ಕನ್ನಡ ಭಾಷೆ: ಉಚ್ಚಾರಣೆಯಲ್ಲಿನ ರಾಜಕಾರಣ

ಡಾ. ಪಿ ಮಹಾದೇವಯ್ಯ

ನ್ನಡದಲ್ಲಿ ಎರಡು ಮಾದರಿ ಪದಗಳು ಉಚ್ಚಾರಣೆಯಲ್ಲಿವೆ. ಒಂದು, ಮಾತಿನಂತೆ ಬರಹ ಇರುವ ಪದಗಳು. ಎರಡು, ಬರಹದಂತೆ ಮಾತಿರಬೇಕೆಂಬ ಪದಗಳು. ಮೊದಲನೆಯ ಪದಗಳು ಒಂದು ಭಾಷೆಯನ್ನು ಬಲಗೊಳಿಸುತ್ತವೆ. ಅಂದರೆ ಇವು ಕಿವಿ ಭಾಷೆಯಾಗಿರುತ್ತವೆ. ಎರ್ಡನೇ ಮಾದರಿ ಪದಗಳು ಕನ್ನಡದಲ್ಲಿರುವ ಸಂಸ್ಕೃತ ಪದಗಳು. ಇವು ತತ್ಸಮಗಳು. ಇವು ಕಣ್ಣಿನ ಭಾಷೆಯಾಗಿರುತ್ತವೆ. ಕನ್ನಡದಲ್ಲಿರುವ ಈ ಎರಡು ಬೇರೆ ಬೇರೆ ಮಾದರಿಯ ಪದಗಳ ಬಗ್ಗೆ ಕೊಂಚ ತಲೆ ಕೆಡಿಸಿಕೊಳ್ಳೋಣ.

ಕನ್ನಡದಲ್ಲಿ ಸಂಸ್ಕೃತ, ಇಂಗ್ಲಿಷ್, ಪರ್ಷಿಯನ್, ಅರ್‍ಏಬಿಕ್, ಹಿಂದಿ, ಉರ್ದು ಮತ್ತು ಮರಾಠಿ ಭಾಷೆಗಳ ಪದಗಳು ಉಚ್ಚಾರಣೆಯಲ್ಲಿವೆ. ಇವುಗಳಲ್ಲಿ ಸಂಸ್ಕೃತ ಭಾಷೆ ಕನ್ನಡದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಸಂಸ್ಕೃತ ಪದಗಳು ಕನ್ನಡದಲ್ಲಿ ಎರಡು ಮಾದರಿಯಲ್ಲಿ ಉಚ್ಚಾರಣೆಯಲ್ಲಿವೆ. ಒಂದು, ತತ್ಸಮಗಳು. ಎರಡು, ತದ್ಭವಗಳು. ಈ ಎರಡು ಮಾದರಿ ಪದಗಳು ಕನ್ನಡದಲ್ಲಿ ಕಣ್ಣಿನ ಭಾಷೆಯಾಗಿವೆಯೇ ಹೊರತು ಕಿವಿಯ ಭಾಷೆಯಾಗಿಲ್ಲ. ಕಣ್ಣಿನ ಭಾಷೆಯ ಸ್ವರೂಪ ಬರಹದಂತೆ ಮಾತು ಇರಬೇಕೆಂದು ಬಯಸುತ್ತದೆ. ಕಿವಿಯ ಭಾಷೆಯ ಸ್ವರೂಪ ಮಾತಿನಂತೆ ಬರಹ ಇರಬೇಕೆಂದು ಬಯಸುತ್ತದೆ. ಕನ್ನಡದಲ್ಲಿ ಮಾತಿನಂತೆ ಬರಹ ಇದ್ದರೂ, ಸಂಸ್ಕೃತ ಭಾಷೆಗಳ ವಿಚಾರದಲ್ಲಿ ಬರಹದಂತೆ ಮಾತಿರಬೇಕೆಂಬ ಒತ್ತಾಯವಿದೆ. ಈ ನಿಯಮ ಕನ್ನಡದಲ್ಲಿ ಇಂಗ್ಲಿಷ್ ಪದಗಳ ಉಚ್ಚಾರಣೆಯಲ್ಲಿ ಇದ್ದಂತಿಲ್ಲ.

ಉದಾಹರಣೆಗೆ, ಎಕನಾಮಿಕ್ಸ್: ಎಕನಮಿಕ್ಸ್, ನಾಲೇಜ್: ನಾಲೆಜ್, ಗೋ: ಗೊ, ತ್ರೀ: ತ್ರಿ, ಮ್ಯಾರೇಜ್: ಮ್ಯಾರೆಜ್, ಆಫೀಸರ್: ಆಫಿಸರ್ ಮುಂತಾದ ಪದಗಳನ್ನು ನಾವು ಎರಡು ಮಾದರಿಯಲ್ಲಿ ಬರಹ ಮಾಡುತ್ತಿದ್ದೇವೆ. ಹಾಗೆಯೇ ಉಚ್ಚಾರಣೆ ಮಾಡುತ್ತಿದ್ದೇವೆ. ಅಂದರೆ ಕೆಲವೊಮ್ಮೆ ಕನ್ನಡದ ಉಚ್ಚಾರಣೆಯಂತೆ ಮಾಡಿದರೆ, ಮತ್ತೆ ಕೆಲವೊಮ್ಮೆ ಮೂಲ ಇಂಗ್ಲಿಷಿನಂತೆ ಉಚ್ಚಾರಣೆ ಮಾಡಲಾಗುವುದು. ಏಕೆ ಈ ಮಾದರಿ ವ್ಯತ್ಯಾಸ ಮಾಡಲಾಗುತ್ತಿದೆ? ಇದಕ್ಕೆ ಕಾರಣಗಳೇನು? ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಕನ್ನಡದಂತೆ ಹೃಸ್ವ ಮತ್ತು ದೀರ್ಘ ಧ್ವನಿಗಳ ನಡುವೆ ಅಂತರವಿಲ್ಲ ಎನ್ನುವುದಕ್ಕಿಂತ ದೀರ್ಘ ಧ್ವನಿಗಳಿಲ್ಲ ಎಂಬುದು ಮುಖ್ಯ.

ಈ ಹಿನ್ನೆಲೆಯಿಂದ ಈ ಮಾದರಿಯಲ್ಲಿ ವ್ಯತ್ಯಾಸವಾಗುತ್ತಿದೆ. ಇದೇ ಮಾದರಿಯಲ್ಲಿ ಪರ್ಷಿಯನ್, ಅರೇಬಿಕ್, ಹಿಂದಿ, ಮರಾಠಿ ಮುಂತಾದ ಭಾಷೆಗಳ ಪದಗಳನ್ನು ಬರಹ ಮಾಡುತ್ತಿದ್ದೇವೆ. ಅಂದರೆ ಸಂಸ್ಕೃತ ಭಾಷೆಯನ್ನು ಬಿಟ್ಟು ಇತರ ಭಾಷೆಗಳ ಪದಗಳನ್ನು ಕನ್ನಡದ ಉಚ್ಚಾರಣೆಯಂತೆ ಮಾಡುತ್ತಾ ಬರಹ ಮಾಡುತ್ತಿರುವುದು ಗಮನಿಸುವಂಥ ಅಂಶ. ಆದರೆ ಇದೇ ನಿಯಮವನ್ನು ಸಂಸ್ಕೃತ ಭಾಷೆಗೆ ಅನ್ವಯಿಸುವಲ್ಲಿ ಮಡಿವಂತಿಕೆಯನ್ನು ಮಾಡುತ್ತಿದ್ದೇವೆ. ಸಂಸ್ಕೃತ ಪದಗಳನ್ನು ಮಾತ್ರ ನಾವು ನಮ್ಮ ಉಚ್ಚಾರಣೆ ಹೇಗಿದೆಯೋ ಹಾಗೆ ಬರೆಯುವ ಬದಲು ಸಂಸ್ಕೃತ ಬರಹದಂತೆ ಬರೆಯಲಾಗುತ್ತಿದೆ. ಉದಾಹರಣೆಗೆ: “ವಿಶೇಷ” ಎಂಬುದಾಗಿ ಬರೆಯುತ್ತೇವೆ. ಆದರೆ “ವಿಶೇಶ” ಎಂದು ಓದುತ್ತೇವೆ. “ಭ್ರಮೆ” ಎಂಬುದಾಗಿ ಬರೆಯುತ್ತೇವೆ. “ಬ್ರಮೆ” ಎಂದು ಓದುತ್ತೇವೆ. ಕನ್ನಡದಲ್ಲಿರುವ ಈ ಉಚ್ಚಾರಣೆಯ ಹಿಂದಿನ ರಾಜಕಾರಣವನ್ನು ತಿಳಿಯಬೇಕಾಗಿದೆ. ಮಾತು ಮತ್ತು ಬರಹದ ನಡುವೆ ಇರುವ ತಾರತಮ್ಯವನ್ನು ಹೋಗಲಾಡಿಸುವ ದಿಕ್ಕಿನತ್ತ ಚಿಂತಿಸಬೇಕಾಗಿದೆ.

‍ಲೇಖಕರು avadhi

October 27, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This