ಕನ್ನಡ ನಾಡಲ್ಲಿ ಕನ್ನಡಿಗರೇ, ಕನ್ನಡವೇ ಸಾರ್ವಭೌಮ

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

। ಕಳೆದ ವಾರದಿಂದ ।

ಎಲೆನಾಳನ್ನ ಹುಡುಕಿಕೊಂಡು ಬಂದ ಹುಡುಗಿ ಆಕೆಯನ್ನು ಮತ್ತೆ ಅದೇ ಲೈಬ್ರರಿಯಲ್ಲಿ ಕಂಡಿದ್ದಳು. ಅಲ್ಲಿ ಒಂದು ದೊಡ್ಡ ಚರ್ಚೆಯೇ ನಡೆಯುತ್ತಿತ್ತು. ಕತಲೂನ್ಯಾ ಹೋರಾಟದ ಪುಸ್ತಕಗಳನ್ನು ಒಂದು ಕಡೆ ಒಟ್ಟು ಮಾಡುವ ಒಂದು ನಿರ್ಣಯಕ್ಕೆ ಸಹಿ ಸಂಗ್ರಹಣೆ ನಡೆಯುತ್ತಿತ್ತು. ವಿಶ್ವವಿದ್ಯಾಲಯವೂ ಇದಕ್ಕೆ ಆಂತರಿಕ ಬೆಂಬಲ ನೀಡುತ್ತಿದ್ದರೂ ಒಂದು ವಿದ್ಯಾಸಂಸ್ಥೆಯಾಗಿ ದೇಶಕ್ಕೆ ಮಾರಕವಾಗುವ ಕೆಲಸ ಮಾಡಬಾರದಾಗಿತ್ತು.

ಆದರೆ ಮಾನ್ಯತೆಯನ್ನೇ ತೆಗೆಯುವ ಪರಿಸ್ಥಿತಿಯೂ ಬಂದೊದಗಬಹುದಾಗಿತ್ತು. ಹಾಗಾಗಿ ಓದುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರೂ ಅದಕ್ಕೆ ಸುಮ್ಮನೆ ಬೆಂಬಲ ಕೊಟ್ಟು ವಿಶ್ವವಿದ್ಯಾಲಯ ಸುಮ್ಮನಾಗಿತ್ತು. ಒಂದೆರೆಡು ಕತಲಾನ್ ವಿಶ್ವವಿದ್ಯಾಲಯವೂ ಅದಕ್ಕೆ ಬೆಂಬಲ ಕೊಟ್ಟಿತ್ತು. ಇದೊಂಥರಾ ಬೆಂಗಳೂರಿನಲ್ಲಿ ಕಾವೇರಿ ಗಲಾಟೆ ಆದರೆ ಕೋರ್ಟಿನ ತೀರ್ಪಿನ ವಿರುದ್ಧ ಹೋಗೋದಕ್ಕೆ ವಿದ್ಯಾಸಂಸ್ಥೆಗಳು ಹೆದರಿದಂಗೆ.

ಬೆಂಬಲ ಕೊಟ್ಟರೆ ಮಾನ್ಯತೆ ರದ್ದು, ಬೆಂಬಲ ಕೊಡದಿದ್ದರೆ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಕು. ಇಂತಹದ್ದೇ ಸಂದಿಗ್ಧದಲ್ಲಿ ಇಲ್ಲಿ ಜನ ಇದ್ದರು. ಸರ್ಕಾರಿ ನೌಕರರು ಇದರಲ್ಲಿ ಭಾಗವಹಿಸುವಂತಿರಲ್ಲಿಲ್ಲ, ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳಬಾರದೆಂಬ ವಿವೇಚನೆಯೂ ಇತ್ತು. ಈ ಹೋರಾಟಕ್ಕೆ ತಾತ್ವಿಕ ಮತ್ತು ತಾರ್ಕಿಕ ಅಂತ್ಯ ಅಷ್ಟು ಬೇಗ ಸಿಗುವ ಹಾಗಿರಲ್ಲಿಲ್ಲ.

ಹೋರಾಟ ಮಾಡುತ್ತಾ ಮಾಡುತ್ತಾ ಕೆಲವರಲ್ಲಿ ಅದರ ಬಗ್ಗೆಯೇ ಗುಮಾನಿ ಬರೋದಕ್ಕೆ ಶುರುವಾಯಿತು. ಇಲ್ಲಿ ಯಾರೋ ನಮ್ಮನ್ನು ಮತ್ತೆ ಬೇರೆ ಆಳೋಕೆ ಬಂದಿದ್ದಾರೆ ಎಂದೂ ಅನ್ನಿಸುತ್ತಿತ್ತು. ಬೆಂಕಿಯಿಂದ ಬಾಣಲೆಗೆ ಬೀಳುವ ಥರಹ ಇಲ್ಲಿ ಆಗುತ್ತಿತ್ತು. ತಮ್ಮ ಭಾಷೆ ಮತ್ತು ತಮ್ಮ ತನವನ್ನು ಕಂಡುಕೊಳ್ಳದೇ ಇರದುದ್ದಕ್ಕೆ ಬಹಳ ಖೇದ ಪಟ್ಟುಕೊಂಡ ಅಲ್ಲಿನ ವಿಶ್ವವಿದ್ಯಾಲಯಗಳು ಅವರ ಭಾಷೆಯಲ್ಲೇ ಕೋರ್ಸ್ ಆರಂಭಿಸಿದರೂ ಸಹ ಅವರಿಗೆ ಸ್ವಾಯತ್ತತೆ ಇರಲ್ಲಿಲ್ಲ. ಕತಲಾನಿನಲ್ಲಿ ಸ್ಪಾನಿಷಿನವರ ಶೂರತ್ವವನ್ನು ಕಲಿಯುತ್ತಿದ್ದರು. ಕನ್ನಡದಲ್ಲಿ ಕನ್ನಡದ ರಾಜರುಗಳನ್ನು ಕೊಂದ ಬೇರೆ ರಾಜರುಗಳ ಕಥೆ ಕೇಳಿದ ಹಾಗೆ.

ಹುಡುಗಿಗೆ ಇವರು ಸ್ವಾತಂತ್ರ್ಯ ಪಡೆದುಕೊಂಡು ಏನು ಮಾಡುತ್ತಾರೆ ಎಂಬ ಅನುಮಾನ ಇತ್ತು. ಸ್ವಾತಂತ್ರ್ಯ ಅಕಸ್ಮಾತ್ ಬಂದರೂ ದೇಶವನ್ನ ಆಳುವ ತಾಕತ್ತು ಇಲ್ಲಿ ಇವರಿಗೆ ಇದೆಯಾ ಎಂದೂ ಅನುಮಾನ ಬಂತು. ಹಾಗೆ ನೋಡಿದರೆ ಅಧಿಕಾರದಲ್ಲಿರುವ ಮಂದಿ ಅಂದರೆ ಕತಲಾನಿನ ಪ್ರತಿನಿಧಿಗಳು ಉಗ್ರ ಹೋರಾಟಕ್ಕೇನೂ ಅಷ್ಟು ಬೆಂಬಲದಲ್ಲಿರಲ್ಲಿಲ್ಲ. ಆಗಾಗ ಪಾರ್ಲಿಮೆಂಟಿನಲ್ಲಿ ಹೋಗಿ ಗಲಾಟೆ ಮಾಡಿದ್ದು ಬಿಟ್ಟರೆ ಅವರಿಗೆ ಅಷ್ಟೇನೂ ತಟ್ಟುತ್ತಿರಲ್ಲಿಲ್ಲ ಅಕಸ್ಮಾತ್ ಏನಾದರೂ ರಾಜದ್ರೋಹದ ಕೆಲಸವಾಗಿ ಅವರನ್ನ ಹುದ್ದೆಯಿಂದ ವಜಾ ಮಾಡಿಬಿಟ್ಟರೆ ಎಂದು.

ಹುಡುಗಿ ಎಲೆನಾಳನ್ನ ಕರೆಯಲು ಹೋದಳು. ಅವಳು ಕ್ರಾಂತಿಕಾರಿ ನಾಯಕಿ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿತ್ತು. ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಸಿನಿಮಾದಲ್ಲಿ ನಡೆಯುತ್ತಿದ್ದ ಮೀಟಿಂಗುಗಳಂತೆ ಇಲ್ಲೂ ಸಹ ನಡೆಯುತ್ತಿತ್ತು. ಸೈಲೆಂಟಾಗಿ ಇರಬೇಕು ಎಂದು ಹೇಳುತ್ತಿದ್ದ ಲೈಬ್ರರಿಯನ್ ಸಹ ಹೆಡ್ ಫೋನ್ ಹಾಕಿಕೊಂಡು ತನ್ನ ಕೆಲಸ ಮಾಡುತ್ತಿದ್ದಳು. ಇದೊಳ್ಳೆ ರಾಮಾಯಣ ಎಂದು ಹುಡುಗಿ ಪುಸ್ತಕದ ಬಗ್ಗೆ ಅವಳ ಹತ್ತಿರ ಮಾತಾಡೋಕೆ ಹೊರಟಳು.

ಅವಳ ಮೀಟಿಂಗೇನೋ ಮುಗಿದಿತ್ತು, “ಎಲೆನಾ ಇವತ್ತೇನು ಚರ್ಚೆ, ಬಾಂಬ್ ಇಟ್ಟಿಲ್ಲ ತಾನೆ?” ಎಂದು ತಮಾಷೆಗೆ ಕೇಳಿದಳು. “ನಮ್ಮ ಧ್ಯೇಯಕ್ಕೆ ಬಾಂಬ್ ಯಾಕೆ ಬೇಕು, ಮನುಷ್ಯರೇ ಸಿಡಿಯುತ್ತಿದ್ದೇವೆ” ಎಂದು ಬಹಳ ಆವೇಷದಿಂದ ಮಾತಾಡಿದಳು. ಎಲೆನಾ ಹಾಗೆ, ಒಂದು ಕೆಲಸವನ್ನು ಹಿಡಿದರೆ ಅದನ್ನು ಮುಗಿಸುವ ತನಕ ಹೀಗೆ ಡೀಪಾಗಿ ಮಾಡುತ್ತಿದ್ದಳು. ಕತಲಾನ್ ಸ್ವಾತಂತ್ರ್ಯ ತನಗೆ ಬಹಳ ಮುಖ್ಯ, ನನ್ನ ದೇಶ ಕತಲೂನ್ಯ ಎಂದು ನಂಬಿದ್ದಳು. ಆಕೆಗೆ ಇರುವ ಹುಮ್ಮಸ್ಸು ಪ್ರಾಯಶಃ ಹುಡುಗಿಗೆ 10% ಸಹ ಇರಲ್ಲಿಲ್ಲ.

ತನ್ನ ದೇಶದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಆಗಾಗ ಆನ್ಲೈನಿನಲ್ಲಿ ಗಲಾಟೆ ಎಬ್ಬಿಸಿದ್ದು ಬಿಟ್ಟರೆ ಹೀಗೆ ತನ್ನ ಜೀವನವನ್ನು ರಿಸ್ಕ್ ತೆಗೆದುಕೊಂಡು ಯಾವತ್ತೂ ಹೋಗಿರಲಿಲ್ಲ. ರಾಜ್ಯ ದ್ರೋಹದ ಎಲ್ಲಾ ಕೇಸುಗಳು ಬ್ರಿಟಿಷರ ವಸಾತುಶಾಹಿಯಲ್ಲಿ ಇದ್ದಾಗ ಎಷ್ಟು ಕಠಿಣವಾಗಿತ್ತೋ ಅಷ್ಟೇ ಇರುತ್ತಿತ್ತು. ಸುಮ್ಮನೆ ಒಂದು ಬ್ಲಾಕ್ ಡಾಟ್ ಆದರೆ ಪಾಸ್ಪೋರ್ಟೇ ಕೊಡಲ್ಲ, ಪೊಲೀಸ್ ವೆರಿಫಿಕೇಷನ್ ಸರಿಯಾಗಿ ಮಾಡದೇ ಎಂದು ನಕ್ಕು ಮಿಡಲ್ ಕ್ಲಾಸಿನ ಭಯಗಳನ್ನು ನೆನೆದಳು.

“ನಿಮ್ಮ ಮನೆಯಲ್ಲಿ ಯಾರೂ ಹೋರಾಟ ಮಾಡಿಲ್ವಾ?” ಎಂದು ಎಲೆನಾ ಹುಡುಗಿಯನ್ನು ಕೇಳಿದಳು. ಇದು ಹುಡುಗಿಗೆ ಆಭಾಸ ಉಂಟು ಮಾಡಿತ್ತು. ಈ ಪ್ರಶ್ನೆಗೆ ಏನು ಉತ್ತರ ಕೊಡೋದು ಎಂದು ಯೋಚನೆ ಮಾಡಲು ಶುರು ಮಾಡಿದಳು. “ನಮ್ಮ ತಾತ ಸ್ವಾತಂತ್ರ್ಯ ಹೋರಾಟ ಮತ್ತು ಎಮರ್ಜೆನ್ಸಿಯ ವಿರುದ್ಧ ಹೋರಾಟ ಮಾಡಿದ್ದರು, ಅವರು ಪತ್ರಕರ್ತರಾಗಿದ್ದರು” ಎಂದು ಹೇಳಿದಳು.

“ವಾಟ್, ನಿಮ್ಮ ದೇಶದ ಎಮೆರ್ಜನ್ಸಿಯ ಬಗ್ಗೆ ನಾನು ಓದಿದ್ದೇನೆ, ನಿಮ್ಮಪ್ಪ ಯಾವುದರ ಹೋರಾಟದಲ್ಲಿ ಭಾಗಿಯಾಗಿದ್ದರು?” ಎಂದು ಮರುಪ್ರಶ್ನೆ ಮಾಡಿದಳು. “ಗೋಕಾಕ್ ಚಳುವಳಿ ಎಂದು ಒಂದಿತ್ತು, ಕನ್ನಡ ನಾಡಲ್ಲಿ ಕನ್ನಡಿಗರೇ, ಕನ್ನಡವೇ  ಸಾರ್ವಭೌಮ ಎಂದು ಸಾಬೀತು ಪಡಿಸಲು ಒಂದು ದೊಡ್ಡ ಹೋರಾಟವೇ ಆಗಿತ್ತು.

ರಾಜಕುಮಾರ್ ಅದರಲ್ಲಿ ಭಾಗವಹಿಸಿದ್ದರು, ಅವರನ್ನ ನೋಡಲು ಇಡೀ ಜನಸಮೂಹವೇ ಸೇರಿತ್ತು. ಇಂತಹ ಜನ ಸಮೂಹದಲ್ಲಿ ಅಪ್ಪನೂ ಅಲ್ಲಿ ಹೋಗಿದ್ದರು, ಲಾಟಿ ಏಟು ಸಹ ಬಿದ್ದಿತ್ತು” ಎಂದು ಹೇಳಿದಳು, “ನೋಡು ದೇಶದ ಸ್ವಾತಂತ್ರ್ಯ ಎಂದು ಗಲಾಟೆ ಶುರುವಾದ್ದದ್ದು ಹೇಗೆ ಪ್ರಾಂತ್ಯದ ಭಾಷೆ ಎಂದು ಶುರುವಾಯಿತು, ಅದು ಹಾಗೆಯೇ ಆಗೋದು ನಾವು ಏನೇ ಸ್ವಾತಂತ್ರ್ಯ ಎಂದು ಹೋರಾಡಿದರೂ ನಮಗೆ ನಮ್ಮ ಭಾಷೆಗೆ ಕುತ್ತು ಬರುವಾಗ ಆಗುವ ತಳಮಳ ಇದೆಯೆಲ್ಲಾ ಅದನ್ನು ವಿವರಿಸಲು ಸಾಧ್ಯವೇ ಇಲ್ಲ ಇದೇ ನಿನ್ನ ರಾಜ್ಯದಲ್ಲೂ ಆಗಿದ್ದು ತಾನೆ” ಎಂದಳು.

ದೇಶದಲ್ಲಿ ನಡೆಯುವ ಹೋರಾಟಗಳಿಗೆ ಒಂದು ರೂಪುರೇಷೆಯಿದೆ, ಅದು ಒಂದು ಅಲ್ಗಾರಿಥಮ್ಮಿನ ರೀತಿ ನಡೆಯುತ್ತದೆ ಎಂದು ಎಲೆನಾ ಯಾವಾಗಲೂ ಹೇಳುತ್ತಿದ್ದಳು. ಏಕೀಕರಣಕ್ಕಾಗಿ ಹೋರಾಟ, ಆಮೇಲೆ ಪ್ರಾಂತ್ಯದ ಹೋರಾಟ, ಒಮ್ಮೆಲೆ ಧರ್ಮಾಂಧತೆಯ ವಿರುದ್ಧ ಹೋರಾಟ, ಅಧಿಕಾರಶಾಹಿಯ ವಿರುದ್ಧ ಹೋರಾಟ, ಸರ್ಕಾರದ ದಬ್ಬಾಳಿಕೆಯ ವಿರುದ್ಧ ಹೋರಾಟ ಇವೆಲ್ಲ ಪ್ರತಿ ದೇಶದಲ್ಲೂ ಆಗೇ ಆಗತ್ತೆ, ಆಗದಿದ್ದರೆ ಅದು ಸ್ವತಂತ್ರ್ಯ ಮತ್ತು ಪ್ರಜಾಪ್ರಭುತ್ವದ ದೇಶವೇ ಅಲ್ಲ ಎಂದು ದೊಡ್ಡ ರಾಜಕೀಯ ನಾಯಕಿಯ ಹಾಗೆ ಮಾತಾಡುತ್ತಿದ್ದಳು.

“ಸೈನ್ಸ್ ಓದುವವರು ಸೈನ್ಸ್ ಮಾತ್ರ ಓದಿ ಮಾರ್ರೆ” ಎಂದು ಹೇಳಿದ್ದ ನಾಡಿಗ್ ಸರ್ ಅವಳಿಗೆ ನೆನಪಿಗೆ ಬಂದರು. ಕಾಲೇಜಿನಲ್ಲಿ ಒಮ್ಮೆ ಒಂದು ಗಲಾಟೆ ಮಾಡುವ ಪ್ರಸಂಗ ಬಂದಾಗ ”ಸೈನ್ಸ್ ಮಕ್ಕಳೆಲ್ಲಾ ಆಚೆ ಕಡೆ ಸರೀರಿ, ನಿಮ್ಮದೇನು ಅಜೆಂಡಾ ಇಲ್ಲ” ಎಂದು ಬೈದು ಆಚೆಗೆ ಕಳಿಸಿದ್ದರು. ಇಲ್ಲಿ ಹೋರಾಟ ಮಾಡುತ್ತಿರುವ ಹುಡುಗ ಹುಡುಗಿಯರು ದೊಡ್ಡ ದೊಡ್ಡ ಡಾಕ್ಟರುಗಳು, ಪಿ ಎಚ್ ಡಿ ಗಳೇ ಆಗಿದ್ದರು.

ಅವರಿಗೆ ಹೀಗೆ ಸೈನ್ಸ್ ಕಲಿಯುವವರು ದೇಶ ಕಟ್ಟುವ ವಿಚಾರಕ್ಕೆ ಬರೀ ರಿಸರ್ಚ್ ಕೊಡುಗೆ ಮಾತ್ರ ಕೊಡುವ ಪ್ರಮೇಯ ಬರುತ್ತಿರಲ್ಲಿಲ್ಲ. ದೊಡ್ಡ ದೊಡ್ಡ ರಾಜಕೀಯ ನಾಯಕರೂ ಆಗಿಬಿಟ್ಟಿದ್ದರು. ಎಲೆನಾ ಅದೇ ಹಾದಿಯಲ್ಲಿದ್ದಳು. “ನಮ್ಮ ಬೇಸಿಕ್ಸ್ ಸರಿಗಿಲ್ವಾ?” ಎಂದು ಕೆಲವೊಮ್ಮೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಳು ಹುಡುಗಿ.

“ನೀನು ಯಾವ ಹೋರಾಟ ಮಾಡಿದ್ದೆ?” ಎಂದು ಹುಡುಗಿಗೆ ಎಲೆನಾ ಪ್ರಶ್ನೆ ಹಾಕಿದ್ದಳು, “ನಿಮ್ಮ ದೇಶ ಸ್ವತಂತ್ರ್ಯ ಬಂದು ಇಷ್ಟು ವರ್ಷ ಆದರೂ ನಮ್ಮ ಯುರೋಪಿಗೆ ಇನ್ನೂ ನಿಮ್ಮ ದೇಶ ಡೆವಲಪಿಂಗ್ ನೇಷನ್ ಆಗೇ ಉಳಿದಿದೆ, ನಾವು ಪಠ್ಯ ಪುಸ್ತಕದಲ್ಲಿ ಹಾಗೆ ಓದಿದ್ದೇವೆ” ಎಂದು ಹುಡುಗಿಯನ್ನು ಕೆಣಕಿದಳು. ಎಂಜನಿಯರಿಂಗ್ ಕಾಲೇಜಿನ ಹಾಸ್ಟೆಲಿನಲ್ಲಿ ಸಿಕ್ಕಾಪಟ್ಟೆ ಸೊಳ್ಳೆ ಕಾಟ ಆಗಿದ್ದಕ್ಕೆ ಒಂದು ದೊಡ್ಡ ಗಲಾಟೆ ಮಾಡಿದ್ದು, ಮತ್ತು ಕರಪ್ಷನ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದು ಬಿಟ್ಟರೆ ಮಿಕ್ಕಿದ್ಯಾವುದೂ ಇಲ್ಲ.

ಪ್ರಾಯಶಃ ಕಾವೇರಿ ಗಲಾಟೆಯನ್ನೂ ಮಂಡ್ಯ ಮೈಸೂರಿನ ರೈತರಿಗೆ ಗುತ್ತಿಗೆ ಕೊಟ್ಟ ಎಲ್ಲಾ ಬೆಂಗಳೂರಿನ ಮಹಾಜನತೆಯ ಹಾಗೆ ಹುಡುಗಿಯೂ ಇದ್ದಳು. ಮನೆಗೆ 150 ಕಿ.ಮೀ ಗಿಂತ ಹೆಚ್ಚಿನ ದೂರದಿಂದ ಪೈಪ್ ಹಾಕಿ ನೀರು ನುಂಗುವ ಅಸಂಖ್ಯಾತ ಬೆಂಗಳೂರಿಗರಲ್ಲಿ ಇವಳೂ ಒಬ್ಬಳಾಗಿದ್ದಳು. “ಕಾವೇರಿ ನೀರು ಇದೆ” ಬೆಂಗಳೂರಿನ ರಿಯಲ್ ಎಸ್ಟೇಟ್ ನವರು ಏರಿಸುವ ದುಡ್ಡಿಗೆ ಸ್ವಲ್ಪವೂ ಸಹ ಕಿಮ್ಮತ್ತು ಕೊಡುತ್ತಿರಲ್ಲಿಲ್ಲ. ದೂರದ ಊರಿನಿಂದ ಬರುವ ನೀರೇ ಬೆಂಗಳೂರಿನ ಬಂಡವಾಳವಾಗಿತ್ತು. “ಕಾವೇರಿ ನೀರಾ ಅಥವಾ ಬೋರ್ವೆಲ್ಲಾ?” ಎಂದು ಕೇಳುವಷ್ಟು ಸಹಜವಾಗಿ ನೀರನ್ನು ಕಡೆಗಣಿಸಿದರು.

ಇವೆಲ್ಲಾ ಮನಸಿನಲ್ಲಿ ಯೋಚನೆ ಬಂದರೂ ಹುಡುಗಿ ಸುಮ್ಮನೆ ಇದ್ದಳು. ಮತ್ತೆ ಇವನ್ನೆಲ್ಲಾ ಅವಳಿಗೆ ಹೇಳಿ, ಅವಳು ಅದನ್ನ ಯಾವುದೋ ಭಾಷಣದಲ್ಲಿ ಮಾತಾಡಿ, ಅಲ್ಲಿ ಜನ ಉರ್ಕೊಂಡು ಯಾಕೆ ಬೇಕು ಎಂದು ಸುಮ್ಮನಿದ್ದಳು. ಪ್ರತಿಕ್ರಿಯೆ ಕೊಡುವುದಕ್ಕೆಂದೇ ಈಗಿನ ಕಾಲದಲ್ಲಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವಾಗ ಮಾತಾಡುವುದು ಕೆಲವೊಮ್ಮೆ ವರ್ಜ್ಯ ಮಾಡುವುದು ಸರಿಯೆಂದು ಹುಡುಗಿ ನಕ್ಕಳು.

“ಈ ಮೌನವೇ ನಿನ್ನನ್ನು ಹಿಂದಕ್ಕೆ ಎಳೆಯುತ್ತಿರುವುದು, ಮುಂದಿನ ದಾರಿಗೆ ಕರೆದೊಯ್ಯದೇ ಇರುವುದು” ಎಂದು ಎಲೆನಾ ಕುಹಕ ಮಾತುಗಳನ್ನು ಹೇಳಿ ತನ್ನ ಮುಂದಿನ ಹೋರಾಟದ ಮ್ಯಾಪನ್ನ ತೋರಿಸಿದಳು. ಅದು ಹುಡುಗಿಗೆ ಭಯ ಹುಟ್ಟಿಸಿತು…

|ಮುಂದಿನ ಸಂಚಿಕೆಯಲ್ಲಿ|

November 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು...

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This