ಕಮೆಂಟು ಮಾಡುವ ಕಲೆ

ಅರ್ಜೆಂಟಿನಾ , ಟೀನಾವಳಿ ಎಂದೆಲ್ಲ ಬ್ಲಾಗ್ ಮಂಡಲದಲ್ಲಿ ಹೆಸರಾಗಿರುವ ಟೀನಾ ಬರಹಗಳು ಒಂದೇ ಓದಿಗೆ ಮನಸ್ಸಿನೊಳಗೆ ಮನೆ ಮಾಡಿ ಕುಳಿತು ಕೊಳ್ಳುತ್ತವೆ. ‘ಟೀನಾಝೋನ್’ ಅವರ ಬ್ಲಾಗ್ ನ ಹೆಸರು. ‘ಕಣ್ಣ ಕೋಣೆಯ ಕಿಟಕಿ’ ಎಂಬ ಸುಂದರ ಅಡಿಬರಹವನ್ನೂ ಕೊಟ್ಟಿದ್ದಾರೆ. ಅವರ ಬರಹಕ್ಕೆ ಒಂದು ಜೋಶ್ ಇದೆ. ಕಾಡುವಂತೆ ಬರೆಯುತ್ತಾರೆ. ನಮ್ಮ ಬಾಲ್ಯ, ಯೌವನ ನೆನಪಾಗುವಂತೆ ಮಾಡುತ್ತಾರೆ.

ಟೀನ ತುಂಬಾ ಮಾತಾಡುತ್ತಾರೆನೋ ಗೊತ್ತಿಲ್ಲ- ಟಿನ್ ಡ್ರಮ್ ಎಂಬ ಹೆಸರಿನ ಇಂಗ್ಲಿಶ್ ಬ್ಲಾಗ್ (ಅವಧಿ ಓದುಗರಾದ ರವಿ ಅಜ್ಜೀಪುರ ಅವರ ಭಾಷೆಯಲ್ಲಿ ಬಣ್ಣಿಸುವುದಾರೆ) ಜಾರಿಯಲ್ಲಿಟ್ಟಿದ್ದಾರೆ. ಶಿವಮೊಗ್ಗ, ಮೈಸೂರು ಸುತ್ತಿ ಈಗ ಬೆಂಗಳೂರಿನಲ್ಲಿ ಇಂಗ್ಲಿಶ್ ಉಪನ್ಯಾಸಕಿಯಾಗಿರುವ ಟೀನಾ ಚಟ ಪಟ ಸದ್ದು ಮಾಡುತ್ತಲೇ ಇರಲಿ. ಟೀನಾ ಮೈಲ್: [email protected]  ಟೀನಾ ಬರಹದ ರುಚಿ ಗೊತ್ತಾಗಲೆಂದೇ ಅವರ ಬರಹವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ;

comments1.jpg

ಆಗ ಹೈಸ್ಕೂಲಿನಲ್ಲಿದ್ದೆ. ಮನೆಯಿಂದ ಗಡಬಡಿಸಿ ಹೊರಟೆ ಅಂದರೆ ಸ್ಕೂಲಿಗೆ ತಲುಪಿದ ಮೇಲೇ ಉಸಿರು ಬಿಡುತ್ತ ಇದ್ದ ಪ್ರಾಣಿ ನಾನು. ತರಗತಿಯೊಳಗೆ ಹೈಸ್ಪೀಡಿನಲ್ಲಿ ಎಂಟರಾಗುತ್ತಿದ್ದ ಹಾಗೇ ಹುಡುಗರೆಲ್ಲ – ‘ಹೋ! ಕಾಳಿ, ದುರ್ಗಿ, ಚೌಡಿ ಬಂದ್ಲು ಕಣ್ರಪ್ಪೋ! ದಾರಿಬಿಡಿ!’ ಎಂದೆಲ್ಲ ಕೂಗಾಡಿಕೊಳ್ಳುತ್ತ ಸುಮ್ಮಸುಮ್ಮನೆ ಬೆಂಚು, ಡೆಸ್ಕು ಎಲ್ಲ ಕುಟ್ಟಿ ಧಡಧಡ ಸದ್ದು ಮಾಡಲು ಆರಂಭಿಸುತ್ತಿದ್ದರು. ನಾನು ಯಾವತ್ತೂ ಮನೆಯಲ್ಲಿ ‘ಹೋಂವರ್ಕ್’ ಮಾಡ್ತಲೇ ಇರ್ಲಿಲ್ಲ. ಮೇಷ್ಟ್ರು ಬರುವ ವೇಳೆ, ಬೈಸಿಕೊಳ್ಳಬೇಕಲ್ಲ ಎನ್ನುವ ಟೆನ್ಷನ್, ಇರುವ ಐದೇ ನಿಮಿಷದಲ್ಲಿ ಹೋಂವರ್ಕ್ ಬರೆದು ಮುಗಿಸುವ ಆತುರ, ಜೊತೆಗೆ ಈ ಹುಡುಗರ ಧಾಂಧಲೆ. ಕೋಪದಿಂದ ಅವರನ್ನ ದುರುದುರು ನೋಡಿದರೂ ಮರುನಿಮಿಷವೆ ನಗು ಉಕ್ಕಿ ಬರುತ್ತಿತ್ತು. ಆಗೆಲ್ಲ ನಮ್ಮ ಪಾಲಿಗೆ ಕಮೆಂಟ್ಸ್ ಅಂದರೆ ಇಷ್ಟೆ. ಕೋತಿಗಳಂತಾಡುವ ಹುಡುಗರು, ಜಗಳಗಂಟಿ ಹುಡುಗಿಯರು, ಸ್ಪೋರ್ಟ್ಸಿನಲ್ಲಿ ನಮ್ಮ ಸೆಕ್ಷನ್ನಿನ ಟೀಮಿಗೆ ಸವಾಲೊಡ್ಡುವ ಬೇರೆ ಕ್ಲಾಸುಗಳ ಹುಡುಗ ಹುಡುಗಿಯರು – ಇವರೆಲ್ಲ ನಮಗೆ ಬಲಿಪಶುಗಳಾಗುತ್ತಿದ್ದರು. ನಮ್ಮೆದುರಿಗೆ ಇವರು ಓಡಾಡಿದಾಗೆಲ್ಲ ಅವರನ್ನು ಚುಡಾಯಿಸುವುದು, ಇಲ್ಲವೇ ಅವರ ಕ್ಲಾಸಿನೆದುರಿಗೇ ಹೋಗಿ ಅವರನ್ನು ಅಣಗಿಸಿ ಓಡಿಬರುವುದು ನಮ್ಮ ಅಚ್ಚುಮೆಚ್ಚಿನ ಟೈಂಪಾಸ್.

ಕಾಲೇಜು ದಿನಗಳನ್ನ, ಕ್ಯಾಂಪಸ್ಸುಗಳನ್ನ ಕಮೆಂಟುಗಳಿಲ್ಲದೇ ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ನನಗಂತೂ ಕಾಲೇಜು ಸೇರುವ ಮುನ್ನವೇ ಹಿರಿಯ ಗೆಳತಿ ಸಂಧ್ಯಾ, ’ನೋಡೇ ನೀನಂತೂ ಹುಶಾರಾಗಿರು. ಹಾಳು ಹುಡುಗ್ರು ನಿಂತಲ್ಲೂ ಕೂತಲ್ಲೂ ಕಮೆಂಟು ಮಾಡ್ತವೆ. ತಿರುಗೂ ನೋಡಬೇಡ, ಎದುರು ಬೈಬೇಡ. ಬೈದ್ರೆ ಜಾಸ್ತಿ ತಿಮಿರು ತೋರಿಸ್ತವೆ!’ ಎಂದು ಅಪ್ಪಣೆ ಕೊಡಿಸಿಬಿಟ್ಟಿದ್ದಳು ಕಾಲೇಜಿನ ಮೊದಲನೇ ದಿನವೇ ದಿಗಿಲು. ಭಯ. ಹೊಸ ಊರು, ಹೊಸ ವಾತಾವರಣ, ಹಾಸ್ಟೆಲ್ ವಾಸ ಬೇರೆ. ಮೊದಲ ದಿನ ಹೇಗೋ ಕಳೆಯಿತು. ’ಅಬ್ಬ, ಏನೂ ಇಲ್ಲ” ಎಂದು ಖುಶಿಪಟ್ಟುಕೊಳ್ಳುತ್ತ ನನ್ನ ರೂಂಮೇಟಿನ ಜೊತೆ ನೋಟುಬುಕ್ಕು ತೆಗೆದುಕೊಳ್ಳಲು ಸ್ಟೇಶನರಿ ಅಂಗಡಿಗೆ ಹೋಗಿ ನಿಂತೆನೋ ಇಲ್ಲವೋ..ಧಾಂಡಿಗರ ಥರ ಇದ್ದ ಏಳೆಂಟು ಹುಡುಗರು ಸುತ್ತ ಬಂದು ನಿಂತರು. ನನಗೆ ಯಾಕೊ ನಾನು ಒಂದು ರೆಫ್ರಿಜಿರೇಟರೊಳಗಿದ್ದೀನೇನೊ ಅನ್ನಿಸಲು ಶುರುವಾಯಿತು. ’ಫಸ್ಟ್ ಪೀಯೂಸೀನಾ?’ ಪ್ರಶ್ನೆ ಬಂತು. ಕುರಿಯ ಥರ ’ಹೂಂ’ ಅಂದೆ.’ಯಾವೂರು?’. ಹೇಳಿದೆ. ’ಏನ್ಹೆಸ್ರು” ಗಡಸುದನಿ. ’ಟೀನಾ’ ಅಂದಿದ್ದೇ ತಡ -’ಟೀನಾ ಅಂತೆ ಕಣ್ರೋ!’ ಒಬ್ಬ ಕಿರುಚಿದ. ’ಟೀನಾಮೀನಾಡಿಕಾ.’ ಅಂತ ನನ್ನ ಸುತ್ತ ಕೋರಸ್ಸಿನ ಗಾಯನ ಶುರುವಾಯ್ತು. ನಾನು ಅಳುವುದೊಂದು ಬಾಕಿ. ಕೊನೆಗೆ ಅವರ ಪೈಕಿ ಒಬ್ಬ ದಯಾಮಯಿ -’ಸಾಕು ಮಾರಾಯಾ, ಪಾಪ, ಹೆದರಿಕೊಂಡಿದೆ’ ಎಂದು ಹೇಳಿ ನನಗೆ ’ಹೋಗು ಮರಿ.’ ಎಂದ. ಕಾಲ್ಕಿತ್ತೆ. ಈಗ ನಗು ಬರುತ್ತೆ. ಮುಂದಿನ ಎರಡು ವರ್ಷಗಳಲ್ಲಿ ಕಮೆಂಟುಗಳಿಗೆ ತಿರುಗಿ ಕಮೆಂಟು ಕೊಡುವಷ್ಟು ಪ್ರವೀಣಳಾಗಿದ್ದು ಬೇರೆ ಮಾತು.

ಕಾಲೇಜು ಮುಗಿದ ನಂತರ ಟೀ, ಕಾಫಿ ಕುಡಿಯುತ್ತ ಹುಡುಗಿಯರು ಮಾತನಾಡುತ್ತ ಇದ್ದಿದ್ದು ಅಂದು ಅವರಿಗೆ ದೊರೆತ ಕಮೆಂಟುಗಳ ವೈಖರಿಯ ಬಗ್ಗೆ. ಹೆಣ್ಣುಮಕ್ಕಳದೊಂದು ಅಭ್ಯಾಸವಿದೆ. ಕಚಡಾ, ಅಶ್ಲೀಲ ಕಮೆಂಟುಗಳನ್ನು ನಾವು ನೆನಪಿಸಿಕೊಳ್ಳುವುದೇ ಇಲ್ಲ. ಅಂಥವನ್ನು ನಮ್ಮ ಕಿವಿ, ಮೆದುಳುಗಳು ರಿಸೀವ್ ಮಾಡಿದರೂ ನಿರ್ಲಿಪ್ತವಾಗಿಬಿಡುತ್ತವೆ. ಆದರೆ ಅವೇ ಕಮೆಂಟುಗಳು ಒಳ್ಳೆ ಹಾಸ್ಯಭರಿತವಾಗಿದ್ದರೆ ಹೊರನೋಟಕ್ಕೆ ಹುಸಿಕೋಪ ನಟಿಸಿದರೂ ಒಳೊಳಗೇ ನಕ್ಕಿರ್ತೇವೆ. ಕಾಫಿಯ ಮಗ್ನಿಂದ ಬಿಸಿಬಿಸಿ ಕಾಫಿ ಹೀರುತ್ತ ಅದನ್ನು ಗೆಳತಿಯರ ಜತೆಗೆ ಹಂಚಿಕೊಂಡಿರುತ್ತೇವೆ.

ಕಮೆಂಟುಗಳನ್ನು ಮಾಡೋದು ಒಂದು ಕಲೆ. ಕೆಲವರಿಗೆ ಮಾತ್ರ ಇದು ಸಿದ್ಧಿಸುವುದು.. ಕಮೆಂಟುಗಳೆದರೆ ಕೇವಲ ಟೀಕೆಯಲ್ಲ. ಕಮೆಂಟುಗಳು ಹೇಗಿರಬೇಕೆಂದು ನನ್ನ ಗೆಳತಿ ವಿದ್ಯಾ ಹೇಳಿದ ಮಾತುಗಳು ನೆನಪಾಗುತ್ತವೆ – ’ಕಮೆಂಟುಗಳು ಹಿತಮಿತವಾಗಿರಬೇಕು, ಒಗ್ಗರಣೇ ಹಾಗೆ. ಕಮೆಂಟು ಮಾಡಿದವರನ್ನ ನಾವು ಮಾರನೇ ದಿನ ಹುಡುಕೋ ಹಾಗಿರಬೇಕು.’ ಅಲ್ಲವೆ? ಗೆಳತಿ ಸ್ಮಿತಾ ಮಂಗಳೂರಿಂದ ಬೆಂಗಳೂರಿಗೆ ಪ್ರಯಾಣಿಸುತ್ತ ಇರುವಾಗ ನಡೆದ ಘಟನೆಯಿದು: ಬಸ್ಸಿನ ತುಂಬಾ ಕಾಲೇಜು ವಿದ್ಯಾರ್ಥಿಗಳೇ ತುಂಬಿಕೊಂಡಿದ್ದರು. ಬೆಂಗಳೂರು ತಲುಪಿ ಬಸ್ಸಿಳಿಯುತ್ತಿದ್ದಾಗ ಹುಡುಗನೊಬ್ಬ ಆಕೆಯ ಬಳಿ ಬಂದು -’ತಪ್ಪು ತಿಳಿಯದಿದ್ರೆ ಒಂದು ಮಾತು ಕೇಳಲೆ? ನೀವು ಬಹಳ ಸುಂದರವಾಗಿದೀರಿ ಅಂತ ನನಗಿಂತ ಮೊದಲು ನಿಮಗೆ ಎಷ್ಟು ಜನ ಹೇಳಿದಾರೆ?’ಎಂದು ನಗೆ ಮಿನುಗಿಸಿದ. ಆಕೆಗೆ ಆ ಮಾತಿನ ಅರ್ಥ ಹೊಳೆಯುವ ಮುನ್ನವೇ ಆತ ಬಸ್ಸಿಳಿದು ಮಾಯವಾಗಿದ್ದ.

ಕೆಲವೊಂದು ಸಾರೆ ಸುಮ್ಮನೆ ಆಡಿದ ಮಾತುಗಳೂ ಪೇಚಿಗೆ ಸಿಕ್ಕಿಸುವುದುಂಟು. ಒಮ್ಮೆ ನಾನೂ ನನ್ನ ಗೆಳತಿಯರಿಬ್ಬರೂ ಲಂಚ್ ಬ್ರೇಕಿನ ನಂತರ ಕ್ಲಾಸಿಗೆ ಹಿಂತಿರುತ್ತ ಇದ್ದಾಗ ಕ್ಯಾಂಟೀನಿನ ಬಳಿ ಹೊಸಮುಖವೊಂದು ಕಂಡಿತು. ಹೊಸ ವಿದ್ಯಾರ್ಥಿಯಿರಬಹುದೆಂದು ಭಾವಿಸಿದ ನನ್ನ ಗೆಳತಿ,’ಸಚ್ ಎ ಹ್ಯಾಂಡ್ಸಂ ಫೇಸ್! ಆದ್ರೆ ಫೇರ್ ಎಂಡ್ ಲವ್ಲಿ ಸ್ವಲ್ಪ ಕಡಿಮೆ ಮಾಡಿದ್ರೆ ಚೆನ್ನಾಗಿತ್ತು!’ ಎಂದು ಜೋರಾಗಿ ಹೇಳಿ ನಕ್ಕಳು. ನಾವೂ ಅತನನ್ನು ತಿರುಗಿನೋಡಿ ನಕ್ಕೆವು. ನಮ್ಮ ದುರಾದೃಷ್ಟಕ್ಕೆ ಆತ ನಮ್ಮ ಕಾಲೇಜಿನ ಹಳೆಯ ಕುಖ್ಯಾತ ವಿದ್ಯಾರ್ಥಿಯಾಗಿರಬೇಕೆ! ಆತನೋ, ಸಂತಸದಿಂದ, ’ಹೇಯ್! ಯೂ ಗರ್ಲ್ಸ್! ನಿಲ್ರೀ ಒಂದ್ನಿಮಿಷ!’ ಎಂದು ನಮ್ಮ ಬೆನ್ನಟ್ಟಿ ಬರಲಾರಂಭಿಸಿದ. ನಾವು ಗಾಬರಿಯಾಗಿ ಒಂದೇ ಉಸುರಿಗೆ ಓಟಕಿತ್ತು ಯಾವುದೋ ಲ್ಯಾಬಿನೊಳಗೆ ನುಗ್ಗಿ ಅವಿತುಕೊಂಡು ಬಚಾವಾದೆವು.

ಈ ಕೆಳಗಿನ ಎಚ್.ಎಸ್. ಬಿಳಿಗಿರಿಯವರ ನಾಲ್ಕು ಸಾಲುಗಳು ನಾನು ಕೇಳಿರುವ ‘ಕ್ಲಾಸಿಕ್’ ಕಮೆಂಟುಗಳ ಸಾಲಿಗೆ ಸೇರುತ್ತದೆ. ನಾಲಕ್ಕೈದು ಸಾರಿ ಓದಿದ ನಂತರವೂ ಹೊಸ ಹೊಸ ಅರ್ಥಗಳನ್ನು ಚಿಮ್ಮಿಸುವ ರಸವಂತಿಕೆ ಈ ಸಾಲುಗಳಿಗಿದೆ.
ಕರಿಯ ಹುಡುಗಿಯು ನಗಲು ಕಾಣುವ
ಬಿಳಿಯ ಹಲ್ಲಿನ ಮಿಂಚೊಲು
ಬೆಂಗಳೂರಿನ ಟಾರ ರೋಡೊಳು
ಬೆಣಚುಕಲ್ಲಿನ ಗೊಂಚಲು!

‍ಲೇಖಕರು avadhi

January 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

 1. nagenagaaridotcom

  ನಗುವು ಸಹಜದ ಧರ್ಮ
  ನಗಿಸುವುದು ಪರ ಧರ್ಮ
  ನಗುವ ನಗಿಸುತ ನಗಿಸಿ
  ನಗುತ ಬಾಳುವ ವರವ
  ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
  ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
  ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
  ವಿಳಾಸ: http://nagenagaaridotcom.wordpress.com/

  ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

  ನಗೆ ಸಾಮ್ರಾಟ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: