
ರತ್ನರಾಯಮಲ್ಲ
ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನು
ನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು
ಕಡು ಬಿಸಿಲಿನ ಬೆವರಿನಲ್ಲಿಯೇ ನನ್ನ ಪ್ರಯಾಣ ಸಾಗುತಿತ್ತು
ನನ್ನ ದಾರಿಯಲ್ಲಿ ಒದ್ದೆಯ ಮೋಡವಾಗಿ ಬಂದವಳು ನೀನು
ನಾನು ಆ ಪ್ರೇಮದ ಅನುಪಮ ಅನುಭೂತಿಯನ್ನೇ ಮರೆತಿದ್ದೆ
ಕಳೆದು ಹೋದ ನನ್ನ ದಿನಗಳಿಗೆ ನೆನಪಾಗಿ ಬಂದವಳು ನೀನು

ಮನದ ಛಾವಣಿಯು ವಿರಹದ ಮಳೆಯಿಂದ ಹಸಿಯಾಗಿದೆ
ಕೊರೆಯುವ ಚಳಿಯಲ್ಲಿ ಕಂಬಳಿಯಾಗಿ ಬಂದವಳು ನೀನು
ನಾನು ಮರುಭೂಮಿಯಲ್ಲಿ ಏಕಾಂಗಿಯಾಗಿ ಅಲೆದಾಡುತ್ತಿದ್ದೆ
ಮನವನ್ನು ತಣಿಸುವ ಸಿಹಿ ಚಿಲುಮೆಯಾಗಿ ಬಂದವಳು ನೀನು
ಸಮಸ್ಯೆಗಳ ಮಾಯಾ ಜಾಲದಲ್ಲಿ ಕಳೆದು ಹೋಗಿದ್ದೆ ನಾನು
ನನ್ನ ಎಲ್ಲ ಗೊಂದಲಗಳಿಗೆ ಪರಿಹಾರವಾಗಿ ಬಂದವಳು ನೀನು
ಮನದರಸಿಯ ಚಿತ್ರವನ್ನು ಮನಸಾರೆ ಬಿಡಿಸುತ್ತಿದ್ದನು ‘ಮಲ್ಲಿ’
ನನ್ನ ಅಂದದ ಕಲಾಕೃತಿಗೆ ಜೀವವಾಗಿ ಬಂದವಳು ನೀನು
0 ಪ್ರತಿಕ್ರಿಯೆಗಳು