ಕನ್ನಡ ವಿಶ್ವವಿದ್ಯಾಲಯ : ರೆಸಾರ್ಟ್ ಆಗಬಹುದು ಎನ್ನುವ ಭಯ..

ಜರ್ಮನಿಯಿಂದ ವಿವೇಕ ರೈ
ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಎಂಬತ್ತು ಎಕರೆ ಭೂಮಿಯನ್ನು ಈಗತಾನೆ ರಚನೆಯಾದ ‘ವಿಜಯನಗರ ಪುನಶ್ಚೇತನ ಪ್ರತಿಷ್ಠಾನ ‘ಕ್ಕೆ ಹಸ್ತಾಂತರಿಸುವ ನಿರ್ಣಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದಾಗ ಆತಂಕ ಆಯಿತು.ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಹಾಗೂ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಟಿ. ಆರ್. ಚಂದ್ರಶೇಖರ್ ಅವರು  ಈವಿಷಯಕ್ಕೆ ಸಂಬಂಧಿಸಿದಂತೆ  ಕಳುಹಿಸಿದ ಎಲ್ಲ ದಾಖಲೆಗಳ ಕಟ್ಟು ನಿನ್ನೆ ತಾನೇ ನನ್ನ ಕೈಸೇರಿತು.
ಶ್ರೀಕೃಷ್ಣ ದೇವರಾಯನ ಪಟ್ಟಾಭಿಷೇಕದ ೫೦೦ನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ,ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಪುನರ್ ನೆನಪಿಸುವ ಹಾಗೂ ಸಂಗೀತ ,ಚಿತ್ರಕಲೆ ,ನಾಟ್ಯ ,ನಾಟಕ ಇತ್ಯಾದಿ ಭಾರತೀಯ ಸಂಸ್ಕೃತಿಯ ವೈವಿಧ್ಯವನ್ನು ಪ್ರೋತ್ಸಾಹಿಸಿ ಪ್ರೇರಣೆ ನೀಡುವ ದೃಷ್ಟಿಯಿಂದ ಹಾಗೂ ವಿಜಯನಗರ ಸಾಮ್ರಾಜ್ಯದಲ್ಲಿ ನಡೆಸಿದ ಚಟುವಟಿಕೆಗಳನ್ನು ಬಿಂಬಿಸುವ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಹಂಪಿ,ಕಮಲಾಪುರ ಇಲ್ಲಿ ‘ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್ ) ಅನ್ನು ಕರ್ನಾಟಕ ಸರಕಾರ ರಚಿಸಿದೆ.೧೮ ಸದಸ್ಯರನ್ನು ಉಳ್ಳ ಈ ಆದೇಶ ಜನವರಿ ೧, ೨೦೧೦ರನ್ದು ಹೊರಬಿದ್ದಿದೆ.

೨೨-೧-೨೦೧೦ರ ಸರಕಾರೀ ಆದೇಶದಲ್ಲಿ ಹಂಪಿಯ ಕನ್ನಡ ವಿವಿಯ ವ್ಯಾಪ್ತಿಯಲ್ಲಿ ಇರುವ ೮೦ ಎಕರೆ ಜಮೀನನ್ನು ,ಒಂದು ಅಂತರರಾಷ್ಟ್ರೀಯ ಮಟ್ಟದ ಉದ್ಯಾನವನ , ಸಂಶೋಧನಾ ಕೇಂದ್ರ ,ಶ್ರೀ ಕೃಷ್ಣದೇವರಾಯನ ಪುತ್ಥಳಿ ಸ್ಥಾಪನೆ ಗಾಗಿ ವಿಜಯನಗರ ಪುನಶ್ಚೇತನ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲು ಅನುಮತಿ ನೀಡಿ ಆದೇಶಿಸಿದೆ.ಇದೆ ಆದೇಶದ ಪ್ರಸ್ತಾವನೆಯಲ್ಲಿ ಕನ್ನಡ ವಿವಿ, ಹಂಪಿಯ ಕುಲಪತಿಗಳು ಇದಕ್ಕೆ ಸಮ್ಮತಿಸಿ ,೮.೯.೨೦೦೯ರನ್ದು ಸರಕಾರಕ್ಕೆ ಬರೆದ ಪತ್ರದ ಉಲ್ಲೇಖ ಇದೆ.
ಹೀಗೆ ಒಂದು ಮಹತ್ವದ ನಿರ್ಧಾರ ಇಷ್ಟು ಅವಸರದಲ್ಲಿ ಕಾರ್ಯರೂಪಕ್ಕೆ ಬರುವುದು ಆತಂಕ ಉಂಟುಮಾಡುತ್ತದೆ.ಪ್ರಸ್ತಾವಿತ ಮಾಡಲು ಉದ್ದೇಶಿಸಿರುವ  ಎಲ್ಲ ಕೆಲಸಗಳನ್ನು ಕನ್ನಡ ವಿವಿಯೇ ಮಾಡಬಹುದು.ಕನ್ನಡ ವಿವಿಯಲ್ಲಿ ಇರುವ ಸಂಗೀತ ,ಚಿತ್ರಕಲೆ ,ಶಿಲ್ಪ ,ಇತಿಹಾಸ, ಪುರಾತತ್ವ ,ಸಾಹಿತ್ಯ ಮುಂತಾದ ವಿಭಾಗಗಳಿಗೆ ಹೆಚ್ಚಿನ ಸಿಬ್ಬಂದಿ ಅನುದಾನ ಕೊಟ್ಟು ಇವನ್ನು ಮಾಡಿಸಬಹುದು.ಸಂಗೀತ ಮತ್ತು ನೃತ್ಯಕ್ಕೆ ಪ್ರತ್ಯೇಕ ವಿವಿ ಆರಂಭ ಆಗಿದೆ.ಇಲ್ಲಿನ ಅನೇಕ ಯೋಜನೆಗಳನ್ನು ಆ ವಿವಿ ಮೂಲಕ ಮಾಡಿಸಬಹುದು.ಜೊತೆಗೆ ಇಡೀ ಯೋಜನೆಯ ಉದ್ದೇಶಗಳು ಸರಿಯಾಗಿ ಎಲ್ಲೂ ಬಿಂಬಿತ ಆಗಿಲ್ಲ. ಉದ್ಯಾನವನ ರೆಸಾರ್ಟ್ ಆಗಬಹುದು ಎನ್ನುವ ಭಯ ಇದ್ದೆ ಇರುತ್ತದೆ.ಕನ್ನಡ ವಿವಿಯಲ್ಲೇ ಇರುವ ಅನೇಕ ತಜ್ಞರು ಈ ಕುರಿತು ಸರಿಯಾಗಿ ಯೋಜನೆ  ರೂಪಿಸಬಲ್ಲವರಾಗಿದ್ದಾರೆ.
ಕನ್ನಡ ವಿಶ್ವವಿದ್ಯಾಲಯ ,ಹಂಪಿಯ ವಿದ್ಯಾರಣ್ಯ ಆವರಣದಲ್ಲಿ ವಿಸ್ತಾರವಾದ ಜಮೀನು ನೋಡುವವರ ಕಣ್ಣು ಕುಕ್ಕುತ್ತದೆ.ನಾನು ಅಲ್ಲಿ ಕುಲಪತಿ ಆಗಿದ್ದ ಅವಧಿಯಲ್ಲಿ (ಸಪ್ಟಂಬರ ೨೦೦೪ರಿನ್ದ ಜೂನ್ ೨೦೦೭ )ಆಗಿನ ಬಳ್ಳಾರಿ ಜಿಲ್ಲಾಧಿಕಾರಿ ಆಗಿದ್ದ ಅರವಿಂದ ಶ್ರೀವಾತ್ಸವ ಅವರ ಸಹಕಾರದಿಂದ ,ಇಡೀ ಆವರಣದ ಜಮೀನಿನ ರೆವಿನ್ಯೂ ಸರ್ವೇ ಮಾಡಲಾಯಿತು.ಸ್ವಲ್ಪ ಮಟ್ಟಿಗೆ ಜಮೀನಿನ ಕೆಲವು ಭಾಗ ಆಗಲೇ ಕೈತಪ್ಪಿಹೋಗಿತ್ತು .ಆದರೂ ಬಳ್ಳಾರಿ -ಕಮಲಾಪುರ-ಹಂಪಿ ರಸ್ತೆಯಲ್ಲಿ ಬರುವವರಿಗೆ ವಿವಿಯ ವಿಶಾಲ ಖಾಲಿ ಜಾಗ ಆಸೆ ಬರಿಸುತ್ತದೆ..ಹಾಗಾಗಿಯೇ ಕೆಲವೇ ರೆಸಾರ್ಟ್ ಗಳು ಸುತ್ತಮುತ್ತ ಎದ್ದುಬಂದಿವೆ.ಈಗ ೮೦ ಎಕರೆ ಜಮೀನು ಅರಣ್ಯಪ್ರದೇಶದ ಪಕ್ಕ ಇರುವ ಕಾರಣ ಇನ್ನಷ್ಟು ಬೆಲೆಬಾಳುತ್ತದೆ.
ನಾನು ಕುಲಪತಿ ಆಗಿದ್ದ ಅವಧಿಯಲ್ಲಿ ಇಂತಹ ಎರಡು ಒತ್ತಡಗಳು ನನ್ನ ಮೇಲೆ ಬಿದ್ದಿದ್ದವು.ಬಳ್ಳಾರಿ ಜಿಲ್ಲೆ ಯ ಒಂದು  ಬೃಹತ್ ಕಾರ್ಖಾನೆಯವರು ಅಭಿವೃದ್ದಿಯ ಪರೋಕ್ಷ ರೂಪದಲ್ಲಿ ಜಾಗ ಕೇಳಿದ್ದರು.ಅದರಿಂದ ವಿವಿಗೆ ದೊಡ್ಡ ಮೊತ್ತದ ಹಣ ಕೂಡಾ ಬರುತ್ತಿತ್ತು.೨೦೦೪ ರಿಂದ ೨೦೦೬ರ ಅವಧಿಯಲ್ಲಿ ಕನ್ನಡ ವಿವಿಯಲ್ಲಿ ತುಂಬಾ ಹಣದ ಮುಗ್ಗಟ್ಟು ಇತ್ತು.ಸಂಬಳ ಕೊಡಲು ಕಷ್ಟ ಆಗುತ್ತಿತ್ತು.ಆದರೆ ತಾತ್ಕಾಲಿಕ ಲಾಭಕ್ಕಿಂತ ವಿವಿಯ ಶಾಶ್ವತ ಆಸ್ತಿ ಮುಖ್ಯ ಎನ್ನುವ ಕಾರಣಕ್ಕೆ ನಾನು ಅವರ ಕೋರಿಕೆಯನ್ನು ತಿರಸ್ಕರಿಸಿದೆ.ಅವರ ಅಧಿಕಾರಿ ನನ್ನನ್ನು ಭೇಟಿ ಆಗುವ ಅವಕಾಶವನ್ನೇ ಅಸೌಜನ್ಯದಿಂದ ನಾನು ನಿರಾಕರಿಸಿದೆ.ಇನ್ನೊಂದು , ಸರಕಾರದ ಕಡೆಯಿಂದ ಬಂದ ಒತ್ತಡ .ಬಳ್ಳಾರಿ ಬಳಿಯ ವನ್ಯಸಂರಕ್ಷನಾ ಘಟಕದ ಸ್ಥಳಾಂತರದ ಜೊತೆಗೆ ಕನ್ನಡ ವಿವಿಯ ಆವರಣದ ಜಾಗವನ್ನು ,ಸರಕಾರದ ಅರಣ್ಯ ಇಲಾಖೆಗೆ ಬಿಟ್ಟುಕೊಡುವ ಪ್ರಸ್ತಾವ.ತುಂಬಾ ಸೌಜನ್ಯದಿಂದ ಸರಕಾರದ ವರಿಷ್ಟರ ಪ್ರಸ್ತಾವನೆಯನ್ನು ನಾನು ತಿರಸ್ಕರಿಸಿದೆ.ಈ ಎರಡೂ ಸಂಗತಿಗಳನ್ನು ಎಲ್ಲೂ ನಾನು ದಾಖಲೆ ಮಾಡಿಲ್ಲ. ಆದರೆ ವಿವಿಯ ಆಸ್ತಿ ಯನ್ನು ಬಿಟ್ಟುಕೊಟ್ಟಿಲ್ಲ.
ಹಂಪಿ ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಸರಕಾರ ಸ್ಥಾಪಿಸಿದೆ.ಅದಕ್ಕೆ ಸರಿಯಾದ ಸವಲತ್ತು ಸಿಬ್ಬಂದಿಯನ್ನು ಹಿಂದಿನ ಮತ್ತು ಇಂದಿನ ಸರಕಾರಗಳು ಕೊಟ್ಟಿಲ್ಲ. ಯುನೆಸ್ಕೋ ತಂಡ ಹಂಪಿಗೆ ಬಂದಾಗ ನಮ್ಮ ವಿವಿಯಲ್ಲಿ , ಮತ್ತು ಹಂಪಿಯಲ್ಲಿ ಅವರೊಂದಿಗೆ ನಾನು ಸಾಕಷ್ಟು ಬಾರಿ ಚರ್ಚಿಸಿದ್ದೆ.ಅವರ ಪ್ರಕಾರ ಬಳಾರಿ ಜಿಲ್ಲೆಯ ಬಹುಭಾಗ ,ಅದರ ಯೋಜನಾ ವ್ಯಾಪ್ತಿಗೆ ಬರುತ್ತದೆ.ತಿರುಳಿನ ಭಾಗ, ಮಧ್ಯಂತರ ಭಾಗ ಮತ್ತು ಅಂಚಿನ ಭಾಗ ಎಂದು ಹಂಪಿಯ ಯೋಜನೆಯನ್ನು  ರೂಪಿಸಲಾಗಿದೆ.ಅವನ್ನೆಲ್ಲ ಸಮರ್ಪಕವಾಗಿ  ಅಧ್ಯಯನ ಮಾಡದೆ ,ಉತ್ಸವ ಮಾಡಿದಂತೆ ದೀರ್ಘಕಾಲೀನ  ಯೋಜನೆಗಳನ್ನು ಅವಸರದಿಂದ ಕೈಗೆತ್ತಿ ಕೊಳ್ಳಬಾರದು.
ಕನ್ನಡ ವಿವಿಯ ಆಸ್ತಿ ನಮ್ಮಂತಹ ಕುಲಪತಿಗಳದ್ದೂ ಅಲ್ಲ ,ಅಧಿಕಾರಸ್ಥ ರಾಜಕಾರಣಿಗಳದ್ದೂ ಅಲ್ಲ. ಅದು ಎಲ್ಲ ಕನ್ನಡಿಗರ ಸೊತ್ತು.ಅದನ್ನು ಉಳಿಸಿಕೊಳ್ಳುವುದು ಎಲ್ಲ ಕನ್ನಡಿಗರ ಕರ್ತವ್ಯ.ಅಂತಹ ವಿಶಾಲ ಕನ್ನಡಿಗರಲ್ಲಿ ಕುಲಪತಿಗಳು, ಸರಕಾರ, ಜನಪ್ರತಿನಿಧಿಗಳು ,ಅಧಿಕಾರಿಗಳು ,ಅಧ್ಯಾಪಕರು ,ನೌಕರರು ,ಊರವರು -ಎಲ್ಲ ಸೇರುತ್ತಾರೆ.ಅದು ಕನ್ನಡದ ಕೂಡುಕುಟುಂಬ.ಅದು ಇತಿಹಾಸವನ್ನು ಮಾತ್ರ ಅಲ್ಲ, ಭವಿಷ್ಯವನ್ನೂ ನೋಡಬೇಕು.

‍ಲೇಖಕರು avadhi

February 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

8 ಪ್ರತಿಕ್ರಿಯೆಗಳು

 1. ತಾರಕೇಶ್ವರ್ ವಿ.ಬಿ.

  ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಫದ ತೀರ್ಮಾನಕ್ಕೆ ಮತ್ತು ವಿವೇಕ ರೈ ಅವರ ಅಭಿಪ್ರಾಯಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ.

  ಪ್ರತಿಕ್ರಿಯೆ
 2. uma rao

  nimma annisikege naanu sampurnavaagi opputtene.
  eegale ee yojanege kadivaana haakabeku.
  uma rao

  ಪ್ರತಿಕ್ರಿಯೆ
 3. sringerikumar

  ರೈತರನು ಮುಗಿಸಿ, ಈಗ ವಿ.ವಿ.ಗಳನು ಮುಗಿಸಲು ಹುನ್ನಾರ ನಡೆಸುತಿರುವುದು ಈ ಸರ್ಕಾರದ ದೊಡ್ಡ ದೊಡ್ಡ ಸಾದನೆ

  ಪ್ರತಿಕ್ರಿಯೆ
 4. Sadananda Adiga

  idondu athyntha kalakaliya lekhana. idu prajnavanthrige talupadiddare adu kannadigara dourbhagya.

  ಪ್ರತಿಕ್ರಿಯೆ
 5. ಆನಂದ ಕೋಡಿಂಬಳ

  ವಿಶ್ವವಿದ್ಯಾಲಯದ ಜಾಗವನ್ನು ಕೃಷ್ಣದೇವರಾಯನ ಹೆಸರಿನಲ್ಲಿ ಮಾಡಲಾಗುವ ಅಂತಾರಾಷ್ಟ್ರೀಯ ಉದ್ಯಾನವನ,ಸಂಶೋಧನೆ ಪುತ್ತಳಿ ಅನಾವರಣ ಹೀಗೆ ಬಳಸಲು ಯೋಜಿಸಿದ್ದು ಸರಿಯಾದ ತೀರ್ಮಾನವಲ್ಲ.ಪ್ರಜ್ಞಾವಂತಿಕೆಯ ನಿರ್ಧಾರವಂತೂ ಅಲ್ಲವೇ ಅಲ್ಲ. ಅದರಿಂದ ವಿಶ್ವವಿದ್ಯಾಲಯದ ಸರ್ವಾಂಗೀಣ ಪ್ರಗತಿಗೆ ಖಂಡಿತ ಧಕ್ಕೆ ಉಂಟಾಗುತ್ತದೆ. ವಿಶ್ವವಿದ್ಯಾಲಯ ಈ ಯೋಜನೆಗಾಗಿ ತನ್ನ ಆಸ್ತಿಯನ್ನು ಕೊಡಬಾರದು. ಸರಕಾರ ಕೃಷ್ಣದೇವರಾಯನಿಗೆ ಬೇರೆ ಕಡೆ ಜಮೀನು ನೀಡಿ ಯೋಜನೆಯ ಅನುಷ್ಠಾನ ಮಾಡಲಿ.ಅಂತಾರಾಷ್ಟ್ರೀಯ ಉದ್ಯಾನವನ ರೆಸಾರ್ಟಿನಂತೆ ರೂಪುಗೊಂಡರೆ ಅದರಿಂದ ವಿವಿಯ ಘನತೆಗೆ ಹಿತವೆನಿಸಲಾರದು.

  ಪ್ರತಿಕ್ರಿಯೆ
 6. P. Bilimale

  I already sent my protest letter to the Chief Minister of Karnataka Mr. BS Yeddyurappa requesting him not to grab University land, which is very much necessary for the future activities of the University.

  ಪ್ರತಿಕ್ರಿಯೆ
 7. bavivekrai

  ಈ ಲೇಖನದ ಆಶಯಕ್ಕೆ ಪೂರಕವಾಗಿ ಸ್ಪಂದಿಸಿದ ಎಲ್ಲ ಗೆಳೆಯರಿಗೂ ಥ್ಯಾಂಕ್ಸ್.ಅವಧಿಯಂತಹ ಬ್ಲಾಗ್ ಜನಪರ ಬರಹಗಳಿಗೆ ಹೆಚ್ಚಿನ ಅವಕಾಶ ಕೊಡುವ ಕಾರಣ ,ಜಾಣ್ಮೆಯಿಂದ ಇಂತಹ ಚರ್ಚೆಗಳನ್ನು ಮರೆಯಲ್ಲಿ ಇಡುವ ಮಾಧ್ಯಮಗಳಿಗೆ ಪರ್ಯಾಯ ನಿರ್ಮಾಣವಾಗುತ್ತದೆ.

  ಪ್ರತಿಕ್ರಿಯೆ
 8. ಕೆ.ಫಣಿರಾಜ್

  ವಿವೇಕ ರೈ ಅವರು ಈ ವಿಷಯವಾಗಿ ಸ್ಪಷ್ಟವಾಗಿ ಮತ್ತು ವಿವೇಚನಯುತವಾಗಿ ಮಾತನಾಡಿದ್ದಾರೆ. ಹಿಂದಿನ ಉಪಕುಲಪತಿಗಳಾದ ಚಂದ್ರಶೇಖರ ಕಂಬಾರ್, ಕಲ್ಬುರ್ಗಿ ಹಾಗು ಲಕ್ಕಪ್ಪ ಗೌಡರು ಸಹ ತುಂಬು ವಿವೇಚನೆಯಿಂದ ಈ ಅವಸರದ ಕ್ರಮವನ್ನು ಖಂಡಿಸಿದ್ದಾರೆ.ಕನ್ನಡದ ದೊಡ್ಡ ಜೀವ ಯು.ಆರ್.ಅನಂತಮೂರ್ತಿಯವರು ಸಹ ಭಿನ್ನಮತ ಸೂಚಿದ್ದಾರೆ. ಇದರ ಜೊತೆ ಧಾರವಾಡದ ಹಿರಿಯ ಕನ್ನಡ ನುಡಿ ಪ್ರೇಮಿ ಬಳಗವೂ ತಮ್ಮ ವಿರೋಧವನ್ನು ಪ್ರಕಟಿಸಿದ್ದಾರೆ. ಈ ಹಿರಿಯರ ಕಾಳಜಿಗಳ ಬಗ್ಗೆ ಸರಕಾರ ಕಿವುಡಾಗಿದೆ. ಲಿಂಬಾವಲಿಯವರು ಇಂದು ಉಢಾಫೆಯಿಂದ ಈ ಹಿರಿಯರ ಕಾಳಜಿಗಳನ್ನು ತಳ್ಳಿ ಹಾಕಿ, ಸರಕಾರ ತಮ್ಮದು, ತಮಗೆ ಇಷ್ಟವಾದದ್ದನ್ನು ಮಾಡುತ್ತೇವೆ-ಇದನ್ನೆಲ್ಲ ಪ್ರಶ್ನಿಸುವ ನೈತಿಕತೆ ನಮಗೆ ಸರಿ ಬರುವುದಿಲ್ಲ ಎಂಬ ಧಿಮಾಕಿನ ಮಾತುಗಳನ್ನಾಡಿದ್ದಾರೆ. ಜೊತೆಗೆ ಸರಕಾರದ ಕ್ರಮವನ್ನು ವಿರೋಧಿಸುತ್ತಿರುವ ವಿ.ವಿ.ಯ ಶಿಕ್ಷಕರ ಮೇಲೆ ಕ್ರಮಕೈಗೊಳ್ಳುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಈ ಸರಕಾರದ ನೀಚತನಕ್ಕೆ ಹೇಗೆ ಉತ್ತರಿಸಬೇಕು!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: