
ಮಾಲಾ ಮ ಅಕ್ಕಿಶೆಟ್ಟಿ
ವೈಭವೋಪಿತ ವರ್ಣರಂಜಿತ
ಜೀವನ ಶುದ್ಧ ಕಾಮನಬಿಲ್ಲು
ಕಲ್ಪನೆಗೆ ನಿಲುಕದ ಬಣ್ಣಗಳು
ತರತರ ಕೆಂಪು ಹಸಿರು ನೀಲಿ
ಹಳದಿ ನೇರಳೆ ಕೇಸರಿ ಊದಾನೀಲಿ
ಏಳೇ ಏಳು ಬಣ್ಣ ಇರಬೇಕೆಂದಿಲ್ಲ
ಇವುಗಳ ಮೀರಿದ ಬಣ್ಣಗಳು
ಹೆಸರಿಸಲಸಾಧ್ಯ ಸಾಮಾನ್ಯನಿಗೆ
ಚಂದ್ರನ ಮೇಲೆ ಕುಳಿತ ಆಕೆ
ಬಿಳಿ ಕುದುರೆ ಸವಾರಿಯಲ್ಲಿ ಆತ
ಆಕಾಶದಂಗಳದಲಿ ಉಲಿಯುವ
ನಕ್ಷತ್ರದಂಥ ಹೂ ನಗು ಮಕ್ಕಳು
ಚಿನ್ನದ ಬೇಲಿಯ ಉದ್ಯಾನವನ
ಅಪ್ಸರೆಯರಂಥ ಹೂವುಗಳು
ಯಾವತ್ತೂ ಜೊತೆಯಾದ ಅಪ್ಪನ
ಕೈ ನನ್ನ ಕೈಯೊಳಗೆ ಭರವಸೆಯ
ಬೆಳಕಿನ ಕನಸುಗಳು ಸದಾಕಾಲ

ಈಗೀಗ ಮಾಯ.. ಕಣ್ಮರೆ ಎಲ್ಲ
ಕ್ಷಣ ಕಾಣುವ ಮಳೆಗಾಲದ ಮಿಂಚಿನಂತೆ
ಜೀವನದ ಸಂತೆ ತುಂಬೆಲ್ಲ ಗುಡುಗೇ
ಗುಡುಗುಡಿಗಿಸುತ್ತಿದೆ ಅನವರತ
ಅರ್ಧಚಂದ್ರನಲ್ಲಿ ಆಕೆ ಜೋಕಾಲಿ
ಆಡುತ್ತಿಲ್ಲ, ಆತ ಬಿಳಿ ಕುದುರೆಯನ್ನು
ಸಮುದ್ರದ ದಡದಲ್ಲಿ ಓಡಿಸುತ್ತಲೂ ಇಲ್ಲ
ಬಾಳ ನೌಕೆ ಬರೀ ಕಪ್ಪು ಬಿಳುಪು
ಕಾಮನಬಿಲ್ಲು ಬರೀ ಶಬ್ದ ಮಾತ್ರ ಕೆಲವರಿಗೆ
0 ಪ್ರತಿಕ್ರಿಯೆಗಳು