’ಕಪ್ಪೆ ಕಮ್ಮಟ’ – ಅತ್ರಿ ಅಶೋಕ ವರ್ಧನ ಬರೀತಾರೆ

ಮಂಡೂಕೋಪಖ್ಯಾನ

ಅತ್ರಿ ಅಶೋಕವರ್ಧನ

ಚಿತ್ರ ಕೃಪೆ ಡಾ. ಕೆ.ವಿ. ಗುರುರಾಜ್

“ಕಪ್ಪೆ ಕಪ್ಪೆ ಕಾಸು ಕೊಡ್ತೀನಿ, ನೀರ್ ಕೊಡ್ತಿಯಾ…” ಸ್ಲೇಟ್ ಮೇಲೆ ಪುಟ್ಟ ಪುಟ್ಟ ಪೂರ್ಣ ಹಸ್ತಗಳನ್ನು ತುಸು ಗೂನಾಗಿಸಿ (ಕಪ್ಪೆಯಂತೆ ಮಾಡಿ) ಇಟ್ಟ ಮಕ್ಕಳು, ಮುಖವರಳಿಸಿಕೊಂಡು ಜಪಿಸುವುದನ್ನು ಕಂಡಿದ್ದೆ. ನಾಲ್ಕೈದು ಪುರಶ್ಚರಣದಲ್ಲಿ ಮಂತ್ರ ಸಿದ್ಧಿಯಾದಂತೆ ಸ್ಲೇಟಿನ ಮೇಲೆ ಮೂಡಿದ ಪಸೆಯಲ್ಲಿ (ಇವರದೇ ಅಂಗೈಯ ಹಬೆ) ಸ್ಲೇಟಿನಲ್ಲಿದ್ದ ಹಳೇ ಬರಹಗಳನ್ನು ಚಂದಕ್ಕೆ ಒರೆಸುತ್ತಿದ್ದರು. (ಇಂದು ಬಿಡಿ, ಹಲಗೆ ಬಳಪವ ಪಿಡಿಯದಗ್ಗಳಿಕೆಯವರೇ ಎಲ್ಲ) ಆದರೆ ವಾಸ್ತವದಲ್ಲಿ ಹಾಗಲ್ಲ “ಪಸೆ ಎಲ್ಲಿದೆಯೋ ಅಲ್ಲಿಗೆ ಕಪ್ಪೆಗಳು ಆಕರ್ಷಿತವಾಗುತ್ತವೆ. ಬಾಯಿಯಿಂದ ನಾವು ನೀರು ಕುಡಿದಂತೇ ಕೆಲವು ಜಾತಿಯ ಕಪ್ಪೆಗಳಂತು ತೊಡೆಯ ತಳದ ಚರ್ಮದಿಂದಲೂ ನೀರನ್ನು ದೇಹವ್ಯವಸ್ಥೆಗೆ ಸೇರಿಸಿಕೊಳ್ಳುತ್ತವೆ” ಎನ್ನುತ್ತಾರೆ ಡಾ| ಕೆ.ವಿ. ಗುರುರಾಜ್. ಅವರ ಎರಡು ದಿನಗಳ (ಆಗಸ್ಟ್ ೨೫, ೨೬) ಕಪ್ಪೆ ಕಮ್ಮಟದಲ್ಲಿ ಮುಂದುವರಿಯುತ್ತಾ ನನಗೆ ಇನ್ನೂ ಹೆಚ್ಚು ತಿಳಿವು ಮೂಡಿತು. ನಮ್ಮನೆಯಲ್ಲಿ ತೊಳೆದಿಟ್ಟ ತಟ್ಟೆಗಳ ಸ್ಟ್ಯಾಂಡಿನಲ್ಲಿ ತಟ್ಟೆಯ ಪಸೆಗೋ ಲೋಟದ ಹಸಿಗೋ ವರ್ಷದ ಕೆಲವು ತಿಂಗಳುಗಳಲ್ಲಿ ಕೆಲವು ನಿಶಾಚರಿ ಕಪ್ಪೆಗಳು ನಿಯತವಾಗಿ ಬಂದು ಕುಳಿತು ‘ನಿದ್ರೆ’ಗೆ ಜಾರುತ್ತಿದ್ದವು. ಹಾಗೆಯೇ ಕೆಲವು ಮನೆ ಗೋಡೆಯ ಯಾವುದೋ ಒಳ ಮೂಲೆಯಲ್ಲಿ (ನಮಗರಿವಾಗದ ತೇವಾಂಶ ಗುರುತಿಸಿ) ಧ್ಯಾನಸ್ಥವಾಗುತ್ತಿದ್ದದ್ದೂ ಇತ್ತು. ಇವು ಕೇವಲ ಗಲೀಜು ಮಾಡಲು ವಕ್ಕರಿಸುವವಲ್ಲ ಎಂಬ ಅರಿವಿನ ದೀಪವೂ ಝಗ್ಗೆಂದಿತು! (ಅದೊಂದು ಶುಭ ಪ್ರಾತಃಕಾಲ ದೇವಕಿ ಲೋಟದಲ್ಲಿದ್ದ ಅಂಥಾ ಒಂದು ‘ಪುಟ್ಟಪ್ಪ’ನನ್ನು ಗಮನಿಸದೆ ಬಿಸಿ ಕಾಫಿ ಹಾಕಿ ನನಗೆ ಕೊಟ್ಟಿದ್ದಳು. ನಾನು ಅರಿವಿಲ್ಲದೆ ಬಾಯಿಗಿಟ್ಟದ್ದಕ್ಕೆ ಕಾಫಿ ಕೆಫೆಡೇಯ ಲಭ್ಯ ನೂರಾ ಒಂದು ಕಾಫಿ ವೈವಿಧ್ಯದ ಮೇಲಿನೊಂದು ಹೊಸ ರುಚಿ ನೋಡಲು ಸಾಧ್ಯವಾಯ್ತು!) ಹೊಸ ಅರಿವಿನ ಬೆಳಕಿನ ಮೂಲ – ಯಾರೀ ಕಪ್ಪೆ-ಪಂಡಿತ? ಏನೀ ಕಪ್ಪೆ-ಕಮ್ಮಟ? ಕೋಟಂಬೈಲು ವಾಸುದೇವ ಗುರುರಾಜ ಅಥವಾ ಡಾ| ಕೆ.ವಿ. ಗುರುರಾಜ ಇನ್ನೂ ಸೂಕ್ಷ್ಮವಾಗಿ ಹೇಳುವುದಿದ್ದರೆ ಕೆವಿಜಿ, ಇವರ ಬಾಲ್ಯ ಮತ್ತು ವಿದ್ಯಾಭ್ಯಾಸದ ನೆಲೆ ಶಿವಮೊಗ್ಗ. ಜೀವಶಾಸ್ತ್ರದ ವಿಶೇಷ ಆಸಕ್ತಿಯಲ್ಲೇ ಇವರು ಸೀಬೀಜೆಡ್ ಐಚ್ಛಿಕಗಳನ್ನೇ (ರಸಾಯನ, ಸಸ್ಯ ಮತ್ತು ಪ್ರಾಣಿಶಾಸ್ತ್ರ) ಆರಿಸಿಕೊಂಡು ಸ್ನಾತಕರಾದರು. ಮುಂದೆ ಕುವೆಂಪು ವಿವಿನಿಲಯದಿಂದ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ತದಂಗವಾದ ಪ್ರೌಢ ಪ್ರಬಂಧಕ್ಕೆ ಆರಿಸಿಕೊಂಡ ವಿಷಯ ಕಪ್ಪೆ. ಮುಂದುವರಿದು ಸಂಶೋಧನಾ ವಿದ್ಯಾರ್ಥಿಯಾಗಿ ನೋಂದಾಯಿಸಿಕೊಂಡರು. ಅಲ್ಲಿ ಇವರ ಮಾರ್ಗದರ್ಶಿಗೆ ಇವರಿಗೆ ಬಾಲ್ಯದಿಂದ ಬೆಳೆದು ಬಂದ ಹವ್ಯಾಸವಾದ ಪಕ್ಷಿವೀಕ್ಷಣೆಯ ಪರಿಚಯವಿತ್ತಂತೆ. ಸಹಜವಾಗಿ ಅವರು ಪಕ್ಷಿ ವಿಷಯವನ್ನೇ ಸೂಚಿಸಿ ಒತ್ತಾಯಿಸಿದರೂ ಇವರು ಆರಿಸಿಕೊಂಡದ್ದು ಕಪ್ಪೆಯನ್ನೇ (ನಿಕ್ಟಿ ಬಾಕ್ಟಕಸ್ ಕರ್ನಾಟಕೆನ್ಸಿಸ್ – ನಿಶಾಚರ ಜಾತಿಯ ಒಂದು ಕಪ್ಪೆ. ವೈಜ್ಞಾನಿಕ ವಿವರಣೆ ಸಹಿತ ಲೋಕಕ್ಕೆ ಮೊದಲು ಪರಿಚಯಿಸಿದ ಖ್ಯಾತಿ ಇವರದೇ). ಅಸ್ಥಿರತೆಗೆ ಪರ್ಯಾಯವಾಗಿ ಗಾದೆಯೇನೋ ‘ಕಪ್ಪೆ ತೂಗಿದ ಹಾಗೆ’ ಎಂದರೂ ಕೆವಿಜಿಯ ಹಕ್ಕಿಯಿಂದ ಕಪ್ಪೆಗೆ ಕುಪ್ಪಳಿಕೆ ವಿಕ್ಷಿಪ್ತ ನಡೆಯಲ್ಲ. ಇವರು ‘ಯೋಗ್ಯತೆ’ಯ ಬಲದಲ್ಲಿ ಯಾವುದೋ ಶಿಕ್ಷಣ ಸಂಸ್ಥೆ ಸೇರಿ ಪಾಠಪಟ್ಟಿಯಗುಂಟ ಓಡುವ ರೈಲಾಗಬಹುದಿತ್ತು. ಬದಲು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಬೆಂಗಳೂರು ಶಾಖೆಯನ್ನು ಸಂಶೋಧನಾ ಆಸಕ್ತಿಯಲ್ಲೇ ಆಯ್ದುಕೊಂಡರು. ಪಶ್ಚಿಮ ಘಟ್ಟದ ಮಧ್ಯಭಾಗದಲ್ಲಿ (ಮುಖ್ಯವಾಗಿ ಶರಾವತಿ ಕೊಳ್ಳ) ಕಪ್ಪೆಗಳ ಅಧ್ಯಯನದ ಮೂಲಕವೇ ಪರಿಸರ ಛಿದ್ರೀಕರಣದ ಸ್ಥಿತಿಯನ್ನು ಇವರು ಗಾಢವಾಗಿ ಅಧ್ಯಯನ ಮಾಡಿದ್ದಾರೆ. ಆ ಆರು ವರ್ಷಗಳಲ್ಲಂತೂ ಮನೆ, ಪ್ರಯೋಗಾಲಯಗಳಿಗೆ ಭೇದವೆಣಿಸದೇ ಕಪ್ಪೆ ಇವರನ್ನಾವರಿಸಿತ್ತಂತೆ. ಅದಕ್ಕವರೇ ಕೊಡುವ ಉದಾಹರಣೆಗೆ ಮೊದಲೊಂದು ಉಪಕಥೆ. ಅದ್ಯಾರೋ ವಿಜ್ಞಾನಿ ಪ್ರಯೋಗಾಲಯದಲ್ಲಿ ಕತ್ತರಿಸಲು ನಿಶ್ಚೇಷ್ಟಿತ ಕಪ್ಪೆ ಇಟ್ಟು, ಏನೋ ಓದಿಕೊಂಡಿದ್ದನಂತೆ. ಸಂಜೆಯಾಗುತ್ತಾ ಸಹಾಯಕ ಬಿಸಿ ಬೋಂಡಾ ಕಾಫಿ ಇಟ್ಟು ಹೋದನಂತೆ. ತಿಂಡಿ ತಿನ್ನುತ್ತಾ ಕಾಫಿ ಹೀರಿ ಮುಗಿಸುವುದರೊಳಗೆ ಓದು ಮುಗಿದಿತ್ತಂತೆ. ಕೈ ಒರೆಸಿಕೊಂಡು ಕತ್ತರಿ ಹಿಡಿಯುವಾಗ ಮೇಜಿನ ಮೇಲೆ ಬೋಂಡಾ ಮಾತ್ರ ಇತ್ತಂತೆ! ಕೆವಿಜಿ ತನ್ಮಯತೆಯ ತೀವ್ರತೆ ಹೀಗೇ ಇದ್ದಿರಬೇಕೆನ್ನುವುದಕ್ಕೆ ಈಗ ಅವರೇ ಹೇಳಿದ ಘಟನೆಯ ಉಲ್ಲೇಖ ಇಲ್ಲಿ ಅಪ್ರಸ್ತುತವಲ್ಲ ಎಂದೇ ಭಾವಿಸುತ್ತೇನೆ. ಆ ದಿನಗಳಲ್ಲಿ ಒಮ್ಮೆ ರಾತ್ರಿ ನಿದ್ರೆಯಾಳದಲ್ಲಿ ಇವರು ಎದ್ದು ಕುಳಿತು ಸಹಾಯಕನ ಬಳಿ ದೂರಿಕೊಂಡರಂತೆ “ಇದೇನು, ಹಾಸಿಗೆಯಲ್ಲೆಲ್ಲಾ ಕಪ್ಪೆ.” ಸರ್ವಂ ಮಂಡೂಕಮಯಂ ಜಗತ್! ಕೆವಿಜಿ ವೈಜ್ಞಾನಿಕ ಸಾಧನೆಗಳ ವಿವರಗಳನ್ನು ನನ್ನ ಪ್ರಬಂಧದ ಶೈಲಿಗೆ ಒಲಿಸುವ ಸಾಹಸ ನಾನು ಮಾಡಲಾರೆ. ಬದಲು ಅವನ್ನು ನೀವೇ ಅವಶ್ಯ ಅವರ ಜಾಲತಾಣದಲ್ಲಿ ಓದಲು ಇಲ್ಲಿ ಚಿಟಿಕೆ ಹೊಡೆಯಿರಿ. www.gururajakv.net ಮುಂದುವರಿದು ಅಲ್ಲೇ ಅವರ ಜಾಲತಾಣ ಮತ್ತು ಕನ್ನಡ ಸ್ಲೈಡ್ ಪ್ರದರ್ಶನಗಳ ಮೂಲಕ ಕಪ್ಪೆ ಪಾಠದ ಚಂದವನ್ನೂ ಅನುಭವಿಸಬಹುದು. ಕೆವಿಜಿ ಕಳೆದ ಮೂರು ವರ್ಷಗಳಿಂದ ಅದೇ ಸಂಸ್ಥೆಯಲ್ಲಿ, ತುಸು ಭಿನ್ನ ಹೊಣೆಗಾರಿಕೆಯಲ್ಲಿ (ನಗರ ಪರಿಸರ ಮತ್ತು ಯೋಜನೆ) ಕಾರ್ಯ ನಿರ್ವಹಿಸುತ್ತಿದ್ದರೂ ಕಪ್ಪೆಯ ಬೆನ್ನು ಬಿಟ್ಟಿಲ್ಲವೆಂಬುದಕ್ಕೆ ಸಾಕ್ಷಿಯಾಗಿ ಈಗಷ್ಟೇ ಇವರದೊಂದು ಪುಸ್ತಕ – Pictorial guide to Frogs & Toads of the Western Ghats ಕೂಡಾ ಪ್ರಕಟವಾಗಿದೆ.

ಚಿಟ್ಟೆಗಳು

ಕಪ್ಪೆಗಳು ಹೆಚ್ಚಾಗಿ ನಿಶಾಚರಿಗಳು. ನಮ್ಮ ಮನೆಯ ಮಂಡೂಕ ಧ್ಯಾನವೂ ಪ್ರತೀ ಸಂಜೆ ಭಂಗವಾಗಿ, ಮುಂಜಾನೆ ಮತ್ತದೇ ಕಪ್ಪೆ, ಅದೇ ಜಾಗವೆಂದು ಮುಂದುವರಿಯುತ್ತಿತ್ತು. ನಮ್ಮ ಚೊಕ್ಕಟ ಪ್ರಜ್ಞೆ ಇಂಥವನ್ನು ಕಳೆದು ಒಗೆಯುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿತ್ತು. ಪ್ರತಿ ಬೆಳಿಗ್ಗೆ ಅದು ಬರುತ್ತಿದ್ದಂತೆ ದೇವಕಿಯೂ ಅದರ ಹಿಂದೆ ಎರಡು ಕುಪ್ಪಳಿಸಿ (ತಧಿಂಗಿಣ ತೋಂ, ತಧಿಂಗಿಣ ತೋಂ) ಪ್ಲ್ಯಾಸ್ಟಿಕ್ ತೊಟ್ಟೆಯಲ್ಲಿ ಬಂಧಿಸಿ, ವಿರಾಮದಲ್ಲಿ ಹೊರಗೆ, ದೂರ ಎಸೆದದ್ದಿತ್ತು. (ಒಂದೆರಡು ಬಾರಿ ಹಿಡಿಸೂಡಿ ಪೆಟ್ಟು ಕೊಟ್ಟು ತೆಂಗಿನಗುಂಡಿಗೆ ಗೊಬ್ಬರ ಮಾಡಿದ್ದೂ ಇತ್ತು!) ಆದರೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತೆ ಮರುಬೆಳಿಗ್ಗೆ ಮತ್ತದೇ ಕಪ್ಪೆ ಮತ್ತದೇ ಜಾಗದಲ್ಲಿ ಹಾಜರ್! ನೆನಪು ಬುದ್ಧಿಯ ಅಂಗ. ನಾವು ಮಹಾಬುದ್ಧಿವಂತರು, ಜೀವವಿಕಾಸ ಪಥದಲ್ಲಿ ಮನುಷ್ಯನಿಂದ ಹಿಂದಿನ ಬಹುತೇಕ ಜೀವಿಗಳನ್ನು ‘ಬುದ್ಧಿ’ಯಿಲ್ಲದವು ಎಂದು ತೀರ್ಮಾನಿಸಿಯಾಗಿದೆ. ಆದರೆ ಹಾಗಲ್ಲ, ಅದನ್ನು ಮೀರಿದ ಸ್ಥಿತಿ – ಅಂತಃಬೋಧೆ, ಇರುತ್ತದೆ ಎನ್ನುವದಕ್ಕೆ ಖಂಡಾಂತರ ಪಯಣಿಸುವ ಹಕ್ಕಿ, ತಲೆಮಾರುಗಳನ್ನೇ ನೀಗಿಕೊಂಡು ವಲಸೆ ಹೋಗುವ ಚಿಟ್ಟೆಗಳು ಇತ್ಯಾದಿ ಧಾರಾಳ ಕೇಳಿದ್ದೇವೆ. ಕಪ್ಪೆಗಳೂ ಅದಕ್ಕೊಂದು ಸಣ್ಣ ಸಾಕ್ಷಿ. ಭೂಮಿಯ ಮೇಲೆ ಕೇವಲ ೨೦೦,೦೦೦ ವರ್ಷಗಳಷ್ಟು ಸಣ್ಣ ಪ್ರಾಯದ ನಾವು, ೨೧೦,೦೦೦,೦೦೦ ವರ್ಷಗಳ ಹಿರಿಯ ಪ್ರಾಯದ ಕಪ್ಪೆಗಳ ಪ್ರಾಥಮಿಕ ಪರಿಚಯವನ್ನಾದರೂ ಮಾಡಿಕೊಳ್ಳಬೇಕೆಂದೇ ಮೊನ್ನೆ ಈ ಕಮ್ಮಟ ನಡೆಸಿದೆವು. ಇನ್ಫೊಸಿಸ್ ಕಂಪೆನಿಯಲ್ಲಿ ಗಣಕದ ಇಲಿಬಾಲ ಹಿಡಿದ ಯುವ ಬಳಗದ ಎರಡು ಮೂರು ಜನಕ್ಕೆ ಅದ್ಯಾವ ಮಾಯೆಯಲ್ಲೋ ಈ ಕಪ್ಪೆ ಬಾಲ ಹಿಡಿಯುವ ಬುದ್ಧಿ ಬಂತು. ಜಾಲಾಡಿ ಕೆವಿಜಿಯನ್ನು ಮೊದಲು ಬಲೆಗೆ ಹಾಕಿದರು. ಮತ್ತೆ ಈ ವಲಯದ ವನ್ಯಪ್ರೇಮೀ ಬಳಗದ ಅಘೋಷಿತ ನಾಯಕ, ಗೆಳೆಯ – ನಿರೇನ್ ಜೈನ್ ಸೂಚನೆಯ ಮೇರೆಗೆ ತಂಡ ಕಟ್ಟಲು ಮುಂದಾದರು. ದೀಪಿಕಾ (ಕ್ಯಾಪ್ಟನ್ ಅನ್ನಿ!) ನನಗೂ ಚರವಾಣಿಸಿದರು, “ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪೆ ಕಮ್ಮಟ ನಡೆಸುತ್ತಿದ್ದೇವೆ. ತಲಾ ಖರ್ಚು ಸುಮಾರು ಎರಡು ಸಾವಿರ ರೂಪಾಯಿ. ನೀವು ಬರ್ತೀರಾ?” ಎಸೆದ ದುಡ್ಡಿಗೆ ಅಬ್ಬರದ ಸವಲತ್ತು, ರಂಗುರಂಗಿನ ಪಾಠಪಟ್ಟಿ ತೋರಿ, ಕೊನೆಗೆ ಪ್ರಮಾಣಪತ್ರ ಕೊಡುವ ಕಾರ್ಖಾನೆಗಳು ಇಂದು ಎಲ್ಲೆಲ್ಲೂ ಇವೆ. ಅವಕ್ಕೆ ಹೋಲಿಕೆಯಲ್ಲಿ ಇಲ್ಲಿನ ನಿಜ ಜ್ಞಾನಕ್ಕೆ ಎರಡು ಸಾವಿರ ಏನೂ ಅಲ್ಲ. ಆದರೆ ವೈಯಕ್ತಿಕವಾಗಿ ನನ್ನ ಹದದ ಕುರಿತು ಯೋಚಿಸಿದೆ. ಹಾವು, ಹಕ್ಕಿ, ಚಿಟ್ಟೆ, ಜೇಡ, ಇರುವೆ, ಹುಲಿ, ಆನೆಯೇ ಮುಂತಾದವಲ್ಲದೆ ಅಸಂಖ್ಯ ಸಸ್ಯ ವೈವಿಧ್ಯಗಳಲ್ಲೂ ನುರಿತ, ಅಧ್ಯಯನ ಎಂದೂ ಮುಗಿಸದ ಹಲವರ ಆತ್ಮೀಯವಾದ ಪರಿಚಯ, ಒಡನಾಟ ನನಗಿದೆ. ಅವೆಲ್ಲ ಮತ್ತು ಹೆಚ್ಚಿನವನ್ನು ನಾನು ಪ್ರೀತಿಸುವುದೂ ನಿಜ. ಆದರೆ ವಿವರಗಳಲ್ಲಿ ಹಿಡಿದಿಟ್ಟುಕೊಳ್ಳಲಾಗದ ಯೋಗ್ಯತೆ ನನ್ನದು. ಮತ್ತೆ ಕುದುರೆಮುಖ ವನ್ಯವಲಯ ನಾನು ನೋಡಿದ್ದೇನೆ. ಹಾಗಾಗಿ ವೆಚ್ಚ ಒಂದನ್ನೇ ನೆಪ ಮಾಡಿ ದೀಪಿಕಾಳಿಗೆ “ಇಲ್ಲ”, ಎಂದೇ ಉತ್ತರಿಸಿಬಿಟ್ಟೆ. ವನಧಾಮಗಳು ಪ್ರಾಣಿಸಂಗ್ರಹಾಲಯಗಳ ವಿಸ್ತೃತ ರೂಪ ಎಂಬ ಅತಿರೇಕಕ್ಕೆ ದೇಶದ ಪರಮೋಚ್ಛ ನ್ಯಾಯಾಲಯ ಈಚೆಗೆ ಬಲವಾದ ತಡೆಗೋಡೆ ಕಟ್ಟಿತು. ಕ್ಷಣಿಕ ಲಾಭದ ಗುರಿಯಿಟ್ಟ ಅಸ್ಥಿರ ಸರಕಾರ, ಔಚಿತ್ಯ ಮತ್ತು ನೈತಿಕತೆಗೆ ಎರವಾಗಿ ದುಡ್ಡೊಂದನ್ನೇ ಲಕ್ಷ್ಯಿಸುವ ಪ್ರವಾಸೋದ್ದಿಮೆ, ‘ಸ್ವಾತಂತ್ರ್ಯ’ದ ಪರಿಕಲ್ಪನೆಯನ್ನು ಸದಾ ‘ಬಾಧ್ಯತೆ’ಯ ಕಡಿವಾಣ ಕಳಚಿಯೇ ಅನುಭವಿಸಲು ಬಯಸುವ ಜನ ಸೇರಿ ಗೋಡೆಗೆ ಲಗ್ಗೆ ಹಾಕಿದ್ದಾರೆ. ಮಾತು, ಪ್ರಾತಿನಿಧ್ಯವೇ ಇಲ್ಲದ ವನ್ಯದ ಪರವಾಗಿ ಉಲ್ಲಾಸ ಕಾರಂತರಂತವರು ನ್ಯಾಯಾಲಯದ ನಿಷೇಧಾಜ್ಞೆ ಬೆಂಬಲಿಸಿ, ಅದರ ಆಶಯದೆಡೆಗೆ ವಿವೇಚನೆಯ ಕೈಕಂಬ ಕೊಟ್ಟದ್ದೂ ಕಾಣುತ್ತಾ ಇದ್ದೇವೆ. ಅವೆಲ್ಲ ಏನೇ ಇರಲಿ, ಇಲ್ಲಿ ಖರ್ಚು, ವ್ಯವಸ್ಥೆ ಅಂದಾಜಿಸಿಕೊಂಡು ಭಗವತೀ ಪ್ರಕೃತಿ ಶಿಬಿರಕ್ಕೆ ಹೊರಟ ನಮ್ಮ ಕಪ್ಪೆ ಗೆಳೆಯರು ಸೋಲಬಾರದಲ್ಲಾ ಎಂಬ ಯೋಚನೆ ಒಮ್ಮೆಗೇ ನನಗೆ ಬಂತು. ದೀಪಿಕಾರಿಗೆ ಫೋನಾಯಿಸಿ, ಪರಿಸ್ಥಿತಿ ವಿವರಿಸಿದೆ. ಬದಲಿ ಆಯ್ಕೆಯಾಗಿ ಬಿಸಿಲೆ ಹಳ್ಳಿ ಮತ್ತು ನಮ್ಮ (ಕೃಶಿ ಮತ್ತು ನನ್ನ) ಅಶೋಕವನ ತೆರೆದಿಟ್ಟೆ. ಆಕೆ ನಿರೇನ್ ಮತ್ತು ಕೆವಿಜಿ ವಿಚಾರಿಸಿಕೊಂಡು ಬಿಸಿಲೆಯನ್ನು ಒಪ್ಪಿಕೊಂಡರು. (ಈಗ ಚೆಂಡು ನನ್ನಂಗಳದಲ್ಲಿ!) ಬಿಸಿಲೆಯಲ್ಲಿ ಸುಮಾರು ಆರು ವರ್ಷಗಳ ಹಿಂದೆ ನಾನು ಒಂದು ತುಂಡು ಕಾಡು ಕೊಂಡೆ; ಸಹಜವಾಗಿ ಜಮೀನುದಾರ ಆದೆ. (ನಿಮಗೆ ಗೊತ್ತು. ಇಲ್ಲದವರು, ವಿವರಗಳಿಗೆ ಮೇಲಿನ ವೀಡಿಯೋ ನೋಡಿ) ಹತ್ತಾರು ವರ್ಷಗಳ ಹುಲ್ಲು, ಗಿಡ, ಬಳ್ಳಿಗೆ ಆರೇ ವರ್ಷಗಳಲ್ಲಿ ನಾನು ಯಜಮಾನ, ವಕ್ತಾರ! ನೂರಾರು ವರ್ಷಗಳ, ಹತ್ತಾಳು ತಬ್ಬುವ ಮಹಾಮರಗಳೂ ಇಲ್ಲಿವೆ. ಸಾವಿರಾರು ವರ್ಷಗಳ ಜೀವವೈವಿಧ್ಯ – ಆನೆ ಹುಲಿ ಕಾಟಿ ಚಿರತೆ ಬಿಡಿ, ನಶಿಸಿಯೇ ಹೋಗಿದೆ ಎಂದು ತಿಳಿಯಲಾಗಿದ್ದ ಮರನಾಯಿಯೂ ಇಲ್ಲಿದೆ! ಅವೆಲ್ಲ ಮತ್ತು ಬೇಸಗೆಯಲ್ಲೂ ಬತ್ತಲಾರದ ಗಂಗೆ, ಬಂಡೆ, ಗುಡ್ಡ, ಕಣಿವೆ ಮುಂತಾದ ಭೌಗೋಳಿಕ ಸತ್ಯಗಳನ್ನು ಪ್ರಾಯದಲ್ಲಿ ನನಗಿಂತಲೂ ಸ್ವಲ್ಪ ಹಿರಿದಾದ ಕೇವಲ ಸಾಮಾಜಿಕ ದಾಖಲೆಗಳ (ಸ್ವತಂತ್ರ ಭಾರತದ್ದು) ಆಧಾರದಲ್ಲಿ ಏನೂ ಮಾಡಲು ಅಧಿಕಾರಿ ನಾನು! ಕೋಟ್ಯಂತರ ವರ್ಷಗಳ ಮಹಾಮಥನದಲ್ಲಿ ನೀರಿನಲ್ಲೆದ್ದ ಜೀವಾಣು ನೆಲಕ್ಕೂ ಮಗುಚಿಕೊಂಡು ಚರಾಚರ, ಸಸ್ಯ ಪ್ರಾಣಿ ವೈವಿಧ್ಯವಾಗಿ ವಿಕಸಿಸಿ, ವಿಪುಲವಾದ ಪಟ್ಟಿಯ ಕೊನೆಯಲ್ಲಿ, ಅಂದರೆ ಮೊನ್ನೆ ಮೊನ್ನೆ ಕಂದೆರೆದ ಮನುಷ್ಯಜೀವಿಗೂ ಸಮೃದ್ಧ ಅವಕಾಶಗಳನ್ನು ಕೊಟ್ಟ ಅದ್ಭುತ ವ್ಯವಸ್ಥೆಯನ್ನು ಉಳಿಸುವ ಅಳಿಸುವ ಮಹಾಮಹಿಮನು, ಹುಟ್ಟಿ ಆರು ದಶಕವೂ ಆಗದ ನಾನೇ!! ಈ ಎಲ್ಲವನ್ನೂ ಬುದ್ಧಿಪೂರ್ವಕವಾಗಿ ಗ್ರಹಿಸಿಕೊಂಡು, ಸ್ವಲ್ಪವಾದರೂ ಅರ್ಥಮಾಡಿಕೊಳ್ಳಲು ನಡೆಸಿದ ಕೆಲವು ಕಿರು ಪ್ರಯತ್ನಗಳಲ್ಲಿ ಈ ಕಪ್ಪೆ ಕಮ್ಮಟ ಇನ್ನೊಂದೇ ಆರಂಭ ಬಿಂದುವಾಗಿ ಸೇರಿಕೊಂಡಿತು. ನಿರೂಪಣೆಯ ಸೌಕರ್ಯಕ್ಕೆ ಆತಿಥೇಯನ ಸ್ಥಾನದಲ್ಲಿ ನನ್ನನ್ನು ಕಂಡರೂ ನನ್ನೆಲ್ಲ ಕಲಾಪಕ್ಕೆ ಸಹಜ ಪಾಲುದಾರಳಾದ ದೇವಕಿಯೂ ಗೆಳೆಯ ಸುಂದರರಾಯರೂ ಸಮಪಾಲಿನವರು ಎನ್ನುವುದನ್ನು ಯಾರೂ ಮರೆಯಬಾರದು. ಬಿಸಿಲೆಯಲ್ಲಿ ಸದಾ ನಮ್ಮ ಊಟ, ತಿಂಡಿಗಳ ರುಚಿ ಶುಚಿಗೆ ಒದಗುವುದು ದೇವೇಗೌಡ ಕಮಲಮ್ಮರ ತುಳಸಿ ಹೋಟೆಲ್. ತಿಂಗಳ ಹಿಂದೆ ನಾವು ಮೊದಲ ಬಾರಿಗೆ ಬಿಸಿಲೆ ಹಳ್ಳಿಯಲ್ಲೇ ಒಂದು ರಾತ್ರಿ ತಂಗಲು ಹೋದಾಗ ನಮ್ಮನ್ನು ಬೆಚ್ಚಗುಳಿಸಿಕೊಂಡದ್ದು ಅರಣ್ಯ ಇಲಾಖೆ ಮತ್ತು ಗ್ರಾಮ ಅರಣ್ಯ ಸಮಿತಿಯ ಜಂಟಿ ಆಡಳಿತದಲ್ಲಿರುವ ಸಮುದಾಯ ಭವನ. ಎರಡನ್ನೂ ಶಿಬಿರಕ್ಕೆ ಸಜ್ಜುಗೊಳಿಸಲು ಕೆಲವು ದಿನ ಮೊದಲೇ (೧೬-೮-೧೨) ಬೆಳಿಗ್ಗೆ ನಾನು ರಾಯರೂ ಮಳೆಗೆ ಸಜ್ಜಾಗಿ, ಬೈಕೇರಿ ಹೊರಟೆವು. ಅರಣ್ಯ ಇಲಾಖೆಯ ಭಾಷೆಯಲ್ಲಿ ಹಾಸನ ವಿಭಾಗದೊಳಗಿನ ಯಸಳೂರು ವಲಯಕ್ಕೆ ಸೇರುತ್ತದೆ ಬಿಸಿಲೆ ಕಾಯ್ದಿರಿಸಿದ ಅರಣ್ಯ. ಯಸಳೂರು ನಮ್ಮ ಪ್ರಥಮ ಲಕ್ಷ್ಯ. ಸ್ವಲ್ಪ ಸುತ್ತು ದಾರಿಯೇ ಆದರೂ ಚುರುಕಾಗಿ ಓಡುವ ಅನುಕೂಲಕ್ಕಾಗಿ ನಾವು ಶಿರಾಡಿ ಘಾಟಿಯನ್ನೇ ಆರಿಸಿಕೊಂಡಿದ್ದೆವು. ಕಳೆದ ರಿಪೇರಿ ಚೆನ್ನಾಗಾಗಿರುವುದರಿಂದಲೋ ಆವರೆಗೆ ಮಳೆ ಕಡಿಮೆಯಾಗಿ ಇದ್ದುದರಿಂದಲೋ ದಾರಿ ಹೆಚ್ಚು ತೊಂದರೆ ಕೊಡಲಿಲ್ಲ (ಈಗ ನಂಬಬೇಡಿ). ಸಕಲೇಶಪುರಕ್ಕೂ ಐದು ಕಿಮೀ ಮೊದಲು ಮಂಜರಾಬಾದ್ ಕೋಟೆಯ ಬಳಿ ಬಲಕ್ಕೆ ಕವಲಾದೆವು. ನಾವೇ ಎಷ್ಟು ಬೇಗ ಎಂದುಕೊಂಡರೂ ಕೊಡ್ಲಿಪೇಟೆಗಾಗಿ ಯಸಳೂರು ತಲಪುವಾಗ ಹನ್ನೊಂದು ಗಂಟೆ. ಮರದ ವಿಪುಲತೆ ಮತ್ತು ವನ್ಯಪ್ರಾಣಿಗಳ, ಮುಖ್ಯವಾಗಿ ಆನೆಯ ಕಲಾಪಗಳ ವಿಲೇವಾರಿ ಹೆಚ್ಚಾದ ಈ ವಿಭಾಗದಲ್ಲಿ ಅಧಿಕಾರಿ ಪೂರ್ಣಾವಧಿ ಕಛೇರಿಯಲ್ಲೇ ಸಿಗುತ್ತಾರೆಂದು ನೆಚ್ಚುವಂತಿಲ್ಲ. ಸಹಜವಾಗಿ ಅಂದು ಒಂಬತ್ತೂವರೆಗೆ ಕಛೇರಿಯಲ್ಲಿ ಮುಖ ತೋರಿಸಿ ಹೊರಗೆ ಹೋಗಿದ್ದ ಅಧಿಕಾರಿ – ವಿನಯಚಂದ್ರ, ಮತ್ತೆ ಎತ್ತ ಹೋದರು, ಎಂದು ಮರಳುತ್ತಾರೆ ಎನ್ನುವುದು ಅಲ್ಲಿದ್ದ ಗುಮಾಸ್ತೆಗೆ ತಿಳಿದಿರಲಿಲ್ಲ. ಅವರ ಚರವಾಣಿ “ಚಾಲನೆಯಲ್ಲಿ ಇಲ್ಲ”ವಾದರೆ, ಅವರ ವಾಹನದ ಚಾಲಕನದು “ಸಂಪರ್ಕವಲಯದ ಹೊರಗಿತ್ತು.” ಸ್ವಾತಂತ್ರ್ಯೋತ್ಸವದ ರಜೆಯಲ್ಲಿ ಹೋಗಿದ್ದ ಅವರ ಕಛೇರಿ ಸಹಾಯಕ ಸಕಲೇಶಪುರದಿಂದ ಹನ್ನೊಂದೂವರೆಯ ಸುಮಾರಿಗೆ ಬಂದವರೇ ನಮ್ಮನ್ನು ವಿಚಾರಿಸಿಕೊಂಡರು. ಅವರ ಸೂಚನೆಯಂತೆ ಹಾಸನದಲ್ಲಿ ನ್ಯಾಯಾಲಯ ಕಲಾಪಗಳಿಗೆ ಹೋಗಿರಬಹುದಾದ ಸಾಹೇಬರನ್ನು (ವಿನಯಚಂದ್ರ) ನಾವು ಮತ್ತೆ ಕಾದು ಕೂರಲಿಲ್ಲ. ಬಿಸಿಲೆಗೆ ಹತ್ತಿರದ ವಣಗೂರಿನಲ್ಲೇ ಇರುವ ಫಾರೆಸ್ಟರ್ ರಮೇಶ್ ಭೇಟಿಯಾದೆವು. ಅವರು ಸಮುದಾಯ ಭವನ ಒದಗಿಸುವುದನ್ನು ಒಪ್ಪಿದರೂ ಬಾಡಿಗೆಯ ಬಗ್ಗೆ ಏನೂ ಹೇಳಲಿಲ್ಲ. ಬದಲು ಈ ವಲಯಕ್ಕೆ ನಕ್ಸಲರು ಪ್ರವೇಶಿಸಿರುವ ವದಂತಿಗಳನ್ನು ಹೇಳಿದರು. ಹಾಗಾಗಿ ರೇಂಜರ್ ಅವರಿಗೆ ಔಪಚಾರಿಕ ಪತ್ರ ಬರೆಯಲೂ ಮತ್ತವರ ಸೂಚನೆ ಮೇರೆಗೆ ತಾವೊಂದಿಬ್ಬರು ಎರಡೂ ದಿನ ಹಾಜರಾಗುವ ಸಾಧ್ಯತೆಗಳನ್ನು ಹೇಳಿದರು. ಎಲ್ಲಕ್ಕೂ ತಲೆಯಾಡಿಸಿ, ನಾವು ರಾತ್ರಿಗೆ ಬಿಸಿಲೆಯ ಸಮುದಾಯ ಭವನವನ್ನು ಸೇರಿಕೊಂಡೆವು. ಮರುದಿನ ಬೆಳಿಗ್ಗೆ ಊಟವಸತಿಯ ಸೂಚನೆಗಳನ್ನಷ್ಟು ಕೊಟ್ಟು ಬಿಸಿಲೆ ಘಾಟಿಯಲ್ಲೇ ಮಂಗಳೂರಿಗಿಳಿದೆವು. ಐತಿಹಾಸಿಕ ಕಾಲದಲ್ಲಿ ಘಟ್ಟ ಇಳಿಯುವ ಬಹುತೇಕ ಪಾದಚಾರಿಗಳಿಗೆ, ಸಾಗಣೆಯ ಎತ್ತಿನ ಗಾಡಿಗಳಿಗೆ (ಅಪರೂಪಕ್ಕೆ ಅರಸರ ಸಾರೋಟೂ ಇದ್ದಿರಬಹುದು) ಕೊನೆಯ ನೆಲೆ ಬಿಸಿಲೆ. ಸಹಜವಾಗಿ ಅಲ್ಲೊಂದು ವಿಸ್ತಾರ ವಠಾರದಲ್ಲಿ ಛತ್ರ, ಕೆರೆ, ದೇವಾಲಯವೆಲ್ಲಾ ಇತ್ತು. ಬದಲಾದ ಜೀವನಕ್ರಮದಲ್ಲಿ ಅವು ನೋಡಿಕೊಳ್ಳುವವರಿಲ್ಲದೆ ಶಿಥಿಲವಾದವು. ೧೯೮೪ ಸುಮಾರಿನ ನನ್ನ ಮೊದಲ ಬಿಸಿಲೆ ಭೇಟಿ ಕಾಲದಲ್ಲಿ ಪೂಜೆ ಇಲ್ಲದ ಗುಡಿ, ಮುರಿದು ಬಿದ್ದ ಛತ್ರ, ಹೂಳು ತುಂಬಿದ ಕೆರೆ ಕಂಡಿದ್ದೆ. ಆದರೆ ಮುಂದುವರಿದ ಕಾಲದಲ್ಲಿ ಇಲ್ಲಿನ ಲಭ್ಯ ಅನುಕೂಲಗಳ ಲೆಕ್ಕ ಹಾಕಿದ್ದು ಅರಣ್ಯ ಇಲಾಖೆ. ಹಾಗೇ ಘಟ್ಟದ ಕೆಳ ಅಂಚಿನ ಸಮೀಪದಲ್ಲೇ ಇರುವ ಬೂದಿ ಚೌಡಿ ಕಟ್ಟೆಯ ಪೂಜೆ ಆದಾಯಗಳೂ ಇಲಾಖೆಯ ಇದೇ ವಲಯಕ್ಕೆ ಸೇರಿತು. ಅಲ್ಲಿನ ಹುಂಡಿ ಹಣವನ್ನು ಬಿಸಿಲೆಯ ಛತ್ರದ ವಠಾರಕ್ಕೆ ಹೂಡಿದ್ದಕ್ಕೆ ಇಂದು ಆವರಣ ಸ್ಪಷ್ಟವಾಗಿದೆ. ಹೊಸತೇ ದೇವಾಲಯ (ಅನಿಯತ ಪೂಜೆ) ಮತ್ತು ಸಣ್ಣಪುಟ್ಟ ಅನುಕೂಲಗಳ ಸಹಿತ ಸಾಕಷ್ಟು ದೊಡ್ಡದೇ ಆದ ಸಮುದಾಯ ಭವನವೂ ಹಳ್ಳಿಗೆ ಒದಗಿತು.ಇದರ ಸ್ಥಳೀಯ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿಗೆ ವಹಿಸಿಕೊಟ್ಟಿದ್ದಾರೆ. (ಸಮಿತಿಯ ಅಧ್ಯಕ್ಷ ಮಲ್ಲೇಶಪ್ಪ, ವಠಾರದ ಗೇಟಿನ ಒತ್ತಿನಲ್ಲೇ ಅಂಗಡಿ ಮನೆ ಇಟ್ಟುಕೊಂಡಿದ್ದಾರೆ.) ಸಣ್ಣ ವೇದಿಕೆ, ವಿಶಾಲ ಸಭಾಸದನದ ಭವನಕ್ಕೆ ಹಿತ್ತಿಲಿನಲ್ಲಿ ತೀರಾ ಆಧುನಿಕ ಎನ್ನುವಂತಹ ಎರಡೆರಡು ಕಕ್ಕೂಸು, ಬಚ್ಚಲಿನ ಸೌಕರ್ಯವನ್ನೂ ಸೇರಿಸಿದ್ದಾರೆ. ಒತ್ತಿನಲ್ಲಿ ಎರಡೆರಡು ಕೆರೆ, ಎದುರು ಧಾರಾಳ ನೀರಿರುವ ಬಾವಿ ಇದ್ದರೂ ರಾಟೆ ಹಗ್ಗಗಳ ವ್ಯವಸ್ಥೆಯಿಲ್ಲ. ಅಂಗಳದಲ್ಲೇ ಒಂದು ತೂತು ಬಾವಿ ಕೊರೆಸಿ, ಹಾಳು ಬಿಟ್ಟಿದ್ದಾರೆ. ಭವನದ ಬೆಳಕಿಗೆ ಇನ್ನೂ ವಿದ್ಯುತ್ ಸಂಪರ್ಕವಾಗದಿದ್ದರೂ ಕಕ್ಕೂಸುಗಳ ಅನಿವಾರ್ಯತೆಗಾಗಿ ವಿದ್ಯುತ್ ಸಂಪರ್ಕ ಪಡೆದು ಬಾವಿಗೆ ಸಬ್ ಮರ್ಸಿಬ್ಲ್ ಪಂಪ್ ಹಾಕಿರುವುದು ಒಟ್ಟಾರೆ ಯೋಜಕರ ಮನಸ್ಥಿತಿಗೆ ಹಿಡಿದ ಕನ್ನಡಿಯೇ ಸರಿ. ಶಿಬಿರ ಕಲಾಪದ ಮೊದಲ ನಡೆ ಶುಕ್ರವಾರ ಅಪರಾಹ್ನವೇ ತೊಡಗಿತು. ಮಂಗಳೂರಿನಿಂದ ನನ್ನ ಕಾರಿಗೆ ಮುಖ್ಯವಾಗಿ ವಿದ್ಯುಜ್ಜನಕದಿಂದ ತೊಡಗಿ ಕೆಲವು ಅನಿವಾರ್ಯ ಗಂಟುಗದಡಿ ಹೇರಿಕೊಂಡೆ. ಜೊತೆಗೆ ಇಲ್ಲಿಂದ ದೇವಕಿ, ಜೋಡುಮಾರ್ಗದಿಂದ ಸುಂದರರಾಯರೂ ಅಭಿಜಿತ್ತೂ (ಶಿಬಿರದ ಓರ್ವ ಅಭ್ಯರ್ಥಿ) ಸೇರಿಕೊಂಡರು. ಕುಳ್ಕುಂದದವರೆಗಿನ ಬಹ್ವಂಶ ದಾರಿ (ಕಡಬದ ಮೂಲಕ ಸುಮಾರು ನೂರಾಹತ್ತು ಕಿಮೀ) ನಾವು ಸುಮಾರು ಎರಡೇ ಗಂಟೆಯಲ್ಲಿ ಸವೆಸಿದರೂ ಕುಡಿದ ನೀರೂ ತುಳುಕದಂತಾ ದಾರಿ. ಮತ್ತೆ ಅಂತರದ ಲೆಕ್ಕದಲ್ಲಿ ಬಿಸಿಲೆ ಇಪ್ಪತ್ಮೂರು ಕಿಮೀಯಾದರೂ ಬಳಸಿದ ಸಮಯ ಒಂದೂವರೆ ಗಂಟೆ ಎಂದರೆ ದಾರಿಯ ಸ್ಥಿತಿ ನೀವೇ ಊಹಿಸಿಕೊಳ್ಳಿ. (ಆ ದಾರಿಯ ಎರಡೇ ಮಿನಿಟಿನ ಕುಲುಕುವ ಅಂದವನ್ನು (=ಕುಳ್ಕುಂದ?), ಸರಕಾರೀ ಬಸ್ಸಿನೊಳಗೆ ಕುಳಿತು ಅನುಭವಿಸಲು ಇಲ್ಲಿನ ವಿಡಿಯೋ ಚಾಲೂ ಮಾಡಿ ನೋಡಿ.) ಸುಮಾರು ಸಂಜೆ ಐದರಿಂದ ಆರರವರೆಗೆ ಸಮುದಾಯ ಭವನದ ಶುದ್ಧೀಕರಣ, ನೀರು, ಮಂಚ, ಹಾಸುಗೆ, ವಿದ್ಯುಜ್ಜನಕಾದಿಗಳ ವಿಲೇವಾರಿ ಮಾಡಿ ಮುಗಿಸಿ, ನಿರುಮ್ಮಳರಾದೆವು. ಕಳೆದ ನಾಲ್ಕು ದಿನಗಳಲ್ಲಿ ಆ ವಲಯದಿಂದ ದೂರಾಗಿದ್ದ ಮಳೆಗೆ ಸಣ್ಣದಾಗಿ ನಮ್ಮ ಕಲಾಪಗಳ ಬಗ್ಗೆ ಕುತೂಹಲ ಮೂಡಿದಂತಿತ್ತು. ನಾವು ನಿಶ್ಚಿಂತೆಯಿಂದ ದೇವೇಗೌಡ್ರಲ್ಲಿ ನಿಪ್ಪಟ್ಟು ಚಾ ಹಾಕಿ, ಬೀಟೀಸ್ಪಾಟ್ ಕಡೆಗೆ ಕಾಲು ಬೀಸಿದೆವು. ಮತ್ತೆ ವೀಕ್ಷಣಾ ಕಟ್ಟೆಯಲ್ಲಿ ವಿರಮಿಸಿ, ಕಡು ಹಸುರಿನ ಪುಷ್ಪಗಿರಿ ವನಧಾಮದ ಮುನ್ನೆಲೆಯಲ್ಲಿ ವಿಶಿಷ್ಟ ಮೋಡರಚನೆಗಳ ಮಾಟ ಮಾಯದಲ್ಲಿ ಕರಗಿದೆವು. ಕಣಿವೆಯಾಳದ ಕುಮಾರಧಾರೆಯ, ಒಟ್ಟು ಪರ್ವತಶ್ರೇಣಿಯ ಅಸಂಖ್ಯ ಜಲಧಾರೆಗಳ ಏಕ ಮೊರೆತದ ಶ್ರುತಿ ಹಿಡಿದು, ಬಿಬ್ಬಿರಿಗಳ ಆರೋಹಣ ಅವರೋಹಣ, ಶಿಳ್ಳೆ ಖ್ಯಾತನ (ಲೋನ್ ವಿಸಲರ್ ಎಂದೇ ಖ್ಯಾತವಾದ ಹಕ್ಕಿ Malbar Whistling thrush) ಲಹರಿ, ಪಿರಿಪಿರಿ ಮಳೆಯ ಎಳೆಗಳೆಲ್ಲ ಕೂಡಿ ಬಂದಂತೆ ರಾತ್ರಿಯಾಗಿತ್ತು. ನಾವು ಹಳ್ಳಿಗೆ ಮರಳಿದೆವು. ಮಂಜು ತಾನೇ ತಾನು ವ್ಯಾಪಿಸಿ, ದೃಷ್ಟಿ ಬಿಡಿ ನಮ್ಮ ಶಕ್ತಿಶಾಲೀ ಟಾರ್ಚುಗಳ ಬೆಳಕೋಲೂ ನಾಲ್ಕಡಿಯಾಚೆ ದಾಟದ ಸ್ಥಿತಿ. ಹೊಟೆಲಿನ ಬಿಸಿಯೂಟ ಮುಗಿಸಿ, ಸಮುದಾಯ ಭವನದೊಳಗೆ ಬೆಚ್ಚಗಿನ ಹಾಸಿಗೆ ಸೇರುವಾಗ ಗಮನಿಸಿದೆವು. ಅದು ನಮಗೆ ಧಾರಾಳ ಬಳಕೆಯಿದ್ದ ಸದ್ದೇ ಆದರೂ ಅಂದು ವಿಶೇಷವಾಗಿ ಗಮನಿಸಿದೆವು ಎಂದರೂ ತಪ್ಪಿಲ್ಲ. ಮರುದಿನದ ಕಮ್ಮಟಕ್ಕೆ ಕವಾಯತೋ ಮೇಳಗಾನಕ್ಕೆ ರಿಯಾಸತೋ! ಬಿಬ್ಬಿರಿನಾದ, ಮಳೆಹನಿಗಳ ಏರಿಳಿತ ಅಡಗಿಸುವಂತೆ ಇವು ಬದಲಿದ್ದೋ ಧ್ವನಿ ಏರಿದ್ದೋ ಅಂತೂ ಪರಿಸರದಲ್ಲೆಲ್ಲಾ ಒಂದೇ ಮಂತ್ರ ಟ್ರೊಂಯ್, ಟ್ರೊಂಯ್! ನನ್ನ ಮಾವ (ಗೌರೀಶಂಕರ) ಮಳೆ ಬಂದಾಗೆಲ್ಲಾ ಬಾಲರ ರಂಜನೆಗೆ ಗಟ್ಟಿಯಾಗಿ ಪ್ರಾಸ ಕುಟ್ಟುತ್ತಿದ್ದದ್ದೂ ಹೀಗೇ ಏನೋ ಇತ್ತು (ರಚನೆ ಶಿವರಾಮ ಕಾರಂತರದೇ ಇರಬೇಕೆಂದು ಅವರ ನೆನಪು. ಅವರ ಎರಡನೇ ತರಗತಿಯ ಈ ಪದ್ಯದ ಪೂರ್ಣಪಾಠವೂ ಅವರಿಗೆ ಇಂದು ನೆನಪಿಲ್ಲ) ಮುಂಗಾರು ಮಳೆ ಬೀಸಿ ಬಂತು ಕೆರೆ ಕುಂಟೆ ಹಳ್ಳ ಹೊಲ ಪೂರಾ ನೀರು, ಕಾಣದು ನೆಲ ಕಪ್ಪೆ ಭಟ್ಟರ ಮಂತ್ರವು ಒಂದೇ ಟ್ರೊಂಯ್ ಟ್ರೊಂಯ್ ಟ್ರೊಂಯ್ ಒಂದೇ ಮಂತ್ರ ಒಂದೇ ರಾಗ ಬಿಚ್ಚಿದ ಬಾಯಿಗೆ ಇಲ್ಲವು ಬೀಗ ಟ್ರೊಂಯ್ ಟ್ರೊಂಯ್ ಟ್ರೊಂಯ್]]>

‍ಲೇಖಕರು G

September 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. laxminarasimha

  ಸರ್, ನೆಟ್ ನಲ್ಲಿಯ ಕನ್ನಡ ಬರಹ ದಲ್ಲಿ ಇತ್ತೀಚೆಗೆ ಪ್ರತಿ ಪದದ ನಂತರ ಬರುವ/ನನ್ನ ಕಂಪ್ಯೂಟರ್ನಲ್ಲಿ ನನಗೆ ಕಾಣುವ ಬಾಕ್ಸ್ ಸಮಸ್ಯಯಿಂದ ನಿಮ್ಮ ಲೇಖನವನ್ನು ಓದಲಾಗುತ್ತಿಲ್ಲ. ಈ ರೀತಿ ಬಾಕ್ಸ್ ಗಳು ಕಾಣದಂತಾಗಲು ಏನಾದರೂ ಸೊಲ್ಯೂಶನ್ ಇದೆಯಾ???

  ಪ್ರತಿಕ್ರಿಯೆ
  • ಅಶೋಕವರ್ಧನ ಜಿ.ಎನ್

   ಕ್ಷಮಿಸಿ, ಇದಕ್ಕೆ ನಿಮ್ಮ ಗಣಕದ ತಂತ್ರಾಂಶ ಪ್ರವೀಣರನ್ನು ನೀವೇ ಸಂಪರ್ಕಿಸಬೇಕು. (ಅವಧಿಯ ಸಂಪಾದಕರೂ ಸಹಕರಿಸಬಹುದೋ ಏನೋ.) ನಾನಂತೂ ಅಜ್ಞಾನಿ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: