ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರ ಎರಡನೇ ಕವನ ಸಂಕಲನ ಅಚ್ಚಿನಲ್ಲಿದೆ. ಮೊದಲ ಸಂಕಲನ ಸೋನೆ ಮಳೆಯ ಸಂಜೆ ಪ್ರಕಟವಾದ ೧೫ ವರ್ಶಗಳ ಬಳಿಕ ಪ್ರಕಟವಾಗುತ್ತಿರುವ ಈ ಸಂಕಲನದ ಹೆಸರು ಪ್ರಶ್ನೆಗಳಿರುವುದು ಶೇಕ್ ಸ್ಪಿಯರನಿಗೆ. ಹೆಸರಲ್ಲೇ ಸುಳಿವು ಸಿಗುವ ಹಾಗೆ, ಇಲ್ಲಿನ ಬಹುಪಾಲು ಕವಿತೆಗಳ ಅಂತರಂಗದಲ್ಲಿರುವುದು ರಂಗಪ್ರತಿಮೆಗಳು. ಕವಿ, ಶೇಕ್ಸ್ ಪಿಯರನನ್ನು ಕಾಣುವುದು ಕನಸುಗಳ ಮಧ್ಯೆಯೇ ನಿಟ್ಟುಸಿರು ಹೆಣೆದವನು ಎಂದು. ಗ್ರಹಿಕೆಯ ಇಂಥ ಅಪರೂಪ ತಿರುವಿನಲ್ಲೇ ಈ ಕವಿತೆಗಳ ಭಾವಪ್ರಾಣವಿದೆ. ಬರಲಿರುವ ಈ ಸಂಕಲನದ ಅದೇ ಹೆಸರಿನ ಕವಿತೆ, ಅವಧಿ ಬಳಗದ ಓದಿಗೆ.
ಪ್ರಶ್ನೆ ಇರುವುದು ಶೇಕ್ಸ್ ಪಿಯರನಿಗೆ
– ಜಿ ಎನ್ ಮೋಹನ್
ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ ನೇರ ಶೇಕ್ಸ್ ಪಿಯರನಿಗೇ
ಏಕೆ ಹಾಗಾಯಿತು
ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ
ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ
ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ
ಮ್ಯಾಕ್ ಬೆತ್ ನಿಗೆ ಏಕೆ ಮುಖಾಮುಖಿಯಾಗಿಸಿದೆ
ಆ ಮೂರು ಜಕ್ಕಿಣಿಯರನ್ನು
ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು
ಆಕಾಂಕ್ಷೆಗಳ ನೀರೆರೆದ ಆ ಲೇಡಿ ಮ್ಯಾಕ್ ಬೆತ್ ಳನ್ನು
ಒಥೆಲೋ ಡೆಸ್ಡಮೋನಾಳ ಮಧ್ಯೆ
ಬೇಕಿತ್ತೇ ಆ ಕರವಸ್ತ್ರ
ಸಂಶಯದ ಸುಳಿ ಬಿತ್ತಬೇಕಿತ್ತು
ಎಂಬುದೇ ನಿನ್ನ ಆಸೆಯಾಗಿದ್ದಿದ್ದರೆ
ನೇರ ಎರಡು ಸ್ವಗತದಲ್ಲೋ ಇಲ್ಲಾ
ಮೂರು ಅಂಕದಲ್ಲೋ ಇಬ್ಬರನ್ನೂ
ಎದುರು ಬದುರಾಗಿಸಿ ಮಾತಿಗೆ
ಮಾತು ಹೆಣೆದು ಸಲೀಸಾಗಿ
ಸೋಡಾ ಚೀಟಿ ಕೊಡಿಸಿಬಿಡಬಹುದಿತ್ತಲ್ಲ
ಏಕೆ ಬೇಕಿತ್ತು ಸಂಶಯಗಳನ್ನು
ಬಿತ್ತುವ ಹಗಲಿರುಳೂ ನಿದ್ದೆ
ಇಲ್ಲದಂತೆ ಮಾಡುವ ಕೊನೆಗೆ
ಅವರೂ, ನೀನೂ ಜೊತೆಗೆ ನಾವೂ
ಹೊರಳಾಡುವಂತೆ ಮಾಡುವ
ಆ ಕರವಸ್ತ್ರದ ಕಥೆ
ಪ್ರಶ್ನೆ ಇರುವುದು ಶೇಕ್ಸ್ ಪಿಯರ್ ನಿಗೆ
ಇರಲೇ ಇಲ್ಲದೇ ಇರಲೆ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು ಒಂದು
ಸಾಮಾನ್ಯ ಗೂಗೆಯಿಂದ ಹೊಡೆದು
ಕೊಂದವನಿಗೆ ಬರ್ನಂ ವನಕ್ಕೂ
ಕೈಕಾಲು ಬರಿಸಿದವನಿಗೆ ಊಟದ
ಬಟ್ಟಲುಗಳ ನಡುವೆ ಎದ್ದು ನಿಲ್ಲುವ
ಪ್ರೇತಗಳನ್ನು ಸ್ರ್ಅಷ್ಟಿಸಿದವನಿಗೆ ಕಪ್ಪಿಗೂ
ಬಿಳುಪಿಗೂ ನಡುವೆ ಒಂದು ಗೋಡೆ
ಎಬ್ಬಿಸಿದವನಿಗೆ ಸುಂದರ ಕನಸುಗಳ
ಮಧ್ಯೆಯೂ ಒಂದೊಂದು ನಿಟ್ಟುಸಿರು
ಹೆಣೆದವನಿಗೆ
ಬ್ಲಾಗ್ ಚೆನ್ನಾಗಿದೆ. 🙂
ee kavana mohanara hosa sankalanada bagge kuthoohala keralisuttade.
dundiraj