‘ಕಾಮನ ಹುಣ್ಣಿಮೆ’ಯಲ್ಲಿ ತಂಗಾಳಿಯ ಕಂಪು

ಪ್ರಕಾಶ್‍ ಕೊಡಗನೂರ್

ಇದೊಂದು ತೆಳು ವೈಚಾರಿಕ ನೆಲೆಗಟ್ಟಿನಲ್ಲಿರುವ ಭಾವನಾತ್ಮಕ ಕಾದಂಬರಿ! ವೈವಿಧ್ಯಮಯ ವಿಚಾರ, ಸಿದ್ಧಾಂತಗಳ ನೆರಳಲ್ಲಿಯೇ ಸಾಗುವ ಕಾದಂಬರಿಯಲ್ಲಿ ಬದುಕು ಮುಖ್ಯವಾಗುತ್ತದೆ; ಬದುಕಿನ ಗತಿಯೂ ಪಥ್ಯವೆನಿಸುತ್ತದೆ. ಎಲ್ಲೂ ಹಳಿ ತಪ್ಪದ ಬಿಗಿ ನಿರೂಪಣೆ, ಸಂಭಾಷಣೆ; ಪಾತ್ರ ಮತ್ತು ಘಟನೆಗಳ ಜೋಡಣೆ ಲೇಖಕರ ಕಲಾತ್ಮಕ ಕುಸುರಿಗೆ ಸಾಣೆ ಹಿಡಿದಂತಿದೆ.

ನಟರಾಜ್ ಹುಳಿಯಾರ್ ನಾಡಿನ ಸಾಹಿತ್ಯ ಲೋಕದ ಮಿನುಗುವ ನಕ್ಷತ್ರ. ಕತೆ, ಕವಿತೆ, ನಾಟಕ, ವಿಮರ್ಶೆ ಮತ್ತಿತರ ಗದ್ಯ ಪ್ರಕಾರಗಳಲ್ಲಿ ಕೃಷಿ ಮಾಡಿ ಹೆಸರುಗೈದಿರುವವರಲ್ಲಿ ಮುಂಚೂಣಿಯಲ್ಲಿರುವ ಇವರು ಇದೀಗ ಕಾದಂಬರಿ ಪ್ರಕಾರದಲ್ಲೂ ಹೆಜ್ಜೆಯಿಟ್ಟು ನಾಡಿನ ಸಾರಸ್ವತ ಲೋಕದ ಗಮನ ಸೆಳೆದಿದ್ದಾರೆ. ಪ್ರೇಮದ ಬಗ್ಗೆ ಬಹಳ ಕೇಳಿದ್ದೇವೆ, ನೋಡಿದ್ದೇವೆ; ಓದಿದ್ದೇವೆ ಕೂಡ. ಕಾಮದ ಬಗ್ಗೆ? ಇದಕ್ಕೆ ಉತ್ತರವೆಂಬಂತೆ ಲಂಕೇಶ್, ಅನಂತಮೂರ್ತಿ, ಗಂಗಾಧರ ಚಿತ್ತಾಲ, ಕಾರ್ನಾಡ್, ತೇಜಸ್ವಿ, ಬರಗೂರರಂತಹ ಘಟಾನುಘಟಿಗಳು ತಮ್ಮ ತಮ್ಮ ಸಾಹಿತ್ಯಕ ಪ್ರಕಾರಗಳಲ್ಲಿ ಅಭಿವ್ಯಕ್ತಿಸಿದ್ದಿದೆ. ಇಂಥದ್ದೊಂದು ಪ್ರಯತ್ನವನ್ನು ನಟರಾಜ್ ಹುಳಿಯಾರ್ ಕೂಡ ತಮ್ಮ ಕಾದಂಬರಿ ‘ಕಾಮನ ಹುಣ್ಣಿಮೆ’ಯ ಮೂಲಕ ಮಾಡಿರುವುದು ವಿಶೇಷ ಮತ್ತು ಗಮನಾರ್ಹ.

ಊರೊಂದನ್ನು ಕೇಂದ್ರಸ್ಥಾನವಾಗಿಟ್ಟುಕೊಂಡು ಸಾಗುವ ಕಾದಂಬರಿ ‘ಬೆಳೆವ-ಬೆಳೆಸುವ’ ಪ್ರಕ್ರಿಯೆಯಲ್ಲಿ ಅಸಾಮಾನ್ಯ ಅದ್ವಿತೀಯ ಸಾಧನೆಗೈದಿದೆಯೆಂದೇ ಹೇಳಬೇಕು. ಸಾಧಾರಣ ಹಳ್ಳಿ, ಹಳ್ಳಿ ಹುಡುಗರು, ಹೆಂಗಸರು, ಮಿಲುಟ್ರಿ ಕಸುಬಿನವರು ಸರ್ಕಾರಿ ಶಾಲೆ, ಕ್ರೈಸ್ತರ ಶಾಲೆ, ಬಸ್‍ಸ್ಟ್ಯಾಂಡು, ಅಂಗಡಿ, ಸಿನಿಮಾ ಟೆಂಟು- ಇತ್ಯಾದಿ ಸಂಗತಿಗಳೊಂದಿಗೆ ರೂಪುಗೊಳ್ಳುವ  ಕಾದಂಬರಿಯ ಬುನಾದಿ ಮುಂದೆ ರಾಮ್‍ದಾಸ್ ಮೇಷ್ಟ್ರು, ಚಂದ್ರಶೇಖರ್ ಪಾಟೀಲ್, ನಂಜುಂಡಸ್ವಾಮಿಗಳಂಥ ಹೋರಾಟಗಾರರೊಂದಿಗೆ ಎತ್ತರಕ್ಕೆ ಬೆಳೆದು ಮಾಕ್ರ್ಸಿಸ್ಟು, ಲೆನಿನಿಸ್ಟು; ರೈತಸಂಘ, ಡಿಎಸ್ಸೆಸ್ಸು ಚಿಂತನೆಗಳ ಓಕುಳಿಯಲ್ಲಿ ಮಿಂದೆದ್ದು ನಮ್ಮ ಕಣ್ಣಮುಂದೆ ಪೂರ್ಣಗೊಂಡ ಭವ್ಯವಾದ ಮಹಲಿನಂತಿದೆ. ಎಲ್ಲಿಯೂ ಕಾಮೋದ್ರೇಕವಾಗಲಿ ಭಾವೋದ್ರೇಕವಾಗಲಿ; ತತ್ವ ಸಿದ್ಧಾಂತಗಳ ಉದ್ರೇಕವಾಗಲಿ ಕಂಡುಬರದ ಕಾದಂಬರಿಯಲ್ಲಿ ಪ್ಯಾಬ್ಲೋ ನೆರೂಡನ ‘ಅನ್ನ, ಕಾಮ, ಕಾವ್ಯ’ ದ ರೂಪಕವೊಂದು ಸುಳಿದಾಡಿದಂತೆ ಭಾಸವಾಗುತ್ತದೆ.

ಭಾರತದಂಥ ಬಡ ಹಿಂದುಳಿದ ದೇಶದಲ್ಲಿ ತಂದೆಯಿಲ್ಲದ ಅಥವಾ ತಂದೆಯಿದ್ದೂ ನಾನಾ ಕಾರಣಗಳಿಂದಾಗಿ ತಂದೆಯಿಂದ ವಂಚಿತರಾಗಿ ತಾಯಿಯ ದ್ವಿಪಾತ್ರಾಭಿನಯದ ನೆರಳಲ್ಲಿ ಬದುಕುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚೆಂದೇ ಹೇಳಬೇಕು. ಕಾದಂಬರಿಯ ನಾಯಕ ಚಂದ್ರ ಇಂಥ ಮಕ್ಕಳಲ್ಲೊಬ್ಬನಾಗಿ ಗುರುತಿಸಿಕೊಳ್ಳುತ್ತಾನೆ. ‘ಒಂದಲ್ಲ ಒಂದು ದಿನ ಎಲ್ಲವೂ ಸರಿ ಹೋಗುತ್ತದೆ ಎಂಬ ಕನಸನ್ನು ಮಾತ್ರ ಶಾಂತಕ್ಕ ಎಂದಿಗೂ ಬಿಟ್ಟುಕೊಟ್ಟಿರಲಿಲ್ಲ’ವೆಂಬ ಆಶಾವಾದದೊಂದಿಗೆ ಪ್ರಾರಂಭಗೊಳ್ಳುವ ಕಾದಂಬರಿ ಮುಕ್ತಾಯದಲ್ಲಿ ‘ಕಾಲ ಬರುತ್ತೆ ಬರುತ್ತೆ ಅಂತ ಹಳೇ ಕಾಲದೋರ ಥರಾ ಸುಮ್ನೆ ಕಾಯ್ತಾ ಕೂತಿರಬಾರದು; ಒಂದು ಸರಿಯಾದ ಕೆಲಸ ಮಾಡಬೇಕೂಂದರೆ ಅದಕ್ಕೆ ತಕ್ಕ ಕಾಲಾನ ನಾವೇ ಕ್ರಿಯೇಟ್ ಮಾಡ್ಕೋಬೇಕು!’ ಎಂಬ ಪ್ರಜ್ಞಾವಂತಿಕೆಯ ಪ್ರಯತ್ನವಾದದೊಂದಿಗೆ ‘ಚಂದ್ರ-ಭಾರ್ತಿ;ಶಾಂತಕ್ಕ-ನೀಲಗಂಗಯ್ಯ’ರ ಕಾಮನ ಹುಣ್ಣಿಮೆಯಲ್ಲಿ  ಲೀನವಾಗುತ್ತೆ.

ಇನ್ನು ಮಳೆ ನಿಂತರೂ ನಿಲ್ಲದ ಹನಿಗಳಂತೆ ಕಾದಂಬರಿಯ ಓದಿನ ನಂತರವೂ ಮುಖ್ಯಪಾತ್ರಗಳೊಂದಿಗೇ ನಿಲ್ಲುವ ಸಿನುಮಾ ರಾಜಣ್ಣ, ಹಾಡಿನ ಕಮಲಿ, ಶಿವಣ್ಣ, ಚಿನ್ನವ್ವ, ಲಾಲ್‍ಚಂದ್, ರಾಮ್‍ಚಂದ್, ಹಾಲಕ್ಕಿ ರಾಮಯ್ಯ, ಹುಸೇನ್ ಸಾಬ್‍ರಂಥವರುಗಳು ನಮ್ಮೊಳಗೇ ಕಾಡುವ ಉಳಿಯುವ ಪಾತ್ರಗಳ ಪ್ರತೀಕವಾಗಿ ಬಿಡುತ್ತವೆ.

ಎಸ್ಸೆಸ್ಸೆಲ್ಸಿ ಫೇಲಾದರೂ ಮರು ಪರೀಕ್ಷೆ ತೆಗೆದುಕೊಳ್ಳದೇ ರಾಜಣ್ಣನಾಡುವ  ‘ಅವುನವ್ವುನ್! ಅದ್ಯಾವ ತೊಲ್ಡ್ ಎಸೆಲ್ಸಿ ಎಕ್ಜಾಮಲೇ! ವರುಷ್ಕೆರಡು ರಾಜಕುಮಾರ್ ಹೊಸಾ ಪಿಚ್ಚರ್ ನೋಡಿರೆ ರಾಜುರ್ ತರಾ ಬಾಳ್ಮೆ ಮಾಡಬೋದು, ವಡೀಲಾ ಗೋಲಿಯಾ!’ ಮಾತಿನಿಂದ ಆಗಿನ ಕಾಲದಲ್ಲಿ ಅನಕ್ಷರಸ್ಥರು, ಅರೆಸಾಕ್ಷರಸ್ಥರುಗಳ ಮೇಲೆ ಸಿನಿಮಾ ಮಾಡಿದ್ದ ಮೋಡಿ ಎಂಥದ್ದೆಂಬುದನ್ನು ಊಹಿಸಬಹುದು. ಅದರಲ್ಲೂ ‘ಜೇಡರ ಬಲೆ; ಜಯ್ಯಂತಿ ಮೊಲೆ; ರಾಜ್‍ಕುಮಾರ್ ತಲೆ; ಎಂಪಿ ಶಂಕರ್ ಕೊಲೆ’ ಡೈಲಾಗು ಶಾಲಾ ಹುಡುಗರಿಗೂ ಬಾಯಿಪಾಠವಾಗಿತ್ತೆಂದರೆ ಕೇವಲ ಮನೋರಂಜನೆಯಲ್ಲದೇ ಮನುಷ್ಯತನ, ಮನುಷ್ಯಮನಗಳೆಲ್ಲವನ್ನೂ ಆಗಿನ ಕಾಲದಲ್ಲಿ ಕಟ್ಟಿಹಾಕಿದ ಏಕೈಕ ಮಾಧ್ಯಮ ಸಿನಿಮಾವಾಗಿತ್ತೆಂಬುದು ಇದರಿಂದ ವೇದ್ಯವಾಗುತ್ತೆ.

ಸಂಭಾಷಣೆಯ ನಡುವೆ ಲೇಖಕರು ಬಳಸುವ ‘ಆಂ!, ಊಂ!, ವೊ!, ಯೇ!, ಲೇಯ್!, ಅಲಿಲೆ!, ನೋಡನಿ!, ಅಯ್ಯಯ್ಯಪ್ಪಾ!, ಥೋಥೋಥೋಥೋ!, ಅಬ್ಬಬ್ಬಬ್ಬಾ!’ ಗಳಂಥ ಉದ್ಗಾರಗಳು ಓದುಗನೆದೆಯಲ್ಲಿ ಕಚಗುಳಿಯಿಡುವುದಲ್ಲದೆ ಪ್ರಾದೇಶಿಕ ಭಾಷಾ ಸೊಗಡಿನ ಮೆರಗನ್ನು ಹೆಚ್ಚಿಸಿವೆ. ಇಲ್ಲಿ ಬಳಸಿರುವ ಲೇಖನ ಚಿಹ್ನೆಗಳೂ ಕಲಾತ್ಮಕವಾಗಿ ವಿಜೃಂಭಿಸಿರುವುದರಿಂದ ಹೊಸತಲೆಮಾರಿನ ಬರಹಗಾರರಿಗೊಂದು ಮಾದರಿಯಾಗಿ ಈ ಕಾದಂಬರಿ ನಮ್ಮ ಕಣ್ಣಮುಂದೆ ನಿಲ್ಲುತ್ತದೆ.

‍ಲೇಖಕರು Avadhi

December 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This