ಇಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು?
– ಕೇಶವ ಕುಲಕರ್ಣಿ

ಕವಿತೆ ಸರಳವಾಗಿರಬೇಕು
ಮಗುವಿನ ಮಾತಿನಂತೆ
ಒಳಗೊಂದು ಅರ್ಥ
ಹೊರಗೊಂದು ಅರ್ಥ
ವಿಲ್ಲದಂತೆ
ಎಂದರಾಯಿತೇ?
ಕವಿತೆ
ಒಂದಿಂಚು ಮೇಕಪ್ಪು ಬಡಿದುಕೊಂಡು
ಘಮಘಮ ಸೆಂಟು
ಬಡಿದುಕೊಂಡು
ವಯ್ಯಾರಿಯಂತಿರಬೇಕೇ ಬೇಡವೇ
ಎಂದು ಗಂಟೆಗಟ್ಟಲೇ
ಚರ್ಚಿಸಬಹುದು
ಕವಿತೆ ಇರಬೇಕು
ಮಗುವಿನ ನಗೆಯಂತೆ
ಹುಣ್ಣಿಮೆಯ ಚಂದಿರನಂತೆ
ಮುಂಜಾನೆಯ ಮಂಜಿನಂತೆ
ಹುಚ್ಚು ಹೊಳೆಯಂತೆ
ಅಂತೆಲ್ಲ ಕ್ಲೀಷೆಯಾಗಿ
ಹೇಸಿಗೆ ಮಾಡಿಬಿಡಬಹುದು
ಕವಿತೆ ಮಾತಾಡಬೇಕು
ಮಾತಿನಲಿರುವ ಮೌನದಂತೆ
ಎಂದು ಒಗಟು ಮಾಡಬಹುದು
ಕವಿತೆ ಸ್ವತಂತ್ರವಾಗಿರಬೇಕು
ನೊಂದವರ ದನಿಯಾಗಬೇಕು
ಬೆಂದವರ ಕೊರಳಾಗಬೇಕು
ಮೌನಕ್ಕೆ ಶಬ್ದಕೊಡಬೇಕು
ಎಂದೆಲ್ಲ ಭಾಷಣ ಮಾಡಲು ಚಂದ
ಕವಿತೇ,
ಕವಿಯುವ ಸಮಯದಲ್ಲಿ
ನೀನೇಕೆ ಕವಿಯದೇ ಕೂತೆ?
ಎಂದರೆ ನಾಕುಜನ ನಕ್ಕು
ತಲೆ ಅಲ್ಲಾಡಿಸಿಯಾರು
’ಕವಿತೆ ಎಂದರೆ ಪದಗಳಲ್ಲವೋ
ಭವಿಸಿ ಸಾಯುವ ಕ್ಷರಗಳಲ್ಲವೋ
ಸವಿಸಿ ಸೇವಿಸಿ ಮನವ ತಣಿಸುವ ಕುಣಿವ ಸಾಲುಗಳೋ’
ವ್ಯಾಕರಣ ಪಂಡಿತರು ತಪ್ಪು ಹುಡುಕಿಯಾರು, ಹುಷಾರು!
ಅಷ್ಟಕ್ಕೂ ಈ ಹಾಳಾದ ಕವಿತೆ ಎಂದರೇನು?
ಇದಲ್ಲ ಎಂದು ಧಾರಾಳವಾಗಿ ಹೇಳಿಬಿಡಬಹುದು.
]]>
ಪದ್ಯ ಚೆನ್ನಾಗಿದೆ. ಆದರೆ ಸಾಲುಸಾಲುಗಳ ನಡುವೆ ಅಂತರವಿದ್ದರೆ ಓದೋದು ಹಿಂಸೆ. ಕವಿತೆಯ ಪರಿಣಾಮಕ್ಕೂ ತೊಂದರೆ ಆಗುತ್ತದೆ. ಹೀಗಾಗಿ ಎರಡು ಸಾಲುಗಳ ನಡುವೆ ಅಷ್ಟೊಂದು ಅಂತರ ಬಿಡಬೇಡಿ. ಕೇಶವ್ ಚೆನ್ನಾಗಿದೆ ಪದ್ಯ, ವಾವು ವರ್ಡಿಗೆ ಕಾಪಿ ಮಾಡಿಕೊಂಡು ಓದಿದೆ.
ಜೋಗಿ
ಕವಿತೆ ಎಂದರೇನು ಅನ್ನೋದು ಸರಿ. ಅದಕ್ಕೆ ಉತ್ತರವೂ ಈ ಕವಿತೆಯಲ್ಲೇ ಇದೆ.
ಈ ಹಾಳಾದ ಕವಿತೆ ಅಂತ ಹೇಳಿದ್ದು ಸರಿಯಲ್ಲ. ಹಾಗಂತ ಹೇಳಿ ಪ್ರಕಟಿಸಿ ಓದುಗರನ್ನು ಕೆಣಕುವ ಅಗತ್ಯವಿಲ್ಲ. ಇದಕ್ಕಾಗಿ ಈ ಒಕ್ಕಣೆ ತೆಗೆದು ಹಾಕಿದ್ದರೆ, ಈ ಕವಿತೆ ಮಾತಾಡುತ್ತದೆ ಮತ್ತು ಮಾತಿನಲ್ಲಿರುವ ಮೌನದಂತೆ ಎದೆಗೆ ನುಗ್ಗುತ್ತದೆ. ಪ್ರಕಟಿಸುವಾಗ ವಿಶಾಲತೆ ಬೇಕು ಅನ್ನುವುದು ಕೂಡ ಕವಿತೆಯ ಗಾಂಭೀರ್ಯತೆಯ ಪ್ರಶ್ನೆ.
Interesting Lines.Nice.Liked it. 🙂