ಕನಸುಗಳು ಮತ್ತು ಅವುಗಳ ಸಂಕೇತಗಳು – ಜೆ ಬಾಲಕೃಷ್ಣ

ಕನಸುಗಳ ಮಾಯಾಲೋಕದ ಬಗ್ಗೆ ಬರೆಯುತ್ತಿದ್ದಾರೆ ಜೆ ಬಾಲಕೃಷ್ಣ.

ಲೇಖನದ ಮೊದಲ ಭಾಗ ನಿನ್ನೆ ಪ್ರಕಟವಾಗಿತ್ತು. ಮುಂದಿನ ಭಾಗ ಇಲ್ಲಿದೆ.

J Balakrishna

ಜೆ ಬಾಲಕೃಷ್ಣ

ಕನಸುಗಳ ವಿಶ್ಲೇಷಣೆ
ಕನಸುಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ 1861ರಲ್ಲಿ ಎ.ಮಾರಿಯ ಅವರ ‘ನಿದ್ರೆ ಮತ್ತು ಕನಸುಗಳ ಅಧ್ಯಯನ’  ಎಂಬ ಪುಸ್ತಕದ ಪ್ರಕಟಣೆಯೊಂದಿಗೆ ಆರಂಭವಾಯಿತು. ಕನಸುಗಳನ್ನು ಮನೋವಿಶ್ಲೇಷಣೆಯ ಮೂಲಕ ಅರ್ಥೈಸಿಕೊಳ್ಳಲು ಯತ್ನಿಸಿದ ವೈದ್ಯ, ಮನೋವಿಶ್ಲೇಷಣೆಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ‘ಕನಸುಗಳು ನಮ್ಮ ಸುಪ್ತ ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿಕೊಳ್ಳುವ ರಾಜಮಾರ್ಗಗಳು, ನಮ್ಮಲ್ಲಿನ ಆಸೆಗಳನ್ನು ಸಮಾಜದ ಮತ್ತು ನೀತಿಯ ಕಟ್ಟಳೆಗಳಿಗೆ ಹೆದರಿ ಅವುಗಳನ್ನು ನೇರ ವ್ಯಕ್ತಪಡಿಸಿಕೊಳ್ಳಲಾಗದೆ ಅವುಗಳಿಗೆ ಸಂಕೇತಗಳ ಮುಸುಕು ಹಾಕಿ ಅವುಗಳನ್ನು ಕನಸುಗಳಲ್ಲಿ ವ್ಯಕ್ತಪಡಿಸಿಕೊಳ್ಳುತ್ತೇವೆ ಹಾಗೂ ಆ ಮೂಲಕ ನಾವು ಗಾಬರಿಗೊಂಡು ನಿದ್ರೆಯಿಂದ ಎಚ್ಚೆತ್ತುಕೊಳ್ಳದ ಹಾಗೆ ನಿದ್ರೆಯನ್ನೂ ಸಹ ಕಾಯ್ದಿಟ್ಟುಕೊಳ್ಳುತ್ತೇವೆ’ ಎಂದು 1900ರಲ್ಲಿ ಪ್ರಕಟವಾದ ತನ್ನ ಪುಸ್ತಕ ‘ಕನಸುಗಳ ವಿಶ್ಲೇಷಣೆ’ಯಲ್ಲಿ ಹೇಳಿದ್ದಾನೆ. ಆತ ತನ್ನ ರೋಗಿಗಳ ಕನಸುಗಳ ವಿಶ್ಲೇಷಣೆಯ ಮೂಲಕ ಅವರ ಆಸೆ ಆಕಾಂಕ್ಷೆಗಳನ್ನು ಅರಿತು ಅವರ ಕಾಯಿಲೆಯ ಮೂಲವನ್ನು ಹುಡುಕಲು ಯತ್ನಿಸಿದ. ಬಹಳಷ್ಟು ಜನರ ಕನಸುಗಳನ್ನು ಮನೋವಿಶ್ಲೇಷಣಾತ್ಮಕವಾಗಿ ಅಭ್ಯಸಿಸಿದ ಫ್ರಾಯ್ಡ್ ಬಹುಪಾಲು ಕನಸುಗಳೆಲ್ಲಾ ಲೈಂಗಿಕತೆಯ ಬಗೆಗಿನ ಬಾಲಿಶ ಅಭಿಪ್ರಾಯಗಳೆಂಬ ತೀರ್ಮಾನಕ್ಕೆ ಬಂದ. ಲೈಂಗಿಕತೆಯ ಬಗೆಗಿನ ಕುತೂಹಲವನ್ನು ಸಣ್ಣ ಮಗು ವ್ಯಕ್ತಪಡಿಸಲು ತಂದೆ ತಾಯಿಗಳು ಹಾಗೂ ಸಮಾಜ ಅವಕಾಶ ಕೊಡುವುದಿಲ್ಲ. ತಂದೆ ತಾಯಿಗಳಿಗೆ, ಸಮಾಜಕ್ಕೆ ಹೆದರಿ ಬಾಲ್ಯದಿಂದಲೇ ಒಬ್ಬ ವ್ಯಕ್ತಿ ಲೈಂಗಿಕತೆಯ ಬಗೆಗಿನ ಕುತೂಹಲ, ಅಭಿಪ್ರಾಯಗಳನ್ನು ಗೌಪ್ಯವಾಗಿಡುತ್ತಾನೆ. ಈ ಗೌಪ್ಯವಾಗಿಡಬೇಕೆನ್ನುವ ಭಾವನೆ ಸುಪ್ತ ಮನಸ್ಸಿನಲ್ಲಿ ಸಹ ಆಳವಾಗಿ ಬೇರೂರಿಬಿಟ್ಟಿರುತ್ತದೆ. ಆದರೆ ನಮ್ಮ ಕನಸುಗಳಲ್ಲಿ ನಾವು ಮಾತ್ರ ಭಾಗಿಗಳಾಗಿರುತ್ತೇವೆ. ಆತ ತಂದೆ ತಾಯಿಗಾಗಲೀ, ಸಮಾಜಕ್ಕಾಗಲಿ ಹೆದರಬೇಕಾಗಿಲ್ಲ. ನಮ್ಮ ಮನಸ್ಸಿನ ಸುಪ್ತಮನಸ್ಸಿನ ಆಸೆ ಆಕಾಂಕ್ಷೆಗಳನ್ನೆಲ್ಲಾ ಕನಸುಗಳ ಮೂಲಕ ತೀರಿಸಿಕೊಳ್ಳಬಹುದು ಎಂದ ಫ್ರಾಯ್ಡ್.
ಕನಸುಗಳಲ್ಲಿನ ಸಂಕೇತಗಳು
ನಮ್ಮ ಹಲವಾರು ಲೈಂಗಿಕ ಅಭಿಪ್ರಾಯಗಳನ್ನು ಸಮಾಜದ ‘ನೀತಿ’ಗೆ ಹೆದರಿ ಗೌಪ್ಯವಾಗಿಡಬೇಕೆನ್ನುವ ಭಾವನೆ ನಮ್ಮ ಸುಪ್ತ ಮನಸ್ಸಿನಲ್ಲಿಯೂ ಸಹ ಬೇರೂರಿರುವುದತರಿಂದ ಕನಸುಗಳೂ ಸಹ ಅವನ್ನು ನೇರವಾಗಿ ವ್ಯಕ್ತಪಡಿಸದೆ ಸಾಂಕೇತಿಕವಾಗಿ ವ್ಯಕ್ತಪಡಿಸುತ್ತವೆ. ಯಾರಾದರೂ ಕನಸಿನಲ್ಲಿ ತಾನು ಕಂಡ ಕನಸನ್ನು ಕಂಡ ಹಾಗೇ ಹೇಳಿದರೆ ಆ ಕನಸಿನ ಅರ್ಥ ಆತ ಕಂಡದ್ದೇ ಆಗಿರುವುದಿಲ್ಲ; ಆತ ಕಂಡ ದೃಶ್ಯಗಳ ಹಾಗೂ ಸಂಕೇತಗಳನ್ನು ವಿಶ್ಲೇಷಿಸುವುದರ ಮೂಲಕ ಆ ಕನಸನ್ನು ಅರ್ಥೈಸಿಕೊಳ್ಳಬಹುದು ಎಂದ ಫ್ರಾಯ್ಡ್. ಆ ಸಂಕೇತಗಳನ್ನು ವಿಶ್ಲೇಷಿಸಬೇಕಾದರೆ ಕನಸು ಕಂಡ ವ್ಯಕ್ತಿಯೊಡನೆ ‘ಮುಕ್ತ ಸಂವಾದ’ ನಡೆಸಬೇಕು ಎಂದ. ಒಬ್ಬಾಕೆಗೆ ತನ್ನ ಕನಸಿನಲ್ಲಿ ಬ್ರಿಟನ್ನಿನ ಬಾವುಟ ಕಂಡಾಗ ದೇಶಭಕ್ತಿಯಿಂದ ಆಕೆಯ ಮೈ ರೋಮಾಂಚನಗೊಂಡಿತಂತೆ. ನಂತರ ಆಕೆಯೊಂದಿಗೆ ಮುಕ್ತ ಸಂವಾದ ನಡೆಸುವಾಗ ಆಕೆ ಲಂಡನ್ನಿನ ಹುಡುಗನೊಬ್ಬನೊಂದಿಗೆ ಪ್ರೇಮದಲ್ಲಿರುವ ವಿಷಯ ಹೊರಬಿತ್ತು. ಆ ಹುಡುಗ ಆಕೆಯ ಕನಸಿನಲ್ಲಿ ಬಾವುಟವಾಗಿ ಬಂದಿದ್ದ. ಅವನ ಮೇಲಿನ ಪ್ರೀತಿ ಬಾವುಟವನ್ನು ಕಂಡಾಗಿನ ‘ದೇಶ ಭಕ್ತಿ’ಯಾಗಿತ್ತು ಹಾಗೂ ಅದರಿಂದ ಆಕೆಗೆ ಆ ಹುಡುಗನ್ನು ಕಂಡಾಗ ಆಗುತ್ತಿದ್ದ ಹಾಗೆ ರೋಮಾಂಚನ ಸಹ ಆಗಿತ್ತು.
1
ಬಹಳಷ್ಟು ಜನರ ಕನಸಿನ ವಿವರಗಳನ್ನು ಹಾಗೂ ಸಂಕೇತಗಳನ್ನು ಅಭ್ಯಸಿಸಿದ ಫ್ರಾಯ್ಡ್ ಹಲವಾರು ಸಂಕೇತಗಳಿಗೂ ಮತ್ತು ಕೆಲವೊಂದು ಸುಪ್ತ ಮನಸ್ಸಿನ ಆಸೆ ಆಕಾಂಕ್ಷೆಗಳಿಗೆ ಸಂಬಂಧವಿದೆಯೆಂದೂ ಹಾಗಾಗಿ ಹಲವಾರು ಸಂಕೇತಗಳು ಬಹಳಷ್ಟು ಜನರ ಕನಸುಗಳಲ್ಲಿ ಒಂದೇ ಅರ್ಥ ಕೊಡುತ್ತವೆಂದು ಹೇಳಿದ. ಅಂದರೆ ಒಬ್ಬನ ಕನಸಿನಲ್ಲಿ ಮೊಲೆಯ ಸಂಕೇತವಾಗಿ ಕಿತ್ತಳೆ ಹಣ್ಣು ಬಂದಲ್ಲಿ ಬೇರೆಯವರ ಕನಸಿನಲ್ಲಿ ಬರುವ ಕಿತ್ತಳೆ ಹಣ್ಣುಗಳೆಲ್ಲಾ ಮೊಲೆಯ ಸಂಕೇತಗಳೇ ಎನ್ನುವ ತೀರ್ಮಾನಕ್ಕೆ ಆತ ಬಂದ.
ಅಮೆರಿಕದ ವಿಜ್ಞಾನಿ ಕ್ಯಾಲ್ವಿನ್ ಹಾಲ್, ಫ್ರಾಯ್ಡ್ನ ಈ ‘ಮಾದರಿ ಸಂಕೇತ’ಗಳ ವಾದವನ್ನು ಒಪ್ಪಿಕೊಳ್ಳಲಿಲ್ಲ. ಅವನ ಪ್ರಕಾರ ಒಂದು ಕನಸಿನಲ್ಲಿನ ಸಂಕೇತಗಳ ಅರ್ಥ ಆಯಾ ವ್ಯಕ್ತಿಯ ಹಾಗೂ ಆತನ ಬದುಕಿನ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ. ಒಬ್ಬನ ಕನಸಿನಲ್ಲಿ ಹಸು ಮ್ರಾತೃತ್ವದ ಸಂಕೇತವಾಗಿ ಬಂದರೆ ಮತ್ತೊಬ್ಬನಿಗೆ ಹಸುಗಳ ಬಗ್ಗೆ ಹೆದರಿಕೆಯಿದ್ದು ಅವನ ಕನಸಿನಲ್ಲಿ ಹೆದರಿಕೆಯ ಸಂಕೇತವಾಗಿ ಬರಬಹುದು.
ಬಹುಪಾಲು ಎಲ್ಲರಿಗೂ ಕನಸಿನಲ್ಲಿ ಹಾವುಗಳು ಒಂದಲ್ಲ ಒಂದು ಬಾರಿ ಬಂದೇ ಇರುತ್ತವೆ. ಹಾವುಗಳನ್ನು ಶಿಶ್ನದ ಸಂಕೇತವೆಂದ ಫ್ರಾಯ್ಡ್ (ಹಿಂದೂ ಧರ್ಮವನ್ನು ಫ್ರಾಯ್ಡ್ನ ಮನೋವಿಶ್ಲೇಷಣೆಯ ಬೆಳಕಿನಲ್ಲಿ ಅಭ್ಯಸಿಸಿರುವ ಪಿ.ಸ್ಪ್ರ್ಯಾಟ್ ಹಿಂದೂಗಳಲ್ಲಿನ ನಾಗಪೂಜೆಯನ್ನು ಶಿಶ್ನದ ಸಂಕೇತದ ಆರಾಧನೆಯೆಂದೇ ಕರೆದಿದ್ದಾನೆ). ಆದರೆ ಕನಸುಗಳಲ್ಲಿ ಹೆಚ್ಚಿಗೆ ಹಾವುಗಳು ಬರಲು ಕಾರಣ ನಮ್ಮ ಪೂರ್ವಜರಾದ ಆದಿಮಾನವರಿಗೆ ಸರೀಸೃಪಗಳ ಬಗ್ಗೆ ಇದ್ದ ಹೆದರಿಕೆಯೇ ಕಾರಣವೆಂದು ನ್ಯಾಸಾದ ವಿಜ್ಞಾನಿಯಾಗಿದ್ದ ಕಾರ್ಲ್ ಸಾಗನ್ ಹೇಳಿದ್ದಾರೆ. ನಮ್ಮ ಪೂರ್ವಜರಲ್ಲಿದ್ದ ಹೆದರಿಕೆ, ದ್ವೇಷ ವಂಶವಾಹಿಯಾಗಿ ನಮಗೂ ಬಂದಿದೆಯೆಂಬುದು  ಕಾರ್ಲ್  ಸಾಗನ್ರ ಅಭಿಪ್ರಾಯ. ಎತ್ತರದ ಸ್ಥಳಗಳಿಂದ ಬೀಳುವ ಹೆದರಿಕೆಯನ್ನು ಸಾಮಾನ್ಯವಾಗಿ ಕನಸುಗಳಲ್ಲಿ ವ್ಯಕ್ತಪಡಿಸಿಕೊಳ್ಳುತ್ತೇವೆ. ನಮ್ಮ ಪ್ರಾಚೀನ ಪೂರ್ವಜರು ಮರಗಳ ಮೇಲಿದ್ದುದರಿಂದ ಅವರಿಗೆ ಅಲ್ಲಿಂದ ಬೀಳುವ ಹೆದರಿಕೆ ಇದ್ದೇ ಇತ್ತು. ಆ ಹೆದರಿಕೆಯ ಪ್ರತಿಮೆಯ ಶೇಷ ನಮ್ಮಲ್ಲಿ ಉಳಿದುಕೊಂಡಿರುವುದರಿಂದ ಆಗಾಗ ಅದು ಕನಸುಗಳಲ್ಲಿ ವ್ಯಕ್ತವಾಗುತ್ತದೆ ಎಂದೂ ಆತ ಹೇಳಿದ್ದಾರೆ.
ಹಲವಾರು ಕನಸುಗಳ ವರದಿಗಳನ್ನು ಅಭ್ಯಸಿಸಿರುವ ಮ್ಯಾಂಚೆಸ್ಟರ್ನ ವಿಜ್ಞಾನಿ ಸ್ಟೀಫನ್ ಸೀಲಿ, ಕನಸುಗಳಲ್ಲಿನ ಸಂಕೇತಗಳು ಜೀವಕೋಶ ಮತ್ತು ವೀರ್ಯಾಣುಗಳನ್ನು ಸಹ ಪ್ರತಿನಿಧಿಸಬಹುದೆಂದರು. ಹೆಣ್ಣಿನಲ್ಲಿ ನಡೆಯುವ ಅಂಡಾಣುವಿನ ಬಿಡುಗಡೆ, ಗಂಡಿನಲ್ಲಿನ ವೀರ್ಯಾಣುವಿನ ಉತ್ಪತ್ತ ಆ ಸಮಯಗಳಲ್ಲಿ ನಡೆಯುವ ಕೋಶವಿಭಜನೆ, ಕ್ರೋಮೋಸೋಮುಗಳ ವಿಂಗಡಣೆ ಮುಂತಾದವು ಶೇಕಡಾ ಒಂದರಷ್ಟು ಕನಸುಗಳಲ್ಲಿ ಸಂಕೇತಗಳ ಮೂಲಕ ವ್ಯಕ್ತಗೊಳ್ಳುತ್ತವೆ ಎಂದಿದ್ದಾರೆ.
ಹಲವಾರು ವರ್ಷಗಳವರೆಗೆ ಹಲವಾರು ಕನಸುಗಳ ವರದಿಗಳನ್ನು ಸಂಗ್ರಹಿಸಿ ಫ್ರಾಯ್ಡ್ನ ವಾದದ ಬೆಳಕಿನಲ್ಲಿಯೇ ವಿಶ್ಲೇಷಿಸಿ ಫ್ರಾಯ್ಡ್ನ ವಾದದಂತೆ ಕನಸುಗಳು ನಮ್ಮ ಆಸೆ ಆಕಾಂಕ್ಷೆಗಳನ್ನು ಸಂಕೇತಗಳು ಗೋಪ್ಯವಾಗಿಡುವುದಿಲ್ಲ, ಆದರೆ ಅದಕ್ಕೆ ತದ್ವಿರುದ್ಧವಾಗಿ ಅವುಗಳನ್ನು ವ್ಯಕ್ತಪಡಿಸುತ್ತವೆ ಎಂದಿದ್ದಾರೆ ಕ್ಯಾಲ್ವಿನ್ ಹಾಲ್.
ಸಂಕೇತಗಳ ತೀವ್ರತೆಗೆ ಅನುಗುಣವಾಗಿ ಕನಸುಗಳನ್ನು ಮೂರು ಬಗೆಗಳಾಗಿ ವಿಂಗಡಿಸಬಹುದು.

  1. ಅರ್ಥವಾಗುವ ಕನಸುಗಳು: ಇಲ್ಲಿ ಸಂಕೇತಗಳು ಬಹಳ ಕಡಿಮೆ, ವಿಷಯ ನೇರವಾಗಿ ವ್ಯಕ್ತಗೊಳ್ಳುತ್ತದೆ. ಉದಾಹರಣೆಗೆ ನಿರುದ್ಯೋಗಿ ಒಳ್ಳೆಯ ಉದ್ಯೋಗ ಪಡೆದಂತೆ ಕನಸು ಕಾಣುವುದು. ಪರೀಕ್ಷಾ ಫಲಿತಾಂಶದ ಬಗ್ಗೆ ಕಾತರಗೊಂಡಿರುವ ವಿದ್ಯಾರ್ಥಿ ಕನಸಿನಲ್ಲಿ ಪಾಸಾದಂತೆ ಅಥವಾ ಫೇಲಾದಂತೆ ಕಾಣುವುದು. ಅವಿಭಕ್ತ ಕುಟುಂಬದಲ್ಲಿ ಹಿಂಸೆಯನ್ನು ಅನುಭವಿಸುತ್ತಿರುವ ಸೊಸೆ ಪ್ರತ್ಯೇಕ ಸಂಸಾರ ಹೂಡಿದಂತೆ ಕನಸಿನಲ್ಲಿ ಕಾಣುವುದು. ಈ ಬಗೆಯ ಕನಸ್ಸುಗಳ ವಸ್ತುಗಳು ಜಾಗೃತ ಮನಸ್ಸಿನಿಂದ ಬರುತ್ತವೆ.
  2. ಅರ್ಥವಾಗುವ ಆದರೆ ಗೊಂದಲ ಮೂಡಿಸುವ ಕನಸುಗಳು: ಇಲ್ಲಿಯೂ ಸಂಕೇತಗಳ ಬಳಕೆ ಕಡಿಮೆ ಇದ್ದರೂ, ಕನಸುಗಳು ಸುಲಭವಾಗಿ ಅರ್ಥವಾದರೂ ಅವುಗಳ ಅರ್ಥ ವ್ಯಕ್ತಿಗೆ ಗೊಂದಲ, ಗಾಬರಿ, ಅಚ್ಚರಿಯನ್ನುಂಟು ಮಾಡುತ್ತವೆ. ಉದಾಹರಣೆಗೆ, ವ್ಯಕ್ತಿ ತಾನು ಇಷ್ಟ ಪಡುವ ಚಿಕ್ಕಪ್ಪ ತನ್ನನ್ನು ಹೀನಾಮಾನ ಬೈದಂತೆ ಕನಸಿನಲ್ಲಿ ಕಾಣಬಹುದು. ಎಂದೂ ನೆನಪಿಸಿಕೊಳ್ಳದ ದೂರದ ನೆಂಟರೊಬ್ಬರು ಸತ್ತು ಅವರ ಶವಯಾತ್ರೆಯನ್ನು ನೋಡಿದಂತೆ ಕಾಣಬಹುದು.
  3. ಅರ್ಥವಾಗದ ಅಸಂಬದ್ಧ ಕನಸುಗಳು: ಇಲ್ಲಿ ಪ್ರತಿಯೊಂದು ವಿಷಯವೂ ಸಂಕೇತ ರೂಪದಲ್ಲಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಕನಸು ತೀರಾ ಅಸಂಬದ್ಧವಾಗಿ, ವಿಚಿತ್ರವಾಗಿ, ಅರ್ಥಹೀನವಾಗಿ ಕಾಣುತ್ತದೆ. ಕಂಡ ಕನಸಿನ ತಲೆಬುಡ ತಿಳಿಯುವುದಿಲ್ಲ. ಸುಪ್ತ ಮನಸ್ಸಿನ ಅದುಮಿಡಲಾದ ವಿಷಯಗಳು ಬಹಳ ಸಾಂಕೇತಿಕವಾಗಿ ಪ್ರಕಟವಾಗುವುದೇ ಇದಕ್ಕೆ ಕಾರಣ.

ಸ್ವಪ್ನ ಸ್ಖಲನ
ಕನಸಲ್ಲಿ ಯಾವುದಾದರೂ ಲೈಂಗಿಕ ಸನ್ನಿವೇಶ ಬಂದು ಸ್ಖಲನವಾದಲ್ಲಿ ಅದನ್ನು ಸ್ವಪ್ನ ಸ್ಖಲನವೆನ್ನುತ್ತಾರೆ. ಇದರ ಬಗ್ಗೆ ಜನರಲ್ಲಿರುವ ಅಜ್ಞಾನದಿಂದ ಹುಸಿವೈದ್ಯರು ಅದನ್ನು ಸ್ವಪ್ನದೋಷ, ವೀರ್ಯನಾಶ ಇತ್ಯಾದಿ ಹೆಸರುಗಳಿಂದ ಅದನ್ನು ಒಂದು ಕಾಯಿಲೆಯೆಂದು ಹೇಳಿ ಸುಳ್ಳು ಔಷಧಗಳನ್ನು ಕೊಟ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ವೈದ್ಯರ ಬಳಿ ಹೋಗದ ಜನ ಸ್ವಪ್ನ ಸ್ಖಲನವಾದಾಗಲೆಲ್ಲಾ ಏನೋ ತಪ್ಪು ಮಾಡಿದವರಂತೆ ಪಾಪಪ್ರಜ್ಞೆಯಿಂದ ಆಕಾಶವೇ ತಲೆಯ ಮೇಲೆ ಬಿದ್ದಂತೆ ಭಯಪಡುತ್ತಾರೆ.
ಆರ್.ಇ.ಎಂ. ನಿದ್ರಾ ಅವಧಿಯಲ್ಲಿ ಸ್ವಾಯತ್ತ ನರವ್ಯವಸ್ಥೆ ಪ್ರಚೋದನೆಗೊಳ್ಳುತ್ತದೆ. ಉಸಿರಾಟ, ಹೃದಯಬಡಿತ, ರಕ್ತದೊತ್ತಡ ಏರುಪೇರಾಗುವಂತೆ ಪರಾನುವೇದಕ ನರತಂತುಗಳೂ ಪ್ರಚೋದನೆಗೊಳ್ಳುತ್ತವೆಯಾಗಿ ಜನನಾಂಗ ಉದ್ರೇಕಗೊಳ್ಳುತ್ತದೆ. ಬಳಿಕೆ ಅನುವೇದಕ ನರತಂತುಗಳೂ ಪ್ರಚೋದನೆಗೊಂಡು ವೀರ್ಯ ಸ್ಖಲನವಾಗುತ್ತದೆ. ಇದಲ್ಲದೆ ಲೈಂಗಿಕ ದೃಶ್ಯಗಳೂ, ವಿಚಾರಗಳೂ ಕನಸಲ್ಲಿ ಬಂದು ವೀರ್ಯಸ್ಖಲನವಾಗಬಹುದು. ಆದುದರಿಂದ ಸ್ವಪ್ನ ಸ್ಖಲನ ಒಂದು ಸಹಜ, ಸ್ವಾಭಾವಿಕ ಕ್ರಿಯೆ. ಅದು ಆಗುವುದು, ವ್ಯಕ್ತಿಯ ಲೈಂಗಿಕ ವ್ಯವಸ್ಥೆ ಕೆಲಸ ಮಾಡುತ್ತಿರುವ ಸೂಚಕ. ಇದರ ಬಗ್ಗೆ ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ.
ಕನಸುಗಳಲ್ಲಿ ಲೈಂಗಿಕ ಸಂಕೇತಗಳು
2
ಕ್ಯಾಲ್ವಿನ್ ಹಾಲ್ ಕನಸುಗಳಲ್ಲಿನ ಸಂಕೇತಗಳನ್ನು ಅಭ್ಯಸಿಸುವಾಗ ಹಲವಾರು ಸಂಕೇತಗಳು ನಾವು ಎಚ್ಚೆತ್ತ ಬದುಕಿನಲ್ಲಿ ಬಳಸುವ ಬಹಳಷ್ಟು ಸಂಕೇತಗಳಿಗೆ ಸಮೀಕರಿಸಬಹುದೆಂದು ತೋರಿಸಿದ. ನಮ್ಮ ಹಗಲುಗನಸಿನ ಲೈಂಗಿಕ ಭ್ರಮೆಗಳಲ್ಲಿನ ತಮ್ಮ ದಿನನಿತ್ಯದ ಮಾತುಗಳಲ್ಲಿನ ಸಂಕೇತಗಳಿಗೂ ನಿದ್ದೆಗನಸುಗಳಲ್ಲಿನ ಲೈಂಗಿಕ ಸಂಕೇತಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲವೆಂದು ಹೇಳಿದ. ದಿನನಿತ್ಯದ ಆಡುಮಾತುಗಳ ಶಬ್ದಕೋಶವನ್ನು ಪರಿಶೀಲಿಸಿದಾಗ ಸಂಭೋಗ ಮತ್ತು ಜನನಾಂಗಗಳಿಗೆ ಬಳಸುತ್ತಿದ್ದ ಸಂಕೇತಗಳ ಮತ್ತು ಆಡುಮಾತುಗಳ ಪದಗಳ ಸಂಖ್ಯೆ ಗಾಬರಿ ಹುಟ್ಟಿಸುವ ಹಾಗಿತ್ತು. ಕ್ಯಾಲ್ವಿನ್ ಹಾಲ್ ಅವುಗಳನ್ನು ಪಟ್ಟಿ ಮಾಡಿದಾಗ ಸಂಭೋಗಕ್ಕೆ 212, ಶಿಶ್ನಕ್ಕೆ 200 ಮತ್ತು ಯೋನಿಗೆ 330 ಹೆಸರುಗಳು ಸಿಕ್ಕಿದವು. ಬಹುಶಃ ಕನ್ನಡದಲ್ಲಿನ ಆಡುಭಾಷೆಯಲ್ಲಿ ಇವುಗಳಿಗಿರುವ ವಿವಿಧ ಹೆಸರು, ಸಂಕೇತಗಳನ್ನು ಯಾರೂ ಪಟ್ಟಿ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲವೆನ್ನಿಸುತ್ತದೆ!
ಆತ ಆ ಪಟ್ಟಿಯನ್ನು ಪರಿಷ್ಕರಿಸಿದ ನಂತರ ಕನಸುಗಳಲ್ಲಿ ಬರಬಹುದಾದ 102 ಶಿಶ್ನದ ಸಂಕೇತಗಳನ್ನೂ (ಕೋಲು, ಬಂದೂಕು, ಪೆನ್ನು ಮುಂತಾದವು) ಮತ್ತು 55 ಸಂಭೋಗದ ಸಂಕೇತಗಳನ್ನೂ (ಕುದುರೆ ಸವಾರಿ, ಸೈಕಲ್ ಸವಾರಿ, ಬಂದೂಕು ಹಾರಿಸುವುದು, ನೇಗಿಲಿನಿಂದ ಉಳುವುದು, ಚಾವಟಿಯಿಂದ ಹೊಡೆಯುವುದು ಮುಂತಾದುವು) ಪಟ್ಟಿ ಮಾಡಿದ.
ಇವೆಲ್ಲಾ ಲೈಂಗಿಕ ಸಂಕೇತಗಳು ನಿಜ, ಆದರೆ ಆ ಸಂಕೇತಗಳು ಕನಸಿನಲ್ಲಿ ಬಂದಾಗಲೆಲ್ಲಾ ಲೈಂಗಿಕ ಸಂಕೇತಗಳೇ ಆಗಿರಬೇಕೆಂದೇನೂ ಇಲ್ಲ. ಆ ದೃಶ್ಯಗಳು ಕನಸಿನಲ್ಲಿ ಬಂದು ಕನಸು ಕಾಣುತ್ತಿರುವವರಲ್ಲಿ ಸ್ಖಲನವಾದಲ್ಲಿ ಆ ದೃಶ್ಯಗಳು ಲೈಂಗಿಕ ಸಂಕೇತಗಳೆಂದು ಯಾವ ಸಂಶಯವೂ ಇಲ್ಲದೆ ಗುರುತಿಸಬಹುದು. ಸ್ಖಲನವಾಗದಿದ್ದಲ್ಲಿ ಅಂಥ ಸಂಕೇತಗಳು ಲೈಂಗಿಕತೆಗೆ ಸಂಬಂಧಪಟ್ಟಿವೆಯೋ ಇಲ್ಲವೋ ಎಂದು ಕನಸು ಕಂಡವರೊಂದಿಗೆ ‘ಮುಕ್ತ ಸಂವಾದ’ವೋ ಅಥವಾ ಇನ್ನಾವುದಾದರೂ ಮನೋವಿಶ್ಲೇಷಣೆಯ ವಿಧಾನವನ್ನು ಅನುಸರಿಸಿ ತಿಳಿಯಬೇಕಾಗುತ್ತದೆ.
ಒಬ್ಬಾತನಿಗೆ ಕನಸಿನಲ್ಲಿ ‘ಏಣಿ ಹತ್ತುವಾಗ’ ವೀರ್ಯಸ್ಖಲನವಾಗಬಹುದು. ಮತ್ತೊಂದು ರಾತ್ರಿ ಅದೇ ಏಣಿ ಹತ್ತುವ ಕನಸು ಬಂದರೂ ಸ್ಖಲನವಾಗದಿರಬಹುದು. ಅಂದರೆ ಒಂದು ಕನಸಿನಲ್ಲಿ ಲೈಂಗಿಕ ಸಂಕೇತವಾಗಿದ್ದ ಏಣಿ ಹತ್ತುವ ಕ್ರಿಯೆ ಅದೇ ಮನುಷ್ಯನಿಗೆ ಮತ್ತೊಂದು ಕನಸಿನಲ್ಲಿ ಲೈಂಗಿಕ ಸಂಕೇತವಾಗಿರದೆ ಅವನು ಪರೀಕ್ಷೆಯಲ್ಲಿ ಪಾಸಾಗುವ ಅಥವಾ ಉದ್ಯೋಗದಲ್ಲಿ ಬಡ್ತಿ ಹೊಂದುವ ಅಭಿಲಾಷೆಯ ಸೂಚಕವಾಗಿರಬಹುದು. ಬಹುಪಾಲು ಗಂಡಸರಲ್ಲಿ ಲೈಂಗಿಕ ಸಂಕೇತಗಳಿರುವ ಕನಸು ಕಂಡಾಗಲೆಲ್ಲಾ ವೀರ್ಯಸ್ಖಲನವಾಗುತ್ತದೆ. ಆ ಕನಸುಗಳು ಕೆಲವೊಮ್ಮೆ ಯಾವ ಸಂಕೇತಗಳನ್ನೂ ಒಳಗೊಳ್ಳದೆ ನೇರ ಲೈಂಗಿಕ ಕ್ರಿಯೆಯನ್ನೇ ಒಳಗೊಂಡಿರಬಹುದು.
ಹೆಂಗಸರ ಲೈಂಗಿಕ ಕನಸುಗಳು, ಅವರು ಲೈಂಗಿಕ ವಿಷಯಗಳಲ್ಲಿ ಅನನುಭವಿಗಳಾಗಿದ್ದರೆ ಅವು ಬರೇ ‘ಪ್ರೇಮಮಯ’ವಾಗಿರುತ್ತವೆ. ಆಲ್ಫ್ರೆಡ್ ಕೀನ್ಸೆ ತನ್ನ ಇತರ ಅಮೆರಿಕನ್ ಸಂಶೋಧಕರೊಂದಿಗೆ ಸಾವಿರಾರು ಹೆಂಗಸರನ್ನು ಲೈಂಗಿಕ ಕನಸುಗಳ ಬಗ್ಗೆ ಸಂದರ್ಶನ ನಡೆಸಿದಾಗ ಅವರಲ್ಲಿ ಕನಸು ಕಂಡು ಸ್ಖಲನದ ಹಂತ ತಲುಪುವ ಬಹುಪಾಲು ಹೆಂಗಸರು ಲೈಂಗಿಕ ವಿಷಯಗಳಲ್ಲಿ ಪಳಗಿದವರಾಗಿದ್ದರು. ಹೆಂಗಸರಲ್ಲಿ ಸಹಜ ಲೈಂಗಿಕ ಕ್ರಿಯೆಗೆ ಅಡಚಣೆ ಉಂಟಾದಾಗಲೆಲ್ಲಾ (ಗಂಡಂದಿರಿಂದ ಬೇರ್ಪಡುವುದು ಮುಂತಾದವು) ಈ ತರಹದ ಕನಸುಗಳು ಹೆಚ್ಚಾಗುತ್ತಿದ್ದವು. ಅಧ್ಯಯನವೊಂದರಲ್ಲಿ ಜೈಲಿನಲ್ಲಿದ್ದ 208 ಮಹಿಳಾ ಕೈದಿಗಳನ್ನು ಸಂದರ್ಶಿಸಿದಾಗ ಶೇಕಡಾ 60 ಮಂದಿ ಸ್ಖಲನದ ಹಂತ ತಲುಪಿಸುವ ಲೈಂಗಿಕ ಕನಸುಗಳನ್ನು ಕಾಣುತ್ತಿದ್ದರು.
(ಇನ್ನೂ ಇದೆ…)

‍ಲೇಖಕರು avadhi-sandhyarani

August 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: