ಜೋಗಿ ಹೊಸ ಕಾದಂಬರಿ
ಭಾಗ-೫
ವಾಗ್ಲೆ ಅತ್ಯುತ್ಸಾಹದಿಂದ ನಾನೇ ಬರ್ತೀನಿ ಬಿಡ್ರೀ’ ಅಂತ ಹೇಳಿದ್ದರೂ, ಅವರು ಖಂಡಿತಾ ಬರುವುದಿಲ್ಲ ಎಂದು ನನಗೆ ಗೊತ್ತಿತ್ತು. ಸಾಮಾನ್ಯವಾಗಿ ಫಾರೆಸ್ಟ್ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುವವರಿಗೆ ಕಾಡಿನ ಸಹವಾಸ ಸಾಕಾಗಿ ಹೋಗಿರುತ್ತದೆ. ನಗರಗಳಲ್ಲಿದ್ದು ಸಕಲ ಸೌಲಭ್ಯಗಳನ್ನೂ ಅನುಭವಿಸುತ್ತಾ ಆರುತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಕಾಡು ಸುತ್ತುವುದಕ್ಕೆ ಹೋಗುವವರ ಪಾಲಿಗೆ ಕಾಡೆಂದರೆ ಆಪ್ಯಾಯಮಾನ. ಆದರೆ ಕಾಡಿನ ನಡುವೆಯೇ ವಾಸ ಮಾಡುವವರಿಗೆ ಅದು ಸಮಸ್ಯೆಗಳ ಸಂತೆ. ಅದರಲ್ಲೂ ಕಾಡನ್ನು ರಕ್ಷಿಸುವ ಹೊಣೆ ಹೊತ್ತವರಿಗಂತೂ ನೂರೆಂಟು ತಾಪತ್ರಯ. ಯಾವ ಹೊತ್ತಿನಲ್ಲಿ ಎಲ್ಲಿ ಯಾರು ಮರ ಕಡಿಯುತ್ತಾರೋ, ಎಲ್ಲಿ ಬೇಟೆಯಾಡುತ್ತಾರೋ, ಯಾವಾಗ ದಂತಚೋರನೊಬ್ಬ ಕಾಣಿಸಿಕೊಂಡು ನಿದ್ದೆಗೆಡಿಸುತ್ತಾನೋ ಗೊತ್ತಿರುವುದಿಲ್ಲ. ಈ ಮಧ್ಯೆ ಕಾಡಿನ ನಡುವೆ ಬೇಸಾಯ ಮಾಡಿಕೊಂಡಿರುವವರು, ಕಾಡಿನೊಳಗೆ ಹಾಡಿ ಮಾಡಿಕೊಂಡು ಜೀವಿಸುವ ಮೂಲನಿವಾಸಿಗಳು, ಅವರನ್ನು ಉದ್ದಾರ ಮಾಡುವುದಕ್ಕೆ ಬರುವ ಎನ್ಜಿಓಗಳು, ಕಾಡು ಹಾಳಾಗುತ್ತಿದೆ ಎಂದು ರಾದ್ಧಾಂತ ಮಾಡುವ ಪರಿಸರವಾದಿಗಳು- ಇವರೆಲ್ಲ ಸೇರಿ ದಿನಾ ಒಂದಲ್ಲ ಒಂದು ಸಮಸ್ಯೆ ಸೃಷ್ಟಿಸುತ್ತಲೇ ಇರುತ್ತಾರೆ.
ಇವೆಲ್ಲಕ್ಕಿಂತ ದೊಡ್ಡ ಕಾಟವೆಂದರೆ ವಿಐಪಿಗಳದ್ದು. ಅವರಿಗೆ ಫಾರೆಸ್ಟ್ ಗೆಸ್ಟ್ಹೌಸ್ ಬುಕ್ ಮಾಡಿ, ಅಲ್ಲಿಗೆ ಬರುವ ಮಂತ್ರಿ ಮಹೋದಯರ ಐಎಸ್ ಅಧಿಕಾರಿಗಳ ಫ್ಯಾಮಿಲಿಗೆ ಕಾಡು ತೋರಿಸುತ್ತಾ ಅವರನ್ನು ರಂಜಿಸುವುದರಲ್ಲೇ ಕಾಲ ಕಳೆದುಹೋಗುತ್ತದೆ. ಕೆಲವರಂತೂ ಸಫಾರಿಗೆ ಕರೆದೊಯ್ದಾಗ ಒಂದೂ ಆನೆ ಸಿಗಲಿಲ್ಲ, ಹುಲಿ ಕಾಣಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಳ್ಳುತ್ತಾರೆ. ಏನು ಮಾಡ್ತೀರ್ರೀ ಇಲ್ಲಿದ್ದುಕೊಂಡು ಎಂದು ಹೀಯಾಳಿಸಿ ಹೋಗುತ್ತಾರೆ.
ವಾಗ್ಲೆಗೂ ಅಂಥ ಸಮಸ್ಯೆಗಳಿದ್ದವು. ಅದು ಅಭಯಾರಣ್ಯ ಆಗದೇ ಇದ್ದದ್ದರಿಂದ ಅವರು ಸಫಾರಿಗೆ ಕರೆದೊಯ್ಯುವ ಕಷ್ಟದಿಂದ ಪಾರಾಗಿದ್ದರು. ಆದರೆ, ರಕ್ಷಿತಾರಣ್ಯದಲ್ಲಿ ಚಾರಣ ಮಾಡುವುದಕ್ಕೆಂದೇ ಯಾರ್ಯಾರೋ ಬರುತ್ತಿದ್ದರು. ಬೆಂಗಳೂರಿನಿಂದ ಚೀಫ್ ಕನ್ಸರ್ವೇಟರ್ರೋ ಚೀಫ್ ಸೆಕ್ರೆಟರಿಯೋ ಫೋನ್ ಮಾಡಿ ಇಂಥವರು ಬರುತ್ತಿದ್ದಾರೆ, ಚೆನ್ನಾಗಿ ನೋಡ್ಕೊಳ್ರಪ್ಪ ಎಂದು ಸೂಚನೆ ನೀಡುತ್ತಿದ್ದರು. ಬಂದವರಿಗೆ ಸ್ನಾನಕ್ಕೆ ಬಿಸಿನೀರು ಸಿಗದಿದ್ದರೆ, ಇಡ್ಲಿ ತಣ್ಣಗಿದ್ದರೆ, ಮಂಚದಲ್ಲಿ ತಿಗಣೆ ಇದ್ದರೆ ನೇರವಾಗಿ ಆರ್ಎಫ್ಓಗೇ ಫೋನ್ ಮಾಡಿ ದಬಾಯಿಸುತ್ತಿದ್ದರು.
ಇವತ್ತು ಬರೋಕ್ಕಾಗಲ್ಲ ಕಣ್ರೀ, ನಂಜೇಗೌಡರ ಕಡೆಯವರು ಬರ್ತಿದ್ದಾರಂತೆ. ಅವರ ಜೊತೆ ಸುತ್ತಾಡಬೇಕು. ನೀವು ಹೇಗಾದರೂ ಮಾಡಿ ಇವತ್ತೊಂದು ದಿನ ಸಾಂತು ಜೊತೆಗೇ ಹೋಗಿಬಿಡಿ. ನಾಡಿದ್ದು ನಾನು ಬರ್ತೀನಿ’ ಬೆಳಗ್ಗೆಯೇ ವಾಗ್ಲೆ ಫೋನ್ ಮಾಡಿ ಹೇಳಿದ್ದನ್ನು ಶಿವನಿಗೆ ಹೇಳಿದೆ. ಅವನು ಸಾಂತು ಸಹವಾಸ ಬೇಡ, ಜೋಸೆಫ್ನ ಕರೆಸ್ತೀನಿ’ ಅಂದು ಅವನಿಗೆ ಫೋನ್ ಮಾಡಿದ. ಜೋಸೆಫ್ ಫೋನ್ ವ್ಯಾಪ್ತಿ ಪ್ರದೇಶದ ಹೊರಗಿತ್ತು.
ಶಿವ ಹಟ ಬಿಡದ ತ್ರಿವಿಕ್ರಮನಂತೆ ನೆಲ್ಯಾಡಿಗೆ ಫೋನ್ ಮಾಡಿ ಗೆಳೆಯ ಹರಿಪ್ರಸಾದನಿಗೆ ಹೇಳಿ, ಅವನು ಮೋಹನನ ಜೀಪು ಗೊತ್ತು ಮಾಡಿ, ಅದನ್ನು ಜೋಸೆಪ್ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ. ನಾವು ಜೋಸೆಪ್ಗೋಸ್ಕರ ಕಾಯುತ್ತಾ ಕೂತೆವು. ಈ ಮಧ್ಯೆ ಮಮ್ಮದೆ ಹೊಟೆಲಿಗೆ ಹೋಗಿ ತಿಂಡಿ ತಿಂದು ಬರುವುದೆಂದು ನಿರ್ಧಾರವಾಗಿತ್ತು. ಅವನಿಗೆ ಹಿಂದಿನ ರಾತ್ರಿಯೇ ಏಡಿ ಗಸಿ ಮಾಡಿಡುವುದಕ್ಕೆ ಆದೇಶ ನೀಡಿದ್ದೆವಲ್ಲ?
ಮಮ್ಮದೆ ಹೊಟೆಲು ಮುಚ್ಚಿತ್ತು. ಗಡಿಚಾಮುಂಡಿಗೆ ಹಂದಿ ಬಲಿ ಕೊಡುವುದನ್ನು ನೋಡಲಾಗದೆ ಅವನು ಹೊಟೆಲ್ ಮುಚ್ಚಿಕೊಂಡು ಹೋಗಿದ್ದ. ಕಣ್ಮುಂದೆಯೇ ಬಲಿ ಕೊಡೋದನ್ನು ನೋಡೋದಕ್ಕೆ ಯಾರ ಕೈಲಾಗುತ್ತೆ ಮತ್ತೆ ಎಂದು ಶಿವ ಹೇಳಿದಾಗ ಮಮ್ಮದೆ ಅಂಗಡಿ ಮುಂದೆ ನಿಂತಿದ್ದವನು ಗಹಗಹಿಸಿ ನಕ್ಕು, ಬ್ಯಾರಿಗಳಿಗೆ ಹಂದಿ ಕಂಡ್ರ ಆಗೋಲ್ಲ. ಅದಕ್ಕೆ ಅವನು ಮನೆಗೆ ಹೋಗಿದ್ದು. ಕುರಿ ಬಲಿ ಕೊಟ್ರೆ ಅವನ್ಯಾಕೆ ಹೋಗ್ತಿದ್ದ’ ಎಂದು ಶಿವನ ಅಜ್ಞಾನಕ್ಕೆ ವಿಷಾದ ವ್ಯಕ್ತಪಡಿಸಿದ.
ನಾವು ಅಲ್ಲಿಂದ ವಾಪಸ್ಸು ಹೋಗುತ್ತಿರಬೇಕಾದರೆ, ನಮ್ಮ ಹಿಂದಿನಿಂದ ಶರವೇಗದಲ್ಲಿ ಮಹೀಂದ್ರ ಜೀಪೊಂದು ಧಾವಿಸಿ ಬರುತ್ತಿತ್ತು. ಅದನ್ನು ನೋಡಿ ಶಿವ ಇನ್ನೂ ವೇಗ ಹೆಚ್ಚಿಸಿದ. ಹೋಗ್ಲಿ ಬಿಡೋ ಅಂದೆ. ಹಳೇ ಜೀಪಿಗೇ ಅಷ್ಟು ಪೊಗರಿರಬೇಕಾದ್ರೆ, ಆರು ಲಕ್ಷದ ಕಾರಿಗೆ ಎಷ್ಟಿರಬೇಡ. ಅವನು ಹೇಗೆ ಓವರ್ಟೇಕ್ ಮಾಡ್ತಾನೋ ನೋಡೋಣ ಎಂದು ಶಿವನಿಗೆ ಕೆಟ್ಟ ಹುರುಪು ಬಂತು. ಆ ಜೀಪಿನವನು ಬೇರೆ ನಿರಂತರವಾಗಿ ಹಾರ್ನ್ ಹೊಡೆಯುತ್ತಾ ಶಿವನ ತಾಳ್ಮೆಯನ್ನು ಕದಡುತ್ತಿದ್ದ.
ನಾವು ಗುಂಡ್ಯಕ್ಕೆ ತಲುಪುತ್ತಿದ್ದಂತೆ ಆ ಜೀಪೂ ನಮ್ಮ ಹಿಂದೆ ಬಂತು ನಿಂತಿತು. ಇನ್ನೇನು ಜಗಳ ಆಗುತ್ತದೆ ಅಂದುಕೊಂಡು ನಾನು ಶಿವನ ಮುಖ ನೋಡಿದೆ. ಎಸ್ಟೇಟ್ ಮಾಲೀಕರು ಹಾಗೆ ಜಗಳ ಆಡುವುದನ್ನು ನೋಡಿದ್ದೆ. ಒಮ್ಮೆ ಸೋಮವಾರ ಪೇಟೆಗೆ ಹೋದಾಗ ಅಂಥ ಅನುಭವ ಆಗಿತ್ತು. ಒಂದು ಹಳೆಯ ಕಾರು ಏನು ಮಾಡಿದರೂ ಸೈಡ್ ಕೊಡದೇ ಸತಾಯಿಸುತ್ತಿತ್ತು. ನಮ್ಮ ಡ್ರೈವರ್ ಸಿಟ್ಟು ಬಂದು ಹೇಗೋ ಮಾಡಿ ಅದನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿದ್ದ. ಐದಾರು ಕಿಲೋಮೀಟರ್ ಸಾಗುತ್ತಿದ್ದಂತೆ ದಾರಿಯಲ್ಲಿ ಐದಾರು ಮಂದಿಯ ಗುಂಪು ಕಾರಿಗೆ ಅಡ್ಡಹಾಕಿ ಗಲಾಟೆ ಶುರುಮಾಡಿತು. ಏನು ಬಾರೀ ಅರ್ಜೆಂಟಾ.. ನಿಧಾನಕ್ಕೆ ಹೋಗೋದಕ್ಕೆ ಆಗೋಲ್ವಾ. ನಿಮ್ಮಪ್ಪನ ರಸ್ತೇನಾ’ ಎಂದು ಜಗಳಕ್ಕೇ ಇಳಿದಿತ್ತು. ಬೆಂಗಳೂರು ರಿಜಿಸ್ಟ್ರೇಷನ್ ಗಾಡಿಗಳ ಮೇಲೆ ಅವರಿಗೆ ಹಳೆಯ ಸಿಟ್ಟಿದೆ ಎಂದು ಆವತ್ತೇ ನನಗೆ ಗೊತ್ತಾಗಿದ್ದು.
ಏನು ಮಾರಾಯ್ರೇ.. ಹಾಗಾ ಕಾರು ಓಡಿಸೋದು. ಹಾರ್ನ್ ಮಾಡಿ ಮಾಡಿ ಸಾಕಾಯ್ತು.’ ಎನ್ನುತ್ತಾ ಜೀಪಿನಿಂದ ಜೋಸೆಫ್ ಇಳಿದ. ಅವನು ನಮ್ಮನ್ನು ನೋಡಿ ಅಲ್ಲಿಂದಲೇ ವಾಪಸ್ ಕರೆದೊಯ್ಯಲು ಬಂದಿದ್ದ. ನಾವು ಅಲ್ಲೇ ಹೋಗಬೇಕಾಗಿತ್ತು. ಸುಮ್ನೆ ಎಂಟು ಕಿಲೋಮೀಟರ್ ಅಪ್ಪೆಂಡೌನ್ ಮಾಡಿದ ಹಾಗಾಯ್ತು ಎಂದು ಜೋಸೆಫ್ ಬೇಜಾರು ಮಾಡಿಕೊಂಡ.
ಜೋಸೆಫ್ ಕೇರಳದಿಂದ ಬಂದು ಅಲ್ಲಿ ಸೆಟ್ಲಾಗಿ ಎಂಟು ವರುಷವಾಗಿತ್ತು. ಕನ್ನಡ ಮಾತಾಡುತ್ತಿದ್ದ. ಆದರೆ ಅದು ಮಲಯಾಳಂನಂತೆಯೇ ಕೇಳಿಸುತ್ತಿತ್ತು. ಆರೆಕರೆ ತೋಟ ಮಾಡಿಕೊಂಡಿದ್ದೇನೆ. ಟಾಪಿಯೋಕಾ ಬೆಳೀತೇನೆ. ಕೋಕನಟ್ ಪ್ಲಾಂಟೇಷನ್ ಇದೆ. ಜೊತೆಗೆ ಮಲಯಾಳಂ ಮನೋರಮಾ ಏಜೆಂಟು ಮತ್ತು ರಿಪೋರ್ಟರ್ ಅಂತ ಜೋಸೆಫ್ ತನ್ನ ಪ್ರವರ ಹೇಳಿಕೊಂಡ.
ಆ ಕಾಡಿನ ಮಧ್ಯೆ ಮಲಯಾಳಂ ಮನೋರಮಾ ಯಾರು ಓದುತ್ತಾರೆ ಅಂತ ನನಗೆ ಆಶ್ಚರ್ಯವಾಯಿತು. ಶಿವ ಕೇಳಿಯೇ ಬಿಟ್ಟ. ಎಂಟುನೂರು ಪೇಪರ್ ಮಾರ್ತೀನಿ ಶಿವಾ. ಇಲ್ಲೊಂದು ಕೇರಳ ಕಾಲೋನಿಯೇ ಇದೆ. ತುಂಬಾ ಮಂದಿ ಬಂದು ಇಲ್ಲೇ ಸೆಟ್ಲ್ ಆಗಿದ್ದಾರೆ’ ಅಂದ ಜೋಸೆಫ್. ಕೇರಳದಲ್ಲಿ ಆ ಕಾಡಿಗೆ ಬಂದು ಯಾಕೆ ಸೆಟ್ಲಾಗಿದ್ದಾರೆ. ಅಲ್ಲಿ ಅಂಥ ಆಕರ್ಷಣೆ ಏನಿದೆ ಎಂದು ನನಗಂತೂ ಅರ್ಥವಾಗಲಿಲ್ಲ. ಅದು ಗೊತ್ತಾದದ್ದು ಪರಿಸರವಾದಿ ಸುದೇಶನನ್ನು ಭೇಟಿಯಾದ ನಂತರ.
ಉಪ್ಪಿನಂಗಡಿಯ ಚಾಕೋ ಎಂಬ ರಾಜಕಾರಣಿಯ ಕಿತಾಪತಿ ಅದು. ಅವನು ಹತ್ತಿಪ್ಪತ್ತು ವರುಷಗಳಿಂದ ಕೇರಳದಿಂದ ಜನ ಕರೆಸಿ ಅವರಿಗೆ ಒಂದೊ ಎರಡೋ ಎಕರೆಯಲ್ಲಿ ಮರಗೆಣಸು ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟ. ಹೀಗೆ ಬಂದವರ ಸಂಖ್ಯೆ ಈಗ ಹತ್ತೋ ಹನ್ನೆರಡೋ ಸಾವಿರಕ್ಕೇರಿದೆ. ಅವರೆಲ್ಲ ಶಿರಾಡಿಯ ಬುಡದಲ್ಲಿ ಮನೆ ಕಟ್ಟಿಕೊಂಡು ಟಾಪಿಯೋಕಾ ಬೆಳೆಯುತ್ತಿದ್ದಾರೆ.
ಚಾಕೋನ ವೋಟ್ ಬ್ಯಾಂಕ್ ಅದು. ಅವರನ್ನು ಅಲ್ಲಿಂದ ಎತ್ತಂಗಡಿ ಮಾಡೋದಕ್ಕೆ ನಾವೂ ಸಾಕಷ್ಟು ಪ್ರಯತ್ನ ಮಾಡಿದೆವು, ಆದರೆ ಏನೂ ಆಗಲಿಲ್ಲ. ರಕ್ಷಿತಾರಣ್ಯದ ಒಳಗೂ ಅವರು ಕಾಲಿಟ್ಟಿದ್ದಾರೆ. ಕಾಡಿನೊಳಗೆ ಶತಮಾನಗಳಿಂದ ವಾಸ ಮಾಡುವ ಮೂಲನಿವಾಸಿಗಳನ್ನು ಓಡಿಸಬೇಕು ಅಂತಾರೆ. ಈ ಅಕ್ರಮವಾಗಿ ಮನೆ ಕಟ್ಟಿಕೊಂಡವರನ್ನು ಸುಮ್ಮನೆ ಬಿಟ್ಟಿದ್ದಾರೆ. ಎಲ್ಲಾ ಪಾಲಿಟಿಕ್ಸ್ ಎಂದು ಸುದೇಶ ಬೇಸರದಿಂದ ಹೇಳಿದ್ದ. ಒಂದು ಸಾರಿ ಒಳಗೆ ಹೋಗಿಬನ್ನಿ, ಅವರೆಲ್ಲ ಎಷ್ಟು ಶ್ರೀಮಂತರಾಗಿದ್ದಾರೆ ಅಂತ ಗೊತ್ತಾಗುತ್ತೆ. ಸಿಪಿಎಂ ಪಕ್ಷದ ಚಾಕೋ ಗೆದ್ದು ಬರೋದು ಅವರ ವೋಟಿನಿಂದಲೇ. ಅವನ ಜೊತೆ ಬೇರೆ ಪಕ್ಷದವರು ಮೈತ್ರಿ ಮಾಡಿಕೊಂಡಿದ್ದಾರೆ. ಈಗವನು ಇಂಡಿಪೆಂಡೆಂಟ್ ಕ್ಯಾಂಡಿಡೇಟು. ಈಗ್ಲೂ ವರ್ಷಕ್ಕೆ ನೂರೋ ಇನ್ನೂರೋ ಮಂದಿ ಬರ್ತಾನೇ ಇರ್ತಾರೆ ಎಂದು ಸುದೇಶ್ ರಾಜಕಾರಣವೇ ಹೊಲಸೆದ್ದು ಹೋಗಿದೆ ಎಂಬ ಧಾಟಿಯಲ್ಲಿ ಗೊಣಗಿದ್ದ.
ಸರಿ ಜೋಸೆಪ್ ಹೊರಡೋಣ. ಎರಡು ದಿನ ಸುಮ್ಮನೆ ಕಳೆದಿದ್ದೇವೆ. ಇರಿ, ವಾಗ್ಲೆಯವರಿಗೆ ಫೋನ್ ಮಾಡ್ತೀನಿ. ಅವರಿಗೊಂದು ಮಾತು ಹೇಳೋಣ’ ಅಂದೆ. ಜೋಸೆಫ್ ಮುಖದಲ್ಲಿ ಅಸಹನೆ ತಾಂಡವವಾಡಿತು. ಅವರೂ ಬರ್ತಾರಾ?’ ಕೇಳಿದ.
ಬಹುಶಃ ಬರಲಿಕ್ಕಿಲ್ಲ. ಬರ್ತೀನಿ ಅಂದಿದ್ರು. ಆಮೇಲೆ ಬರೋಲ್ಲ ಅಂತ ಫೋನ್ ಮಾಡಿದರು. ನಿಮ್ಮ ಜೊತೆ ಹೋಗ್ತೀವಿ ಅಂತ ಹೇಳ್ತೀನಿ ಅಂದೆ.
ಆ ಫಟಿಂಗ ಬಂದ್ರೆ ನಾನು ಬರೋಲ್ಲ. ಅವನಿಗೆ ನನ್ನ ಹೆಸರೂ ಹೇಳಬೇಡಿ. ಶನಿ ಅವನು. ಕರಪ್ಟ್ ಫೆಲೋ. ಅವನೇ ಕಾಡು ಹಾಳು ಮಾಡ್ತಿರೋದು ಎಂದು ಜೋಸೆಫ್ ಇದ್ದಕ್ಕಿದ್ದ ಹಾಗೆ ದೊಡ್ಡ ದನಿಯಲ್ಲಿ ಬೈಯತೊಡಗಿದ. ಈ ಮಲಯಾಳಿ ಪತ್ರಕರ್ತನಿಗೆ ವಾಗ್ಲೆ ಏನು ತೊಂದರೆ ಮಾಡಿರಬಹುದು ಎಂದು ನಾನು ಬೆರಗಾದೆ.
‘ಜೋಗಿ ಸರ್ಕಲ್’ ಫೋಟೋ ಆಲ್ಬಂ
'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...
Asaktidaayakavaagi moodi bartide…:) mundina kantugalanna nirikshisuvante maadide 🙂