದು ಗುರುತಿಸಿ ಅದಕ್ಕೆ ಪ್ರಾಮುಖ್ಯತೆ ಕೊಡುವುದು ಅನುಚಿತ ಹಾಗೂ ಅವೈಜ್ಞಾನಿಕ.
 

‍ಲೇಖಕರು avadhi-sandhyarani

September 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

೧ ಪ್ರತಿಕ್ರಿಯೆ

  1. jayashree Deshpande

    ಮನೋಜ್ಞ ಲೇಖನ. ಮನೋಲೋಕದ ಅ೦ತರ್ಭಾಗವಾದ ಕನಸುಗಳ ವಿಶ್ಲೇಷಣೆ ಬಹಳ ಚೆನ್ನಾಗಿ ಮೂಡಿ ಬ೦ದಿದೆ. ಕನಸುಗಳು ಮಾನಸಿಕ ಬಯಕೆಗಳ ಸ್ವರೂಪವೂ ಭವಿಷ್ಯದ ಕಿರು ಸೂಚಿಗಳೂ ಆಗಿರುವುದನ್ನು ಅನೇಕರು ಅನುಭವಿಸಿದ ಹೇಳಿದ ಬಗ್ಗೆ ಓದಿದ್ದೇವೆ. Thanks for the beautiful article.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: