ಕವಿತೆಯ ನಡಿಗೆ ಕೇಳುಗರ ಕಡೆಗೆ…

pics.jpg

ನೋಡುವುದು ಬೇರೆ, ಕಾಣುವುದು ಬೇರೆ.

ಕಾವ್ಯ ನೋಡುವಂಥದ್ದಲ್ಲ, ಕಾಣುವಂಥದ್ದು. ಅದು ಮನಸ್ಸಿನ ಗ್ರಹೀತಕ್ಕೆ ಬರುತ್ತದೆ. ಅಲ್ಲಿಂದ ಅರ್ಥ ಗಳಿಸುತ್ತದೆ. ದೃಶ್ಯದಲ್ಲೊಂದು ಕಾವ್ಯ ಕಂಡೀತು; ಆದರೆ ಕಾವ್ಯವನ್ನು ದೃಶ್ಯವಾಗಿಸುತ್ತೇನೆಂದು ಹೊರಡುವುದು ಹುಂಬತನವಾದೀತು. ಶೃವ್ಯದ ತೀರದಲ್ಲಷ್ಟೇ ಕಾವ್ಯದ ಅಲೆಯಲೆಗಳನ್ನು ಗೊತ್ತು ಮಾಡಿಕೊಳ್ಳಲು ಸಾಧ್ಯ.

ಇದರಿಂದಾಗಿಯೇ ಕಾವ್ಯವನ್ನು ದೃಶ್ಯಮಾಧ್ಯಮದ ಮೂಲಕ ನಡೆಸುವ ಪ್ರಯತ್ನಗಳು ಆದದ್ದುಂಟು. ಆದರೆ ಅವು ಎರಡೊ ಮೂರೊ, ಅಷ್ಟೇ. ನಮ್ಮ ಗಮನಕ್ಕೆ ಬಂದ ಹಾಗೆ, “ಸಮ್ಮಿಲನ” ಎಂಬ ಧ್ವನಿಸುರುಳಿ ಈ ಮಾರ್ಗದಲ್ಲಿ ಕನ್ನಡದ ಮೊದಲ ಪ್ರಯತ್ನ. ಅದರಲ್ಲಿ ಹಲವು ಕವಿಗಳ ಕವನಗಳ ವಾಚನವಿತ್ತು. ಕೆ ಎಸ್ ನರಸಿಂಹಸ್ವಾಮಿ, ಪು.ತಿ.ನ., ಶಿವರುದ್ರಪ್ಪ, ಹೆಚ್ ಎಸ್ ವೆಂಕಟೇಶಮೂರ್ತಿ ಮೊದಲಾದವರು ಕವನ ವಾಚಿಸಿದ್ದರು. ಪು.ತಿ.ನ. ಅಂಥವರು ವಯಸ್ಸಿನ ಕಾರಣದಿಂದಾಗಿ ಕವಿತೆ ವಾಚಿಸಲು ಕಷ್ಟವಾಗಿದ್ದರಿಂದ, ಅವರು ಆರಂಭಿಸಿ ಅದನ್ನು ಬೇರೆಯವರ ಧ್ವನಿಯಲ್ಲಿ ಮುಂದುವರಿಸುವ ಪ್ರಯೋಗವೂ ಇದರಲ್ಲಿ ಆದದ್ದುಂಟು. ಕವನ ವಾಚನದ ಕ್ಯಾಸೆಟ್ಟೊಂದರ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು ಈ “ಸಮ್ಮಿಲನ”.

ಅದಾದ ಬಳಿಕ ಬಿ ಆರ್ ಲಕ್ಷ್ಮಣರಾವ್ ಮತ್ತು ವೆಂಕಟೇಶಮೂರ್ತಿ ಸೇರಿ ಇಂಥದೇ ಪ್ರಯತ್ನವೊಂದನ್ನು ಮಾಡಿದ್ದಿದೆ. ಅವರಿಬ್ಬರ ಕವಿತೆಗಳ ವಾಚನ, ಗಾಯನ ಇಲ್ಲಿತ್ತು.

ಆದರೆ ಈಗ ಹೊರಬರುತ್ತಿರುವ “ಕೇಳು ಪುಸ್ತಕ” ಹಲವಾರು ಕಾರಣಗಳಿಂದಾಗಿ ಮುಖ್ಯವೆನ್ನಿಸುತ್ತದೆ. ಇತ್ತೀಚೆಗಷ್ಟೇ ಪ್ರಕಟವಾದ ಜಿ ಎನ್ ಮೋಹನ್ ಅವರ “ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ” ಕವನ ಸಂಕಲನದ ಶೃವ್ಯ ರೂಪವೇ ಈ “ಕೇಳು ಪುಸ್ತಕ”. ಅಲ್ಲದೆ ಇದು ಧ್ವನಿಸುರುಳಿಯಲ್ಲ; ಸಿ.ಡಿ ರೂಪ. ಸಂಕಲನದಲ್ಲಿನ ಕವಿತೆಗಳು ಮಾತ್ರವಲ್ಲದೆ, ಮುನ್ನುಡಿ, ಬೆನ್ನುಡಿ, ಅರ್ಪಣೆ -ಹೀಗೆ ಎಲ್ಲವನ್ನೂ ಒಳಗೊಂಡು, ಒಂದಿಡೀ ಪುಸ್ತಕವೇ ಯಥಾವತ್ತಾಗಿ ಶೃವ್ಯ ಪ್ರಯೋಗಕ್ಕೆ ಒಳಪಟ್ಟಿರುವುದರಿಂದ ಈ ಪ್ರಯತ್ನ ಕನ್ನಡದಲ್ಲಿ ಹೊಚ್ಚ ಹೊಸದು.

ಇಲ್ಲಿ ವಾಚಿಸಲಾಗಿರುವ ಕವಿತೆಗಳು ಒಬ್ಬರದೇ ಆಗಿವೆ ಎಂಬುದೂ ಮತ್ತೊಂದು ಮುಖ್ಯ ಅಂಶ. ಅನಂತಮೂರ್ತಿ, ಸಿ ಆರ್ ಸಿಂಹ, ಟಿ ಎನ್ ಸೀತಾರಾಂ, ಜೋಗಿ ಸೇರಿದಂತೆ ಇಲ್ಲಿ ಕೂಡಿಕೊಂಡಿರುವ ಧ್ವನಿಗಳು ಮಾತ್ರ ಹಲವು. ಇದು ಕೇಳು ಪುಸ್ತಕವೆಂದಿದ್ದರೂ ಇದರಲ್ಲಿ ಸಾಧ್ಯತೆಗಳ ಹುಡುಕಾಟದ ಕಾರಣದಿಂದಾಗಿ, ವಿಡಿಯೋ ಮತ್ತು ಮುದ್ರಣ ಮಾಧ್ಯಮದ ಅಂಶಗಳನ್ನೂ ಸೇರಿಸಿಕೊಳ್ಳಲಾಗಿದೆ. ಪ್ರತಿಯೊಂದು ಕವಿತೆಯ ವಾಚನದ ಸಮಯದಲ್ಲಿ ಅದರ ಪಠ್ಯ ಅಕ್ಷರ ರೂಪದಲ್ಲಿ ಕಣ್ಣೆದುರು ಹರಿದುಹೋಗುವಂತೆ ಮಾಡಲಾಗಿದೆ. ಅಲ್ಲದೆ, ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಕವಿತೆಗಳನ್ನು ಓದುವಾಗ ಆ ಕಾವ್ಯವಾಚನದ ದೃಶ್ಯವನ್ನೇ ಅಳವಡಿಸಿಕೊಳ್ಳಲಾಗಿದೆ.

ಕಾವ್ಯ ವಾಚನದಲ್ಲಿನ ಪ್ರಯೋಗದ ದೃಷ್ಟಿಯಿಂದ ಹೇಳುವುದಾದರೆ, ಇನ್ನೂ ಮೂರು ಕಾರಣಗಳಿಗಾಗಿ ಈ “ಕೇಳು ಪುಸ್ತಕ”ದ ಹೆಗ್ಗಳಿಕೆಯಿದೆ. ಮೊದಲನೆಯದು, ಒಂದೇ ಕವಿತೆಯನ್ನು ಇಲ್ಲಿ ಬೇರೆಬೇರೆಯವರು ಓದಿದ್ದಾರೆ. ಒಂದು ಕವಿತೆ ಒಬ್ಬೊಬ್ಬರಿಗೂ ಕಾಣುವ ಬಗೆ ಹೇಗೆಲ್ಲಾ ಇರಬಹುದು ಎಂಬುದನ್ನು ಅವರ ವಾಚನದಿಂದ ಕಂಡುಕೊಳ್ಳಬಹುದು. ಅಥವಾ ಒಂದೇ ಕವಿತೆಯನ್ನು ಬೇರೆಬೇರೆಯವರು ಓದುವುದನ್ನು ಕೇಳಿಸಿಕೊಳ್ಳುತ್ತಾ ನಮಗೆ ಆ ಕವಿತೆಯ ಬೇರೆ ಬೇರೆ ಆಯಾಮಗಳು, ಅರ್ಥಗಳು ಹೊಳೆಯಬಹುದು. ಎರಡನೆಯದು, ಒಂದೇ ಕವಿತೆಯ ನಾಲ್ಕು ನುಡಿಗಳನ್ನು ನಾಲ್ವರು ಹಂಚಿಕೊಂಡು ಓದಿರುವುದು. ಓದುವಲ್ಲಿನ ಈ ಹಂಚಿಕೊಳ್ಳುವಿಕೆಗೆ ಕಾವ್ಯದ ಸಾಧ್ಯತೆ ದೃಷ್ಟಿಯಿಂದ ಮಾತ್ರವಲ್ಲದೆ, ಕಾವ್ಯದ ಅಂತಃಶಕ್ತಿಯಾಗಿರುವ ಕನಸುಗಾರಿಕೆಯ ದೃಷ್ಟಿಯಿಂದಲೂ ಗಾಢವಾದ ಅರ್ಥವಂತಿಕೆಯಿದೆ ಎಂದೆನ್ನಿಸುತ್ತದೆ. ಇನ್ನು ಮೂರನೆಯದು, ಕವಿತೆಯೊಂದನ್ನು ಅಂತರಂಗದಲ್ಲೇ ಓದಿಕೊಳ್ಳುವುದಕ್ಕೂ, ಕವಿತೆಯನ್ನು ಒಂದು ದೊಡ್ಡ ಸಭೆಗೆ ಓದುವುದಕ್ಕೂ ಇರಬಹುದಾದ ವ್ಯತ್ಯಾಸವನ್ನು ಅಥವಾ ಅವೆರಡರಲ್ಲಿನ ಸಾಧ್ಯತೆಯನ್ನು ತಿಳಿಯುವ ಪ್ರಯೋಗ. ತನ್ನಷ್ಟಕ್ಕೇ ಓದಿಕೊಳ್ಳುವಾಗ ಕೇಳಿಸುವ ಕವಿತೆಯೂ ಸಮೂಹಕ್ಕೆ ಓದುವಾಗ ಕೇಳಿಸುವ ಕವಿತೆಯೂ ಖಂಡಿತ ಬೇರೆ ಬೇರೆ ಎಂದೆನ್ನಿಸುವ ಸಾಧ್ಯತೆ ಜಾಸ್ತಿ. ಅಂಥ ವ್ಯತ್ಯಾಸಗಳನ್ನೂ ಈ ಕೇಳು ಪುಸ್ತಕದಲ್ಲಿ ಕೇಳಿಸಿಕೊಳ್ಳಬಹುದು.

ಈ ಒಂದು ವಿಶಿಷ್ಟ ಪ್ರಯೋಗ ಎಲ್ಲರಿಗೂ ಇಷ್ಟವಾದೀತು ಎನ್ನಿಸುತ್ತದೆ. ಎಲ್ಲರಿಗೂ ಇಷ್ಟವಾಗಲಿ, ಕವಿತೆಯ ಸಂಚಾರವನ್ನು ಅದು ತೀವ್ರಗೊಳಿಸಲಿ ಎಂದು ಹಾರೈಸೋಣ.       

‍ಲೇಖಕರು avadhi

November 14, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

 1. sathish g t

  congrats for Kelu Pustaka.

  recently i observed such kelu pustakas brought out by Tamil Publishers in Bangalore Book Exhibition organised at Palace Grounds.

  I was looking for similar efforts by Kananda writers and publishers. this collection is going to set a record in this regard.

  Recently I filed a story in DH regarding great Kannada works being printed in braille for public libraries of the state for the benefit of blind readers. though the project demands huge cost, it is necessary considering the point that blind people should not miss the pleasure of reading great works of Kannada.

  similarly Kelu Pustaka – will help blind people. moreover listening to poems from the poet or those who present it more poetically helps widening readership for kannada works.

  in the coming days i hope novels, short stories, essays will also come in the form of Kelu Pustaka… Devanur Mahadeva’s Kusumabale would be an apt work to this style. because the work looks as part of oral tradition of the region.

  similarly we can have Kambara’s poems in his own voice, Ananathamurthys’ speeches (instead of bringing out books), and many more. besides it is environmental friendly – no need to cut trees for pulp!

  -satish shile,
  staff reporter
  deccan herald
  bangalore

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: