
ಬಿ. ಎ. ವಿವೇಕ ರೈ
ಇದನ್ನು ನೀವು ‘ಕಾದಂಬರಿ ‘ ಎಂದು ಕರೆದಿದ್ದೀರಿ. ಅದರ ಬಗ್ಗೆ ನನ್ನ ಆಕ್ಷೇಪಣೆ ಇಲ್ಲ. ಆದರೆ ಇದು ಅಷ್ಟೇ ಅಲ್ಲ ಎಂದು ನನಗೆ ಅನ್ನಿಸಿದೆ. ಇದು ಕಾದಂಬರಿಯೂ, ಕಾವ್ಯವೂ, ಆತ್ಮಕಥನವೂ, ಜೀವನ ಚರಿತ್ರೆಯೂ, ನಾಟಕವೂ, ಚಾರಿತ್ರಿಕ ಸಂಕಥನವೂ, ಸಂಸಾರದ ಸಾಮಾಜಿಕ ಕಥನವೂ, ಏಕಕಾಲಕ್ಕೆ ಒಂದಾಗಿರುವ ಸಾಂಸ್ಕೃತಿಕ ಪಠ್ಯ . ಕಸ್ತೂರ್ ಬಾ ನೆಲೆಯಿಂದ ಗಾಂಧಿ ಕಥನವನ್ನು ಮತ್ತೆ ಹೊಸತಾಗಿ ಬರೆದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನ ಕೇಂದ್ರಿತ ಕಥನಕಾವ್ಯ. ೨೧ನೇ ಶತಮಾನದ ಎರಡನೆಯ ದಶಕದ ಭಾರತಕ್ಕೆ ಮುಖಾಮುಖಿಯಾಗುವ ನಮ್ಮ ಜೀವಮಾನದ ಕಾವ್ಯ .
ಇಡೀ ಕೃತಿ ತೆರೆದುಕೊಳ್ಳುವ ಬಗೆಗಳೇ ರೋಮಾಂಚಕ. ಗಾಂಧಿ ಬರೆದದ್ದು ಮತ್ತು ಗಾಂಧಿ ಬಗ್ಗೆ ಬರೆದದ್ದು ಎಲ್ಲವೂ ಕಸ್ತೂರ್ ಬಾ ರಿಂದ ಮತ್ತೆ ಮತ್ತೆ ಚರ್ಚೆಗೆ ಒಳಗಾಗುವ ಮತ್ತು ಗಾಂಧಿ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವ ವಿನ್ಯಾಸಗಳು ನಮ್ಮ ಇತಿಹಾಸಕಾರರಿಗೆ ಮಾದರಿಯ ಪಾಠಗಳಾಗಿವೆ. ಸಾಧಕರ ನಡವಳಿಕೆಗಳನ್ನು ವಿಮರ್ಶಿಸುವ ನೆಪದಲ್ಲಿ ಮೂರ್ತಿಭಂಜನೆ ಮಾಡುವ ನೇತ್ಯಾತ್ಮಕ ಧೋರಣೆಗೆ ವಿರುದ್ಧವಾಗಿ ಈ ಕೃತಿಯ ಉದ್ದಕ್ಕೂ ಸ್ವಯಂ ತಿದ್ದುವಿಕೆಯ ಮೂಲಕ ಗಾಂಧಿಯ ವ್ಯಕ್ತಿತ್ವ ಹೆಚ್ಚು ಮಾನವೀಯವಾಗುವ ಆರ್ದ್ರತೆ ಕಾಣಿಸುತ್ತದೆ .
ಈ ಕೃತಿಯಲ್ಲಿ ಅನೇಕ ಪರಿಕಲ್ಪನೆಗಳು ವೈಚಾರಿಕತೆಯ ಭಾರವನ್ನು ಪ್ರದರ್ಶಿಸದೆ, ಬಹಳ ಸೂಕ್ಷ್ಮವಾಗಿ ನಮ್ಮನ್ನು ಆವರಿಸಿಕೊಳ್ಳುತ್ತವೆ; ಪುಸ್ತಕ ಓದಿದ ಬಳಿಕವೂ ನಮ್ಮನ್ನು ಕಲಕುತ್ತವೆ. ಕತ್ತಲೆ ಮತ್ತು ಬೆಳಕು, ಮಕ್ಕಳ ಆಟ ಮತ್ತು ಆಟದಂತಹ ಬಾಲ್ಯ ವಿವಾಹ, ಮಾತು ಮತ್ತು ಮೌನ, ಸಮಾಜದಲ್ಲಿ ಸಂಯಮ ಮತ್ತು ಸಂಸಾರದಲ್ಲಿ ಸಂಯಮ, ಕೆಂಡವಾಗೋದು ಮತ್ತು ಕೆಂಡಕೆ ನೀರು ಆಗೋದು, ರೇಗೋದು ಮತ್ತು ಮಾಗೋದು, ಕೆರಳೋದು ಮತ್ತು ಕ್ಷಮೆ ಕೇಳೋದು, ಶಾಸ್ತ್ರ ಮತ್ತು ಸಂಪ್ರದಾಯ, ಬೇಲಿ ಹಾಕ್ಕೊಳ್ಳೋದು ಮತ್ತು ಬೇಲಿ ಹಾಕುವುದು, ಗೃಹಭಂಗ ಮತ್ತು ಮನಭಂಗ, ಸ್ವಯಂ ಮಾಡೋ ಸೇವೆ ಮತ್ತು ಸರ್ವಾಧಿಕಾರ, ಮನೆಯೊಳಗೆ ಮೌನ ಮತ್ತು ಮನದೊಳಗೆ ಮಾತಿನ ಯಾನ, ಬದುಕು ವಿರಹವಿಲ್ಲದ ಬರಹ ಮತ್ತು ಬದುಕು ನನ್ನದಲ್ಲದ ಹಣೆಬರಹ, ಕೆಲಸವಾದ್ರೆ ಕರಗತ ಮತ್ತು ಕಾವ್ಯವಾದ್ರೆ ಮನಗತ, ಆನಂದದ ಹಿಂದೆ ಆತಂಕ ಮತ್ತು ಆತಂಕದ ಹಿಂದೆ ಆನಂದ : ಇಂತಹ ನೂರಾರು ಮುಖಾಮುಖಿಗಳು ಗಾಂಧಿ ಮತ್ತು ಕಸ್ತೂರ್ ಬಾ ಹೆಸರುಗಳಲ್ಲಿ ಕಾಣಿಸಿಕೊಂಡರೂ, ಅವು ಇವತ್ತೂ ನಮಗೆ ನೈತಿಕತೆಯ ಸವಾಲುಗಳೇ ಆಗಿವೆ .

ಇತಿಹಾಸ ಪುಟಗಳಲ್ಲಿ ಎಲ್ಲೋ ಎಳೆಯಾಗಿ ದಾಖಲಾದ ಸಂಗತಿಗಳು ಇಲ್ಲಿ ಗಾಂಧಿ ಮತ್ತು ಕಸ್ತೂರ್ ಬಾ ಮುಖಾಮುಖಿಯಲ್ಲಿ ನಿಜವಾದ ಅರ್ಥದಲ್ಲಿ ‘ಸತ್ಯದ ಅನ್ವೇಷಣೆ ‘ಯನ್ನು ಮಾಡುತ್ತವೆ. ಒಂದು ರೀತಿಯಲ್ಲಿ ಈ ಕೃತಿಯು ಗಾಂಧಿ ಅವರ ‘ಸತ್ಯಾನ್ವೇಷಣೆ ‘ ಗ್ರಂಥದ ಸಾಹಿತ್ಯಕ ಮರು ವ್ಯಾಖ್ಯಾನವೇ ಆಗಿದೆ. ಗಾಂಧಿ -ಕಸ್ತೂರ್ ಬಾ ಮದುವೆ, ಕಸ್ತೂರ್ ಬಾ ಶಿಕ್ಷಣ, ಗಾಂಧಿ ಶಿಕ್ಷಣಕ್ಕಾಗಿ ಲಂಡನ್ ಹೋಗುವ ಸಂದರ್ಭದಲ್ಲಿ ಶಾಸ್ತ್ರಪಂಡಿತರ ವಿರೋಧ, ದಕ್ಷಿಣ ಆಫ್ರಿಕದಲ್ಲಿ ಗುಮಾಸ್ತೆ ವಿನ್ಸೆಂಟ್ ಪ್ರಸಂಗ, ಮಗ ಹರಿಲಾಲ್ ನ ಮದುವೆ, ಗಾಂಧಿ ನರಹರಿ ಪಾರೇಖ್ ಗೆ ಬರೆದ ಪತ್ರದಲ್ಲಿ ಕಸ್ತೂರ್ ಬಾ ಬಗ್ಗೆ ಟೀಕೆ, ಮಗ ದೇವದಾಸ್ ನ ಮದುವೆ ವೃತ್ತಾಂತ, ೧೯೧೭ರ ಚಂಪಾರಣ ಸತ್ಯಾಗ್ರಹ , ಕಸ್ತೂರ್ ಬಾ ವಿದೇಶಿ ಸೀರೆ ಸುಟ್ಟು ಸ್ವದೇಶಿ ಚಳುವಳಿಗೆ ಮಹಿಳೆಯರ ಶಕ್ತಿ ಸಂಚಯನ ಮಾಡಿದ ಸನ್ನಿವೇಶ , ಕಸ್ತೂರ್ ಬಾ ಅವರ ಸಿಹಿತಿಂಡಿ ಮತ್ತು ಕಾಫಿ ಪ್ರೀತಿಯನ್ನು ಗಾಂಧಿ ನಿಷ್ಕರುಣೆಯಿಂದ ನಿಲ್ಲಿಸಿದ ಸಂದರ್ಭಗಳು, ಕಸ್ತೂರ್ ಬಾ ಗೆ ನಾರಾಯಣ ದೇಸಾಯಿ ರಾಮಾಯಣ ಕಥೆ ಹೇಳುವ ಪ್ರಸಂಗ, ಚಾಡಿ ಮಾತು ಕೇಳಿ ಸೀತೆಯನ್ನು ರಾಮ ಕಾಡಿಗಟ್ಟಿದ ಪ್ರಸಂಗದ ಜೊತೆಗೆ ಆಶ್ರಮವಾಸಿಗಳ ಮಾತು ಕೇಳಿ ಗಾಂಧಿ ಕಸ್ತೂರ್ ಬಾ ಗೆ ಶಿಕ್ಷೆ ವಿಧಿಸಿದ ಸನ್ನಿವೇಶದ ಹೋಲಿಕೆ, ಮಗ ಹರಿಲಾಲ್ ಹಸಿದಿದ್ದಾಗ ಅವನಿಗೆ ಊಟ ಕೊಡುವ ಮೊದಲು ಕಸ್ತೂರ್ ಬಾ ಎರಡು ಹೊರೆ ಕಟ್ಟಿಗೆ ಹೊತ್ತುಕೊಂಡು ತಂದು ಗಾಂಧಿ ಮುಂದೆ ಹಾಕಿದ ದೃಶ್ಯ, ಮಗ ಹರಿಲಾಲ್ ನ ವಿದೇಶ ಪ್ರವಾಸಕ್ಕೆ ಗೆಳೆಯರ ಸಹಾಯವನ್ನು ಗಾಂಧಿ ನಿರಾಕರಿಸಿ ಹೆಂಡತಿ ಮತ್ತು ಮಗನ ದುಃಖಕ್ಕೆ ಕಾರಣವಾದದ್ದು, ಕಸ್ತೂರ್ ಬಾ ಅಸ್ಪೃಶ್ಯತೆಯನ್ನು ಪಾಲಿಸುವ ಪುರಿ ದೇವಾಲಯಕ್ಕೆ ಹೋದುದನ್ನು ಗಾಂಧಿ ಆಕ್ಷೇಪಿಸಿದ್ದು, ಸರಳಾದೇವಿ ಮತ್ತು ಎಸ್ತರ್ ಪ್ರಸಂಗಗಳಲ್ಲಿನ ಅನುಮಾನಗಳ ತಿಳಿಗೊಳ್ಳುವಿಕೆ, ಹರಿಲಾಲ್ ಮತಾಂತರದ ವಿಶ್ಲೇಷಣೆ – ಹೀಗೆ ಗಾಂಧಿ -ಕಸ್ತೂರ್ ಬಾ ಬದುಕಿನ ಕಿರು ಕೊಂಡಿಗಳ ಮೂಲಕ ಈ ಕೃತಿಯಲ್ಲಿ ಆದರ್ಶ, ನೈತಿಕತೆ, ಮೌಲ್ಯಗಳ ಸಂಘರ್ಷ ಮುಂತಾದ ಸಂಗತಿಗಳು ವಿಮರ್ಶೆಗೆ ಒಳಗಾಗುತ್ತವೆ.
ಗಾಂಧಿ ಮತ್ತು ಅಂಬೇಡ್ಕರ್ ಭೇಟಿ, ಅಂಬೇಡ್ಕರ್ ಮತ್ತು ಕಸ್ತೂರ್ ಬಾ ಭೇಟಿ : ಈ ಎರಡು ಪ್ರಸಂಗಗಳು ಈ ಕೃತಿಯ ತಾತ್ವಿಕ ನೆಲೆಗಟ್ಟಿಗೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಧೋರಣೆಗಳ ಬಗ್ಗೆ ಸಾಕಷ್ಟು ಗ್ರಂಥಗಳು ರಚನೆಯಾಗಿವೆ. ಅವರ ಸೈದ್ಧಾಂತಿಕ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಅಂತಹ ಗಹನ ಸಂಗತಿಗಳನ್ನು ಎರಡು ಪ್ರಸಂಗಗಳ ಮೂಲಕ ಬಹಳ ಪರಿಣಾಮಕಾರಿಯಾಗಿ ಇಲ್ಲಿ ತರಲಾಗಿದೆ.

ಅಸ್ಪೃಶ್ಯತೆ ಬಗ್ಗೆ ಅವರಿಬ್ಬರ ಅಭಿಪ್ರಾಯಗಳ ಸಂವಾದ ಇಲ್ಲಿ ಆತ್ಮೀಯವಾಗಿ ಸ್ಪಷ್ಟವಾಗಿದೆ. ‘ಅಸ್ಪೃಶ್ಯತೆ ಹೋಗುವುದರ ಜೊತೆಗೆ, ಸೋದರತೆ ಬೇಕು, ಸಮಾನತೆ ಬೇಕು’ ಎನ್ನುವ ಅಂಬೇಡ್ಕರ್ ‘ಶತಶತಮಾನಗಳಿಂದ ಸಿಕ್ಕಿರೊ ನಮ್ಮ ಜನರ ಹಕ್ಕುಗಳಿಗಾಗಿ ಹೋರಡೋದನ್ನ ದೇಶದ್ರೋಹ ಅಂತ ನಾನ್ ಭಾವಿಸೋದಿಲ್ಲ’ ಅನ್ನುತ್ತಾರೆ.
ಕಸ್ತೂರ್ ಬಾ ಜೊತೆಗೆ ಅಂಬೇಡ್ಕರ್ ಹೇಳುತ್ತಾರೆ: ‘ಕೋಟ್ಯಂತರ ದಲಿತರಿಗೂ ರಾಜಕೀಯ ಸ್ಥಾನಮಾನ ಸಿಗಬೇಕು . ಬಾಪೂಗೆ ಹಿಂದೂ ಧರ್ಮ ಮುಖ್ಯ. ನನಗೆ ದಲಿತ ಧರ್ಮ ಮುಖ್ಯ.’ ಒಮ್ಮೆ ಗಾಂಧಿಯಲ್ಲಿ ಕಸ್ತೂರ್ ಬಾ ಕೇಳುತ್ತಾರೆ: ‘ನೀವೂ ಅಂಬೇಡ್ಕರ್ ಸಾಹೇಬರೂ ಒರೆಗಲ್ಲೇ ಅಲ್ವೇ ? ಎದುರಾಗ್ತಾನೇ ಒಂದಾಗ್ಲಿಲ್ಲ ಯಾಕೆ ?’ ಈ ಪುಸ್ತಕದಲ್ಲಿ ಬರುವ ಇಂತಹ ಅನೇಕ ಪ್ರಶ್ನೆಗಳು ಈ ಶತಮಾನದ ನಾವು ನಮಗೆ ಮತ್ತು ನಮ್ಮ ಕಾಲದ ನಾಯಕರಿಗೆ ಕೇಳಬೇಕಾದವು .
ಸಬರಮತಿ ಮತ್ತು ವಾರ್ಧಾ ಆಶ್ರಮಗಳು ಪ್ರೇಕ್ಷಣೀಯ ಮ್ಯೂಸಿಯಮ್ ಆಗಿ ಗತಕಾಲಕ್ಕೆ ಸಂದಿರುವಾಗ, ಆಧುನಿಕ ಭಾರತಕ್ಕೆ ಸಲ್ಲುವ, ಗಾಂಧಿ -ಕಸ್ತೂರ್ ಬಾ ಜೋಡಿಯ ಸಾಮಾಜಿಕ ಸಂಸಾರದ ಮೂಲಕ ಕಟ್ಟಿದ ಕಥನರೂಪದ ಆಶ್ರಮವೇ, ಬರಗೂರು ಅವರ ‘ ಕಸ್ತೂರ್ ಬಾ Vs ಗಾಂಧಿ. ‘ ಕೃತಿ.
0 ಪ್ರತಿಕ್ರಿಯೆಗಳು