ಕಾದಂಬರಿ ಬರೆಯುವುದು ಎಂದರೆ…

ಸಮಶೀತೋಷ್ಣ ಅಂಕಣ ‘ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿದೆ.

ಗುರುಪ್ರಸಾದ್ ಕಾಗಿನೆಲೆ ತಮ್ಮ ಮೆಲುದನಿಯಲ್ಲಿ ಬರೆಯುವ ಶೈಲಿ ಅತ್ಯಂತ ಆಪ್ತ. ಇನ್ನೊಂದು ಲೇಖನ ನಿಮಗಾಗಿ-

adolescence_II

ಕಾದಂಬರಿ ಒಂದು ನೀಳ್ಗತೆಯಲ್ಲ. ಕಾದಂಬರಿಕಾರನಿಗೆ ಬದುಕಿನ ಬಗ್ಗೆ ಒಂದು ವಿಶಾಲವಾದ ನೋಟವಿರಬೇಕು, ಪಾತ್ರಗಳ ಜತೆಗೆ ದಿನಗಟ್ಟಲೆ, ತಿಂಗಳುಗಟ್ಟಲೆ ಕೆಲವೊಮ್ಮ ವರ್ಷಗಟ್ಟಲೆ ಬದುಕುವ ಸಾವಧಾನವಿರಬೇಕು. ಪ್ರತಿಪಾತ್ರಗಳ ನೋವನ್ನೂ ಖುಷಿಯನ್ನೂ, ಹುರುಪನ್ನೂ, ಮುಗ್ಧತೆಯನ್ನೂ ಹಾಗೆಯೇ ತಳಮಳವನ್ನೂ ಅನುಭವಿಸುವ ಶಕ್ತಿಯಿದ್ದವನಾಗಿರಬೇಕು. ಕಾದಂಬರಿಕಾರ ಎಲ್ಲಿಯೂ ಮೂಗುತೂರಿಸದೇ ಪಾತ್ರಗಳನ್ನು ಅವಾಗಿಯೇ ಬೆಳೆಯಲು ಬಿಟ್ಟರೆ ಪಾತ್ರಗಳು ಅವೇ ದೊಡ್ಡದಾಗಿ ಕಾದಂಬರಿಕಾರನನ್ನೂ ಮೀರಿ ಬೆಳೆಯುತ್ತವೆ. ಅವನ ಆಶಯಕ್ಕೂ ಮೀರಿ ನಿಂತುಬಿಡುತ್ತವೆ. ಇದೊಂದು ಆಕಸ್ಮಿಕವೇ ಹೊರತು ಇದನ್ನು ಬಲವಂತವಾಗಿ ಬೆಳೆಸಲಾಗದು. ಬರೇ ತಂತ್ರವೊಂದರಿಂದ ಅಥವಾ ಲಿರಿಕಲ್ ಸರ್ಕಸ್ಸುಗಳಿಂದ ಕಾದಂಬರಿಯನ್ನು ಬೆಳೆಸಲಾಗದು. ಅದು ಒಂದು ಜೀವನ ದರ್ಶನ -ಇವೆಲ್ಲಾ ಕಾದಂಬರಿಕಾರರು, ವಿಮರ್ಶಕರು, ಕಾದಂಬರಿ ಎನ್ನುವುದು ಹೇಗಿರಬೇಕೆಂದು ಹೇಳಿರುವ ಮಾತುಗಳು.

ಒಂದು ಕಾದಂಬರಿ ಹೇಗೆ ಹುಟ್ಟುತ್ತದೆ? ಕಾದಂಬರಿಕಾರ ಒಂದು ಕಾದಂಬರಿಯನ್ನು ಯಾಕೆ ಬರೆಯುತ್ತಾನೆ. ಜಾರ್ಜ್ ಆರ್ವೆಲ್ ಒಂದು ಕಡೆ ‘ಒಂದು ಪುಸ್ತಕ ಬರೆಯುವುದೆಂದರೆ ಒಂದು ದೀರ್ಘಕಾಲದ ರೋಗವನ್ನು ಅನುಭವಿಸಿ ಚೇತರಿಸಿಕೊಂಡ ಹಾಗೆ’ ಎಂದು ಹೇಳುತ್ತಾನೆ. ಬರೆಯುವುದು ಒಂದು ಕಾಯಿಲೆಯಾದರೆ ಜನ ಯಾಕೆ ಆ ಕಾಯಿಲೆಯನ್ನು ಅನುಭವಿಸಲು ಇಷ್ಟಪಡುತ್ತಾರೆ? ಕೀರ್ತಿಗಾ? ಹಣಕ್ಕಾ (ಕನ್ನಡದ ಸಂದರ್ಭದಲ್ಲಿ ಇದು ಸಾಧ್ಯವೇ?) ಅಥವಾ ಬರೆಯುವ ಖುಷಿಗಾ? ಕಾದಂಬರಿಕಾರ ಬದುಕನ್ನು ಶೋಧಿಸುವುದೇ ಬರಹದಿಂದ ಅನ್ನುವ ಉದಾತ್ತತೆಯನ್ನು ಒಪ್ಪಿಕೊಂಡರೂ ಈ ಶೋಧಕ್ಕೆ ಆತ ತನ್ನನ್ನು ಮತ್ತು ತನ್ನ ಓದುಗರನ್ನು ತಯ್ಯಾರು ಮಾಡಿಕೊಳ್ಳುವುದು ಹೇಗೆ? ಈ ಬರೆಯುವ ಕ್ರಿಯೆ ಬೇರೆಬೇರೆ ಕಾದಂಬರಿಕಾರನಲ್ಲಿ ಹೇಗೆ ಕೆಲಸ ಮಾಡಿದೆ ಅನ್ನುವುದು ಕುತೂಹಲಕರವಾದ ಪ್ರಶ್ನೆ.

ಕಾದಂಬರಿಕಾರನಿಗೆ ಕಥೆಯ ಎಳೆ ಮಾತ್ರ ಗೊತ್ತಿದ್ದು ಬರೆಯುತ್ತಾ ಹೋದಹಾಗೆ ಈ ಪಾತ್ರಗಳು ಬೆಳೆದುಕೊಂಡು ಹೋಗುತ್ತವೆ ಅನ್ನುವ ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ಹಾಗಾದರೆ ಕಥೆ ಹೇಗೆ ಮುಂದುವರಿಯಬೇಕು ಎಂದು ಕಾದಂಬರಿ ಬರೆಯುವ ಮುನ್ನ ಒಂದು ನೀಲನಕ್ಷೆ, ಒಂದಿಷ್ಟು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು ತಪ್ಪಾ? ಕಾದಂಬರಿ ಹೀಗೇ ಮುಂದುವರೆಯಬೇಕು, ಹೀಗೇ ಕೊನೆಗೊಳ್ಳಬೇಕು ಎಂದು ಬರೆಯುವ ಮುನ್ನವೇ ಗೊತ್ತಿದ್ದರೆ ಅದು ಗಮ್ಯ ಗೊತ್ತಿರುವ ಬೆರಗಿಲ್ಲದ ಪಯಣವಾ? ಪಾತ್ರಗಳನ್ನು ಅನುಭವಿಸುವುದು ಅಂದರೇನು. ಈ ಪಾತ್ರಗಳನ್ನು ಮನದಲ್ಲಿ ರೂಪಿಸಿಕೊಳ್ಳುವುದು ಸಾಧ್ಯವೇ. ಅಥವಾ ಬರೆಯುತ್ತಾ ಬರೆಯುತ್ತಾ ಅವುಗಳ ಜತೆಗೆ ಬದುಕುತ್ತಾ ಹೋಗುವುದೇ?

ಈ ಪ್ರಶ್ನೆಗಳು ಯಾಕೆ ಬರುತ್ತಿವೆಯೆಂದರೆ, ಬಹಳ ಬಾರಿ ನಾವು ಸಾಹಿತ್ಯವಲಯದಿಂದ ಕೆಲವು ಮಾತುಗಳನ್ನು ಕೇಳುತ್ತೇವೆ. ‘ಗೊತ್ತಿದ್ದುಕೊಂಡು ಬರೆಯುವ ಕಾಲ ಮುಗಿದಿದೆ. ಬರೆಯುತ್ತಾ ಗೊತ್ತುಮಾಡಿಕೊಳ್ಳುವುದು, ಬರೆಯುತ್ತಾ ಈ ಜೀವನವನ್ನು ಅರ್ಥಮಾಡಿಕೊಳ್ಳುವುದು ನಮಗೆ ಮುಖ್ಯ’ ಎಂದು . ಗೊತ್ತಿಲ್ಲದೇ ಬರೆಯುವುದು ಅಂದರೇನು? ಏನು ಬರೆಯಬೇಕು ಎನ್ನುವ ಕಿಂಚಿತ್ ಆಲೋಚನೆಯೂ ಮನಸ್ಸಿನಲ್ಲಿ ಇರದೇ ಸುಮ್ಮನೇ ಖಾಲಿಕಾಗದ ಪೆನ್ನು ಹಿಡಿದು ಕೂತರೆ ತನ್ನಂತಾನೇ ಬರೆಸಿಕೊಳ್ಳುವುದೇ ಬರಹ ಅಂದರೆ ಅದು ಬರಹವನ್ನು ತೀರ ಉಡಾಫೆ ಮಾಡಿದ ಹಾಗಲ್ಲವೇ? ಧ್ಯಾನಸ್ಥ ಸ್ಥಿತಿ ಅಂದರೇನು? ಚಿತ್ತಾಲರು ಕೇಂದ್ರ ವೃತ್ತಾಂತವನ್ನು ಬರೆಯುವಾಗ ಕೇಂದ್ರ, ವೃತ್ತ, ಪರಿಧಿ, ಒಂದು ವೃತ್ತದ ಪರಿಧಿಯಲ್ಲಿರುವ ಒಂದು ಬಿಂದು ಇನ್ನೊಂದು ವೃತ್ತದ ಕೇಂದ್ರ ಹೇಗೆ ಆಗಬಹುದು ಎಂದು ಗ್ರಾಫಿಕ್ ಆಗಿ ಬರೆದು ತೋರಿಸುತ್ತಿದ್ದರಂತೆ. ಹಾಗೆಯೇ ಈ ಕಾದಂಬರಿಯ ಕಡೆಯ ವಾಕ್ಯ ಇದೇ ಆಗಿರುತ್ತದೆ ಅನ್ನುವುದನ್ನೂ ಅವರು ಪ್ಲಾನ್ ಮಾಡಿರುತ್ತಿದ್ದರಂತೆ. ಇದಕ್ಕೆ ಗೊತ್ತಿದ್ದುಕೊಂಡು ಬರೆಯುವುದು ಎಂದು ಹೇಳಲಾಗುವುದೇ?

ಆದರೆ, ಕಾದಂಬರಿಯ ವಿವರಗಳನ್ನು ದಟ್ಟವಾಗಿ ಪ್ಲಾಟ್ ಮಾಡುತ್ತಾ ಹೋದಾಗ ಕಾದಂಬರಿಯ ಪಾತ್ರಗಳು ಇಂಥ ಸಮಯದಲ್ಲಿ ಇಂಥವನ್ನೇ ಮಾಡಬೇಕು ಎನ್ನುವುದನ್ನೂ ಮೊದಲೇ ತಿಳಕೊಂಡುಬಿಟ್ಟಿದ್ದರೆ ಅಥವಾ ನಿರ್ಧರಿಸಿಬಿಟ್ಟಿದ್ದರೆ ಅದೊಂದು ರಿಪೋರ್ಟ್ ಆಗಬಹುದು. ಪಾತ್ರಗಳ ಪ್ರತಿಯೊಂದು ಕ್ರಿಯೆಯನ್ನೂ ಯೋಜನಾಬದ್ಧವಾಗಿ ರೂಪಿಸಲಿಕ್ಕೆ ಹೋದರೆ ಕ್ರಿಯೆಗೆ ಪ್ರತಿಕ್ರಿಯೆಗಳು ಹುಟ್ಟಿ ಎಲ್ಲವನ್ನೂ ಸರಾಸರಿಗೊಳಿಸಿ ಸರಿಸಮಮಾಡಿಸಿದಲ್ಲಿ ಅದು ಲೆಕ್ಕಾಚಾರ ಹಾಕಿಬರೆದ ಒಂದು ಸಂಶೋಧನಾವರದಿಯಾಗುತ್ತದೆ, ಫಿಕ್ಷನ್ ಅಲ್ಲ. ಕಲ್ಪನೆಯೆನ್ನುವ ಪರಿಕಲ್ಪನೆಯಲ್ಲಿಯೇ ಒಂದು ರೀತಿಯ ‘ಅ’ವಾಸ್ತವವಿದೆ. ಕಣ್ಮುಂದೆ ನಡೆದ ಘಟನೆಯನ್ನೂ ಕತೆಮಾಡಲು ಒಂದು ಮ್ಯಾಜಿಕ್ ಬೇಕು. ಶಾಂತಿನಾಥ ದೇಸಾಯಿಯವರು ಅವರ ಸಂಬಂಧ ಎನ್ನುವ ಕಾದಂಬರಿಯಲ್ಲಿ ಹೆನ್ರಿ ಮಿಲ್ಲರನ ಟ್ರಾಪಿಕ್ ಆಫ್ ಕ್ಯಾನ್ಸರ್ ಬಗ್ಗೆ ಬರೆಯುತ್ತಾರೆ. ‘ಗ್ರೇಟ್ ಅನ್ನಿಸ್ತು. ಅದರಲ್ಲಿಯೂ ತುಂಬ ಸೆಕ್ಸಿದೆ. ಏನೇನೋ ಅಶ್ಲೀಲವಾದ ವರ್ಣನೆಗಳಿವೆ. ಆದರೆ ಪುಸ್ತಕದ ಕೇಂದ್ರದಲ್ಲಿ ಒಂದು ಅತ್ಯಂತ ಪ್ರಭಾವಶಾಲಿಯಾದ ಸಂವೇದನೆಯಿದೆಯಲ್ಲ- ಅದೇ ಜಾದೂ ಅದೇ ಮಂತ್ರ’ ಈ ಮಂತ್ರ ಏನು ಎಂದು ಅರಿತುಕೊಳ್ಳುವುದು ಪ್ರಾಯಶಃ ಸ್ವತಃ ಬರಹಗಾರನಿಗೂ ಸಾಧ್ಯವಿಲ್ಲ. ಅದು ಅವನಿಗೆ ದಕ್ಕುವುದು ಮತ್ತು ಆ ಜಾದೂ ಅವನಿಗೆ ದಕ್ಕಿದೆ ಎಂದು ಜನಕ್ಕೆ ಅರ್ಥವಾಗುವಂತೆ ಅದನ್ನು ಅಕ್ಷರಗಳ ಮೂಲಕ ರವಾನಿಸುವುದು ಆ ಬರೆದವನ ಅದೃಷ್ಟ.

ತಾನು ಕಾದಂಬರಿಯನ್ನು ಹೇಗೆ ಬರೆಯುತ್ತೇನೆ ಎಂದು ಟರ್ಕಿಯ ಬರಹಗಾರ ಆರ್ಹನ್ ಪಮುಕ್ ಹೇಳುತ್ತಾನೆ. ‘ನನ್ನ ಕನಸುಗಳನ್ನು ಮೂಡಿಸುವ ನನ್ನ ಕಾಮನೆಗಳಿಗೆ ಒಂದು ಧ್ವನಿ ಕೂಡಲು ನಾನು ಬರೆಯುತ್ತೇನೆ. ಈ ಕನಸುಗಳು ಏನಂತ ನನಗೆ ಅರ್ಥವಾಗದಿದ್ದರೂ, ಎಲ್ಲಿಂದ ಬಂತೆಂದು ಗೊತ್ತಿಲ್ಲದಿದ್ದರೂ ಬರೆಯಲು ಕೂತಾಗ ಈ ಕನಸುಗಳೇ ನನ್ನಲ್ಲಿ ಉಸಿರು ತುಂಬುತ್ತವೆ. ಹಾಯಿದೋಣಿ ನಡೆಸುತ್ತಿರುವ ನಾವಿಕ ಬರುವ ಗಾಳಿಯ ದೆಸೆಯನ್ನು ಹಿಡಿದು ಹೊರಟಹಾಗೆ ಎತ್ತ ಹೋಗುತ್ತಿದ್ದೀನೆಂದು ಗೊತ್ತಿಲ್ಲದಿದ್ದರೂ ಪಯಣವನ್ನು ಶುರುಮಾಡಿರುತ್ತೇನೆ. ಆದರೆ, ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿರುವ ನಕ್ಷೆಯಲ್ಲಿ ನಾನೀಗ ಇರುವ ತಾಣವೂ ಮತ್ತು ನನ್ನ ಗಮ್ಯವೂ ನನಗೆ ಚೆನ್ನಾಗಿ ಗೊತ್ತಿದೆ. ಗಾಳಿಗೆ ನಾನು ಆ ಕ್ಷಣದಲ್ಲಿ ಶರಣಾದರೂ ನನಗೆ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಗೊತ್ತಿರುತ್ತದೆ. ಯಾಕೆಂದರೆ ಪಯಣ ಶುರುಮಾಡುವ ಮುನ್ನ ನಾನು ಎಲ್ಲಿಗೆ ಹೋಗುತ್ತಿದ್ದೀನೆಂದು ಚೆನ್ನಾಗಿ ಅರಿತುಕೊಂಡಿರುತ್ತೇನೆ. ಕಥೆಯ ಅಧ್ಯಾಯ ಎಲ್ಲಿ ಶುರುವಾಗಬೇಕು, ಮುಗಿಯಬೇಕು ಎಂದು ವಿಂಗಡಿಸಿಕೊಂಡಿದ್ದಾಗಿದೆ. ನನ್ನ ದೋಣಿ ಎಂಥ ಕಡೆ ನಿಲ್ಲಬೇಕು, ಎಲ್ಲಿ ಎಷ್ಟು ಲಗೇಜನ್ನು ಇಳಿಸಬೇಕು ಮತ್ತು ನನ್ನ ಅಂತಿಮ ತಾಣಕ್ಕೆ ನಾನು ಹೋಗಬೇಕಾದರೆ ಎಷ್ಟು ದಿನ ಬೇಕು ಅಂತಲೂ ನನಗೆ ಗೊತ್ತಿದೆ. ಒಂದುವೇಳೆ ಇದ್ದಕ್ಕಿದ್ದಂತೆ ಗೊತ್ತಿಲ್ಲದೇ ಬಿರುಗಾಳಿಯೆದ್ದು ನನ್ನ ಹಾಯಿದೋಣಿಯ ಪಥ ದಿಕ್ಕೆಟ್ಟರೆ ನಾನು ಅದನ್ನು ತಡೆಯಹೋಗುವುದಿಲ್ಲ. ಏಕೆಂದರೆ ನನ್ನ ಹಾಯಿಯನ್ನು ಪೂರಕ್ಕೆ ಪೂರ ಬಿಚ್ಚಿಡದಿದ್ದರೆ ಅದಕ್ಕೆ ಬಿರುಗಾಳಿಗೆ ತನ್ನನ್ನು ಒಡ್ಡಿಕೊಳ್ಳಲೂ ಗೊತ್ತಾಗುವುದಿಲ್ಲ, ಅದರಿಂದ ತಪ್ಪಿಸಿಕೊಳ್ಳುವುದೂ ಗೊತ್ತಿರುವುದಿಲ್ಲ. ನಾನು ಸಾಗರದಲ್ಲಿ ಎಲ್ಲ ನದಿಗಳೂ ಒಂದಕ್ಕೊಂದು ಶಾಂತವಾಗಿ ಸೇರುವ, ಎಲ್ಲವೂ ಒಂದರೊಳಗೊಂದು ಒಂದಾಗುವ, ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವ ಶಾಂತಸಾಗರವನ್ನು ಹುಡುಕುತ್ತಿದ್ದೇನೆ. ಅಲ್ಲಿ ಸೇರಿದಾಗ, ಆ ಬಿರುಗಾಳಿ ಶಾಂತವಾಗಿ ಎಲ್ಲವೂ ಸ್ಠಬ್ಧವಾಗಿರುವ ನಿಶ್ಚಲ ತಾಣದಲ್ಲಿ ನಾನು ನಾವೆಯಲ್ಲಿ ತೇಲುತ್ತಿರುತ್ತೀನೆ. ನಾನು ಸಾವಧಾನದಿಂದಿದ್ದರೆ ಈ ಎಲ್ಲ ಏರುಪೇರುಗಳಿಗೂ ನನ್ನನ್ನು ನಾನು ಒಡ್ಡಿಕೊಂಡೂ ನಾನು ಗಮ್ಯವನ್ನು ಮುಟ್ಟುತ್ತೇನೆ ಅನ್ನುವುದು ನನಗೆ ಗೊತ್ತು.

ಕಾದಂಬರಿಗೆ ಈ ‘ಎಲ್ಲವೂ ಎಲ್ಲದರ ಜತೆ ಒಂದಾಗುವ’ ಕ್ರಿಯೆ ಎಷ್ಟು ಮುಖ್ಯ ಅನ್ನುವುದನ್ನು ಪಮುಕ್ ಬಹಳ ಚೆನ್ನಾಗಿ ವಿವರಿಸಿದ್ದಾನೆ. ಇಲ್ಲಿ ಪ್ರತಿ ಘಟನೆ, ಸನ್ನಿವೇಶ ಮತ್ತು ಪಾತ್ರ ಪ್ರತಿ ಪಾತ್ರವೂ ಒಂದು ಘಟ್ಟದಲ್ಲಿ ಎಲ್ಲವೂ ಎಲ್ಲದರಳೊಗೊಂದಾಗಬೇಕು. ಒಂದು ಘಟ್ಟದಲ್ಲಿ ಎಲ್ಲವೂ ಒಂದೇ ಕೊಂಡಿಯಲ್ಲಿ ಬೆಸೆದುಕೊಳ್ಳಬೇಕು. ಅದನ್ನು ಬಲವಂತವಾಗಿ ಮಾಡಿಸಬೇಕಾಗಿಲ್ಲ. ಕಾದಂಬರಿಯನ್ನು ಈ ‘ಒಂದಾಗುವ ಕ್ರಿಯೆಯವರೆಗೂ’ ಬೆಳೆಸುವ ಸಾವಧಾನವಿದ್ದರೆ ಅದು ತಾನಾಗಿಯೇ ಸಿದ್ಧಿಸುತ್ತದೆ. ಇದು ಕೆಲವರಿಗೆ ನೂರೇ ಪುಟದಲ್ಲಿ ಆಗಬಹುದು, ಕೆಲವ್ರು ನಾನೂರು ಐನೂರು ಪುಟಗಳವರೆಗೂ ಕಾಯಬೇಕಾಗಬಹುದು. ಅಲ್ಲಿಯವರೆಗೆ ಕಾದಂಬರಿಕಾರನಿಗೆ ಪಾತ್ರಗಳ ಜತೆ ಸಾವಧಾನದಿಂದ ಸಂಸಾರ ಮಾಡುವ ಗುಣ ಬಹಳ ಮುಖ್ಯವಾಗುತ್ತದೆ. ಇದಕ್ಕೆ ಬರಹಗಾರನಿಗೆ ತನ್ನ ಅಹಂಕಾರವನ್ನು ತಡೆದುಕೊಳ್ಳುವ ಮತ್ತು ಆ ಪಾತ್ರದ ಪ್ರಾಮುಖ್ಯವನ್ನು ಆ ಪಾತ್ರವೇ ಕಂಡುಕೊಳ್ಳುವುದಕ್ಕೆ ಬಿಡುವ ಔದಾರ್ಯವಿರಬೇಕು.

ಒಂದು ಮನೆ ಅಥವಾ ಮದುವೆ ಉಳಿಯಬೇಕಾದರೆ ಅಲ್ಲಿ ಸಾವಧಾನ ಎಷ್ಟು ಮುಖ್ಯ. ಕಾದಂಬರಿಯನ್ನು ಬರೆಯುವುದೆಂದರೆ ಇಲ್ಲಿನ ಅನೇಕ ಪಾತ್ರಗಳ ಜತೆ ಒಟ್ಟಿಗೇ ಸಂಸಾರ ಮಾಡಿದಹಾಗೆ. ನಿಮ್ಮ ಸಿಗ್ನಿಫಿಕೆಂಟ್ ಅದರ್ ನಿಮ್ಮಷ್ಟೇ ಅಥವಾ ನಿಮಗಿಂತ ಮುಖ್ಯ ಎಂದು ತಿಳಿಯುವ ವಿನಯವಿದ್ದರೆ ಅದು ಕೊನೆಗೆ ನಿಮ್ಮನ್ನೂ ಮುಖ್ಯವಾಗಿಸುತ್ತದೆ. ಇಲ್ಲಿ ಯಾರು ಬೇಕಾದರೂ ತಪ್ಪುಮಾಡಬಹುದು, ನಿಮ್ಮ ಪಾತ್ರಗಳು ಮುನಿಸಿಕೊಳ್ಳಬಹುದು, ಕೆಲವೊಮ್ಮೆ ಮನಸ್ತಾಪ, ಹತಾಶೆ, ಘಟಸ್ಫೋಟಗಳೂ ಆಗಬಹುದು. ಆಗ ತಾಳ್ಮೆಯಿಂದ ಪ್ರತಿಪಾತ್ರಕ್ಕೂ ಇರುವ ಅದರದೇ ಆದ ಅಸ್ತಿತ್ವವನ್ನು ಅದಕ್ಕೆ ಮನಗತಮಾಡಿಕೊಳ್ಳುವುದರ ಮೂಲಕ ಕಾದಂಬರಿಕಾರನು ತನ್ನ ಪಾತ್ರವೇನೆಂಬುದನ್ನು ಅರಿತುಕೊಳ್ಳುತ್ತಾನೆ. ಯಾವುದೇ ಸಂಸಾರವನ್ನು ಹೀಗೇ ಮಾಡುವುದು ಎಂದು ಯಾರೂ ಹೇಳಿಕೊಳ್ಳಲಾಗದಲ್ಲ. ಹಾಗೆ ಮಾಡಿದರೆ, ಸಂಬಂಧಗಳು ಪ್ರೊಟೋಕಾಲುಗಳಿಂದ ನಿಂತಿದ್ದರೆ ಆಗ ಅದು ಮ್ಯಾನೇಜ್‌ಮೆಂಟ್ ಆಟವಾಗುತ್ತದೆ ಅಥವಾ ರಿಯಾಲಿಟಿ ಶೋ ಆಗುತ್ತದೆ. ಸಂಸಾರವಾಗುವುದಿಲ್ಲ. ಹಾಗೆಯೇ ಕಾದಂಬರಿ ಒಂದು ಸುದೀರ್ಘ ವರದಿಯಾಗುತ್ತದೆ.

ಇದೇ ಇರಬಹುದು ಧ್ಯಾನಸ್ಥ ಸ್ಥಿತಿ. ಈ ಧ್ಯಾನಸ್ಥ ಸ್ಥಿತಿ ಬೇರೆಬೇರೆಯವರಿಗೆ ದಕ್ಕುವುದು ಬೇರೆಬೇರೆ ರೂಪದಲ್ಲಿ. ಮತ್ತೆ ಪಮುಕನ ಉದಾಹರಣೆಯನ್ನು ತೆಗೆದುಕೊಂಡರೆ ಅವನಿಗೆ ಈ ಸ್ಥಿತಿ ಸಿಗುವುದು ಹೆಚ್ಚುಹೆಚ್ಚು ಬರೆಯುವುದರಿಂದ. ಆತ ದಿನಕ್ಕೆ ಹತ್ತುಗಂಟೆಗಳ ಕಾಲ ಬರೆಯುತ್ತಾನಂತೆ. ಬರೆದದ್ದರಲ್ಲಿ ಕೇವಲ ಅರ್ಧಪುಟ ಮಾತ್ರ ಬರೆಯಲು ಯೋಗ್ಯವಾಗಿರುತ್ತದೆಂದು ಆತ ನಿರ್ಧರಿಸುತ್ತಾನೆ. ಅಂದರೆ, ಬರೆಯುವ ಕ್ರಿಯೆಗಿಂತಲೂ ಆತನಿಗೆ ಮುಖ್ಯವಾಗಿರುವುದು ಅದರ ಪರಿಷ್ಕರಣ. ಬರೆದದ್ದನ್ನು ತಾನೇ ಓದುತ್ತಾನೆ, ತಿದ್ದುತ್ತಾನೆ. ಕೆಲವು ಭಾಗಗಳನ್ನು ಮತ್ತೆ ಬರೆಯುತ್ತಾನೆ. ಕೆಲವನ್ನು ಸಾಯಿಸುತ್ತಾನೆ, ಕೆಲವನ್ನು ಹುಟ್ಟಿಸುತ್ತಾನೆ.

ಈ ಪರಿಷ್ಕರಣ, ತಿದ್ದುವಿಕೆ ಎಷ್ಟಿರಬೇಕೆಂಬುದು ದೊಡ್ಡ ಪ್ರಶ್ನೆ. ಬಹಳ ಜನ ಕಾದಂಬರಿಕಾರರು ಕಾದಂಬರಿಯನ್ನು ಬರೆಯುವ ಕಾಲಕ್ಕೆ ಒಂದೇ ಸಲ ಕೂತು ಬರೆದಿರುತ್ತಾರೆ. ಶಿವರಾಮಕಾರಂತರು ಅವರು ಬರೆದದ್ದನ್ನು ಮತ್ತೆ ತಿರುಗಿ ನೋಡುತ್ತಿರಲಿಲ್ಲವಂತೆ. ಅವರಿಗೆ ಈ ಪರಿಷ್ಕರಣ ಕಾರ್ಯದ ಮೇಲೆ ನಂಬಿಕೆಯೇ ಇರಲಿಲ್ಲ. ಜಯಂತ ಕಾಯ್ಕಿಣಿಯವರು ಒಮ್ಮೆ ಬರೆದದ್ದನ್ನು ಮತ್ತೆ ತಿದ್ದುವ ಕೆಲಸವೆಂದರೆ ‘ಸರಿಯಾಗಿ ಹೊಲೆಯದ ಪ್ಯಾಂಟನ್ನು ಒಂದು ಚೂರು ಹಾಗೂ ಹೀಗೂ ಮಾಡಬಹುದಷ್ಟೇ. ತೀರ ಹೆಚ್ಚು ಕಮ್ಮಿ ಮಾಡಲು ಹೋದರೆ ಪ್ಯಾಂಟು ಹೋಗಿ ಚಡ್ಡಿಯಾದೀತು’ ಅಂದಿದ್ದರು. ಕಾದಂಬರಿಯನ್ನು ಶುರುಮಾಡಿ ಧಾರಾವಾಹಿಯಂತೆ ಒಂದೊಂದೇ ಅಧ್ಯಾಯವನ್ನು ಬರೆಯುತ್ತಾ ಪ್ರಕಟಿಸುತ್ತಾ ಹೋದಾಗ ಈ ಪರಿಷ್ಕರಣ, ತಿದ್ದುವಿಕೆ ಸಾಧ್ಯವೇ ಇಲ್ಲವಲ್ಲ. ಅದೂ ಇಷ್ಟೇ ಪದಮಿತಿಯಲ್ಲಿ ಇಷ್ಟೇ ಅಧ್ಯಾಯಗಳಲ್ಲಿ ಕಾದಂಬರಿ ಮುಗಿಯಬೇಕು ಎಂದರೆ ಮೊದಲನೇ ಪರಿಜೇ ಕೊನೆಯ ಪರಿಜೂ ಕೂಡ. ಇನ್ನು ಬೇರೆಬೇರೆ ಅಧ್ಯಾಯವನ್ನು ಬೇರೆ ಬೇರೆ ಲೇಖಕರು ಬರೆದರಂತೂ ಇವನ್ಯಾವುದನ್ನೂ ಚರ್ಚಿಸುವ ಅವಕಾಶವೂ ಇರುವುದಿಲ್ಲ.

ಕಾದಂಬರಿ ಬರೆಯುವವನಿಗೆ ಬರೆಯುವುದಷ್ಟೇ ಸತ್ಯ. ಅಲ್ಲಿ ಅವನ ಪಾತ್ರಗಳೊಂದಿಗೆ ಅವನ ಸಖ್ಯ, ಜಗಳಗಳು ಆಗಷ್ಟೇ ಅನುಭವಿಸಿದ ಸತ್ಯ. ದಾಂಪತ್ಯದ ಜಗಳವಿದ್ದಂತೆ ನಂತರ ಹೋಗಿ ಕೊಂಚ ತೇಪೆ ಹಾಕಬಹುದೇ ಹೊರತು ಪೂರ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸಂಸಾರಕ್ಕೆ, ದಾಂಪತ್ಯಕ್ಕೆ ಒಂದಿಷ್ಟು ಅಲಿಖಿತ ಗ್ರೌಂಡ್‌ರೂಲ್‌ಗಳಿದ್ದಂತೆ ಕಾದಂಬರಿ ಬರೆಯುವ ಮುಂಚೆಯೂ ಇಂತ ಒಂದು ಸಾಮಾನ್ಯ ಸಿದ್ಧತೆ ಮುಖ್ಯ ಅನಿಸುವುದಿಲ್ಲವೇ? ಹಾಗೆ ಒಂದು ನಿಯಮಗಳನ್ನು ಹಾಕಿಕೊಂಡು ಈ ನಿಯಮಗಳಿರುವುದೇ ಮುರಿಯುವುದಕ್ಕೆ ಅನ್ನುವ ಅರಿವೂ ಇದ್ದಾಗ, ಏನನ್ನು ಮುರಿಯುತ್ತಿದ್ದೇವೆ, ಮತ್ತು ಅದರಿಂದಾಗುವ ಪರಿಣಾಮಗಳೇನು ಎಂದು ತಿಳಕೊಂಡಾಗ ಇದು ಸಾಧುವೂ ಹೌದು. ಕಾದಂಬರಿಗೆ ಗಮ್ಯ ಅಥವಾ ಗುರಿ ಮುಖ್ಯವಾಗಬಾರದು. ಅದು ಗೊತ್ತಿದ್ದರೆ ತಪ್ಪೂ ಅಲ್ಲ. ಅಲ್ಲಿನ ಪಯಣ ಮತ್ತು ಆ ಪಯಣದಲ್ಲಿ ಸಿಗುವ ಸುಖವೇ ಮಜ

‍ಲೇಖಕರು avadhi

June 24, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: