ಕನಸುಗಾರ ಜಿಮ್ಮಿ

ಹೈವೇ 7

———

hoovu4.jpg

ಭಾಗ: ಹದಿಮೂರು

ವಿ.ಎಂ.ಮಂಜುನಾಥ್

ಪ್ರೇಮ ಜಿಮ್ಮಿಯ ದೇಹದ, ಮನಸ್ಸಿನ ಕೀಲಿಕೈ
ಆಗಿದ್ದು, ಇಡೀ ಅಸ್ತಿತ್ವ, ವ್ಯಕ್ತಿತ್ವದ ಕ್ರಿಯೆಗಳೆಲ್ಲವನ್ನೂ
ಅಸ್ತವ್ಯಸ್ತವಾಗಿ ಮೀಟಿ ಹಾಕಿ; ತಲೆ ಪಾದದಂತಾಗಿ
ತೆರೆದ ಬಾಗಿಲ ಬಳಿ ಹೆಣದಂತೆ ಬಿದ್ದಿತ್ತು.

ಇತ್ತ ನಗರಕ್ಕೂ ಸೇರದ, ಹಳ್ಳಿಗೂ ಇಳಿಯಲೆತ್ನಿಸದ ವೆಂಕಟಾಲಕ್ಕೆ ಕ್ರೀಡೆ, ರಾಜಕೀಯ, ಸಿನಿಮಾ, ಸಾಹಿತ್ಯವನ್ನು ಪರಿಚಯಿಸಿ ಅನಾಗರಿಕತೆ, ಅನಕ್ಷರತೆ ಮತ್ತು ಮೌಢ್ಯವನ್ನು ನಿವಾರಿಸಿ, ಸಾಂಸ್ಕೃತಿಕವಾಗಿ ಚಿಮ್ಮಿದವನು ಜಿಮ್ಮಿ. ಆಲ್ ಫ್ರೆಡ್ ಹಿಚ್ ಕಾಕ್ ನ ಸಿನಿಮಾಗಳ ಪಾತ್ರದಂತೆಯೂ ಅಥವಾ “ಇಲ್ ಪೋಸ್ಟಿನೋ” ಸಿನಿಮಾದಲ್ಲಿ ಕಾವ್ಯದ ಮಾತು ಬಂದಾಗ, ಚಿಲಿ ಕವಿ ಪಾಬ್ಲೊ ನೆರೂಡನನ್ನೇ ತಬ್ಬಿಬ್ಬಾಗಿಸುವ ಪೋಸ್ಟ್ ಮ್ಯಾನ್ ನಂತೆ ಮೈಕಟ್ಟು, ಮುಖಚಹರೆಯನ್ನು ತುಸು ಹೋಲುತ್ತಿದ್ದ ಈ ಅಪರೂಪದ ಮನುಷ್ಯ, ಕೇವಲ ಇಪ್ಪತ್ತಾರನೇ ವಯಸ್ಸಿಗೆ ಪ್ರೀತಿಗಾಗಿ ಕುತ್ತಿಗೆ ಕೊಟ್ಟು, ತನ್ನ ಪ್ರೇಯಸಿಯೊಂದಿಗೆ ಏಕಕಾಲದಲ್ಲಿ ವಿಷ ಕುಡಿದು ಅಸುನೀಗಿ ಹೆಣವಾಗಿ ಬಿದ್ದಿದ್ದಾಗ ನಾನು ಮಲ್ಲಿಗೆ ಗಿಡಗಳ ತೋಟದಲ್ಲಿ ಹೂ ಕಂಪು ಏನೆಂಬುದನ್ನು ಅರಿಯದೆ ಅವನ ಮುಂದೆ ಮೌನವಾಗಿ ನಿಂತಿದ್ದೆ. ನನಗಾಗ ಹದಿಮೂರು ವಯಸ್ಸು. ಈಗ ಅವನ ವಯಸ್ಸಿಗೂ ಮೀರಿದವನಾಗಿ ಮಲ್ಲಿಗೆಯ ಪರಿಮಳವಿಲ್ಲದ, ತೋಟವೇ ಇಲ್ಲದ ಅದೇ ಜಾಗದಲ್ಲಿ ನಿಂತು ದುರ್ದೈವಿ ಜಿಮ್ಮಿಯನ್ನು ನೆನಪಿನಾಳದಿಂದ ತರಲೆತ್ನಿಸಿದರೆ ಅಪಾರ ಮರುಕ ಉಂಟಾಗುತ್ತದೆ. ಬಹುಶಃ ನಾವು ಬದುಕಿನಲ್ಲಿ ನಿರಾಯಾಸವಾಗಿ ಗೆಲ್ಲಬಹುದಾದ್ದು ಅಥವಾ ಆ ಕ್ಷಣದಲ್ಲೇ ಅತ್ಯಂತ ಆತುರದಿಂದ ಸೋಲುವಂಥದ್ದು ಪ್ರೇಮ ಎಂಬುದು. ಪ್ರೇಮ ಪ್ರಾಪಂಚಿಕ ಯಶಸ್ಸೆಂಬ ಗೊಡ್ಡು ವಾದವನ್ನು ಪುರಸ್ಕರಿಸಲು ಹೋಗಿ, ಆ ನಟ್ಟನಡುರಾತ್ರೆ “ಸುಮ್ಮನೆ” ಪ್ರಾಣ ಕಳೆದುಕೊಂಡ ಜಿಮ್ಮಿ, ನನ್ನಂಥ ಇನ್ನೂ ಅನೇಕ ಹುಡುಗರ ಪ್ರೇಮ ಸಿದ್ಧಾಂತವನ್ನು ಸ್ಪಷ್ಟತೆಯ ಹಾದಿಯಲ್ಲಿ ಸಾಕಾರಗೊಳಿಸಿದ್ದು ಮಾತ್ರ ವಿಚಿತ್ರವಾಗಿದೆ. ಅಷ್ಟಾದರೂ ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ತನ್ನ ಸುತ್ತಲಿನ ಜನರನ್ನು ನಿರಾಳವಾಗಿ ಉಸಿರಾಡಲೆತ್ನಿಸಿದ ಈತ ನನ್ನ ಕಾಲದ ಮಹಾನ್ ಕನಸುಗಾರ.

ಟಾಲ್ ಸ್ಟಾಯ್ ಹುಟ್ಟಿದ ರಷ್ಯಾ ದೇಶವನ್ನು ಪ್ರೀತಿಸುತ್ತಿದ್ದ ಜಿಮ್ಮಿಯ ಕೈಯಲ್ಲಿ ಯಾವಾಗಲೂ ಲಂಕೇಶ್ ಪತ್ರಿಕೆ ಇರುತ್ತಿತ್ತು. ಲಂಕೇಶ್ ಪತ್ರಿಕೆಯ ಬಹುದೊಡ್ಡ ಓದುಗನಾಗಿದ್ದು, “ಕಣ್ಣಾಮುಚ್ಚಾಲೆ” ವಿಭಾಗದಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿ ಬಹುಮಾನ ಪಡೆದುಕೊಂಡು ಲಂಕೇಶರು ಬದುಕಿದ್ದಾಗಲೇ ಪತ್ರಿಕೆಯಲ್ಲಿ ತನ್ನ ಹೆಸರನ್ನು ಬರುವಂತೆ ಮಾಡಿದ್ದ ಪ್ರತಿಭಾನ್ವಿತ. ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ರಾಜಕೀಯ ಲೇಖನಗಳನ್ನು ಓದಿಕೊಂಡು ತರ್ಕಬದ್ಧವಾಗಿ ವಿಶ್ಲೇಷಿಸುತ್ತಿದ್ದ. ಅಂದಿನ ಕಾಲಕ್ಕೆ ನಮ್ಮ ಊರಿನಲ್ಲಿ ಯಾರೊಬ್ಬರೂ ಲಂಕೇಶ್ ಪತ್ರಿಕೆಯಾಗಲೀ, ಬೇರೆ ಯಾವ ಪತ್ರಿಕೆಯನ್ನೂ ಓದುತ್ತಿರಲಿಲ್ಲವೆನಿಸುತ್ತದೆ. ಪೈಪೋಟಿಯೇ ಇಲ್ಲದ ಅಂಥ ಕಾಲಘಟ್ಟದಲ್ಲೂ ಜಿಮ್ಮಿ ಲಂಕೇಶ್ ಪತ್ರಿಕೆಗೆ ಸಲ್ಲಿಸುತ್ತಿದ್ದ ಗೌರವ ಅಚ್ಚರಿ ಹುಟ್ಟಿಸುತ್ತದೆ. ನಾನು ನನ್ನ ಮನೆಯ ಮುಂದಿನ ಹುಣಸೇಮರದ ಬುಡದಲ್ಲಿ ಯಾವಾಗಲೂ ಕುಳಿತುಕೊಳ್ಳುತ್ತಿದ್ದೆ. ಬಸ್ ನಿಲ್ದಾಣ ಕಣ್ಣಿಗೇ ಕಾಣುತ್ತಿತ್ತು. ಬಿ.ಎ ಓದುತ್ತಿದ್ದ ಜಿಮ್ಮಿ ಕಾಲೇಜು ಮುಗಿಸಿಕೊಂಡು ಬಸ್ ಇಳಿದುಹೋಗುವಾಗ ಅವನ ಕೈಯಲ್ಲಿ ಡೈರಿ, ಪುಸ್ತಕಗಳ ನಡುವೆ ಲಂಕೇಶ್ ಪತ್ರಿಕೆಯೂ ಇರುತ್ತಿತ್ತು.

ಜಿಮ್ಮಿ ವೈವಿಧ್ಯಮಯ, ಗುಣಾತ್ಮಕ ಕ್ರಿಕೆಟ್ ಆಟಗಾರ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡದ ಬೌಲರ್ ಗಳ ಹೆಚ್ಚುಕಡಿಮೆ ಆ ಶೈಲಿಯಲ್ಲಿ ಬೌಲ್ ಮಾಡುತ್ತಿದ್ದ. ನನಗಿಂತ ಹತ್ತುಹದಿನೈದು ವರ್ಷ ದೊಡ್ಡ ವಯಸ್ಸಿನವನಾದ ಈತನ ಬೌಲಿಂಗನ್ನು ನೋಡಲೆಂದೇ ಹೋಗುತ್ತಿದ್ದೆ. ಅವನ ಮೈಕಟ್ಟು ಎಂಥ ಕ್ರೀಡೆಗೂ ಹೇಳಿ ಮಾಡಿಸಿದಂತಿತ್ತು. ಸರಿಸುಮಾರು ಆರು ಅಡಿಯ ಸಮೀಪದಲ್ಲಿದ್ದ ಮತ್ತು ತೆಳ್ಳಗಿನ ದೇಹವನ್ನು ಹೊಂದಿದ್ದ. ಹೆಚ್ಚಾಗಿ ತಲೆಗೂದಲು ಬಿಡುತ್ತಿರಲಿಲ್ಲ. ಯಾವಾಗಲೂ ಹುಲ್ಲುಗಿಡಕ್ಕೆ ಕಟರ್ ನಿಂದ ಟ್ರಿಮ್ ಮಾಡಿಸಿಕೊಂಡವನಂತೆ ಕಟಿಂಗ್ ಮಾಡಿಸಿಕೊಂಡಿರುತ್ತಿದ್ದ. ಮ್ಯಾಟ್ ಮೇಲೆ ಲೆದರ್ ಬಾಲ್ ನಿಂದ ಪರಿಣಾಮಕಾರಿಯಾಗಿ ಸ್ವಿಂಗ್ ಹೊಡೆಸುತ್ತ, ತನ್ನ ವಿಶಿಷ್ಟ ಬೌಲಿಂಗ್ ಶೈಲಿಯಿಂದ ಬ್ಯಾಟ್ಸ್ ಮನ್ ಗಳನ್ನು ಅಂಧರನ್ನಾಗಿಸುತ್ತಿದ್ದ. ಕೆಲವು ಆಟಗಾರರಂತೂ ಜಿಮ್ಮಿ ಬೌಲಿಂಗ್ ಮಾಡುವ ಮೊದಲೇ ಬೆನ್ನು ಕೊಟ್ಟು ನಿಂತುಬಿಡುತ್ತಿದ್ದರು. ಸಾಧಾರಣವಾಗಿ ಬ್ಲೂ ಜೀನ್ಸ್ ಪ್ಯಾಂಟ್ ನಲ್ಲಿರುತ್ತಿದ್ದ ಜಿಮ್ಮಿ ಸ್ಟೈಕ್ಸ್ (ಮೊಳೆಗಳ ಅಟ್ಟಣಿಗೆಯ ಬೂಟುಗಳು) ಧರಿಸುತ್ತಿದ್ದ. ಗಟ್ಟಿ ನೆಲದ ಮೇಲೆ ತನ್ನ ಬೂಟುಗಳ ಮೊಳೆಗಳ ಹಿಡಿತದಿಂದ ಓಡುತ್ತಾ, ಎರಡೂ ಕೈಗಳನ್ನು ಒಮ್ಮೆಲೇ ಮೇಲೆ ಎತ್ತಿ, ಭುಜಗಳನ್ನು ಕಿವಿಗಳ ಹತ್ತಿರ ತಂದುಕೊಂಡು ತೀವ್ರ ಸೆಳೆತಕ್ಕೀಡು ಮಾಡಿ ಬೌಲ್ ಮಾಡುವಾಗ ಅವನ ಇಡೀ ದೇಹ ಸ್ವಿಂಗ್ ಆದಂತೆ ಭಾಸವಾಗುತ್ತಿತ್ತು. ಶನಿವಾರ, ಭಾನುವಾರಗಳಂದು ಸುತ್ತಮುತ್ತಲಿನಿಂದ ಅನೇಕ ತಂಡಗಳು ಕ್ರಿಕೆಟ್ ಮ್ಯಾಚ್ ಆಡಲು ಬರುತ್ತಿದ್ದವು. ಊರಿಗೆ ಆಗಮಿಸುವ ಎಲ್ಲ ತಂಡದ ಆಟಗಾರರಿಗೂ ಊಟದ ವ್ಯವಸ್ಥೆ ಮಾಡಿಸುತ್ತಿದ್ದ. ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳಲ್ಲಿ ಆಡುವ ಆಟಗಾರರು ಧರಿಸುವ ಬಿಳಿಉಡುಪಿನಲ್ಲಿ ಕಣಕ್ಕೆ ಇಳಿಯುತ್ತಿದ್ದ. ಅದರ ಮೇಲೆ ಕ್ರಿಕೆಟ್ ಆಟದ ಸ್ವೆಟರನ್ನೂ ಹಾಕಿಕೊಳ್ಳುತ್ತಿದ್ದ. ವೃತ್ತಿಪರ ಕೌಂಟಿ ಕ್ರಿಕೆಟರ್ ನಂತೆ ಸದಾ ಚಟುವಟಿಕೆಯಿಂದ ಓಡಾಡಿಕೊಂಡಿರುತ್ತಿದ್ದ ಜಿಮ್ಮಿ, ಕ್ರಿಕೆಟ್ ಮಾತ್ರವಲ್ಲದೆ ವಾಲಿಬಾಲ್ ಮತ್ತು ಫುಟ್ ಬಾಲ್ ಕ್ರೀಡೆಯನ್ನೂ ಬೆಳಕಿಗೆ ತಂದ. ಟ್ರಾಕ್ ಸೂಟ್ ಧರಿಸಿಕೊಂಡು ಜಾಗಿಂಗ್ ಗೆ ಹೋಗುತ್ತಿದ್ದ ಅವನನ್ನು ನೋಡಿದಾಗಲೆಲ್ಲ ನನಗೆ ಶ್ರೀಕಾಂತ್, ಕಪಿಲ್ ದೇವ್, ರವಿಶಾಸ್ತ್ರಿ, ವೆಂಗಸರ್ ಕರ್ ಕಣ್ಮುಂದೆ ಬರುತ್ತಿದ್ದರು. ನಾನು ಅವನ ಆಟವನ್ನು ನೋಡುತ್ತಾ ಒಂದು ಕಡೆ ಕುಳಿತುಕೊಳ್ಳುತ್ತಿದ್ದೆ. ಕಲಾತ್ಮಕ ಕ್ರಿಕೆಟ್ ನ ಮೋಹಕತೆಗೆ ಪ್ರಜ್ಞಾಪೂರ್ವಕವಾಗಿ ನಾನು ಒಳಗಾಗಿದ್ದು, ಮುಂದಿನ ದಿನಗಳಲ್ಲಿ ರೂಢಿಸಿಕೊಂಡಿದ್ದು ಜಿಮ್ಮಿಯ ಪ್ರಭಾವದಿಂದ.

ಜಿಮ್ಮಿ ಮನೆ ಊರೊಳಗೆ ಇತ್ತು. ರಾತ್ರೆ ಹೊತ್ತು ತನ್ನ ಮನೆಯ ಎದುರಿಗಿನ ರಸ್ತೆ ಬದಿಯಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸುತ್ತಿದ್ದ. ಇವಿಲ್ ಡೆಡ್, ದಿ ಎಕ್ಸಾರ್ ಸಿಸ್ಟ್ ನಂಥ ಭೂತದ ಸಿನಿಮಾಗಳನ್ನು ತೋರಿಸುತ್ತಿದ್ದ. ನಮ್ಮ ಮನೆ ಊರಿಂದಾಚೆ ಹೈವೇ ಬದಿಯಲ್ಲಿ ಸಾಲು ಹುಣಸೆಮರಗಳ ನಡುವೆ ಇದ್ದದ್ದರಿಂದ ಭಯವಾಗುತ್ತಿತ್ತು. ನನಗೆ ನಿದ್ದೆ ಬಂದಾಗ ಒಬ್ಬನೇ ಮನೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಜಿಮ್ಮಿ ಮನೆಯ ಬೀದಿಯಿಂದ ಹೇಗಾದರೂ ಮಾಡಿ ಸ್ಕೂಲಿನವರೆಗೂ ಬರಬಹುದಾಗಿತ್ತು. ಅಲ್ಲಿಂದ ನನ್ನ ಮನೆ ಕಣ್ಣುಗಳಿಗೆ ಸ್ಪಷ್ಟವಾಗಿ ಕಾಣುತ್ತಿತ್ತಾದರೂ ಕಗ್ಗತ್ತಲನ್ನು ಬೀರುವ ಹುಣಸೇಮರಗಳ ಭೀತಿಯಿಂದ ಮುಂದೆ ಹೋಗಲಾಗುತ್ತಿರಲಿಲ್ಲ. ನನ್ನ ಅಣ್ಣ ಪೂರ್ತಿ ಸಿನಿಮಾ ನೋಡುತ್ತಿದ್ದ. ಹೇಗೊ ತೂಕಡಿಸಿಕೊಂಡು ಸಿನಿಮಾ ಪ್ರದರ್ಶನ ಮುಗಿಯುವವರೆಗೂ ಇದ್ದು ಅಣ್ಣನ ಜೊತೆಗೆ ಮನೆಗೆ ಹೋಗುತ್ತಿದ್ದೆ. ಮಳೆ ಬಂದಾಗ ಇಬ್ಬರೂ ತೀವ್ರ ಯಾತನೆ ಅನುಭವಿಸುತ್ತಿದ್ದೆವು. ಏಕೆಂದರೆ ಜಿಮ್ಮಿ ಸಿನಿಮಾ ಪ್ರದರ್ಶನ ಮನೆ ಒಳಗೆ ಏರ್ಪಡಿಸುತ್ತಿದ್ದ. ಆಗ ನಾವು ಕಿಟಕಿ ಸರಳುಗಳಿಂದ ಅಸ್ಪಷ್ಟವಾಗಿಯಾದರೂ ನೋಡಲು ಹೆಣಗಾಡುತ್ತಿದ್ದೆವು. ನಮ್ಮಂತೆ ಇನ್ನೂ ಅನೇಕ ಹುಡುಗರು ಒಬ್ಬರ ಮೇಲೊಬ್ಬರು ಜೋತುಬಿದ್ದ ಹಣ್ಣುಗಳಂತೆ ಕಿಟಕಿ ಗೋಡೆ ಮೇಲೆ ಬಿದ್ದಿರುತ್ತಿದ್ದರು. ಜೀನ್ ಕ್ಲಾಡೆ ವ್ಯಾಂಡಮ್, ಸ್ಟಾಲನ್ (ರ್ಯಾಂಬೋ), ಬ್ರೂಸ್ ಲೀ, ಅರ್ನಾಲ್ಡ್, ಜಾಕಿಚಾನ್ ಸಿನಿಮಾಗಳನ್ನು ಜಿಮ್ಮಿ ನಮಗೆಲ್ಲರಿಗೂ ತೋರಿಸಿ, ಪರಿಚಯಿಸುವುದರ ಮೂಲಕ ಊರಿನ ಬಹುತೇಕ ಹುಡುಗರು ಕರಾಟೆ, ಕಿಕ್ ಬಾಕ್ಸಿಂಗ್ ಕಲಿಯಲು ಮುಂದಾದರು. ನಮ್ಮಿಬ್ಬರಿಗೂ ಆಸೆಯಿತ್ತಾದರೂ ಫೀಸ್ ಕಟ್ಟಲು ಆಗದಿದ್ದರಿಂದ ಕರಾಟೆ ಕಲಿಯಲಾಗಲಿಲ್ಲ. ದಿನಾ ಬೆಳಗ್ಗೆ ಕಲಿತು ಬರುತ್ತಿದ್ದ ಹುಡುಗರು, ಸಂಜೆಯಾಗುತ್ತಿದ್ದಂತೆ ಸ್ಕೂಲು ಮೈದಾನಕ್ಕೆ ಬಂದು ನಮಗೆ ಕರಾಟೆ ಹೇಳಿಕೊಡುತ್ತಿದ್ದರು. ಕಲಿಕೆಯಲ್ಲಿ ಮನಬಂದಂತೆ ಒದೆಯಲು ಆಗುತ್ತಿರಲಿಲ್ಲವಾದ್ದರಿಂದ ನಮ್ಮನ್ನು ಹೇಗೆಂದರೆ ಹಾಗೆ ಒದ್ದು, ತಮ್ಮ ಪೌರುಷ ಪ್ರದರ್ಶಿಸುತ್ತಿದ್ದರು.

ಜಿಮ್ಮಿ ನನ್ನನ್ನು ಮಾತನಾಡಿಸಿದ ಅಥವಾ ನಾನು ಅವನನ್ನು ಮಾತನಾಡಿಸಿದ ಸಂದರ್ಭಗಳ್ಯಾವುವೂ ಒದಗಿ ಬರಲೇ ಇಲ್ಲ ಎಂದು ಅಂದುಕೊಳ್ಳುತ್ತೇನೆ. ಅವನು ಆಸ್ತಿವಂತರ ಮನೆಯಲ್ಲಿ ಹುಟ್ಟಿದ್ದಕ್ಕೇನೂ ನಾವು ಅವನ ಹತ್ತಿರ ಸುಳಿಯಲಾಗಲಿಲ್ಲ. ಹಾಗಂತ ಜಿಮ್ಮಿಯೇನೂ ಯಾರನ್ನೂ ದೂರ ಮಾಡಿಕೊಂಡು ಜೀವಿಸಿದವನಲ್ಲ. ಅವನಿಗೆ ಯುವ ಹುಡುಗರನ್ನು ಸಂಘಟಿಸುವ, ರಾಜಕೀಯವಾಗಿ ಬೆಳೆಯುವ, ಉತ್ತೇಜಿಸುವ ಪ್ರಬುದ್ಧತೆ ಎಲ್ಲವೂ ಇತ್ತು. ಎಲ್ಲದಕ್ಕಿಂತ ಸಾಮಾಜಿಕ ಸದೃಢತೆ ಇತ್ತು. ವಿಧವಾ ವೇತನದ ಬಗ್ಗೆ ಊರಿನಲ್ಲಿ ತಿಳುವಳಿಕೆ ಮೂಡಿಸಿದ. ಗ್ರಾಮದಲ್ಲಿ ಬೋರ್ ವೆಲ್ ಕೆಟ್ಟು ಹೋದರೆ, ಬೀದಿ ದೀಪ ಕೈಕೊಟ್ಟರೆ ತಾನೇ ಖುದ್ದಾಗಿ ಓಡಾಡಿ ಸರಿಪಡಿಸುತ್ತಿದ್ದ. ಬಡಮಕ್ಕಳಿಗೆ ಉಚಿತ ಬಸ್ ಪಾಸ್ ಮಾಡಿಸಿಕೊಂಡು ತಂದುಕೊಡುತ್ತಿದ್ದ. ಅವನ ಸುತ್ತಲೂ ಯಾವಾಗಲೂ ಹುಡುಗರೇ ಇರುತ್ತಿದ್ದರು. ತನ್ನ ಸಾಂಗತ್ಯ ಬಯಸಿ ಬಂದ ಎಲ್ಲರನ್ನೂ ತನ್ನ ಎಂದಿನ ತಮಾಷೆಯ ಚೇಷ್ಟೆಗಳಿಂದ ಕಾಡುತ್ತಿದ್ದ, ಕರಾರುವಾಕ್ಕಾದ ವಿಚಾರಗಳಿಂದ ತಬ್ಬಿಬ್ಬಾಗಿಸುತ್ತಿದ್ದ. ಹಲಸಿನ ಮರದಲ್ಲಿ ಭೂತವಿದೆಯೆಂದು ನಂಬಿದ್ದ ಊರಿನ ಜನರಿಗೆ ತಾನೇ ಮೊದಲ ಸಲ ನಟ್ಟನಡುರಾತ್ರೆ ಮರದ ಬಳಿ ಹೋಗಿ ಭೀತಿ ಹೋಗಲಾಡಿಸಿದ. ಊರಿನಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾದಾಗ ಗೆಳೆಯರೊಂದಿಗೆ ರಾತ್ರೋರಾತ್ರಿ ಮನೆಗಳ ಮೇಲೆ, ಗಿಡಗಳಲ್ಲಿ, ಹೊಲಗಳಲ್ಲಿ ಅವರನ್ನು ಹಿಡಿಯಲು ಹೊಂಚು ಹಾಕಿದ. ಊರಿಗೇ ಮೊದಲು ಹರ್ಕ್ಯುಲಸ್ ಸೈಕಲ್ ಮತ್ತು ಟಿವಿಎಸ್ ಸುಜುಕಿ ಮೋಟಾರ್ ಬೈಕ್ ನ್ನೂ ಊರಿಗೆ ತಂದು ಓಡಾಡಿಸಿದ ಹೆಗ್ಗಳಿಕೆಯೂ ಈತನದ್ದೇ.

ಜಿಮ್ಮಿಯ ತಂದೆ ತೀರಿಕೊಂಡ ನಂತರ ಅವರ ಕುಟುಂಬ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಂಡು ತೊಳಲಾಡತೊಡಗಿತು. ಜಿಮ್ಮಿ ಪ್ರವರ್ಧಮಾನಕ್ಕೆ ಬರುವ ತನಕ ಅಜ್ಞಾತವಾಗಿದ್ದು ನಂತರ ಪುನಶ್ಚೇತನಗೊಂಡಿತು. ಮತ್ತ್ಯಾವ ಕಾಲಕ್ಕೂ ಎಂಥ ಸಂದರ್ಭದಲ್ಲೂ ನೆಲ ಕಚ್ಚದಂತೆ. ಇಲ್ಲಿ ಜಿಮ್ಮಿಯ ಪ್ರಸ್ತುತತೆ ಪ್ರಾಯಶಃ ರೋಗಿಷ್ಠ ಗ್ರಾಮವೊಂದನ್ನು ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸುವುದಲ್ಲದೆ, ತನ್ನ ಮನೆತನವನ್ನು ಮುಂಚೂಣಿಗೆ ತರುವುದಷ್ಟೇ ಆಗಿತ್ತೆಂದು ಜಿಮ್ಮಿಯ ಬದುಕಿನ ಪುಟಗಳಿಂದ ಗ್ರಹಿಸಬಹುದು. ಏಕೆಂದರೆ ಅವನು ತನ್ನ ಮನಸ್ಸು ಮತ್ತು ಬುದ್ಧಿಗೆ ಹತ್ತಿದ ಕಾಯಿಲೆಯನ್ನು ಯಾವತ್ತೂ ನೋಡಿಕೊಳ್ಳಲೇ ಇಲ್ಲ.

ಇಂತಹ ಕಾಡುವ ಹುಡುಗ ಜಿಮ್ಮಿ ತನ್ನ ಅನೇಕ ಸಾಮಾಜಿಕ ಚಿಂತನೆ, ಕೆಲಸಕಾರ್ಯಗಳ ನಡುವೆ ಪ್ರೇಮದ ಆಸರೆಗಾಗಿ ಹಂಬಲಿಸಿದ್ದು, ಮೇಣದಂತೆ ಕರಗಿಹೋಗಿದ್ದು ಸಾಮಾನ್ಯವೇನಲ್ಲ. ಇವನ ಬೌದ್ಧಿಕ ಚಿಂತನೆ ವಿನಾಶದ ಅಂಚಿನಲ್ಲಿರುವಾಗ ಪ್ರೀತಿ ಎಚ್ಚೆತ್ತುಕೊಂಡು ವಿಜೃಂಭಿಸಿ, ತನ್ನ ದೀರ್ಘಕಾಲದ ನಿಟ್ಟುಸಿರನ್ನು ಹಾವಿನಂತೆ ಹೊರಗೆಡವಿ ನಂತರ ತಾನೂ ಪ್ರಜ್ಞೆ ತಪ್ಪಿದ್ದೂ ವಿಷಾದದ ಸಂಗತಿ. ಆದರೂ ಕೇವಲ ಪ್ರೇಮವನ್ನು ಜಯಿಸಲಾಗದೆ ಜೀವ ತೆತ್ತ ಜಿಮ್ಮಿಯ ಜಾಗತಿಕ ಚಿಂತನೆ, ಅಪಾರ ಓದು, ಕ್ರೀಡೆಯ ಕುರಿತು ಅಸಡ್ಡೆ ತಾಳುವಂತಿಲ್ಲ. ಜಿಮ್ಮಿ ಅಕಾಲ ಮೃತ್ಯುಗೀಡಾದರೂ ಅವನು ನೀಡಿದ ಜ್ಞಾನದ ಬೇರುಗಳು ಊರಿನ ಎಲ್ಲರ ಮನಸ್ಸುಗಳಲ್ಲೂ ದೈತ್ಯವಾಗಿ ಹರಿದದ್ದು ಮಾತ್ರ ಅವನು ನಮ್ಮೊಡನೆ ಬದುಕಿದಷ್ಟೇ ಸತ್ಯ.

‍ಲೇಖಕರು avadhi

April 5, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This