ಕಾಡು ಪ್ರಾಣಿ ನಾಡಿಗೆ ಬಂದ್ರೆ…!

ವಿಲಾಸ ವಿಳಾಸವಿಲ್ಲದ ಸ್ನೇಹಜೀವಿಯ ಕುರಿತು

ಎಸ್ ಎಮ್ ನಟರಾಜ

ನಾನು ಪದವಿ ಓದುತ್ತಿರುವಾಗ ನನ್ನ ಹಾಸ್ಟೆಲಿನ ರೂಮಿನಲಿ ಟೇಬಲ್ ನ ಡ್ರಾಯರ್ ಒಳಗೆ ಒಂದು ದಿನ ನನಗಾಗಿ ಪತ್ರವೊಂದು ಕಾಯುತ್ತಾ ಕುಳಿತಿತ್ತು. ಪತ್ರದ ಮೇಲಿದ್ದ ದುಂಡಾದ ಕೈ ಬರಹ ನನಗೆ ಬಹಳ ಚಿರಪರಿಚಿತ. ಪಕ್ಕದ ರೂಮಿನಲ್ಲೇ ಇರುವ ಹುಡುಗ ನನಗಾಗಿ ಹೀಗೊಂದು ಪತ್ರ ಬರೆದಿಡುವ ಅವಶ್ಯಕತೆ ಏನಿತ್ತು ಎಂದು ಪತ್ರ ತೆಗೆದು ನೋಡಿದಾಗ ನನಗೆ ಅಚ್ಚರಿಯಾಗಿತ್ತು. ಪತ್ರದಲಿ ತನ್ನ ಬದುಕಿನ ವೈಫಲ್ಯತೆಗಳ ಬಗ್ಗೆ ಪ್ರಬುದ್ಧವಾಗಿ ಬರೆದು ಬದುಕು ಸಾಕೆನಿಸಿದೆ ನಾನಿನ್ನು ಹೊರಡುವೆ ಎನ್ನುವಂತಹ ಮಾತನಾಡಿದ್ದ. ಜೊತೆಗೆ ನನ್ನೊಡನೆ ಕಳೆದ ಅಷ್ಟು ದಿನಗಳನ್ನು ನೆನೆದು ಆ ದಿನಗಳಲ್ಲಿ ಸಾಥ್ ಕೊಟ್ಟಿದ್ದಕ್ಕಾಗಿ ವಂದಿಸಿ ನೀವೊಂದು ದಿನ ಬರಹಗಾರರಾಗಿ ಒಳ್ಳೆಯ ಹೆಸರು ಮಾಡಿ ಎಂದು ಪತ್ರವನು ಮುಗಿಸಿದ್ದ. ಸಾಯಲು ಇಚ್ಚಿಸುವವರು ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಡುವುದನ್ನು ಬರೀ ಕೇಳಿದ್ದೆ. ಆದರೆ ಅಂತಹುದೊಂದು ಅಧ್ಬುತವಾದ ಪತ್ರವನ್ನು ಬರೆದಿಡುತ್ತಾರೆಂದು ನನಗೆ ಗೊತ್ತಿರಲಿಲ್ಲ. ಅವನ ಪತ್ರವನ್ನೊಮ್ಮೆ ಓದಿ ಮನಸ್ಸಿನಲ್ಲೇ ನಕ್ಕಿದ್ದೆ ಜೊತೆಗೆ ಒಂಚೂರು ದಿಗಿಲುಗೊಂಡಿದ್ದೆ ಸಹ. ಆ ರಾತ್ರಿ ದೇವರಲಿ ಪ್ರಾರ್ಥಿಸಿ ಇದೊಂದು ರಾತ್ರಿ ಅವನು ಏನನ್ನೂ ಮಾಡಿಕೊಳ್ಳದಿರಲಿ ಎಂದುಕೊಳ್ಳುತ್ತಾ ನಿದ್ದೆಗೆ ಜಾರಿದ್ದೆ. ಅವನು ಬಹುಶಃ ತನ್ನ ಊರಿಗೆ ಹೋಗಿರುತ್ತಾನೆಂದು ನಂಬಿ ಮಾರನೆಯ ದಿನ ಬೆಂಗಳೂರಿನಿಂದ ಬಸ್ ಹಿಡಿದು ಚಿಂತಾಮಣಿಯ ಕಡೆಗೆ ತೆರಳಿದ್ದೆ. ಚಿಂತಾಮಣಿ ತಲುಪಿದ ಮೇಲೆ ಮತ್ತೊಂದು ಬಸ್ ಹಿಡಿದು ಒಂದು ಹಳ್ಳಿಯ ಗೇಟ್ ಬಳಿ ಇಳಿದಿದ್ದೆ. ಆ ಗೇಟಿನಿಂದ ಅವನ ಊರು ಒಂದೆರಡು ಕಿ ಮೀ ದೂರದಲ್ಲಿತ್ತು. ಬಸ್ಸಿನಿಂದ ಇಳಿದ ಅವನ ಊರಿನವರ ಜೊತೆ ಮಾತನಾಡುತ್ತಾ ಕಾಲು ದಾರಿಯಲ್ಲಿ ನಡೆದು ಹೊಲ ಗದ್ದೆ ಕೆರೆ ಕುಂಟೆಗಳ ದಾಟಿ ಅವನ ಊರು ತಲುಪಿ ಅವನ ಮನೆ ಮುಂದೆ ನಿಂತಿದ್ದೆ. ಅವನ ಮನೆಯ ಹತ್ತಿರವೇ ಇರುವ ಶಾಲೆಯ ಮುಂದೆ ಕುಳಿತ್ತಿದ್ದಾನೆ ಎಂಬ ವಿಷಯ ತಿಳಿದು ಅತ್ತ ಕಣ್ಣು ಹಾಯಿಸಿದಾಗ ಮಾವಿನ ಕಾಯಿ ತಿನ್ನುತ್ತಾ ನಿಂತಿದ್ದವನು ನನ್ನ ನೋಡಿ ಖುಷಿಗೊಂಡಿದ್ದ. “ಏನ್ ಗುರು ಅಲ್ಲಿ ನೋಡಿದ್ರೆ ಆ ತರಹ ಲೆಟರ್ ಬರೆದಿಟ್ಟು ಇಲ್ಲಿಗೆ ಬಂದು ಮಾವಿನ ಕಾಯಿ ತಿನ್ನುತ್ತಾ ಕುಳಿತ್ತಿದ್ದೀಯ” ಎಂದು ನಕ್ಕಿದ್ದೆ. “ಅಡ್ರೆಸ್ ಹೆಂಗ್ ಕಂಡು ಹಿಡಿದ್ರಿ” ಎಂದು ನಗುತ್ತಾ ನನಗೆ ಚಚ್ಚಿದ ಮಾವಿನ ಕಾಯಿಯೊಂದನು ಕೈಗಿತ್ತಿದ್ದ. ಆ ಸ್ಕೂಲಿನ ಪಕ್ಕದಲ್ಲೇ ಇದ್ದ ಮರದ ಕೆಳಗಿನ ಕಲ್ಲು ಬೆಂಚಿನ ಮೇಲೆ ಕುಳಿತು ಒಂದಷ್ಟು ಹೊತ್ತು ಆತ್ಮೀಯವಾಗಿ ಮಾತನಾಡಿ ನಂತರ ಅವನ ಮನೆಯಲ್ಲಿ ಊಟಕ್ಕೆ ಹೊರಟಿದ್ದೆವು. ಬಸ್ಸಾರು ಮುದ್ದೆ ತಿಂದು ಮತ್ತೆ ಅದೇ ಮರದ ಕೆಳಗೆ ಮಾತಿಗೆ ಇಳಿದಿದ್ದೆವು. ಉರಿ ಬಿಸಿಲು ಒಂಚೂರು ತಂಪಾಗುತ್ತಿದ್ದಂತೆ ಮುದ್ದೆ ತಿಂದ ಕಾರಣ ಪ್ರಯಾಣದ ಆಯಾಸಕ್ಕೆ ನಿದ್ದೆ ಬಂದಂತಾಗಿ ನಾನು ಹಾಗೆಯೇ ಕಲ್ಲು ಬೆಂಚಿನ ಮೇಲೆ ಕಣ್ಮುಚ್ಚಿದ್ದೆ. ನನ್ನ ಪಕ್ಕ ಅವನು ಮೌನವಾಗಿ ಕುಳಿತ್ತಿದ್ದ. ಒಂದಷ್ಟು ಹೊತ್ತಿನ ನಂತರ ನಿದ್ದೆಯಿಂದ ಎದ್ದು ಮತ್ತೆ ಅವನ ಮೌನ ಮುರಿದು ಮಾತಿಗೆ ಎಳೆದಿದ್ದೆ. “ನನ್ನ ಕೈಯಲ್ಲಿ  ರಾಗಿ೦ಗ್  ಮಾಡಿಸಿಕೊಂಡು ಊರಿಗೆ ಹೊರಟು ಬಿಡುತ್ತೇನೆ ಎಂದು ಅತ್ತಿದ್ದ ದಿನ ಜ್ಞಾಪಕವಿದೆಯೇ” ಎಂದಿದ್ದಕ್ಕೆ. “ಈಗ ನಾನೇ ನಿಮಗೆ ಬೇಕಾದ್ರೆ ರಾಗಿ೦ಗ್ ಮಾಡ್ತೇನೆ” ಎಂದು ನಕ್ಕಿದ್ದ. “ಅಂತಹ ರಾಗಿ೦ಗ್ ಮಾಡುವಷ್ಟು ದೈರ್ಯ ಇರೋನು ಸಣ್ಣ ಪುಟ್ಟ ವಿಷಯಗಳಿಗೆ ಈ ರೀತಿ ತಲೆ ಕೆಡಿಸಿಕೊಂಡು ಆ ತರಹ ಸಾಯುವ ಮಾತನಾಡಿದ್ದೀಯಲ್ಲ” ಎಂದು ಕೆಣಕಿದ್ದೆ. “ಆ ಟೈಮ್ ನಲ್ಲಿ ಹಾಗೆ ಅನ್ನಿಸ್ತು. ಎಲ್ಲಿಟ್ಟಿದ್ದೀರ ಆ ಲೆಟರ್. ಮೊದಲು ಆ ಲೆಟರ್ ಹರಿದು ಹಾಕ್ರಿ” ಎಂದು ನನ್ನ ಜೇಬಿಗೆ ಕೈ ಹಾಕಿದ್ದ. “ಲೆಟರ್ ಹಾಸ್ಟೆಲ್ ನ ರೂಮಿನಲ್ಲಿದೆ ಬಾ ನೀನೇ ಹರಿದು ಬಿಸಾಕುವಂತೆ” ಎಂದಿದ್ದೆ. ಅವನು ಒಂದೆರಡು ದಿನದ ನಂತರ ಮತ್ತೆ ಬೆಂಗಳೂರಿಗೆ ವಾಪಾಸ್ಸಾಗುವೆನೆಂದು ಮಾತಿತ್ತ ಮೇಲೆ ಸಂಜೆಯಾಗುತ್ತಿದ್ದಂತೆ ಹೊರಡುವೆನೆಂದು ಎದ್ದಿದ್ದೆ. ನನ್ನೊಡನೆ ಚಿಂತಾಮಣಿಯವರೆಗೂ ಬಂದು ಜ್ಯೂಸ್ ಕುಡಿಸಿ ಬಸ್ ಹತ್ತಿಸಿದ್ದ. ಇವನು ಇನ್ಯಾವತ್ತಿಗೂ ಸಾಯುವ ಸಾಹಸ ಮಾಡಲಾರ ಎಂದುಕೊಳ್ಳುತ್ತಾ ಬಂದ ಕೆಲಸ ಮುಗಿಸಿದ್ದರಿಂದ ಬಸ್ಸಿನಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಿಕೊಂಡು ಬೆಂಗಳೂರು ತಲುಪಿದ್ದೆ. ಒಂದೆರಡು ದಿನಗಳ ನಂತರ ಊರಿನಿಂದ ಬಂದವನೇ ಎಂದಿನಂತೆ ರಾತ್ರಿ ಊಟದ ನಂತರ ಲಾಂಗ್ ವಾಕ್ ನಲ್ಲಿ ನನ್ನ ಜೊತೆಯಾಗಿದ್ದ. ಅವನಲ್ಲಿ ಅವನಿಗೆ ಗೊತ್ತಿಲ್ಲದ ಒಬ್ಬ ಅಧ್ಬುತವಾದ ಬರಹಗಾರನಿದ್ದ. ಒಬ್ಬ ವಾಗ್ಮಿಯಿದ್ದ. ಕನ್ನಡ ಮತ್ತು ತೆಲುಗು ಎರಡು ಭಾಷೆಗಳ ಒಳ್ಳೆಯ ಹಿಡಿತವಿತ್ತು. ಅವನೊಬ್ಬ ಒಳ್ಳೆಯ ಫಾಸ್ಟ್ ಬೌಲರ್ ಎಂದು ನನಗೆ ಗೊತ್ತಿರಲಿಲ್ಲ. ಅವನು ಉತ್ತಮವಾಗಿ ಬೌಲಿಂಗ್ ಮಾಡಿದ್ದರಿಂದ ಅವನ ತಂಡ ಚಾಂಪಿಯನ್ ಆಯಿತು ಎಂದು ಕೇಳಿ ಖುಷಿಪಟ್ಟಿದ್ದೆ. ಅವನಿಗೆ ತುಂಬಾ ಬೇಜಾರಾದಾಗ ಬೀದಿ ನಾಯಿಗಳಿಗೆ ಬಿಸ್ಕತ್ ಹಾಕುತ್ತಿದ್ದ. ಇವನು ಒಂದು ಸಿಳ್ಳೆ ಹಾಕಿದರೆ ನಮ್ಮ ಹಾಸ್ಟೆಲ್ ನ ಸುತ್ತ ಮುತ್ತ ಇರುವ ನಾಯಿಗಳೆಲ್ಲಾ ಇವನ ಹತ್ತಿರ ಬಂದು ಬಾಲ ಅಲ್ಲಾಡಿಸುತ್ತಿದ್ದವು. ಅವುಗಳಿಗೆ ಬಿಸ್ಕತ್ ನೀಡಿ ಇವನು ತೋರಿದ್ದ ಪ್ರೀತಿಯ ಕಾರಣ ಆ ನಾಯಿಗಳು ಇವನನ್ನು ಇನ್ನಿಲ್ಲದಂತೆ ಪ್ರೀತಿಸಿದ್ದವು. ನಿನ್ನಲ್ಲಿ ಒಳ್ಳೆ ಬರೆಯೋ ಟ್ಯಾಲೆಂಟ್ ಇದೆ ಏನಾದ್ರು ಬರೆಯೋ ಎಂದಾಗ ಕಾಲೇಜಿನ ವಾರ್ಷಿಕ ಸಂಚಿಕೆಗೆ ಯುವ ಜನರ ಸಮಸ್ಯೆಗಳ ಕುರಿತು ಲೇಖನವೊಂದನು ಬರೆದಿದ್ದ. ಖುಷಿಯ ಸಂಗತಿಯೆಂದರೆ ಕಾಲೇಜಿನ ವಾರ್ಷಿಕೋತ್ಸವದ ಸಮಯದಲ್ಲಿ ಬೆಸ್ಟ್ ಬೌಲರ್, ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯ ಜೊತೆ ಜೊತೆಗೆ ನನಗೆ ಅಚ್ಚರಿ ಮತ್ತು ಖುಷಿಯಾಗುವಂತೆ ಈತ ಕಾಲೇಜಿನ ವಾರ್ಷಿಕ ಸಂಚಿಕೆಗೆ ಬರೆದಿದ್ದ ಲೇಖನಕ್ಕೆ ವರ್ಷದ ಅತ್ಯುತ್ತಮ ಲೇಖನ ಪ್ರಶಸ್ತಿ ಬಂದಿತ್ತು. ನನಗಂತೂ ವಿಪರೀತ ಖುಷಿಯಾಗಿತ್ತು. ಹೀಗೆ ಈ ಹುಡುಗನ ಯಶಸ್ಸನ್ನು ಕಣ್ಣು ತುಂಬಿಕೊಂಡು ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ನನ್ನ ಪದವಿ ಮುಗಿದಿತ್ತು. ಕೆಲಸದ ನಿಮಿತ್ತ ನಾನು ಬೆಂಗಳೂರು ಬಿಟ್ಟು ಬೇರೆಡೆಗೆ ಹೋಗಬೇಕಾಯಿತು. ನಂತರ ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕದಿಂದ ಕೊಲ್ಕತ್ತಾಕ್ಕೆ ಬಂದು ನೆಲೆಸಿದ್ದೆ. ಮೊಬೈಲ್ ಗಳು ಆಗಷ್ಟೇ ಬದುಕಿಗೆ ಎಂಟ್ರಿ ನೀಡುತ್ತಿದ್ದ ಕಾರಣ ಒಂದಿಬ್ಬರು ಗೆಳೆಯರ ಮೊಬೈಲ್ ನಂಬರ್ ಗಳು ಮಾತ್ರ ನನ್ನ ಬಳಿ ಇದ್ದವು. ಅವನ ಊರಿನ ಹೆಸರು ಬಿಟ್ಟರೆ ಅವನ ಯಾವ ಕಾಂಟ್ಯಾಕ್ಟ್ ನಂಬರ್ ಸಹ ನನ್ನ ಬಳಿ ಇರಲಿಲ್ಲ. ಹೀಗೆ ಆರು ವರ್ಷಗಳ ನನ್ನ ಬದುಕಿನಲ್ಲಿ ಅವನು ಆಗಾಗ ನೆನಪಾದರೂ ಎಲ್ಲೂ ಅವನನು ಭೇಟಿಯಾಗುವ ಅವಕಾಶ ಒದಗಿರಲೇ ಇಲ್ಲ. ಎರಡು ವರ್ಷಗಳ ಹಿಂದೆ ಒಂದು ದಿನ ನನ್ನ ಮೊಬೈಲ್ ಗೆ ಕರೆಯೊಂದು ಬಂದಿತ್ತು. ಅತ್ತಲಿನ ಹಲೋ ಎಂಬ ದನಿ ಕೇಳಿಯೇ “ಹೇಳು ಗುರು” ಎಂದಿದ್ದೆ. “ಏನ್ರೀ ನಮ್ಮ ನೆನಪು ಇದೆಯಾ?” ಎನ್ನುತ್ತಾ ಒಂದರೆಕ್ಷಣ ಭಾವುಕನಾಗಿಬಿಟ್ಟಿದ್ದ. “ನಂಬರ್ ಎಲ್ಲಿ ಸಿಕ್ಕಿತು” ಎಂದು ಕುತೂಹಲದಿಂದ ಪ್ರಶ್ನಿಸಿದ್ದೆ. “ಯಾರತ್ರಾನೋ ಗೋಗರೆದು ತೆಗೆದುಕೊಂಡೆ” ಎಂದು ಹೇಳಿದ್ದ. ನಂತರದ ದಿನಗಳಲ್ಲಿ ಆಗಾಗ ಫೋನ್ ಮಾಡ್ತಾ ನಮ್ಮ ಕಷ್ಟ ಸುಖ ಎಲ್ಲವನೂ ಮಾತನಾಡಿಕೊಂಡಿದ್ದೆವು. ತನ್ನ ತಂದೆ ತೀರಿ ಕೊಂಡಿದ್ದು, ಅಣ್ಣ ತೀರಿಕೊಂಡಿದ್ದು, ತಂಗಿಯ ಮದುವೆ ಜವಾಬ್ದಾರಿ, ಅಕ್ಕನ ಸಂಸಾರದ ಕಷ್ಟ, ಅವನ ಸರ್ಕಾರಿ ಕೆಲಸ, ಹಳ್ಳಿಗಳಲ್ಲಿನ ಜೀವನ, ಜಾತಿ ರಾಜಕೀಯ, ಅಮ್ಮನನ್ನು ಬಿಟ್ಟು ಎಲ್ಲಿಯೂ ಹೋಗಲಾರದ ಅವನ ಸ್ಥಿತಿ ಎಲ್ಲವನೂ ಕುರಿತು ಸಿಕ್ಕಾಗಲೆಲ್ಲಾ ಮಾತನಾಡುತ್ತಿದ್ದ. ಒಟ್ಟಿನಲ್ಲಿ ಅವನ ಮಾತು ಕೇಳಿದಾಗಲೆಲ್ಲಾ ಒಬ್ಬ ಜವಾಬ್ದಾರಿ ತುಂಬಿದ ಮನುಷ್ಯನಾಗಿದ್ದಾನೆ ಎನಿಸುತ್ತಿತ್ತು. ಒಂದಷ್ಟು ದಿನವಾದ ಮೇಲೆ ಮನೆಯೊಂದನು ಕಟ್ಟಿಸಿದ. ಸಾಲ ಮಾಡಿಕೊಂಡ. ನಂತರದ ದಿನಗಳಲ್ಲಿ ಒಂಚೂರು ಖಿನ್ನನಾದವನಂತೆ ಕಂಡರೂ ಆಮೇಲೆ ನಾರ್ಮಲ್ ಆದ. ಹಳ್ಳಿಯ ಜೀವನ ಎಂದು ಬೇಸತ್ತುಕೊಂಡಿದ್ದವನಿಗೆ “ನಿಮ್ಮ ಊರಿನಲ್ಲೇ ನೀನೇ ರಾಜ ಕಣೋ ಕ್ಲಾಸ್ ಒನ್ ಆಫೀಸರ್ ಲೆವೆಲ್ ನವರು ನಿಮ್ಮ ಊರಿನಲ್ಲಿ ಯಾರಿದ್ದಾರೆ ಹೇಳು” ಎಂದು ಹೇಳಿದಾಗಲೆಲ್ಲಾ ನನ್ನ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತಿದ್ದ. ಬೇಸರವಾದರೆ ತನ್ನ ಸರ್ಕಾರಿ ಕೆಲಸದ ಜೊತೆ ಜೊತೆಗೆ ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿದ್ದೆ. ನಂತರದ ದಿನಗಳಲ್ಲಿ ಫೋನ್ ಮಾಡುವುದು ಅಪರೂಪವಾದರೂ ಒಮ್ಮೆ ಫೋನ್ ಮಾಡಿ ತಾನು ತೊಡಗಿಕೊಂಡಿರುವ ಎನ್ ಜಿ ಓ ಒಂದರ ಕುರಿತು ಮಾತನಾಡಿದ್ದ. ತಮ್ಮೂರಿನ ಶಾಲೆಯಲ್ಲಿ ಮಕ್ಕಳಿಗೆ ತಟ್ಟೆಗಳನ್ನು ನೀಡಿದ್ದು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಳ್ಳಿಗಳಲ್ಲಿ ಹೂವಿನ ಗಿಡಗಳನ್ನು ನೀಡಿದ್ದು. ಪರಿಸರ ದಿನಾಚರಣೆಯ ಅಂಗವಾಗಿ ಚಿಂತಾಮಣಿಯಲ್ಲಿ ಸಸಿಗಳನ್ನು ನೆಡಿಸಿದ್ದು. ಹೀಗೆ ಸಮಾಜ ಸೇವೆಯ ತನ್ನ ಕೆಲಸಗಳು ಮತ್ತು ತಾನು ತನ್ನ ಗೆಳೆಯರ ಜೊತೆಗೂಡಿ ಸೇರಿಕೊಂಡಿರುವ ಎನ್ ಜಿ ಓ ಬಗ್ಗೆ ಅವನು ಹೇಳುವುದ ಕೇಳಿದಾಗ ಖುಷಿಯಾಗುತ್ತಿತ್ತು. ತನ್ನ ಸಂಬಳದಲ್ಲಿ ಒಂದಷ್ಟು ದುಡ್ಡನ್ನು ಪ್ರತೀ ತಿಂಗಳು ಆ ಎನ್ ಜಿ ಓ ಗಾಗಿ ಮೀಸಲಾಗಿಡುತ್ತಿದ್ದೇನೆ ಎಂದಿದ್ದ. ಅವನ ಸಹಾಯ ಮಾಡುವ ಗುಣ ನನಗೆ ತುಂಬಾ ಮೆಚ್ಚುಗೆಯಾಗಿತ್ತು ಜೊತೆಗೆ ನನಗೆ ಸ್ಪೂರ್ತಿಯಾಗಿತ್ತು. ಹಳ್ಳಿಯ ಬದುಕು ಬೇಸರ ಎಂದುಕೊಂಡೇ ತನ್ನನ್ನು ತಾನು ವಿಧ ವಿಧದ ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡವನು ಬದುಕಿನಲ್ಲಿ ಇನ್ನೂ ಏನನ್ನಾದರೂ ಸಾಧಿಸಬೇಕು ಎನ್ನುವ ತುಡಿತವನ್ನು ಮೈಗೂಡಿಸಿಕೊಳ್ಳುತ್ತಲೇ ಹೋದ. ಅದರ ಪರಿಣಾಮ ಕೆಲವು ದಿನಗಳ ಹಿಂದೆ “ಕೆಎಎಸ್ ಪ್ರಿಲಿಮ್ಸ್ ಪಾಸಾಗಿದೆ” ಎಂದು ಮೆಸೇಜ್ ಅವನ ನಂಬರ್ ನಿಂದ ಬಂದಿತ್ತು. ಖುಷಿಯಾಗಿ “ಕಂಗ್ರಾಟ್ಸ್, ಆಲ್ ದ ವೆರಿ ಬೆಸ್ಟ್” ಎಂದು ಉತ್ತರಿಸಿದ್ದೆ. ಸಾಯಲು ಬಯಸುವವರು ಒಂದು ಉದ್ದದ ಪತ್ರ ಬರೆದರೆ ಪತ್ರ ಮುಗಿಸುವ ವೇಳೆಗೆ ಸಾಯುವ ಆಸೆಯೇ ಇದ್ದಕ್ಕಿದ್ದ ಹಾಗೆ ಮಾಯವಾಗಿಬಿಡುತ್ತದೆ ಎಂದು ಎಲ್ಲೋ ಓದಿದ ನೆನಪು. ಒಮ್ಮೆ ಸಾಯುವ ಮಾತನಾಡಿದ್ದವನು ಹೀಗೆ ಚಂದದ ಬದುಕು ಬದುಕುವ ಅವನ ಕನಸುಗಳ ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಸಾಯುವ ಮಾತನಾಡುವ ಭಾವಜೀವಿಗಳು ನಮ್ಮ ನಡುವೆ ತುಂಬಾ ಜನ ಸಿಗುತ್ತಾರೆ. ಅವರೊಂದಿಗೆ ಒಂದಿಷ್ಟು ಆತ್ಮೀಯವಾದ ಮಾತುಗಳನ್ನಾಡಿದರೆ ಅವರ ಮನದ ಬೇಸರಗಳು ಕರಗಿ ಅವರಲ್ಲಿ ಬದುಕುವ ಆಸೆ ಮತ್ತೆ ಚಿಗುರುತ್ತದೆ. ಅದಕ್ಕೆ ಈ ಗೆಳೆಯನೇ ಒಂದು ಉತ್ತಮ ಉದಾಹರಣೆ. ಕೊನೆಯ ಪಂಚ್ ಫೇಸ್ ಬುಕ್ಕಿನ ಗಂಧ ಗಾಳಿ ಗೊತ್ತಿಲ್ಲದ ಇದೇ ಗೆಳೆಯ ಮೊದಲ ದಿನ ಫೇಸ್ ಬುಕ್ ಉಪಯೋಗಿಸಿ, ಮೊದಲ ಫ್ರೆಂಡ್ ರಿಕ್ವೆಸ್ಟ್ ನನಗೆ ಕಳಿಸಿದ್ದ. ಮಾರನೆಯ ದಿನ ಅವನ ಪ್ರೊಫೈಲ್ ನೋಡಿದಾಗ ಐವತ್ತಕ್ಕೂ ಹೆಚ್ಚು ಜನ ಫೇಸ್ ಬುಕ್ ನಲ್ಲಿ ಅವನ ಗೆಳೆಯರಾಗಿದ್ದರು. ನಾನು ತಮಾಷೆಗೆ ‘ಏನ್ ಗುರು ಆಗಲೆ ಹಾಫ್ ಸೆಂಚುರಿ’ ಎಂದು ಅವನ ವಾಲ್ ಮೇಲೆ ಬರೆದಿದ್ದೆ.. ಅದಕ್ಕೆ ಅವನಿತ್ತ ಉತ್ತರ.. . . . . ಕಾಡು ಪ್ರಾಣಿ ನಾಡಿಗೆ ಬಂದ್ರೆ ನೋಡೋರು ಜಾಸ್ತಿ ಗುರು!]]>

‍ಲೇಖಕರು G

July 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

7 ಪ್ರತಿಕ್ರಿಯೆಗಳು

 1. malathi S

  we work in Chintamani!! ಯಾರವರು? ಹೆಸರನ್ನು ಕೇಳಬಹುದಾ ನಟರಾಜು??
  ಎಂದಿನಂತೆ ಚಂದದ ಬರಹ
  ಕೊನೆಯ ಪಂಚ ಸಖತ್…
  🙂
  ಮಾಲತಿ ಎಸ್.

  ಪ್ರತಿಕ್ರಿಯೆ
 2. B C Vidya

  thanks enta olle nidharsna kottiddakke…. thumba uttejaka needittu nimma e experience……….
  jeevana maduvudu ondhu saadane

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: