ಕಾಡದಿದ್ದರೆ ಕೇಳಿ..

ಸೆಲಬ್ರೇಟಿಂಗ್ ಕ್ಯಾನ್ಸರ್

prasad naik

ಪ್ರಸಾದ್ ನಾಯ್ಕ್ 

ಅಂಗೋಲಾದಿಂದ 

2012 ರ ಮಾತು.

ದೆಹಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರ್ ಎಂಬ ಸುಂದರ ಕ್ಯಾಂಪಸ್ ನಲ್ಲಿ ನಾನು ಎಂದಿನಂತೆ ಅಂದೂ ಅಡ್ಡಾಡುತ್ತಿದ್ದೆ. ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ಪ್ರೀತಿಸುವ ಎಲ್ಲರಿಗೂ ಅದೊಂದು ಪುಟ್ಟ ಸಾಂಸ್ಕೃತಿಕ ಸ್ವರ್ಗ. ಏನಿಲ್ಲವೆಂದರೂ ಆ ಜಾಗದಲ್ಲಿರುವ ಒಂದು ಕಲಾತ್ಮಕತೆಯನ್ನು ಕಣ್ತುಂಬಿಕೊಳ್ಳಲು ದೆಹಲಿಯ ನಿವಾಸಿಗಳು ಬರುವುದುಂಟು.

ಅಂದಹಾಗೆ ಅತ್ತ ನೆಟ್ಟಗೆ ಸೆಕೆಯೂ ಅಲ್ಲದ, ಇತ್ತ ಮೈಕೊರೆಯುವ ಚಳಿಯೂ ಅಲ್ಲದೆ ಹಿತವೆನಿಸುವ ದೆಹಲಿಯ ನವೆಂಬರ್ ತಿಂಗಳಲ್ಲಿ ಇಂಡಿಯನ್ ಹ್ಯಾಬಿಟಾಟ್ ನಲ್ಲಿ ನಡೆಯುತ್ತಿದ್ದಿದ್ದು ‘ಸಮನ್ವಯ್’ ಎಂಬ ಭಾರತೀಯ ಭಾಷಾ ಮಹೋತ್ಸವ. ಕನ್ನಡವೂ ಸೇರಿದಂತೆ ಸಾಹಿತ್ಯ, ರಂಗಭೂಮಿ, ಕಲೆ ಇತ್ಯಾದಿ ಕ್ಷೇತ್ರಗಳಿಂದ ಹಲವು ಮಹನೀಯರು ಆಗಮಿಸಿದ್ದರು.

saasive-tandavaluಕನ್ನಡದಿಂದಲೂ ಗಿರೀಶ್ ಕಾಸರವಳ್ಳಿಯವರಿಂದ ಹಿಡಿದು ಡಾ. ಚಂದ್ರಶೇಖರ ಕಂಬಾರ, ಬಾನು ಮುಷ್ತಾಕ್, ಗೋಪಾಲಕೃಷ್ಣ ಪೈ ಆದಿಯಾಗಿ ಹಲವು ಸಾಧಕರು ಆಗಮಿಸಿದ್ದು ಮತ್ತು ಇವರೆಲ್ಲರ ಜೊತೆ ಒಂದೆರಡು ಕ್ಷಣಗಳನ್ನು ಕಳೆದಿದ್ದು ನನ್ನ ದೆಹಲಿಯ ದಿನಗಳ ಅವಿಸ್ಮರಣೀಯ ಕ್ಷಣಗಳಲ್ಲೊಂದು. ಹಿರಿಯ ಲೇಖಕಿಯಾದ ಬಾನು ಮುಷ್ತಾಕ್ ನಿರರ್ಗಳ ಹಿಂದಿಯಲ್ಲಿ ಅದೆಷ್ಟು ಚೆನ್ನಾಗಿ ಮಾತನಾಡಿದರೆಂದರೆ ಸಭಿಕರ ಚಪ್ಪಾಳೆಯು ಮುಗಿಲು ಮುಟ್ಟಿತ್ತು. ಹಾಗೆಯೇ ಕವಯತ್ರಿ ಮಮತಾ ಸಾಗರರ ಕವಿತೆಗಳ ಓಘಕ್ಕೆ ಕೂಡ.

ಹೀಗೆ ಸಭಿಕರ ಗುಂಪಿನಿಂದ ಅತಿಥಿಗಳ ಗುಂಪಿಗೆ ಬಂದ ನಾನು ಹಲವು ಭಾಷೆಗಳ ಗಣ್ಯರೊಂದಿಗೆ ಬೆರೆಯುತ್ತಾ ಅವರೊಂದಿಗೆ ಗುಂಪಿನಲ್ಲಿ ಗೋವಿಂದವೆಂಬಂತೆ ತೂರಿಕೊಂಡಿದ್ದೇ ವಿಶೇಷ. ಟೀ ಸೆಶನ್ನುಗಳು ಸೇರಿದಂತೆ ಇತರ ಬ್ರೇಕುಗಳಲ್ಲಿ ಹಲವು ಹೊಸಪರಿಚಯಗಳಲ್ಲದೆ ಆಸಕ್ತಿದಾಯಕ ಮಾತುಕತೆಗಳಲ್ಲಿ ಭಾಗಿಯಾಗುವ ಭಾಗ್ಯವೂ ನನ್ನದಾಯಿತು.

ಆದರೆ ಬಂದ ಕನ್ನಡೇತರ ಸಾಹಿತಿಗಳಲ್ಲಿ ಹೆಚ್ಚು ನನ್ನನ್ನು ಕಾಡಿದ್ದು ವಿಭಾರಾಣಿ ಎಂಬ ಹೆಸರು. ವಿಭಾರಾಣಿಯವರು ಅತಿಥಿಯಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ನಾನು ಇರಲಿಲ್ಲವಾದರೂ ಉಳಿದೆಲ್ಲಾ ಕಾರ್ಯಕ್ರಮಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ, ಅರಳುಹುರಿದಂತೆ ಆಡುತ್ತಿದ್ದ ಮಾತುಗಳು, ಇಂಟರೆಸ್ಟಿಂಗ್ ಅನಿಸುತ್ತಿದ್ದ ಅವರ ಪ್ರಶ್ನೆಗಳು ನನ್ನನ್ನು ಅಚ್ಚರಿಗೊಳಪಡಿಸಿದ್ದವು.

ಅಂದಹಾಗೆ ಹಿಂದಿ ಮತ್ತು ಮೈಥಿಲಿ ಭಾಷೆಯ ಸಾಹಿತ್ಯ ಮತ್ತು ರಂಗಭೂಮಿಯ ಲೋಕದಲ್ಲಿ ವಿಭಾರಾಣಿ ಒಂದು ದೊಡ್ಡ ಹೆಸರು. ಲೇಖಕಿ, ಕವಯತ್ರಿ, ನಾಟಕಕಾರ್ತಿ, ರೇಡಿಯೋ ಕಲಾವಿದೆ, ರಂಗಭೂಮಿ ಕಲಾವಿದೆ… ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಯಶಸ್ವಿಯಾಗಿದ್ದ ವಿಭಾರಾಣಿಯವರೊಂದಿಗೆ ಇಂಡಿಯನ್ ಹ್ಯಾಬಿಟಾಟ್ ಸೆಂಟರಿನ ಅಂಗಳದಲ್ಲಿ ಚಹಾ ಹೀರುತ್ತಾ, ಗ್ರೂಪ್ ಫೋಟೋಗಳನ್ನು ತೆಗೆದುಕೊಳ್ಳುತ್ತಾ, ಲೋಕಾಭಿರಾಮದ ಮಾತಾಡುತ್ತಿದ್ದ ನನಗೆ ಅವರ ಸಾಧನೆಯ ಹಾದಿಯು ನಂತರ ತಿಳಿದುಬಂದಿದ್ದು ನನ್ನ ಪೆದ್ದುತನವೇ ಸರಿ.

ಸಮನ್ವಯ್ ನ ನಂತರವೂ ವಿಭಾರಾಣಿಯವರೊಂದಿಗೆ ಫೋನಿನಲ್ಲಿ ಮಾತಾಡುತ್ತಿದ್ದರೂ ಭೇಟಿಯಾಗಲು ಸಾಧ್ಯವಾಗಲಿಲ್ಲ. ದೆಹಲಿಯ ಸಿರಿಫೋರ್ಟ್ ಸೇರಿದಂತೆ ಹಲವು ಕಡೆ ವಿಭಾರವರ ನಾಟಕ ಪ್ರದರ್ಶನಗಳಾದರೂ ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕ್ರಮೇಣ ಸಂಪರ್ಕವೂ ಕಡಿತುಹೋಯಿತೆನ್ನಿ.

ಇಂಥಾ ಪ್ರತಿಭಾವಂತೆ ವಿಭಾರಾಣಿಯವರು ಅಚಾನಕ್ಕಾಗಿ ಲೇಖನವೊಂದರ ಮೂಲಕವಾಗಿ ಮತ್ತೊಮ್ಮೆ ನನಗೆ ಆಕಸ್ಮಿಕವಾಗಿ ಸಿಕ್ಕರು. ಇವತ್ತಿಗೂ ವಿಭಾರಾಣಿ ಎಂದರೆ ನೆನಪಾಗುವುದು ಅವರ ಪಾದರಸದಂತಹ ವ್ಯಕ್ತಿತ್ವ, ನಗುಮುಖ, ಉಲ್ಲಾಸ, ಅರಳುಹುರಿದಂತೆ ಆಡುತ್ತಿದ್ದ ಚಟಪಟ ಮಾತುಗಳು ಮತ್ತು ಸ್ನೇಹಮಯಿ ಮುಗುಳ್ನಗು. ಹಿಂದಿ ಭಾಷೆಯಲ್ಲಿ ಪ್ರಕಟವಾದ ಈ ಲೇಖನದಲ್ಲಿ ವಿಭಾರಾಣಿಯವರು ತನಗಾದ ಸ್ತನ ಕ್ಯಾನ್ಸರ್ ಎಂಬ ಮಹಮ್ಮಾರಿಯ ಅನುಭವವನ್ನು ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ವಿವರಿಸುತ್ತಾ ಹೋಗುತ್ತಾರೆ.

ಈ ಲೇಖನದಲ್ಲಿರುವ ಆಪ್ತಭಾವವು ಬಿ.ವಿ.ಭಾರತಿಯವರ “ಸಾಸಿವೆ ತಂದವಳು” ಎಂಬ ಕೃತಿಯನ್ನೂ ನನಗೆ ನೆನಪಿಸಿದ್ದು ಸತ್ಯ. ವಿಭಾರಾಣಿಯವರ ಈ ಸುಂದರ ಲೇಖನವನ್ನು ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿ ಅವರದ್ದೇ ಮಾತುಗಳಲ್ಲಿ ಅವಧಿಯ ಓದುಗರ ಮುಂದಿಡುತ್ತಿರುವೆ.

ಕ್ಯಾನ್ಸರ್, ಅದರಲ್ಲೂ ಸ್ತನ ಕ್ಯಾನ್ಸರ್ ಎಂಬ ಖಾಯಿಲೆಯು ಭಯವನ್ನು ಹುಟ್ಟುಹಾಕುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರೂ ಒಮ್ಮೆ ಓದಲೇಬೇಕಾದ ಲೇಖನವಿದು.

***************

‘ನಿಮಗೆ ಕ್ಯಾನ್ಸರ್ ಇದೆ ಎಂದೇಕೆ ಅನಿಸುತ್ತಿದೆ?’

‘ಹಾಗೇನೂ ನನಗೆ ಅನ್ನಿಸುತ್ತಿಲ್ಲ’

‘ಮತ್ಯಾಕೆ ಬಂದಿರಿ ಇಲ್ಲಿಗೆ?’

‘ಕಳಿಸಿದ್ದರಿಂದ ಬಂದೆ’

‘ಯಾರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದು?’

‘ಸ್ತ್ರೀರೋಗ ತಜ್ಞೆ’

‘ಆರು ವರ್ಷಗಳ ಮೆಡಿಕಲ್ ಕೇಸ್ ಹಿಸ್ಟರಿ ಇದು. ಎಡಸ್ತನದ ಮೇಲ್ಭಾಗದಲ್ಲಿ ಕಾಳಿನ ಗಾತ್ರದ ಚಿಕ್ಕ ಗಂಟಿನಂಥಾ ಒಂದು ಆಕಾರ. ನೋಡಲು ಚಿಕ್ಕದಾಗಿದ್ದ ಈ ಗಂಟು ಮುಂದೆ ನೀರಿನಲ್ಲಿ ನೆನೆಹಾಕಿದ ಕಡಲೆಕಾಳಿನ ಗಾತ್ರಕ್ಕೆ ಬಂದು ನಿಂತಿತ್ತು. ನೋವೇನೂ ಇಲ್ಲ. ಇದರ ಬೆಳವಣಿಗೆಯೂ ಇಲ್ಲವೇ ಇಲ್ಲವೆನ್ನುವಷ್ಟು ನಿಧಾನ. ಮುಂಬೈ ಮತ್ತು ಚೆನೈಯ ಆಸ್ಪತ್ರೆಗಳಲ್ಲಿ ತೋರಿಸಿದ್ದಾಯಿತು. ನಿಮ್ಮ ಆಸ್ಪತ್ರೆಯಲ್ಲೂ ಒಮ್ಮೆ ತೋರಿಸಿದ್ದೆ. ಸ್ತ್ರೀರೋಗ ತಜ್ಞರಲ್ಲೂ ಕೂಡ.”, ಎಂದಿದ್ದೆ ನಾನು. ಕಾಳಿನ ಗಾತ್ರ, ಬೇಳೆಯ ಗಾತ್ರ ಎನ್ನುತ್ತಾ ಈ ಗಂಟಿನ ಅಳತೆಗೋಲನ್ನು ಅಡುಗೆಮನೆಯ ಧಾಟಿಯಲ್ಲೇ ವಿವರಿಸುವುದನ್ನು ಯೋಚಿಸಿದರೆ ನಗು ಬರುತ್ತೆ. ಹಾಗೆಯೇ ಸ್ತನ, ಯೋನಿಯ ವಿಷಯಗಳು ಬಂದಾಗಲೆಲ್ಲಾ ಕಂಗಾಲಾಗಿ ಸ್ತ್ರೀರೋಗ ತಜ್ಞರ ಬಳಿ ನಾವುಗಳು ಓಡೋಡಿ ಹೋಗುವುದನ್ನು ಅನಿಸಿಕೊಂಡರೂ ನಗು ಬರುತ್ತೆ.

breast-cancer1ನಮ್ಮಂಥಾ ಸಾಮಾನ್ಯ ಜನರ ವೈದ್ಯಕೀಯ ಜ್ಞಾನ ಅಂದರೆ ಇದಿಷ್ಟೇ. ಫಿಸಿಷಿಯನ್, ಸರ್ಜನ್, ಗೈನಕಾಲಾಜಿಸ್ಟ್; ಮುಗೀತು. ಆರು ವರ್ಷಗಳ ಕಾಲ ಇದನ್ನು ತೋರಿಸುತ್ತಾ ಪರಿಹಾರಕ್ಕಾಗಿ ಆ ಸ್ಪೆಶಲಿಸ್ಟ್ ಈ ಸ್ಪೆಶಲಿಸ್ಟ್ ಎಂದು ಅಲೆದಾಡಿದ್ದೇ ಆಯಿತು. ಸ್ನೇಹಿತೆಯರೂ, ಕೆಲ ವೈದ್ಯ ಮಹಾಶಯರೂ “ವಯಸ್ಸಿನ ಜೊತೆಗೇ ಬೆರಳೆಣಿಕೆಯ ಗ್ಲಾಂಡ್ (ಗ್ರಂಥಿ)ಗಳು ಬರುವುದು ಸಾಮಾನ್ಯ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ” ಎಂದೇ ಹೇಳಿ ನನ್ನ ಬಾಯಿಮುಚ್ಚಿಸಿದ್ದರು. ನಾನೂ ನಿಶ್ಚಿಂತಳಾಗಿ ಮನೆ, ಆಫೀಸು, ಲೇಖನ, ರಂಗಭೂಮಿ ಅಂತೆಲ್ಲಾ ಆರಾಮಾಗಿ ಓಡಾಡಿಕೊಂಡಿದ್ದೆ.

ಆದರೆ ನಿಜವಾಗಿಯೂ ನಾನು ಧನ್ಯವಾದಗಳನ್ನು ಅಪರ್ಿಸಬೇಕಾಗಿರುವುದು ಗೈನಕಾಲಜಿ ವಿಭಾಗದಲ್ಲಿದ್ದ ನಸರ್್ ಒಬ್ಬರಿಗೆ. ವೈದ್ಯರನ್ನು ಭೇಟಿಯಾದ ಕಾರಣವನ್ನು ಕೇಳಿದ ಅವಳು ನನಗೆ ಹೇಳಿದ್ದಿಷ್ಟೇ. “ನೀವು ಇಲ್ಲಿಂದ ಸೀದಾ ಆಂಕಾಲಜಿ ವಿಭಾಗಕ್ಕೆ ಹೋಗಿ ಒಮ್ಮೆ ತೋರಿಸಿ. ಈ ವೈದ್ಯರೂ ನಿಮ್ಮನ್ನು ಮುಂದೆ ಕಳಿಸಲಿರುವುದು ಅಲ್ಲಿಗೇ. ಅಲ್ಲಿಯವರೆಗೆ ಕಾದು ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.” ಆಂಕಾಲಜಿ ಎಂದಾಕ್ಷಣ ಒಮ್ಮೆ ಹೃದಯಬಡಿತವೇ ನಿಂತುಹೋದಂಥಾ ಭಾವ. ಆದರೂ ಎಂದಿನ ಉಡಾಫೆಯ ಶೈಲಿಯಲ್ಲಿ “ವಿಭಾ ಡಾಲರ್ಿಂಗ್… ಈವರೆಗೂ ಏನೂ ಆಗಲಿಲ್ಲ ನಿನಗೆ. ಇನ್ನೇನು ಮಹಾ ಆಗಲಿದೆ!”, ಎಂದು ಅಂದುಕೊಳ್ಳುತ್ತಾ ನನ್ನನ್ನು ನಾನೇ ಸಂತೈಸಿಕೊಂಡೆ.

ಇನ್ನು ಆ ವೈದ್ಯನೋ, ನನಗಿಂತಲೂ ಹತ್ತುಪಟ್ಟು ಭೂಪ. “ಇದು ಫೈಬ್ರಾಯ್ಡ್ ಅನ್ನಿಸುತ್ತಿದೆ. ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಜೀವನದುದ್ದಕ್ಕೂ ಈ ಫೈಬ್ರಾಯ್ಡ್ ಜೊತೆಯೇ ಆರಾಮಾಗಿ ದಿನಕಳೆಯಬಹುದು ನೀವು”, ಎಂದಿದ್ದ ಆತ. ಆದರೂ ನನ್ನ ಪೆಚ್ಚಾದ ಮುಖವನ್ನು ಕಂಡು ಅವನಿಗೆ ಏನನ್ನಿಸಿತೋ ಏನೋ. ಸುಮ್ಮನೆ ನನ್ನ ಸಮಾಧಾನಕ್ಕೆಂಬಂತೆ “ಒಮ್ಮೆ ಹೋಗಿ ಮಮ್ಮೊಗ್ರಫಿ, ಮಮ್ಮೊ-ಸೋನೋಗ್ರಫಿ ಮತ್ತು ಬಯಾಪ್ಸಿಗಳನ್ನು ಮಾಡಿಸಿ ರಿಪೋಟರ್ಿನೊಂದಿಗೆ ಬನ್ನಿ”, ಎಂದಿದ್ದ. ಯಾವುದೇ ಹೊಸ ಕ್ಷೇತ್ರವಾಗಿದ್ದರೂ ಹೊಸ ಅನುಭವದಂತೆ ತಬ್ಬಿಕೊಳ್ಳುವವಳು ನಾನು. ಆದರೆ ನನ್ನ ವೇಳಾಪಟ್ಟಿಯು ಅದೆಷ್ಟು ಬಿಗಿಯಾಗಿತ್ತೆಂದರೆ ಮುಂಬರುವ ದೀಪಾವಳಿಯವರೆಗೂ ನಿಗದಿತ ವೇಳಾಪಟ್ಟಿಯಾಚೆಗಿನ ಯಾವ ಯೋಚನೆಗಳಿಗೂ ಸಮಯವಿರಲಿಲ್ಲ. ಪುಣ್ಯಕ್ಕೆ ಆ ದಿನ ಯಾವುದೇ ಮೀಟಿಂಗೂ, ನಾಟಕದ ರಿಹರ್ಸಲ್ ಗಳೂ ಇರಲಿಲ್ಲವಾದ್ದರಿಂದ ಸ್ವಲ್ಪ ಬಿಡುವಾಗಿದ್ದೆ. ಇನ್ನೇನು, “ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್” (ನಾಳೆ ಮಾಡುವಂಥದ್ದನ್ನು ಇಂದೇ ಮಾಡು, ಇಂದು ಮಾಡಬೇಕಾಗಿರುವುದನ್ನು ಈಗಲೇ ಮಾಡು). ಅಂತೂ ನಾನು ಮಮ್ಮೊಗ್ರಫಿ ವಿಭಾಗದ ಕಡೆ ಹೊರಟೇಬಿಟ್ಟೆ.

ಸೀದಾ ನಡೆದು ಬಂದ ನನ್ನನ್ನು ನೋಡುತ್ತಲೇ ಮಮ್ಮೊಗ್ರಫಿ ವಿಭಾಗದಲ್ಲಿದ್ದ ಆಸ್ಪತ್ರೆಯ ಕರ್ಮಚಾರಿಯೊಬ್ಬ “ಅಪಾಯಿಂಟ್ಮೆಂಟ್ ಇಲ್ಲದೆ ಬಂದವರು ಕಾಯಲೇಬೇಕು” ಎಂದು ಷರಾ ಹೊರಡಿಸಿದ. ಇನ್ನೇನು ಮಾಡಲಿ, ಕಾಯದೇ ವಿಧಿಯಿಲ್ಲ. ಕಾಯುವುದಕ್ಕೇನೋ ನಾನು ತಯಾರು. ಆದರೂ ಅದೆಂಥದ್ದೋ ಏಕಾಂಗಿತನ, ಎಂದಿನ ಉಡಾಫೆ ಭಾವ ಮತ್ತು ಮನದಾಳದಲ್ಲೆಲ್ಲೋ ಈಗಷ್ಟೇ ಇಣುಕಲು ಶುರುಮಾಡಿದ್ದ ಒಂದು ಅವ್ಯಕ್ತ ಭಯ. ನನ್ನ ವೈಯಕ್ತಿಕ ಕೆಲಸಗಳಿಗಾಗಿ ಇನ್ಯಾರನ್ನೋ ಜೊತೆಯಲ್ಲಿ ಒಯ್ಯುವುದೆಂದರೆ ಅವರ ಸಮಯವನ್ನು ಹಾಳು ಮಾಡಿದಂತೆ ಎಂಬುದು ನನ್ನ ನಂಬಿಕೆ. ಆಸ್ಪತ್ರೆಗಳಿಗೆ ಹೋಗುವುದಕ್ಕೂ ಇದು ಅನ್ವಯವಾಗುತ್ತದೆ. ಅಜಯ್ (ಪತಿ) ನಿಗೆ ಕರೆ ಮಾಡಿ ಒಂದೆರಡು ಟೆಸ್ಟ್ ಗಳನ್ನು ಮಾಡಿಕೊಳ್ಳಲು ಬಂದಿರುವೆನೆಂದೂ, ಬರಲು ಕೊಂಚ ತಡವಾಗಬಹುದೆಂದೂ ಹೇಳಿ ಫೋನಿಟ್ಟೆ. ನಾನು ಇದನ್ನು ಅದೆಷ್ಟು ಕ್ಯಾಷುವಲ್ ಆಗಿ ಹೇಳಿದೆನೆಂದರೆ ಅವನೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗದೆ ಸುಮ್ಮನೆ ಹೂಂ ಎಂದಿದ್ದ.

“ಮೇರಾ ಬ್ರೆಸ್ಟ್, ರೋಲರ್ ಪ್ರೆಸ್ಡ್”, ಎನ್ನುತ್ತಾ ಯಾವಾಗಲೂ ತನ್ನ ಸಪಾಟು ಎದೆಯ ಬಗ್ಗೆ ತಮಾಷೆಯಾಗಿ ಹೇಳುತ್ತಿರುವವಳು ನಾನು. ಈ ಸಮತಲದ ಎದೆಯು ಮಮೋಗ್ರಫಿಯ ನೋವನ್ನು ನಾಲ್ಕುಪಟ್ಟು ಹೆಚ್ಚಿಸಿತ್ತು. ತಜ್ಞರ ಗೊಂದಲದ ಮುಖಭಾವಗಳು ಕಣ್ಣೆದುರಿಗಿದ್ದ ಸವಾಲನ್ನು ಮತ್ತಷ್ಟು ಎದ್ದುಕಾಣುವಂತೆ ಮಾಡಿದ್ದವು. “ನನ್ನ ಸಪಾಟು ಎದೆಯ ಮಮ್ಮೋಗ್ರಫಿಯನ್ನು ಮಾಡಿಯೇ ಬಿಡಿ”, ಎಂದು ಎಂದಿನ ಉತ್ಸಾಹದಲ್ಲಿ ನಾನು ಅವರಿಗೆ ಅಸ್ತು ಎಂದಿದ್ದೆ. ಆದರೆ ದುರದೃಷ್ಟವಶಾತ್ ಸಂಕಷ್ಟಗಳೂ ಎಣಿಸಿದ್ದಕ್ಕಿಂತ ಹೆಚ್ಚೇ ಇದ್ದವು. ನೋವನ್ನು ತಡೆದುಕೊಳ್ಳುವುದು ಅಸಾಧ್ಯದ ಮಾತಾಯಿತು.

ನಾನು ಆ ದಿನ ಬರೆದೆ.

ಇದೇನು ಸ್ತನವೋ, ನಿಂಬೇಕಾಯಿಯೋ…
ಇದೇನು ಯಂತ್ರವೋ ಅಥವಾ
ತಡಕಾಡುತ್ತಿರುವ ನಿಲ್ಲದ ರಾಕ್ಷಸ ಕೈಯೋ…
ಸ್ತನಗಳೆಂದರೆ ಕೆಲವರಿಗೆ ಮಾಂಸದ ಮುದ್ದೆಯಷ್ಟೇ,
ಇಲ್ಲಿರುವುದು ಬೀಸುಕಲ್ಲಿನಿಂದ ಸಪಾಟಾದ ಎದೆ…
ಬಂದು ಬಿಡು ಬೇಗ,
ಬೀಸುಕಲ್ಲಿನ ಚಕ್ರಗಳ ನಡುವೆ,
ಈ ಸಪಾಟು ಜಾಗದಲ್ಲಿ
ಮಾಂಸದ ಮುದ್ದೆಯನ್ನು
ನೀನೇ ಸ್ವತಃ ತುಂಬಿಬಿಡು…
ಹಾಗೆಯೇ ಬಿಕ್ಕಳಿಕೆಯನ್ನೂ ಕೂಡ…
ಹುಚ್ಚೆದ್ದು ನಾಟ್ಯವಾಡುವ ಈ ಹೆಣ್ತನದಿಂದ
ನಿನ್ನನ್ನು ಉಳಿಸಲು ಬರುವವರ್ಯಾರೂ ಇಲ್ಲ,
ಹೆಣ್ಣಿನ ಈ ಅಂಗವು ಬಗೆಬಗೆಯ ರೂಪಗಳಿಂದ
ತನ್ನನ್ನೇ ಹೇಗೆ ವಂಚಿಸುತ್ತಿದೆ ನೋಡು…

12046957_1170229759673770_3677088029671228780_nಬಯಾಪ್ಸಿಯಲ್ಲಾಗುವ ನೋವಿನ ಬಗ್ಗೆ ಕಿಂಚಿತ್ತು ಜ್ಞಾನವೂ ನನಗಿರಲಿಲ್ಲ. “ಒಂದು ಇಂಜೆಕ್ಷನ್ ಕೊಟ್ಟು ಮಾದರಿ ತೆಗೆದುಕೊಳ್ಳುತ್ತೇವೆ ಅಷ್ಟೇ”, ಎಂದಿದ್ದರು ವೈದ್ಯರು. ಆದರೆ ಇಂಜೆಕ್ಷನ್ನಿನ ಸೂಜಿಯು ಸುತ್ತಲೂ ಚುಚ್ಚುತ್ತಲೇ ಹೋಗುತ್ತಾ ಇನ್ನೇನು ಮಾಂಸದ ಒಂದು ತುಣುಕೇ ಉದುರಲಿದೆ ಎಂಬ ಸ್ಥಿತಿಗೆ ಬಂದಾಗಲೇ ನೋವಿನ ವಿಶ್ವರೂಪದ ಅರಿವಾಗಿದ್ದು. ಅಲ್ಲದೆ ತೊಟ್ಟಿಕ್ಕಿ ಟ್ರೇ ನಲ್ಲಿ ಸಂಗ್ರಹವಾಗುತ್ತಿದ್ದ ರಕ್ತದ ಹನಿಗಳನ್ನು ನೋಡುತ್ತಾ ನಾನು ಇನ್ನಷ್ಟು ಅಧೀರಳಾಗುತ್ತಿದ್ದೆ. ಎಲ್ಲಾ ಮುಗಿಸಿ ದೈಹಿಕವಾಗಿಯೂ, ಮಾನಸಿಕವಾಗಿಯೂ ಸುಸ್ತಾಗಿಹೋಗಿದ್ದ ನಾನು ಮನೆಗೆ ಮರಳಲೆಂದು ಕೊನೆಗೂ ಮಮ್ಮೊಗ್ರಫಿಯ ಕೋಣೆಯಿಂದ ಹೊರಗೆ ಬಂದಿದ್ದೆ. ಆ ದಿನ ನಾನು ಕಾರು ತಂದಿರಲಿಲ್ಲ. ಎಷ್ಟು ಕಾದರೂ ಯಾವ ಆಟೋದವನೂ ನಿಲ್ಲಿಸುವಂತೆಯೂ ಕಾಣಲಿಲ್ಲ. ಒಬ್ಬ ಪುಣ್ಯಾತ್ಮ ಆಟೋ ನಿಲ್ಲಿಸಿದರೂ ಹೊರಡಲು ತಯಾರಿರಲಿಲ್ಲ. “ನೋಡಪ್ಪಾ… ಆಸ್ಪತ್ರೆಗೆಂದು ಬಂದಿದ್ದೆ. ತಲೆಸುತ್ತು ಬರುತ್ತಿದೆ. ದಯವಿಟ್ಟು ಹೊರಡು”, ಎಂದು ನಾನು ಮೆಲ್ಲಗೆ ಗೋಗರೆದೆ. “ಹಾಗಿದ್ದರೆ ಆಸ್ಪತ್ರೆಯಿಂದಲೇ ಆಟೋ ಹಿಡಿಯಬೇಕಿತ್ತಲ್ವಾ?”, ಎಂದು ಆತ ರೊಳ್ಳೆ ತೆಗೆದ. “ಅಲ್ಲಿ ಯಾವ ಆಟೋದವನೂ ನಿಲ್ಲಿಸಲಿಲ್ಲ. ಹೀಗಾಗಿ ಮುಖ್ಯರಸ್ತೆಯವರೆಗೆ ಬಂದೆ. ನನ್ನನ್ನು ನೋಡಿದರೆ ಗೊತ್ತಾಗುತ್ತಿಲ್ಲವೇ ನಿನಗೆ. ಒಂದು ಕೈಯಲ್ಲಿ ನಿನ್ನ ಆಟೋವನ್ನು ಆಧಾರವಾಗಿ ಹಿಡಿದುಕೊಂಡು ಹೇಗೆ ಒದ್ದಾಡುತ್ತಿರುವೆ ನೋಡು”, ಎಂದು ಉಸುರಿದೆ ನಾನು. ನನ್ನನ್ನು ಸೂಕ್ಷ್ಮವಾಗಿ ಕಣ್ಣಲ್ಲೇ ಅಳೆದ ಆತ ಒಲ್ಲದ ಮನಸ್ಸಿನಿಂದಲೇ ಕರೆದುಕೊಂಡು ಹೋಗಿ ಮನೆ ಮುಟ್ಟಿಸಿದ. ಆದರೆ ನಾನು ಅಪಾಟರ್್ಮೆಂಟಿನ ಒಳಸೇರಿ ಲಿಫ್ಟ್ ನ ಒಳಹೊಕ್ಕುವವರೆಗೂ ಪಾಪ ಕಾಯುತ್ತಲೇ ಇದ್ದ ಆತ. ಚಿಕ್ಕ ಚಿಕ್ಕ ಮಾನವೀಯ ಸಂವೇದನೆಗಳು ಮನಸ್ಸನ್ನು ಅದೆಷ್ಟು ತಟ್ಟುತ್ತವೆ ನೋಡಿ!

ಹೀಗೆ ಪ್ರಾಥಮಿಕ ಹಂತದ ತಪಾಸಣೆಯನ್ನು ಮಾಡಿಸಿ ನಾನು ಕಾರ್ಯನಿಮಿತ್ತ ಭೋಪಾಲ್ ಕಡೆಗೆ ಧಾವಿಸಿದ್ದೆ. ಆಫೀಸು, ಬಿಡುವಿಲ್ಲದ ದಿನಗಳು… ಇವೆಲ್ಲಾ ನನ್ನ ಮಟ್ಟಿಗೆ ಎಂದಿನ ಕತೆಗಳೇ. ಅದರಲ್ಲೂ ಆಫೀಸಿನಲ್ಲಿ ನಿರೀಕ್ಷಣೆಯ ಅಧಿಕಾರಿಗಳು ಬಂದರೆಂದರೆ, ಎಲ್ಲಾ ಜವಾಬ್ದಾರಿಗಳೂ ನನ್ನ ಮೇಲೆಯೇ ಎಂದರೆ ಹೇಳುವುದೇ ಬೇಡ. ಹೀಗಾಗಿ ಒಂದೆರಡು ದಿನಗಳ ಕಾಲ ಎಲ್ಲವೂ ಮರೆತೇಹೋಯಿತು. ನಾಲ್ಕುದಿನಗಳ ನಂತರ ಅಚಾನಕ್ಕಾಗಿ ನೆನಪಾಗಿ ಅಜಯ್ ಗೆ ಕರೆ ಮಾಡಿದರೆ “ರಿಪೋಟರ್್ ಪಾಸಿಟಿವ್ ಇದೆ. ನೀನು ಬಂದುಬಿಡು. ಆಮೇಲೆ ನೋಡೋಣ”, ಎಂದು ಚಿಕ್ಕದಾಗಿ ಹೇಳಿಬಿಟ್ಟ. ಹದಿನೆಂಟು ಅಕ್ಟೋಬರ್ 2013 ರ ರಾತ್ರಿಯದು. ಹೃದಯದಲ್ಲಿ ಮತ್ತೊಮ್ಮೆ ಢವಢವ. ಆ ರಾತ್ರಿ ಔತಣಕೂಟವೊಂದು ನಡೆಯುತ್ತಿತ್ತು. ನಾನೂ ಭಾಗವಹಿಸಿದ್ದೆ. ಮನಸ್ಸಿಲ್ಲದಿದ್ದರೂ ತಿನ್ನುತ್ತಿದ್ದೆ, ಸುಖಾಸುಮ್ಮನೆ ನಕ್ಕು ಮಾತನಾಡುತ್ತಿದ್ದೆ. ಅದೇನೇ ತೊಂದರೆಗಳಿದ್ದರೂ ಈವರೆಗೆ ನನ್ನ ವೈದ್ಯಕೀಯ ರಿಪೋಟರ್ುಗಳು ಪರವಾಗಿಲ್ಲವೆಂಬ ಧಾಟಿಯಲ್ಲೇ ಬರುತ್ತಿದ್ದವು. “ಆಗಲಿ… ಏನಾದರೂ ಬಂತಲ್ಲ”, ಎಂದು ನಕ್ಕು ಮರೆಯಲು ಪ್ರಯತ್ನಿಸಿದೆ. ರಿಪೋಟರ್ು ತಪ್ಪೂ ಆಗಿರಬಹುದೆಂದು ಮನದ ಇನ್ನೊಂದು ಮುಖವು ಹೇಳಿತು. “ಯಾವುದಕ್ಕೂ ನಾನು ಮರಳಿ ಬರುವಷ್ಟರಲ್ಲಿ ಒಮ್ಮೆ ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ರಿಪೋರ್ಟನ್ನು ತೋರಿಸು”, ಎಂದು ಅಜಯ್ ಗೆ ಹೇಳಿದೆ. ಮರುದಿನ ಕುಟುಂಬದ ವೈದ್ಯರೂ ಸುದ್ದಿಯನ್ನು ದೃಢಪಡಿಸಿದರು. ಸಾರಾಂಶವಿಷ್ಟೇ: “ಕ್ಯಾನ್ಸರಿನ ಜಗತ್ತಿಗೆ ಸುಸ್ವಾಗತ”

ವೈದ್ಯರೂ ನನ್ನ ರಿಪೋರ್ಟನ್ನು ನೋಡಿ ಅವಾಕ್ಕಾಗಿದ್ದರು. “ಕೆಲವೊಮ್ಮೆ ಗಟ್ ಫೀಲಿಂಗ್ ಗಳೂ ಕೈಕೊಡುತ್ತವೆ ನೋಡಿ”, ಎಂದು ಮಾತನ್ನಾರಂಭಿಸಿದ ಅವರು ಕ್ಯಾನ್ಸರ್, ಅದರ ಚಿಕಿತ್ಸೆ ಮತ್ತು ಚಿಕಿತ್ಸೆಯ ಪೂರ್ವಭಾವಿ ಹೆಜ್ಜೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಕ್ಯಾನ್ಸರಿನ ಜೀವಕೋಶಗಳು ವೇಗವಾಗಿ ದೇಹದಲ್ಲೆಲ್ಲಾ ಹರಡುತ್ತಾ ಹೋಗುತ್ತವೆ, ಹೀಗಾಗಿ `ಶುಭಸ್ಯ ಶೀಘ್ರಂ’ ಎಂಬ ಸಲಹೆಯೂ ಕೂಡ. ಇವೆಲ್ಲದರ ನಡುವೆಯೂ ಮುಗಿಸಲೇಬೇಕಾದ ಆಫೀಸಿನ ಕೆಲ ಕಾರ್ಯಗಳಿದ್ದವು. ಅಲ್ಲದೆ ಆಫೀಸಿಗೆ ಸಂಬಂಧಪಟ್ಟ ಪರೀಕ್ಷೆಯೊಂದಕ್ಕಾಗಿ ದೆಹಲಿಗೆ ತೆರಳಬೇಕಿತ್ತು. ಹಲವು ದಿನಗಳ ಮಟ್ಟಿಗೆ ರಜೆ ಹಾಕಬೇಕಿದ್ದುದರಿಂದ ದೆಹಲಿಯಿಂದ ಮರಳಿ ವಿಭಾಗೀಯ ಮಟ್ಟದ ಒಂದು ಮೀಟಿಂಗ್ ಅನ್ನೂ ಕರೆಯಬೇಕಿತ್ತು. ವೈದ್ಯರು ಅಕ್ಟೋಬರ್ ಮೂವತ್ತರ ದಿನಾಂಕವನ್ನು ನಿಗದಿಗೊಳಿಸಿದರು. ಆದರೆ ನಾನು ಮತ್ತೊಮ್ಮೆ ಸಂದಿಗ್ಧದಲ್ಲಿ ಸಿಲುಕಿದ್ದೆ. ನನ್ನ ಚೆನ್ನೈ ಪ್ರವಾಸದ ಕಾರಣದಿಂದಾಗಿ ಸತತ ಮೂರು ವರ್ಷಗಳಿಂದ ಅಜಯನ ಹುಟ್ಟುಹಬ್ಬದ ಆಚರಣೆಯನ್ನು ತಪ್ಪಿಸಿಕೊಂಡಿದ್ದೆ. ಆದರೆ ಈ ಬಾರಿಯೂ ಅದನ್ನು ಪುನರಾವತರ್ಿಸುವಂತಿರಲಿಲ್ಲ. ಕೊನೆಗೂ ನನ್ನ ಬಾಲಿಶ ಹಟಕ್ಕೊಪ್ಪಿದ ವೈದ್ಯರು ಶಸ್ತ್ರಚಿಕಿತ್ಸೆಗಾಗಿ 2013 ರ ನವೆಂಬರ್ ಒಂದರ ದಿನವನ್ನು ಅಂತಿಮಗೊಳಿಸಿದರು.

ಈ ಹೊತ್ತಿಗೆ ಕ್ಯಾನ್ಸರಿನ ಸುದ್ದಿಯು ನನ್ನ ಆಫೀಸಿನ ಅಂಗಳವನ್ನಷ್ಟೇ ತಲುಪಿತ್ತು. ಸಂಬಂಧಿಕರ ಪ್ರತಿಕ್ರಿಯೆಗಳು ಹೇಗಿರಬಹುದು ಎಂಬ ಅಂದಾಜು ನಮಗಿತ್ತು. ಕೆಲವರ್ಷಗಳ ಹಿಂದೆ ಈ ಖಾಯಿಲೆಯು ಮಾವನವರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಒಂದೆರಡು ವರ್ಷಗಳ ಹಿಂದೆಯೇ ಹಿರಿಯಣ್ಣ ಮತ್ತು ಅತ್ತಿಗೆಯನ್ನು ನಾವು ಕ್ಯಾನ್ಸರ್ನಿಂದಾಗಿ ಕಳೆದುಕೊಂಡಿದ್ದೆವು. ಹೀಗಾಗಿ ಎರಡೂ ಕುಟುಂಬಗಳಲ್ಲಿ ನೋವಿನ ಗಾಯಗಳು ಇನ್ನೂ ಹಸಿಹಸಿಯಾಗಿಯೇ ಇದ್ದಿದ್ದು ಸತ್ಯ. ಹೀಗಾಗಿ ಎರಡೂ ಕುಟುಂಬಗಳ ಸದಸ್ಯರಿಗೆ ಈ ವಿಷಯವನ್ನು ಹೇಳುವ ಮತ್ತು ಮನಗಾಣಿಸುವ ಸಂದಿಗ್ಧತೆಯು ಸವಾಲಿನದಾಗಿತ್ತು. ಕೊನೆಗೂ ಚಿಕಿತ್ಸೆಯ ರೂಪುರೇಷೆಗಳು ಸಿದ್ಧವಾದ ಬಳಿಕವೇ ಸಂಬಂಧಿಕರಿಗೆ ಮತ್ತು ಹಿತೈಷಿಗಳಿಗೆ ವಿಷಯವನ್ನು ಹೇಳುವುದೆಂದು ನಾವು ನಿರ್ಧರಿಸಿದೆವು.

ನಿರೀಕ್ಷೆಯಂತೆಯೇ ಚಿಕ್ಕ ಅತ್ತಿಗೆ ಮತ್ತು ಅಕ್ಕಂದಿರ ಸ್ಥಿತಿಯು ಹೇಳತೀರದು. ನಾನು ನಗುತ್ತಿದ್ದರೆ ಇವರೆಲ್ಲರ ಕಣ್ಣುಗಳಲ್ಲೂ ಧಾರಾಕಾರ ಕಣ್ಣೀರು. “ನನಗೆ ಧೈರ್ಯ ಹೇಳುವ ಬದಲು ನೀವೇ ಹೀಗೆ ಅಳುತ್ತಾ ಕೂತರೆ ನನ್ನದೇನು ಗತಿ?”, ಎಂದು ಕೇಳಿದೆ ನಾನು. ರೋಗದ ನೋವಿನಿಂದ ಅತ್ತರೂ ಪರವಾಗಿಲ್ಲ, ಆದರೆ ರೋಗ ಬಂತೆಂಬ ಒಂದೇ ಕಾರಣದಿಂದ ಯಾವತ್ತೂ ಕಣ್ಣೀರಾಗುವುದಿಲ್ಲ ಎಂಬುದನ್ನು ನಾನು ಆಗಲೇ ನಿರ್ಧರಿಸಿಬಿಟ್ಟಿದ್ದೆ. ಮನಸ್ಸು ನೊಂದಾಗಲೆಲ್ಲಾ ನನಗಿಂತಲೂ ನೋವಿನಲ್ಲಿರುವವರು ತುಂಬಾ ಮಂದಿಯಿದ್ದಾರೆ ಎಂದು ತನಗೇ ಧೈರ್ಯ ಹೇಳಿಕೊಳ್ಳುವವಳು ನಾನು. ಜೊತೆಗೇ ಕೊಂಚ ಚೇತರಿಸಿಕೊಳ್ಳುವ ಮನಸ್ಸು. ಸ್ತನ ಕ್ಯಾನ್ಸರ್ ಗಿಂತಲೂ ಹೆಚ್ಚಿನ ಭಯಾನಕ ಖಾಯಿಲೆಗಳೊಂದಿಗೆ ಸೆಣಸಾಡುತ್ತಿರುವವರು, ಈ ಖಾಯಿಲೆಯ ಕೊನೆಯ ಹಂತದಲ್ಲಿರುವವರು… ಹೀಗೆ ಈ ಅನಾಮಿಕ ನತದೃಷ್ಟರ ಬಗ್ಗೆ ಯೋಚಿಸುತ್ತಾ ಕುಸಿಯುತ್ತಿದ್ದ ಧೈರ್ಯವನ್ನು ಮತ್ತೆ ಎದ್ದು ನಿಲ್ಲಿಸುವ ನನ್ನ ಕ್ಷೀಣಪ್ರಯತ್ನಗಳು. ಕೊನೆಗೂ ನಾನು ನಿರ್ಧರಿಸಿಯೇ ಬಿಟ್ಟಿದ್ದೆ: ನಾನು ಧೈರ್ಯ ತಂದುಕೊಳ್ಳಬೇಕು. ಈ ಸ್ಥಿತಿಯನ್ನೂ ಗೆದ್ದು ಬರಬೇಕು. ನನಗಾಗಿ, ನನ್ನ ಪತಿಗಾಗಿ ಮತ್ತು ನನ್ನಿಬ್ಬರು ಹೆಣ್ಣುಮಕ್ಕಳಿಗಾಗಿ.

ನನ್ನ ಕ್ಯಾನ್ಸರಿನ ವಿಷಯವು ಹರಡುತ್ತಿದ್ದಂತೆ ನಿಧಾನವಾಗಿ ಹೊಸಹೊಸ ಕಥೆಗಳೂ ಹುಟ್ಟಿಕೊಂಡವು. ನಮ್ಮ ಸಮಸ್ಯೆಯೆಂದರೆ ಕ್ಯಾನ್ಸರ್ ಇರಲಿ ಅಥವಾ ಇನ್ಯಾವುದೇ ಖಾಯಿಲೆಯಾಗಲೀ, ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತೇವೆ, ಭಯಪಡುತ್ತೇವೆ. ಹೀಗಾಗಿ ಸಹಜವಾಗಿಯೇ ಸತ್ಯಾಂಶಗಳು ನಮ್ಮಿಂದ ದೂರವೇ ಉಳಿಯುತ್ತವೆ. ನಮ್ಮ ರೋಗಗಳ ಬಗ್ಗೆ, ನಮ್ಮ ನೋವು-ಸಂಕಟ-ಅನುಭವಗಳ ಬಗ್ಗೆ ನಾವು ಮುಕ್ತವಾಗಿ ಮಾತನಾಡಿದರೆ ಇದೇ ಸ್ಥಿತಿಯಲ್ಲಿರುವವರಿಗೆ ನಮ್ಮ ಅನುಭವಗಳು ಪಾಠಗಳಾಗುವುದಲ್ಲದೆ, ಅವರಿಗೆ ಮಾನಸಿಕ ಸ್ಥೈರ್ಯವನ್ನೂ ಕೊಡಬಲ್ಲದು ಎಂಬುದು ನನ್ನ ಅಭಿಪ್ರಾಯ. ಹಣವನ್ನು ಎಲ್ಲಿಂದಲೋ, ಹೇಗಾದರೋ ಹೊಂದಿಸಬಹುದು. ಆದರೆ ಮಾನಸಿಕ ಸ್ಥೈರ್ಯ? ಅದು ನಮ್ಮೊಳಗಿನಿಂದಲೇ ಹುಟ್ಟಿಬರಬೇಕು. ನಮ್ಮ ಸ್ಥಿತಿಯನ್ನು ನೋಡುತ್ತಾ ಕಣ್ಣೀರು ಹಾಕಬಲ್ಲವರು ಹಲವರು ಸಿಗಬಹುದು. ಆದರೆ ಈ ಹೊತ್ತಿನಲ್ಲಿ ನಿಮಗೆ ಬೇಕಿರುವುದು ಭರವಸೆಯ ಬೆಂಬಲವೇ ಹೊರತು ಅನುಕಂಪವೂ, ಕಣ್ಣೀರೂ ಅಲ್ಲ ಎಂಬುದನ್ನು ನಾವೇ ಈ ಜೀವಗಳಿಗೆ ಹೇಳಬೇಕು.

ಕ್ಯಾನ್ಸರ್ ನಿಜಕ್ಕೂ ಒಂದು ಭಯಾನಕವಾದ ರೋಗ. ತನು-ಮನ-ಧನಗಳಿಂದ ವ್ಯಕ್ತಿಯೊಬ್ಬನನ್ನು ಹಿಂಡಿಹಿಪ್ಪೆ ಮಾಡಿಬಿಡುವುದಲ್ಲದೆ ಕರಾಳ ಖಾಲಿತನವೊಂದನ್ನು ಉಳಿಸಿಹೋಗಬಹುದು. ಆದರೆ ನಾವು ವೈದ್ಯಕೀಯ ಮತ್ತು ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ತೀರಾ ಅಜಾಗರೂಕರಾಗಿರುತ್ತೇವೆ ಎಂಬುದೂ ಅಷ್ಟೇ ಸತ್ಯ. ಸಮಸ್ಯೆಯೆಂಬುದು ನಮ್ಮ ಬುಡಕ್ಕೆ ಬರುವವರೆಗೂ ನಾವು ಇವುಗಳ ಬಗ್ಗೆ ಯೋಚಿಸುವ ಗೋಜಿಗೇ ಹೋಗಿರುವುದಿಲ್ಲ. ಹೀಗಾಗಿ ಮಾಹಿತಿಗಳಿಗಿಂತ ಹೆಚ್ಚಾಗಿ ನಮ್ಮಲ್ಲಿ ಭ್ರಾಂತಿಯೇ ತುಂಬಿಕೊಂಡಿರುತ್ತದೆ. ಕ್ಯಾನ್ಸರ್ ಬಗ್ಗೆಯೂ ಹೆಚ್ಚಿನ ಜನರಿಗೆ ಮಾಹಿತಿಯೇ ಇಲ್ಲ. ಹೀಗಾಗಿ ಸ್ತನ ಕ್ಯಾನ್ಸರ್ ಆಗಿದೆಯೆಂದು ಗೊತ್ತಾದ ಕೂಡಲೇ ರೋಗಿಯೂ, ರೋಗಿಯ ಮನೆಯವರೂ ಕಂಗಾಲಾಗಿಬಿಡುತ್ತಾರೆ. ನಾವುಗಳೂ ಕೂಡ ಕಂಗಾಲಾಗಿದ್ದೆವು. ನನಗಂತೂ ಎಲ್ಲರನ್ನೂ ತಬ್ಬಿಕೊಂಡು ಜೋರಾಗಿ ಅತ್ತುಬಿಡಬೇಕೆಂಬಷ್ಟು ಹತಾಶೆಯ ಭಾವ. ಆದರೆ ನಾವೆಲ್ಲರೂ ಮಾನಸಿಕವಾಗಿ ದೃಢವಾಗಿದ್ದೆವು ಎಂಬುದೂ ಸತ್ಯ. ನಾನು, ನನ್ನ ಪತಿ ಅಜಯ್ ಮತ್ತು ನನ್ನ ಇಬ್ಬರು ಹೆಣ್ಣುಮಕ್ಕಳು ತೋಶಿ ಮತ್ತು ಕೋಶಿ… ಹೀಗೆ ಎಲ್ಲರೂ ತಮ್ಮ ತಮ್ಮ ಸ್ಥಾನಗಳಲ್ಲಿ ಒಬ್ಬರಿಗಿಂತ ಒಬ್ಬರು ಗಟ್ಟಿಮನಸ್ಸಿನವರು.

ಬಹುಷಃ ನನ್ನೊಳಗಿನ ಕ್ಯಾನ್ಸರ್ ಕೂಡ ವೈದ್ಯರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಲಿತ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೀಮೋ ಅನ್ನು ವೈದ್ಯರು ಕೈಬಿಟ್ಟಿದ್ದರು. “ನಿಮ್ಮ ಕೇಸು ತುಂಬಾ ಫೇರ್ ಇದೆ. ರಿಪೋಟರ್್ ಬಂದ ನಂತರವೇ ಕೀಮೋ ಬಗ್ಗೆ ನಿರ್ಧರಿಸಿದರಾಯಿತು. ಕೀಮೋದ ಅಗತ್ಯತೆಯು ನಿಮಗೆ ಬಾರದೆಯೂ ಇರಬಹುದು. ಹಾಗಿದ್ದ ಪಕ್ಷದಲ್ಲಿ ರೇಡಿಯೇಷನ್ ಕೊಟ್ಟು ಮುಗಿಸಿದರಾಯಿತು”, ಎಂಬ ಭರವಸೆಯ ಮಾತುಗಳು. ನನ್ನಂಥಾ ಕ್ಯಾನ್ಸರ್ ರೋಗಿಯೊಬ್ಬಳಿಗೆ ಇದಕ್ಕಿಂತ ಹೆಚ್ಚಿನ ಖುಷಿಯನ್ನು ಕೊಡುವ ಸಂಗತಿಯಾದರೂ ಏನು!

breast-cancer3ಶಸ್ತ್ರಚಿಕಿತ್ಸೆಯ ನಂತರ ಹಲವು ಸಮಸ್ಯೆಗಳೊಂದಿಗೆ ಸೆಣಸಾಡಿದ್ದಾಯಿತು. ಮೂತ್ರಸಂಬಂಧಿ ಸೋಂಕಿನಿಂದಾಗಿ ಆದ ಐ.ಸಿ.ಯು ನ ಯಾತ್ರೆಯ ಹೊರತಾಗಿಯೂ ನನ್ನ ಸ್ಥಿತಿಯು ಬಹಳಷ್ಟು ಸುಧಾರಿಸಿತ್ತು. ಮಿತ್ರರಾದ ರವಿಶೇಖರ್ ಮ್ಯೂಸಿಕ್ ಬಾಕ್ಸ್ ಒಂದನ್ನು ನನಗಾಗಿ ಕೊಟ್ಟುಹೋಗಿದ್ದರು. ಮುಂಜಾನೆಯಿಂದ ಸಂಜೆಯವರೆಗೂ ಈ ಪುಟ್ಟ ಡಬ್ಬದಿಂದ ಮೆಲುದನಿಯಲ್ಲಿ ಹೊರಹೊಮ್ಮುತ್ತಿದ್ದ ಸುಂದರ ಹಾಡುಗಳು ನನ್ನನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ಕೆಲ ಕಸರತ್ತುಗಳನ್ನೂ ಕೂಡ ನಸರ್್ ನನಗಾಗಿ ಹೇಳಿಕೊಟ್ಟಿದ್ದರು. ಕೊನೆಗೂ ಹತ್ತುದಿನಗಳ ನಂತರ ಪೂರ್ಣಕಾಲಿಕ ಕ್ಯಾನ್ಸರ್ ರೋಗಿಯಾಗಿ ನಾನು ಮನೆಗೆ ಮರಳಿದ್ದೆ. ನನ್ನ ಆಗಮನದೊಂದಿಗೇ ಅಜಯ್ ಮತ್ತು ಮಕ್ಕಳು ನನ್ನ ಕೋಣೆ, ಆಹಾರ, ಔಷಧಿ ಇತ್ಯಾದಿಗಳ ವ್ಯವಸ್ಥೆಯನ್ನು ಹೊಂದಿಸುವುದರಲ್ಲಿ ವ್ಯಸ್ತರಾಗಿಬಿಟ್ಟರು. ಯಾವ ದೈಹಿಕ ಕೆಲಸದಲ್ಲೂ ತೊಡಗಿಕೊಳ್ಳದಂತೆ, ಅದರಲ್ಲೂ ವಿಶೇಷವಾಗಿ ನೇರವಾಗಿ ಬಿಸಿಯ ಸಂಪರ್ಕಕ್ಕೆ ಬರದಂತಾಗಲು ಅಡುಗೆ ಮನೆಗೆ ಕಾಲಿಡದಂತೆ ಸ್ಪಷ್ಟಸೂಚನೆಗಳನ್ನು ನನಗೆ ನೀಡಲಾಯಿತು.

ನನ್ನ ಇಡೀ ಜೀವನದಲ್ಲಿ ತಿನ್ನದಷ್ಟು, ವಿಶ್ರಾಂತಿ ತೆಗೆದುಕೊಳ್ಳದಷ್ಟು ಹೆಚ್ಚಿನ ಅತ್ಯುತ್ತಮ ಆಹಾರವನ್ನು ಮತ್ತು ವಿಶ್ರಾಂತಿಯನ್ನು ನಾನೀಗ ತೆಗೆದುಕೊಳ್ಳುತ್ತಿದ್ದೆ. ಬಹುಷಃ ತಮ್ಮದೇ ದೇಹವನ್ನು ಮಿತಿಮೀರಿ ದಂಡಿಸಿದರೆ ಪ್ರಕೃತಿಯೂ ಒಪ್ಪಿಕೊಳ್ಳುವುದಿಲ್ಲವೋ ಏನೋ! ಇದಕ್ಕಾಗಿಯೇ ಅದು ವಿಶ್ರಾಂತಿಯ ಸನ್ನಿವೇಶಗಳನ್ನು ತಾನಾಗಿಯೇ ಸೃಷ್ಟಿಸಿಕೊಳ್ಳುತ್ತದೆ. ಹಾಗಿದ್ದರೆ ಕ್ಯಾನ್ಸರ್ ಎಂಬುದು ನನಗೆ ಪ್ರಕೃತಿದತ್ತವಾಗಿ ಬಂದ ವರವೇ? ಇಲ್ಲಾ ಜೀವನ ಅಥವಾ ಉದ್ಯೋಗದ ಹೇಳಲಾಗದ ಒತ್ತಡಗಳೆಲ್ಲಾ ಗಂಟಿನ ರೂಪವಾಗಿ ನನ್ನೊಳಗೆ ಇಳಿದುಹೋದವೇ? ಅಥವಾ ರಹೀಮನ ದೋಹೆಯಲ್ಲಿರುವಂತೆ ನನ್ನ ದುಃಖಗಳನ್ನು ನನ್ನನ್ನೇ ಇಟ್ಟುಕೊಂಡ ಫಲವೇ ಇದು? ದುಃಖಗಳ ಬಗ್ಗೆ ಅದೆಷ್ಟು ಚೆಂದ ಬರೆಯುತ್ತಾನೆ ರಹೀಮ್: ರಹಿಮನ್ ನಿಜಮನ್ ಕಿ ವ್ಯಥಾ, ಮನ್ ಹೀ ರಖ್ಖೋ ಗೋಯ್, ಸುನಿ ಇಟ್ಲೈನಿ ಲೋಗ್ ಸಬ್, ಬಾಂಟ್ ಹೀ ನಾ ಲೇ ಕೋಯ್! (ನಿನ್ನ ದುಃಖವು ನಿನ್ನಲ್ಲೇ ಇರಲಿ. ಉಳಿದವರಿಗೆ ಅದೊಂದು ಅಪಹಾಸ್ಯವಷ್ಟೇ. ಇಲ್ಲಿ ನೆರವಾಗುವವರೂ ಇಲ್ಲ, ದಾರಿ ತೋರಿಸುವವರೂ ಇಲ್ಲ)

ಅಂತೂ ಮಾದರಿ ರಿಪೋಟರ್ಿನ ಫಲಿತಾಂಶವು ಬಂದಿತ್ತು: ಮೊದಲ ಹಂತ, ಮೂರನೇ ಗ್ರೇಡ್. “ಕಳ್ಳರು ಬಂದಾಗ ಪೋಲೀಸರು ಅನಿವಾರ್ಯವಾದಂತೆ, ಆತಂಕವಾದಿಗಳು ಬಂದಾಗ ಕಮಾಂಡೋಗಳು ಅನಿವಾರ್ಯವಾದಂತೆ, ನಿಮ್ಮ ಸ್ತನ ಮತ್ತು ಕಂಕುಳ ನೋಡ್ಸ್ ಗಳಲ್ಲಿ ಗ್ರೇಡ್ – 3 ಎಂಬ ಆತಂಕವಾದಿಯು ಬಂದಾಗ ಕೀಮೋ ಕೂಡ ಅನಿವಾರ್ಯ”, ಎಂದರು ವೈದ್ಯರು. ಹೀಗೆ ಹೇಳಿದ ಕೀಮೋ ಸ್ಪೆಶಲಿಸ್ಟ್ ನವೆಂಬರ್ ಇಪ್ಪತ್ತಮೂರರ ದಿನಾಂಕವನ್ನು ನಿಗದಿಪಡಿಸಿದ್ದೂ ಆಯಿತು. ಜೊತೆಗೇ “ಶಸ್ತ್ರಚಿಕಿತ್ಸೆಯ ಮೂರರಿಂದ ನಾಲ್ಕು ವಾರಗಳ ಅವಧಿಯಲ್ಲಿ ಕೀಮೋ ಶುರುಮಾಡಲೇಬೇಕು. ಕೀಮೋ ಪ್ರಕ್ರಿಯೆಯು ಕ್ಯಾನ್ಸರ್ ಜೀವಕೋಶಗಳ ಜೊತೆಗೇ ದೇಹದಲ್ಲಿರುವ ಆರೋಗ್ಯವಂತ ಜೀವಕೋಶಗಳನ್ನೂ ನಾಶ ಮಾಡುತ್ತದೆ. ಇದರಿಂದ ನಿಶ್ಶಕ್ತಿ, ತಲೆಸುತ್ತು, ಹಸಿವಿಲ್ಲದಿರುವಿಕೆ, ಕೂದಲುಗಳ ಉದುರುವಿಕೆಯಂತಹ ಅಡ್ಡಪರಿಣಾಮಗಳೂ ಉಂಟಾಗಬಹುದು”, ಎಂಬ ಸೂಚನೆಯೂ ಕೂಡ ಬಂತು.

ಮೂರನೇ ವಾರದ ಕೊನೆಯಲ್ಲಿ ತಲೆಸ್ನಾನ ಮಾಡುತ್ತಿದ್ದರೆ ಮುಷ್ಟಿ ತುಂಬಾ ತಲೆಕೂದಲುಗಳೇ. ಕೀಮೋಗಾಗಿ ಮೊದಲೇ ಕೂದಲನ್ನು ಚಿಕ್ಕದು ಮಾಡಿ ಪಿಕ್ಸೀ ಕಟ್ ಮಾಡಿಸಿಕೊಂಡಿದ್ದ ನನಗೆ ಮತ್ತಷ್ಟು ಆಘಾತ. ಚೆಂದನೆಯ ನೀಳ ಕೇಶರಾಶಿಯು ಉದುರುವುದಕ್ಕಿಂತ ಈಗಾಗಲೇ ಕತ್ತರಿಸಿರುವ ಕೂದಲುಗಳು ಉದುರುವುದೇ ವಾಸಿ. ಆದರೂ ಕೂದಲುಗಳೊಂದಿಗೆ ಒಂದು ಭಾವನಾತ್ಮಕ ಸಂಬಂಧವಿದ್ದುದರಿಂದ ಕೂದಲುಗಳು ಉದುರಿಹೋಗಲಿವೆ ಎಂಬ ಸತ್ಯವು ತಿಳಿದಿದ್ದರೂ ದುಃಖವನ್ನು ತಡೆದುಕೊಳ್ಳಲಾಗದೆ ಸ್ನಾನಗೃಹದಲ್ಲೇ ಬಿಕ್ಕಿಬಿಕ್ಕಿ ಅಳಲಾರಂಭಿಸಿದೆ. ನನ್ನ ಅಳುವಿನ ದನಿಯನ್ನು ಕೇಳಿ ಓಡೋಡಿ ಬಂದ ಅಜಯ್ ಮತ್ತು ಕೋಶಿ ನನ್ನನ್ನು ಸಂತೈಸತೊಡಗಿದರು. ನಂತರ ಕೋಶಿ ಇದ್ದ ಚೂರುಪಾರು ಕೂದಲನ್ನೂ ಬೋಳಿಸಿಬಿಟ್ಟಳು. ಕನ್ನಡಿ ನೋಡಿದ ನಾನು ನನ್ನ ಮುಖವನ್ನೇ ನೋಡಲಾಗದೆ ಬೋಳುತಲೆಗೆ ಶಾಲೊಂದನ್ನು ಸುತ್ತಿಕೊಂಡೆ. ರಾತ್ರಿ ತೋಶಿ ಮನೆಗೆ ಬಂದ ನಂತರ “ಮುಖವು ಭಯಾನಕವಾಗಿ ಕಾಣುತ್ತಿದೆ ಕಣೇ” ಎಂದು ಅವಳಲ್ಲಿ ಉಸುರಿದೆ. ನನ್ನನ್ನು ಅಪ್ಪಿಕೊಂಡ ಮುದ್ದುಮಗಳು ತೋಶಿ, “ಹಾಗೇನೂ ಇಲ್ಲ. ಮೊದಲಿನಂತೆಯೇ ಮುದ್ದಾಗಿ ಕಾಣುತ್ತಿದ್ದೀಯಾ” ಎಂದು ಸಂತೈಸಿದಳು.

ಒಂದೆರಡು ದಿನಗಳ ನಂತರ ನಾನು ಕನ್ನಡಿಯ ಮುಂದೆ ಮತ್ತೆ ನಿಂತಿದ್ದೆ. ನಾನು “ಮಿ. ಜಿನ್ನಾ” ನಾಟಕ ಮಾಡುತ್ತಿದ್ದಾಗ ಹಲವಾರು ಬಾರಿ ಗಾಂಧಿ ಪಾತ್ರದ ಬಗ್ಗೆ ಯೋಚಿಸಿದ್ದೆ. ಆದರೆ ಆ ಪಾತ್ರವನ್ನು ನಿರ್ವಹಿಸುವ ಧೈರ್ಯವಿರಲಿಲ್ಲ. ಆದರೆ ಈಗ ನನ್ನ ಬೋಳುತಲೆಯನ್ನು ಕಂಡು ಗಾಂಧಿ ಪಾತ್ರದ ನೆನಪಾಗಿ ನನಗೇ ಖುಷಿಯೆನಿಸಿತು. ಮನೆಯಲ್ಲಾಗಲೀ, ಹೊರಗಾಗಲೀ ಶಾಲಿನಿಂದ ಅದನ್ನು ಮುಚ್ಚಿಕೊಳ್ಳುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟೆ. ಅಂಥಾ ಆತ್ಮವಿಶ್ವಾಸ ನನ್ನದು. ನನ್ನನ್ನು ನೋಡಿ ಕೆಲವರು ಈ ಸ್ಟೈಲ್ ನಿಮಗೆ ಹೊಂದುತ್ತದೆ ಎಂದು ಹೇಳತೊಡಗಿದರು. ಇನ್ನೊಬ್ಬರು ಬೌದ್ಧ ಭಿಕ್ಕುವಿನಂತೆ ಕಾಣುತ್ತೀ ಅಂದರು. ಮತ್ತೊಬ್ಬರಂತೂ “ನೀವು `ವಾಟರ್’ ಚಿತ್ರದಲ್ಲಿದ್ದ ಶಬಾನಾ ಆಜ್ಮಿ ಥರಾನೇ ಕಾಣುತ್ತಿದ್ದೀರಲ್ರೀ” ಎಂದರು. ಮೊದಲಿನಿಂದಲೂ ಜನರು ಶಬಾನಾಳೊಂದಿಗೆ ನನ್ನನ್ನು ಹೋಲಿಕೆ ಮಾಡುತ್ತಲೇ ಬಂದಿರುವುದರಿಂದ ಈಗಂತೂ ನಾನು ಮತ್ತಷ್ಟು ಖುಷಿಯಾಗಿದ್ದೆ. “ನಾನು ಅವಳಂತಲ್ಲ, ಅವಳು ನನ್ನಂತೆ ಕಾಣುತ್ತಾಳೆ”, ಎಂದೇ ಕೊಚ್ಚಿಕೊಳ್ಳತೊಡಗಿದ್ದೆ. (ನನ್ನದೂ ಒಂದು ಸ್ಟೇಟಸ್ ಆಗಿಬಿಟ್ಟಿದೆಯಲ್ಲವೇ ಈಗ: ಲೇಖಕಿ, ಕವಯತ್ರಿ, ನಾಟಕಕಾತರ್ಿ, ರಂಗಭೂಮಿ ಕಲಾವಿದೆ… ಇನ್ನೂ ಏನೇನೋ)

ಕೀಮೋ ಪೋಟರ್್ ನೀಡಲಿಲ್ಲವಾದ ಕಾರಣ ಇಂಟ್ರಾವೇನಸ್ ಕೀಮೋ ಅನ್ನು ನನಗೆ ನೀಡಲಾಯಿತು. ಆದರೆ ಮೂರನೇ ಕೀಮೋ ತಲುಪುವಷ್ಟರಲ್ಲೇ ಸೂಕ್ಷ್ಮನರಗಳು ಬೆಂಕಿಕಾರತೊಡಗಿದ್ದವು. ಆ ಜಾಗಗಳು ಕಪ್ಪಗಾಗಿ ನೋವು ಹೆಚ್ಚಾಗತೊಡಗಿತ್ತು. ಹೊಸಸುದ್ದಿಯೊಂದು ವೈದ್ಯರಿಂದ ನನಗಾಗಿ ಕಾದಿತ್ತು. “ನಿಮ್ಮ ನರಗಳು ತುಂಬಾ ಸೂಕ್ಷ್ಮ ಅನಿಸುತ್ತೆ. ಸಾಮಾನ್ಯವಾಗಿ ಆರು ತಿಂಗಳ ನಂತರ ಆಗುವಂತಹ ಈ ಪರಿಣಾಮಗಳು ನಿಮಗೆ ಒಂದೂವರೆ ತಿಂಗಳಲ್ಲೇ ಆಗಿವೆ. ಇನ್ನೂ ಹದಿಮೂರು ಕೀಮೋಗಳು ಬಾಕಿಯಿವೆ. ಹೀಗಾಗಿ ಕೀಮೋಪೋಟರ್್ ಅನ್ನು ಮಾಡಲೇಬೇಕು. ಇದಕ್ಕಾಗಿ ಮತ್ತು ಇನ್ನೊಂದು ಮಾಜರ್ಿನ್ ಟೆಸ್ಟ್ ಗಾಗಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡೋಣ.”

ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ಎಂಥವೆಂದರೆ ಇಲ್ಲಿ ಈ ಕ್ಷೇತ್ರದ ದಿಗ್ಗಜರಿಗೆ ಶರಣಾಗದೆ ವಿಧಿಯಿಲ್ಲ. ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾದ ಜಾಗದಿಂದಲೇ ಈ ಬಾರಿ ಮಾದರಿಯನ್ನು ತೆಗೆದು ಮಾಜರ್ಿನ್ ಟೆಸ್ಟ್ ಗಾಗಿ ಪರೀಕ್ಷಿಸಲಾಯಿತು. ಹೀಗೆ ಮಾಡಿದರಷ್ಟೇ ಕ್ಯಾನ್ಸರ್ ಕೋಶಗಳ ಆ ಕ್ಷಣದ ಸ್ಥಿತಿಯ ಅರಿವಾಗುತ್ತದಂತೆ. ಇದರ ರಿಪೋಟರ್ೂ ಬಂದಾಯಿತು. ಅಪಾಯದಿಂದ ದೂರಾಗಿದ್ದೇನೆ ಎಂಬ ಸಿಹಿಸುದ್ದಿಯನ್ನು ಈ ಬಾರಿ ವೈದ್ಯರು ನನಗೆ ನೀಡಿದರು. ಆದರೆ ಕೀಮೋ, ರೇಡಿಯೇಷನ್, ನಿಯಮಿತ ಆಹಾರ ಮತ್ತು ವಿಶ್ರಾಂತಿಗಳಿಗೆ ಯಾವುದೇ ವಿನಾಯಿತಿ ಇರಲಿಲ್ಲ. ಮೊದಲು ನಾಲ್ಕು ಕೀಮೋಗಳ ಒಂದು ಪಂಕ್ತಿಯ ನಂತರ ವಾರಕ್ಕೊಂದರಂತೆ ಹನ್ನೆರಡು ಕೀಮೋಗಳು. ಕೀಮೋ ಎಂದರೆ ಇಡೀ ದಿನವನ್ನೇ ತಿಂದುಹಾಕುವಂಥದ್ದು. ಮನೆಯಿಂದ ಆಹಾರವನ್ನೂ ಕೆಲವೊಮ್ಮೆ ಕದ್ದು ತರುತ್ತಿದ್ದೆ. ಪ್ರತೀ ಕೀಮೋದಲ್ಲೂ ಅದರದ್ದೇ ಆದ ಮುಗಿಯದ ತಾಪತ್ರಯಗಳು. ಒಮ್ಮೆ ಸಲೀಸಾಗಿ ಆದರೆ ಇನ್ನೊಮ್ಮೆ ಮತ್ತೇನೋ ಸಮಸ್ಯೆ.

ಇವೆಲ್ಲವೂ ಕಮ್ಮಿಯೆಂಬಂತೆ ಈ ಮಧ್ಯೆ ಹೊಸ ಸೋಂಕಿಗೀಡಾಗಿ ಹತ್ತು ದಿನಗಳ ಮಟ್ಟಿಗೆ ಮತ್ತೆ ಆಸ್ಪತ್ರೆ ಸೇರಬೇಕಾಯಿತು. ಮತ್ತದೇ ಪರೀಕ್ಷೆಗಳು ಮತ್ತು ಉದ್ದುದ್ದ ಬಿಲ್ಲುಗಳು. “ಈ ಎಲ್ಲಾ ಪರೀಕ್ಷೆಗಳೂ ಬೇಕಿತ್ತೇ?”, ಎಂದು ಕೆಲವೊಮ್ಮೆ ನಾನು ದಂಗಾಗಿದ್ದೂ ಉಂಟು. ಆದರೆ ಮತ್ತದೇ ಮಾತುಗಳು ನೆನಪಾಗುತ್ತಿದ್ದವು. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ಎಂಥವೆಂದರೆ ಇಲ್ಲಿ ಈ ಕ್ಷೇತ್ರದ ದಿಗ್ಗಜರಿಗೆ ಗುಲಾಮರಾಗದೆ ವಿಧಿಯಿಲ್ಲ. ಈ ಸೋಂಕು ಮತ್ತು ತತ್ಸಂಬಂಧಿ ಚಿಕಿತ್ಸೆಯ ಕಾರಣದಿಂದಾಗಿ ನನ್ನ ಕೀಮೋ ಮತ್ತೆ ಹದಿನೈದು ದಿನಗಳಿಗೆ ಮುಂದೂಡಲ್ಪಟ್ಟಿತು. ನನ್ನೊಂದಿಗಿದ್ದ ಉಳಿದ ಮಹಿಳೆಯರ ಕೀಮೋ ಮುಗಿದು ನಗುಮುಖದೊಂದಿಗೆ ಹೊರಹೋಗುತ್ತಿದ್ದುದನ್ನು ನೋಡುತ್ತಿದ್ದೆ. ಆ ಭರವಸೆಯ ನಗುವೇ ಉಳಿದ ರೋಗಿಗಳಿಗೆ ಆಶಾಕಿರಣ. ಮುಂದೆ ಈ ಅವಕಾಶವು ನನಗೂ ಬಂದಿತ್ತು ಮತ್ತು ನಾನೂ ಆ ಭರವಸೆಯ ನಗುವನ್ನು ಚೆಲ್ಲಿಯೇ ಹೊರಬಂದಿದ್ದೆ.

ಮುಂದೆ ಹದಿನಾರು ಕೀಮೋಗಳ ನಂತರ ರೇಡಿಯೇಷನ್. ಮತ್ತದೇ ಪ್ರೋಟೋಕಾಲ್ ಗಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀದಿನವೂ ಮೂವತ್ತೈದು ಸಿಟ್ಟಿಂಗ್. ಇದಕ್ಕೆಂದೇ ಪ್ರತ್ಯೇಕವಾಗಿ ಕೌನ್ಸೆಲಿಂಗ್ ಬೇರೆ. ಜೊತೆಗೇ ಲೆಕ್ಕವಿಲ್ಲದಷ್ಟು ನಿಯಮಗಳು. ಆ ಜಾಗವು ತಪ್ಪಿಯೂ ನೀರು, ಸಾಬೂನು, ಕ್ರೀಮು ಇತ್ಯಾದಿಗಳ ಸಂಪರ್ಕಕ್ಕೆ ಬರುವಂತಿಲ್ಲ. ಕ್ಯಾನ್ಸರ್ ಸ್ತನಸಂಬಂಧಿಯಾದರೂ ಕೊಂಚ ದೂರದಲ್ಲಿದ್ದ ಕುತ್ತಿಗೆಯೂ ನರಳುವಂತಾಯಿತು. ನನ್ನ ದನಿಯು ಬಿದ್ದುಹೋಗಿತ್ತು. ರೇಡಿಯೇಷನ್ ಮಾಡಿದ ಜಾಗಗಳು ನಿಧಾನವಾಗಿ ಕಪ್ಪಗಿನ ಕಲೆಗಳನ್ನು ಉಳಿಸತೊಡಗಿದ್ದವು. ಒಂದು ಸುತ್ತು ಪೂರ್ಣವಾದ ನಂತರ ಮತ್ತದೇ ಒಂದು ತಿಂಗಳ ವಿಶ್ರಾಂತಿ.

ಹೀಗೆ ಚಿಕಿತ್ಸಾ ಸಂಬಂಧಿ ಚಟುವಟಿಕೆಗಳೆಲ್ಲವೂ ನಿಗದಿತ ವೇಳಾಪಟ್ಟಿಯಂತೆಯೇ ಮುನ್ನಡೆಯುತ್ತಿದ್ದವು. ಆದರೆ ತನ್ನ ವೈಯಕ್ತಿಕ ಜೀವನದ ವೇಳಾಪಟ್ಟಿಯು ನೆಲಕಚ್ಚಿತ್ತು. ಹೀಗಾಗಿ ತನ್ನನ್ನು ತಾನು ಯಾವುದಾದರೊಂದು ಚಟುವಟಿಕೆಯಲ್ಲಿ ವ್ಯಸ್ತಗೊಳಿಸದೇ ಬೇರೆ ದಾರಿಯಿರಲಿಲ್ಲ. ಆದರೆ ಕೀಮೋ ನಡೆದ ಎರಡು ವಾರಗಳ ಬಳಿಕವೂ ನೆಟ್ಟಗೆ ಎದ್ದು ನಿಂತುಕೊಳ್ಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಅನಂತರ ಕೊಂಚ ವಾಸಿ ಎಂಬ ಸ್ಥಿತಿ. ವಾರಕ್ಕೊಮ್ಮೆ ಕೀಮೋ ಮಾಡುವ ದಿನಗಳಲ್ಲಿ ನಾನು ಮತ್ತಷ್ಟು ಸೋತುಹೋಗುತ್ತಿದ್ದೆ. ಆರೋಗ್ಯವು ಕೊಂಚ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಮತ್ತೊಂದು ಕೀಮೋ ನನ್ನನ್ನು ಎದುರಾಗಲು ಕಾಯುತ್ತಿತ್ತು. ಆದರೆ ಈ “ಕೊಂಚ ವಾಸಿ’ ಎನ್ನುವ ದಿನಗಳನ್ನು ನಾನು ಮೂರು ಚಟುವಟಿಕೆಗಳಿಗಾಗಿ ವಿಭಾಗಿಸಿದ್ದೆ: ಓದು, breast-cancer2ಬರಹ ಮತ್ತು ವೀಡಿಯೋ ಚಿತ್ರಣ. ಹಿಂದಿ, ಇಂಗ್ಲಿಷ್ ಮತ್ತು ಮೈಥಿಲೀ ಭಾಷೆಗಳ ಬಹಳಷ್ಟು ಪುಸ್ತಕಗಳನ್ನು ಈ ಅವಧಿಯಲ್ಲೇ ಓದಿ ಮುಗಿಸಿದೆ. ಕೆಲ ಕಥೆಗಳನ್ನೂ, ಕವಿತೆಗಳನ್ನೂ ಮತ್ತು “ಮಟನ್ ಮಸಾಲಾ ಚಿಕನ್ ಚಿಲ್ಲಿ” ಎಂಬ ನಾಟಕವನ್ನೂ ಬರೆದೆ. ಮುಂದೆ ಈ ನಾಟಕದ ನಿಮರ್ಾಣವನ್ನೂ ಮಾಡಿದೆ. ಈ ಅವಧಿಯಲ್ಲಿ ಬರೆದ ಕವಿತೆಗಳ ಸಂಗ್ರಹವು `ಕ್ಯಾನ್’ ಎಂಬ ಶೀಷರ್ಿಕೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ತಯಾರಿವೆ. ಸದ್ಯಕ್ಕೆ “ಸೆಲೆಬ್ರೇಟಿಂಗ್ ಕ್ಯಾನ್ಸರ್” ಎಂಬ ಆತ್ಮಕಥನವೊಂದನ್ನು ಬರೆಯುತ್ತಿರುವೆ. ಸಾಹಿತ್ಯಿಕ ಶೈಲಿಯಲ್ಲಿ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನೊದಗಿಸುವ, ಕ್ಯಾನ್ಸರ್ ಎಂಬ ಹೆಸರಿನಿಂದಲೇ ಹೆದರದಂತೆ ಧೈರ್ಯ ಹೇಳುವ, ರೋಗದೊಂದಿಗೆ ಸೆಣಸಾಡುವ ಮತ್ತು ಧನಾತ್ಮಕ ಚಿಂತನಾಕ್ರಮಗಳನ್ನು ಈ ಅವಧಿಯಲ್ಲಿ ಅಳವಡಿಸಿಕೊಳ್ಳುವಂತಹ ಅಂಶಗಳನ್ನು ಈ ಕೃತಿಯು ಹೇಳಲಿದೆ. ಇನ್ಸ್ಟಾಗ್ರಾಮಿನಲ್ಲಿ ಹದಿನೈದು ಸೆಕೆಂಡುಗಳ ವೀಡಿಯೋ ತಯಾರು ಮಾಡಲೂ ಸಹ ಅವಕಾಶವಿದ್ದುದರಿಂದ ಭೋಜಪುರಿ ಹಾಡುಗಳು ಮತ್ತು ಮಕ್ಕಳ ಮಾತುಗಳ ಕೆಲ ವೀಡಿಯೋಗಳನ್ನು ಮಾಡಿ ಯೂಟ್ಯೂಬಿನಲ್ಲಿ ಹರಿಯಬಿಟ್ಟಿದ್ದೆ. ನಂತರ ಅವುಗಳನ್ನು ಎಡಿಟ್ ಮಾಡಿ ಮಿನಿಚಿತ್ರಗಳನ್ನು ತಯಾರು ಮಾಡಿದ್ದೂ ಆಯಿತು. ಡಯಟ್ ಆಗಿ ನಿತ್ಯವೂ ಹಣ್ಣುಗಳನ್ನು ಹೇರಳವಾಗಿ ತಿನ್ನಬೇಕಿತ್ತು. `ಸತ್ಯಮೇವ ಜಯತೇ’ ಕಾರ್ಯಕ್ರಮದಲ್ಲಿ ಹೊಸಹೊಸ ಖಾದ್ಯಗಳನ್ನು ತಯಾರಿಸುವ ಬಗ್ಗೆ ಒಮ್ಮೆ ಹೇಳಿದ್ದರು. ಅದನ್ನು ನೋಡಿಕೊಂಡು ಹಣ್ಣುಗಳ ಸಿಪ್ಪೆಗಳನ್ನೇ ಬಳಸಿ ಕೆಲವೊಂದು ಖಾದ್ಯಗಳನ್ನು ತಯಾರಿಸುವುದನ್ನು ಕಲಿತೆ. ಆಗೊಮ್ಮೆ ಈಗೊಮ್ಮೆ ಗಾರ್ಡನಿಂಗ್ ಕೂಡ ಮಾಡುತ್ತಿದ್ದೆ. ಬಸಳೆಸೊಪ್ಪಿನ ದಂಟುಗಳು ಆರೋಗ್ಯವಾಗಿ ಮೇಲಕ್ಕೆದ್ದಾಗ ನನ್ನ ಖುಷಿಗಂತೂ ಪಾರವೇ ಇರಲಿಲ್ಲ.

“ಅವಿತೋಕೋ ಕ್ರಿಯೇಟಿವ್ ಇವನಿಂಗ್” ಎಂಬ ಅದ್ಭುತ ಸಂಜೆಗಳು ಈ ಅವಧಿಯಲ್ಲೇ ಜನ್ಮತಾಳಿದವು. “ರೂಮ್ ಥಿಯೇಟರ್” ಎಂಬ ಕಲ್ಪನೆಯ ಕೂಸಿದು. ಸೋಂಕಿನ ಭಯದಿಂದಾಗಿ ಮನೆಯ ಹೊಸ್ತಿಲು ದಾಟುವ ಅನುಮತಿಯಿಲ್ಲದಿದ್ದುದರಿಂದ ಮನೆಯೊಳಗೇ ಎಲ್ಲವನ್ನೂ ಮಾಡಬೇಕಿತ್ತು. ಶನಿವಾರದ ಕೀಮೋ ಆದ ನಂತರ ಆ ರಾತ್ರಿಯಿಡೀ ನಿದ್ರೆಯೇ ಇಲ್ಲದ ಪರಿಸ್ಥಿತಿ. ಆದರೆ ರವಿವಾರದ ರೂಮ್ ಥಿಯೇಟರ್ ಗಾಗಿ ನಾನು ಲವಲವಿಕೆಯಿಂದ ತಯಾರಾಗುತ್ತಿದ್ದೆ. ಬರೋಬ್ಬರಿ ಮೂವತ್ತಾರು ಘಂಟೆಗಳ ನಂತರ ನಿದ್ದೆಯು ಹತ್ತಿರ ಸುಳಿಯುತ್ತಿತ್ತು. ಎಲ್ಲರೂ ತುಂಬುಹೃದಯದಿಂದ ನನಗೆ ಸಹಕಾರವನ್ನು ಕೊಟ್ಟರು. ಹೀಗಾಗಿಯೇ “ಎಕ್ಸ್ಪೆರಿಮೆಂಟಲ್ ಥಿಯೇಟರ್” ನಿಂದ ಹಿಡಿದು “ಮಂಟೋ” ಸೇರಿದಂತೆ ನಾಟಕಗಳ ಹಲವು ಪ್ರಯೋಗಗಳು, ಪ್ರಸ್ತುತಿಗಳು ಮನೆಯೊಳಗೇ ನಡೆದವು. ಇಪ್ಪತ್ತೈದರಿಂದ ಮೂವತ್ತು ಜನರು ಕುಳಿತುಕೊಳ್ಳಬಹುದಾದ ಮನೆಯಲ್ಲಿ ಐವತ್ತರಿಂದ ಎಪ್ಪತ್ತರಷ್ಟು ಜನ ಬರತೊಡಗಿದರು.

ಈ ನಡುವೆ 2013 ರಲ್ಲಿ ಗೀತಾಶ್ರೀಯವರ ಸಂಪಾದಕತ್ವದಲ್ಲಿ ಮೂಡಿಬರುತ್ತಿದ್ದ “ಬಿಂದಿಯಾ” ಎಂಬ ಹಿಂದಿಭಾಷೆಯ ಖ್ಯಾತ ಪತ್ರಿಕೆಯಲ್ಲಿ ನನ್ನ ಲೇಖನವೊಂದು ಪ್ರಕಟವಾಯಿತು. ಆ ಲೇಖನವನ್ನು ಅವರೇ ಬರೆಸಿದ್ದಾದರೂ ಮುಂದೆ ಅವರೇ ಇಕ್ಕಟ್ಟಿಗೆ ಸಿಲುಕುವಂತಾಗಿದ್ದು ವಿಪಯರ್ಾಸ. ಲೇಖನವು ಪ್ರಕಟಗೊಂಡು ಫೇಸ್-ಬುಕ್ ಗೋಡೆಗಳಿಗೆ ಬರುತ್ತಲೇ ಆಗಿದ್ದು ಅಲ್ಲೋಲಕಲ್ಲೋಲ. ಫೋನು, ಇ-ಮೇಲ್, ಎಸ್ಸೆಮ್ಮೆಸ್ಸುಗಳಿಂದೆಲ್ಲಾ ಸಂದೇಶಗಳದ್ದೇ ಮಹಾಪೂರ. ಎಲ್ಲರೂ ಯಾವ ರೀತಿ ಮೆಸೇಜು ಮಾಡುತ್ತಾ, ಕರೆ ಮಾಡುತ್ತಾ ಕಣ್ಣೀರಿಡುತ್ತಿದ್ದರೆಂದರೆ ನಾನು ಸತ್ತೇಹೋಗಿರುವೆನೋ ಎಂಬಂತೆ! ಈ ಕರೆಗಳು, ಸಂದೇಶಗಳು ನನ್ನಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬುವ ಬದಲಾಗಿ ಮತ್ತಷ್ಟು ನಕಾರಾತ್ಮಕ ಪ್ರಭಾವಳಿಯನ್ನೇ ಸೃಷ್ಟಿಸಿತು. ಅಜಯ್ ಅಂತೂ ನಾನು ಯಾವುದೇ ಫೋನ್ ಕರೆಗಳನ್ನೂ ಸ್ವೀಕರಿಸುವಂತಿಲ್ಲವೆಂದು ಅಪ್ಪಣೆ ಹೊರಡಿಸಿದ್ದ. ಇನ್ನು ಕೆಲವರು ಬಂದು ಭೇಟಿ ಮಾಡಲಿಚ್ಛಿಸುತ್ತಿದ್ದರು. ಆದರೆ ಆರೋಗ್ಯವನ್ನು ವಿಚಾರಿಸುವುದಕ್ಕಿಂತಲೂ ನನ್ನ ಕುರೂಪಗೊಂಡ ಮುಖವನ್ನು ನೋಡಲೆಂದೇ ವಿಚಿತ್ರ ಕುತೂಹಲದೊಂದಿಗೆ ಬರುತ್ತಿದ್ದರು ಎಂದು ನನಗೆ ಅನ್ನಿಸುತ್ತಿತ್ತು. ಇವರೆಲ್ಲರೂ ಕ್ಯಾನ್ಸರ್ ಬಗ್ಗೆ ಕೇಳಿದ್ದರೇ ಹೊರತು, ಹತ್ತಿರದಿಂದ ನೋಡಿದವರಲ್ಲ. ಇವರೆಲ್ಲರಿಗೂ ನಾನೊಬ್ಬಳು ರೆಡಿಮೇಡ್ ಮಾದರಿಯಾಗಿದ್ದೆ. ಬಂದವರೆಲ್ಲರಿಗೂ ನನ್ನ ಬೋಳುತಲೆಯನ್ನು, ಇಲ್ಲದ ಹುಬ್ಬು-ರೆಪ್ಪೆಗಳನ್ನು ತೋರಿಸುತ್ತಾ, ಜೀವನಪ್ರೀತಿಯನ್ನೇ ಉಸಿರಾಡುತ್ತಿರುವೆಯೆಂಬಂತೆ ತನ್ನನ್ನು ತಾನು ಪ್ರಸ್ತುತಪಡಿಸುತ್ತಿದ್ದೆ. ಏನೇ ಆದರೂ ನನ್ನ ಮುಖದಲ್ಲಿ ನಗುವು ಇನ್ನೂ ಜೀವಂತವಾಗಿತ್ತು ಎಂಬುದಂತೂ ಸತ್ಯ.

ಇವೆಲ್ಲಾ ಜಂಜಾಟಗಳಿಂದ ಈಗ ಹೊರಬಂದಿರುವೆ. ಕೀಮೋ, ರೇಡಿಯೇಷನ್ ಗಳ ಪ್ರೋಟೋಕಾಲ್ ಗಳು ಮತ್ತು ನಂತರದ ಒಂದು ತಿಂಗಳ ವಿಶ್ರಾಂತಿಯ ನಂತರ ಆಫೀಸಿಗೆ ಮರಳಿದೆ. ಕೆಲಸಗಳು ನನಗಾಗಿ ಸದಾ ಕಾದಿರುತ್ತವೆಯೋ, ಅಥವಾ ಚಟುವಟಿಕೆಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆಂಬ ನನ್ನ ಹುಟ್ಟುಗುಣವೋ ಗೊತ್ತಿಲ್ಲ. ಆಫೀಸಿನ ಪ್ರವಾಸಗಳ ಜೊತೆಗೇ ಸಾಹಿತ್ಯ ಮತ್ತು ರಂಗಭೂಮಿಯ ಎಡೆಬಿಡದ ಚಟುವಟಿಕೆಗಳೂ ಎಂದಿನಂತೆ ಶುರುವಾದವು. 2014 ರ ಸಪ್ಟೆಂಬರಿನಲ್ಲಿ ಎಸ್.ಆರ್.ಎಮ್ ನ ಸಾರಥ್ಯದ ಕಾರ್ಯಕ್ರಮವೊಂದಕ್ಕಾಗಿ ಮುಖ್ಯ ಅತಿಥಿಯಾಗಿ ಚೆನ್ನೈಗೆ ಧಾವಿಸಿದೆ. 2014 ರ ಡಿಸೆಂಬರಿನಲ್ಲಿ “ಭಿಕಾರಿನ್” (ಭಿಕ್ಷುಕಿ) ನಾಟಕದ ಪ್ರಥಮ ಪ್ರದರ್ಶನವು ಆಜಂಗಢದಲ್ಲಿ ಯಶಸ್ವಿಯಾಗಿ ನೆರವೇರಿತು. ಆಫೀಸಿನ ಮಹತ್ತರ ಜವಾಬ್ದಾರಿಗಳ ಜೊತೆಗೇ ರಾಯಪುರದ ಸಾಹಿತ್ಯ ಮಹೋತ್ಸವವನ್ನು ಮುನ್ನಡೆಸುವ ಜವಾಬ್ದಾರಿಯೂ ಕೂಡ.

ಅಂತೂ ನನ್ನ ಜೀವನದ ಎರಡನೇ ಇನ್ನಿಂಗ್ಸ್ ಭರ್ಜರಿಯಾಗಿಯೇ ಶುರುವಾಗಿದೆ. ಔಷಧಿಗಳ ದಿನಚರಿಯು ಮುಂದುವರಿದಿದೆ. ಆಹಾರ ಮತ್ತು ವಿಶ್ರಾಂತಿಯ ಬಗ್ಗೆಯೂ ಹೆಚ್ಚಿನ ಗಮನವನ್ನು ಕೊಡಬೇಕಾಗಿ ಸೂಚನೆಗಳು ಬಂದಿವೆ. ನಿಶ್ಶಕ್ತಿಯು ಇನ್ನೂ ಇದ್ದರೂ ಚಟುವಟಿಕೆಗಳಿಂದ ಕೂಡಿದ ದೇಹ, ಮನಸ್ಸು ಎಲ್ಲವನ್ನೂ ಮರೆಸಿಬಿಡುತ್ತದೆ. ಅಜಯ್, ಕೋಶಿ ಮತ್ತು ತೋಶಿ ನನಗೆ ಯಾವಾಗಲೂ ಏನಾದರೊಂದು ತಿಳಿಹೇಳುತ್ತಿರುತ್ತಾರೆ. ಅಂತೆಯೇ ನಾನು ಅವರಿಗೂ, ತನಗೂ ಏನಾದರೊಂದು ತಿಳಿಹೇಳುತ್ತಿರುತ್ತೇನೆ.

ತನ್ನೊಂದಿಗೇ ಸೆಣಸಾಡಲು, ತನ್ನನ್ನು ತಾನು ಅಣಿಗೊಳಿಸಲು ಸ್ವಲ್ಪ ಕಾಲಾವಧಿಯು ಬೇಕಾಗುತ್ತದೆಂಬುದಂತೂ ಸತ್ಯ. ಆದರೆ ಮಾನಸಿಕ ಸ್ಥೈರ್ಯ ಮತ್ತು ಕುಟುಂಬದ ಸದಸ್ಯರ ಪ್ರೀತಿ, ಸಹಕಾರಗಳು ಕ್ಯಾನ್ಸರ್ ಅಥವಾ ಅದಕ್ಕಿಂತ ಭಯಾನಕ ಮಹಾರೋಗಗಳಿಗೂ ಸಡ್ಡುಹೊಡೆಯಬಲ್ಲ ಸಂಜೀವಿನಿಗಳು. ಈ ಅನುಭವಗಳು ಹಲವು ದಾರಿಗಳನ್ನು ನಮಗಾಗಿ ತೆರೆದಿಡುವುದಂತೂ ಸತ್ಯ. ಅವುಗಳೆಂದರೆ ಆತ್ಮಮಂಥನ, ಆತ್ಮ ಚಿಂತನೆ, ವಿಶ್ರಾಂತಿಯ ಅಗತ್ಯತೆ, ಆಹಾರದಲ್ಲಿನ ಶಿಸ್ತು, ಮತ್ತು ಎಲ್ಲರ ಅನುಕಂಪವನ್ನು ಎಂಜಾಯ್ ಮಾಡಬಲ್ಲ ಅದೃಷ್ಟ (ತಮಾಷೆಗಂದೆ ಅಷ್ಟೇ). ಕ್ಯಾನ್ಸರ್ ನಿಮಗಾಗಿದ್ದರೆ ನನ್ನ ದೇಹಸೌಂದರ್ಯವು ಕಳೆಗುಂದುತ್ತಿದೆ ಎಂಬ ಆತಂಕದಲ್ಲಿ ಇರಬೇಡಿ. ಜೀವನವನ್ನು ಜೀವಿಸಲು ಮತ್ತೊಂದು ಅವಕಾಶವು ನಿಮಗಾಗಿ ಒಲಿದುಬಂದಿದೆ ಎಂಬುದನ್ನು ನೆನಪಿನಲ್ಲಿಡಿ. ಈ ಅವಕಾಶವು ನೂರಕ್ಕೆ ನೂರು ಪ್ರತಿಶತವೂ ನಿಮ್ಮದೇ. ಈ ಜೀವನವನ್ನು ಕುಂದದ ಜೀವನಪ್ರೀತಿ ಮತ್ತು ಭರಪೂರ ಆತ್ಮವಿಶ್ವಾಸದಿಂದ ಜೀವಿಸಿ, ನಿನ್ನೊಡನೆ ಕಾದಾಡಲು ನನಗೇನು ಭಯವಿಲ್ಲ ಎನ್ನುತ್ತಾ ಕ್ಯಾನ್ಸರಿನಂತಹ ಕ್ಯಾನ್ಸರಿಗೇ ಸವಾಲೆಸೆಯಿರಿ. ಬನ್ನಿ, ನನ್ನೊಂದಿಗೆ ಕೈಜೋಡಿಸಿ, ಲೆಟ್ಸ್ ಸೆಲಬ್ರೇಟ್ ಕ್ಯಾನ್ಸರ್.

ಅವೇನು ದೊಡ್ಡ ಸಂಗತಿಗಳಲ್ಲ,
ಎದೆಯು ಉಬ್ಬಿದೆಯೋ, ಸಪಾಟಾಗಿದೆಯೋ,
ಮುಖದಲ್ಲಿ ಸೌಂದರ್ಯವಿದೆಯೋ, ಇಲ್ಲವೋ,
ತಲೆಯಲ್ಲಿ ಕೂದಲಿದೆಯೋ, ಬಕ್ಕತಲೆಯೋ,
ಇವೆಲ್ಲಕ್ಕಿಂತಲೂ ದೊಡ್ಡದೀ ಜೀವನ…
ಸ್ಫೂರ್ತಿ, ತಾಜಾತನವಿರಲಿ,
ಕ್ಷಣಗಳು ಯೌವನಮಯವಾಗಿರಲಿ
ಜೀವನವನ್ನೇ ಆಚರಿಸೋಣ ಬನ್ನಿ,
ಇನ್ನಿಲ್ಲದಂತೆ ಜೀವಿಸೋಣ ಬನ್ನಿ…

*************

 

‍ಲೇಖಕರು Admin

November 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕುಟುಂಬ ಯೋಜನೆಯೆಂಬ ಅಣಕ…

ಕುಟುಂಬ ಯೋಜನೆಯೆಂಬ ಅಣಕ…

ಸಮತಾ.ಆರ್ ಈ ಕರೋನ ಕಾಲದ ಕಡ್ಡಾಯ ರಜೆಯಲ್ಲಿ ಹೀಗೆ ಒಂದು ದಿನ ಕಾಲ ಸಾಗದೆ ಮೊಬೈಲ್ ಹಿಡಿದು ಫೇಸ್ಬುಕ್ ದುರ್ಬೀನಿನಿಂದ ಅವರಿವರ ಜೀವನದೊಳಗೆ...

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಫೆಬ್ರವರಿ ತಿಂಗಳ ಕೊನೆಯಲ್ಲಿ ಹಾವೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ...

ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..

ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..

ಪ್ರೀತಿ ನಾಗರಾಜ ಮೊನ್ನೆ ಧಾರವಾಡ ಸಮೀಪ ನಡೆದ ಅಪಘಾತದಲ್ಲಿ ದಾವಣಗೆರೆಯ ನನ್ನ ಹಲವು ಸ್ನೇಹಿತೆಯರು/ಸಂಬಂಧಿಗಳು, ಮಕ್ಕಳು ಅವರ ಜೊತೆ ಡ್ರೈವರ್...

೧ ಪ್ರತಿಕ್ರಿಯೆ

  1. mm shaik

    sir good morning..uttama haagu jeevana pritiyinda koodida lekhana….jeevana attyamullya adnnu preetisuvadrondige gourvisoNa..thanks

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: