ಕಳೆದ ವಾರವಷ್ಟೇ ನಿವೃತ್ತರಾದರಂತೆ..

prasad naik

ಪ್ರಸಾದ್ ನಾಯ್ಕ್

ನಮ್ಮ ಪ್ರೌಢಶಾಲೆಯಲ್ಲೊಬ್ಬರು ಮೇಷ್ಟ್ರಿದ್ದರು.

ಒಂಭತ್ತನೇ ತರಗತಿಯಿಂದ ಹನ್ನೆರಡು ಪಾಸಾಗುವವರೆಗೂ ಅವರನ್ನು ನೋಡುತ್ತಲಿದ್ದೆ. ಚೆನ್ನಾಗಿ ಪಾಠ ಮಾಡುತ್ತಿದ್ದರು. ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಮಕ್ಕಳನ್ನು ಅಣಿಗೊಳಿಸುತ್ತಿದ್ದರು. ಪ್ರತೀ ವರ್ಷವೂ ಯಾವುದಾದರೂ ವಿನೂತನ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದರು. ಹಲವು ಬಾರಿ ಮಕ್ಕಳಿಂದಲೇ ಹೊಸ ಹೊಸ ಐಡಿಯಾಗಳನ್ನು ಪಡೆದುಕೊಂಡು ಪ್ರಸ್ತುತಗೊಳಿಸಿ ಯಶಸ್ವಿಗೊಳಿಸುತ್ತಿದ್ದರು.

ಶಾಲೆಯ ಸಾಂಸ್ಕೃತಿಕ ವಿದ್ಯಾರ್ಥಿ ಸಂಘಗಳು ಇವರಿಂದಾಗಿಯೇ ಸಕ್ರಿಯವಾಗಿದ್ದವು. ಕಥೆ, ಕವನ, ಲೇಖನ ಗುಚ್ಛಗಳು, ಚಿತ್ರಗಳು… ಹೀಗೆ ಹತ್ತು ಹಲವು ಅಂಶಗಳನ್ನೊಳಗೊಂಡ ಶಾಲಾ ವಾರ್ಷಿಕ ಸಂಚಿಕೆಯನ್ನೂ ಹೊರ ತರುತ್ತಿದ್ದರು. ಅದು ಹಲವು ವರ್ಷಗಳ ಕಾಲ ಸತತವಾಗಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿಗಳನ್ನೂ ಬಾಚುತ್ತಿತ್ತು. ಹೀಗೆ ನಾನು ಕಂಡ ಮೊದಲ ಆಲ್-ರೌಂಡರ್ ಶಿಕ್ಷಕರಿವರು.

ಅಷ್ಟೇ ಆಗಿದ್ದರೆ ಅವರು ಇಷ್ಟು ವರ್ಷಗಳ ಬಳಿಕವೂ ನೆನಪಿನಲ್ಲಿ ಉಳಿಯುತ್ತಿದ್ದರೋ ಇಲ್ಲವೋ. ಆದರೆ ಇವೆಲ್ಲದಕ್ಕಿಂತಲೂ ನನ್ನನ್ನು ಹೆಚ್ಚಾಗಿ ಕಾಡಿದ್ದು ಅವರ ತಾಳ್ಮೆ. ಮುಖದಲ್ಲಿದ್ದ ಸದಾ ಮಿಂಚುತ್ತಿದ್ದ ಬುದ್ಧನ ಮುಗುಳ್ನಗೆ. ನಾಲ್ಕು ವರ್ಷಗಳಲ್ಲಿ ಮಕ್ಕಳಿಗೆ ಎರಡೇಟು ಬಿಟ್ಟಿದ್ದಿರಲಿ, ನೆಟ್ಟಗೆ ಸಿಡುಕಿದ್ದನ್ನೂ ನಾನು ನೋಡಿರಲಿಲ್ಲ.

ಪವಾಡವೇನೋ ಎಂಬಂತೆ ಉಳಿದ ತರಗತಿಗಳಲ್ಲಿದ್ದ ಗಲಾಟೆಯ ವಾತಾವರಣಗಳು ಇವರ ತರಗತಿಗಳಲ್ಲಿರುತ್ತಿರಲಿಲ್ಲ. ವಿದ್ಯಾರ್ಥಿಗಳು, ಸಹಶಿಕ್ಷಕರು, ಶಿಕ್ಷಕೇತರ ಬಂಧುಗಳು ಹೀಗೆ ಎಲ್ಲರಿಗೂ ಅವರು ಬೇಕಾಗಿದ್ದವರಾಗಿದ್ದರು. ಒಟ್ಟಾರೆಯಾಗಿ ಬೆತ್ತದ ಸಹಾಯವಿಲ್ಲದೆಯೂ ಆಗಷ್ಟೇ ಮೀಸೆ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ನಾನು ಸಂಭಾಳಿಸಬಲ್ಲೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದರು.

ಶಾಲಾ ಸಂಚಿಕೆಯ ತಯಾರಿಗಾಗಿ ರಜಾ ದಿನಗಳಲ್ಲಿ ಅವರು ನನ್ನನ್ನು ಕರೆಯುತ್ತಿದ್ದಿದ್ದು ನೆನಪಿದೆ. ಕಂಪ್ಯೂಟರುಗಳು ಹೊಸದಾಗಿ ಬಂದ ದಿನಗಳಾಗಿದ್ದರಿಂದ ಚಿತ್ರಗಳನ್ನು ಬಿಡಿಸುತ್ತಲೇ ಪುಟ ವಿನ್ಯಾಸವನ್ನು ನಾನು ಆ ದಿನಗಳಲ್ಲಿ ಮಾಡುತ್ತಿದ್ದೆ. ಆದರೆ ನನ್ನನ್ನು ಕೆಲಸಕ್ಕೆ ಹಚ್ಚಿ ಅವರೇನೂ ಮಾಯವಾಗುತ್ತಿರಲಿಲ್ಲ. ನನ್ನಂತೆಯೇ ಅವರೂ ಕೂಡ ಬಿಕೋ ಎನ್ನುತ್ತಿದ್ದ ಆ ತರಗತಿಯ ಬೆಂಚೊಂದರಲ್ಲಿ ಕುಳಿತು ಶಾಲಾ ಸಂಬಂಧಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು.

ರಜಾ ದಿನಗಳಲ್ಲಿ ತಮ್ಮೊಂದಿಗೆ ಕೆಲಸ ಮಾಡಲು ಬರಬೇಕೆಂದು ಅವರು ಅದೆಷ್ಟು ವಿನಯದಿಂದ ಕೇಳುತ್ತಿದ್ದರೆಂದರೆ “ಆಗಲ್ಲ” ಎಂದು ಹೇಳುವ ಹೇಳುವ ಮಾತೇ ಇರಲಿಲ್ಲ. ತಮ್ಮ ತಮ್ಮ ಆಸಕ್ತಿಯ ಕೆಲಸಗಳಲ್ಲಿ ತೊಡಗಿರುತ್ತಿದ್ದ ಕಾರಣದಿಂದಲೋ ಏನೋ ಸಮಯದ ಪರಿವೆಯೇ ಇಲ್ಲವೆಂಬಂತೆ ನಾವಿಬ್ಬರೂ ನಮ್ಮ ಕೆಲಸಗಳಲ್ಲಿ ತಲ್ಲೀನರಾಗುತ್ತಿದ್ದೆವು. ‘ಶಿಕ್ಷಕರು ಹೀಗೂ ಇರುತ್ತಾರೋ’ ಎಂಬ ಅಚ್ಚರಿಯ ಕಣ್ಣುಗಳಿಂದ ಅವರನ್ನು ನಾನು ಹಲವು ಬಾರಿ ನೋಡಿದ್ದೇನೆ.

ಇದಾಗಿ ಹತ್ತು ವರ್ಷಗಳು ಕಳೆದು ಹೋಗಿವೆ. ನನ್ನ ಈ ಮೆಚ್ಚಿನ ಶಿಕ್ಷಕರು ಕಳೆದ ವಾರವಷ್ಟೇ ನಿವೃತ್ತರಾದರಂತೆ. ಈ ಬಾರಿ ಒಂದು ಆತ್ಮೀಯವಾದ ಪತ್ರವನ್ನು ಅವರಿಗಾಗಿ ಬರೆದು ಕೆಲ ನೆನಪುಗಳನ್ನು ಬಿಚ್ಚಿಟ್ಟೆ.

prasad naik doodles

ಆಗ ನಾನು ಒಂಭತ್ತನೇ ತರಗತಿಯಲ್ಲಿದ್ದೆ. ಭಾಷಾ ವಿಷಯಗಳನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ನನಗೆ ಗಣಿತವು ಕಬ್ಬಿಣದ ಕಡಲೆಯಾಗಿತ್ತು. ಆಂಗ್ಲ ಭಾಷೆಯ ತರಗತಿಗಳು ಇಷ್ಟವಾಗುತ್ತಿದ್ದರೂ ಭಾಷೆಯ ಬಗೆಗಿದ್ದ ಭಯವು ಓದಿನ ಖುಷಿಯನ್ನು ತಿಂದು ಹಾಕುತ್ತಿತ್ತು. ಇಂತಿಪ್ಪ ಆಂಗ್ಲ ಭಾಷೆಯ ತರಗತಿಯೊಂದರಲ್ಲಿ ಮುಂದಿನ ಬುದ್ಧಿವಂತರ ಸಾಲಿನಲ್ಲೂ, ಹಿಂದಿನ ಪುಂಡರ ಸಾಲಿನಲ್ಲೂ ಕೂತಿರದೆ ಮಧ್ಯಮ ಸ್ಥಾನದಲ್ಲಿ ಕುಳಿತಿದ್ದ ನನಗೆ ಅಪರೂಪಕ್ಕೆಂಬಂತೆ ತರಗತಿಯು ಬೋರು ಹೊಡೆಸತೊಡಗಿತ್ತು.

ಕುಳಿತಲ್ಲೇ ನೋಟ್ ಬುಕ್ಕಿನ ಕೊನೆಯ ಹಾಳೆಯೊಂದನ್ನು ಹರಿದು ತೆಗೆದ ನಾನು ನಮ್ಮ ಆಂಗ್ಲ ಭಾಷಾ ಮೇಷ್ಟ್ರ ಚಿತ್ರವನ್ನು ಬಿಡಿಸತೊಡಗಿದ್ದೆ. ಚಕಚಕನೆ ಐದು ನಿಮಿಷಗಳಲ್ಲಿ ಮ್ಯಾಗಿ ತಯಾರಾದಂತೆ ನಮ್ಮ ಮೇಷ್ಟ್ರ ಕ್ಯಾರಿಕೇಚರ್ ತಯಾರಾಯಿತು. ರಿಯಲಿಸ್ಟಿಕ್ ಆಗಿ ಬಂದಿದ್ದ ಆ ಚಿತ್ರವನ್ನು ನೋಡಿ ಕಣ್ತುಂಬಿಕೊಳ್ಳುತ್ತಾ ‘ಅಬ್ಬಾ ಸಖತ್ತಾಗಿದೆ’ ಎಂದು ಮನದಲ್ಲೇ ಹಿರಿಹಿರಿ ಹಿಗಿದ್ದೂ ಆಯಿತು.

ಚಿತ್ರವನ್ನು ಬಿಡಿಸಿದ್ದೇನೋ ಸರಿ, ಆದರೆ ಸುಮ್ಮನಿರುವ ಜ್ಞಾನ ಆ ವಯಸ್ಸಿನಲ್ಲಿ ಅದೆಲ್ಲಿತ್ತು! ಹಾಗೇ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಿತ್ರನೊಬ್ಬನಿಗೆ ತೋರಿಸಿದೆ. ಆತ ಉಕ್ಕಿ ಬರುತ್ತಿದ್ದ ನಗುವನ್ನು ಅದುಮಿಕೊಳ್ಳಲು ಪ್ರಯತ್ನಿಸುತ್ತಾ ‘ಸೂಪರ್ ಮಾರಾಯ’ ಅಂದ. ಆದರೆ ಆ ಹಾಳೆಯು ಅವನಿಂದ ಇನ್ನೊಬ್ಬನಿಗೆ, ಇನ್ನೊಬ್ಬನಿಂದ ಮತ್ತೊಬ್ಬನಿಗೆ ಕರಪತ್ರದಂತೆ ಹೋಗುತ್ತಲೇ ಎಲ್ಲರೂ ತುಟಿಯಂಚಿನಲ್ಲೇ ನಗತೊಡಗಿದರು. ಗಂಭೀರವಾಗಿ ಪಾಠ ಮಾಡುತ್ತಿದ್ದ ನಮ್ಮ ಮೇಷ್ಟ್ರು ಈ ಮುಸಿಮುಸಿ ನಗುವಿನಿಂದ ಏಕಾಗ್ರತೆಯನ್ನು ಕಳೆದುಕೊಂಡಿದ್ದಂತೂ ಸತ್ಯ.

ಗಾಳಿ ಮಾತಿನಂತೆ ಎಲ್ಲೆಲ್ಲೋ ಹೋಗಿದ್ದ ಆ ಹಾಳೆಯು ಕೊನೆಗೂ ಅವರ ಕೈ ಸೇರಿತ್ತು. ನಾನು ಕುಳಿತಲ್ಲಿಯೇ ಕುಸಿದು ಹೋದೆ. ಹಲವು ವರ್ಷಗಳಿಂದ ಮೊದಲನೇ rank ಪಡೆಯುತ್ತಾ ಗುಡ್-ಬಾಯ್ ಸ್ಟೇಟಸ್ ಅನ್ನು ಪಡೆಯುತ್ತಾ ಬಂದಿದ್ದ ನಾನು ಮಹಾಪರಾಧವಾಯಿತೇನೋ ಎಂದೆನಿಸಿ ತಪ್ಪಿತಸ್ಥ ಭಾವನೆಯೂ, ಭಯವೂ ಒಟ್ಟೊಟ್ಟಿಗೇ ಬಂದು ಸಣ್ಣಗೆ ಬೆವರತೊಡಗಿದೆ.

ಕೈಯಿಂದ ಕೈಗೆ ಹೋಗುತ್ತಾ ನೆರಿಗೆಗಳಿಂದ ತುಂಬಿ ಹೋಗಿದ್ದ ಆ ಹಾಳೆಯನ್ನು ತೆಗೆದುಕೊಂಡ ಅವರು ಉತ್ತರ ಪತ್ರಿಕೆಯನ್ನು ಪರೀಕ್ಷಿಸುವಂತೆ ಗಂಭೀರವಾಗಿ ಕಣ್ಣಾಡಿಸಿದರು. ಆದರೆ ಇನ್ನೇನು ಮಹಾರಾದ್ಧಾಂತವಾಗಲಿದೆ ಎಂಬ ಟೆನ್ಷನ್ನಿನಲ್ಲಿದ್ದ ನನಗೆ ಬೇರೆಯದೇ ಕಾದಿತ್ತು. ನೀಲಿಶಾಯಿಯ ಪೆನ್ನಿನಲ್ಲಿ ಬಿಡಿಸಿದ್ದ ತನ್ನದೇ ವ್ಯಂಗ್ಯಚಿತ್ರವನ್ನು ನೋಡುತ್ತಾ ಗೊಳ್ಳನೆ ನಕ್ಕಿದ್ದರು ಅವರು. ತಲೆಯನ್ನಾಡಿಸುತ್ತಾ ನಕ್ಕ ಅವರು “ಚೆನ್ನಾಗಿದೆ” ಅಂದರಷ್ಟೇ. ಅವರ ಗಂಭೀರವಾದ ಮುಖದಲ್ಲಿ ನಗೆ ಬುಗ್ಗೆಯನ್ನು ಕಾಣುತ್ತಿದ್ದಂತೆಯೇ ವಾತಾವರಣವೂ ತಿಳಿಯಾಗಿ ಎಲ್ಲರೂ ಪಕಪಕನೆ ನಗಲಾರಂಭಿಸಿದರು. ನಾನು ಮಾತ್ರ ಸಂಕೋಚದಿಂದ ಏನು ಮಾಡಬೇಕೆಂದೇ ತಿಳಿಯದೆ ಪೆಚ್ಚಾಗಿ ನಿಂತಿದ್ದೆ. ತರಗತಿಯ ನಂತರ ನನ್ನನ್ನು ಕರೆದ ಆ ಶಿಕ್ಷಕರು ಚಿತ್ರಕಲೆಯನ್ನು ಯಾವತ್ತೂ ಬಿಡಬಾರದೆಂದು ಹೇಳಿ ನನ್ನ ಬೆನ್ನು ತಟ್ಟಿದ್ದರು.

ಆ ಕಾಗದವು ಎಲ್ಲೋ ಕಳೆದು ಹೋಗಿರಬಹುದು. ಆದರೆ ಆ ಮಧುರ ಕ್ಷಣಗಳು ಇನ್ನೂ ಜೀವಂತವಾಗಿವೆ.

ಇಂಥಾ ಹಲವು ಶಿಕ್ಷಕರು ನಮ್ಮೆಲ್ಲರ ಜೀವನದಲ್ಲಿ ಬಂದು ಹೋಗುತ್ತಾರೆ. ಬೋಧನೆಯ ನಿಗದಿತ ಅವಧಿಯ ಬಳಿಕವೂ ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗಾಗಿ ಸ್ವಇಚ್ಛೆಯಿಂದ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡುತ್ತಾರೆ, ಓದಿನಲ್ಲಿ ಸುಮಾರಾಗಿದ್ದವರ ಕೈಗಳಲ್ಲಿ ಇನ್ನಷ್ಟು ಪುಸ್ತಕಗಳನ್ನು ತುರುಕುತ್ತಾರೆ, ಕವಿತೆಗಳನ್ನು ಗೀಚಲು ಆರಂಭಿಸಿರುವ ಮಗುವಿನ ಕೈಯಲ್ಲೊಂದು ಚೆಂದದ ಪುಸ್ತಕವನ್ನಿಡುತ್ತಾರೆ, ಚಿರತೆಯ ವೇಗವಿರುವ ಭವಿಷ್ಯದ ಓಟಗಾರ್ತಿಯಂತಿರುವ ಬಡಬಾಲಕಿಯೊಬ್ಬಳಿಗೆ ವಿಶೇಷ ಬಹುಮಾನದ ನೆಪದಲ್ಲಿ ತಮ್ಮದೇ ಖರ್ಚಿನಿಂದ ಹೊಸ ಜೋಡಿ ಸ್ಪೈಕ್ಸ್ ಶೂ ಒಂದನ್ನು ಖರೀದಿಸಿ ಕೊಡುತ್ತಾರೆ.

“ತಲೆಗೂದಲು ಬೆಳ್ಳಗಾಗಿದ್ದರೂ ನಾನು ಓದುವ ಅಭ್ಯಾಸವನ್ನಿಟ್ಟುಕೊಂಡಿದ್ದೇನೆ. ಓದುವ ವಯಸ್ಸಿನಲ್ಲಿರುವ ನಿಮಗೇನು ಧಾಡಿ?”, ಎನ್ನುತ್ತಾ ಚಿಂತನೆಗೆ ಹಚ್ಚುತ್ತಾರೆ. ಹಾಸ್ಯ ಪ್ರಜ್ಞೆಯನ್ನು, ಜೀವನ ಪ್ರೀತಿಯನ್ನು ಕಲಿಸುತ್ತಾರೆ. ತಮ್ಮ ವಿದ್ಯಾರ್ಥಿಗಳೊಂದಿಗೆ ತಾವೂ ಬೆಳೆಯುತ್ತಾರೆ. ಸಂಬಳ ಕೊಡುವ ಸಿಲೇಬಸ್ಸು, ಅಂಕಗಳು, ರ್ಯಾಂಕುಗಳ ಪರಿಧಿಯಾಚೆಗೂ ಬಹಳಷ್ಟನ್ನು ಕಲಿಸಿ ಹೋಗುತ್ತಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಎಂದೆಂದಿಗೂ ಪ್ರಸ್ತುತವೆನಿಸುವ ಮೌಲ್ಯಗಳನ್ನು ಕೊಟ್ಟು ಹೋಗುತ್ತಾರೆ.

ಇಂಥಾ ಬೆರಳೆಣಿಕೆಯ ಶಿಕ್ಷಕರು ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ಘಟ್ಟದಲ್ಲಿ ಬಂದು ತಮ್ಮದೇ ಆದ ಛಾಪನ್ನು ಮೂಡಿಸಿ ಮರೆಯಾಗುವಂಥವರು. ಆದರೆ ಇವರಿಂದ ಬಳುವಳಿಯಾಗಿ ಬಂದ ಮೌಲ್ಯಗಳು ಕೊನೆಯವರೆಗೂ ನಮ್ಮನ್ನು ಇಷ್ಟ ದೇವತೆಯಂತೆ ಕಾಯುವುದೂ ಅಷ್ಟೇ ಸತ್ಯ. ಅದ್ಭುತವಾದ ಪುಸ್ತಕವೊಂದನ್ನು ಓದಿ ಮುಗಿಸಿದೊಡನೆಯೇ ಅಕ್ಷರ ಕಲಿಸಿದ ಅಧ್ಯಾಪಕ ವೃಂದವೂ ಮತ್ತು ಓದಿನ ಹುಚ್ಚು ಹಿಡಿಸಿದ ಕೆಲ ಶಿಕ್ಷಕರೂ ನನಗೆ ನೆನಪಾಗುವುದುಂಟು.

ಅಬ್ದುಲ್ ಮಲಿಕ್ ಎಂಬ ಕೇರಳದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಹಲವು ವರ್ಷಗಳ ಕಾಲ ಈಜುತ್ತಲೇ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬರುತ್ತಿದ್ದ ವರದಿಯೊಂದು ನನ್ನನ್ನು ಅಚ್ಚರಿಗೊಳಪಡಿಸಿತ್ತು. ರಸ್ತೆ ಮಾರ್ಗವಾಗಿ ಹೋದರೆ ಮೂರು ಬಸ್ಸುಗಳನ್ನು ಹಿಡಿಯಬೇಕೆಂದೂ ಮತ್ತು ಇದರಿಂದ ಸಮಯವು ವಿನಾಕಾರಣ ಹಾಳಾಗುತ್ತದೆಂದೂ, ಉದ್ಯೋಗ ನಿಮಿತ್ತ ಶಾಲೆ ಮತ್ತು ಮನೆಯ ಮಧ್ಯದ ದೂರವನ್ನು ಕ್ರಮಿಸಲು ದಿನನಿತ್ಯವೂ ನದಿಯೊಂದನ್ನು ಈಜುತ್ತಾ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರಂತೆ ಈ ಮಲಿಕ್. ಪ್ರಸ್ತುತ ಕಾಲಘಟ್ಟದ ಹಲವು ಸವಾಲುಗಳ ಹೊರತಾಗಿಯೂ ಇಂಥಾ ಅಪರೂಪದ ಶಿಕ್ಷಕರಿಂದಲೇ ಶಿಕ್ಷಕ ವೃತ್ತಿಯು ತನ್ನ ಘನತೆಯನ್ನು ಇನ್ನೂ ಉಳಿಸಿಕೊಂಡಿದೆ ಎಂಬುದನ್ನು ಹೇಳಲೇಬೇಕು.

‍ಲೇಖಕರು Admin

September 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This