ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

|ಕಳೆದ ಸಂಚಿಕೆಯಿಂದ|

೧. ಮುಕ್ತವಾಗಿ ಪುಸ್ತಕಗಳನ್ನು ಕನ್ನಡಿಗರಿಗೆ ನೀಡಿದ ಕಾರಣ

ಈ ಪುಸ್ತಕಗಳು ಮುಕ್ತವೂ, ಉಚಿತವೂ ಆದ ಕಾರಣ ಏನಿರಬಹುದು?

ಲೇಖಕರೇ ಹೇಳುವಂತೆ, ಪುಸ್ತಕವನ್ನು ಬರೆದದ್ದು ಆಸಕ್ತರಿಗೆ ತಲುಪಲು. ತಲುಪಿಸುವ ಮಾರ್ಗಗಳು ಹಲವಿದ್ದರೂ, ಇಂಟರ್ನೆಟ್ ಎನ್ನುವ ವೇದಿಕೆ, ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ಮತ್ತು ಅದಕ್ಕೆ ಬೇಕಿರುವ ಸ್ವಾತಂತ್ರ್ಯ ಇರುವಾಗ ಬಳಸಿಕೊಳ್ಳದೇ ಇರುವುದೇತಕ್ಕೆ? 

ಹೌದು, ಪುಸ್ತಕ ಯಾರಾದರೂ ಪ್ರಕಟಿಸಲಿ ಅಥವಾ ಪ್ರಕಟಿಸುವಂತೆ ಕೋರಿಕೊಳ್ಳುವ ಕಾಲದಲ್ಲಿ ನಾವಿಲ್ಲ. ನಮ್ಮ ಮನಸ್ಸಿಗೆ ಬಂದ ವಿಷಯಗಳು, ಡೈರಿ ಸೇರಿ, ಅಲ್ಲಿಂದ ಕಾಗದಕ್ಕೆ ಹರಿದು, ಟೈಪ್ ಮಾಡಿ, ಅದಕ್ಕೊಂದು ಶೀರ್ಷಿಕೆ ಹುಡುಕಿ, ಪತ್ರಿಕೆಗೆ ಕಳುಹಿಸಿ, ಅದು ಪ್ರಕಟವಾಗುವ ದಾರಿ ಕಾಯ್ದು – ಇಷ್ಟೆಲ್ಲಾ ಸಮಯ ೨೧ ನೇ ಶತಮಾನದ ಜೀವಿಗಳಾದ ನಮಗೆ ಇಲ್ಲವೇ ಇಲ್ಲ. ಜೊತೆಗೆ ಇನ್ಸ್ಟಂಟ್ ಆಗಿರುವ ಈ ಕಾಲದಲ್ಲಿ, ನಮ್ಮೆಲ್ಲಾ ಸೃಜನಾತ್ಮಕ ಸೃಷ್ಟಿಗಳನ್ನು ಜಗತ್ತಿಗೆ ಹರಿಬಿಡುವುದು ಫೇಸ್‌ಬುಕ್, ಟ್ವಿಟರ್, ವಾಟ್ಸ್ಯಾಪ್ ಇತ್ಯಾದಿ ಸೋಷಿಯಲ್ ಮೀಡಿಯಾ ಜಗತ್ತಿನಲ್ಲೇ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲೂ ಇದೆಯಲ್ಲವೇ. ಇದನ್ನು ಪರಿಪೂರ್ಣವಾಗಿ ಬಳಸಿಕೊಂಡ ಡಾ. ಕಿರಣ್ ತಮ್ಮ ವೈದ್ಯಲೋಕದ ಅದ್ಭುತ ಪರಿಚಯವನ್ನು ತಮ್ಮ ಲೇಖನಿಯ ಅಂಚಿನಲ್ಲಿ ಹಿಡಿದಿಡಲು ಕಷ್ಟಪಡದೆ, ಸರಾಗವಾಗಿ ನಮಗೆಲ್ಲಾ ಒಂದು ಟೈಮ್ ಟ್ರಾವಲ್ (ಸಮಯದಲ್ಲೊಂದು ಪ್ರವಾಸ) ಅನ್ನೇ ಮಾಡಿಸಿದ್ದಾರೆ. ಜ್ಞಾನದ ಹರಿವು ಮುಖ್ಯವಾಗಿದ್ದ ಯೋಜನೆ ಕಿರಣ್ ಅವರದ್ದು. 

ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಇತರರು ಹೇಳಿದ ಕಥೆಗಳಿಗೆ ಬೆಲೆತೆತ್ತುವ ಅಭ್ಯಾಸ ನಾವಿಟ್ಟುಕೊಂಡಿಲ್ಲ ಅಲ್ಲವೇ? ಇಲ್ಲಿ ಇದೇ ಅಭ್ಯಾಸ ಮುಂದುವರೆಯುತ್ತದೆ. ಡಾ. ಕಿರಣ್ ಇಲ್ಲಿ ಮನೆಯವರಾಗುತ್ತಾರೆ, ಮನದಲ್ಲಿ ಉಳಿಯುವಂತಹ ರೋಚಕ ವಿಷಯಗಳ ಜೊತೆ ನಮ್ಮ ಮನದಾಳಕ್ಕೆ ಇಳಿಯುತ್ತಾರೆ. 

೨. ಪುಸ್ತಕಗಳ ರೂಪ (ವಿನ್ಯಾಸ, ಮಾದರಿಯ ಆಯ್ಕೆ) 

ಪುಸ್ತಕ ಪ್ರಿಂಟ್/ಮುದ್ರಣವಾಗಿಯೇ ದೊರಕಬೇಕೆಂಬ ಆಶಯ ಕ್ರಮೇಣ ದೂರವಾಗುತ್ತಿದೆ. ಆದರೂ ಮುದ್ರಿತ ಪುಸ್ತಕದ ವಾಸನೆ ಹತ್ತಿತೆಂದರೆ ಓದುಗ ವೃಂದ ಜೇನುನೊಣಗಳಿಗೂ ಬಹಳಷ್ಟು ಬಾರಿ ಸ್ಪರ್ಧೆ ಒಡ್ಡುವುದು ಕಂಡಿತ. ಈಗ ಪುಸ್ತಕ ಕೊಳ್ಳುವುದಕ್ಕೂ, ಓದುವುದಕ್ಕೂ, ಉಳಿಸಿಕೊಳ್ಳುವುದಕ್ಕೂ ಇಲೆಕ್ಟ್ರಾನಿಕ್ ಮಾಧ್ಯಮ ಪರ್ಯಾಯ ವ್ಯವಸ್ಥೆಯಾದ ಇ-ಪುಸ್ತಕಗಳನ್ನು ಕಂಡುಕೊಳ್ಳಲು ಸಹಕಾರಿ ಆಗಿರುವುದರಿಂದ – ಇದೇ ದಾರಿಯನ್ನು ಡಾ. ಕಿರಣ್ ಹಿಡಿದರು. ಇಪುಸ್ತಕ ಪಿಡಿಅಫ್ ಅಲ್ಲ ಆದರೂ, ಪಿಡಿಎಫ್ ಬೇಕು ಎನ್ನುವವರಿಗೂ ಇಲ್ಲ ಎನ್ನದಂತೆ ಇಪಬ್, ಪಿಡಿಎಫ್, ಮೊಬಿ ಎಲ್ಲ ಮಾದರಿಗಳಲ್ಲಿ ಪುಸ್ತಕಗಳನ್ನು ಜನರಿಗೆ ಲಭ್ಯವಾಗಿಸಿದರು. ೫೦೦೦ಕ್ಕೂ ಹೆಚ್ಚು ಜನ ಸೆರೆಂಡಿಪಿಟಿ ಪುಸ್ತಕ ಇದುವರೆಗೆ ಇಪುಸ್ತಕವಾಗಿ ಓದಿದ್ದರೆ, ನಿರಾಮಯ ಮೊದಲ ವಾರದಲ್ಲೇ ೫೦೦ ಜನರನ್ನು ತಲುಪಿತು. 

ಇ-ಪುಸ್ತಕದ ರೂಪ ಸೆರೆಂಡಿಪಿಟಿಯಲ್ಲಿ ಮೊದಲಿಗೆ ಪರೀಕ್ಷಾರ್ಥವಾಗಿಯೂ, ನಂತರ ನಾನು ಅದಕ್ಕೆ ಒದಗಿಸಿದ ತಾಂತ್ರಿಕ ಸಾಧ್ಯತೆಗಳಿಂದ ಅಂತರಾಷ್ಟ್ರೀಯ ಮಟ್ಟದ ಎಲ್ಲ ಶಿಷ್ಟತೆಗಳನ್ನು ಮೈಗೂಡಿಸಿಕೊಂಡು ಸುಂದರ ಮತ್ತು ಸುಲಭವಾಗಿ ಓದುವಂತಹ ಇ-ಪುಸ್ತಕ ರೂಪ ಪಡೆಯಿತು. 

ಜೊತೆಗೆ, ಈ ಪುಸ್ತಕದ ಲೈಸೆನ್ಸಿಂಗ್ (ಪರವಾನಗಿ) ಇತ್ಯಾದಿಗಳನ್ನು ಪರಾಮರ್ಶಿಸಿ ನೋ‍ಡಿದಾಗ, ಇದ್ದ ಕೆಲವು ತೊಂದರೆಗಳನ್ನು ಸರಿಪಡಿಸಿ – ಹೊಸ ಯೋಜನೆಗೆ ಮುನ್ನುಡಿ ಬರೆಯಲಾಯಿತು. 

೩. ತಾಂತ್ರಿಕ ರೂಪುರೇಷೆಗಳು ಮತ್ತು ಹಿಂದಿನ ತಂತ್ರಾಂಶದ ಬೆಂಬಲ

ಹೌದು, ಇಪುಸ್ತಕವನ್ನು ರೂಪಿಸುವುದು ಕೇವಲ ಡಿಟಿಪಿ ಕೆಲಸಕ್ಕಷ್ಟೇ ಇಂದು ನಿಂತಿಲ್ಲ. ಇ-ಪುಸ್ತಕ ಕೈಯಲ್ಲಿಡಿದ ಮೊಬೈಲ್, ಟ್ಯಾಬ್, ಟಿವಿ ಪರದೆ, ಅಲೆಕ್ಸಾ, ಗೂಗಲ್ ಹೋಮ್, ಸಿರಿ ಯಾವುದಕ್ಕೆ ಬೇಕಾದರೂ ಹೊಂದಿಕೊಳ್ಳಬಲ್ಲದು. ಪ್ರಿಂಟ್ ಮಾಧ್ಯಮದಲ್ಲಿ ಕಂಡು ಬರುವ ವೈವಿಧ್ಯಮಯ ರೂಪುರೇಷೆಗಳನ್ನು ತನ್ನದಾಗಿಸಿಕೊಳ್ಳಬಹುದು. ಟೆಕ್‌ಫಿಜ್ ಮೂಲಕ ಇ-ಪುಸ್ತಕವೊಂದಕ್ಕೆ ಒಂದರಿಂದ ೬/೭ ಬೇರೆ ಬೇರೆ ರೂಪಗಳನ್ನು ನೀಡಿ ಪರೀಕ್ಷಿಸುವ ಸಾಧ್ಯತೆಯನ್ನು ಕಂಡುಕೊಂಡಿದ್ದೇವೆ. ಶೀರ್ಷಿಕೆ ಎಡದಲ್ಲಿರಬೇಕೋ, ಬಲದಲ್ಲೋ ಎನ್ನುವುದರಿಂದ ಹಿಡಿದು, ಪರಿವಿಡಿಯಲ್ಲಿ ಸಂಖ್ಯೆ ಬೇಕೆ, ಬೇಡವೇ? ಗ್ಲಾಸರಿ ಇದೆಯೇ, ಪದ ಸೇರಿಸುವುದು ಇತ್ಯಾದಿಗಳನ್ನು ಕೂಡ ಸಿದ್ಧ ಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಕನ್ನಡದ ಇಪುಸ್ತಕಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಶ್ಯವಿರುವ ಶಿಷ್ಠತೆಗಳನ್ನು ತಂತ್ರಾಂಶಗಳ ಮೂಲಕ ಬೆಂಬಲಿಸುವಂತೆ ಮಾಡಲಾಗಿದೆ. ಇದನ್ನು ಪರೀಕ್ಷಿಸಿ ನೋಡಲು ಸೆರೆಂಡಿಪಿಟಿ ಉತ್ತಮ ಉದಾಹರಣೆ. 

ಇ-ಪುಸ್ತಕ ಸೃಷ್ಟಿಸಲು ವರ್ಡ್ ಡಾಕ್ಯುಮೆಂಟ್‌ ಅನ್ನು ಸರಿಯಾಗಿ ಫಾರ್ಮಾಟ್ ಮಾಡುವುದು ಮೊದಲ ಹಂತದ ಕೆಲಸವಾದರೆ, ಅದರಿಂದ ಇಪಬ್ ಪಡೆಯಲು ಕ್ಯಾಲಿಬ್ರೆ ಅಂತಹ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಸುವುದು ಮುಂದಿನ ಹಂತ. ಇದಲ್ಲದೇ ಲಿಬ್ರೆ ಆಫೀಸ್‌ ಮೂಲಕ ಇಪಬ್ ಪಡೆಯಲಿ ಪ್ಲಗಿನ್ ಕೂಡ ಲಭ್ಯವಿದೆ. 

ಇದೆಲ್ಲ ಇದ್ದರೂ, ಕೆಲವೊಮ್ಮೆ ಇಪುಸ್ತಕಕ್ಕೆ ಶಿಷ್ಠತೆಯ ಅನುಗುಣವಾಗಿ ಯಾವುದೇ ತಕರಾರಿಲ್ಲದೇ, ಎಲ್ಲ ಇಪುಸ್ತಕ ಮಳಿಗೆಗಳಲ್ಲಿ ನಿಮ್ಮ ಇಪುಸ್ತಕ ದೊರೆಯುವಂತೆ ಮಾಡುವುದು ಕೆಲವೊಮ್ಮೆ ಬಹಳಷ್ಟು ಸಮಯವನ್ನು ಬೇಡುವ ಕೆಲಸ ಆಗಿರುತ್ತದೆ. ಪುಸ್ತಕದಲ್ಲಿನ ಮಾಹಿತಿಯ ಶೈಲಿ (ಟೇಬಲ್, ಚಿತ್ರಗಳು, ಗಣಿತ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಫಾರ್ಮುಲಾ ಇತ್ಯಾದಿ). ಇಂತಹ ಕೆಲಸಗಳನ್ನು ಸುಲಭವಾಗಿಸುವ, ಇಪುಸ್ತಕವನ್ನು ಸೃಷ್ಟಿಸುವ ಸೇವೆ ಕನ್ನಡಕ್ಕೆ ಬೇಕು ಎಂದು ಕೊಂಡಿದ್ದರ ಹಿಂದೆ ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆಗೆ ಬೆಂಬಲಿಸುವ ವೃತ್ತಿಪರ ಸಂಸ್ಥೆಗಳು ಹುಟ್ಟಬೇಕು ಎನ್ನುವ ಕನಸಿದೆ. ಇದು ಸಾಕಾರಗೊಳ್ಳುವುದೇ ಎಂದು ಪರೀಕ್ಷಿಸುತ್ತಿದ್ದ ಸಮಯದಲ್ಲಿ ನನ್ನ ಬಹಳಷ್ಟು ಪ್ರಯತ್ನಗಳಿಗೆ ಪರೀಕ್ಷಾರ್ಥ ವೇದಿಕೆಯನ್ನು ದೊರಕಿಸಿಕೊಟ್ಟ ಮೊದಲ ಕೆಲವು ಪುಸ್ತಕಗಳಲ್ಲಿ ಸೆರಂಡಿಪಿಟಿ ಮುಖ್ಯವಾದ ಮೈಲಿಗಲ್ಲು. 

೪. ಇಪುಸ್ತಕವಾಗಿ ನಿಲ್ಲದೆ – ಪ್ರಿಂಟ್ ಆನ್ ಡಿಮ್ಯಾಂಡ್ ಮೂಲಕ ದೊರಕುತ್ತಿರುವ ಸೆರಂಡಿಪಿಟಿಯ ಕಥೆ

ಹೌದು, ಇಪುಸ್ತಕವಾಗುವುದರ ಜೊತೆಗೆ, ನಮ್ಮ ತಂತ್ರಾಂಶದಲ್ಲೇ ಅದಕ್ಕೆ ಪ್ರಿಂಟ್ ಆನ್ ಡಿಮ್ಯಾಂಡ್‌ಗೆ ಬೇಕಾಗುವ ರೀತಿಯಲ್ಲಿ ಪಿಡಿಎಫ್ ಸೃಷ್ಟಿ ಮಾಡಿ – ಯುನಿಕೋಡ್‌ ಮೂಲಕವೇ ನೇರ ಮುದ್ರಣಕ್ಕೆ ಸಿದ್ಧವಾಗುವ ಕನ್ನಡ ಪುಸ್ತಕದ ಪ್ರಯೋಗ ಮಾಡಲಾಯಿತು. ಪುಸ್ತಕ ೫೦೦ ಪುಟವಾದರೆ ಪ್ರಿಂಟ್ ಮಾಡುವುದು ಅಸಹನೀಯ ದುಂದು ಖರ್ಚು, ಕೊಂಡು ಓದುವವರ ಜೇಬೂ ತೂತೂ ಎನ್ನುತ್ತಾ, ಪುಸ್ತಕದ ಫಾಂಟ್ ಗಾತ್ರ, ಪುಟಗಳ ಶೈಲಿ ಇತ್ಯಾದಿಗಳಲ್ಲಿ ಹೊಸ ಸಾಧ್ಯತೆ ಹುಡುಕುತ್ತಾ ೨೯೦ ಪುಟಗಳ ಪುಸ್ತಕವನ್ನು ೨೫೦ ರೂಗೆ ಸಿಗುವಂತೆ ಮಾಡಿದ ಸರ್ಕಸ್ ಬಗ್ಗೆ ಹೇಳಲೇ ಬೇಕು. 

ಇದಕ್ಕೆ ನೀವು ಮುಂದಿನ ಕಂತಿಗೆ ಕಾಯಲೇ ಬೇಕು… ಇದರ ಜೊತೆಗೆ ಈ ಮುಂದಿನ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ. 

೫. ಪ್ರಿಂಟ್ ಗೆ ರೆಡಿಯಾದ – ಯುನಿಕೋಡ್ ಪಠ್ಯ – ಫಾಂಟುಗಳು – ತೊಂದರೆಗಳು ಇತ್ಯಾದಿ

೬. ಜನರಿಗೆ ತಲಿಪಿಸಿದ ರೀತಿ ಮತ್ತು ಜನರ ಪ್ರತಿಕ್ರಿಯೆ

ಎಲ್ಲಕ್ಕಿಂತ ಮುಖ್ಯವಾಗಿ ಚರ್ಚಿಸಬೇಕಾದ ವಿಷಯಗಳು

೭. ಪುಸ್ತಕದಲ್ಲಿನ ಮಾಹಿತಿಯ ಮೂಲ

೮. ಪುಸ್ತಕದಲ್ಲಿನ ಚಿತ್ರ ಇತ್ಯಾದಿಗಳ ಪರವಾನಗಿ, ಮರುಬಳಕೆ

೯. ಮೂಡಿ ಬಂದ ಪುಸ್ತಕಗಳ ಸಧ್ಯದ ಕಾಪಿರೈಟ್ ಹಾಗೂ ಪರವಾನಗಿಯ ಆಯ್ಕೆ

೧೦. ಸೆರೆಂಡಿಪಿಟಿ – ಪ್ರಿಂಟ್ ಉದ್ದೇಶ ಹಾಗೂ ಮುಂದಿನ ಸವಾಲುಗಳು 

ಇತ್ಯಾದಿ…

ಸೆರೆಂಡಿಪಿಟಿ ಹಾಗೂ ನಿರಾಮಯ – ಗೂಗಲ್ ಪ್ಲೇ ಬುಕ್ಸ್  ನಲ್ಲೂ, archive.org ಯಲ್ಲೂ ಲಭ್ಯ. ‍

ಸೆರೆಂಡಿಪಿಟಿ:   https://play.google.com/store/books/details?id=3trxDwAAQBAJ

ನಿರಾಮಯ: https://play.google.com/store/books/details?id=SLALEAAAQBAJ

ಒಂದು ಮನವಿ: ಪಿಡಿಎಫ್ – ಇಪುಸ್ತಕವಲ್ಲ… – ePub  ಆವೃತ್ತಿಯಲ್ಲಿ ಡಿಜಿಟಲ್ ಪುಸ್ತಕಗಳನ್ನು ತಯಾರಿಸೋಣ, ಬಳಸೋಣ. ಕನ್ನಡದ ಡಿಜಿಟಲೀಕರಣದ ನಾಳೆಗಳಿಗೆ ಸರಿಯಾದ ಶಿಷ್ಠತೆಗಳನ್ನು (standards) ಬಳಸೋಣ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಓಂಶಿವಪ್ರಕಾಶ್

December 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This