ಕರುಣಾಳುವೇ- ಬಿರಿಯಾನಿ ಬೇಡ, ಮೀನು ನೀಡು

ಮತ್ಸ್ಯಗಂಧಿಯರ ನಾಡಲ್ಲಿ…
ಜಿ ಎನ್ ಮೋಹನ್ 
img_7377-111
ಫ್ರೇಮ್ -೩   
 
ಓ ಎನ್ ವಿ
ಚಿತ್ರರಂಗದ ಜಗಮಗಿಸುವ ಎಲ್ಲಾ ತಾರೆಗಳ ಮಧ್ಯೆ ತನ್ನದೇ ಆದ ಚಮಕ್ ತೋರಿಸಿದ ಒಬ್ಬರಿದ್ದರೆ ಅದು ಓ ಎನ್ ವಿ. ಅಥವಾ ಓ ಎನ್ ವಿ ಕುರುಪ್. ಮಲಯಾಳಂ ನ ಸಂತಸ ಹಾಗೂ ನಿಟ್ಟುಸಿರು ಎರಡನ್ನೂ ಹಿಡಿದಿಟ್ಟ ವೈಕಂ ಪೀಳಿಗೆಯ ನಂತರದ ಕಾಲ ಅದು ನಿಸ್ಸಂದೇಹವಾಗಿ ಓ ಎನ್ ವಿ ಹಾಗೂ ಅವರ ಸಮಕಾಲೀನರದ್ದು. ಓ ಎನ್ ವಿ ಮಲಯಾಳ ಸಾಹಿತ್ಯ ಪ್ರೇಮಿಗಳಿಗೆ ಬರೀ ಓ ಎನ್ ವಿ ಅಲ್ಲ ‘ನಮ್ಮುಡೆ ಓ ಎನ್ ವಿ’ ( ನಮ್ಮ ಓ ಎನ್ ವಿ). ಅಂದಿನ ತಾರೆಗಳ ತೋಟದಲ್ಲಿ ಓ ಎನ್ ವಿ ನಿಧಾನವಾಗಿ ನಡೆದು ವೇದಿಕೆಗೆ ಬರುತ್ತಿದ್ದರೆ ಜನ ದೀರ್ಘ ಚಪ್ಪಾಳೆಯ ಮಳೆ ಸುರಿಸುತ್ತಿದ್ದರು.
995
ಒಂದು ದಿನ ದೋಣಿಯನ್ನೇರಿ ಅರಬ್ಬೀ ಸಮುದ್ರದ ಅಲೆಗಳೊಡನೆ ಆಟವಾಡುತ್ತ, ಹೊನ್ನಾವರಕ್ಕೆ ಬಂದೆ. ಅಲ್ಲಿ ‘ಯಕ್ಷಗಾನದ ದೇವರು’ ಎಂದೇ ಕರೆಯಲ್ಪಡುವ ಶಂಭು ಹೆಗಡೆ ಇದ್ದರು. ‘ಕೃಷ್ಣ ನಾನೋ, ಇಲ್ಲಾ ಶಂಭು ಹೆಗಡೆಯೋ’ ಎಂದು ಆ ಕೃಷ್ಣನಂತ ಕೃಷ್ಣ ಪರಮಾತ್ಮನಿಗೇ ಸಂದೇಹ ಬರುವಷ್ಟು ಕೃಷ್ಣ ಪಾತ್ರದಲ್ಲಿ ಜನಪ್ರಿಯರಾಗಿರುವ ಶಂಭು ಹೆಗಡೆ ಅವರೊಡನೆ ಒಂದು ಇಡೀ ದಿನ ಯಕ್ಷಗಾನದ ಬಗ್ಗೆ ಮಾತನಾಡುವುದಿತ್ತು. ‘ಮಾತಾಡಿ ಬನ್ನಿ’ ಅಂತ ಆಗ ‘ಸಂಕುಲ’ ನಡೆಸುತ್ತಿದ್ದ ವಿಜಯಮ್ಮ ಅಣತಿ ನೀಡಿದ್ದರು.
ಮಾತನಾಡುತ್ತಾ ಆಡುತ್ತಾ ಶಂಭು ಹೆಗಡೆ ಯಾಕೋ ವಿಷಣ್ಣರಾದರು. ನೋಡಿ ಯಕ್ಷಗಾನಕ್ಕೆ ಈಗ ರೇಪ್ ಬಂದಿದೆ, ಅಶ್ಲೀಲ ಹಾಡುಗಳು ಕಾಲಿಟ್ಟಿವೆ. ಯಕ್ಷಗಾನ ಏನಾಗಿ ಹೋಯಿತು ಅಂತ ನಿಟ್ಟುಸಿರಿಟ್ಟರು. ಈಗ ಯಾವುದೇ ಬಸ್ ಟೆಂಪೋ ಏರಿದರೂ ದ್ವಂದ್ವಾರ್ಥದ ಹಾಡುಗಳನ್ನೇ ಹಾಕುತ್ತಾರೆ. ಸಾರ್ವಜನಿಕವಾಗಿಯೇ ಮನಸ್ಸನ್ನು ಅಶ್ಲೀಲವಾಗಿಸುವಾಗ ಯಕ್ಷಗಾನ ಶುದ್ಧವಾಗಿರಬೇಕು ಎಂದರೆ ಹೇಗೆ ಅಂತ ಕೇಳಿದರು.
ಮಾತೆಲ್ಲಾ ಮುಗಿದು ನಾನು ಭಟ್ಕಳಕ್ಕೆ, ಅವರು ಇಡಗುಂಜಿಯ ಬಳಿ ನೆಂಟರ ಮನೆ ತಲುಪಿಕೊಳ್ಳಲು ಯಾವುದೋ ಟೆಂಪೋ ಅಡ್ಡ ಹಾಕಿದೆವು. ಏರಿದ್ದೇ ತಡ ಕಿವಿಗಳು ಯಾಕಿವೆಯೋ ಎನ್ನಿಸುವಂತ ಹಾಡುಗಳು ಹರಿಯಲಾರಂಭಿಸಿತು. ಶಂಭು ಹೆಗಡೆ ನನ್ನ ಮುಖ ನೋಡಿದರು. ನನಗಾದರೂ ಅವರ ಮುಖ ನೋಡದೆ ಇನ್ನೇನು ಮಾಡಲು ಸಾಧ್ಯವಿತ್ತು.
ಇದಾದ ಸ್ವಲ್ಪ ದಿನಕ್ಕೆ ಮಂಗಳೂರಿನಿಂದ ಕಾಸರಗೋಡಿಗೆ ಅಂತ ಕೇರಳದ ಬಸ್ ಏರಿದೆ. ಡ್ರೈವರ್ ಟೇಪ್ ಆನ್ ಮಾಡಿದ. ಓ! ಇನ್ನು ಕಿವಿ ಮುಚ್ಚಿಕೊಳ್ಳದೆ ಬೇರೆ ದಾರಿ ಇಲ್ಲ ಅಂದುಕೊಂಡೆ. ಆದರೆ ಟೇಪ್ ಎತ್ತರದ ದನಿಯಲ್ಲಿ -ಹಾಡುತ್ತಿದ್ದಾರೋ ಇಲ್ಲಾ ವಾಚಿಸುತ್ತಿದ್ದಾರೋ ಎನ್ನುವಂತೆ – ತೇಲಿಸುತ್ತಿತ್ತು. ಆ ಹಾಡಿಗೆ ಹಿನ್ನೆಲೆಯಾಗಿ ಒಂದು ಕೊಳಲ ನಾದ.
ಶಂಭು ಹೆಗಡೆಯವರ ಜೊತೆಗೆ ಕೇಳಿದ್ದ ಹಾಡುಗಳು ನೆನಪಿಗೆ ಬಂದ ನಾನು ಪಕ್ಕದಲ್ಲಿದ್ದವರನ್ನು ಇದು ಯಾವ ಟೇಪ್ ಎಂದು ಕೇಳಿದೆ. ಓ ಎನ್ ವಿ ಎಂದ. ನಾನು ಎಚ್ ಎಂ ವಿ ತರಾ ಇದೂ ಯಾವುದೋ ಆಡಿಯೋ ಕಂಪನಿ ಎಂದುಕೊಂಡು ಸುಮ್ಮನಾದೆ.
ಆಮೇಲೆ ಒಂದು ದಿನ ನನ್ನ ಗೆಳತಿಗೆ ನೀನು ಕಾಸರಗೋಡಿನಿಂದ ಬರುವಾಗ ಯಾವುದಾದರೋ ಓ ಎನ್ ವಿ ಕ್ಯಾಸೆಟ್ ತಂದು ಬಿಡು ಅಂದೆ. ನಿನಗೆ ಓ ಎನ್ ವಿ ಗೊತ್ತಾ ಅಂದಳು ಹ್ಞೂ ಅಂದೆ. ಕೇರಳದಲ್ಲಿ ಅದೇ ಕಂಪನಿ ಫೇಮಸ್ಸಾ ಅಂದೆ. ಇದೇನಪ್ಪಾ ಎನ್ನುವಂತೆ ಮುಖ ನೋಡಿದಳು. ಓ ಎನ್ ವಿ ಕಂಪನಿಯ ಒಂದು ಕ್ಯಾಸೆಟ್ ಮಾತ್ರ ಸಾಕು ಎಂದೆ. ಅವಳು ಬಿದ್ದೂ ಬಿದ್ದೂ ನಕ್ಕಳು. ಓ ಎನ್ ವಿ ಅಂದರೆ ಕಂಪನಿ ಅಲ್ಲ. ಓ ಎನ್ ವಿ ಕುರುಪ್ ಅಂದಳು. ‘ಯಾ, ಅಲ್ಲಾ’ ಅಂದುಕೊಂಡೆ.
ನಂತರ ಭೇಟಿಯಾದಾಗ ಅವಳ ಕೈನಲ್ಲಿ ಒಂದು ಕ್ಯಾಸೆಟ್ ಇತ್ತು. ಮಲಯಾಳಂನಲ್ಲಿ ಕವಿಗಳೇ ವಾಚಿಸಿದ ಕವಿತೆಗಳ ಕ್ಯಾಸೆಟ್ ಸಿಕ್ಕಾಪಟ್ಟೆ ಫೇಮಸ್. ಬಹುತೇಕ ಎಲ್ಲಾ ಕವಿಗಳೂ ಕ್ಯಾಸೆಟ್ನಲ್ಲಿದ್ದಾರೆ. ಅವರು ಎಷ್ಟು ಫೇಮಸ್ ಎಂದರೆ ಬಸ್ ಆಟೋ ಟೆಂಪೋ ಎಲ್ಲದರಲ್ಲೂ ನಮ್ಮ ‘ಎಫ್ ಎಂ’ ತರಾ ಈ ಕವಿತೆಗಳು ಹರಿಯುತ್ತಲೇ ಇರುತ್ತದೆ. ಅದರಲ್ಲೂ ಅವರು ಕವಿತೆ ವಾಚಿಸುವ ಶೈಲಿಯೂ ಅವರನ್ನು ಇನ್ನಷ್ಟು ಕ್ಯಾಸೆಟ್ ಹತ್ತಿರಕ್ಕೆ ತಂದಿದೆ. ಅದು ವಾಚನ ಹಾಗೂ ಗಾಯನ ಎರಡರ ಮಿಕ್ಸ್.
ಕನ್ನಡದಲ್ಲಿ ಲಕ್ಷ್ಮೀನಾರಾಯಣ ಭಟ್ಟರು ಎಲ್ಲಾ ಕವಿಗಳನ್ನೂ ಸೇರಿಸಿ ಅವರಿಂದ ಕವನ ವಾಚಿಸಿ ತಂದ ‘ಸಮ್ಮಿಲನ’ವೇ ಮೊದಲನೆಯದ್ದು. ಆಮೇಲೆ ಒಂದೋ ಎರಡೋ ಪ್ರಯೋಗ ಆಗಿರಬಹುದು ಅಷ್ಟೆ.
ಆಮೇಲಾಮೇಲೆ ನಾನು ಕಾಸರಗೋಡು, ಕಣ್ಣೂರು, ಕುಂಬ್ಳೆ ಅಂತೆಲ್ಲಾ ಹೋಗುವಾಗ ಅಲ್ಲಿನ ಕ್ಯಾಸೆಟ್ ಅಂಗಡಿಗೂ ಹೆಜ್ಜೆ ಹಾಕುತ್ತಿದ್ದೆ. ಅರ್ಥವಾಗದಿದ್ದರೂ ಮಲಯಾಳ ಕವಿತೆಗಳ ಕ್ಯಾಸೆಟ್ ತಂದು ಕೇಳುವುದು ಅಭ್ಯಾಸವಾಗಿ ಹೋಗಿತ್ತು.
ಈಗ ನೋಡೀದರೆ ಓ ಎನ್ ವಿ ಎದುರೇ ಕುಳಿತಿದ್ದೇನೆ. ‘ಓ ಎನ್ ವಿ ಕಂಪನಿ’ ಎಂದು ನನ್ನೊಳಗೇ ನಕ್ಕೆ. ಓ ಎನ್ ವಿ ಪೋಡಿಯಮ್ ಬಳಿಗೆ ಹೆಜ್ಜೆ ಹಾಕುವಾಗ ತಾರೆಗಳು ನಿಮಗೆ ಮಣಿವೆ ಎಂಬಂತೆ ಕಾಲಿಗೆ ನಮಸ್ಕರಿಸುತ್ತಿದ್ದರು. ಚಿತ್ರೋತ್ಸವದ ಆರಂಭವೇ ಓ ಎನ್ ವಿ ಕವಿತೆ ವಾಚನದಿಂದ.
mzya045ಓ ಎನ್ ವಿ ತಮ್ಮ ಇಳಿವಯಸ್ಸಿನಲ್ಲಿಯೂ ದನಿ ಎತ್ತಿ-
ಇಲ್ಲಿ ತೆಂಗಿನ ಮರಗಳು ತಮ್ಮ ಗರಿ ಬೀಸಿ
ಪ್ರತಿಯೊಬ್ಬರನ್ನೂ ಬರಮಾಡಿಕೊಳ್ಳುತ್ತದೆ.
ಇಲ್ಲೇ ಒಂದಿಷ್ಟು ಕ್ಷಣ ಕುಳಿತು
ನಾವು ನೀವೆಲ್ಲಾ ಬದುಕಿನ ಕಷ್ಟ ಸುಖಗಳನ್ನು
ಹಂಚಿಕೊಳ್ಳೋಣ
-ಎಂದು ಹಾಡಿದರು.
ಅದು ಮಲಯಾಳಂ ಇರಲಿ, ಇಂಗ್ಲಿಶ್ ನಲ್ಲಿರಲಿ ಅದೇ ಸ್ಟೈಲ್. ಓ ಎನ್ ವಿ ಹಾಡುತ್ತಿದ್ದರೆ ನೆರೆದವರೆಲ್ಲ ಮುಂಬೈನ ಸಾಂತ್ವನಕ್ಕಾಗಿ ಸಾವಿರಾರು ದೀಪಗಳನ್ನು ಎತ್ತಿ ಹಿಡಿದಿದ್ದರು. ಅಲ್ಲಿ ಭರವಸೆಯ ಬೆಳಕಿನ ಸಮುದ್ರವೊಂದು ಸೃಷ್ಟಿಯಾಗಿತ್ತು.
ಬಿರಿಯಾನಿ ತಿನ್ನಲೋ ಇಲ್ಲಾ ಕ್ಯಾಸೆಟ್ ಕೊಳ್ಳಲೋ ಎಂದು ತಲೆ ಬಿಸಿಮಾಡಿಕೊಂಡು ಬೀದಿಯಲ್ಲಿ ನಿಂತಿದ್ದ ನಾನು ಕೊನೆಗೆ ಕ್ಯಾಸೆಟ್ ಅಂಗಡಿಯನ್ನೇ ಹೊಕ್ಕೆ. ಅಲ್ಲಿ ಮತ್ತೆ ಕುರುಪ್ ತಮ್ಮ ಅಳಿದುಳಿದ ಎಲ್ಲಾ ಹಲ್ಲುಗಳನ್ನ್ನೂ ಬಿಟ್ಟುಕೊಂಡು ನಿಂತಿದ್ದರು- ಕ್ಯಾಸೆಟ್ ನ ಕವರ್ ಮೇಲೆ. ಕೊಂಡು ಹೊರಗೆ ಬಂದಾಗ ಅದು ಹಾಡಿನ ಕ್ಯಾಸೆಟ್ ಅಲ್ಲ ಎಂದು ಗೊತ್ತಾಯಿತು. ಇನ್ನೇನು? ಎಂದು ಮಲಯಾಳಿಗಳ ಮೊರೆ ಹೊಕ್ಕೆ. ಅವರೋ ತಮ್ಮ ಮಲಯಾಳಿ ನಾಲಿಗೆಯನ್ನೇ ತಿರುಗಿಸುತ್ತಾ ಇದು ಓ ಎನ್ ವಿ ಕವಿತೆಯ ದೃಶ್ಯ ರೂಪ ಎಂದರು.
ಅದು ಕೇವಲ ಕವಿತೆ ಮಾತ್ರವಾಗಿರಲಿಲ್ಲ. ಅದು ಒಂದು ಅರ್ಥದಲ್ಲಿ ಕೇರಳದ ನಾಡ ಗೀತೆ. ಕಾರಣ ಇಷ್ಟೇ, ಬಹುತೇಕ ಎಲ್ಲಾ ತಲೆಮಾರುಗಳೂ ಓ ಎನ್ ವಿ ಕವಿತೆಯನ್ನು ಶಾಲೆಯ ಪಠ್ಯದಲ್ಲಿ ಓದಿ ಬೆಳೆದಿದ್ದಾರೆ. ಈಗ ಅದು ಶಾರ್ಟ್ ಫಿಲಂ ಆಗಿ ಕ್ಯಾಸೆಟ್ ಒಳಗೆ.
ನನಗೂ ‘ಭಾರತ ಜನನಿಯ ತನುಜಾತೆ’ಯನ್ನೋ ಅಥವಾ ‘ಜೋಗದ ಸಿರಿ ಬೆಳಕಿನಲ್ಲಿ’ಯನ್ನೋ ಯಾಕೆ ಕ್ಯಾಸೆಟ್ ನೊಳಗೆ ಕೂರಿಸುವ ಐಡಿಯಾ ಹೊಳೆಯಲಿಲ್ಲ ಅನಿಸಿತು. ‘ಓ ನೊಂದವರನ್ನು ಕಾಪಾಡುವ ಕರುಣಾಳುವೇ…! ನಾನು ಹುಟ್ಟಿದಾಗಿನಿಂದಲೇ ಮೀನು ತಿನ್ನುವುದನ್ನು ಕಲಿಸಬಾರದಿತ್ತೆ’ ಎಂದು ನಿಟ್ಟುಸಿರಿಟ್ಟೆ. ಕಾಲು ಬಿರಿಯಾನಿ ಅಂಗಡಿಯನ್ನು ತಿರಸ್ಕರಿಸಿ ಮೀನಿನ ಹೋಟೆಲ್ ಹುಡುಕುತ್ತಾ ಹೊರಟಿತು.

‍ಲೇಖಕರು avadhi

December 20, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

4 ಪ್ರತಿಕ್ರಿಯೆಗಳು

 1. ಎಸ್ಪುಟ್ಟಪ್ಪ

  ತೆಂಕನಾಡ ಪ್ರವಾಸ ಕಥನ ಹೊರತಂದರೆ ಒಳ್ಳೆಯದು ಅನ್ನಿಸುತ್ತೆ.
  -ಎಸ್ಪುಟ್ಟಪ್ಪ

  ಪ್ರತಿಕ್ರಿಯೆ
 2. ಸಿದ್ದಮುಖಿ

  ಫಿಶ್ ಮಾರ್ಕೆಟ್ ಇರುವುದರಿಂದ ನಿಮ್ಮ ಮನಸ್ಸು ಮೀನಿನ ಹೋಟೆಲ್ ಅತ್ತ ಹರಿದಿದೆ. ಮತ್ಸ್ಯಗಂಧಿಯ ನಾಡಲ್ಲಿ ಮೀನಿನ ಕನವರಿಕೆ ಸಹಜವಾಗೇ ಇದೆ.
  ಸಿದ್ದಮುಖಿ

  ಪ್ರತಿಕ್ರಿಯೆ
 3. gowdacowboy

  GNM company yavra
  MATSYAGANDIYARA sarni munduvreyale beku
  illa andre strike madisabekagutte… hamm….

  ಪ್ರತಿಕ್ರಿಯೆ
 4. eshakumar h n

  namagella GNM pravaasa katheya swaada savivaravaagi doreyali koneya thuttinavaregu……..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: