ಕನ್ನಡ ಬರವಣಿಗೆಯಲ್ಲಿ ಆಗಬೇಕಿರುವ ಬದಲಾವಣೆಗಳು


ಕೆ ವಿ ನಾರಾಯಣ್ ಕನ್ನಡದ ಖ್ಯಾತ ವಿದ್ವಾಂಸರು. ಅವರ ನೋಟ ಕನ್ನಡ ಸಾಹಿತ್ಯವನ್ನು, ಭಾಷೆಯನ್ನೂ ಹಲವು ಹೆಜ್ಜೆ ಮುಂದೆ ಕೊಂಡೊಯ್ದಿದೆ. ಕನ್ನಡ ಬರವಣಿಗೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ  ಇವರು ನಡೆಸಿದ ಚಿಂತನೆ ಇಲ್ಲಿದೆ. ಪ್ರತಿಕ್ರಿಯೆಗೆ ಸ್ವಾಗತ.
-ಕೆ.ವಿ.ನಾರಾಯಣ
ಬರಹಕ್ಕೆ ಓದುಗರಿರುತ್ತಾರೆ. ಓದುಗರೆಲ್ಲರೂ ಬರೆಯುವವರೇ ಆಗಿರಬೇಕಿಲ್ಲ. ಅಂದರೆ ಬರೆಯುವವರು ಕಡಿಮೆಯಾದರೆ ಓದುವವರು ಹೆಚ್ಚು. ಬರೆಯಬಲ್ಲವರೆಲ್ಲ ಬರೆಯುವುದಿಲ್ಲ ಎಂಬುದನ್ನು ನೆನಪಿಡಬೇಕು. ಅಲ್ಲದೆ ಎಲ್ಲರೂ ಬರೆಯಬೇಕಾದ ಒತ್ತಡಗಳು ಇರುವುದಿಲ್ಲ. ಅಂದರೆ ನಾವು ಬರೆಯಬಲ್ಲವರಾಗಿದ್ದರೂ ಬರೆಯದಿರಬಹುದು. ಆದರೆ ಬೇರೆಯವರು ಬರೆದ್ದದ್ದನ್ನು ಓದುವವರಾಗಿರುತ್ತೇವೆ. ಆದ್ದರಿಂದ ಬರವಣಿಗೆ ಓದುಗರಿಗೆ ನೆರವಾಗುವಂತೆ ಇರಬೇಕು. ಇದಲ್ಲದೆ  ಕೆಲಚು ಬಗೆಯ ಬರವಣಿಗೆಗಳನ್ನು ನಾವು ಓದದಿದ್ದರೂ ನಮಗಾಗಿ ಇತರರು ಓದುವುನದನ್ನು ನಾವು ಕೇಳಿಸಿಕೊಳ್ಳುತ್ತೇವೆ. ಟಿವಿಯಲ್ಲಿ ಸುದ್ದಿಗಳನ್ನು ಓದುವವರು ಬರೆದ್ದದ್ದನ್ನು ನಮಗಾಗಿ ಓದಿ ಹೇಳುತ್ತಿರುತ್ತಾರೆ. ಆ ಬರವಣಿಗೆಯನ್ನು ನಾವು ನೋಡಲಾರೆವು;ಹಾಗಾಗಿ ಓದಬೇಕಾಗಿ ಬರುವುದಿಲ್ಲ. ನಾವೇ ಓದುವ( ಅಂದರೆ ಓದಿಕೊಳ್ಳುವ) ಬರಹ ಮತ್ತು ನಮಗಾಗಿ ಬೇರೆಯವರು ಓದಿಹೇಳುವ ಬರಹ ಇವೆರಡೂ ಒಂದೇ ಬಗೆಯಲ್ಲಿ ಇರುವುದಿಲ್ಲ.
ಈಗ ಕನ್ನಡ ಕಲಿತವರು ಕನ್ನಡವನ್ನು ‘ಸರಿಯಾಗಿ’ ಬರೆಯಲಾರರು ಎಂಬುದು  ಎಲ್ಲ ಕಡೆ ಕೇಳಿ ಬರುವ ದೂರು. ಬರೆಯಲಾಗದೆ ಹೋಗುವುದು ಮತ್ತು ಸರಿಯಾಗಿ ಬರೆಯದಿರುವುದು ಬೇರೆ ಬೇರೆ. ಹತ್ತು ಹನ್ನೆರಡು ವರುಷ ಕನ್ನಡ ಓದಿ ಬರೆಯಲು ಕಲಿತರೂ ಮಕ್ಕಳು ಕನ್ನಡವನ್ನು ತಪ್ಪಿಲ್ಲದೆ ಬರೆಯುತ್ತಿಲ್ಲವೇಕೇ?  ಬರೆಯುವ ಕನ್ನಡದಲ್ಲಿ ಎರಡು ಬಗೆಯ ತಪ್ಪುಗಳನ್ನು ಗುರುತಿಸುತ್ತಾರೆ. ಕಾಗುಣಿತದ ತಪ್ಪುಗಳು ಮತ್ತು ರಚನೆಯ ತಪ್ಪುಗಳು. ಇವೆರಡೂ ಬೇರೆ ಬೇರೆ ಕಾರಣಗಳಿಂದ ಉಂಟಾಗುತ್ತವೆ. ಬರೆಯುವವರು ತಾವು ಮಾತಾಡುವ ಕನ್ನಡದ ಪದರೂಪಗಳು ಬರೆದಾಗ ಹೇಗಿರುತ್ತವೆ ಎಂಬುದನ್ನು ಅರಿಯಲಾಗದಿರುವುದು ಅವರ ಬರವಣಿಗೆಯ ಕಾಗುಣಿತದ ತಪ್ಪುಗಳಿಗೆ ಕಾರಣ. ಅಂದರೆ ಬರೆಯುವವರು ಕನ್ನಡವನ್ನು ತಿಳಿಯದವರಲ್ಲ. ಆದರೆ ಅದರ ಬರಹದ ಬಗೆಯನ್ನು ಸರಿಯಾಗಿ ಅರಿಯದವರು. ಅರಿಯಲು ಅವರಿಗೆ ತೊಡಕುಗಳಿವೆ.ಇದಲ್ಲದೆ ನಾವು ಮಾತಾಡುವ ಕನ್ನಡದ ಹಾಗೆ ನಮ್ಮ ಬರವಣಿಗೆಯ ಕನ್ನಡ ಇರುವುದಿಲ್ಲ. ಕಿವಿಯಲ್ಲಿ ಕೇಳಿದ್ದನ್ನು ಬಾಯಲ್ಲಿ ನುಡಿಯುವುದನ್ನು ಬರೆಯ ಹೊರಟಾಗ ಹಲವು ಗೊಂದಲಗಳು ಉಂಟಾಗುತ್ತವೆ.  ನಾವು ‘ಸರಿಯಾದ’ ಕನ್ನಡವೆಂದು ಯಾವುದನ್ನು ಗುರುತಿಸುತ್ತೇವೋ ಅದು ಹೆಚ್ಚು ಜನ ಕನ್ನಡಿಗರ ಮಾತಿನಲ್ಲಿ ಕೇಳಸಿಗದ ಕನ್ನಡವಾಗಿದೆ.  ಹಾಗಿದ್ದಲ್ಲಿ ಬರವಣಿಗೆಯಲ್ಲಿ ತಪ್ಪುಗಳು ಕಡಿಮೆಯಾಗ ಬೇಕಾದರೆ ನಾವು ಬರೆಯುವ ಕನ್ನಡ ಮಾತಾಡುವ ಕನ್ನಡಕ್ಕೆ ಸಾಕಷ್ಟು ಹತ್ತಿರವಾಗುವಂತೆ ಮಾಡಬೇಕಾಗುತ್ತದೆ.
ಇದು ಹೇಳುವಷ್ಟು ಸರಳವಲ್ಲ. ಏಕೆಂದರೆ ಇದು ನಿಡುಗಾಲದ ಮತ್ತು ಬಲುಹರವಿನ ಯೋಜನೆಯನ್ನು ಬಯಸುತ್ತದೆ. ಸುಮಾರು ಎರಡು ಸಾವಿರ ವರುಷಗಳ ಹಿಂದೆ ಕನ್ನಡ ತನ್ನ ಬರವಣಿಗೆಯಲ್ಲಿ ಸಂಸ್ಕೃತದ ಪದಗಳನ್ನು ಅಳವಡಿಸಿಕೊಳ್ಳಲೆಂದು ತನ್ನ ಲಿಪಿ ಚೌಕಟ್ಟಿನಲ್ಲಿ ಹೆಚ್ಚಿನ ಲಿಪಿಗಳನ್ನು ಸೇರಿಸಿಕೊಂಡಿತು. ಇದರಿಂದ ಸಾವಿರಾರು ಸಂಸ್ಕೃತ ಪದಗಳನ್ನು ಕನ್ನಡ ಲಿಪಿಯಲ್ಲೇ ಬರೆದು ಓದಲು ಅನುವಾಯಿತು. ಅಂದರೆ ಸಂಸ್ಕೃತ ಪದಗಳನ್ನು ಕನ್ನಡಿಗರು ಹೇಗೆ ನುಡಿಯುತ್ತಿದ್ದರೋ ಹಾಗೆ ಬರೆಯುವ ಬದಲು ಸಂಸ್ಕೃತ ನುಡಿಯಲ್ಲಿದ್ದ ಬಗೆಯಲ್ಲೇ ಬರೆಯುವುದು,ಓದುವುದು ಬಳಕೆಗೆ ಬಂದಿತು. ‘ಧ್ವನಿ’ ಎಂಬ ಪದವನ್ನು ‘ದನಿ’ ಎಂದು ನುಡಿಯುತ್ತಿದ್ದರೂ ಬರೆಯುವುವಾಗ ‘ಧ್ವನಿ’ ಎಂದೆ ಬರೆಯುವುದು ಅಲ್ಲದೆ ಹಾಗೆ ಬರೆದರೆ ಮಾತ್ರ ಸರಿ ಎನ್ನುವ ಬಗೆ ಜಾರಿಗೆ ಬಂತು. ಈಗ ನಾವು ಎದುರು ದಿಕ್ಕಿನಲ್ಲಿ ಪಯಣವನ್ನು ಮಾಡಬೇಕಿದೆ. ನಾವು ಆ ಪದಗಳನ್ನು ಹೇಗೆ ನುಡಿಯುತ್ತೇವೋ ಹಾಗೆ ಬರೆಯಲು ತೊಡಗಬೇಕು.
ಡಿ.ಎನ್.ಶಂಕರ ಭಟ್ ಅವರು ‘ಕನ್ನಡ ಬರಹವನ್ನು ಸರಿಪಡಿಸೋಣ’ ಎಂಬ ತಮ್ಮ ಹೊತ್ತಿಗೆಯಲ್ಲಿ ಈ ಬದಲಾವಣೆಯನ್ನು ಜಾರಿಗೆ ಕೊಡಲು ನೆರವಾಗುವ ಕೆಲವು ಸೂಚನೆಗಳನ್ನು ನೀಡುತ್ತಾರೆ. ಅವರು ಹೇಳುವಂತೆ ಕನ್ನಡದ ಸ್ವರಲಿಪಿಗಳಿಂದ ಋ,ಐ,ಔ ಮತ್ತು ಅಃ ಲಿಪಿಗಳನ್ನು ಬಿಡಬೇಕು. ಅವಿಲ್ಲದೆಯೂ ನಾವು ಮಾತಾಡುವ ಕನ್ನಡವನ್ನು ‘ಸರಿಯಾಗಿ’ ಬರೆಯಬಹುದು.  ವ್ಯಂಜನಗಳಿಂದ ಅ) ಮಹಾಪ್ರಾಣಗಳ ಲಿಪಿಗಳನ್ನು ಬಿಡಬೇಕು.ಆ) ಶ, ಷ ಮತ್ತು ಸ ಗಳಲ್ಲಿ ಷ ಲಿಪಿ ಬೇಕಿಲ್ಲ. ಏಕೆಂದರೆ ಹೆಚ್ಚು ಜನರ ಮಾತಿನಲ್ಲಿ ಶ ಮತ್ತು ಷ ಗಳು ಬೇರೆಬೇರೆ ದನಿಗಳಾಗಿ ಕೇಳಿಸುವುದಿಲ್ಲ. ಬರಹದಲ್ಲಿ ಅವೆರಡನ್ನೂ ಬೇರೆಯಾಗಿ ಇರಿಸುತ್ತಿದ್ದೇವೆ. ಬದಲಿಗೆ ಅವೆರಡಕ್ಕೂ ಒಂದೇ ಲಿಪಿ ಬಳಸಿದರೆ ತಪ್ಪಾಗುವುದಿಲ್ಲ. 
ಭಟ್ ಅವರು ಈ ಬದಲಾವಣೆಯನ್ನು ಕನ್ನಡಿಗರ ಮುಂದಿಟ್ಟು ಸುಮ್ಮನೆ ಕುಳಿತಿಲ್ಲ. ಮೇಲೆ ಹೇಳಿದ ಹೊತ್ತಿಗೆಯ ಒಂದು ‘ಅದ್ಯಾಯ’ವನ್ನು ಮತ್ತು ಅವರ ಈಚಿನ ಹೊಸ ಹೊತ್ತಿಗೆ ‘ಕನ್ನಡ ನುಡಿ ನಡೆದು ಬಂದ ದಾರಿ’ ಎಂಬ ಹೊತ್ತಿಗೆಯನ್ನು ಇಡಿಯಾಗಿ ತಾವು ಸೂಚಿಸಿದ ಬಗೆಯಲ್ಲೇ ಬರೆದಿದ್ದಾರೆ. ಮೊದಲಿಗೆ ಈ ಬದಲಾದ ಬರಹ ‘ಕಣ್ಣಿಗೆ’ ಕಿರಿಕಿರಿಯನ್ನು ಉಂಟು ಮಾಡುವುದಾದರೂ ಅದು ಕಿವಿಯ ಕನ್ನಡಕ್ಕೆ ಹತ್ತಿರವಾದುದರಿಂದ ಅದಕ್ಕೆ ಹೊಂದಿಕೊಳ್ಳುವುದು ಆಗದ ಮಾತೇನೂ ಅಲ್ಲ.
ಮೊದಲಲ್ಲಿ ಹೇಳಿದ ಹಾಗೆ ಕನ್ನಡವನ್ನು ಬರೆಯುವವರು ಕಡಿಮೆ. ಬರೆಯುವುದನ್ನು ಕಲಿತವರೂ ಕನ್ನಡವನ್ನು ಬದುಕಿನುದ್ದಕ್ಕೂ ಓದುವವರಾಗಿ ಉಳಿಯುವುದೇ ಹೆಚ್ಚು. ತಿದ್ದಿದ ಲಿಪಿ ಚೌಕಟ್ಟಿನ ಕನ್ನಡ ಬರವಣಿಗೆ ನಮ್ಮ ಮಾತಿಗೆ ಹೆಚ್ಚು ಹತ್ತಿರವಾಗುವುದರಿಂದ ಅದನ್ನು ಬರೆಯುವವರಿಗೆ ನೆರವಾಗುವ ಹಾಗೆಯೇ ಓದುವವರಿಗೂ ನೆರವಿಗೆ ಬರುತ್ತದೆ.  ಓದುವವರು ತಾವು ನುಡಿಯುವ ಮತ್ತು ಕೇಳುವ ಕನ್ನಡಕ್ಕೆ ಹೆಚ್ಚು ಹತ್ತಿರವಾದ ಕನ್ನಡವನ್ನೇ ಕಣ್ಣಿನಿಂದ ನೋಡುತ್ತಿರುತ್ತಾರೆ (ಅಂದರೆ ಓದುತ್ತಿರುತ್ತಾರೆ) ಇದರಿಂದ ಕನ್ನಡ ಬರವಣಿಗೆಯಲ್ಲಿ ಈಗ ನಾವು ‘ಕಾಣುತ್ತಿರುವ ‘ ತಪ್ಪುಗಳು ಕಡಿಮೆಯಾದಾವು.
ಕನ್ನಡ ಬರಹವನ್ನು ಓದುವವರು ಕಡಿಮೆಯಾಗುತ್ತಿದ್ದಾರೆ ಎಂಬ ಇನ್ನೊಂದು ದೂರು ಕೂಡ ಇದೆ.  ಅದರಲ್ಲೂ ಪದಪದಗಳನ್ನು ಬಿಡದೇ ಓದಬೇಕಾ ಬರಹಗಳನ್ನು ಓದುವವರು ಕಡಿಮೆಯಾಗುತ್ತಿರುವಂತಿದೆ. ಕೆಲವು ಬರಹಗಳನ್ನು ಹಾಗೆ ಪದಪದಗಳನ್ನು ಬಿಡದೆ ಓದಬೇಕಿಲ್ಲ. ಪತ್ರಿಕೆಗಳ ಬರಹ ಆ ಬಗೆಯದು. ಹಗೆ ಅಲ್ಲಿ ಬರದ ಎಲ್ಲ ಪದಗಳನ್ನು ಬಿಡದೇ ಓದಹೊರಡುವುದು ಹುಚ್ಚುತನವಾಗುತ್ತದೆ. ಹೆಚ್ಚು ಜನ ಪತ್ರಿಕೆಗಳ ಬರಹಗಳ ಮೇಲೆ ‘ಕಣ್ಣಾಡಿಸುತ್ತಾರೆ’ ಅದರಿಂದ ಕೊರತೆಗಳೇನೂ ಉಂಟಾಗುವುದಿಲ್ಲ. ಅವರಿಗೆ ಅಲ್ಲಿನ ಮಾಹಿತಿಯ ಬಗೆಗೆ ಸಾಕಷ್ಟು ತಿಳುವಳಿಕೆ ಅಷ್ಟರಿಂದಲೇ ದೊರಕುತ್ತದೆ.  ಆದರೆ ಎಲ್ಲ ಬರಹಗಳನ್ನೂ ಹೀಗೆ ‘ಕಣ್ಣಾಡಿಸಿ’ ಓದಲು ಬರುವುದಿಲ್ಲ. ಪದಪದಗಳನ್ನು ಬಿಡದೇ ಓದಬೇಕಾಗುತ್ತದೆ. ಇಂತಹ ಬರಹಗಳನ್ನು ಓದುವವರು ಕನ್ನಡ ಬರವಣಿಗೆಯನ್ನು ದೂರವಿಡುತ್ತಿದ್ದಾರೆಂಬುದೇ ದೂರಿನ ತಿರುಳು. ಏಕೆ ಹೀಗಾಗುತ್ತಿದೆ?
ಇಂತಹ ಬರಹಗಳೂ ಕೂಡ ನಾವು ನುಡಿಯುವ ಕನ್ನಡದಲ್ಲಿ ಬಳಕೆಯಾಗುವ ಪದಗಳಿಗೆ ಬದಲಾಗಿ ನಾವು ಕೇಳದ ಪದಗಳನ್ನು, ಓದಿನಲ್ಲಷ್ಟೇ ‘ನೋಡುವ’ ಪದಗಳನ್ನು ಹೆಚ್ಚಾಗಿ ಬಳಸುತ್ತವೆ. ಈ ಮಾತು ದಿಟ. ನಮ್ಮ ಬರಹದ ಕನ್ನಡ ಚಲುವಾಗಿರಬೇಕೆಂದುಕೊಂಡು ನಾವು ಹೆಚ್ಚುಹೆಚ್ಚು ಜನಬಳಕೆಯಿಂದ ದೂರವಾಗಿರುವ ಇಲ್ಲವೇ ಜನ ಬಳಸದಿರುವ ನೂರಾರು ಸಂಸ್ಕೃತ ಪದಗಳನ್ನು ಬಳಸುತ್ತೇವೆ. ಬರೆದ ನೂರು ಪದಗಳಲ್ಲಿ ಸಂಸ್ಕೃತ ಪದಗಳು ಕೆಲವೊಮ್ಮೆ ಐವತ್ತನ್ನು ದಾಟುವುದುಂಟು. ಇದರಿಂದಾಗಿ ಓದುವವರಿಗೆ ನಮ್ಮ ಬರವಣಿಗೆ ಕಬ್ಬಿಣದ ಕಡಲೆಯಾಗುತ್ತದೆ. ಆ ಸಂಸ್ಕೃತ ಪದಗಳಿಗೆ ಬದಲಾಗಿ ಕನ್ನಡ ಪದಗಳನ್ನು ಬಳಸಲು ಬರುವಂತಿದ್ದರೂ ಹಾಗೆ ಮಾಡದೆ ಸಂಸ್ಕೃತ ಪದಗಳಿಗೇ ಜೋತುಬೀಳುವುದು ಹೆಚ್ಚಾಗಿದೆ. ಇದು ಕಡ್ಡಿಯನ್ನು ಗುಡ್ಡ ಮಾಡಿ ಹೇಳುವ ಮಾತಲ್ಲ. ಕನ್ನಡ ಬರಹಗಳನ್ನು ಹತ್ತಿರದಿಂದ ಬಲ್ಲವರಿಗೆ ಕಣ್ಣಿಗೆ ರಾಚುವ ಮಾತಾಗಿದೆ. ಆದ್ದರಿಂದ ಇಲ್ಲಿಯೂ ಒಂದು ಬದಲಾವಣೆ ಬೇಕಾಗಿದೆ.  ಏನದು? ಆದಷ್ಟು ಕನ್ನಡ ಪದಗಳನ್ನೇ ಬಳಸಿ ಕನ್ನಡವನ್ನು ಬರೆಯವುದು ಸರಿಯಾದ ದಾರಿ. ಬರೆಯುವರೆಲ್ಲರೂ ತಮ್ಮ ಕನ್ನಡ ಬರವಣಿಗೆಯಲ್ಲಿ ಆದಷ್ಟು ಕನ್ನಡ ಪದಗಳನ್ನಷ್ಷೇ ಬಳಸಲು ತೊಡಗಬೇಕು.  ಸಂಸ್ಕೃತ ಪದಗಳನ್ನು ಹೆಚ್ಚು ಬಳಸಿ ಬರೆದ ಬರವಣಿಗೆಗಳನ್ನು ತಿದ್ದಿ ಅಲ್ಲಿರುವ ಸಂಸ್ಕೃತ ಪದಗಳ ಬದಲಿಗೆ ಅವಿರುವ ಜಾಗದಲ್ಲಿ ಕನ್ನಡ ಪದಗಳನ್ನು ಹಾಕುವ ಬಗೆ ಬಳಕೆಗೆ ಬರಬೇಕು. ಇದು ಪದಕ್ಕೆ ಬದಲಾಗಿ ಪದ ಎಂಬ ಹಾದಿಯನ್ನು ಹಿಡಿಯುವುದರಿಂದ ಆಗುವ ಕೆಲಸವಲ್ಲ. ಅದಕ್ಕಾಗಿ ಕನ್ನಡ ವಾಕ್ಯಗಳ ಬಗೆಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗಿ ಬರುತ್ತದೆ.
ಇನ್ನೊಂದು ಬಗೆಯ ಕನ್ನಡ ಬರವಣಿಗೆಯನ್ನು ಕುರಿತು ಮೊದಲಲ್ಲಿ ಹೇಳಿದೆ. ಅದು ಬರೆದ್ದಾದರೂ ಯಾರೋ ಒಬ್ಬರು ಹಲವರಿಗಾಗಿ ಓದಿ ಹೇಳುವ (ಇಲ್ಲವೇ ಮಾತಾಡಿ ಹೇಳುವ) ಬರವಣಿಗೆ. ಟಿವಿಯ ಸುದ್ದಿಗಾರರು ಬರೆದ ಸುದ್ದಿಯನ್ನು ಓದುತ್ತಿರುತ್ತಾರೆ. ನಮಗೆ ಮಾತಾಡಿದಂತೆ ತೋರಿದರೂ ಅವರ ಎದುರಿಗೆ ಓದಲು ನೆರವಾಗುವ ಬರವಣಿಗೆ ಇರುತ್ತದೆ. ಹೀಗೆ ಇತರರಿಗೆ ಓದಿ ಹೇಳ ಬೇಕಾದ ಬರವಣಿಗೆಯಲ್ಲಿ ಬಳಸ ಬೇಕಾದ ಪದಗಳು ಮತ್ತು ವಾಕ್ಯಗಳು ನಾವು ಕಣ್ಣಲ್ಲಿ ಓದಿಕೊಳ್ಳುವ ಬರವಣಿಗೆಯಲ್ಲಿ ಇರುವುದಕ್ಕಿಂತ ಬೇರೆಯಾಗಿಯೇ ಇರಬೇಕಾಗುತ್ತದೆ. ಹಾಗಿಲ್ಲದಿದ್ದಲ್ಲಿ ಓದಿ ಹೇಳುತ್ತಿದ್ದರೂ ಅದು ನಾವು ಕಿವಿಯಲ್ಲಿ ಕೇಳುವ ಕನ್ನಡದಂತೆ ತೋರುವುದಿಲ್ಲ. ನಾವು ಕಣ್ಣಲ್ಲಿ ನೋಡಿ ಓದುವ ಎಷ್ಟೋ ಪದಗಳನ್ನು ನುಡಿಯಲ್ಲಿ ಬಳಸುವುದಿಲ್ಲ; ಅವುಗಳನ್ನು ಕೇಳಿಸಿಕೊಳ್ಳುವುದೂ ಇಲ್ಲ. ಈಗ ಈ ಬಗೆಯ ‘ಓದಿ ಹೇಳಬೇಕಾದ’ ಕನ್ನಡ ಬರವಣಿಗೆ ಹೆಚ್ಚಾಗುತ್ತಿದೆ. ಆದರೆ ಅದರೆ ಚಹರೆಗಳನ್ನು ಆ ಬರವಣಿಗೆಯಲ್ಲಿ ತೊಡಗಿರುವವರು ಇನ್ನೂ ಸರಿಯಾಗಿ ಅರಿತಿಲ್ಲ. ಇಲ್ಲಿಯೂ ಬದಲಾವಣೆಗಳು ಬೇಕಾಗಿವೆ. ನಾವು ನುಡಿಯುವ ಕನ್ನಡದ ಚಾಲುಗಳನ್ನು ಏರಿಳಿತಗಳನ್ನು ಹಿಡಿದಿಡುವ ಬಗೆಯಲ್ಲಿ ಆ ಬರವಣಿಗೆಗಳು ಮೈತಳೆಯಬೇಕು. ಅದಕ್ಕಾಗಿ ಆಂತಹ ಕನ್ನಡವನ್ನು ಬರೆಯುತ್ತಿರುವವರು ತಮ್ಮ ಕಿವಿಗಳನ್ನು ಚುರುಕಾಗಿರಿಸಿಕೊಳ್ಳಬೇಕು. ‘ಸರಿಯಾಗಿ’ (ಕೇವಲ ಸರಿಯಾದ ಅಲ್ಲ) ಕನ್ನಡವನ್ನು ಕೇಳಿಸಿಕೊಳ್ಳಬೇಕು. ಇದು ಅವರಿಗೆ ಒತ್ತಾಸೆಯಾಗುತ್ತದೆ.  ಈ ಎಲ್ಲ ಬದಲಾವಣೆಗಳು ಕನ್ನಡ ಬರವಣಿಗಯಲ್ಲಿ ಆಗಬೇಕು. ಇದರಿಂದ ಈಗಿರುವ ಹಲವು ಗೊಂದಲಗಳು ಕಡಿಮೆಯಾಗುತ್ತವೆ.
ಮತ್ತೆ ಮೊದಲಿಗೆ ಬರೋಣ. ಕನ್ನಡ ಕಲಿತವರು ಕನ್ನಡವನ್ನು ಸರಿಯಾಗಿ ಬರೆಯುತ್ತಿಲ್ಲ ಎಂದು ಹಲುಬುವುದು ದಿನಕಳೆದಂತೆ ಕಡಿಮೆಯಾಗುತ್ತದೆ. ಏಕೆಂದರೆ ಈಗ, ‘ಬರೆಯುವುದನ್ನು’ ನುಡಿ ಕಲಿಕೆಯಲ್ಲಿ ಪಡೆದರೂ ಅದರ ಬಳಕೆ ಕಲಿತ ಬಗೆಯಲ್ಲೇ ಉಳಿಯಬೇಕಾಗಿಲ್ಲ. ಕಂಪ್ಯೂಟರ್ ಗಳಿಂದಾಗಿ ಈಗ ಬರೆಯುವುದು ಎಂಬ ಮಾತಿಗೇ ಬೇರೆ ಹೊಳಹು ಮೂಡುತ್ತಿದೆ. ಬರುವ ದಿನಗಳಲ್ಲಿ ನುಡಿ ಕಲಿಯುವವರು ಬರೆಯುವುದನ್ನು ಕಲಿಯದಿದ್ದರೂ ಏನೂ ಕೊರತೆಯಾಗುವುದಿಲ್ಲವೇನೋ. ಓದುವುದನ್ನು ಕಲಿತರೆ ಅದೇ ಸಾಕಾದೀತು. ಇರಲಿ ಇದು ಏನಾಗುವುದೋ ಕಾಯ್ದು ನೋಡೋಣ. ( ಇಲ್ಲಿಯವರೆಗೆ ಈ ಬರಹವನ್ನು ಓದಿದವರು ಈಗ ಮತ್ತೊಮ್ಮೆ ಕಣ್ಣಿಟ್ಟು ನೋಡಿದರೆ ಈ ಬರಹದಲ್ಲಿ ಬೆರಳೆಣಿಕೆಯ ಸಂಸ್ಕೃತ ಪದಗಳನ್ನಷ್ಟೇ ಬಳಸಿರುವುದನ್ನು ಗುರುತಿಸಬಹುದು. ಇದರಿಂದ ಓದಿಗೆ ಏನಾದರೂ ನೆರವಾಯಿತೋ ಇಲ್ಲವೇ ಅಡ್ಡಿಯಾಯಿತೋ ನೀವೇ ಹೇಳಬೇಕು)
 

‍ಲೇಖಕರು avadhi

June 20, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. ಚಂದಿನ

  “ಕಾಲಕ್ಕೆ ತಕ್ಕಂತೆ ಕುಣಿಯಬೇಕು”
  ಕಳೆದು ಹೋಗುವುದಕಿಂತ
  ಕುಣಿಯುವುದು ಲೇಸಲ್ಲವೆ
  ನಿಮ್ಮೊಂದಿಗೆ,
  – ಚಂದಿನ

  ಪ್ರತಿಕ್ರಿಯೆ
 2. Satya

  But the problem is everybody speaks differently.
  Somebody’s Kannada might look different for
  others. Somebody has to standardise these
  words !!!
  – Satya

  ಪ್ರತಿಕ್ರಿಯೆ
 3. ರವಿ ಅಜ್ಜೀಪುರ

  ನೀವು ಹೇಳಿದ್ದು ನಿಜ. ನಾನೂ ಗಮನಿಸಿದಂತೆ ನಾವು ಆಡುವ ಮತ್ತು ಬರೆಯುವುದರ
  ನಡುವೆ ಕೆಲವು ವ್ಯತ್ಯಾಸಗಳನ್ನು ಗುರುತಿಸಬಹುದು. ಮಾತಿನಂತೆ
  ಬರೆಯುವುದು ಕಷ್ಟ, ಬರೆದಂತೆ ಮಾತನಾಡುವದೂ ಕಷ್ಟ. ಆದರೆ ಆಡು ಭಾಷೆ
  ಅಂತ ಏನಿದೆ ಅದು ಹೆಚ್ಚು ಮನಸ್ಸಿಗೆ ಹತ್ತಿರವಾಗುತ್ತೆ. ಪ್ರಾದೇಶಿಕವಾಗಿ ನಾವು ಈ ಥರಹದ
  ಭಾಷೆಯ ಪ್ರಯೋಗ ಮಾಡಬಹುದು. ಉದಾ:ಧಾರವಾಡ ಭಾಗದಲ್ಲಿನ ಪತ್ರಿಕೆಗಳು
  ಅಲ್ಲಿನ ಪ್ರಾದೇಶಿಕ ಭಾಷೆಯನ್ನ ಬಳಸಿದರೆ ಅವು ಹೆಚ್ಚೆಚ್ಚು ಆಪ್ತವಾಗುತ್ತವೆ.ಬೆಂಗಳೂರಿನಲ್ಲಿ
  ಅದರದೇ ಭಾಷೆ. ಆದ್ರೆ ವಿಸ್ತಾರ ಗಮನಿಸಿದಾಗ ಪುಸ್ತಕಗಳಿಗೆ ಆ ಥರಹದ ಲಿಮಿಟೇಷನ್
  ಒಗ್ಗುವುದಿಲ್ಲ.ಅವು ಎಲ್ಲಾ ಕಡೆ ನಿಲ್ಲುತ್ತವೆ.
  ನನಗೆ ಅನಿಸುವುದು ಏನೆಂದರೆ, ಭಾಷೆ ಯಾರ ಮುಲಾಜಿಗೂ ಸಿಗುವುದಿಲ್ಲ.ಅದು
  ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಹೊಸ ರೂಪ ಪಡಯುತ್ತಾ ಹೋಗುತ್ತದೆ. ಕೆಲವೊಮ್ಮೆ
  ನಾವು ಅಂದುಕೊಳ್ಲುವ ಭಾಷೆ ಹೀಗಿರಬೇಕು ಅನ್ನುವುದೂ ಕೂಡ ಕ್ಲೀಷೆ ಆದೀತೇನೋ!
  ಒಂದು ಶತಮಾನದಲ್ಲಿದ್ದ ಭಾಷೆ ಇನ್ನೊಂದು ಶತಮಾನದ ಹೊತ್ತಿಗೆ ತನ್ನ ರೂಪದಲ್ಲಿ ಬದಲಾವಣೆ
  ಕಂಡುಕೊಂಡಿರುತ್ತದೆ. ಅದಕ್ಕೆ ಇಂಗ್ಲಿಷ್ ನಮ್ಮ ಕಣ್ಣೆದುರಿಗೇ ಇದೆ. ತೀರಾ ಗ್ರಾಮಾಟಿಕಲ್ ಆಗಿ ಇಂಗ್ಲಿಷ್
  ಬಳಸುವುದು ಈಗ ಕಡಿಮೆಯಾಗಿದೆ. ಅಲ್ಲೊಂದು ಮಾರ್ಪಾಡಾಗಿದೆ. ಇಂಟೆರ್ನೆಟ್ ಇಂಗ್ಲಿಷ್
  ನೋಡಿದರೆ ಅದು ಬಹಳ ಸುಲಭ ಮತ್ತು ಸಹ್ಯವೇನೋ! ಒಂದು ಭಾಷೆಯ ಬೆಳವಣಿಗೆ
  ಕೂಡ ಆ ರೀತಿಯಲ್ಲೇ ಆಗಬೇಕು ಅನಿಸುತ್ತದೆ. ಒಂದು ಕಾಲಕ್ಕಷ್ಟೇ ಯಾವುದೇ ಭಾಷೆ
  ಸೀಮಿತವಾಗಿರುವುದಿಲ್ಲ ಮತ್ತು ಇರಲೂ ಕೂಡದು.
  ನನ್ನ ಕೇಳಿದ್ರೆ ಭಾಷೆ ಯಾವಾಗಲೂ ಸಿಂಪಲ್ ಅನಿಸಬೇಕು. ಅದು ಓದುಗನಿಗೆ ಯಾವುದೇ
  ತ್ರಾಸ ಇಲ್ಲದೆ ಅರ್ಥಕ್ಕೆ ನಿಲುಕಬೇಕು.ಪದಗಳ ಗುಂಡು ಹೊಡೆಯುವ, ವಾಕ್ಯಗಳಲ್ಲೇ
  ಸದೆ ಬಡಿಯುವಷ್ಟು ತೀಕ್ಷಣತೆ ಭಾಷೆಗಿರಬಾರದು. ಅದು ನೇರ ಮತ್ತು
  ನೇರವಾಗಿರಬೇಕು.ಓದುಗನನ್ನ ಗೊಂದಲಕ್ಕೆ ಕೆಡವಬಾರದು. ಯಾವ ಓದುಗನೂ
  ಡಿಕ್ಷನರಿ ಇಟ್ಟುಕೊಂಡು ಓದುವುದಕ್ಕೆ ಕೂರುವುದಿಲ್ಲ. ನೀವು ಹೇಳಿದಂಗೆ ಓದುವ
  ಮತ್ತು ಬರೆಯುವ ಪ್ರಕ್ರಿಯೆಗಳೆರಡೂ ಬೇರೆ ಬೇರೆ ಮನಸ್ಥಿತಿಯಲ್ಲಿ ರೂಪುಗೊಳ್ಲುವುವು.
  ಎಷ್ಟೋ ಜನಕ್ಕೆ ಬರೆಯುವ ತುಡಿತವಿರುತ್ತದೆ. ಆದ್ರೆ ಬರೆಯುವುದಕ್ಕೆ ಆಗುವುದಿಲ್ಲ.
  ಹಾಗೇ ಓದೂ ಸಹ.
  ಇವತ್ತಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಅದು ತಪ್ಪಲ್ಲ.
  ಕಾಲದ ಹೊಡೆತ ಹಾಗಿದೆ.ಬದುಕು ಅದನ್ನ ಬೇಡುತ್ತಿದೆ. ಇಲ್ಲ ನಾನು ಕನ್ನಡಕ್ಕೆ ನಿಷ್ಠ
  ಅಂದ್ರೆ ಅದಕ್ಕೆ ಬಲವಂತವಿಲ್ಲ.ಆದರೆ ಇಂಗ್ಲಿಷ್ ಇವತ್ತು ಬೆಳೆದ ಪರಿ, ಆವರಿಸಿಕೊಮಡ
  ಪರಿ ನೋಡಿದ್ರೆ ಅದು ಯಾರನ್ನೂ ಬಿಡುವುದಿಲ್ಲ.ಅದಕ್ಕೆ ಅಷ್ಟೊಂದು ವ್ಯಾಪಕತೆ ಇದೆ.
  ಹಾಗೆ ನೋಡಿದರೆ ಇಂಗ್ಲಿಷ್ ಹೊಡೆತ ಎಲ್ಲಾ ಪ್ರಾದೇಶಿಕ ಭಾಷೆಗಳ ಮೇಲೆ ಆಗಿದೆ.
  ಅದನ್ನು ಕಲಿಯುವ ಕಲಿಸುವ ವಿಧಾನಗಳು ಬದಲಾಗುತ್ತಿವೆ. ಹಾಗೇ ನಾವೂ ಆಗಬೇಕೇನೋ!
  ಇಲ್ಲದಿದ್ದರೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬಿದ್ದಂತಾದೀತು.
  ರವಿ ಅಜ್ಜೀಪುರ

  ಪ್ರತಿಕ್ರಿಯೆ
 4. ಶೆಟ್ಟರು (Shettaru)

  ಅಲ್ರಿ ಯಲ್ಲಾರು ಹಿಂಗ್ ಬರದ್ರ ಛಲೊ ಆತ ಬಿಡ್ರಿ, ಒಟ್ಟನ್ಯಾಗ ಕನ್ನಡಿಗರಿಗೆ ತ್ರಾಸ ಆಗಬಾರದ್ರಿ ಸರ,
  ಮಹಾಪ್ರಾಣ ತಗಿಯುಣ್ರಿ, ಮುಂದಿನ್ನ “ಒತ್ತಕ್ಷರ, ಕೊಂಬು, ದಿರಗಾ”ನೂ ತಗಿಯೂಣು, ಒಟ್ಟಿನ್ಯಾಗ ಕನ್ನಡಿಗರಿಗೆ ಒದಾಕ ಮತ್ತ ಬರಿಯಾಕ ತ್ರಾಸಾಗಬಾರ್ದರಿ ಸರ, ಛಲೊ ಆತು ತೊಗೊರಿ.
  “ಸಿರಿಗನನಡಮ ಗಎಲಗಎ” (ಒಟ್ಟ ಎಲ್ಲೆಲ್ಲಿ ಒತ್ತಕ್ಷರ ಬಳಸಿಲ್ರಿ)
  ಸಾಹೇಬ್ರ ಬ್ಯಾಸರಾ ಮಾಡ್ಕೊಬ್ಯಾಡ್ರಿ ಹಿಂಗ ಬರ್ದಿನಂತ, ಹೀಂಗ ಒಂದೊಂದು ಅಕ್ಷರ ವ್ಯಾಕರಣ ಬಿಟ್ಕೊಂತ ಹೋದ್ರ, ಭಾಷೆ ಬದಕುದಿಲ್ಲರಿ, ನಶಿಸಿ ಹೊಕ್ಕೈತ್ರಿ.
  ಮತ್ತ ಸುನಾಥ ಕಾಕಾರು ತಮ್ಮ ಬ್ಲಾಗನ್ಯಾಗ ಒಂದು ಪ್ರಶ್ನೆ ಎತ್ತ್ಯಾರು:
  ಕರ್ನಾಟಕದಿಂದ ಪರದೇಶಗಳಿಗೆ ಹೋದ ಅನೇಕ ಕನ್ನಡಿಗರಿದ್ದಾರೆ. Call centreಗಳಲ್ಲಿ ಕೆಲಸ ಮಾಡುವ ಅನೇಕ ಕನ್ನಡಿಗರಿದ್ದಾರೆ. ಇವರ ಇಂಗ್ಲಿಶ್ ಉಚ್ಚಾರದಿಂದ ಮಹಾಪ್ರಾಣ ಮರೆಯಾಯಿತೆನ್ನಿ.
  ಆಗ ಕನ್ನಡಿಗರಾದ ಒಬ್ಬ ಕ್ರಿಕೆಟ್ ಅಂಪೈರ್ ಇಂಗ್ಲಿಶ್‌ನಲ್ಲಿ ಹೇಗೆ ಕಮೆಂಟರಿ ಹೇಳಬಹುದು?
  “ದೋನಿ ಪೇಸ್ಡ್ ದ ಬಾಲ್ ವುಯಿತ್ ಕರೇಜ್.
  (==ಧೋನಿ ಫೇಸ್ಡ್ ದ ಬಾಲ್ ವುಯಿಥ್ ಕರೇಜ್).
  ನಿಮಗೆ ಇದು ಸರಿ ಕಾಣಿಸುವದೆ?
  ಪ್ರೀತಿಯಿರಲಿ
  ಶೆಟ್ಟರು

  ಪ್ರತಿಕ್ರಿಯೆ
 5. nilgiri

  ಮಹಾಪ್ರಾಣಗಳು ನಿಜಕ್ಕೂ ಅಷ್ಟು ಕಷ್ಟಕರವಾದವೇ?
  ಸ್ಕೂಲಿನಲ್ಲಿ ಕಲಿಯುವಾಗ ನಮ್ಮ ಟೀಚರ್ ಗಳು, ” ಅರ್ತ, ಅದ್ಯಾಯ, ಕಶ್ಟ “….ಹೀಗೆ ಬರೆದರೆ ಸೊನ್ನೆ ಸುತ್ತುತ್ತಿದ್ದಿದ್ದು ನೆನಪಿಗೆ ಬಂತು 🙂
  ಕನ್ನಡ ಈಗಿರುವುದೇ ಚೆನ್ನಾಗಿದೆ ಎಂಬುದು ನನ್ನ ಅಭಿಪ್ರಾಯ.

  ಪ್ರತಿಕ್ರಿಯೆ
 6. ಮಹೇಶ

  ನಡುಗನ್ನಡದಲ್ಲಿ ಹೀಗೆ ಅಲ್ಲವೇ ಆಗಿದ್ದು..
  ವಚನದಲ್ಲಿ ಅಂದಿನ ಆಡುಮಾತಿಗೆ ಹತ್ತಿರ ಬಳಕೆಗಳೇ ಬಂದುವು.. ಇರ್ಪನ್ => ಇಹನ್, ಮುಂತಾದವು…
  ಇಂದಿನ ಆಡುಮಾತಿಗೆ ತಕ್ಕ ಹಾಗೆ ಇಂದಿನ ಬರಹ ಬದಲಾಗಬೇಕು ಎಂಬುದು ಒಳ್ಳಯ ಸಂಗತಿಯೇ. ಏಕೆಂದರೆ ಅದು ಎಲ್ಲ ಕಾಲದಲ್ಲೂ ಆದುದೇ ಇಲ್ಲದೇ ಹೋಗಿದ್ದರೆ ಹಳೆ, ನಡು ಮತ್ತು ಹೊಸಗನ್ನಡ ಎಂದು ಯಾಕೆ ಬೇರೆ ಬೇರೆ ಹಂತದ ಕನ್ನಡಗಳು ಇರುತ್ತಿದ್ದವು.
  ಕನ್ನಡದ ಲಿಪಿಯಲ್ಲಿರುವ ಹೆಚ್ಚುವರಿ ಅಕ್ಕರಗಳನ್ನು ಬಿಡುವುದು ಒಳ್ಳೆಯದೇ,, ಆದರೆ ಅದಕ್ಕಿಂತ ಹೆಚ್ಚು ಒತ್ತಿನ ಸಂಗತಿ ಅಂದರೆ ಕನ್ನಡದ ಸಂಸ್ಕ್ರುತೀಕರಣ ಅಂಕೆ.
  ಮಾದರಿ :
  ಕನ್ನಡದ ಬಗೆ : ಇದು ವರ್ಣಿಸಕ್ಕೇ ಆಗದ ವಿಶಯ. ( ಆಡುಮಾತಲ್ಲಿ ಹೀಗೆ ಇರೋದು )
  ಸಂಸ್ಕ್ರುತದ ಬಗೆ: ಇದು ಅವರ್ಣನೀಯ ವಿಶಯ.
  ಮೇಲಿನ ವಾಕ್ಯದಲ್ಲಿ ವರ್ಣನೆ, ವಿಶಯ ಸಂಸ್ಕ್ರುತದ ಪದಗಳೇ ಆಗಿದ್ದರೂ ಅವುಗಳ ಬಳಕೆಯ ರೀತಿ ಬೇರೆ ಬೇರೆ.
  ಕನ್ನಡವು ಕ್ರಿಯಾಪದಕ್ಕೆ ಒತ್ತೀಯ್ಯವ ನುಡಿ. ನಾವು ’ಅವರ್ಣನೀಯ’, ’ಅಪಹೃತ’ ಮುಂತಾದ ನಾಮಪದಗಳನ್ನು ಕನ್ನಡದಲ್ಲಿ ರಚಿಸದೇ ಮಾತಾಡುವೆವು..
  ಅಪಹೃತ ಬಾಲಕ (ಬರಹ)( ಸಂಸ್ಕೃತದ ಬಗೆ)
  ಅಪಹರಿಸಿದ ಬಾಲಕ(ಆಡುಮಾತು)
  ಇಲ್ಲಿ ಅಪಹರಿಸಿದ ನಾಮಪದವಲ್ಲ. ಅಪಹೃತ ನಾಮಪದ
  ಹಾಗೆ
  ನಿರ್ಮಿತ ಭವನ vs ನಿರ್ಮಿಸಿದ ಭವನ
  ಲಿಖಿತ ಪುರಾವೆ vs ಬರೆದ ಪುರಾವೆ
  ಇಂದು ಹೆಚ್ಚೆಚ್ಚು ಕನ್ನಡವನ್ನು ಸಂಸ್ಕ್ರುತದಂತೆ ಬರಹದಲ್ಲಿ ಹಲವರು ಬರೆಯುತ್ತಿದ್ದಾರೆ.
  ಲಿಪಿ ಬದಲಾವಣೆ ಆಗುವುದೋ ಬಿಡುವುದೋ, ಕಡೇ ಪಕ್ಷ ವಾಕ್ಷಗಳನ್ನು ನಮ್ಮ ಕನ್ನಡದ ಬಗೆಯಲ್ಲೇ ರಚಿಸುವುದು ಸಾಮಾನ್ಯ ಕನ್ನಡಿಗ ಓದುಗನಿಗೆ ಒಳಿತು.
  ಇಲ್ಲದೇ ಹೋದರೆ ಬರೀ ಪಂಡಿತರು ಕನ್ನಡದಲ್ಲಿ ಬರೆಯುವರು, ಓದುವವರು.. ಸಂಸ್ಕ್ರುತದ ಬಗೆಯ ಕನ್ನಡ ಕಶ್ಟ ಎಂದು ಮಿಕ್ಕ ಮಂದಿ ಇಂಗ್ಲೀಶ್ ಕಡೆ ಹೊರಳುವರು.. ( ಎಶ್ಟೋ ಮಂದಿ ಕನ್ನಡದಲ್ಲಿ ಬರೆಯುವುದು ಎಂದರೆ ದೊಡ್ಡ ಸಾಹಸ )
  ಕೆಲವರು ದಿಟವಾಗಲು ಸಂಸ್ಕ್ರುತವನ್ನು ಕನ್ನಡದ ಹೆಸರಿನಲ್ಲಿ ಉಳಿಸಲು ಪಣತೊಟ್ಟಿದ್ದಾರೆ.

  ಪ್ರತಿಕ್ರಿಯೆ
 7. mallikarjuna

  ನಿಮಗೆ ನನ್ನ ಅಭಿಮತವಿದೆ ಶೆಟ್ರೆ..!!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: