ಕಾಡುಹಕ್ಕಿಯ ಹಾದಿನೋಟ : ಪುಟ್ಟಮ್ಮನ ಪ್ರಲಾಪ

 

ಭತ್ತ ಮಲೆನಾಡು ಪ್ರದೇಶದ ಈ ಭಾಗದ ಜನರ ಮುಖ್ಯ ಹಾಗೂ ಏಕೈಕ ಆಹಾರ ಬೆಳೆ ‘ಸಾಂಭಾರ ಪದಾರ್ಥಗಳ ರಾಣಿ’ ಎಂದೇ ಕರೆಯಲ್ಪಡುವ ಯಾಲಕ್ಕಿ ಆರ್ಥಿಕ ಬೆಳೆ. ಒಂದು ಕಾಲಕ್ಕೆ ರೈತರನ್ನು ಸಲಹಿದೆ. ಕಾಡಿನ ಆಳಕ್ಕೆ ಪ್ರವೇಶಿಸಿ ಪ್ರಶಸ್ತಿ ಸ್ಥಳ ಹುಡುಕಿ ನಮ್ಮ ಪೂರ್ವಿಕರು ಎಂತೆಂತಹಾ ಯಾಲಕ್ಕಿ ಹನಾಲುಗಳನ್ನು ಅಭಿವೃದ್ಧಿ ಪಡಿಸಿದ್ದರು! ಅವುಗಳಿಂದ ಪಡೆಯುವ ಫಲಕ್ಕೆ ಪ್ರತಿಯಾಗಿ ಎಂತಹಾ ಪ್ರೀತಿ ತೋರಿಸುತ್ತಿದ್ದರು ಎಂದರೆ ಮಾತುಗಳಿಂದ ಹೇಳಲು ಸಾಧ್ಯವೆ!

ಮನೆಯಿಂದ ನಾಲ್ಕಾರು ಮೈಲಿ ನಡೆದು ಬೆಳಕು ಹರಿಯುವ ಮುನ್ನವೇ ತೋಟ ತಲಪಿ ಅದರ ಆರೈಕೆ ಮಾಡುತ್ತಾ ಕಣ್ಣಿಗೆ ಕತ್ತಲಾಗುವವರೆಗೂ ಅಲ್ಲಿಯೇ ಇರುತ್ತಿದ್ದುದನ್ನು ನಾವೆಲ್ಲಾ ಕಂಡಿದ್ದೇವೆ. ಸಣ್ಣ ಸಣ್ಣ ಹಿಡುವಳಿದಾರರು ಸಹಾ ಎಂತೆಂತಹಾ ಯಾಲಕ್ಕಿ ಹನಾಲುಗಳನ್ನು ಅಭಿವೃದ್ಧಿ ಪಡಿಸಿದ್ದರು! ಅವುಗಳಿಗೆ ಎಂತಹಾ ಮೋಹಕ ಹೆಸರುಗಳು. ಹಂಚಿನ ಹನಾಲು, ಹಾರಕೋಲು ಕುಂಬ್ರಿ, ಜೇಡಗದ್ದೆ, ಬಸರಿಹಡ್ಲು ಯಾಲಕ್ಕಿ ಕುಂಬ್ರಿ! ಅವುಗಳಿಗೆಲ್ಲಾ ಕಲಶವಿಟ್ಟಂತೆ ನಮ್ಮ ತೋಟ.

ಕಾರೆಕಾಯಿ ಹಡ್ಲು!

ಆಚೀಚೆಯ ಬೆಟ್ಟದ ಓಣಿಯ ಓರೆಯ ಕಾಡಿನಲ್ಲಿ ತೋಟ. ನಡುವೆ ಗಂಭೀರವಾಗಿ ಹರಿಯುವ ಕೇರಿ ಹೊಳೆ. ಒಂದು ಅಚ್ಚರಿಯಿಂದ ಶುರುವಾಗುವ ತೋಟ ಇನ್ನೊಂದು ಅಚ್ಚರಿಯ ಸ್ಥಳದಲ್ಲಿ ಕೊನೆಯಾಗುತ್ತದೆಂದರೆ ಅದರ ಪ್ರಕೃತಿ ವೈಶಿಷ್ಟ್ಯ ಹೇಗಿರಬೇಡ! ಇಂತಪ್ಪ ಯಾಲಕ್ಕಿಗೆ ‘ಕಟ್ಟೆರೋಗ’ ಬಡಿದಾಗ ಅದನ್ನೇ ನಂಬಿದ್ದ ಜನ ದಂಗಾದರು. ಬೂತ ಪ್ರೇತ ಚೌಡಿ ಯಾವುವೂ ಕಾಪಾಡಲಿಲ್ಲ. ಯಾಲಕ್ಕಿ ಮಂಡಳಿಯವರೂ ಸಹ ಬಂದು ಪುನರುಜ್ಜೀವನಕ್ಕೆ ಸಬ್ಸಿಡಿ ಕೊಡುತ್ತೆವೆ. ಎಂದರೂ ಬರ್ಕತ್ತಾಗುವ ಲಕ್ಷಣ ಕಾಣಲಿಲ್ಲ. ಈ ಹೋರಾಟದ ನಡುವೆ ‘ಕ್ಕೊಕ್ಕೆ ಕಂದು’ ಎಂಬ ಮಾರಕ ರೋಗ ಅಪ್ಪಳಿಸಿತು. ಕಟ್ಟೆಗೆ ಔಷಧಿ ಕಂಡು ಹಿಡಿಯುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಮಂಡಳಿಯವರು ಈ ರೋಗದ ಅಬ್ಬರ ಕಂಡು ತಲೆ ಮರೆಸಿಕೊಂಡರು. ಏನು ಮಾಡಲೂ ತೋಚದೆ ಕಂಗಲಾದ ರೈತರು ತಲೆ ಮೇಲೆ ಕೈಹೊತ್ತು ಕುಳಿತರು.

ಮೊಕಾಡೆ ಬಿದ್ದು ನೆಲಕಚ್ಚಿದ್ದ ರೈತರ ಬೆನ್ನ ಮೇಲೆ ‘ಗುಂಡ್ಯಾ ಜಲ ವಿದ್ಯುತ್ ಯೋಜನೆ’ ಎಂಬ ಚಪ್ಪಡಿ ಎಳೆಯಲು ಸರ್ಕಾರ ಅನುವಾಯಿತು. ಇದರಿಂದ ಈ ಭಾಗದ ರೈತರ ಬದುಕು ನುಚ್ಚು ನೂರಾಗುವುದಲ್ಲದೆ ಇಡೀ ಪಶ್ಚಿಮ ಘಟ್ಟ ಪ್ರದೇಶದ ಜೀವಸಂಕುಲದಲ್ಲಿ ಅಲ್ಲೋಲ ಕಲ್ಲೋಲವಾಗುವ ಸೂಚನೆಯುಂಟಾಯಿತು. ಪರಿಸರವಾದಿಗಳ ಸಭೆಗಳಾಗ ತೊಡಗಿದವು. ಹಾಸನದ ಕಲಾಭವನದಲ್ಲಿ ಕುಳಿತು ಈ ಬಗ್ಗೆ ಚರ್ಚೆ ನಡೆಸಿದ ಬಗ್ಗೆ ಟಿವಿ ಪೇಪರ್ಗಳು ಪ್ರಚಾರ ಮಾಡಿದವು. ಸಂತ್ರಸ್ತ ರೈತರ ನಡುವೆ ಯಾರಿಗೂ ಸುಳಿಯಲಿಲ್ಲ.ಈ ತೋಟ ಗದೆಗಳನ್ನೇ ನಂಬಿ ಕುಳಿತಿದ್ದು ರೈತಜನ ಇದರ ತಲೆಬುಡ ತಿಳಿಯದೆ ಕಕ್ಕಾಬಿಕ್ಕಿಯಾದರು.

ಬಹಳ ವರ್ಷಗಳಿಂದ ತೋಟ ಪಾಳುಬಿಟ್ಟು ಪಟ್ಟಣಗಳಲ್ಲಿ ನೆಲೆಸಿದ್ದ ಐಶಾರಾಮ ಬದುಕಿಗೆ ಒಡ್ಡಿಕೊಂಡಿದ್ದ ದೊಡ್ಡ ಹಿಡುವಳಿದರರು ಯೋಜನೆಯ ಪರವಾಗಿ ವಾದಿಸುತ್ತಾ ಜಮೀನು ಬಿಟ್ಟು ಕೊಡಲು ಸಿದ್ಧರಾದರು. ಸ್ಥಳೀಯ ಶಾಸಕರೂ, ರಾಜಕಾರಣಿಗಳೂ ಅವರೊಂದಿಗೆ ಕೈ ಜೋಡಿಸಿ ಜಮೀನು ಬಿಟ್ಟು ಕೊಡುವಂತೆ ಸಣ್ಣರೈತರನ್ನು ಪುಸಲಾಯಿಸತೊಡಗಿದರು. ಸರ್ಕಾರದಿಂದ ಹೆಚ್ಚು ಹಣ ಕೊಡಿಸುವುದಾಗಿ ಆಮಿಷ ಒಡ್ಡತೊಡಗಿದರು.

ರೈತರು ನಿಜಕ್ಕೂ ಅತಂತ್ರರಾದರು. ದುಡಿಯುವ ಶಕ್ತಿ ಇದ್ದ ಯುವಕ ಯುವತಿಯರು ಹಾಸನ ಬೆಂಗಳೂರುಗಳಿಗೆ ವಲಸೆ ಹೊರಟರು. ಕಾಡಿನ ನಡುವೆ ‘ಕಾರೆಕಾಯಿ ಹಡ್ಲು’ ಎಂಬ ತೋಟವನ್ನು ಅಭಿವೃದ್ಧಿಪಡಿಸಿ ಬದುಕು ಕಂಡುಕೊಂಡಿದ್ದ, ಈಗಲೂ ಅದನ್ನ ಬಿಟ್ಟು ಬರಲು ಇಷ್ಟಪಡದೆ ಅದರ ಮೇಲೆಯೇ ಆಸೆಪಟ್ಟು ಕುಳಿತುಕೊಂಡಿದ್ದರು ತಮ್ಮ ತಾಯಿ ಪುಟ್ಟಮ್ಮ! ಅವರನ್ನು ಅಲ್ಲಿಂದ ಬಲವಂತವಾಗಿ ಏಳಿಸಿ, ಇಲ್ಲಿ ಹಾಸನದ ಬಳಿ ನಾನು ಮಾಡಿದ ಜಮೀನಿನ ಬಳಿಗೆ ಕರೆತಂದದ್ದೇ ಒಂದು ಸಾಹಸಗಾಥೆ! ಇಲ್ಲಿ ಬಂದು ನೆಲೆಸಿದರೂ ನಮ್ಮ ಮನೆ ಹಾಗೂ ತೋಟವನ್ನು ತಮ್ಮದಾಗಿಸಿಕೊಳ್ಳುವುದು ಅವರಿಂದ ಆಗಲೇಇಲ್ಲ. ನಿಮ್ಮ ಮನೆ, ನಿಮ್ಮ ತೋಟ, ನಿಮ್ಮ ದನ ಎಂದೇ ಅವರೂ ಈಗಲೂ ಅನ್ನುವುದು.

ಅವರ ಧ್ಯಾನವೆಲ್ಲಾ ತಾವು ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಹಾಡ್ಲಹಳ್ಳಿಯ ಮೇಲೆ ಹಾಗೂ ಬದುಕಿಗೆ ಆಸರೆಯಾಗಿದ್ದ ಕಾರೆಕಾಯಿ ಹಡ್ಲು ತೋಟದ ಮೇಲೆ. ಕರೆಯುವ ಹಸುವಿಗೆ ಕಲಗಚ್ಚು ಕೊಡುತ್ತಾರೆಯೇ ಹೊರೆತು ಬರಡು ಹಸುವನ್ನು ಯಾರು ಬಗ್ಗಿ ನೋಡುತ್ತಾರೆ! ಬೆಳೆ ಬರುತ್ತಿದ್ದಾಗೇನೋ ಸರಿ. ಪಾಳು ಬಿದ್ದ ತೋಟಕ್ಕೆ ಯಾರು ಎಡಕಾರುತ್ತಾರೆ. ಕಾಡೆಮ್ಮೆ ಮುಂತಾದ ಕಾಡು ಪ್ರಾಣಿಗಳು ಮೇಯಲು ಕಾಡಾನೆಗಳಿಗೆ ತಂಗಲು ಪ್ರಶಸ್ತ ಸ್ಥಳವಾಯಿತು ಕಾರೆಕಾಯಿಹಡ್ಲು. ಅಲ್ಲಿ ತೋಟ ಮಾಡಿರ ಲಾಗಾಯ್ತು ಚೌಡಿಯೊಂದನ್ನು ಸ್ಥಾಪಿಸಿದ್ದು ವರ್ಷಕೊಮ್ಮೆ ಅದಕ್ಕೆ ದಯ್ಯ ಕೊಡುವ ಕಾರ್ಯಕ್ರಮ ನಿಲ್ಲಸಿರಲಿಲ್ಲ. ಈಚೆಗೆ ಪ್ರತಿ ವರ್ಷವೂ ನಮ್ಮ ಮನೆಯಿಂದ ನೆಪಮಾತ್ರಕ್ಕೆ ಯಾರಾದರೂ ಹೋಗಿ ಈಚೆಗೆ ಬಾರಿಯೂ ಮೇ ತಿಂಗಳಿನಲ್ಲಿಯೇ ದಯ್ಯಕೊಡುವ ಕಾರ್ಯಕ್ರಮ. ಮುಗಿಸಬೇಕೆಂದು ಊರಲ್ಲಿರುವ ಅಣ್ಣ ಹೇಳುತ್ತಲೇ ಇದ್ದ. ಕೆಲದಿನಗಳಿಂದ ಊರಿಗೆ ಕರೆದುಕೊಂಡು ಹೋಗಿ ಬಾ ಎಂದು ಪುಟ್ಟಮ್ಮನ ವರಾತ ಬೇರೆ ಶುರುವಾಗಿತ್ತು. ಅವರನ್ನು ಕರೆದುಕೊಂಡು ಹೋಗುವುದಾದರೆ ಹ್ಯಾಗೂ ಕಾರು ಹೊರಡಿಸಬೇಕಾಗುತ್ತದೆ. ಹಾಗಾಗಿ ಮನೆಯವರೆಲ್ಲಾ ಹೋಗಿ ಬಂದರೆ ಹೇಗೆ ಎಂದು ಆಲೋಚಿಸಿದೆ. ಮಕ್ಕಳು ಮಿಡ್ಲ್ ಸ್ಕೂಲಿನಲ್ಲಿದ್ದಾಗ ಅವರನ್ನು ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಹೊಳೆಯ ಅಬ್ಬಿಯಲ್ಲಿ ಸ್ನಾನ ಮಾಡಿಸಿಕೊಂಡು ಬಂದದ್ದು ಬಿಟ್ಟರೆ ಮತ್ತೆ ಅತ್ತ ಸುಳಿದಿಲ್ಲ. ಇನ್ನು ಸೊಸೆಯಂತೂ ಮದುವೆಯಾಗಿ ನೇರ ಇಲ್ಲಿಗೇ ಬಂದವಳು. ನಮ್ಮ ವಂಶದ ಮೂಲ ಆಸ್ತಿಯನ್ನು ನೋಡಿದವಳೇ ಅಲ್ಲ. ಹೋಗಿ ಬರುವುದೇ ಸರಿ ಎಂದು ಅದಕ್ಕೆ ದಿನಾಂಕ ನಿಗಧಿಯಾಯಿತು.

ಎಲ್ಲರಿಗೂ ಒಂದು ದಿನದ ಬಿಡುವು. ಹುಟ್ಟೂರಿಗೆ ಹೋಗುತ್ತಿದ್ದೇವೆಂಬ ಸಂಭ್ರಮ ಬೇರೆ. ಪುಟ್ಟ ಮೊಮ್ಮಕ್ಕಳಂತೂ ಪುಟ್ಟಮ್ಮ ಎಂದು ಪ್ರೀತಿಯಿಂದಲೇ ಸಂಭೋದಿಸುವ ಮುತ್ತಜ್ಜಿಯನ್ನು ಒಂದು ದಿನ ಮೊದಲೇ ಹೊರಡುವಂತೆ ಪ್ರೇರೆಪಿಸತೊಡಗಿದರು. ನಿಗಧಿತ ಸಮಯಕ್ಕೆ ಎಲ್ಲರೂ ಹೊರಟು ಸಿದ್ಧರಾದರು. ಪುಟ್ಟಮ್ಮನ ಸುಳಿವಿಲ್ಲ. ಕೋಣೆಯಲ್ಲಿ ನೋಡಿದೆ. ಹೊರಟಿಲ್ಲ. ಉಟ್ಟ ಬಟ್ಟೆಯಲ್ಲೇ ಹಾಸಿಗೆಯ ಮೇಲೆ ಕುಳಿತಿದ್ದಾರೆ. ಅವರ ನಡವಳಿಕೆ ಒಂದೊಂದು ಗಳಿಗೆಗೆ ಒಂದೊಂದು ತರಹ ಇರುತ್ತದೆ. ‘ಯಾಕೆ?’ ಎಂದೆ. ‘ನಾನ್ ಬರದಿಲ್ಲ’ ಎಂದು ಅತ್ತ ತಿರುಗಿಕೂತರು. ಇದೊಳ್ಳೇ ಕತೆ ಆಯ್ತಲ್ಲ. ನಿಮಗೋಸ್ಕರ ಕಾರು ಹೊರಟಿದೆ. ಎಲ್ಲಾ ಆಗಲೇ ಹೊರಟಿದಾರೆ. ‘ಏಳಿ ಏಳಿ’ ಎಂದೆ. ‘ಅದಕ್ಕೆನಂತೆ ನೀವು ಹೋಗಿ ಬನ್ನಿ’ ನಾನು ಇಲ್ಲೆ ಇರ್ತೀನಿ’ ಎಂದರು. ‘ಅಲ್ಲೇನ್ ನೋಡಕೇಂತ ಬರದು. ನಾನ್ ಕಟ್ಟಿದ ಮನೆ ಎಲ್ಲಾ ಬೀಳ್ಸದೀರ. ತ್ವಾಟ ಗದ್ದೆ ಎಲ್ಲಾ ಹಾಳ್ಬಿಟ್ಟೀದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಷ್ಟು ಹೇಳಿದರೂ ಬರುವುದೇ ಇಲ್ಲ ವೆಂದು ಚಂಡಿ ಹಿಡಿದರು. ನನಗೆ ಬಿ.ಪಿ. ಏರಿಬಿಟ್ಟಿತು. ‘ಈಗ ಹೊರಡ್ತಿರಾ ಇಲ್ವಾ? ಇಲ್ಲಾಂದ್ರೆ ಉಟ್ಟಿರ ಬಟ್ಟೆಯಲ್ಲೇ ಕಾರಿಗೆ ಎತ್ತಾಕಿಕೊಂಡು ಹೋಗಿ ಬಿಡ್ತೀನಿ. ಈ ಒಂಟಿ ಮನೆಯಲ್ಲಿ ನಿಮ್ಮೊಬ್ಬರನ್ನು ಬಿಟ್ಟು ಹೋಗಕೆ ಆಗುತ್ತಾ!’ ಎಂದು ಸಿಟ್ಟಿನಿಂದ ಗುಡುಗಿದೆ. ಅವರ ಸ್ವಭಾವ ಗೊತ್ತಿತ್ತು.

 

ಎದ್ದು ಗೊಣಗಾಡುತ್ತಾ ಬಟ್ಟೆ ಬದಲಿಸ ತೊಡಗಿದರು. ಪ್ರಸನ್ನ ಓಮ್ನಿ ಕಾರನ್ನು ಷೆಡ್ಡಿನಿಂದ ತಂದು ಮನೆಯ ಮುಂದೆ ನಿಲ್ಲಿಸಿದ. ನಾನು ಅವನ ಪಕ್ಕದ ಸೀಟಿನಲ್ಲಿ ಕುಳಿತೆ. ಹಿರಿಯ ಮಗ ಸೊಸೆ ನಮ್ಮ ಹಿಂದಿನ ಸೀಟಿಗೆ. ನನ್ನ ಹೆಂಡತಿ ಹಾರ್ಟ್ ಪೇಷೆಂಟ್ ಅವರ ಎದುರು ಸೀಟಿನಲ್ಲಿ ಆರಾಮವಾಗಿ ಒರಗಿ ಕುಳಿತಳು. ಅವಳ ಪಕ್ಕಕ್ಕೆ ಪುಟ್ಟಮ್ಮ. ಕೈಯ್ಯಲ್ಲಿ ಒಂದು ಪುಟ್ಟ ಬಟ್ಟೆ ಗಂಟು. ‘ಸಾಯೊ ಮುದುಕಿ ಹಿಂಗಾಡುಸ್ತರಲ್ಲ’ ಎಂದು ತಮ್ಮಷ್ಟಕ್ಕೆ ಗೊಣಗುತ್ತಾ ಕುಳಿತರು. ಪುಟ್ಟ ಮೊಮ್ಮಕ್ಕಳು ಜೀವಿತಾ ಹಾಗೂ ಯಾಮಿನಿ ಸಂಭ್ರಮದಿಂದ ಆ, ಸೀಟಿನಿಂದ ಈ ಸೀಟಿಗೂ, ಈ ಸೀಟಿನಿಂದ ಆ ಸೀಟಿಗೂ ಜಿಗಿದಾಡತೊಡಗಿದರು. ಈ ಹೈವೇ ರಸ್ತೆಯಲ್ಲಿ ಕಾರು ಸಾವಕಾಶವಾಗಿ ಚಲಿಸುತ್ತಾ ಅರ್ಧಗಂಟೆಯಲ್ಲಿ ಸಕಲೇಶಪುರ ತಲಪಿತು. ಅಲ್ಲಿ ಪ್ರಯಾಣಕ್ಕೆ ಹತ್ತು ನಿಮಿಷ ಬಿಡುವು. ಮಕ್ಕಳಿಗೆ ತಿಂಡಿ, ದೊಡ್ಡವರಿಗೆ ಮಾತ್ರೆ ನಶ್ಯ ಇತ್ಯಾದಿ ಕೊಂಡದ್ದಾಯಿತು. ಅಲ್ಲಿಂದ ಇಪ್ಪತ್ತೈದು ಕಿಲೋಮೀಟರ್ ಹೆತ್ತೂರು. ರಸ್ತೆ ಸುಮಾರಾಗಿತ್ತು. ಕಾರಿನ ಕುಲುಕಾಟ ಹಾಗೂ ಹಿಂದೆ ಕುಳಿತವರ ಗೊಣಗಾಟ ಏಕಕಾಲದಲ್ಲಿ ಶುರುವಾಯಿತು. ಅದರಲ್ಲೂ ಪುಟ್ಟಮ್ಮನ ಧ್ವನಿ ಪ್ರಮುಖವಾಗಿ ಕೇಳಿ ಬರುತ್ತಿತ್ತು.

‘ಬ್ಯಾಡ ಅಂದ್ರೂ ಕೇಳ್ಳಿಲ್ಲ. ನನ ಕೈಲಿ ಕೂರಕಾಗದಿಲ್ಲ.’ ಎನ್ನುತ್ತಾ ನನ್ನನ್ನು ಕುರಿತು ಪುಟ್ಟಮ್ಮ ಗಲಾಟೆಗೇ ತೊಡಗಿದರು. ಕಾರು ಚಲಿಸುತ್ತಲೇ ಇತ್ತು. ಹೆತ್ತೂರು ಸಮೀಪಿಸುತ್ತಿತ್ತು. ‘ನಿಲ್ಸೊ ಮಾರಾಯ. ವಾಂತಿಮಾಡಬೇಕು’ ಎನ್ನತೊಡಗಿದರು. ನಿಧಾನಗೊಳಿಸಿ ಕಾರನ್ನು ನಿಲ್ಲಿಸುವ ವೇಳೆಗೆ ಕಾರಿನ ಒಳಕ್ಕೆ ಅರ್ಧ ಹೊರಕ್ಕೆ ಅರ್ಧವಾಂತಿ ಮಾಡಿ ಆಗಿತ್ತು. ಮತ್ತೆ ಮೇಲಿಂದ ಮೇಲೆ ವಾಂತಿಯಾಯಿತು. ಪುಟ್ಟಮ್ಮ ಸುಸ್ತಾಗಿದ್ದರು. ‘ಇಲ್ಲೇ ಇಳ್ಸು. ನಾನು ಆನಂದನ ಮನೆಗೆ ಹೋಗ್ತೀನಿ.’ ಎನ್ನ ತೊಡಗಿದರು. ಆನಂದ ಅವರ ಅಣ್ಣನ ಮಗ. ಅವರಿಗೆ ತೌರುಮನೆಯ ಬೆಚ್ಚನೆಯ ಅನುಭವ ಕಾಡುತ್ತಿರಬಹುದು ಎಂದುಕೊಳ್ಳುತ್ತಾ ಮಗನಿಗೆ ‘ನಿಲ್ಸೋದೇನು ಬೇಡ. ಇನ್ನೇಷ್ಟು ದೂರ? ಮನೆ ತಲಪೋಣ’ಎಂದೆ. ಹಾಡ್ಲಹಳ್ಳಿಯ ರಸ್ತೆಗೆ ಇಳಿದ ಕಾರು ಹಕ್ಕೆಮರದ ಕೊಟಿಗೆ ದಾಟಿ ನಿಲಸ್ಕಲ್ ಬಳಿ ಬರುವ ವೇಳೆಗೆ ನಾವೆಲ್ಲರೂ ಹೈರಾಣಾಗಿ ಹೋಗಿದ್ದೆವು. ಒಂದೆರಡು ವರ್ಷದ ಹಿಂದೆ ಮಾಡಿದ್ದ ಟಾರು ರಸ್ತೆ ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ಎದ್ದು ಅಲ್ಲಲ್ಲಿ ಗುಂಡಿಗಳು ಬಾಯ್ದೆರೆದು ಕೊಂಡಿದ್ದವು. ಕಾರು ಪ್ರಯಾಸದಿಂದ ಟೈರುಗಳಿಗೆ ಜಾಗ ಹುಡುಕಿಕೊಂಡು ಮುಂದೆ ಸಾಗುತ್ತಿತ್ತು. ನಾನು ಅತ್ತಿತ್ತ ಕಣ್ಣಾಡಿಸಿದೆ. ನಾನು ಶಾಲೆಗೆ ಹೋಗುವಾಗಿನ ಮಣ್ಣು ರಸ್ತೆಯೇ ಎಷ್ಟೋ ಚನ್ನಾಗಿತ್ತು ಎನ್ನಿಸಿತು. ರಸ್ತೆ ಆಚೀಚೆ ಮಳೆಗಾಲದಲ್ಲಿ ನಾವು ಜಾರುಗುಪ್ಪೆಯಾಡುತ್ತದ್ದ ದಿಣ್ಣೆ ಇರಲಿಲ್ಲ. ಆಜಾಗವೆಲ್ಲಾ ಒತ್ತುವರಿಯಾಗಿ ದಿಣ್ಣೆ ಅಗೆದು ಮನೆಗಳಾಗಿದ್ದವು. ಬಲಕ್ಕೆ ದೊಡ್ಡ ದಿಂಬದ ಕಡೆ ನೋಡಿದೆ. ಅಲ್ಲಿದ್ದ ಹುಲುಗೂರು ಹಣ್ಣಿನ ನೆನಪಿಗೇ ಬಾಯಲ್ಲಿ ನೀರೂರಿತ್ತು. ಆದರೆ ಅದ್ಯಾವುದರ ಕುರುಹೂ ಇಲ್ಲದಂತೆ ಆ ದೊಡ್ಡ ದಿಣ್ಣೆಯೂ ಒತ್ತೂವರಿಯಾಗಿ ತೋಟವಾಗಿತ್ತು.

ದಾರಿಯ ಆಸುಪಾಸಿನಲ್ಲಿದ್ದ ಪಾಳೆಯಗಾರರ ಕಾಲದ ನಿಲಿಸು ಕಲ್ಲುಗಳ ಕುರುಹೂ ಕಾಣಲಿಲ್ಲ. ಕಾರು ಇಳಿಜಾರು ರಸ್ತೆಯಲ್ಲಿ ಇಳಿಯತೊಡಗಿತು. ತಗ್ಗಿನಲ್ಲಿ ನಾವು ಈಜು ಕಲಿತ ಗೆಂಡಗೆರೆ ವಿರೂಪವಾಗಿ ನಿಂತಿತ್ತು. ಎದುರಿಗೇ ಹೊಸ ಬೈರವೇಶ್ವರ ದೇವಸ್ಥಾನ. ಅವನ್ನೆಲ್ಲಾ ದಾಟಿದ ಕಾರು ನಮ್ಮ ಅಣ್ಣನ ಮನೆಯ ಮುಂದೆ ಬಂದು ನಿಂತಿತು. ಒಬ್ಬೊಬ್ಬರೇ ಇಳಿದು ಮನೆಯೊಳಗೆ ಹೊಗುತ್ತಿದ್ದರೆ ಪುಟ್ಟಮ್ಮ ಇಳಿದು ಹಳೆಯ ಮನೆಂಗಳದ ಮುಂದೆ ನಿಂತು ಕಣ್ಣು ತುಂಬಿ ಕೊಳ್ಳತೊಡಗಿದ್ದರು.

 

‍ಲೇಖಕರು avadhi

June 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This