ಕಾಡುಹಕ್ಕಿಯ ಹಾದಿನೋಟ : ಸುತ್ತು ಬಳಸಿನ ಹಾದಿ

 

ಅಣ್ಣನ ಮನೆಯಲ್ಲಿ ಹಬ್ಬದ ವಾತಾವರಣ. ಹಾಸನದಿಂದ ನನ್ನ ತಮ್ಮ ಸುರೇಂದ್ರ ಆಗಲೇ ತನ್ನ ಮಗನ ಹೊಸ ಕಾರಿನಲ್ಲಿ ಹೆಂಡತಿಯೊಂದಿಗೆ ಬಂದು ತಲಪಿದ್ದ. ತಂಗಿಯರು, ಒಂದೆರಡು ಹೆಣ್ಣು ಮಕ್ಕಳು, ಜೊತೆಗೆ ನಾವು ಎಂಟು ಜನ ಸೇರಿಕೊಂಡೆವು. ಮೊದಲೆಲ್ಲಾ ಚೌಡಿಗೆ ಒಪ್ಪಿಸಲೆಂದೇ ಹೆಸರೇಳಿ ನಾಟಿ ಕೋಳಿ ಹುಂಜವನ್ನು ಬಿಟ್ಟು ಸಾಕಲಾಗುತ್ತತ್ತು. ಮನೆಯಲ್ಲೆ ಭಟ್ಟಿ ಸರಾಯಿ ತಯಾರಿಸಿ ಅದನ್ನೇ ಎಡೆಗೆ ಇಡಲಾಗುತ್ತಿತ್ತು. ಆದರೆ ಈಗ! ಬ್ರಾಯ್ಲರ್ ಕೋಳಿಗಳು! ಹ್ಯಾಟೆಯೋ ಹುಂಜವೋ ನೋಡಿದವರಾರು! ನಾಲ್ಕು ಜನರ ಹೆಸರಿಗೆ ಒಂದೊಂದು. ಜೊತೆಗೆ ನಾಲ್ಕು ಬಾಟಲಿ ಬ್ರಾಂಡಿ! ಪುಟ್ಟಮ್ಮ ಮನೆಯೊಳಗೆ ಸೇರಿದ ಮೇಲೆ ಒಂದೂ ಮಾತಾಡಿರಲಿಲ್ಲ. ಮಕ್ಕಳು ಮಾತಾಡಿಸಿದರೂ ಹಾಂ, ಹೂಂ ಅಂದಷ್ಟೇ ಹೇಳಿ ಮೌನಕ್ಕೆ ಶರಣಾಗಿದ್ದರು. ಅ

ಪರೂಪಕ್ಕೆ ಎಲ್ಲರೂ ಸಿಕ್ಕಿದ್ದರಿಂದ ನಾನು ಊಟ ಮುಗಿಸಿ ಮಾತಾಡುತ್ತಾ ಕುಳಿತಿದ್ದೆ. ‘ಬೇಗ ಮಲಗಿ. ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ಹೋಗಬೇಕು’ ಅಣ್ಣ ನನ್ನನ್ನುದ್ದೇಶಿಸಿ ಹೇಳಿದ. ನನಗೆ ಪ್ರಯಾಣದ ಆಯಾಸದ ಜತೆಗೆ ಒಳ್ಳೆಯ ಊಟ. ಒಳ್ಳೇಯ ನಿದ್ದೆಯ ಅಗತ್ಯವಿತ್ತು.

‘ಅಷ್ಟು ಬೇಗ ಯಾಕೆ?’ ಎಂದೆ. ‘ಮುಟ್ಟಾದ ಹೆಂಗಸರ, ಬಾಲೆಯವರ ಮುಖ ನೋಡಿ ಹೋಗಂಗಿಲ್ಲ. ಅವರೆಲ್ಲಾ ಏಳಕಿಂತ ಮೊದಲು ಹೋಗಬೇಕು’ ಎಂದ. ಇವರೆಲ್ಲಾ ಇನ್ನೂ ಯಾವ ಕಾಲದಲ್ಲಿದ್ದಾರಪ್ಪ ಎಂದು ಅಸಮಾಧಾನವಾಯಿತು. ‘ನೀವೆಲ್ಲಾ ಬೇಕಾದರೆ ಬೇಗ ಹೋಗಿರಿ. ನಾನು ಬೆಳಕರದ ಮೇಲೇ ಎದ್ದು ಬರ್ತೀನಿ’ ಎಂದೆ. ಬೆಳಗ್ಗೆ ನಾನು ಏಳುವ ವೇಳೆಗಾಗಲೇ ರಾತ್ರಿ ಮಾತಾಡಿಕೊಂಡಿದ್ದಂತೆ ಒಂದು ಗುಂಪು ಕಾಡಿನ ಕಡೆ ಹೋಗಿಯಾಗಿತ್ತು. ಊರವರೂ ಕೆಲವರು ಅವರೊಂದಿಗೆ ಸೇರಿಕೊಂಡಿದ್ದರು. ಕಾರು ನಡೆಸಲು ಮಗ ಪ್ರಸನ್ನ ಉಳಿದುಕೊಂಡಿದ್ದ. ಹೆಂಗಸರೆಲ್ಲಾ ಎದ್ದು ಸ್ನಾನ ಮಾಡಿ ಹೊರಡುವ ಸಿದ್ದತೆಯಲ್ಲಿದ್ದರು.

ಮೊದಲೇ ನಿಗದಿಯಾಗಿದ್ದಂತೆ ಹಾಸನದಿಂದ ಬೈಕಿನಲ್ಲಿ ಹೊರಟ ಯುವ ಲೇಖಕರಾದ ಚಿನ್ನೇಹಳ್ಳಿ ಸ್ವಾಮಿ ಹಾಗೂ ಶ್ರೀನಿವಾಸ ಡಿ.ಶೆಟ್ಟಿ ಸೇರಿಕೊಂಡರು. ನಮ್ಮ ತಾಯಿ ಪುಟ್ಟಮ್ಮ, ಹೆಂಡತಿ ಭವಾನಿ ಹಾಗೂ ಮಂಡಿ ನೋವಿನ ನಮ್ಮ ತಂಗಿ ಗೌರಮ್ಮ ಕಾಡಿನವರೆಗೂ ನಡೆಯುವಂತಿರಲಿಲ್ಲ. ಅವರನ್ನೂ ಸಣ್ಣ ಮಕ್ಕಳನ್ನೂ ತೊಡಮನ ಹರೆ ಇಲ್ಲಿಂದ ಒಂದೂವರೆ ಕಿಲೋಮೀಟರ್. ಅಲ್ಲಿ ಇನ್ನೊಬ್ಬ ಅಣ್ಣನ ಮನೆಯಿದೆ. ಅಲ್ಲಿಂದ ಕಾರೆಕಾಯಿ ಹಡ್ಲಿಗೆ ಒಂದೂವರೆ ಕಿಲೋಮೀಟರ್ ನಡೆಯಬೇಕು.

ಇಲ್ಲಿಂದ ತೊಡಮನ ಹರೆಗೆ ದಾರಿ ಹತ್ತಿರವೇ. ಒಂದೆರಡು ಪರ್ಲಾಂಗ್ ಕುಂಬ್ರಿ ಗಂಡಿಯನ್ನು ಕಡಿದಾಗ ಇಳಿದರೆ ಕಡ್ಲೆಹಳ್ಳ ಸಿಕ್ಕುತ್ತದೆ. ಅದನ್ನು ದಾಟಿದರೆ ಏರು ದಾರಿ ಶುರು. ವಳ್ಳಳ್ಳಿಯಮ್ಮನ ಬನದ ಓಣಿಯನ್ನು ದಾಟಿದರೆ ಕಡಿದಾಗಿ ತಪ್ಪಲು ಗಂಡಿ. ತಳದಲ್ಲಿ ನಿಂತು ತಲಪಬೇಕಾದ ತುದಿಯನ್ನು ನೋಡಿದರೆ ಹೊಸಬರಿಗಂತೂ ಭಯವಾಗದೇ ಇರದು. ಮಳೆಗಾಲದಲ್ಲೂ ಈ ದಾರಿಯಲ್ಲಿ ಚಿಕ್ಕಂದಿನಿಂದಲೂ ತಲೆ ಮೇಲೆ ಹೊರೆ ಹೊತ್ತು ಏರಿಳಿದು ಅಭ್ಯಾಸವಿದ್ದ ನಮಗೆ ಈ ದಾರಿ ಸಾಮಾನ್ಯ. ಹಾಡ್ಲಹಳ್ಳಿಯಿಂದ ತೊಡಮನಹರೆಗೆ ಟ್ರಾಕ್ಟರ್, ಜೀಪು, ಪಿಕ್ಅಪ್ ಮುಂತಾದ ವಾಹನಗಳು ಹೋಗಲು ಅನುಕೂಲವಾಗುವಂತೆ ಈಚೆಗೆ ಒಂದು ಮಣ್ಣು ರಸ್ತೆ ಮಾಡಿಕೊಂಡಿದ್ದಾರೆ. ಕಳೆದ ಮಳೆಗಾಲದಲ್ಲಿ ಮಣ್ಣು ಕುಸಿದು ಗುಂಡಿಬಿದ್ದು ವಾಹನಗಳ ಓಡಾಟಕ್ಕೆ ಯೋಗ್ಯವಾಗಿರಲಿಲ್ಲ. ಆದರೆ ವಿದಾನ ಸಭೆಯ ಚುನಾವಣೆ ಬಹಳ ಸಮೀಪವಿರುವುದರಿಂದ ಜೆಸಿಬಿ ತಂದು ಮಣ್ಣು ಹರಡಿಸಿದ್ದಾರೆ. ನಿಧಾನಕ್ಕೆ ಕಾರು ಹೋಗಬಹುದು ಎಂದು ಅಣ್ಣ ಹೇಳಿದ್ದ. ಆಗಡಿವಾಡದ ಹಾದಿಯಲ್ಲಿ ನಡೆಯಲಾರದವರು ಕೆಲವರು ಇದ್ದುದರಿಂದ ತೊಡಮನಹರೆಯವರೆಗೂ ಕಾರಿನಲ್ಲೇ ಹೋಗುವುದೆಂದು. ತೀರ್ಮಾನವಾಯಿತು.

ಆಗಲೇ ಸಮಸ್ಯೆ ಉದ್ಭವವಾದದ್ದು. ಹಾಸನದಿಂದ ಬಂದವರಿಗೆ ಬೈಕಿದೆ. ನಾವು ಇರುವವರು ಸಣ್ಣ ಮಕ್ಕಳಲ್ಲದೆ ಹನ್ನೆರಡು ಜನ. ಓಮ್ನಿಯ ಕೆಪಾಸಿಟಿ ಎಂಟು. ಹೆಚ್ಚೆಂದರೆ ಜೊತೆಗೆ ಒಂದೆರಡು ಸಣ್ಣ ಮಕ್ಕಳನ್ನು ಕೂರಿಸಿಕೊಳ್ಳಬಹುದು ಅಷ್ಟೇ. ಈ ಕಚ್ಛಾ ರಸ್ತೆಯಲ್ಲಿ ಅದಕ್ಕಿಂತ ಹೆಚ್ಚು ಇನ್ನೇನು ಸಾಧ್ಯ. ಪ್ರಸನ್ನ ಕಾರು ಚಾಲೂ ಮಾಡಿ ನಿಲ್ಲಿಸಿದ. ನಡೆಯಲಾರದವರನ್ನೆಲ್ಲಾ ಹತ್ತಿಸಿ ಕೂರಿಸಿಲಾಯಿತು. ಇನ್ನು ಮೂರು ಜನ ಯಾರು? ಕೆಳಗಿದ್ದವರು ಯಾರೂ ಅವಕಾಶ ಬಿಟ್ಟು ಕೊಡುವಂತೆ ತೋರುತ್ತಿಲ್ಲ. ಒಬ್ಬರ ಮುಖ ಒಬ್ಬರು ನೋಡುತ್ತಾ ಹಾಗೆಯೇ ನಿಂತಿದ್ದಾರೆ. ಆಕಡೆ ಮೂರು ಜನ. ಈ ಕಡೆ ನಾಲ್ಕು ಜನ ಎರಡು ಗುಂಪಾಗಿ ನಿಂತೇ ಇದ್ದಾರೆ. ಸಮಯ ಜಾರ ತೊಡಗಿತು ಯಾರು ಹತ್ತಬೇಕೆಂದು ನಾನು ತೀರ್ಮಾನ ಹೇಳುವಂತಿಲ್ಲ. ಇದನ್ನು ಬಗೆ ಹರಿಸುವ ಬಗೆ ಹೇಗೆ! ಯೋಚಿಸುತ್ತಾ ಕೂತಿದ್ದೆ. ಅಷ್ಟು ಜನರಿಗೆ ರಾತ್ರಿಯೆಲ್ಲಾ ಆತಿಥ್ಯ ನೀಡಿ, ತೋಟದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿ ಸುಸ್ತಾಗಿದ್ದ ನಮ್ಮ ಅತ್ತಿಗೆ ತಮಗೊಂದು ಸೀಟು ದೊರೆಯುತ್ತದೆಂದು ಸಹಜವಾಗಿಯೇ ಭಾವಿಸಿದ್ದರೆಂದು ತೋರಿತು. ಸ್ವಲ್ಪ ಹೊತ್ತು ನೋಡಿದರು. ಯಾರೂ ಕದಲುವಂತೆ ತೋರಲಿಲ್ಲ. ಮಾತನಾಡದೆ ಓಣಿ ಇಳಿದು ದುಡು ದುಡು ಹೊರಟೇ ಬಿಟ್ಟರು. ಅವರೊಂದಿಗೆ ನಿಂತಿದ್ದ. ಇಬ್ಬರು ಹುಡುಗಿಯರೂ ವಿಧಿಯಿಲ್ಲದೆ ಅವರನ್ನು ಹಿಂಬಾಲಿಸಿದರು. ಇನ್ನುಳಿದ ನಾಲ್ವಾರು ಹೇಗೋ ಕಾರೊಳಗೆ ತೂರಿಕೊಂಡರು.

ಕಾರೊಳಗೆ ಒಂಬತ್ತು ಜನ. ಮೂರು ಮಕ್ಕಳು! ಮಣ್ಣಿನ ರಸ್ತೆಯೇನೂ ಕಾರಿಗೆ ಯೋಗ್ಯವಾಗಿರಲಿಲ್ಲ. ರಿಪೇರಿಯ ಕೆಲಸ ಚುನಾವಣೆಯ ಮುಂಚಿನ ಕಣ್ಣೊರೆಸುವ ತಂತ್ರ ಎಂಬುದು ಎಂತವರಿಗೂ ಅರ್ಥವಾಗುವಂತಿತ್ತು. ಮುಚ್ಚಿ ಹೋಗಿದ್ದ ಚರಂಡಿಯ ಮಣ್ಣನ್ನೇ ಪೂರ್ತಿ ಗೋರಿ ಹಾಕಿದ್ದರೂ ಎಷ್ಟೋ ಚನ್ನಾಗಿರುತ್ತಿತ್ತು. ರಸ್ತೆಯಿಂದೆದ್ದ ಕಲ್ಲುಗಳಾದರೂ ಮುಚ್ಚಿ ಕೊಳ್ಳುತ್ತಿದ್ದವು. ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು ಎಂಬ ಗಾದೆಯಂತೆ ನಮ್ಮ ಕಾರು ಒಂದೂವರೆ ಕಿಲೋಮೀಟರ್ನ ತೊಡಮನಹರೆ ತಲಪಲು ಬೆಟ್ಟದ ಓರೆಯನ್ನು ಬಳಸುತ್ತಾ ಏಳೆಂಟು ಕಿಲೋಮೀಟರ್ ಸಾಗಬೇಕಾಗಿತ್ತು.ಊರಿನಿಂದ ನೇರ ಹೊರಟ ಕಾರು ಇನ್ನೇನು ವಳಲಹಳ್ಳಿ ತಲಪಿತು ಎಂದು ಕೊಳ್ಳುವಷ್ಟರಲ್ಲಿ ಎಡಕ್ಕೆ ಬೊಬ್ಬನಹಳ್ಳಿಯ ಕಡೆಹೊರಳಿ ಕೊಂಡಿತು.

ಎಡಕ್ಕೆ ಬೆಟ್ಟ ಬಲಕ್ಕೆ ಕಣಿವೆಯ ಪ್ರದೇಶದಲ್ಲಿ ಗದ್ದೆಗಳು. ಗದ್ದೆಯಾಚೆಗೆ ಕಾಡಿನ ನಡುವೆ ಅಲ್ಲ್ಲಿ ಕಾಣುವ ಊರ ಮನೆಗಳು. ಕಾರು ನಿಧಾನವಾಗಿ ಚಲಿಸುತ್ತಿದ್ದುದರಿಂದ ಆ ದೃಶ್ಯಾವಳಿಯ ಸೌಂದರ್ಯವನ್ನು ಆಸ್ವಾದಿಸಲು ಅನುಕೂಲವಾಗಿತ್ತು. ಸ್ವಾಮಿಯ ಬೈಕು ಕಾರನ್ನೇ ಹಿಂಬಾಲಿಸಿ ಬರುತ್ತಿತ್ತು. ಹೊಸ ಪರಿಸರದಲ್ಲಿ ಬಯಲು ನಾಡಿನಿಂದ ಬಂದ ಅವರಿಬ್ಬರೂ ಉಲ್ಲಾಸಭರಿತರಾಗಿದ್ದರು. ಮಲೆನಾಡಿನಲ್ಲಿ ಬೈನೆ ಸೇಂದಿಯ ರುಚಿನೋಡಬೇಕೆಂದು ಅವರು ಮಾತನಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೆ. ಹಾಗಾಗಿ ನಾನು ದಾರಿಯ ಬದಿಯಲ್ಲಿ ಅಲ್ಲಲ್ಲಿ ಸಿಗುವ ಮನೆಗಳಲ್ಲಿ ಸಾಲೆ ಕುರುಡ, ದ್ಯಾವಪ್ಪ, ರಾಜ ಯಾರಾದರೂ ಕಾಣುತ್ತಾರೊ ಗಮನಿಸುತ್ತಿದ್ದೆ. ಸೇಂದಿ ಇಳಿಸುವ ಇವರೆಲ್ಲಾ ನನಗೆ ಮೊದಲಿನಿಂದಲೂ ಪರಿಚಿತರು. ಮೊದಲೆಲ್ಲಾ ಕೆಲವು ಬಾರಿ ಸ್ನೇಹಿತರೊಂದಿಗೆ ಹೋಗಿ ಎಷ್ಟೇ ಹೊತ್ತಿನಲ್ಲಿ ಕೇಳಿದರೂ ಒಂದೆರಡು ಬಾಟ್ಲಿಯಾದರೂ ಸೇಂದಿ ಹೊಂದಿಸಿಕೊಟ್ಟವರೆ!

ಈ ಬಾರಿಯೂ ಅವರೆಲ್ಲಾದರೂ ಸಿಕ್ಕರೆ ಹಾಸನದ ಯುವಕರಿಗೆ ಸೇಂದಿಯ ರುಚಿ ತೋರಿಸಬಹುದು ಅಂದುಕೊಂಡೆ. ಕಾರು ಬಕ್ಕುಳನಹರೆ ದಾಟಿ ಕಾಫಿ ತೋಟದ ಮಧ್ಯೆ ನುಸುಳಿ ಉತ್ತೊಲ ತಲಪಿತು. ಅಲ್ಲೆ ಎಡಬದಿಯ ಕಾಡಂಚಿನಲ್ಲೇ ರಾಜನ ಮನೆ. ಅವನ ಮನೆಯ ಮುಂದಿನ ದಿಬ್ಬದಲ್ಲಿ ನಾನು ಹುಡುಕುತ್ತಿದ್ದ ಮೂವರೂ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದಾರೆ. ಹುಡುಕುತ್ತಿದ್ದ ಬಳ್ಳಿ ಕಾಲಿಗೇ ಎಡವಿದಂತಾಯಿತು. ಕಾರು ನಿಲ್ಲಿಸಿ ಕೆಳಗಿಳಿದೆ. ಅವರು ನನ್ನನ್ನು ನೋಡಿ ‘ಏನು ಈ ಕಡೆ?’ ಎಂದರು. ಮೊದಲಿನಂತೆ ಮಾತಿನಲ್ಲಿ ಹೆಚ್ಚಿನ ಉತ್ಸಾಹವನ್ನೇನೂ ತೋರಲಿಲ್ಲ. ನಾನೇ ಬಾಯಿ ಬಿಟ್ಟು ಕೇಳಿದೆ. ಓ ಎಲ್ಲಿ ಸಿಕ್ಕುತ್ತೆ ನಿಮಗೆ ಇಷ್ಟೊತ್ತಿನಲ್ಲಿ? ಅಲ್ಲೆ ಟಾರ್ ರೋಡಿನ ಸೈಡಲ್ಲೆ ಅಡ್ಡೆ ಮಾಡಿದೀವಿ. ಹೆತ್ತೂರು ಕಡೆಯಿಂದ ಎಲ್ಲಾ ಜನ ಬರ್ತಾರೆ. ಬೆಳಗ್ಗೆ ಏಳೂವರೆಗೆಲ್ಲಾ ಸೇಂದಿ ಮುಗಿದು ಹೋಗುತ್ತೆ’ ಎಂದ ರಾಜ. ಮಿಕ್ಕವರೂ ಅವನ ಮಾತಿಗೆ ಸಹಮತ ತೋರುವಂತೆ ತಲೆ ಅಲ್ಲಾಡಿಸಿದರು. ನಾಲ್ಕು ಮಾರು ಮುಂದೆ ಹೋಗುವಷ್ಟರಲ್ಲಿ ಊರಕಡೆಯಿಂದ ಬರುವ ಕಾಲುದಾರಿ ಈ ಮಣ್ಣು ರಸ್ತೆಗೆ ಕೂಡಿಕೊಂಡಿತ್ತು. ಅಲ್ಲಡ ಪಕ್ಕದ ಮರದ ಬುಡದಲ್ಲಿ ನಮ್ಮ ಅತ್ತಿಗೆ ತಮ್ಮ ಜೊತೆಯವರೊಂದಿಗೆ ಕುಳಿತಿದ್ದರು.

ಅವರ ಬಳಿ ಕಾರು ನಿಧಾನಿಸಿದೆವು. ‘ಇಷ್ಟು ಹೊತ್ತು ಬೇಕಾ ನಿಮ್ಮಕಾರು ಬರೋದಕ್ಕೆ. ನಾವು ಆಗಲೇ ನಡಕೊಂಡು ಬಂದು ತಲಪಿ ಅರ್ಧಗಂಟೆ ಆಯಿತು. ಅತ್ತಿಗೆ ಹಂಗಿಸುವ ರೀತಿ ಹೇಳಿದರು. ಎದುರಿಗೇ ತೊಡಮನಹರೆ ಬಯಲು. ಬಲಕ್ಕೆ ದಿಣ್ಣೆಯಂತಹಾ ಜಾಗದಲ್ಲಿ ಅಣ್ಣನ ಮನೆ. ಅಲ್ಲಿ ನಿಲ್ಲಲ್ಲು ನಮಗೆ ಹೆಚ್ಚು ಸಮಯವಿರಲಿಲ್ಲ. ನಡೆಯಲಾರದವರನ್ನೂ ಅಣ್ಣನ ಮನೆಯಲ್ಲಿ ಬಿಟ್ಟು ಕಾರನ್ನು ವಿಶಾಲವಾಗಿ ಹರಡಿಕೊಂಡಿದ್ದ ಒಂದು ಮರದ ಬುಡದಲ್ಲಿ ನಿಲ್ಲಿಸಿದೆವು. ಈಗ ಶುರು ನಮ್ಮ ನಿಜವಾದ ಕಾರೆಕಾಯಿಹಡ್ಲು ಯಾತ್ರೆ! ಕಾಲು ದಾರಿಯಲ್ಲಿ ಸ್ವಲ್ಪದೂರ ಸಾಗುವಷ್ಟರಲ್ಲಿ ಹನ್ನೆರಡುಗದ್ದೆ ಹಳ್ಳ ಎದುರಾಯಿತು. ಮರದ ಮೆಟ್ಟಿನ ಮೇಲೆ ಅದನ್ನು ದಾಟುವಾಗ ಪುಟ್ಟಮ್ಮ ನಮ್ಮ ಜೊತೆಗಿರಬೇಕಾಗಿತ್ತು ಎನಿಸಿತು. ಯೌವನ ಕಾಲದಲ್ಲಿ ತನ್ನ ತಂಗಿಯರನ್ನು ಕಟ್ಟಿಕೊಂಡು ತೋಟಮಾಡುವಾಗ ಈ ದಾರಿಯಲ್ಲಿ ನಡೆದ ಒಂದೊಂದು ಹೆಜ್ಜೆಗೂ ಒಂದೊಂದು ವಿಭಿನ್ನ ಅನುಭವವನ್ನು ಮೆಲುಕು ಹಾಕದೇ ಇರುತ್ತಿರಲಿಲ್ಲ. ಎನಿಸಿತು. ಮುಂದೆ ಇನ್ನೊಂದು ಕಿಲೋಮೀಟರ್ ಅಷ್ಟೇ. ಒಂದು ಬೆಟ್ಟ ಹತ್ತಿ ಎಮ್ಮೆ ಗುಂಡಿ ತಲಪಿದರೆ ನಮ್ಮ ತೋಟದ ಅಂಚು ತಲಪಿದಂತಯೇ! ಒಬ್ಬರನ್ನೊಬ್ಬರು ಹುರಿದುಂಬಿಸುತ್ತಾ ಲಗುಬಗೆಯಿಂದ ನಡೆಯ ತೊಡಗಿದೆವು. ಬೆಟ್ಟ ಏರಿ ಎಮ್ಮೆಗುಂಡಿ ಹರೆ ತಲುಪಿದಾಗ ನಮಗೆ ಎದುರಿಗೆ ವಿಶಾಲವಾದ ಗಿರಿಶ್ರೇಣಿಗಳು ತೆರೆದುಕೊಂಡೆವು.

ಏರು ದಾರಿಯಲ್ಲಿ ಬಂದು ಆಯಾಸಗೊಂಡಿದ್ದ ಎಲ್ಲ್ರ ಮನಸ್ಸು ಆ ತೆರೆದ ವಾತಾವರಣದಲ್ಲಿ ಪುಲಕಗೊಂಡಂತಾಗಿತ್ತು. ಅಲ್ಲಿಂದ ಯಾರೂ ಹೆಜ್ಜೆ ಕೇಳಲು ಇಷ್ಟಪಡಲಿಲ್ಲ. ಅವರೆಲ್ಲರ ಮನದಾಸೆ ನನಗೆ ಅರ್ಥವಾಯಿತು. ‘ಸರಿ. ಒಂದು ಹತ್ತು ನಿಮಿಷ ಇಲ್ಲಿ ಕೂತು ಹೋಗೋಣ’ ಎನ್ನುತ್ತಾ ಪ್ರಕೃತಿಯ ವಿಪುಲ ಸೌಂದರ್ಯರಾಶಿಯನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತಹಾ ಸ್ಥಳಕ್ಕೆ ಕರೆದೊಯ್ದೆ. ಕೆಲವರು ಕುಳಿತು, ಇನ್ನ ಕೆಲವರು ಮಲಗಿ, ಮತ್ತೆ ಕೆಲವರು ಅರೆ ಮಲಗಿದ ಭಂಗಿಯಲ್ಲಿ ಕುಳಿತು ಪ್ರಕೃತಿ ವೀಕ್ಷಣೆಯಲ್ಲಿ ತೊಡಗಿಕೊಂಡರು.

‍ಲೇಖಕರು avadhi

June 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This