ಕಾಡುವ ʼಭಾವಗಂಧಿʼ

ಬಸವರಾಜ ಕಾಸೆ

ತಮ್ಮ ಅತ್ಯುತ್ತಮ ಬರಹಗಳ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿ ಸಾಹಿತ್ಯದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಹಿರಿಯ ಕವಯತ್ರಿ ಪ್ರಭಾವತಿ ದೇಸಾಯಿಯವರ “ಭಾವಗಂಧಿ” ಗಜಲ್ ಸಂಕಲನ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು. ಆ ಕ್ಷಣದಿಂದ ಕೊರೋನಾನಂತಹ ಈ ಸಂಕಷ್ಟದ ಸಮಯದಲ್ಲೂ ಸಹ ಅದನ್ನು ಓದಬೇಕು ಎನ್ನುವ ತುಡಿತ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇತ್ತು.

ಪ್ರತಿ ಕ್ಷಣವನ್ನು ಮನಸಾರೆ ಆಸ್ವಾದಿಸುತ್ತಾ ಉಲ್ಲಾಸದಿಂದ ಇರಬಯಸುವ ಪ್ರಭಾವತಿ ಮೇಡಮ್ ಅವರು ಚೈತನ್ಯದ ಚಿಲುಮೆ, ಅವರ ಆ ಗುಣದ ಕಾರಣ ಪುಸ್ತಕದಲ್ಲಿ ಅಷ್ಟೇ ಅತ್ಯುತ್ಸಾಹ ತುಂಬಿರಬಲ್ಲದು ಎನ್ನುವ ನಂಬಿಕೆ ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ.

ಅವರ ಬರಹಗಳು ಏಕಾಂತದಲ್ಲಿ ಪ್ರೇಯಸಿಯೇ ಬಂದು ಪಿಸುಗುಟ್ಟಿದಂತೆ, ಯಾವುದೋ ಖುಷಿಗೆ ಹಾರಿ ಗಾಳಿಯಲ್ಲಿ ಗುದ್ದುವಂತೆ… ಒಟ್ಟಿನಲ್ಲಿ ಏನೋ ಒಂಥರಾ ಚೆಂದ ಚೆಂದ, ಹೇಳಲಾಗದ ನವಿರು ನವಿರಾದ ಭಾವ.. ಅಂತಹ ಐವತ್ತು ವಿಭಿನ್ನ ಸುಮಗಳ ಸುವಾಸನೆಯಿಂದ ತನ್ನತ್ತ ಸೆಳೆಯುವ ನೂರಾರು ಆಕರ್ಷಕ ಭಾವಗಳ ಗುಚ್ಛವೇ ಅವರ ಈ ನೂತನ ಗಜಲ್ ಸಂಕಲನ “ಭಾವಗಂಧಿ”.

ಮುಂಜಾನೆಯ ಮಂಜಿಗೆ ಎಳೆ ಬಿಸಿಲಿನ ಸಡಗರ

ಅಂದು ಬೆಳ್ಳಂಬೆಳಗ್ಗೆ ಎದ್ದೊಡನೆ ಭಾವಗಂಧಿ ಪುಸ್ತಕ ನನ್ನ ಕೈ ಸೇರಿತು, ಆ ಕೂಡಲೇ ಹಿತವಾದ ಎಳೆ ಬಿಸಿಲಿಗೆ ಮೈಯೊಡ್ಡುವ ಸಡಗರ. ಕೆಲವೇ ನಿಮಿಷಗಳ ಹಿಂದೆ ಒಂದಿಷ್ಟು ಮಂಜು ಸುರಿದ ಅನುಭವ… ಎರಡು ಬೇರೆ ಬೇರೆ, ಆದರೂ ಹೃದಯಕ್ಕೆ ಅವೆರಡರ ಸ್ಪರ್ಶ ಅತ್ಯಂತ ಆಪ್ತವೆನಿಸುತ್ತೆ, ಹಾಗೆ ಅವರ ಪುಸ್ತಕದ ಮೊದಲ ಐದಾರು ಗಜಲ್ ಗಳೇ ತಣ್ಣಗೆ ತಂಪೆರೆದವು.

ಮೊದಲ ನೋಟಕ್ಕೆ ಮನ ಸೆಳೆಯುವ ಚೆಂದದ ಮುಖಪುಟ ಹೊತ್ತಿರುವ ಅವರ ಪುಸ್ತಕ ಓದಲು ಶುರು ಮಾಡಿದೊಡನೆ ಮಂತ್ರ ಮುಗ್ಧನನ್ನಾಗಿ ಮಾಡಿ ಬಿಡುತ್ತದೆ.. ಹಾಗೆ ಮನಸ್ಸನ್ನು ಹಿಡಿದಿಟ್ಟು ಓದಿಸಿಕೊಳ್ಳುವ ಜಾಯಮಾನದ ಬರಹ ಮತ್ತು ಅಂತಹ ಅದ್ಭುತ ಛಾತಿ ಅವರ ಪ್ರತಿ ಗಜಲ್ ಗಳಲ್ಲಿ ಗೋಚರವಾಗುತ್ತಾ ಮುನ್ನಡೆಯುತ್ತದೆ.

“ಮೌನ ಕೋಗಿಲೆ”ಯಲ್ಲಿ ಮೌನವೇ ಮಾತುಗಳಾಗಿ ಪಸರಿಸಿದರೆ “ಮಿಡಿತ”ದಲ್ಲಿ ಮೀಟಿ ಹೃದಯ ಬಡಿತದ ಕಂಪನಗಳಾದವು. ಬದುಕಿನ ಸಪ್ತಸ್ವರಗಳ ಅನುಭಾವವಾದ “ನಿನಾದ” ಇನ್ನೂ ಬೆಚ್ಚಗೆ ಆವರಿಸಿರಲು ಭಾವವನ್ನೇ ಸ್ಪುರಿಸಲು ಬಂದಿರುವುದು ಪ್ರಭಾವತಿ ದೇಸಾಯಿಯವರ ನಾಲ್ಕನೇ ಈ ಗಜಲ್ ಸಂಕಲನ “ಭಾವಗಂಧಿ”. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಕಷ್ಟು ಕೃಷಿ ಮಾಡಿರುವ ಅವರಿಗೆ ಇದು ಒಟ್ಟಾರೆಯಾಗಿ ಹದಿನೇಳನೇ ಕೃತಿಯಾಗಿದೆ.


ಅನುಭವಗಳ ಕನ್ನಡಿ

ಯಾವುದೇ ಒಳ್ಳೆಯ ಪುಸ್ತಕ ಸಿಕ್ಕರೂ ಒಂದು ಕಡೆಯಿಂದ ನೀಟಾಗಿ ಓದಿಕೊಂಡು ಹೋಗುವ ನಾನು ಈ ಪುಸ್ತಕ ಓದುವಾಗ ಸಹಜವಾಗಿ ಆ ಪರಿಪಾಠ ಬೇಡವೆನಿಸಿತು. ಮುನ್ನುಡಿ, ಅನಿಸಿಕೆಗಳು ಒಂದು ಪುಸ್ತಕಕ್ಕೆ ಬಹು ಮುಖ್ಯವಾದರೂ ಸಹ ಎಲ್ಲವೂ ಆ ಪುಸ್ತಕದ ಚೂರುಪಾರು ಕನ್ನಡಿಗಳೇ ಆಗಿರುತ್ತವೆ. ಆದರೆ ಅವು ಯಾವುವು ಆ ಪುಸ್ತಕವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎನ್ನುವುದು ವಿಶೇಷ ಸಂಗತಿ.

ಆದ ಕಾರಣ ಎಲ್ಲಾ ಗಜಲ್ ಗಳನ್ನು ಪೂರ್ಣವಾಗಿ  ಓದಿ ಮುಗಿಸಿದ ನಂತರವೇ ಅದರಲ್ಲಿನ ಮುನ್ನುಡಿ, ಅನಿಸಿಕೆ ಓದಿ ತಿಳಿಯಬೇಕು ಎನಿಸಿತು. ಇಲ್ಲಿ ಹತ್ತಾರು ಗಜಲ್ ಕಾರರು ಈ ಪುಸ್ತಕದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೂ ಖಂಡಿತ ಈ ಪುಸ್ತಕವನ್ನು ಸಾಕಷ್ಟು ಅಂದಗೊಳಿಸಿದೆ.  ನನಗೆ ಅದಕ್ಕಿಂತ ಹೆಚ್ಚಾಗಿ ಪುಸ್ತಕದ ಆರಂಭದಲ್ಲಿ ತನ್ನ ಪುಸ್ತಕದ ಕುರಿತು ಸ್ವ-ಅನುಭವ ಬರೆಯುವ ಕವಿಯ ಆ ಮಾತುಗಳು ಬಹು ಮುಖ್ಯವಾಗುತ್ತವೆ.

ಪುಸ್ತಕದಲ್ಲಿ ಏನೇನಿದೆ, ಏನನ್ನು ಹೇಗೇಗೇ ಬರೆಯಲು ಪ್ರತಿನಿಧಿಸಲು ಪ್ರಯತ್ನಿಸಿದೆ ಎನ್ನುವುದನ್ನು ಸಂಕ್ಷಿಪ್ತವಾಗಿ ಕೆಲವೇ ಪದಗಳಲ್ಲಿ ಹೇಳಿರುವ ಕವಿಯ ಮಾತುಗಳು ಉಳಿದ ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ಓದಿಗೆ ಹೃದಯದ ಕದ ತಟ್ಟಿ ಹುಚ್ಚೆಬ್ಬಿಸಿಕೊಂಡು ಓದುವಂತೆ ಮಾಡುವ ತಾಕತ್ತನ್ನು ಹೊಂದಿರುತ್ತವೆ. ಅಲ್ಲಿಂದಲೇ ಓದಲು ಪ್ರಾರಂಭಿಸಿದ ನನಗೆ ಓದುತ್ತಾ ಓದುತ್ತಾ ಕವಯತ್ರಿ ಪ್ರಭಾವತಿ ದೇಸಾಯಿ ಅವರು ಹೊಸದೊಂದು ಲೋಕವನ್ನೇ ನನ್ನೆದುರು ತೆರೆದಿಟ್ಟಂತೆ ಭಾಸವಾಯಿತು.

 ಕಾಫಿಯಾ ರಧೀಪಗಳ ಜುಗಲ್ ಬಂಧಿ

ಒಂದೇ ದಿನಕ್ಕೆ ಇಡೀ ಪುಸ್ತಕವನ್ನು ಓದಿ ಮುಗಿಸಿದರೂ ಮತ್ತದೇ ಮತ್ತೆ ಮತ್ತೆ ಕಾಡುವ ಭಾವದ ಕಾರಣ ಆಗಾಗ ಈ ಪುಸ್ತಕವನ್ನು ತಿರುವಿ ಹಾಕುತ್ತಲೇ ಇರುವೆ. ಗಜಲ್ ಮಾದರಿಯಲ್ಲಿ ಅತ್ಯಂತ ನಿಪುಣರಾಗಿರುವ ಪ್ರಭಾವತಿಯವರು ಪ್ರತಿ ಗಜಲ್ ಗಳನ್ನು ಸಾಕಷ್ಟು ಅಳೆದು ತೂಗಿ ತಮ್ಮೊಳಗೆ ಚಿಂತನ ಮಂಥನ ನಡೆಸಿ ಇಲ್ಲಿನ ಬರಹಗಳನ್ನು ಭಾವ ಅನುಭವ ಸಂಗಮದ ಓರೆಗೆ ಹಚ್ಚಿದ್ದಾರೆ.

ಬಿಡಿಸಿ ಬರೆದರೆ ಹತ್ತಾರು ಪುಟಗಳ ಒಂದು ದೊಡ್ಡ ಲೇಖನಕ್ಕೆ ಸರಿಸಮವಾಗಬಲ್ಲಷ್ಟು ವಿಷಯವನ್ನು ಹೊಂದಿರುವ ಅವರ ಒಂದೊಂದು ಗಜಲ್ ಗಳು ಸಹ ಅವರ್ಣನೀಯ. ವಿಮರ್ಶಿಸಲು ಹೊರಟರೆ ಎಂತಹ ವಿಮರ್ಶೆ ಆದರೂ ಅವರ ಗಜಲ್ ಎದುರು ಪೇಲವವಾಗಿ ಬಿಡಬಲ್ಲದು. ಗಜಲ್ ನ ಗುಣ ಲಕ್ಷಣಗಳು, ನಿಯಮ ಚೌಕಟ್ಟುಗಳಿಗೆ ಇವರ ಬರಹಗಳು ಅದ್ಭುತವಾಗಿ ಹೊಂದಿಕೆಯಾಗಿವೆ.

ಮುರದ್ದಪ ಮತ್ತು ಗೈರ್ ಮುರದ್ದಪ ಗಜಲ್ ಗಳಿರುವ ಈ ಸಂಕಲನದಲ್ಲಿ ಅವರು ಅಳವಡಿಸಿರುವ ಗಜಲ್ ನ ಬಹು ಮುಖ್ಯ ಅಂಗಗಳಾದ ಕಾಫಿಯಾನಾ ಮತ್ತು ರಧೀಪಗಳು ಬಹು ಅರ್ಥಪೂರ್ಣವಾಗಿವೆ. ಹೆಚ್ಚಿನ ಗಜಲ್ ಕಾರರು ತಮ್ಮ ಗಜಲ್ ಗಳಲ್ಲಿ ಬಲವಂತವಾಗಿ ತೂರಿಸಿರುವಂತೆ ಭಾಸವಾಗುವ ರಧೀಪಗಳನ್ನು ಇಲ್ಲಿ ಪ್ರಭಾವತಿಯವರು ಬಹು ಜಾಣ್ಮೆಯಿಂದ ನಿರ್ವಹಿಸಿದ್ದಾರೆ. 

ಆ ಗಜಲ್ ಗೇ ಅಂತಹ ಒಂದು ರಧೀಪನ ಅನಿವಾರ್ಯತೆ ಇದೆ ಎನ್ನುವಂತೆ ರಧೀಪಗಳ ಪ್ರಯೋಗ ಬಹು ಶಿಸ್ತುಬದ್ಧವಾಗಿ ಕಂಡು ಬರುತ್ತದೆ.. ಹಾಗಿದ್ದಾಗ ಮಾತ್ರ ಅಂತಹ ಗಜಲ್ ಹೆಚ್ಚಿನ ಪರಿಣಾಮ ಬೀರಿ ದೀರ್ಘ ಕಾಲ ನಮ್ಮನ್ನು ಕಾಡಬಲ್ಲದು. ಇನ್ನೂ ರಧೀಪ್ ಆಗಿ ಬಳಸಿರುವ ಪದಗಳು ಸಹ ಗಜಲ್ ನಿಂದ ಗಜಲ್ ಗೇ ಭಿನ್ನವಾಗಿ ಕವಯತ್ರಿವರು ವಿಶೇಷತೆಯನ್ನು ಮೆರೆದಿದ್ದಾರೆ.

ಅಂತೆಯೇ ರಧೀಪ್ ಮುನ್ನ ಬಳಿಸಿರುವ ಕಾಫಿಯಾ ಪದಗಳು ಅಂತೂ ಸೊಗಸಾಗಿದ್ದೂ ಗುನುಗುನಿಸುವಂತೆ ಮಾಡಲು ಸಫಲವಾಗಿವೆ. ಅವರ ಅಪಾರ ಶಬ್ದ ಭಂಡಾರವನ್ನು ಇಲ್ಲಿ ಸಮರ್ಥವಾಗಿ ಉಪಯೋಗಿಸಿಕೊಂಡಿದ್ದೂ ಉತ್ತಮವಾದ ಗಜಲ್ ಗಳನ್ನು ಸರಾಗವಾಗಿ ಕಟ್ಟಿದಾರೆ.

ಕಾವ್ಯದ ರಸ ಸ್ವಾದ

ಯಾವುದೇ ಒಂದು ವಿಷಯದ ಮೆರುಗನ್ನು ಹೆಚ್ಚಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಲ್ಲ ಕಾವ್ಯಾತ್ಮಕ ಸಂಗತಿಗಳ ಬಳಕೆ ಇಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಛಂದಸ್ಸು, ರೂಪಕ, ಪ್ರತಿಮೆ, ಅಲಂಕಾರಗಳು ಹೀಗೆ ಮೊದಲಾದ ಕಾವ್ಯಾತ್ಮಕ ಗುಣಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದೂ ವಾವ್ ಎನ್ನುವಂತೆ ಆಶ್ಚರ್ಯಗೊಳಿಸುತ್ತವೆ.

ಅವರ ಕಾವ್ಯದ ರಸ ಸ್ವಾದ ಇಲ್ಲಿ ಸುಂದರವಾಗಿ ಅನಾವರಣಗೊಂಡಿದ್ದೂ ಆಗಾಗ ತಡೆ ಹಿಡಿದು ಯೋಚಿಸಿ ಬರೆದಿಟ್ಟುಕೊಂಡು ಮತ್ತೆ ಮುಂದೆ ಓದಿಸಿಕೊಂಡು ಬೆರಗಾಗಿಸುತ್ತವೆ. ಈ ಪುಸ್ತಕದಲ್ಲಿ ಏನಿಲ್ಲ ಎಂದು ನೋಡಿದರೆ ಎಲ್ಲವೂ ಇದೆ ಸರಿ ಅಂತ ತಲೆದೂಗಲೇಬೇಕು, ಹಾಗಿವೆ ಗಜಲ್ ದಿಂದ ಗಜಲ್ ಗೆ ಬದಲಾಗುವ ಅವರ ವಿಷಯ ವಸ್ತುಗಳು. ಮತ್ಲಾ ಮಕ್ತಾ ಮಾತ್ರವಲ್ಲದೆ ಗಜಲ್ ನ ಪ್ರತಿ ಶೇರಗಳು ಸಹ ಓದಿದಷ್ಟು ಬಾರಿ ವರ್ಣರಂಜಿತ ಭಾವಗಳನ್ನು ತುಂಬಿ ತುಂಬಿ ಕೊಡುತ್ತವೆ. ಕೆಲವು ಅಂತೂ ಹೆಚ್ಚಿನ ಸಂಚಲನವನ್ನು ಮೂಡಿಸಿ ಓದುಗ ದೊರೆಗಳನ್ನು ಪ್ರಸನ್ನಗೊಳಿಸುತ್ತವೆ.

೧೫೬ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಕಾಲಘಟ್ಟದ ಪ್ರಮುಖ ಗಜಲ್ ಕಾರರಲ್ಲಿ ಒಬ್ಬರಾದ ಪ್ರಭಾವತಿ ದೇಸಾಯಿಯವರ “ಭಾವಗಂಧಿ” ಗಜಲ್ ಸಂಕಲನದ ಪ್ರತಿಯೊಂದು ಗಜಲಗಳೂ ಸಹ ಒಂದೊಂದು ಅಮೋಘವಾದ ರೇಖಾಚಿತ್ರಗಳನ್ನು ಹೊಂದಿದ್ದೂ ಅವುಗಳು ಆಯಾ ಬರಹಗಳಿಗೆ ಪೂರಕವಾಗಿಯೂ ಹಾಗೂ ಓದುವ ಖುಷಿಗೆ ಪ್ರೇರಕವಾಗಿಯೂ ಇದ್ದೂ ಗಜಲ್ ಗಳ ಸೊಬಗನ್ನು ಮತ್ತಷ್ಟು ಮೊಗೆದಷ್ಟು ಮೋಡಿ ಮಾಡುತ್ತವೆ.

ಪುಸ್ತಕದ ಒಂದು ಗಜಲನ್ನಾಗಲಿ ಅಥವಾ ಯಾವುದೇ ಗಜಲ್ ನ ಒಂದೆರಡು ಸಾಲುಗಳನ್ನಾಗಲಿ ನಾನಿಲ್ಲಿ ಉದಾಹರಿಸಲು ಹೋಗುವುದಿಲ್ಲ. ಈ ಪುಸ್ತಕದ ಪ್ರತಿ ಸಾಲುಗಳನ್ನು ಆ ಪುಸ್ತಕ ಕೊಂಡು ಓದಿ ಆಸ್ವಾದಿಸುವ ಆನಂದವೇ ಬೇರೆ ಮಟ್ಟದಲ್ಲಿ ಇರುತ್ತದೆ.  ಈ ಬಾರಿ ಯಾರಿಗಾದರೂ ಓದಲು ಒಂದು ಒಳ್ಳೆಯ ಪುಸ್ತಕ ಬೇಕೇ ಬೇಕು ಎನ್ನುವವರು ಖಂಡಿತವಾಗಿಯೂ ಈ ಪುಸ್ತಕವನ್ನು ಓದಬಹುದು, ಒಂದು ಉತ್ತಮ ಓದು ನಿಮ್ಮನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬಹುದು.

‍ಲೇಖಕರು Avadhi

September 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಿರ ‘ಸೂರ್’ ಗಜಲ್‌ಗಳೊಂದಿಗೆ..

ಕಿರ ‘ಸೂರ್’ ಗಜಲ್‌ಗಳೊಂದಿಗೆ..

ಕವಿ ಕಿರಸೂರ ಗಿರಿಯಪ್ಪ ಅವರ ಗಜಲ್ ಗಳ ಸಂಕಲನ 'ಅಲೆವ ನದಿ'. ಈ ಸಂಕಲನಕ್ಕೆ ಖ್ಯಾತ ವಿಮರ್ಶಕ ಎಸ್ ನಟರಾಜ ಬೂದಾಳು ಅವರು ಬರೆದ ಮುನ್ನುಡಿ...

ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’

ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’

ಕ್ಷಣ ಕ್ಷಣದ ಜ್ಞಾನೋದಯಗಳ ವಿಸ್ಟಾ ರಾಜು ಎಂ ಎಸ್ ಕವಿ ಸಮಯವನ್ನು ಹಿಡಿದಿಡುವ ಅಮೂಲ್ಯ ಘಳಿಗೆಯಲ್ಲಿ, ಕವಿ ಬರೆಯುತ್ತಾನೆ. ಅದು ಅದಷ್ಟಕ್ಕೇ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: