ಕಪ್ಪು ಕಾವ್ಯದ ಮಾಯಾ ದೇವತೆ

ಅರೆ! ಇವಳು ಇಲ್ಲೆ ಸೌದೆ ಹೊರೆ ಕಟ್ಟುತ್ತ, ಮೀನಿಗೆ ದುಡ್ಡು ಹೊಂದಿಸುತ್ತ, ಮಕ್ಕಳನ್ನು ಸಂಭಾಳಿಸುತ್ತ, ಯಾರ ಮೇಲೋ ಸಾತ್ವಿಕ ಸಿಟ್ಟಲ್ಲಿ ರೇಗುತ್ತ, ಹೇಳಲಾರದ ಎಂಥದೋ ದುಃಖಕ್ಕೆ ಧುಮುಗುಟ್ಟುವ ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ, ಮತ್ತೆಂಥದೋ ಲಹರಿಯಲ್ಲಿ ಹಾಡಿಗೆ ದನಿಯಾಗುತ್ತ, ಆಚೆ ಕೇರಿಯಲ್ಲಿರುವ ತುಂಬು ಗರ್ಭಿಣಿ ಹೆರಿಗೆಯಾಗಲು ಇನ್ನೆಷ್ಟು ದಿನ ಉಳಿದೊ ಎಂದು ತಾನೇ ಅಂದಾಜು ಮಾಡಿಕೊಂಡ ಕೌಂಟ್ ಡೌನ್ ಕಡೆ ಮನಸ್ಸು ನೆಡುತ್ತ, ಬದುಕನ್ನು ಎಷ್ಟೊಂದು ಸಾಂದ್ರವಾಗಿ ಒಳಗೊಳ್ಳುತ್ತಿರುವ ಹಾಲಕ್ಕಿ ಹೆಂಗಸಿನ ಥರಾನೇ ಇದ್ದಾಳಲ್ಲವೇ?

————

ಶ್ರಾವಣಿ

 angelou1.gif

ಮೂರು ವರ್ಷವಾಗಿತ್ತಷ್ಟೆ, ಆ ಹುಡುಗಿಗೆ.
ಆಗಲೇ ಅಪ್ಪ ಅಮ್ಮನ ಮಧ್ಯದ ಬಾಂಧವ್ಯದ ತಂತಿ ಹರಿದುಬಿತ್ತು.

ಅಲ್ಲಿಂದ ಮುಂದೆ ಅಜ್ಜಿಯ ಆರೈಕೆಯಲ್ಲಿ ಬೆಳೆಯಬೇಕಾಯಿತು. ದೂರದ ಊರಲ್ಲಿರುವ ಅಮ್ಮನ ಭೇಟಿ ಆಗೀಗ ಮಾತ್ರ ಸಾಧ್ಯವಾಗುತ್ತಿತ್ತು.

ಹಾಗೆ ಒಮ್ಮೆ ಅಮ್ಮನನ್ನು ನೋಡಲೆಂದು ಹೋದಾಗಲೇ ಅಮ್ಮನ ಗೆಳೆಯನೇ ಹಸಿದ ಹೆಬ್ಬುಲಿಯಂತೆ ಎರಗಿದ. ಅತ್ಯಾಚಾರದಂಥ ಕಟು ಅನುಭವಕ್ಕೆ ಎರವಾಗಬೇಕಾಗಿ ಬಂದಾಗ ಅವಳಿಗಾಗಿದ್ದ ವಯಸ್ಸು ಕೇವಲ ಏಳು ವರ್ಷ. ಜೀವ ಝಲ್ಲೆನಿಸಿತ್ತು. ಆದರೆ ಹೇಳಿಕೊಳ್ಳುವುದಕ್ಕೆ ಅಂತಾ ಇದ್ದದ್ದು ಒಬ್ಬ ಅಣ್ಣ ಮಾತ್ರ. ಏನನ್ನೂ ಹೇಳಿಕೊಳ್ಳಲು ಸಾಧ್ಯವೆನ್ನಿಸುವಷ್ಟು ಒಳ್ಳೆಯ, ತಂಗಿಗೆ ಸದಾ ಸ್ಪಂದಿಸುತ್ತಿದ್ದ ಅಣ್ಣ. ಅವನ ಮುಂದೆ ಕಣ್ಣೀರಾಗದೆ ಇನ್ನಾರ ಮುಂದೆ ಆದಾಳು? ಆದರೆ, ತನ್ನ ಮೇಲೆ ಅತ್ಯಾಚಾರವೆಸಗಿದವನನ್ನು ತನ್ನ ಚಿಕ್ಕಪ್ಪಂದಿರು ಕೊಂದುಹಾಕಿದರೆಂದು ತಿಳಿದಾಗ ಆದದ್ದು ಮಾತ್ರ ಬಹು ದೊಡ್ಡ ಆಘಾತ. ಎಂಥ ಆಘಾತವೆಂದರೆ, ಮುಂದಿನ ಆರು ವರ್ಷಗಳವರೆಗೆ ಆಕೆ ಸಂಪೂರ್ಣ ಮೌನದ ಚಿಪ್ಪಿನೊಳಗೆ ಸೇರಿಹೋದಳು. ಮತ್ತೆ ಮಾತು ಶುರು ಮಾಡಿದ್ದು ಹದಿಮೂರನೇ ವಯಸ್ಸಿನಲ್ಲಿ, ಅಣ್ಣನೊಂದಿಗೆ ಪುನಃ ಹೋಗಿ ಅಮ್ಮನನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೇರಿಕೊಂಡಾಗ.

ಹೈಸ್ಕೂಲಿನಲ್ಲಿ ಸೀನಿಯರ್ ವರ್ಷದಲ್ಲಿದ್ದಾಗ, ಇನ್ನೂ ಅವಿವಾಹಿತೆಯಾಗಿದ್ದಾಗ ಗರ್ಭಿಣಿಯಾದಳು. ಡಿಗ್ರಿ ಪಡೆಯುವುದಕ್ಕೆ ಕೆಲವೇ ವಾರಗಳಿಗೆ ಮುಂಚೆ ಗಂಡು ಮಗುವಿನ ತಾಯಿಯಾದಳು.

ಕಪ್ಪು ಕವಯತ್ರಿ ಮಾಯಾ ಏಂಜೆಲೋ ಬದುಕು ಇಂಥ ತಲ್ಲಣದ ಕಥೆಗಳ, ಗೊತ್ತಿಲ್ಲದ ತಿರುವುಗಳ ಪ್ರಯಾಣ. ಹಾಗಾಗಿಯೇ ಆಕೆ ವಿಲಕ್ಷಣ ಅನುಭವಗಳನ್ನು ತೆರೆದಿಟ್ಟಾಗ ಜಗತ್ತು ಬೆರಗಿನಿಂದ ಆಕೆಯ ಕಡೆಗೆ ಕಣ್ಣರಳಿಸಿ ನೋಡಿತು. ಕಪ್ಪು ಸಾಹಿತ್ಯದಲ್ಲಿ ಅವಳ ಕಥೆಗಳದ್ದು ಆನೆ ದಾರಿ.

ಮಾಯಾ.

ಆ ಹೆಸರು ಅಣ್ಣ ಕೊಟ್ಟ ಉಡುಗೊರೆ. ಅಪ್ಪ, ಅಮ್ಮ ವೈವಾಹಿಕ ಬಂಧದಿಂದ ಕಳಚಿಕೊಂಡ ಬಳಿಕ ಅಜ್ಜಿಯ ಮನೆಗೆ ಹೋಗಬೇಕಾಗಿ ಬಂದ ಪುಟ್ಟ ಹುಡುಗಿಯ ಜೊತೆಗೆ ಇದ್ದವನು ಅದೇ ಅಣ್ಣ. ಅಮ್ಮ ಮತ್ತು ಅಜ್ಜಿಯ ಊರುಗಳ ಮಧ್ಯೆ ಮತ್ತೆ ಮತ್ತೆ ದಾರಿ ಸವೆಸಬೇಕಾಗಿದ್ದಾಗ, “ಹುಷಾರು ಕಣೆ” ಎಂಬ ಎಚ್ಚರದ ಬುತ್ತಿ ಕಟ್ಟಿಕೊಡುತ್ತಿದ್ದವನು ಅದೇ ಅಣ್ಣ. ಆ ಎಳವೆಯ ದಿನಗಳಲ್ಲೇ ಅವನು ತಂಗಿಯನ್ನು ಪ್ರೀತಿಯಿಂದ ಕರೆದದ್ದು ಮಾಯಾ ಎಂದು.

೧೬ನೇ ವಯಸ್ಸಲ್ಲಿ ಮನೆ ಬಿಟ್ಟು ಹೊರಟಾಗ ಮಾಯಾ ಒಬ್ಬಂಟಿ ತಾಯಿ. ಅನಂತರವೆಲ್ಲಾ ಕಷ್ಟಗಳ ಕಡಲಲ್ಲಿ ಈಜು. ಹೊಟೇಲಿನಲ್ಲಿ ಪರಿಚಾರಕಿಯಾಗಿ, ಅಡುಗೆಯವಳಾಗಿ ಅನ್ನ ಸಂಪಾದನೆ. ಇದೆಲ್ಲ ದುಸ್ತರಗಳ ನಡುವೆಯೂ ಮನಸ್ಸಿಗೆ ಹತ್ತಿರವಾದ ಸಂಗೀತ, ನೃತ್ಯ ಮತ್ತು ಕಾವ್ಯವನ್ನು ತನ್ನೊಳಗಿನ ಜೀವಂತಿಕೆಯಾಗಿ ಉಳಿಸಿಕೊಂಡಳು.

ಸಂಗೀತ, ನೃತ್ಯ ಮತ್ತು ನಾಟಕದ ಬಗೆಗಿನ ಅವಳ ಪ್ರೀತಿ ಹೈಸ್ಕೂಲು ದಿನಗಳಲ್ಲೇ ಹುಟ್ಟಿದ್ದು. ಅವೆಲ್ಲ ಅವಳ ಮಗುವಿನ ಹಾಗೆಯೇ ಜೀವಭಾಗ. ಸ್ಕಾಲರ್ ಷಿಪ್ ಗೆದ್ದು ನೃತ್ಯ ಮತ್ತು ನಾಟಕ ಕಲಿತಿದ್ದಳು ಚುರುಕು ಹುಡುಗಿ. ಹೋರಾಟಗಾರ್ತಿಯಾಗಿ ಅವಳನ್ನು ರೂಪುಗೊಳಿಸಿದ ಪ್ರಗತಿಪರ ಆಲೋಚನೆಗಳು ಅವಳಲ್ಲಿ ತೆರೆದುಕೊಂಡದ್ದು ಕೂಡ ಹೈಸ್ಕೂಲಿನ ದಿನಗಳಲ್ಲೇ.

ಮುಂದೆ ಗ್ರೀಕ್ ನಾವಿಕನೊಬ್ಬನನ್ನು ಮಾಯಾ ಮದುವೆಯಾದಳು. ಆ ಹೊತ್ತಿಗೆ ಆಕೆಗೆ ನೈಟ್ ಕ್ಲಬ್ ಒಂದರಲ್ಲಿ ಗಾಯಕಿಯಾಗಿ ಕೆಲಸವಿತ್ತು. ಆ ಗ್ರೀಕ್ ನಾವಿಕನ ಹೆಸರು ತೋಶ್ ಏಂಜೆಲೋಸ್. ಮಾಯಾ ಎಂಬ ಹೆಸರಿಗೆ ಏಂಜೆಲೋ ಸೇರಿದ್ದು ಹಾಗೆ.

ಅವನ ಹೆಸರೇನೋ ಅವಳ ಜೊತೆಗೆ ಉಳಿಯಿತು. ಆದರೆ, ಮದುವೆ ಮಾತ್ರ ಹೆಚ್ಚು ಕಾಲ ನಿಲ್ಲಲಿಲ್ಲ. ಮತ್ತೊಮ್ಮೆ ಮಾಯಾ ಒಂಟಿಯಾದಳು.

ಈ ಎಲ್ಲ ತಳಮಳಗಳ ನಡುವೆಯೇ ಅವಳ ವೃತ್ತಿ ಬದುಕು ಮಾತ್ರ ಹಠ ಹಿಡಿದ ಬಲದೊಂದಿಗೆ ಮುನ್ನಡೆದಿತ್ತು. ಯೂರೋಪ್ ಪ್ರವಾಸದ ಅವಕಾಶ ಬಂತು. ಆಧುನಿಕ ನೃತ್ಯ ಅಧ್ಯಯನಿಸಿದಳು. ಮೂವತ್ತನೇ ವಯಸ್ಸಲ್ಲಿ ಆಕೆಯ ಮೊದಲ ಆಲ್ಬಂ ಹೊರಬಂತು.

ಆಮೇಲಿನ ವರ್ಷಗಳು ಕಾವ್ಯದ ಕಡೆಗೆ ಅವಳನ್ನು ಸೆಳೆದವು. ಕಾವ್ಯ ಕೌಶಲ ಉತ್ತಮಗೊಳಿಸಿಕೊಳ್ಳುವತ್ತ ಧ್ಯಾನಿಸಿದಳು. ನ್ಯೂಯಾರ್ಕಿಗೆ ಪ್ರಯಾಣ. ಬರಹಗಾರರು ಮತ್ತು ಕಲಾವಿದರ ಕೂಟಕ್ಕೆ ಸೇರ್ಪಡೆ. ರಂಗಭೂಮಿಯ ನಂಟು. ನಟನೆಯ ಜೊತೆ ನಾಟಕ ರಚನೆಯಲ್ಲೂ ಸೈ.

ಈ ಸಂದರ್ಭದಲ್ಲಿ ವಿವಿಧ ದಿಕ್ಕುಗಳಲ್ಲಿ ಅಧ್ಯಯನ. ಫ್ರೆಂಚ್, ಸ್ಪಾನಿಷ್, ಇಟಾಲಿಯನ್, ಅರೇಬಿಕ್ ಮೊದಲಾದ ಭಾಷೆಗಳ ಮೇಲೆ ಪ್ರಭುತ್ವ. ಹೋರಾಟದೆಡೆಗೆ ತುಡಿಯುತ್ತಿದ್ದ ಮನಸ್ಸು. ಬರವಣಿಗೆಯ ಹಂಬಲಕ್ಕೂ ಒತ್ತು. ಆಲ್ಬಂ ಬಂದ ಹದಿಮೂರು ವರ್ಷಗಳ ಬಳಿಕ ಅವಳ ಮೊದಲ ಗದ್ಯ ಕೃತಿ ಪ್ರಕಟವಾಯಿತು. “I Know Why The Caged Bird Sings”. ತನ್ನ ಬಾಲ್ಯದಿಂದ ಮೊದಲಾಗಿ ತಾನು ಮಗುವನ್ನು ಹೆತ್ತವರೆಗಿನ ಕಥೆಯನ್ನು ಮಾಯಾ ಈ ಕೃತಿಯಲ್ಲಿ ಹೇಳಿದ್ದಳು.

ಈ ಕೃತಿ ಪ್ರಕಟವಾದದ್ದೇ ತಡ, ರಾತ್ರಿ ಬೆಳಗಾಗುವುದರೊಳಗೆ ಮಾಯಾ ದೇಶಾದ್ಯಂತ ಹೆಸರಾಗಿಬಿಟ್ಟಿದ್ದಳು. ಮುಂದಿನ ವರ್ಷಗಳಲ್ಲಿ ನಾಲ್ಕು ಸಂಪುಟಗಳಲ್ಲಿ ಅವಳ ಬದುಕಿನ ಕಥೆ ಪ್ರಕಟವಾಯಿತು. ವಿಶ್ವಮಟ್ಟದಲ್ಲಿ ಅವು ಗಮನ ಸೆಳೆದವು.  

ಮಾಯಾ ಆಫ್ರಿಕನ್ ಅಮೆರಿಕನ್ನಳು. ಜನಾಂಗೀಯ ನಿಂದನೆಯ ಸಂಕಟವನ್ನೂ ಉಂಡವಳು. ಆದರೆ ಅದೆಲ್ಲವನ್ನೂ ಮೀರಿ ಅವಳ ಚೈತನ್ಯ. ನಾರ್ಥ್ ಕೆರೊಲಿನಾದ ವೇಕ್ ಫಾರೆಸ್ಟ್ ಯೂನಿವರ್ಸಿಟಿಯಲ್ಲಿ ೧೯೮೧ರಿಂದ ಲೈಫ್ ಟೈಮ್ ಪ್ರೊಫೆಸರ್ ಆಗಿರುವ ಮಾಯಾ ದಣಿವಿಲ್ಲದ ಹಾದಿ ಸಾಗಿದವಳು. ಅಧ್ಯಾಪನ, ಕಾವ್ಯ, ನಟನೆ, ನಾಟಕ ರಚನೆ, ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನ ಮಾತ್ರವಲ್ಲದೆ, ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ, ಇತಿಹಾಸಕಾರ್ತಿಯಾಗಿ ಜೀವನವನ್ನು ಹುಡುಕಿದವಳು.

ಮಾಯಾ ಬಗ್ಗೆ ಓದಿಕೊಳ್ಳುತ್ತಿದ್ದಂತೆ, “ಅರೆ! ಇವಳು ಇಲ್ಲೆ ಸೌದೆ ಹೊರೆ ಕಟ್ಟುತ್ತ, ಮೀನಿಗೆ ದುಡ್ಡು ಹೊಂದಿಸುತ್ತ, ಮಕ್ಕಳನ್ನು ಸಂಭಾಳಿಸುತ್ತ, ಯಾರ ಮೇಲೋ ಸಾತ್ವಿಕ ಸಿಟ್ಟಲ್ಲಿ ರೇಗುತ್ತ, ಹೇಳಲಾರದ ಎಂಥದೋ ದುಃಖಕ್ಕೆ ಧುಮುಗುಟ್ಟುವ ಕಣ್ಣೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ, ಮತ್ತೆಂಥದೋ ಲಹರಿಯಲ್ಲಿ ಹಾಡಿಗೆ ದನಿಯಾಗುತ್ತ, ಆಚೆ ಕೇರಿಯಲ್ಲಿರುವ ತುಂಬು ಗರ್ಭಿಣಿ ಹೆರಿಗೆಯಾಗಲು ಇನ್ನೆಷ್ಟು ದಿನ ಉಳಿದೊ ಎಂದು ತಾನೇ ಅಂದಾಜು ಮಾಡಿಕೊಂಡ ಕೌಂಟ್ ಡೌನ್ ಕಡೆ ಮನಸ್ಸು ನೆಡುತ್ತ, ಬದುಕನ್ನು ಎಷ್ಟೊಂದು ಸಾಂದ್ರವಾಗಿ ಒಳಗೊಳ್ಳುತ್ತಿರುವ ಹಾಲಕ್ಕಿ ಹೆಂಗಸಿನ ಥರಾನೇ ಇದ್ದಾಳಲ್ಲವೇ?” ಅನ್ನಿಸಿಬಿಟ್ಟಿತು.

‍ಲೇಖಕರು avadhi

September 15, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

3 ಪ್ರತಿಕ್ರಿಯೆಗಳು

 1. ಸತೀಶ್ ಪಾಗಾದ್

  ಮಾಯಾ ಬದುಕು ಕೇವಲ ನೋವಿನಲ್ಲೇ ಸಾಗಿತ್ತಾ.. ಅದ್ಯಾಕೆ ಅವಳಿಗೆ ಒಂದ್ಹಿಡಿ ಖುಷಿ ಸಿಗಲ್ಲಿಲ್ಲ. ಸಿಕ್ಕಿದ್ದರೆ ಖಂಡಿತಾ ಮಾಯಾಳಿಂದ “I Know Why The Caged Bird Sings” ಬರುತ್ತಿರಲಿಲ್ಲ. ಸಿಕ್ಕಿಬಿದ್ದ ಹಕ್ಕಿಗಳದ್ದು ಅದು ಖಂಡಿತಾ ಹಾಡಲ್ಲ. ಅದು ನೋವಿನ ಕೂಗು. ಏಳನೆ ವಯಸ್ಸಿನಲ್ಲಿ ಅದ್ಹೆಂತದೊ ಆಘಾತಕ್ಕೆ ಸಿಲುಕಿದವಳಿಂದ ಸ್ಮೈಲ್ ಕಾಣಬಹುದಾ. ಏಳನೆ ವಯಸ್ಸಿನಲ್ಲಿ ಅವಳ ಮನದ ಓಲೆಯ ಮೇಲೊಂದು ಅನ್ನ ಬೇಯಲು ಪ್ರಾರಂಬಿಸಿತು ಅದೇ I Know Why The Caged Bird Sings ರೂಪದಲ್ಲಿ ಹೋರಬಂದಿತು. ಪರಿಚಯ ಚೆನ್ನಾಗಿದೆ…

  ಪ್ರತಿಕ್ರಿಯೆ
 2. mauni

  Maya, silviya, simone….
  bareyuva hennumakkalanna parichayisuttale iddeeri. Idu olleya pruthe. namma sadhyada samajadalli I bageya sahitya rachaneyalli todagiruva sadhakiyariddare, avara baggeyU tilisi.
  navu (males) kaliyabekagiddu sakashtide!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: