ಕರಿಗೌಡ ಮತ್ತು ತಿಮ್ಮಕ್ಕನ ಕುರಿ ಮಂದೆ

1995ರ ಬೇಸಿಗೆಯ ಒಂದು ದಿನ ನೊಣವಿನಕೆರೆಯಿಂದ ಗುಂಗುರಮೆಳೆಗೆ ಹೋಗಿ ಪಾರ್ಥ ಎಂಬ ನನ್ನ ಮಿತ್ರ ಮತ್ತು ಪಶುವೈದ್ಯ ವೃತ್ತಿ ಅಭಿಮಾನಿಯ ಎತ್ತಿಗೆ ಚಿಕಿತ್ಸೆ ನೀಡಿ ವಾಪಸ್ ಬರುತ್ತಿದ್ದೆ. ಆಗಲೇ ಸಮಯ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ಆಗ ಅದು ಜಲ್ಲಿಕಲ್ಲು ರಸ್ತೆಯಾಗಿತ್ತು. ಉದ್ದಕ್ಕೂ ಜಲ್ಲಿಕಲ್ಲು ಎದ್ದಿದ್ದರಿಂದ ಬೈಕು ಕುಣುಕಲು ಬುಗುರಿಯಂತೆ ಕುಣಿಯುತ್ತಾ ಓಡುತ್ತಿತ್ತು.

ಹೊಂಗೇಲಕ್ಷ್ಮಿ ಕ್ಷೇತ್ರ, ಕಸವನಹಳ್ಳಿ, ಮಾದಿಹಳ್ಳಿ ದಾಟಿ ಮುಂದೆ ಬಂದಿದ್ದೆ. ಅಷ್ಟೊತ್ತಿಗೆ ಒಬ್ಬಾತ ಉಟ್ಟಿದ್ದ ಲುಂಗಿಯನ್ನು ಬಿಚ್ಚಿ ನನ್ನ ಗಮನ ಸೆಳೆಯಲು ಬಾವುಟದಂತೆ ಬೀಸುತ್ತಿರುವುದು ಕಾಣಿಸಿತು. ಬೈಕಲ್ಲಿ ಬರುತ್ತಿದ್ದ ನನ್ನ ಬಲಗಡೆಗೆ ನೂರು ಮೀಟರ್ ಗಳಷ್ಟು ದೂರದಲ್ಲಿದ್ದ ಆತ ಕರಿಗೌಡ ಎಂಬುದು ಗೊತ್ತಾಯಿತು. ನಾನು ಬೈಕ್ ನಿಲ್ಲಿಸಿದೆ.

ನನಗಿಂತ ಸಣ್ಣ ವಯಸ್ಸಿನವನಾಗಿದ್ದ ಕರಿಗೌಡನಿಗೆ ಯಾವಾಗಲೂ ದುಡ್ಡಿನ ದರ್ದು ಇರುತ್ತಿತ್ತು. ಬಾಯಿ ಬಿಟ್ರೆ ತನ್ನ ತರಹೇವಾರಿ ತಾಪತ್ರಯಗಳನ್ನು ಹೇಳಿಕೊಳ್ಳುತ್ತಿದ್ದ. ಬರೀ ಐವತ್ತು ತೆಂಗಿನ ಗಿಡಗಳ ತೋಟವಿದ್ದು, ಅದರಲ್ಲಿಯೇ ಒಂದು ಹಳೆಯ ಮನೆಯಿತ್ತು. ಆ ಮನೆಯ ಮುಂದೆ ತೆಂಗಿನ ಗರಿ, ಯಡಮಟ್ಟೆ, ಹಳೆ ಮರಗಳ ತುಂಡುಗಳು, ಯಾವುದೋ ಕಾಲದ ಹೆಂಚು, ರೀಪು ರಾಶಿ ರಾಶಿಯಾಗಿ ಬಿದ್ದಿರುತ್ತಿದ್ದವು. ಆ ಶಾದರದಲ್ಲಿ ಎಷ್ಟು ಹಾವುಗಳಿರುತ್ತಿದ್ದವೋ ಏನೋ! ಆದರೆ ಕರಿಗೌಡನು ಅದಾವುದಕ್ಕೂ ಕೇರು ಮಾಡದೆ ತನ್ನ ಕುಟುಂಬದೊಂದಿಗೆ ಅಲ್ಲಿ ನಿರುಮ್ಮಳವಾಗಿದ್ದ. ಇದರ ಮೇಲೆ ಅವನ ಮನೆಗೆ ಕರೆಂಟು ಸಹ ಇರಲಿಲ್ಲ. ಮಿಣಿ ಮಿಣಿ ಎನ್ನುತ್ತಿದ್ದ ಸೀಮೆಎಣ್ಣೆ ಬುಡ್ಡಿಯ ಬೆಳಕಲ್ಲಿ ರಾತ್ರಿ ಕಳೆಯುತ್ತಿದ್ದರು. ಅವನಿಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದವು.

ಹಿಂದೆ ಹಲವು ಸಲ ಅವನ ಮನೆಗೆ ಹೋಗಿದ್ದೆ. ಸುತ್ತಮುತ್ತಲ ಎರಡು ಕಿಮೀ ಫಾಸಲೆಯಲ್ಲಿ ಯಾವ ಮನೆಯೂ ಇರಲಿಲ್ಲ. ಅವನ ಹೆಂಡತಿ ವಿಪರೀತ ಗಿಡ್ಡಿಯಿದ್ದು ಕರಿಗೌಡ ಹೇಳಿದ ಎಲ್ಲ ಕೆಲಸಗಳನ್ನೂ ಶಿರಸಾವಹಿಸಿ ಮಾಡುತ್ತಿದ್ದಳು. ಮನೆ ತುಂಬ ಹುಳದ ರೀತಿಯಲ್ಲಿ ಓಡಾಡುತ್ತಾ ಗಂಡ ಹೇಳಿದ ಎಲ್ಲ ಮಾತಿಗೂ ಸಮ್ಮತಿ ಸೂಚಿಸುತ್ತಿದ್ದಳು. ಅವಳಿಗೆ ಸ್ವಂತ ವ್ಯಕ್ತಿತ್ವವೇ ಇಲ್ಲವೇನೋ ಅನ್ನಿಸುತ್ತಿತ್ತು.

ಆಗಾಗ ಅವರ ಮನೆಗೆ ಹೋಗುತ್ತಿದ್ದ ನನ್ನನ್ನು ತುಂಬ ಗೌರವದಿಂದ, ಸಜ್ಜನಿಕೆಯಿಂದ ಮಾತಾಡಿಸುತ್ತಿದ್ದಳು. ಬಹಳ ಮೃದು ಸ್ವಭಾವದವಳಾಗಿದ್ದ ಅವಳ ಧ್ವನಿ ಐದಾರು ಅಡಿಗಿಂತ ದೂರಕ್ಕೆ ಕೇಳದ ಮೆಲುದನಿಯಾಗಿತ್ತು. ಗಂಡನ ಜಿಪುಣತನದಿಂದ ಅವಳು ಐದು ಹತ್ತು ರೂಪಾಯಿ ನೋಟನ್ನೂ ಸಹ ನೋಡಿದ್ದಳೋ ಇಲ್ಲವೋ ಎನಿಸಿ ವಿಷಾದವಾಗುತ್ತಿತ್ತು.

ತನ್ನ ಇಬ್ಬರು ಎಳೆಮಕ್ಕಳನ್ನಂತೂ ಅಷ್ಟು ಪ್ರೀತಿಯಿಂದ, ದಯೆಯಿಂದ ನಡೆಸಿಕೊಳ್ಳುತ್ತಿದ್ದಳು. ಸಿಟ್ಟೆಂಬುದು ಅವಳ ಭಾವಕೋಶದಿಂದಲೇ ನಾಪತ್ತೆಯಾಗಿಬಿಟ್ಟಿತ್ತೆ ಅನಿಸುತ್ತದೆ. ಇಂತಹ ಮೆತ್ತನೆಯ ಸ್ವಭಾವದ ಹೆಣ್ಣುಮಕ್ಕಳ ಒಳ್ಳೆಯತನದ ಒಟ್ಟು ಮೊತ್ತವೇ ನಮ್ಮ ಸಮಾಜದ ಉತ್ತಮಿಕೆ ಇರಬೇಕು.

ದನಕರುಗಳ ಸಾಕಾಣಿಕೆ, ಆರೋಗ್ಯ, ಕಾಯಿಲೆ, ಚಿಕಿತ್ಸೆ ಬಿಟ್ಟು ಇನ್ನೇನೋ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಪಶುಸಂಗೋಪನೆಯಲ್ಲಿ ಕಾಲೇಜು ಪ್ರೊಫೆಸರುಗಳು, ವಿಜ್ಞಾನಿಗಳು, ಸಂಶೋಧನೆ, ವೈದ್ಯರು, ಔಷಧಗಳು, ಸಿಬ್ಬಂದಿ ಇವಷ್ಟೇ ಮುಖ್ಯವಲ್ಲ. ನಮ್ಮ ಅಪ್ಪಚ್ಚಿ ಮೂಗಿನ ಜಿಪುಣಶ್ರೇಷ್ಠ ಕರಿಗೌಡನೂ ಮತ್ತವನ ಹೆಂಡತಿ ತಿಮ್ಮಕ್ಕನೂ ಅಷ್ಟೇ ಮುಖ್ಯ.

ಒಂದೆರಡು ನಿಮಿಷದಲ್ಲಿ ನಾನು ಮನೆಯ ಅಂಗಳದಲ್ಲಿ ಈಯಲು (ಮರಿ ಹಾಕಲು) ತಿಣುಕಾಡುತ್ತಾ ಮಲಗಿದ್ದ ಮೇಕೆಯನ್ನು ಪರೀಕ್ಷಿಸುತ್ತಿದ್ದೆ. ನಾನು ಗುಂಗುರಮೆಳೆಗೆ ಹೋಗುತ್ತಿರುವಾಗಲೇ ಕರಿಗೌಡ ನನ್ನನ್ನು ನೋಡಿದ್ದನಂತೆ. ಹೀಗಾಗಿ ಮನೆಯ ಹೊರಗೇ ನಿಂತುಕೊಂಡು ಕಾದಿದ್ದು, ಹಿಂತಿರುಗುತ್ತಿದ್ದ ನನ್ನನ್ನು ‘ಹಿಡಿದು’ ಮನೆಗೆ ಕರೆತಂದಿದ್ದ.

‘ಸಾರ್, ಬೆಳಗ್ಗೆ ಹತ್ತು ಗಂಟೆಯಿಂದ ಸೂಲುಸ್ತೈತೆ. ಮರಿ ಮಾತ್ರ ಹೊರಕ್ಕೆ ಬಂದಿಲ್ಲ. ನಾನು ಒಳಕ್ಕೆ ಕೈಹಾಕಿದ್ದೆ. ಹೆದರಿಕೆಯಾಗಿಬಿಡ್ತು. ಸುಮಾರು ಇಪ್ಪತ್ತು ಕಾಲುಗಳಿದಾವೆ ಒಳಗೆ. ಅದೇನ್ ನೋಡಿ ಸಾರ್. ಯಲ್ಡು ಮರಿ ಇದ್ರೂ ಎಂಟು ಕಾಲು ಇರ್ತಾವೆ. ಆದ್ರೆ ಅಷ್ಟೊಂದು ಕಾಲುಗಳಿರ್ತಾವ. ಎಂಥದೋ ವಿಕಾರವಾದ ಮರಿ ಸೇರ್ಕಂಡ್‍ಬಿಟ್ಟೈತೆ. ಮೇಕೆಯನ್ನು ಬದುಕಿಸಿ ಕೊಟ್ಟು ಬಿಡಿ ಸಾಕು, ಮರಿ ಹೋದ್ರೆ ಹೋಗ್ಲಿ’ ಎಂದ.

ದೊಡ್ಡ ಗಾತ್ರದ ಕಪ್ಪು ಬಿಳಿ ಕೆಂದ ಬಣ್ಣದ ಮೇಕೆ ಮಲಗಿ ತಿಣುಕುತ್ತಿತ್ತು. ತಿಮ್ಮಕ್ಕ ಒಂದು ಮುರುಕಲು ಪ್ಲಾಸ್ಟಿಕ್ ಬಕೆಟಲ್ಲಿ ನೀರು, ಬಟ್ಟೆ ಸೋಪಿನ ಒಂದು ತುಂಡು, ನೆಗ್ಗಿ ಹೋಗಿದ್ದ ಸಿಲ್ವಾರ ಪಾತ್ರೆಯಲ್ಲಿ ಉಗುರು ಬೆಚ್ಚನೆಯ ನೀರು ತಂದಿಟ್ಟಳು.

ಕೈಯನ್ನು ಹಸ್ತದವರೆಗೆ ಮೇಕೆಯ ಯೋನಿಯೊಳಗೆ ತೂರಿಸಿ ಪರೀಕ್ಷಿಸಬೇಕಿತ್ತು. ಕೈ ಅಷ್ಟು ಸುಲಭವಾಗಿ ಒಳಹೋಗಲಿಲ್ಲ. ತಿಮ್ಮಕ್ಕನನ್ನು ಕೇಳಿದರೆ ಮನೆಯಲ್ಲಿ ಔಡಲ ಎಣ್ಣೆ ಇಲ್ಲ ಎಂದಳು. ಕೊಬ್ಬರಿ ಎಣ್ಣೆ ಇಲ್ಲ ಎಂದಳು. ಕಡ್ಲೆಕಾಯಿ ಎಣ್ಣೆ ಇಲ್ಲ ಎಂದಳು. ಕೈಗೆ ಎಣ್ಣೆ ಹಚ್ಚಿಕೊಂಡರೆ ಯೋನಿಯೊಳಗೆ ತೂರಿಸಿ ಪರೀಕ್ಷಿಸಬಹುದಿತ್ತು. ಅಕ್ಕಪಕ್ಕ ಮನೆಗಳೂ ಇಲ್ಲ. ಅವರು ತಂದಿಟ್ಟ ಬಟ್ಟೆ ಸಾಬೂನು ಏನು ಮಾಡಿದರೂ ನೊರೆ ಬರದಂತಹ ವಿಶೇಷ ಸಾಬೂನಾಗಿತ್ತು.

‘ಎಲ್ಲಿ ಸಿಗ್ತಪ್ಪ ಈ ಸಾಬೂನು ಕರಿಗೌಡ?’ ಎಂದೆ.

‘ಇಲ್ಲೊಬ್ಬ ಮೂರು ತಿಂಗಳಿಗೆ ಆರು ತಿಂಗಳಿಗೊಮ್ಮೆ ಬರ್ತಾನೆ. ಯಾವುದೋ ಸೋಪು ಫ್ಯಾಕ್ಟರಿಯವನು. ಅರ್ಧ ರೇಟಿಗೆ ಕೊಡ್ತಾನೆ. ಮುಂದಿನ ಸಲ ಅವನು ಬಂದಾಗ ತಗಾಬೇಕು’ ಎಂದ.

‘ಹಂಗಾದ್ರೆ ಇನ್ನಾರು ತಿಂಗಳು ಮನೇಲಿ ಸಾಬೂನಿರಲ್ಲ?’ ಎಂದೆ.

‘ಹೌದು. ಅವನು ಒಳ್ಳೆ ಕ್ವಾಲಿಟಿ ಸೋಪು ಕೊಡ್ತಾನೆ’ ಎಂದ.

ಮೇಕೆ ಕಣ್ಣಲ್ಲಿ ದುಃಖ ಮಡುಗಟ್ಟಿತ್ತು. ನೋವು ತಡೆಯಲಾರದೆ ಅರಚಿಕೊಳ್ಳುತ್ತಿತ್ತು. ಸಾಬೂನಿನ ತುಂಡನ್ನು ಪುಡಿ ಮಾಡಿಕೊಂಡು ಕೈಗೆ ಹಚ್ಚಿ ಗಸಗಸ ಉಜ್ಜಿ ಅಲ್ಪ ಸ್ವಲ್ಪ ನೊರೆ ಬರಿಸಿಕೊಂಡು ಎಡಗೈಯನ್ನು ಕಷ್ಟಪಟ್ಟು ಮೇಕೆ ಯೋನಿಯೊಳಗೆ ತೂರಿಸಿದೆ. ಕರಿಗೌಡ ಹೇಳಿದ ಪ್ರಕಾರ ಒಳಗೆ ಅನೇಕ ಕಾಲುಗಳು ಕಡ್ಡಿಪುಳ್ಳೆಯಂತೆ ಇದ್ದವು.

ಮೇಕೆಗಳು ಎರಡು ಮರಿಗಳನ್ನು ಹಾಕುವುದು ಅಪರೂಪವೇನಲ್ಲ. ಅವಳಿ ಜವಳಿ ಎರಡು ಮರಿ ಇದ್ದರೆ ಎಂಟು ಕಾಲುಗಳಿರಬೇಕಿತ್ತು. ಆದರೆ ಅದಕ್ಕೂ ಹೆಚ್ಚು ಕಾಲುಗಳಿರುವಂತೆ ಭಾಸವಾಯಿತು ಮತ್ತು ತಲೆಗಳು ಒಂದೂ ಸಿಗದೆ ಇದೇನೋ Monstrous (ವಿಕಾರವಾದ, ದೈತ್ಯಾಕಾರದ) ಮರಿಯಿರಬೇಕೆಂದು ನನಗೇ ಭಯವಾಯಿತು. ನಾನೆಂದೂ ಈ ಥರದ ವಿಕಾರವಾದ ಮರಿಗಳನ್ನಾಗಲೀ, ಕರುಗಳನ್ನಾಗಲೀ ತೆಗೆದಿರಲಿಲ್ಲ ಮತ್ತು ವಾಸ್ತವದಲ್ಲಿ ನೋಡಿರಲಿಲ್ಲ. ಇವತ್ತು ಅದಕ್ಕೆ ಮುಹೂರ್ತ ಕೂಡಿ ಬಂದಿದೆಯೇನೋ ಅನ್ನಿಸಿ ದಿಗಿಲಾಯ್ತು. ಕೈ ಹೊರತೆಗೆದೆ.

ಗರ್ಭಚೀಲದಲ್ಲಿ ಇರುವ ಜಾಗವನ್ನೆಲ್ಲಾ ಮರಿಗಳೇ ಆಕ್ರಮಿಸಿಕೊಂಡಿರುವಾಗ ನಾವು ನಮ್ಮ ಸಂಪೂರ್ಣ ಹಸ್ತವನ್ನು ಒಳಗಿಟ್ಟು ಮರಿಗಳನ್ನು ತಿರುಗಿಸುವುದು ಮೇಕೆಗಳಿಗೆ ಎಷ್ಟು ಅಧಿಕ ಒತ್ತಡ ಮತ್ತು ನೋವು ಉಂಟು ಮಾಡುತ್ತದೋ? ಇನ್ನೊಂದು ವಿಷಯವೆಂದರೆ ನಾವು ಪದೇ ಪದೇ ಕೈಯನ್ನು ಹೊರತೆಗೆಯುವುದು ಮತ್ತು ಒಳಹಾಕುವುದು ಮಾಡುತ್ತಿದ್ದರೆ ಪ್ರತಿ ಬಾರಿಯೂ ಹೊರಗಿನ ಸೋಂಕನ್ನು (infection) ಒಳ ಸೇರಿಸಿದಂತೆ. ಅದಕ್ಕೆ ಹಸ್ತದ ಒಳ ಹೊರ ಚಲನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಹಾಗೆಯೇ ಯೋಚಿಸಿದೆ.

ನನಗಿನ್ನೂ ಮರಿಗಳ ಲೆಕ್ಕ ಸಿಕ್ಕಿರಲಿಲ್ಲ. ಮೂರು ಅಥವಾ ನಾಲ್ಕಿರಬಹುದು. ಒಂದು ಮರಿಯ ಕಾಲುಗಳು ಇನ್ನೊಂದು ಮರಿಯ ಕಾಲುಗಳೊಂದಿಗೆ ಥಳುಕು ಹಾಕಿಕೊಂಡರೆ ಮರಿಗಳು ಹೊರಬರುವುದಿಲ್ಲ. ಬಾಟಲಿಯಲ್ಲಿ ಹಾಕಿದ ಏಡಿಗಳಂತೆ ಒಂದರ ಕಾಲು ಮತ್ತೊಂದು ಮರಿಯ ಕಾಲುಗಳನ್ನು ಮುಂದಕ್ಕೆ ಚಲಿಸದಂತೆ ಮಾಡಿದರೆ? ಒಂದು ಮರಿಯ ಕಾಲುಗಳ ಜೊತೆ ಬೇರೆ ಮರಿಯ ಕಾಲುಗಳನ್ನು ಹಿಡಿದು ಎಳೆದರೆ ಮರಿಯು ಹೊರಬರಲು ಸಾಧ್ಯವಾಗುವುದಿಲ್ಲ.

ಇದಕ್ಕೆ ಆ ಕ್ಷಣದಲ್ಲಿ ಒಂದು ಸರಿಯಾದ ಉಪಾಯ ಹೊಳೆಯಿತು. ಅದರಂತೆ ಎಡಗೈಯನ್ನು ಹಸ್ತದ ತನಕ ಒಳಹಾಕಿದೆ. ಮೇಕೆ ನೋವು ತಾಳಲಾರೆ ತಲೆಯೆತ್ತಿ ಜೋರಾಗಿ ನೆಲಕ್ಕೊಡೆದುಕೊಂಡಿತು. ಕರಿಗೌಡನಿಗೆ ಮೇಕೆ ತಲೆಯನ್ನು ಅಲ್ಲಾಡದಂತೆ ಬಿಗಿಯಾಗಿ ಹಿಡಿಯಲು ಜೋರು ಮಾಡಿದೆ. ಮೇಕೆ ಮಲಗಿಸಿಕೊಂಡಿದ್ದ ಜಾಗವನ್ನೆಲ್ಲ ಹುಲ್ಲು, ಗೋಣಿಚೀಲಗಳನ್ನು ಹಾಕಿ ಮೆತ್ತಗೆ ಮಾಡಿದ್ದೆವು. ಇದರಿಂದ ಮೇಕೆ ನೆಲಕ್ಕೆ ರಪ್ಪನೆ ಹೊಡೆದರೂ ಅದರ ಮುಖಕ್ಕಾಗಲೀ, ಕೊಂಬುಗಳಿಗಾಗಲೀ ಏಟಾಗುತ್ತಿರಲಿಲ್ಲ. 

ಕೈ ಒಳಹಾಕಿದವನೇ ಗರ್ಭಚೀಲವನ್ನೆಲ್ಲ ಹಸ್ತದಲ್ಲಿ ಜಾಲಾಡಿದೆ. ಮೇಕೆಯ ಗರ್ಭಚೀಲ ಸಣ್ಣದಿರುವುದರಿಂದ ಹಾಗೆ ಜಾಲಾಡುವುದು ಸುಲಭ. ಹೀಗೆ ಜಾಲಾಡುತ್ತಿರಬೇಕಾದರೆ ಒಂದು ಮರಿಯ ತಲೆ ಸಿಕ್ಕಿತು. ಸಿಕ್ಕ ತಲೆಯನ್ನು ಬಿಗಿ ಹಿಡಿದು ಗರ್ಭಚೀಲದ ಒಂದು ಬದಿಗೆ ಸರಿಸಿಕೊಂಡೆ. ಆಗ ಅದರ ನಾಲ್ಕು ಕಾಲುಗಳು ಮಾತ್ರ ಬೇರೆಯಾಗಿ ಸರಿದು ಬಂದವು. ಇಷ್ಟು ಹೊತ್ತಿಗೆ ನನ್ನ ಎಡಗೈಯ ಹಸ್ತವು ಮಣಿಕಟ್ಟಿನ ತನಕ ಒಳಹೋಗಿತ್ತು. ಮರಿ ಹೊರಬರಬೇಕಾದ birth canal (ಹೆರಿಗೆ ಮಾರ್ಗ) ಸಂಪೂರ್ಣ ಸಡಿಲಗೊಂಡಿತ್ತು. (ಹೆರಿಗೆ ಮಾರ್ಗವೆಂದರೆ ಗರ್ಭಚೀಲದಿಂದ ಪ್ರಾರಂಭವಾಗಿ ಗರ್ಭಚೀಲದ ಬಾಯಿ (cervix), ಯೋನಿ ನಾಳ (vagina) ಮತ್ತು ಯೋನಿ ತುಟಿಗಳು (vulval lips) ಇಷ್ಟು ಅಂಗಗಳು ಸಡಿಲಗೊಂಡು ಹಿಗ್ಗಿಕೊಂಡಿರುತ್ತವೆ.)

ನಾನು ಹಿಡಿದುಕೊಂಡಿದ್ದ ಮರಿಯನ್ನು ನಿಧಾನಕ್ಕೆ ಹೊರಗೆಳೆದುಕೊಂಡೆ. ಆ ಮರಿಯನ್ನು ಒಣ ಗೋಣಿಚೀಲದ ಮೇಲಿಟ್ಟು ಮತ್ತೆ ಒಳಗೆ ಕೈ ಹಾಕಿದೆ. ಒಂದು ಮರಿ ಹೊರಗೆಳೆದು ಹಾಕಿದ್ದರಿಂದ ಗರ್ಭಚೀಲದಲ್ಲಿ ಒಂದಷ್ಟು ಜಾಗ ಖಾಲಿಯಾಗಿತ್ತು. ಒಳಗೆ ಜಾಲಾಡಿಸುತ್ತಿದ್ದಂತೆ ಎರಡು ತಲೆಗಳು ಸಿಕ್ಕವು. ಅದರಲ್ಲಿ ಒಂದನ್ನು ಹಿಡಿದು ತಲೆ ಮೊದಲ್ಗೊಂಡು ಹೊರಗೆ ಎಳೆದು ಗೋಣಿಚೀಲದ ಮೇಲೆ ಹಾಕಿದೆ. ಎರಡೂ ಮರಿಗಳು ಜೀವಂತವಿದ್ದು ಕೂಗತೊಡಗಿದವು. ಎರಡು ಜೀವಂತ ಮರಿಗಳನ್ನು ಎಳೆದಿದ್ದರಿಂದ ಕರಿಗೌಡ ಮತ್ತು ತಿಮ್ಮಕ್ಕರ ಮುಖಗಳು ಊರಗಲವಾಗಿದ್ದವು.

ಗರ್ಭಚೀಲದೊಳಗಿನ ಎರಡು ಮರಿಗಳು ಹೊರಬಂದುದರಿಂದ ಎಷ್ಟೋ ಹಗುರಾಗಿ ಮೇಕೆಯು ತನ್ನ ಮಕ್ಕಳನ್ನು ನೋಡಲು ಎದ್ದು ನಿಲ್ಲುವುದಕ್ಕೆ ಶುರು ಮಾಡಿತು. ಆದರೆ ನಾನು ಕರಿಗೌಡನಿಗೆ ಹಾಗೆಯೇ ಮಲಗಿಸಿಕೊಂಡಿರಲು ತಿಳಿಸಿ ಮತ್ತೆ ಒಳಗೆ ಕೈ ಹಾಕಿದೆ. ಎರಡೇ ಮರಿ ಇರಬಹುದೆಂದು ಭಾವಿಸಿದ್ದ ಎಲ್ಲರಿಗೂ ಆಶ್ಚರ್ಯವಾಗುವಂತೆ ಮೂರನೇ ಮರಿಯನ್ನು ಹೊರಗೆಳೆದು ಗೋಣಿಚೀಲದ ಮೇಲೆ ಮಲಗಿಸಿದೆ. ಮೂರು ಮರಿಗಳೂ ಹೆಣ್ಣುಮರಿಗಳೇ ಆಗಿದ್ದು, ಅವರೆಲ್ಲರ ಸಂತೋಷಕ್ಕೆ ಪಾರವಿಲ್ಲದಂತಾಯಿತು. ಆದರೆ ಕರಿಗೌಡನಿಗೆ ಮಾತ್ರ ಸಮಾಧಾನವಾಗದೆ ‘ಇನ್ನೂ ಮರಿಗಳಿರಬಹುದು ಸರಿಯಾಗಿ ನೋಡಿ ಸಾರ್’ ಎಂದ !

‘ಇಲ್ಲ ಕಣಣ್ಣ ಇಷ್ಟೇ’ ಎಂದೆ.

‘ಯಾವುದಾದರೂ ಪದರದಲ್ಲಿ ಸಿಕ್ಕಂಡಿರಬಹುದು’ ಎಂದು ರಾಗವೆಳೆದ!

ಅವನೇನೂ ತಮಾಷೆಗೆ ಹಾಗೆ ಹೇಳುತ್ತಿರಲಿಲ್ಲ. ಅವನಿಗದು ಗಂಭೀರದ ವಿಷಯವಾಗಿತ್ತು.

ಗರ್ಭಚೀಲದಲ್ಲಿ ನಂಜಿನ ಮಾತ್ರೆ ಇಟ್ಟು ಮೇಲಕ್ಕೆದ್ದೆ. ತಿಮ್ಮಕ್ಕ ಮೇಕೆಯನ್ನೆಲ್ಲ ನೀಟಾಗಿ ಬಿಸಿ ನೀರಲ್ಲಿ ತೊಳೆದು ಚಿಂದಿಯಾಗಿದ್ದ ಒಣಬಟ್ಟೆಯಲ್ಲಿ ಒರೆಸಿದಳು. ಒಂದೆರಡು ಇಂಜೆಕ್ಷನ್ ಮಾಡಿದೆ. ಕರಿಗೌಡ ‘ಇನ್ನೊಂದೆರಡು ಇಂಜೆಕ್ಷನ್ ಮಾಡ್ರಿ ಸಾರ್. ಹಾಲು ಹೆಚ್ಚಾಗ್ಲಿ. ಮೂರು ಮರಿ ಇದಾವೆ’ ಎಂದು ಗೋಗರೆಯತೊಡಗಿದ. ಅವನು ಬರೀ ಜಿಪುಣನಷ್ಟೇ ಅಲ್ಲ ಜಿಗುಟು ಕೂಡ. ಹತ್ತಿಕೊಂಡರೆ ಬಿಡದ ಜಿಗಣೆ ಕೂಡ.

‘ಮೇಕೆಗೆ ಬೇಕಾದ ಔಷಧಗಳನ್ನೆಲ್ಲ ಇಂಜೆಕ್ಷನ್ ಮುಖಾಂತರವೇ ಕೊಡಲಾಗುವುದಿಲ್ಲ. ಅದಕ್ಕೆ ಅವಶ್ಯವಿರುವ ಕೆಲವು ಮಾತ್ರೆ ಮತ್ತು ಪುಡಿಗಳನ್ನು ಬರೆದುಕೊಡುತ್ತೇನೆ. ಅವನ್ನು ತಂದು ಬೆಲ್ಲದಲ್ಲಿ ಅಥವಾ ಮೇಕೆಯು ತಿನ್ನುವ ಹಿಂಡಿ ಮಿಶ್ರಣದಲ್ಲಿ ಸೇರಿಸಿ ತಿನ್ನಿಸು’ ಎಂದು ಹೇಳಿ ‘ಔಷಧ ಬರೆಯಲು ಒಂದು ತುಂಡು ಪೇಪರ್ ಕೊಡು’ ಎಂದೆ.

ಗಂಡ ಹೆಂಡತಿ ಇಬ್ಬರೂ ಒಂದು ತುಂಡು ಬಿಳಿ ಪೇಪರಿಗಾಗಿ ಮನೆಯೆಲ್ಲಾ ಹುಡುಕಿ ಹುಡುಕಿ ಸುಸ್ತಾದರು. ಕೇವಲ ಎರಡು ಔಷಧದ ಹೆಸರುಗಳನ್ನು ಬರೆಯಲು ಬೇಕಾಗುವಷ್ಟು ಕಾಗದ ಸಹ ಅವರ ಮನೆಯಲ್ಲಿ ಸಿಗಲಿಲ್ಲ.

‘ದಿನಪತ್ರಿಕೆ ಬರಲ್ವಾ ನಿಮ್ಮನೆಗೆ’ ಎಂದು ಕೇಳಿದೆ.

‘ಇಲ್ಲ ಸಾರ್. ನಾವು ನ್ಯೂಸ್ ಪೇಪರ್ ತರ್ಸಲ್ಲ. ಹೋಟೆಲಲ್ಲಿ ಅಥವಾ ಅಂಗಡೀಲಿ ಓದ್ತೀನಿ’ ಎಂದ ಸರಾಗವಾಗಿ.

ಕೊನೆಗೆ ಯಾರೋ ಕೊಟ್ಟು ಹೋಗಿದ್ದ ಲಗ್ನಪತ್ರಿಕೆಯಲ್ಲಿ ಔಷಧ ಬರೆದುಕೊಟ್ಟೆ. ಕರಿಗೌಡನ ಮನೆಯೊಂದೇ ಅಲ್ಲ ಅನೇಕ ಮನೆಗಳಲ್ಲಿ ನಾನು ಈ ಸಮಸ್ಯೆಯನ್ನು ಎದುರಿಸಿದ್ದೇನೆ. ಮನೆಯವರೆಲ್ಲಾ ವಿದ್ಯಾವಂತರಾದರೂ ಸಹ ಮನೆಯಲ್ಲಿ ದಿನಪತ್ರಿಕೆಯಾಗಲೀ, ನಿಯತಕಾಲಿಕೆಗಳಾಗಲೀ ಅಥವಾ ಯಾವುದೇ ಒಂದು ಪುಸ್ತಕವಾಗಲೀ ಇರುವುದಿಲ್ಲ. ಶಾಲೆಗೋಗುವ ಮಕ್ಕಳಿದ್ದರೆ ಅವು ತಮ್ಮ ಯಾವುದಾದರೂ ನೋಟ್‍ಬುಕ್ಕಿನ ಹಾಳೆಯನ್ನು ಹರಿದು ಕೊಡುತ್ತಿದ್ದರು.

ಕರಿಗೌಡನ ಮಗ ಮತ್ತು ಮಗಳು ಇಬ್ಬರೂ ಇನ್ನೂ ಸಣ್ಣವರಿದ್ದುದರಿಂದ ಶಾಲೆಗೆ ಹೋಗದಿದ್ದುದೇ ನನ್ನ ಕಷ್ಟಕ್ಕೆ ಕಾರಣವಾಗಿತ್ತು. ಅವೆರಡು ಮಕ್ಕಳೂ ತಮ್ಮ ತಾಯಿಯ ಆದೇಶವನ್ನು ಪಾಲಿಸುತ್ತಾ ನಾವೆಲ್ಲರೂ ಮಾಡುತ್ತಿದ್ದುದನ್ನು ಬೆರಗುಗಣ್ಣಿನಿಂದ ನೋಡುತ್ತಾ ಕುಳಿತಿದ್ದರು. ಮೇಕೆ, ಮೇಕೆ ಮರಿ ಹಾಕುವುದು, ಔಷಧೋಪಚಾರ ಮುಂತಾದ ನಗರದ ಮಕ್ಕಳಿಗೆ ಎಂದೂ ಸಿಗದ ಅರಿವನ್ನು ಪ್ರತ್ಯಕ್ಷವಾಗಿ ನೋಡಿ ಪಡೆಯುತ್ತಿದ್ದರು.

ಬರೀ ಓದಿ ತಿಳಿಯುವುದಲ್ಲ ಅದು. ರಾಗಿ, ಭತ್ತ, ಜೋಳ, ಅವರೆ, ತೊಗರಿ, ಅಲಸಂದೆ, ಸೊಪ್ಪು, ತರಕಾರಿ, ತೆಂಗು, ಅಡಿಕೆ, ದನ ಕರು, ಕುರಿ, ಮೇಕೆ, ಬೇಸಾಯ, ಗೊಬ್ಬರ, ಕಳೆ, ಕಣ್ಣಿ, ಮೂಗುದಾರ ಮುಂತಾದವುಗಳ ತುದಿ ಮೊದಲನ್ನು ಸಹಜವಾಗಿ ತಮ್ಮ ನರನಾಡಿಗಳಲ್ಲಿ ಅನುಭವಿಸಿ ಪ್ರಜ್ಞೆಯ ಭಾಗವಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದರೆಂದು ಕಾಣುತ್ತದೆ. ಇದೆಲ್ಲ ಮಕ್ಕಳು ಕಲಿಯಲೇಬೇಕಾದ ವಿದ್ಯೆ ಎನಿಸಿತು ನನಗೆ.

ತಿಮ್ಮಕ್ಕನ ಕಾಳಜಿಯಿಂದ ಮೂರು ಮರಿಗಳೂ ಬದುಕುಳಿದವು ಮತ್ತು ಮೂರ್ನಾಲ್ಕು ವರ್ಷದಲ್ಲಿ ಒಂದು ಮೇಕೆಯ ಮಂದೆಯೇ ಸೃಷ್ಟಿಯಾಯಿತು.

‍ಲೇಖಕರು Avadhi

January 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

೧ ಪ್ರತಿಕ್ರಿಯೆ

  1. Sudhakara Battia

    Story writing is the painting of the experience ❤️ Let your stories may flourish like ತಿಮ್ಮಕ್ಕನ ಕುರಿ ಮಂದೆ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sudhakara BattiaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: