ಕಾಪಿರೈಟ್ ಸಮತೋಲನಗಳು…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

ಇದು ನಾನು ಅನುವಾದಿಸುತ್ತಿರುವ ಲಾರೆನ್ಸ್ ಲೆಸಿಗ್ ಅವರ ಫ್ರೀ ಕಲ್ಚರ್ (ಸ್ವತಂತ್ರ ಸಂಸ್ಕೃತಿ)‍ ಪುಸ್ತಕದ ಒಂದು ಭಾಗ. ಇದೇ ಪುಸ್ತಕದ ತಂತ್ರಜ್ಞಾನ ಹಾಗೂ ಹಕ್ಕುಗಳ ನಡುವಿನ ಜಂಜಾಟಕ್ಕೆ ಸಂಬಂಧಿಸಿದ ಲೇಖನವನ್ನು ಮುಕ್ತ ಕಣದ ೭ನೇ ಅಂಕಣದಲ್ಲಿ ಓದಿದ್ದೀರಿ. ಈ ಭಾಗ ಕಾಪಿರೈಟ್ ಸುತ್ತಲಿನ ಯುದ್ಧದಲ್ಲಿ ನಮ್ಮ ಗಮನ ಹಾಗೂ ಮುಖ್ಯ ವಿಷಯದ ಬಗ್ಗೆ ಇರುವ ಅಂತರ, ಅದನ್ನು ಕಡಿಮೆ ಮಾಡಲು ಲೇಖಕನ ಪ್ರಯತ್ನಗಳನ್ನು ವಿವರಿಸುವ ಅಧ್ಯಾಯಗಳಿಗೆ ಪ್ರವೇಶವಾಗಿದೆ.  ‍

ಸೂಚನೆ: ಮೂಲ ಪುಸ್ತಕದ ಅನುವಾದ ಲೇಖಕರ ಅನುಮತಿಯ ಮೇರೆಗೆ ನೆಡೆಯುತ್ತಿದೆ ಜೊತೆಗೆ ಫ್ರೀ ಕಲ್ಚರ್ ಹಾಗೂ ಅನುವಾದಗೊಳ್ಳುತ್ತಿರುವ ಪುಸ್ತಕ ಎರಡೂ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ಅಡಿಯಲ್ಲಿವೆ (ವಾಣಿಜ್ಯೇತರ ಉದ್ದೇಶಗಳಿಗೆ ಮಾತ್ರ). 

‍* * * 

ಹಾಗಿದ್ದಲ್ಲಿ ನೀವು ಇದನ್ನು ಚಿತ್ರಿಸಿಕೊಳ್ಳಿ: ನೀವು ರಸ್ತೆಯ ಬದಿಯಲ್ಲಿ ನಿಂತಿದ್ದೀರಿ. ನಿಮ್ಮ ಕಾರಿಗೆ ಬೆಂಕಿ ಹತ್ತಿದೆ. ನೀವು ಕೋಪಗೊಂಡಿದ್ದೀರಿ ಮತ್ತು ಅಸಮಾಧಾನಗೊಂಡಿದ್ದೀರಿ ಏಕೆಂದರೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಆ ಬೆಂಕಿ ಹತ್ತಲು ನೀವೇ ಕಾರಣರಾಗಿದ್ದೀರಿ. ಈಗ ಅದನ್ನು ಹೇಗೆ ನಂದಿಸುವ ದಾರಿ ನಿಮಗೆ ತಿಳಿದಿಲ್ಲ. ನಿಮ್ಮ ಪಕ್ಕದಲ್ಲಿ ಪೆಟ್ರೋಲ್ ತುಂಬಿದ ಬಕೆಟ್ ಇದೆ. ನಿಸ್ಸಂಶಯವಾಗಿ ಪೆಟ್ರೋಲ್ ಬೆಂಕಿಯನ್ನು ಶಮನಗೊಳಿಸುವುದಿಲ್ಲ.

ನೀವು ನಿಮ್ಮ ಅವಸ್ಥೆಯ ಬಗ್ಗೆ ಚಿಂತಿಸುತ್ತಿರುವಾಗ, ಬೇರೊಬ್ಬ ವ್ಯಕ್ತಿ ಬರುತ್ತಾರೆ. ಕಣ್ಣೆದುರಿನ ಸ್ಥಿತಿ ನೋಡಿ, ಭಯಭೀತರಾಗಿ, ಅವಳು ಬಕೆಟ್ ಕೈಯಲ್ಲಿ ಹಿಡಿಯುತ್ತಾಳೆ. ಅವಳನ್ನು ತಡೆದು ನಿಲ್ಲಿಸಲು ನಿಮಗೆ ಅವಕಾಶ ದೊರೆಯುವ ಮೊದಲೇ – ಅಥವಾ ಅವಳು ಯಾಕೆ ನಿಲ್ಲಬೇಕು ಎಂದು ಅವ‌ಳಿಗೆ ತಿಳಿಯುವ ಮೊದಲೇ – ಕೈಲಿದ್ದ ಬಕೆಟ್ ಗಾಳಿಗೆ ತೂರಿರುತ್ತದೆ. ದಗದಗಿಸುತ್ತಿರುವ ಕಾರಿಗೆ ಪೆಟ್ರೋಲ್ ತಾಗಲಿದೆ. ಮತ್ತು ಪೆಟ್ರೋಲ್ ಉರಿಯುವ ಬೆಂಕಿಯ ಜೊತೆ ತನ್ನ ಸುತ್ತಮುತ್ತಲಿನ ಎಲ್ಲವನ್ನೂ ಆವಾಹಿಸಿಕೊಳ್ಳುತ್ತದೆ.‍

ಎಲ್ಲೆಡೆ ಕೃತಿಸ್ವಾಮ್ಯದ ಬಗ್ಗೆ ಯುದ್ಧ ಸಾರಲಾಗುತ್ತಿದೆ – ಮತ್ತು ನಾವೆಲ್ಲರೂ ತಪ್ಪಾದ/ವಿರುದ್ಧ ವಿಷಯದತ್ತಲೇ ಗಮನ ಹರಿಸುತ್ತೇವೆ. ಈಗಿನ ತಂತ್ರಜ್ಞಾನಗಳು ನಮ್ಮ  ವ್ಯವಹಾರಗಳ ಅಸ್ತಿತ್ವಕ್ಕೆ ಬೆದರಿಕೆ ಒಡ್ಡುವುದರಲ್ಲಿ ಸಂಶಯವಿಲ್ಲ. ಹಲವರು ಕಲಾವಿದ‍ರಿಗೆ (ಸೃಜನಶೀಲ ಕೃತಿ ರಚನೆ ಮಾಡುವವರು) ಬೆದರಿಕೆ ಹಾಕಲಾಗುತ್ತದೆ/ಹಾಕಿದ್ದಾರೆಂದರೂ ಆ ವಿಷಯದಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಆದರೆ ತಂತ್ರಜ್ಞಾನಗಳು ಬದಲಾಗುತ್ತಲೇ ಇರುತ್ತವೆ.‍ ಅಂತರ್ಜಾಲದ ಪ್ರಸ್ತುತ ಬೆದರಿಕೆಗಳಿಂದ, ಉದ್ಯಮ ಮತ್ತು ತಂತ್ರಜ್ಞರಿಗೆ ತಮ್ಮ ತಂತ್ರಜ್ಞಾನವನ್ನು ರಕ್ಷಿಸಿಕೊಳ್ಳಲು ಹಲವಾರು ಮಾರ್ಗಗಳಿವೆ . ಇದು ಬೆಂಕಿಯಿದ್ದಂತೆ, ಹಾಗೇ ಬಿಟ್ಟಲ್ಲಿ ಸ್ವತಃ ಸುಟ್ಟು ಹೋಗುತ್ತದೆ.‍

ಆದರೂ ನೀತಿ ನಿರೂಪಕರು/ಸೃಷ್ಟಿಕರ್ತರು ಈ ಬೆಂಕಿಯನ್ನು ತನ್ನ ಪಾಡಿಗಿರಲು ಬಿಡಲು ಸಿದ್ಧರಿಲ್ಲ. ತಾವು ಗ್ರಹಿಸುವ ಸಮಸ್ಯೆಯನ್ನು ಅವರು ಪ್ರಭಾವಿತರ/ಲಾಬಿ ಮಾಡುವವರ ಹಣದಿಂದ ಮಧ್ಯಪ್ರವೇಶಿಸಿ ತೊಡೆದುಹಾಕಲು ಉತ್ಸುಕರಾಗಿದ್ದಾರೆ.  ಆದರೆ ಅವರು ಗ್ರಹಿಸುವ ಸಮಸ್ಯೆ ನಮ್ಮ ಸಂಸ್ಕೃತಿ ಎದುರಿಸುತ್ತಿರುವ ನಿಜವಾದ ಬೆದರಿಕೆಯಲ್ಲ. ಮೂಲೆಯಲ್ಲಿ ನಿಂತು ನಾವು ಈ ಸಣ್ಣ ಬೆಂಕಿಯನ್ನು ನೋಡುತ್ತಿರುವಾಗಲೇ, ಎಲ್ಲೆಡೆ ಸಂಸ್ಕೃತಿಗೆ ಹೊಸ ರೂಪಕೊಡುವ ‍ವಿಧಾನದಲ್ಲಿ ಭಾರಿ ಬದಲಾವಣೆಯಾಗಿದೆ.

‍ಹೇಗಾದರೂ ನಾವು ಈ ಪ್ರಮುಖವಾದ ಮತ್ತು ಮೂಲಭೂತ ವಿಷಯದತ್ತ ಗಮನ ಹರಿಸಲು ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗಿದೆ. ಉರಿತ್ತಿರುವ ಬೆಂಕಿಯ ಮೇಲೆ ಪೆಟ್ರೋಲ್ ಸುರಿಯುವುದನ್ನು ತಪ್ಪಿಸಲು ಒಂದು ಮಾರ್ಗವನ್ನು ಕಂಡುಹಿಡಿದುಕೊಳ್ಳಲೇ ಬೇಕಿದೆ.

ಆದರೆ ನಾವು ಇನ್ನೂ ಆ ಮಾರ್ಗವನ್ನು ಕಂಡುಕೊಂಡಿಲ್ಲ. ಬದಲಾಗಿ, ನಾವು ಸರಳವಾದ, ‍ಬೈನರಿ (ಸರಿ/ತಪ್ಪುಗಳ) ವೀಕ್ಷಣೆಯಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಈ ಚರ್ಚೆಯ ವಿಸ್ತಾರವನ್ನು ವಿಶಾಲವಾಗಿ ರೂಪಿಸಲು ಎಷ್ಟೋ ಜನರು ಮುಂದಾಗಿದ್ದರೂ, ಇದು ಸರಳವಾದ, ಬೈನರಿ ದೃಷ್ಟಿಕೋನವಾಗಿಯೇ ಉಳಿದುಕೊಂಡಿದೆ . ನಾವು ರಸ್ತೆಯ ಮೇಲೆ ಕಣ್ಣಿಟ್ಟಿರಬೇಕಾದಾಗ, ಬೆಂಕಿ ಉರಿಯುತ್ತಿರುವುದರ ಕಡೆ ನೋಡಲು ನಮ್ಮ ಕತ್ತು ರಬ್ಬರಿನಂತೆ ತಿರುಗುತ್ತದೆ. 

ಈ ಸವಾಲು ಕಳೆದ ಕೆಲವು ವರ್ಷಗಳಿಂದ ನನ್ನ ಜೀವನವಾಗಿದೆ. ಇದು ನನ್ನ ವೈಫಲ್ಯವೂ ಆಗಿದೆ. ಮುಂದಿನ ಎರಡು ಅಧ್ಯಾಯಗಳಲ್ಲಿ, ಈ ಚರ್ಚೆಯನ್ನು ಮರು-ಕೇಂದ್ರೀಕೃತಗೊಳಿಸಿ ಹೊಸ ಮಾರ್ಗವನ್ನು ಕಂಡುಕೊಳ್ಳುವಲ್ಲಿನ ವಿಫಲ ಪ್ರಯತ್ನಗಳ ಒಂದು ಸಣ್ಣ ಗಂಟನ್ನು ವಿವರಿಸಿದ್ದೇನೆ. ಯಶಸ್ಸಿಗೆ ಏನು ಬೇಕು ಎಂದು ನಾವು ಅರ್ಥಮಾಡಿಕೊಳ್ಳಬೇಕಾದರೆ ನಾವು ಈ ವೈಫಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಓಂಶಿವಪ್ರಕಾಶ್

February 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This