ಕಾಫಿಯೂ ಉಂಟು.. ಕೊಲಂಬಸ್ ಸಹಾ ಉಂಟು..

Concern

ಎರಡು ಕಾರಣಗಳಿಗಾಗಿ ಅಕ್ಟೋಬರ್ ನನಗೆ ತೀರಾ ಮುಖ್ಯ. ಒಂದು ಅಕ್ಟೊಬರ್ ೧, ವಿಶ್ವ ಕಾಫಿ ದಿನ. ಕಾಫಿಯನ್ನು ಇನ್ನಿಲ್ಲದಂತೆ ಬಸಿದುಕೊಳ್ಳುವ ನನಗೆ ಅಕ್ಟೊಬರ್ ಇಷ್ಟವಾಗಲು ಇದೊಂದೇ ಕಾರಣ ಸಾಕು. ಆದರೆ ಇನ್ನೊಂದು ದಿನವಿದೆ. ಅದು ನಾನು ಇಷ್ಟಪಡದ ದಿನ. ಅಕ್ಟೋಬರ್  ೧೦, ಕೊಲಂಬಸ್ ದಿನಾಚರಣೆ.

ಹಾಗಾಗಿ ಕಾಫಿ ಮತ್ತು ಕೊಲಂಬಸ್ ಎರಡನ್ನೂ ಬಣ್ಣಿಸುವ ನನ್ನ ಪ್ರೀತಿಯ ಬರಹ ಇಲ್ಲಿದೆ. ಇದು ಕಾಫಿ ಪ್ರೀತಿಸುವಂತೆ ಮಾಡುತ್ತದೆ, ಇನ್ನೊಂದು ಕೊಲಂಬಸ್ ನನ್ನ ವಿಮರ್ಶಿಸಲು ಪ್ರೇರೇಪಿಸುತ್ತದೆ

ನನಗೆ ಕೊಲಂಬಸ್ ಕಾಡಲು ಶುರುವಾದದ್ದು ಹೇಗೆ ಎನ್ನುವ ಪುಟ್ಟ ಬರಹ ಇಲ್ಲಿದೆ. ಆ ನಂತರ ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಲೇಖನ

GNM caricature‘ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಆಗ ತಾನೇ ಭೂಪಾಲ್ ದುರಂತ ಆಗಿತ್ತು. ಜ್ಞಾನ ವಿಜ್ಞಾನ ಸಮಿತಿ ಕೇರಳದಲ್ಲಿ ತುಂಬಾ active ಆಗಿತ್ತು. ಭೂಪಾಲ ದುರಂತದ ಬಗ್ಗೆ ನಾಟಕವಾಡುತ್ತಾ ಬೆಂಗಳೂರಿಗೂ ಬಂದಿದ್ದರು. ಸ್ವಲ್ಪ ತಿಂಗಳು ಕಳೆದಿರಬಹುದು. ‘ವಾಸ್ಕೊಡಿಗಾಮ ಕೇರಳವನ್ನೇನು ಕಂಡು ಹಿಡಿಯಲಿಲ್ಲ’ ಎನ್ನುವ ಹೇಳಿಕೆ ಪತ್ರಿಕೆಗಳಲ್ಲಿ ಓದಿದೆ. ಮತ್ತೆ ಅದೇ ಕೇರಳೀಯರು ದನಿ ಎತ್ತಿದ್ದರು. ಅದಕ್ಕೆ ಕಾರಣ ಕೇರಳ ಸರ್ಕಾರ ವಾಸ್ಕೊಡಿಗಾಮ ಕೇರಳಕ್ಕೆ ಬಂದ ದಿನಾಚರಣೆಗೆ ಮುಂದಾಗಿತ್ತು. ವಾಸ್ಕೊಡಿಗಾಮ ಕೇರಳಕ್ಕೆ ಬರುವ ಮೊದಲು ಕೇರಳ ಇರಲಿಲ್ಲವೇ ಎನ್ನುವ ಬಿಸಿ ಬಿಸಿ ಚರ್ಚೆ ಎದ್ದಿತು.
ಆ ಎಷ್ಟೋ ವರ್ಷಗಳ ನಂತರ ನಾನು ಕ್ಯೂಬಾಗೆ ಹೊದೆ. ಅಲ್ಲಿ ಫಿಡೆಲ್ ಕ್ಯಾಸ್ಟ್ರೋ ಮಾತನಾಡಿದ ಎಲ್ಲವನ್ನೂ ಹುಡುಕಿ ಹುಡುಕಿ ಓದುತ್ತಿದ್ದೆ. ಆಗಲೇ ಕೊಲಂಬಸ್ ವಿರುದ್ಧ ಕ್ಯಾಸ್ಟ್ರೋ ದಶಕಗಳ ಹಿಂದೆ ದನಿ ಎತ್ತಿದ್ದು ಕಣ್ಣಿಗೆಬಿತ್ತು. ‘ಅಮೇರಿಕಾ ಕಂಡು ಹಿಡಿದದ್ದು ಕೊಲಂಬಸ್ ಅಲ್ಲ, ಆತ ಅಮೆರಿಕವನ್ನು ಕೊಂದ ಅಷ್ಟೇ’ ಎನ್ನುವ ಅವರ ಭಾಷಣ ಓದಿ ‘ಹೌದಲ್ಲಾ!’ ಎನಿಸಿತು. ಅದೇ ಕ್ಯೂಬಾದಲ್ಲಿ ಕಾಫಿ ಕುಡಿಯಲು ಹೋದಾಗ ಕಾರಣವಿಲ್ಲದೆ ಜರುಗಿದ ಘಟನೆ ಕಾಫಿ ಕಪ್ಪಿನೊಳಗೆ ಕೊಲಂಬಸ್ ಹುಟ್ಟಲು ಕಾರಣವಾಯಿತು.’
ಪುಸ್ತಕ ಈಗ ಅಂಕಿತ, ನವಕರ್ನಾಟಕ, ಸಪ್ನಾ ಸೇರಿದಂತೆ ಎಲ್ಲಾ ಮಳಿಗೆಗಳಲ್ಲಿ ಲಭ್ಯ 
ಈ ಕೃತಿ ಪ್ರಕಟಿಸಿದವರು ಅಭಿನವ ಪ್ರಕಾಶನ 9448804905

columbus cover

ಜಿ ಎನ್ ಮೋಹನ್

ಆ ಹಡಗು ಸಮುದ್ರದ ಮಧ್ಯೆ ದಾರಿ ಮಾಡಿಕೊಳ್ಳುತ್ತಾ ಹೊರಟದ್ದೇ ತಡ ಜಗತ್ತು ಎಂದಿನ ಜಗತ್ತಾಗಿ ಉಳಿಯಲಿಲ್ಲ. ಆ ಹಡಗು ಸೂರ್ಯನ ಗುರುತನ್ನು ಆಧಾರವಾಗಿಟ್ಟುಕೊಂಡು ತನ್ನ ಪಯಣ ಆರಂಭಿಸಿದ್ದೆ ತಡ ಸಾವು ತನ್ನ ಕಾಲ ಬುಡದಲ್ಲಿ ಬಿದ್ದಿದೆ ಎನ್ನುವುದು ಅನೇಕರಿಗೆ ತಿಳಿದಿರಲಿಲ. ಆ ಹಡಗು ಜಗತ್ತು ಚಪ್ಪಟೆಯಾಗಿದೆ ಎನ್ನುವುದನ್ನು ಸುಳ್ಳು ಮಾಡುತ್ತೇನೆ ಎಂದು ಹೊರಟಾಗ ಅದು ಸಾವಿರಾರು ಹೊಸ ಸುಳ್ಳುಗಳಿಗೆ ದಾರಿಯಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆ ಹಡಗು ಮೂರು ವರ್ಷಗಳಿಗಾಗುವಷ್ಟು ಆಹಾರವನ್ನು ಹೊತ್ತು ಹೊರಟಾಗ ಅದು ಜಗತ್ತಿನ ಅನ್ನವನ್ನು, ಅವಕಾಶವನ್ನು, ಭವಿಷ್ಯವನ್ನು ಕಸಿಯುತ್ತದೆ ಎಂದು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ಆತ- ಕೊಲಂಬಸ್. ಸ್ಪೇನ್ ನ ರಾಣಿ ಇಸಾಬೆಲ್ಲಾಳ ಬೆಂಬಲವನ್ನು ಬಗಲಲ್ಲಿಟ್ಟುಕೊಂಡು 1492 ಅಕ್ಟೋಬರ್ 12 ರಂದು ಆತ ಸಂಚಾರ ಹೊರಟದ್ದೇ ತಡ ಜಗತ್ತಿನ ಚರಿತ್ರೆಯ ಪುಟಗಳು ಮಗ್ಗುಲು ಬದಲಿಸಿಕೊಂಡವು.

ಯಾಕೋ ಕಳೆದ ಹಲವು ದಿನಗಳಿಂದ ನನಗೆ ಕೊಲಂಬಸ್ ಬಿಟ್ಟೂ ಬಿಡದೆ ಕಾಡುತ್ತಿದ್ದಾನೆ. ನಿಂತರೂ ಕುಂತರೂ ಕೊಲಂಬಸ್ ನದ್ದೇ ಗುಂಗು. ಹಾಗಾಗಲು ಕಾರಣವಾದದ್ದು ನಾನು ಕುಡಿಯಲು ಹೊರಟಿದ್ದ ಒಂದು ಕಪ್ ಕಾಫಿ ಎಂದರೆ ನೀವು ನಂಬಬೇಕು. ಆ ಒಂದು ಪುಟ್ಟ ಕಾಫಿ ಕಪ್ ನನಗೆ ಭೂಗೋಳವನ್ನೂ ಚರಿತ್ರೆಯನ್ನೂ ಕಲಿಸಿಬಿಟ್ಟಿತು. ಕ್ಯೂಬಾದಲ್ಲಿದ್ದೆ. ಕಾಫಿ ಹುಚ್ಚಿಗೆ ಬಿದ್ದು ಒಲ್ಲದ ಮನಸ್ಸಿನಿಂದ ಸಾಕಷ್ಟು ಡಾಲರ್ ಖರ್ಚು ಮಾಡಿ ಕಾಫಿಗೆ ಆರ್ಡರ್ ಮಾಡಿದೆ. ಕಾಫಿ ಕೊಡುತ್ತಿದ್ದವ ‘ಕಾಫಿಗೆ ಹಾಲು ಸೇರಿಸಬೇಕೆ?’ ಎಂದು ಕೇಳಿದ. ‘ಎಸ್, ಕಾಫಿ ವಿಥ್ ಮಿಲ್ಕ್ ಪ್ಲೀಸ್’ ಅಂದೆ. ಅಂದದಷ್ಟೇ, ಪಕ್ಕದಲ್ಲಿದ್ದಾಕೆ ನನ್ನನ್ನು ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಹಿಗ್ಗಾಮುಗ್ಗಾ ಬೆಂಡೆತ್ತಲು ಆರಂಭಿಸಿದಳು. ಯಾಕೆ ಹೀಗೆ? ಎಂದು ಕಳವಳಕ್ಕೆ ಬಿದ್ದಿದ್ದವನನ್ನು ಅಂಗಡಿಯಾತ ‘ನೀವು ಕಾಫಿಗೆ ಹಾಲು ಹಾಕಿಸಿಕೊಂಡಿರಲ್ಲಾ ಅದಕ್ಕೆ. ಕಾಫಿಗೆ ಹಾಲು ಹಾಕಿಸಿಕೊಳ್ಳುವವರು ಹೆಚ್ಚಾಗಿ ಬ್ರಿಟಿಷರು ಮಾತ್ರ. ಉಳಿದ ಕಡೆ ಕಾಫಿ ಎಂದರೆ ಕಾಫಿ ಮಾತ್ರ’ ಅಂದ. ಕಾಫಿಗೆ ಹಾಲು ಹಾಕಿಸಿಕೊಂಡದ್ದೇ ತಡ ಆಕೆಯ ಹೊಟ್ಟೆಯಲ್ಲಿದ್ದ ಬ್ರಿಟಿಷರ ವಿರುಧ್ಧದ ಸಿಟ್ಟೆಲ್ಲಾ ಹೊರಬಂದಿತ್ತು. ನಾನು ಹಿಡಿದಿದ್ದ ಕಾಫಿಯ ಕಪ್ ಆಗ ನನಗೆ ಕಾಫಿಯ ಕಪ್ ಆಗಿ ಮಾತ್ರ ಉಳಿದಿರಲಿಲ್ಲ ನನಗೆ ಚರಿತ್ರೆ ಭೂಗೋಳ ಕಲಿಸಿದ ಎಲ್ಲವೂ ಆಗಿಹೋಗಿತ್ತು. ನನ್ನ ಕಾಫಿ ಕಪ್ಪಿನೊಳಗೆ ಆ ಕ್ಷಣ ನೀವು ಇಣುಕಿದ್ದರೆ ದೊಡ್ಡ ಬಿರುಗಾಳಿಯನ್ನೇ ಕಾಣಬಹುದಾಗಿತ್ತು.

columbus day posterಇದಾಗಿ ವರುಷಗಳು ಉರುಳಿ ಹೋಗಿದೆ. ಆದರೆ ಅಂದಿನಿಂದ ಇಂದಿನವರೆಗೆ ನನಗೆ ಚರಿತ್ರೆಯ ಪಾಠ ನಡೆಯುತ್ತಲೇ ಇದೆ. ಕಾಫಿಯೊಳಗಿನ ಹಾಲು ನನಗೆ ಹೊಸ ಚರಿತ್ರೆ ಕಲಿಸಿದ ದಿನದಿಂದ ನಾನು ಚರಿತ್ರೆಯ ಪುಟಗಳನ್ನು ಎಚ್ಚರಿಕೆಯಿಂದ ಓದುತ್ತಾ ಬಂದಿದ್ದೇನೆ. ಚರಿತ್ರೆಯ ಪುಟಗಳ ನಡುವೆ ಆಡದೆ ಬಿಟ್ಟಿರುವ ಮಾತುಗಳನ್ನು ಓದುತ್ತಾ ಬರುತ್ತಿದ್ದೇನೆ. ಚರಿತ್ರೆಯ ಪುಟಗಳು ಹೇಳದೆ ಬಿಟ್ಟಿದ್ದನ್ನು ಹೆಕ್ಕಿ ನೋಡುತ್ತಿದ್ದೇನೆ. ಹಾಗೆ ಹುಡುಕುವಾಗಲೇ ನನಗೆ ಸಿಕ್ಕಿದ್ದು ಈ ಕೊಲಂಬಸ್.

ಕೆಲವೇ ವಾರಗಳ ಹಿಂದೆ ಅಮೇರಿಕಾದಲ್ಲೂ ಈ ಚರಿತ್ರೆಯ ಗುಳ್ಳೆಗಳು ಒಡೆದು ಹೋಗಿದ್ದವು. ‘ಸ್ಯಾಂಡಿ’ಗೂ ಮುನ್ನವೇ ಇನ್ನೊಂದು ಚಂಡಮಾರುತ ಎದ್ದು ಬಂದಿತ್ತು. ಅದು ಚರಿತ್ರೆಯ ಪುಟಗಳಲ್ಲಿ ಎದ್ದ ಚಂಡಮಾರುತ. ಕೊಲಂಬಸ್ ದಿನಾಚರಣೆಯನ್ನು ಸರ್ಕಾರ ರದ್ದು ಮಾಡಬೇಕು, ಘೋಷಿಸಿರುವ ಸರ್ಕಾರಿ ರಜವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು, ಕೈಯಲ್ಲಿ ರಕ್ತ ಮೆತ್ತಿದ ವ್ಯಕ್ತಿಯನ್ನು ದೇಶದ ದೊಡ್ಡ ಮನುಷ್ಯ ಎಂದು ಬಿಂಬಿಸುವುದೇಕೆ? ಎನ್ನುವ ಕೂಗೆದ್ದಿತ್ತು. ಈ ಕೂಗನ್ನು ಎತ್ತಿದವರು ಅಮೆರಿಕಾದ ಮೂಲನಿವಾಸಿಗಳು, ಚರಿತ್ರಕಾರರು ಹಾಗೂ ನನ್ನಂತೆಯೇ ಕಾಫಿ ಕುಡಿದಿದ್ದ ಹಲವಾರು ಮಂದಿ. ‘ಒಂದು ಪ್ರಶ್ನೆ ಕೇಳುತ್ತೇವೆ. ಜರ್ಮನಿಯ ಯಹೂದಿಗಳ ಓಣಿಯಲ್ಲಿ ಹಿಟ್ಲರ್ ನ ಗುಣಗಾನ ಮಾಡುವ, ಆರಾಧಿಸುವ ಮೆರವಣಿಗೆ ನಡೆದರೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಇದು ಸಾಧ್ಯವೇ? ಹಾಗಾಗಲು ಸಾಧ್ಯವಿಲ್ಲ ಎನ್ನುವುದಾದರೆ ಅಮೆರಿಕಾದ ಪಾಲಿಗೆ ಹಿಟ್ಲರ್ ಆದ ಕೊಲಂಬಸ್ ನನ್ನು ಹೇಗೆ ಆರಾಧಿಸುತ್ತೀರಿ? ಎಂದು ಸಾರ್ವಜನಿಕ ಹೇಳಿಕೆಗಳು ಬಿಡುಗಡೆಯಾದವು. ಕರಪತ್ರಗಳು ಹಂಚಿಕೆಯಾದವು. ಕೊಲಂಬಸ್ ನ ಪ್ರತಿಮೆಯ ಮೇಲೆ ರಕ್ತದ ಸಂಕೇತವಾಗಿ ಕೆಂಪು ಬಣ್ಣವನ್ನು ಎರಚಲಾಯಿತು.

ಈ ಆಕ್ರೋಶಕ್ಕೆ ಕಾರಣವಿದೆ. ಇಟಲಿಯ ಮೂಲದ ಕೊಲಂಬಸ್ ಭಾರತದಲ್ಲಿದ್ದ ಸಂಬಾರ ಪದಾರ್ಥ, ರೇಷ್ಮೆ ಹಾಗೂ ಧನ ಕನಕದ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದ. ಹಾಗಾಗಿ ಸಮುದ್ರ ಮಾರ್ಗವಾಗಿ ಹೋಗಿ ಭಾರತದಿಂದ ಅಮೂಲ್ಯವಾದ ಎಲ್ಲವನ್ನೂ ಹೊತ್ತುಕೊಂಡು ಬರುವ ಬಗ್ಗೆ ಸ್ಪೇನ್ ನ ರಾಣಿ ಇಸಾಬೆಲ್ಲಾಳ ಮನ ಒಲಿಸಿದ. ಆಗ ಸಾಗರ ಮಾರ್ಗಗಳೇ ಒಂದು ದೇಶದ ಭವಿಷ್ಯವನ್ನು ಬದಲಿಸಿ ಹಾಕುವ ಮಾರ್ಗಗಳಾಗಿದ್ದವು. ಹೊಸ ದಾರಿ ಹುಡುಕುವುದು ಎನ್ನುವುದು ಹೊಸ ಸಂಪತ್ತನ್ನು ದೋಚುವುದು ಎನ್ನುವ ಅರ್ಥವನ್ನೇ ಪಡೆದಿತ್ತು. ಹಾಗೆ ಭಾರತ ಮುಟ್ಟುವ ಆಸೆಯಿಂದ ಹೊರಟ ಕೊಲಂಬಸ್ ಲೆಕ್ಕಾಚಾರ ತಪ್ಪಿತ್ತು. ಆತ ಭೂಮಿಯ ವಿಸ್ತಾರವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ. ಸಾಗರದಲ್ಲಿನ ಮೈಲುಗಳ ಅಂದಾಜು ತಪ್ಪಿದ್ದ. ಹಾಗಾಗಿ ಆತ ಹೋಗಿ ಮುಟ್ಟಿದ ನೆಲವನ್ನೇ ಭಾರತ ಎಂದುಕೊಂಡ. ಹಾಗೆ ಆತ ಕಾಲಿಟ್ಟದ್ದು ವೆಸ್ಟ್ ಇಂಡೀಸ್, ಕ್ಯೂಬಾ, ಅಮೇರಿಕಾ ಹೀಗೆ.. ಚರಿತ್ರೆಯ ಪುಸ್ತಕ ಬರೆದವರು ‘ಕೊಲಂಬಸ್ ಅಮೆರಿಕಾವನ್ನು ಕಂಡುಹಿಡಿದ’ ಎಂದು ಬರೆದು ಕೈ ತೊಳೆದುಕೊಂಡರು.

castroಆಗಲೇ ಫಿಡೆಲ್ ಕ್ಯಾಸ್ಟ್ರೋ ಗುಡುಗಿದ್ದು- ವೆಸ್ಟ್ ಇಂಡೀಸ್, ಕ್ಯೂಬಾ ಆ ಮೂಲಕ ಅಮೆರಿಕಾವನ್ನು ಕೊಲಂಬಸ್ ಕಂಡುಹಿಡಿದ 500ನೆ ವರ್ಷಾಚರಣೆಯನ್ನು ಅದ್ಧೂರಿಯಿಂದ ಆಚರಿಸಲು ಸ್ಪೇನ್ ಸಜಾಗುತ್ತಿದ್ದಾಗ ಕ್ಯಾಸ್ಟ್ರೋ ಅಪಸ್ವರ ಎತ್ತಿದರು. ‘ಯಾವುದೇ ಒಂದು ದೇಶವನ್ನು ಕಂಡು ಹಿಡಿಯುವುದು ಎಂದರೇನು?’ ಎಂದು ಪ್ರಶ್ನಿಸಿದರು. ‘ಕೊಲಂಬಸ್ ಇಲ್ಲಿಗೆ ಕಾಲಿಟ್ಟಿರಬಹುದು ಅಷ್ಟೇ, ಆದರೆ ಆತ ಕಂಡು ಹಿಡಿಯಲು ಹೇಗೆ ಸಾಧ್ಯ?’ ಏಂಬ ಪ್ರಶ್ನೆ ಎತ್ತಿದರು. ಇದೇ ಪ್ರಶ್ನೆಯನ್ನು ಈಗ ಅನೇಕ ಅಮೆರಿಕನ್ನರೂ ಕೇಳುತ್ತಿದ್ದಾರೆ. ಅಕ್ಟೋಬರ್ 12 ಬಂತೆಂದರೆ ಸಾಕು ಅಮೇರಿಕಾ ಕೊಲಂಬಸ್ ಪರ ವಿರೋಧದ ಹೊಸ ಚರ್ಚೆಗೆ ಕಾರಣವಾಗುತ್ತದೆ. ಅಮೆರಿಕಾದಲ್ಲಿ ನೆಲಸಿರುವ ಇಟಲಿ, ಸ್ಪೇನ್ ನವರಿಗೆ ತಾವು ಅಮೆರಿಕಾವನ್ನು ಕಂಡು ಹಿಡಿದೆವು ಎನ್ನುವ ಹೆಮ್ಮೆಯಾದರೆ ಅಮೆರಿಕಾದ ಹಲವು ಮೂಲ ನಿವಾಸಿಗಳಿಗೆ ಇದು ತಮ್ಮನ್ನು ಹೊಸಕಿ ಹಾಕಿದ ನೋವಿನ ಘಟನೆಯಾಗಿ ಕಾಣುತ್ತದೆ. ಕೊಲಂಬಸ್ ಅಮೆರಿಕಾದಲ್ಲಿ ಕಾಲಿಡುವ ಮುಂಚೆಯೇ 145 ದಶಲಕ್ಷ ಮಂದಿ ಇದ್ದರು. 565 ಬುಡಕಟ್ಟುಗಳು ಇದ್ದವು. ಇಲ್ಲಿನ ಮೂಲನಿವಾಸಿಗಳನ್ನು ಕತ್ತರಿಸಿದ, ಹೊಸಕಿ ಹಾಕಿದ ಅವರನ್ನು ಲೂಟಿ ಮಾಡಿದ, ಅಮೆರಿಕಾದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ಬಗ್ಗೆ ಸಂಶೋಧಕರು. ಚರಿತ್ರಕಾರರು ಪುರಾವೆ ನೀಡುತ್ತಲೇ ಬಂದಿದ್ದಾರೆ. ಸಿಡುಬಿನ ರೋಗಾಣುಗಳನ್ನು ಹೊತ್ತ ಕಂಬಳಿಗಳನ್ನು ಮೂಲನಿವಾಸಿಗಳಿಗೆ ನೀಡಿ ರೋಗ ಹರಡುವಂತೆ ಮಾಡಿದ್ದು. ಬೇಟೆ ಆಡಬೇಕು ಎಂದು ಆಸೆಯಾದಾಗ ಮನುಷ್ಯರನ್ನೇ ಅಟ್ಟಾಡಿಸಿ ಗುಂಡು ಹಾರಿಸಿ ಕೊಂದದ್ದು, ಹಾಗೆ ಸತ್ತವರನ್ನು ತನ್ನ್ನ ಬೇಟೆ ನಾಯಿಗಳಿಗೆ ಆಹಾರವಾಗಿ ನೀಡಿದ್ದು, ಲಕ್ಷಾಂತರ ಜನರನ್ನು ಗುಲಾಮರನ್ನಾಗಿಸಿಕೊಂಡು ವಿವಿಧ ದೇಶಗಳಿಗೆ ಹೊತ್ತೊಯ್ದದ್ದು, ಮಕ್ಕಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು ಎಲ್ಲವೂ ಚರಿತ್ರೆಯ ಪುಟಗಳಲ್ಲಿ ಏಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

lies columbusಈ ಕೊಲಂಬಸ್ ವಿವಾದದ ನೆರಳು ಭಾರತವನ್ನೂ ಬಿಟ್ಟಿಲ್ಲ. ಕೊಲಂಬಿಯನ್ನರಿಗಿಂತ ಮುಂಚೆ ಭಾರತ ತಲುಪಿಬಿಡಬೇಕು ಎಂದುಕೊಂಡ ಕೊಲಂಬಸ್ ಎಲ್ಲೆಲ್ಲಿಗೋ ಹೋಗಿ ಮುಟ್ಟಿದ. ಆದರೆ ಅವನೊಬ್ಬನಿದ್ದ ವಾಸ್ಕೋ ಡ ಗಾಮ. ಪೋರ್ಚುಗಲ್ಲಿನಿಂದ ಹೊರಟ ಆತ ಕೇರಳ, ಗೋವಾಗೆ ಕಾಲಿಟ್ಟ. ವಾಸ್ಕೋ ಡ ಗಾಮ ಭೇಟಿ ಕೊಟ್ಟ 500ನೆಯ ವರ್ಷಾಚರಣೆಗೆ ಭಾರತ ಸಜ್ಜಾಗುತ್ತಿರುವಾಗ ಇಲ್ಲಿಯೂ ಕೊಲಂಬಸ್ ಅಮೆರಿಕಾವನ್ನು ಕಂಡು ಹಿಡಿದ ಘಟನೆ ನೆನಪಾಯಿತು. ‘ವಾಸ್ಕೋ ಡ ಗಾಮ ಭಾರತವನ್ನು ಕಂಡು ಹಿಡಿಯಲು ಹೇಗೆ ಸಾಧ್ಯ? ಆತ ಬಂದ ಕಾರಣದಿಂದಾಗಿಯೇ ಭಾರತ ಶತಮಾನಗಳ ದಾಸ್ಯಕ್ಕೆ ಒಳಗಾಗಬೇಕಾಯಿತು. ಆಚರಣೆ ಕೈಬಿಡಿ’ ಎಂದು ಕೇರಳ, ಗೋವಾದಲ್ಲಿ ಪ್ರತಿಭಟನೆಯ ಅಲೆ ಎದ್ದಿತು. ‘ಆತ ಇಲ್ಲಿಗೆ ಬಂದಿದ್ದ, ಅದು ವ್ಯಾಪಾರದ ಹೊಸ ನಡೆಗೆ ದಾರಿಯಾಯಿತು ಎನ್ನುವುದಷ್ಟನ್ನು ಮಾತ್ರವೇ ಸರ್ಕಾರ ಗುರುತಿಸಲು ಇಷ್ಟಪಡುತ್ತದೆ’ ಎಂದು ಸರ್ಕಾರವೇ ಖುದ್ದು ಹೇಳಿಕೆ ನೀಡಬೇಕಾಯಿತು. ಅಷ್ಟರ ಮಟ್ಟಿಗಾದರೂ ಕೊಲಂಬಸ್ ನನ್ನು ಸೀಮಿತಗೊಳಿಸಲು ಅಮೇರಿಕಾ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಚರಿತ್ರೆ ಎನ್ನುವುದು ಅಂಕಿ ಅಂಶ, ಎದ್ದ ರಾಜರು, ಬಿದ್ದ ಸಾಮ್ರಾಜ್ಯಗಳ ಲೆಕ್ಕವಲ್ಲ ಎನ್ನುವುದು ಗೊತ್ತಾಗಲು ಇನ್ನೂ ಸಾಕಷ್ಟು ವಾದ ವಿವಾದಗಳು ನಡೆಯಬೇಕಿದೆ. ಈ ಮಧ್ಯೆಯೇ ಅಮೆರಿಕಾದ ಹೆಸರಾಂತ ಸಮಾಜಶಾಸ್ತ್ರಜ್ಞ ಜೇಮ್ಸ್ ಲೋವೆನ್ ಅಮೆರಿಕಾದ ಶಾಲೆಗಳು ಕಲಿಸುತ್ತಿರುವ ಅಷ್ಟೂ ಚರಿತ್ರೆಯ ಪುಟಗಳನ್ನೂ ತಿರುವು ಹಾಕಿದರು. ವಿಸ್ತಾರ ಅಧ್ಯಯನ ನಡೆಸಿ ‘ನನ್ನ ಅಧ್ಯಾಪಕರು ನನಗೆ ಹೇಳಿದ ಸುಳ್ಳುಗಳು’ (Lies My Teacher Told Me) ಎನ್ನುವ ಪುಸ್ತಕ ಹೊರತಂದರು. ಆ ಸರಣಿಯಲ್ಲಿ ಈಗ ‘ನನ್ನ ಅಧ್ಯಾಪಕರು ನನಗೆ ಕ್ರಿಸ್ತೋಫರ್ ಕೊಲಂಬಸ್ ಬಗ್ಗೆ ಹೇಳಿದ ಸುಳ್ಳೇನು? ಎನ್ನುವ ಪುಸ್ತಕ ಹೊರಬಂದಿದೆ. ಅಲ್ಲಿ ಅವರು ಪುಸ್ತಕಗಳ ಪುಟಗಳಲ್ಲಿ ಚರಿತ್ರೆಯ ಶವ ಪರೀಕ್ಷೆ ನಡೆಸುತ್ತಿದ್ದಾರೆ ಇಲ್ಲಿ ನಾನು ಕೈನಲ್ಲಿ ಕಾಫಿ ಕಪ್ ಹಿಡಿದು ಕುಳಿತಿದ್ದೇನೆ.

 

‍ಲೇಖಕರು Admin

October 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕೊರೊನಾ ಕಾಲಘಟ್ಟದಲ್ಲಿ ಆತ್ಮವಿಶ್ವಾಸ

ಕೊರೊನಾ ಕಾಲಘಟ್ಟದಲ್ಲಿ ಆತ್ಮವಿಶ್ವಾಸ

‌ ಲತಾ ಸಂತೋಷ ‌ಶೆಟ್ಟಿ ಇಡಿ ಜಗತ್ತನ್ನೇ ತಲ್ಲಣಗೊಳಿಸಿರುವ  ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸಲು  ಸರಕಾರ ವಿಧಿಸಿದ ಧೀರ್ಘ ಕಾಲದ...

ದೇವನೂರು ಎಂಬ ‘ಜೋತಮ್ಮ’

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ...

3 ಪ್ರತಿಕ್ರಿಯೆಗಳು

 1. Dr. Prabhakar M. Nimbargi

  And Pope Benedict says about this massive genocide that “Colonization by Spain and Portugal of Americas was not a conquest but rather and ADOPTION OF AMERICAN INDIANS THROUGH BAPTISM, MAKING THEIR CULTURES FRUITFUL AND PURIFYING THEM.” What a fantastic claim???
  So what Columbus did was to initiate the process of Genocide in the coming years by his fellowmen of Spain & Italy, whose “SPIRITUAL SUPERIOR” was the Pope in those ancient years.

  ಪ್ರತಿಕ್ರಿಯೆ
 2. Mahendra Kumar H M

  A Good Eye opening subject about ‘ವಾಸ್ಕೋ ಡ ಗಾಮ ಭಾರತವನ್ನು ಕಂಡು ಹಿಡಿಯಲು ಹೇಗೆ ಸಾಧ್ಯ? ಆತ ಬಂದ ಕಾರಣದಿಂದಾಗಿಯೇ ಭಾರತ ಶತಮಾನಗಳ ದಾಸ್ಯಕ್ಕೆ ಒಳಗಾಗಬೇಕಾಯಿತು. ಆಚರಣೆ ಕೈಬಿಡಿ’ – every indian should think about these words. Business made us, slaves.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: