ಕವಿತೆ ಅಂದರೆ ಹೃದಯದ ಗಾಯಕ್ಕೆ ತಣ್ಣನೆಯ ಮುಲಾಮು…

-ಅಂತರ್ಮುಖಿ
ಒಳಗೂ..ಹೊರಗೂ..
`1942ರಲ್ಲಿ ನಮ್ಮೂರು ಕೊಪ್ಪದಲ್ಲಿ ಪೊಲೀಸ್ ಸ್ಟೇಷನ್ ಆರಂಭವಾಗಿದ್ದು. ಇದುವರೆಗೂ ಅಲ್ಲಿ ಜಾತಿ ಹೆಸರಿನಲ್ಲಿ ಗಲಾಟೆ, ಸಂಘರ್ಷ ಅಂತ ಒಂದು ಕೇಸೂ ದಾಖಲಾಗಿಲ್ಲ. ನನ್ನೂರಿನ ಜನ ಜಾತಿ, ಧರ್ಮ ಎಲ್ಲ ಮರೆತು ಬೆರೆತು ಬದುಕುತ್ತಿರುವವರು’
ಅಂಥ ಸಾಮರಸ್ಯ, ಸೌಹಾರ್ದತೆಯ ವಾತಾವರಣದಲ್ಲಿ ಬೆಳೆದೆ ಎಂದು ಕವಿ, ಲೇಖಕ ಜಗದೀಶ್ ಕೊಪ್ಪ ನೆನಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರ ಸಂವೇದನೆ ಮನುಷ್ಯತ್ವವನ್ನು ಹುಡುಕಾಡುತ್ತದೆ. ಪ್ರೀತಿಯೊಂದೇ ಎಲ್ಲವನ್ನು ಬೆಸೆಯುತ್ತದೆ ಎಂದು ಪ್ರತಿಪಾದಿಸುತ್ತದೆ. ಕಾಶ್ಮೀರದ ಹಾಡುಗಳು, ಉಮರ್ ಖಯ್ಯಾಮನ ಪದ್ಯಗಳು, ಮಿರ್ಜಾ ಗಾಲಿಬ್ ಕಥನ-ಕಾವ್ಯ ಕೃತಿಗಳು ಅಂಥದ್ದೇ ಪ್ರಯತ್ನದ ಫಲ. ಗ್ರಾಮಗಳು ಮಾತ್ರ ಎಲ್ಲ ಎಲ್ಲೆಯನ್ನು ಮೀರಿ ನಿಲ್ಲುತ್ತವೆ ಎಂದು ನಂಬಿರುವ ಕೊಪ್ಪ ಅಕ್ಷರ ಕಲಿತವರ ಸಂಕುಚಿತತೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಕೊಪ್ಪ ಅವರ ಕೊಪ್ಪರಿಗೆ ತುಂಬಾ ತುಂಬಿರುವ ಸಮಾಜಮುಖಿ ಸಂವೇದನೆಯ ಬಗ್ಗೆ, ಕವಿತೆಗಳ ಬಗ್ಗೆ ನಾಲ್ಕು ಮಾತು…
ನೀವೇಕೆ ಬರೆಯುತ್ತೀರಿ?
ಬರವಣಿಗೆಯಿಂದ ಜಗತ್ತೇ ಬದಲಾಗಬಲ್ಲದು ಎಂಬ ಭ್ರಮೆ ನನಗಿಲ್ಲ. ಆದರೆ ಸಮಾನ ಮನಸ್ಕ ಓದುಗರೊಂದಿಗೆ ಆಪ್ತ ಸಂವಾದ ಸಾಧ್ಯ ಎಂದು ನಂಬಿದವನು.
ಇಷ್ಟು ದಿನಗಳಿಂದ ಬರೆಯುತ್ತಿದ್ದೀರಿ. ಆಗಾಗ್ಗೆ ನೆನಪಾಗುವ ಹಾಗೂ ಇಂದಿಗೂ ಕಾಡುತ್ತಲೇ ಇರುವ ಒಂದು ಘಟನೆ?
ಅದು 1986ರ ಜುಲೈ ತಿಂಗಳು. ವಾರ ಪತ್ರಿಕೆಯೊಂದರ ಉಪಸಂಪಾದಕನಾಗಿದ್ದೆ. ಅಹಮದಾಬಾದ್ ನಗರದ ರಥಯಾತ್ರೆಯ ಸಂದರ್ಭದಲ್ಲಿ ಕೋಮುಗಲಭೆ ಸಂಭವಿಸಿ 17 ಮಂದಿ ಗೋಲಿಬಾರ್ನಲ್ಲಿ ಮೃತಪಟ್ಟಿದ್ದರು. ಒಂದು ವಾರ ವಿಧಿಸಿದ ನಿಷೇಧಾಜ್ಞೆಯಲ್ಲಿ ನಾನು ಸಿಕ್ಕಿಕೊಂಡಿದ್ದೆ. ಅಲ್ಲಿನ ರಿಪ್ಲಿಕಾ ರಸ್ತೆಯೊಂದರ ಹನುಮಾನ್ ದೇವಸ್ಥಾನದ ಬಳಿ ಎಣ್ಣೆ ತುಂಬಿದ ಮಣ್ಣಿನ ಹಣತೆ ಮತ್ತು ಬತ್ತಿ ಮಾರುತ್ತಿದ್ದ ಮುಸ್ಲಿಂ ವೃದ್ಧನನ್ನು ಪೊಲೀಸರು ಹೊಡೆದು ಓಡಿಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸರನ್ನು ತಡೆದು, ಗಲಭೆಯ ವೇಳೆಯಲ್ಲಿ ಇಂಥ ಸಾಹಸವೇಕೆ ಎಂದು ನಾನು ಆ ವೃದ್ಧನನ್ನು ಪ್ರಶ್ನಿಸಿದೆ, ಆತ ಕೊಟ್ಟರ ಉತ್ತರ ಹೀಗಿತ್ತು:
`ಸಾಬ್ ಇಡೀ ನನ್ನ ಕುಟುಂಬ ತಲೆ ತಲಾಂತರಗಳಿಂದ ಈ ದೇವಸ್ಥಾನದ ಬಳಿ ಎಣ್ಣೆ, ಬತ್ತಿ ಮಾರಿ ಬದುಕುಕಟ್ಟಿಕೊಂಡಿದೆ. ಐದು ದಿನಗಳಿಂದ ಮನೆಯಲ್ಲಿ ಒಲೆ ಹಚ್ಚಿಲ್ಲ. ಬಾಣಂತಿ ಮಗಳಿದ್ದಾಳೆ. ಇವುಗಳನ್ನು ಇಲ್ಲಿ ಮಾರಬೇಡವೆಂದರೆ ನಾನು ಎಲ್ಲಿಗೆ ಹೋಗಲಿ?’. 23 ವರ್ಷಗಳ ಹಿಂದೆ ಆತ ಕೇಳಿದ ಪ್ರಶ್ನೆಗೆ ನಾನು ಇನ್ನೂ ಉತ್ತರ ಕಂಡುಕೊಂಡಿಲ್ಲ.
ಧರ್ಮದ ಬಗ್ಗೆ, ಜಾತಿಯ ಬಗ್ಗೆ ಮಾತನಾಡುವುದು ಅಪಮಾನಕರ ಎಂಬ ಕ್ಷಣಗಳಲ್ಲಿದ್ದೇನೆ ಎಂದು ನಿಮ್ಮ ಕೃತಿಯೊಂದರಲ್ಲಿ ಹೇಳಿಕೊಂಡಿದ್ದೀರಿ. ಇಂಥ ಹೊತ್ತಲ್ಲಿ ಉಮರ್ ಖಯ್ಯಾಮ್, ಮಿರ್ಜಾ ಗಾಲಿಬ್ ಅನುವಾದ ಮಹತ್ವ ಏನು?
ಸದ್ಯದ ಸ್ಥಿತಿಯಲ್ಲಿ ಜಾತಿ ಮತ್ತು ಧರ್ಮಕ್ಕೂ, ಮಾರಾಟದ ಸರಕುಗಳಿಗೂ ಅಂಥ ವ್ಯತ್ಯಾಸಗಳಿಲ್ಲ. ಮನುಷ್ಯನ ವಿಕಾರ ಮತ್ತು ವಿಕೃತಿಗಳಿಗೆ ಇವು ಈಗ ಗುರಾಣಿಯಾಗಿವೆ. ಇಂಥ ಸ್ಥಿತಿಯಲ್ಲಿ ಧರ್ಮ ಮತ್ತು ಜಾತಿಯ ಗಡಿರೇಖೆಯನ್ನು ಉಲ್ಲಂಘಿಸಿದ ಉಮರ್ ಖಯ್ಯಾಮ್, ಮಿರ್ಜಾ ಗಾಲಿಬ್, ಇವರ ಮೂಲಕ ಧರ್ಮದಾಚೆಗೂ ಕೂಡ ಬದುಕಬಹುದಾದ ಅರ್ಥಪೂರ್ಣ ಬದುಕಿದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನವೇ ಈ ಅನುವಾದ.
ಉಪಮೆ, ರೂಪಕಗಳಿಂದ ಕೂಡಿದ ಕಾವ್ಯ ಎಲ್ಲದಕ್ಕೂ ಉತ್ತರವಾಗಬಲ್ಲದೆ? ನಿಮಗೆ ಹಾಗನ್ನಿಸುವುದೇ?
ಕವಿ ಮಿತ್ರ ಪೀರ್ ಬಾಷಾನ ಕವಿತೆಯ ಈ ಸಾಲುಗಳು ನಿಮ್ಮ ಪ್ರಶ್ನೆಗೆ ಉತ್ತರವಾಗಬಲ್ಲದು…
ಅಕ್ಕ ಸೀತಾ ನಿನ್ನಂತೆ ನಾನು ಶಂಕಿತನೆ
ನೀನು ಪಾತಿವ್ರತ್ಯಕ್ಕೆ, ನಾನು ದೇಶ ಭಕ್ತಿಗೆ
ಪ್ರತಿ ದಿನ ಇಲ್ಲಿ ಕೊಂಡ ಹಾಯಬೇಕು..
ಸದ್ಯದ ಪದ್ಯಗಳ ಬಗ್ಗೆ ನಿಮ್ಮ ಮಾತು..
ಭಾಷೆಯ ಬೇಧವಿಲ್ಲದೆ ವರ್ತಮಾನದ ತಲ್ಲಣಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತಿರುವ ಸಾಹಿತ್ಯದ ಪ್ರಕಾರಗಳಲ್ಲಿ ಕಾವ್ಯ ಮುಂಚೂಣಿಯಲ್ಲಿದೆ. ಯಾಕಂದ್ರೆ ಕಾವ್ಯ ಅತಿ ಬೇಗ, ಅತ್ಯಂತ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.
ಕವಿತೆ ಅಂದರೆ ನಿಮ್ಮ ಪಾಲಿಗೆ...
ಹೃದಯದ ಗಾಯಕ್ಕೆ ತಣ್ಣನೆಯ ಮುಲಾಮು…
*****
ಆಯ್ದ ಸಾಲುಗಳು…
ನಿಜ ಹೇಳಬೇಕೆಂದರೆ
ನಾನು ಮಸೀದಿಗೆ ಬಂದದ್ದು
ದೇವರ ಪ್ರಾರ್ಥನೆಗಲ್ಲ
ಇಲ್ಲಿಂದ ಕದ್ದೊಯ್ದಿದ್ದ
ಹಾಸುಗಂಬಳಿ ಈಗ
ಹಳತಾಗಿದೆ ಅದಕೆ..
(ಉಮರ್ ಖಯ್ಯಾಮ್)
ದಯಾಮಯನಾದ
ಓ ಸೃಷ್ಟಿಕರ್ತನೆ
ನೀನು ಕುಡಿಯಲಿಲ್ಲ
ಇತರರಿಗೂ ಕುಡಿಸಲಿಲ್ಲ
ಸ್ವರ್ಗ ಲೋಕದಲ್ಲಿರುವ
ನಿನ್ನ ಮಧುರಸಕ್ಕೆ
ಪಾವಿತ್ರ್ಯತೆ ಎಲ್ಲಿಂದ ಬಂತು?
(ಗಾಲಿಬ್)

‍ಲೇಖಕರು avadhi

December 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This