ಕಪ್ಪು ಹೆರಳು – ನೇರಳೆ ಸಾಲು

dina.jpg

ಕೃಷ್ಣಮೂರ್ತಿ ಬಿಳಿಗೆರೆ

ಮ್ಮೂರ ರಸ್ತೆಯ ಅಕ್ಕಪಕ್ಕಗಳಲ್ಲಿ ಬರೀ ನೇರಳೆ ಮರಗಳ ಸಾಲು. ಮಳೆಗಾಲಕ್ಕೆ ಸರಿಯಾಗಿ ಇವು ತೊಂಪಲು ಹಣ್ಣು ಬಿಟ್ಟು ಕರ್ರಗಿನ ಹಣ್ಣಿನ ಮಳೆ ಸುರಿಸುತ್ತಿದ್ದವು. ಅದು ದೂರಕ್ಕೆ ತಿಪ್ಪೆಯಂತೆ ಕಾಣುತ್ತಿದ್ದಿತು. ತರಂಥರ ಅಂಡಬಂಡ ನಾಯಿಗಳು ಸಂತೋಷದಿಂದ ಈ ಹಣ್ಣುಗಳನ್ನು ಹೊಟ್ಟೆ ತುಂಬಾ ನುಂಗುತ್ತಿದ್ದವಾದ್ದರಿಂದ ಸದರಿ ಮರಗಳಿಗೆ ನಾಯಿ ನೇರಳೆ ಎಂಬ ಹೆಸರು ಬಂದಿರಬೇಕು. ನೇರಳೆ ಹಣ್ಣಿನ ಕಾಲದಲ್ಲಿ ನಾಯಿಗಳೆಲ್ಲಾ ಉಂಡುಂಡಗಾಗಿ ತಮ್ಮ ಸುಖ ಜೀವಿತದ ಕಾಲ ಕಾಣುತ್ತಿದ್ದವು. ನಾವು ಮತ್ತು ನಾಯಿಗಳು ಒಟ್ಟೊಟ್ಟಿಗೆ ನೇರಳೆ ಹಣ್ಣಿನ ಪಾಲು ಪಡೆಯುತ್ತಿರುವಾಗ ಒಮ್ಮೊಮ್ಮೆ ಶಾನೆ ಬೇಜಾರಾಗಿ ನಾಯಿಗಳನ್ನು ಓಡಿಸಿ ಮರ್ಯಾದೆಯಾಗಿ ಮಣ್ಣಾದ ಆ ಹಣ್ಣುಗಳನ್ನು ಉರುಬಿ ಅಥವಾ ಟಾರು ರಸ್ತೆಗೆ ಒಮ್ಮೆ ಟಪ್ ಎಂದು ಬಡಿದು “ಶುದ್ಧೀಕರಿಸಿ” ಹಣ್ಣಿನ ಅಳಿದುಳಿದ ಛಿದ್ರ ಭಾಗವನ್ನು ಬೀಜ ಬೆರೆಸೆ ಬಾಯಿಗೆಸೆದು ನಲುಬುತ್ತಿದ್ದೆವು. ನಮಗಿಂತ ದೊಡ್ಡವರು ಮರ ಹತ್ತಿ ಮೇಲೆ ಕುಂತು ಒಳ್ಳೊಳ್ಳೆ ಹಣ್ಣುಗಳನ್ನು ತಿನ್ನುತ್ತಾ ಬೀಜಗಳನ್ನು ಕೆಳಗೆ ಉಗಿಯುತ್ತಿದ್ದರು. ನಾವೂ ಎಂದು ಹೀಗಾಗುವುದು, ಎಂದುಕೊಳ್ಳುತ್ತಾ, “ಅಣ್ಣಾ, ಕೊಂಬೆ ಅಳ್ಳಾಡಿಸಣ್ಣಾ” ಎಂದು ಅಂಗಲಾಚುತ್ತಿದ್ದೆವು. ಮೇಲಿದ್ದಾತ “ತಡಿರ್ಲಾ” ಎಂದು ಒಳ್ಳೊಳ್ಳೆ ಹಣ್ಣುಗಳನ್ನು ಕೊಯ್ದು ಜೇಬಿಗೆ ಸ್ಟಾಕು ಮಾಡಿದ ಮೇಲೆ ನಮ್ಮ ಮೇಲೆ ಕರುಣೆ ತೋರಿ, ಕೊಂಬೆ ಅಳ್ಳಾಡಿಸುತ್ತಿದ್ದ. ಹಣ್ಣು, ಕೆಂಗು, ಕಾಯಿ ಎಲ್ಲವೂ ನಮ್ಮ ಮೇಲೆ ಉದುರುತ್ತಿದ್ದವು. ಅವುಗಳಿಗೇ ಕೆಳಗಿದ್ದವರಲ್ಲಿ ಕುಸ್ತಿ ನಡೆಯುತ್ತಿತ್ತು. ಮೇಲಿನಿಂದ ಬಿದ್ದ ಹಣ್ಣುಗಳು ನಮ್ಮ ಅಂಗಿ ಬಟ್ಟೆಗಳ ಮೇಲೆ ನೀಲಿ ಬಣ್ಣದ ವಿವಿಧಾಕಾರದ ಪ್ರಿಂಟು ಉಂಟು ಮಾಡುತ್ತಿದ್ದವು. ಮರ ಹತ್ತಿದವರಿಗಿಂತಾ ನಾವೂ ಏನು ಕಡಿಮೆ ಎಂದು ಪಚಡಿಯಾದ ಹಣ್ಣುಗಳನ್ನೇ ಚಡ್ಡಿ ಜೇಬಿಗೆ ತುಂಬಿಕೊಳ್ಳುತ್ತಿದ್ದುದರಿಂದ ಆ ಜೇಬುಗಳು ನೇರಳೆ ಕರೆಯಿಂದ ದದ್ದುಗಟ್ಟುತ್ತಿದ್ದವು. ಇವೆಲ್ಲಕ್ಕೂ ಮನೆಯಲ್ಲಿ ತಕ್ಕನಾದ ಬಾಸುಂಡೆಗಳು ಕಾದಿರುತ್ತಿದ್ದವು.

ಕೆಲವೇ ದಿನಗಳಲ್ಲಿ ನೇರಳೆ ಸುಗ್ಗಿಯು ಕೊನೆಗೊಂಡು ಹಣ್ಣು ವಿರಳವಾಗುತ್ತಿದ್ದವು. ಆಗ ನಾಯಿಗಳು ಆ ಕಡೆ ಸುಳಿಯದಿದ್ದುದು ವಿಚಿತ್ರ. ಮಕ್ಕಳು ಮರಿಗಳು ತಿಂದುಕೊಳ್ಳಲಿ ಎಂಬ ಪ್ರೀತಿ ಇದಕ್ಕೆ ಕಾರಣವಿರಬಹುದು. ಆದರೆ ಈ ಪ್ರೀತಿಯನ್ನು ಮರದ ಮೇಲಿರುತ್ತಿದ್ದವರು ಮಾತ್ರ ತೋರಿಸುತ್ತಿರಲಿಲ್ಲ. ಮರದ ಮೇಲಿಂದ ಅವರು ಇಳಿಯುವುದನ್ನು ಕಾಯುತ್ತಾ ಕೂತರೆ ಆಕಾಶದಿಂದ ಎಂಬಂತೆ ಇಳಿದು ಬರುತ್ತಿದ್ದರು. ಅಂಗಲಾಚಿ ಕೈಯೊಡ್ಡುವವರಿಗೆಲ್ಲಾ ಎರಡೆರಡು ಲಾತಾ ಕೊಟ್ಟು ಓಡಿಸುತ್ತಿದ್ದರು. ಈ ಅನೇಕ ಹೀರೋಗಳು ಜೋಲು ಗೊಂಬೆಯ ಹಣ್ಣುಗಳಿಗೆ ಆಸೆಪಟ್ಟು ಕೊಂಬೆ ಮುರಿದು ಕೆಳಗೆ ಬಿದ್ದು ರೊಂಡಿ ಮುರಿದುಕೊಂಡದ್ದನ್ನು ಸ್ಮರಿಸದಿದ್ದರೆ ತುಂಬಾ ತಪ್ಪಾಗುತ್ತದೆ.

ನಮ್ಮೂರ ಏರಿ ಹಿಂದೆ ಎರಡು ಜಂಬುನೇರಳೆ ಹಣ್ಣಿನ ಮರಗಳು ಇದ್ದುದು ನಮ್ಮೆಲ್ಲರ ಹೆಮ್ಮೆ. ಕೇವಲ ನಾಯಿನೇರಳೆ ಹಣ್ಣನ್ನು ತಿನ್ನುವವರ ಕಿಮ್ಮತ್ತು ಕಮ್ಮಿ. ಅದರೊಟ್ಟಿಗೇ ಈ ಜಂಬುನೇರಳೆ ಮರದಡಿಗೆ ಬಂದು ಅಡ್ಡಾಡಿ ಒಂದು ಕೆಂಗನ್ನೂ ತಿನ್ನದೆ ಹುಳ್ಳಗೆ ಹೋದರೂ ಅದೊಂದು ಮರ್ಯಾದೆಯ ವಿಚಾರವೇ ಆಗಿತ್ತು. ಅವುಗಳ ಅಪರೂಪದ ಲಭ್ಯತೆ, ದಪ್ಪ, ರುಚಿ, ಹೆಸರು ಇವೆಲ್ಲಾ ಇದಕ್ಕೆ ಕಾರಣವಾದ ಅಂಶಗಳು. ಬಲು ಎತ್ತರವಾದ ಈ ಮರಗಳು ಎಲ್ಲರಿಗೂ ಎಟುಕುತ್ತಿರಲಿಲ್ಲ. ಅಲ್ಲದೆ ಅಷ್ಟೊಂದು ಜನಕ್ಕೆ ಎರಡೇ ಮರಗಳು. ಈ ಮರಗಳು ನಾಯಿನೇರಳೆ ಮರದಂತೆ ಹಣ್ಣಾದ ತಕ್ಷಣ ಹಣ್ಣುಗಳನ್ನು ಕೆಳಗೆ ಉದುರಿಸುತ್ತಿರಲಿಲ್ಲ. ಅಲ್ಲೆ ಅವು ಮಾಗತೊಡಗುತ್ತಿದ್ದವು. ತಿಪ್ಪೆ ಸುರಿದಂತೆ ಸುರಿಯುವುದಿರಲಿ ಒಂದು ಹಣ್ಣನ್ನೂ ಕೆಳಗೆ ಬೀಳಲು ಜನ ಬಿಡುತ್ತಿರಲಿಲ್ಲ. ಹಣ್ಣಿನ ಕಾಲದಲ್ಲಿ ಇಲ್ಲೊಂದು ಜಾತ್ರೆ ನೆರೆಯುತ್ತಿತ್ತು. ಇಲ್ಲಿ ನಾಯಿನೇರಳೆ ಮರದಡಿಯಲ್ಲಿಯಂತೆ ಮಕ್ಕಳು ಮರಿಗಳು ಮಾತ್ರ ಇರುತ್ತಿರಲಿಲ್ಲ. ಗೌರವಾನ್ವಿತರೆಲ್ಲಾ ಇಲ್ಲಿ ಸುಳಿದಾಡಿ ಹಣ್ಣುಗಿಟ್ಟಿಸಿ ತಿಂದು ನಾಲಗೆಯ ಮೇಲೆ ಜಂಬು ನೇರಳೆ ರುಚಿಯನ್ನು ಪ್ರತಿಷ್ಠಾಪಿಸಿಕೊಂಡು ಸಾಗುತ್ತಿದ್ದರು. ಮೇಲಿನ ಜನ (ಅಂದರೆ ಮರ ಹತ್ತಲು ಬರುವ ಸಾಹಸಿಗರು) ಆಗೊಮ್ಮೆ ಈಗೊಮ್ಮೆ ಕೆಳಗಿನವರ ಪ್ರಾರ್ಥನೆಯ ಮೇರೆಗೆ ಪ್ರಸಾದವೆಂಬಂತೆ ಒಂದೊಂದು ಹಣ್ಣನ್ನು ಕೆಳಗೆ ಹಾಕುತ್ತಿದ್ದರು. ಕ್ಯಾಚ್ ಹಿಡಿಯಲು ಕಿತ್ತಾಟ ನಡೆಯುತ್ತಿತ್ತು. ನಾವು ಸಣ್ಣ ಹುಡುಗರು ಮಾತ್ರ ಅವರ ಕಿತ್ತಾಟದಿಂದ ನೆಲಕ್ಕೆ ಬೀಳಬಹುದಾದ ಹಣ್ಣಿಗಾಗಿ ಕಾಲು ಸಂದಿಯಲ್ಲಿ ಕಾಯುತ್ತಿದ್ದೆವು.

ಈ ಜಂಬುನೇರಳೆ ಮರಗಳನ್ನು ಹತ್ತುವುದು ಬಲು ತ್ರಾಸದಾಯಕವಾಗಿತ್ತು. ಇವುಗಳ ಬೃಹತ್ ಬುಡವನ್ನು ಅಮರಿ ಹತ್ತುವುದು ಸುಲಭವಾಗಿರಲಿಲ್ಲ. ಗೆಳೆಯರ ಮೆಟ್ಟಿಲು (ಮೆಟ್ನಿಂಗೆ) ಪಡೆದು ಕವಲೊಡೆದ ಜಾಗ ತಲುಪಿದರೆ ಮುಂದಿನ ದಾರಿ ಸುಲಭವಾಗಿರುತ್ತಿತ್ತು. ಎಲ್ಲಾ ಕೊಂಬೆಗಳಿಗೂ ಹತ್ತಿ ಹೋಗುವ ಕಲೆ ನಮ್ಮೂರಲ್ಲಿ ಕೆಲವೇ ಸಾಹಸಿಗರಿಗೆ ಮಾತ್ರ ಕರಗತವಾಗಿತ್ತು. ಅವರನ್ನು ಜನ ವಿಶೇಷ ಘನತೆ ಗೌರವಗಳಿಂದ ಕಾಣುತ್ತಿದ್ದರು. ಅವರು ಮರದಿಂದ ಇಳಿದು ಬಂದರೆ ದೇವಾನು ದೇವತೆಗಳೇನೊ ಎಂಬಂತೆ ಅವರನ್ನು ಕಂಡು ಅವರು ದಯಪಾಲಿಸಬಹುದಾದ ಒಂಚೂರೂ ಮುಕ್ಕಾಗದ ಆದರೆ ಕಳಿತ ನೇರಳೆ ಹಣ್ಣಿಗಾಗಿ ಆಸೆಗಣ್ಣುಗಳನ್ನು ಬಿಟ್ಟುಕೊಂಡು ನೋಡುವ ಒಂದು ದಂಡೇ ಅಲ್ಲಿರುತ್ತಿತ್ತು. ಆತ ಉದಾರಿಯಾದರೆ ಆರೇಳು ಕೈಗಳಿಗೆ ತಲಾ ಒಂದು ಹಣ್ಣನ್ನು ಕೊಡುತ್ತಿದ್ದ. ಇನ್ನು ಕೆಲವರು ನಾಲ್ಕು ಹಣ್ಣುಗಳನ್ನು ಒಟ್ಟಿಗೆ ಮೇಲಕ್ಕೆ ಸೂರೆ ಎಸೆಯುತ್ತಿದ್ದರು. ಮಕ್ಕಳು ಆ ಹಣ್ಣುಗಳಿಗಾಗಿ ಪಲ್ಟಿ ಹೊಡೆಯುತ್ತಿದ್ದರು. ಹೀಗೆ ಸೂರೆ ಎಸೆಯುತ್ತಿದ್ದವರ ಉದ್ದೇಶ ಹಿಂಸಾತ್ಮಕ ತಮಾಷೆ ನೋಡುವುದೇ ಆಗಿರುತ್ತಿತ್ತು. ಈ ಹಣ್ಣಿನ ಮರಗಳಡಿಯಲ್ಲಿ ಜಾತಿ ಕೇರಿ ಕಲ್ಮಶಗಳು ನಮ್ಮಂಥ ಹುಡುಗರ ಭಾವಕೋಶದೊಳಗೆ ಸುಳಿದು ಹದಗೆಡಿಸದಿದ್ದುದನ್ನು ನೆನೆದರೆ ಹೆಮ್ಮೆ ಎನಿಸುತ್ತದೆ.

ಕೆರೆಹಿಂದಣ ಈ ಜಂಬುನೇರಳೆ ಮರಗಳು ಇನ್ನೂ ರೋಡು ಅಗಲೀಕರಣ ನೆಪಕ್ಕೆ ತುತ್ತಾಗಿಲ್ಲ ನಿಜ. ಆದರೆ ತೆಂಗು-ಅಡಿಕೆ ಇವು ಎರಡೇ ಮರಗಳೆಂದು ತಿಳಿದು ಅಂತರ್ಜಲವನ್ನೆಲ್ಲ ಇವಕ್ಕೇ ಕುಡಿಸಿದ ಪರಿಣಾಮವಾಗಿ ಮೇಲ್ಮಣ್ಣಿನಲ್ಲಿ ಪಸೆ ಇಲ್ಲವಾಗಿ ಇಷ್ಟು ದೊಡ್ಡ ಮರಗಳೆ ಮುಖಗೆಟ್ಟು ಒಣಗಿ ಹೋಗಿವೆ. ನಾಯಿನೇರಳೆ ಮತ್ತಿತರ ಸಾಲು ಮರಗಳೂ ಇದಕ್ಕೆ ಹೊರತಲ್ಲ.

‍ಲೇಖಕರು avadhi

November 30, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: