ಕಾಮರೂಪಿ ಕಂಡ 'ಪ್ರಳಯ'

ಕಾಮರೂಪಿ
ಈಚೀಚೆಗೆ ಕೆಲವಾರು ಅದ್ಭುತ ಅನ್ನಬಹುದಾದ ಸಮಾಚಾರಗಳು ಟೀವಿಯಲ್ಲಿ ಪ್ರಸಾರವಾಗುತ್ತಿದೆಯಂತೆ. ಇದನ್ನು ನಾನು ಹೀಗೇ ಕೇಳಿದ ವಿಷಯ ಅನ್ನಬೇಕು. ಅದಕ್ಕೇ ’ಪ್ರಸಾರವಾಗುತ್ತಿದೆಯಂತೆ’ ಅಂದಿದ್ದೀನೆ. ಕಾರಣ ನನ್ನ ಮನೆಯಲ್ಲಿ ನಾನು ಎಂದೂ ಟೀವಿ ಇಟ್ಟುಕೊಂಡಿಲ್ಲ. ಈ ತಿಕ್ಕಲತನ ಯಾಕೆ, ಈ ಬಗ್ಗೆ ಬೇರೆ ಯಾವಾಗಲಾದರೂ ಬರೆಯುತ್ತೇನೆ.
ಈ ಅದ್ಭುತ ಸಮಾಚಾರಗಳ ಪ್ರಕಾರ ಸನ್ ಎರಡುಸಾವಿರದ ಹನ್ನೆರಡನೇ ಇಸವಿಯಲ್ಲಿ ಈ ಪೃಥಿವಿ ಅಂತ್ಯವಾಗುತ್ತಂತೆ. ಒಂದು ಊಹೆಯ ಪ್ರಕಾರ ಈ ಅಂತ್ಯ  ೧೨ ಜನುವರಿ ೨೦೧೨; ಇನ್ನೊಂದು ಅನುಮಾನದ ಪ್ರಕಾರ ೨೧ ಡಿಸೆಂಬರ್ ೨೦೧೨. ಈ ಗುಮಾನಿಗಳಲ್ಲೇ ಒಂದು ರೀತಿ ಯುಕ್ತಿ ಇದೆ ಅನ್ನಿಸುತ್ತದೆ. ೧೨ ಜನುವರಿ ಒಂದು ರೀತಿ ಉಲ್ಟ ಮಾಡಿದರೆ, ಅರ್ಥಾತ್ ಮೊದಲು ಕೊನೆ ಕೊನೆ ಮೊದಲು ಮಾಡಿದರೆ ಡಿಸೆಂಬರ್ ೨೧ ಆಗುತ್ತೆ ಅಲ್ವಾ?

ಆಹುದು, ಒಂದಲ್ಲ ಒಂದು ದಿನ ಈ ಪೃಥಿವಿ ಅಂತಗೊಳ್ಳುತ್ತದೆ. ಪುರಾಣಗಳ ಪ್ರಕಾರ ಇದು ನಿಜ. ಅಷ್ಟೇ ಮಟ್ಟಿಗೆ ಆಧುನಿಕ ವಿಙ್ನಾನದ ನೀತಿನಿಯಮಗಳ ಪ್ರಕಾರವೂ ಒಂದಲ್ಲ ಒಂದು ದಿನ ಈ ಪೃಥಿವಿ ಅಂತಗೊಳ್ಳಲೇ ಬೇಕು. ಆದರೆ ಇಷ್ಟು ಸ್ಪಷ್ಟ ಮತ್ತು ಖಡಾಖಂಡಿತವಾಗಿ ಒಂದು ಮುಹೂರ್ತ,ತಾರೀಕು ತಿಂಗಳಿನ ಸಮೇತ ಇಂತಹ ಘಳಿಗೆಯಲ್ಲಿ ಈ ಪೃಥಿವಿ ಕೊನೆಗಾಣುತ್ತೆ ಅಂತ ಇದುವರೆಗೆ ಅನೇಕ ಬಾರಿ ಹಲವಾರು ಮಂದಿ ಭವಿಷ್ಯವಾಣಿ ನುಡಿದಿದ್ದರೂ ಈವರೆಗೆ ಪೃಥಿವಿ ಹೆಚ್ಚು ಕಮ್ಮಿ ಎಂದಿನಂತೆಯೇ ಇದೆ. ಏಕೆಂದರೆ ಇವೆಲ್ಲಾ ಬರೇ ಭವಿಷ್ಯವಾಣಿಗಳು ಮಾತ್ರ.
ಈ ಬರಲಿರುವ ’ಅಂತಿಮ’ ಮುಹೂರ್ತದ ಹಿನ್ನೆಲೆಯಲ್ಲಿ ಸುಮಾರು ಐವತ್ತು ವರುಷಗಳ ಹಿಂದೆ ಇದೇ ರೀತಿ ಪೃಥಿವಿಯ ಅಂತ್ಯವನ್ನು ಪ್ರಚಾರಿಸಿದ್ದ ಒಂದು ಭವಿಷ್ಯವಾಣಿ ನನಗೆ ಈಗಲೂ ಚೆನ್ನಾಗಿ ನೆನಪಿನಲ್ಲಿದೆ. ಏಕೆಂದರೆ ಅದೇ ಸಮಯದಲ್ಲೇ ನಾನು ಧಾರವಾಡದಿಂದ ಗುವಾಹತಿಗೆ ಪಯಣಿಸಿದ್ದೆ.
ಐದೂವರೆ ದಿನಗಳ ಪಯಣ. ಸಣ್ಣ ರೈಲು, ದೊಡ್ಡ ರೈಲು, ಹಡಗು, ಮತ್ತೆ ಸಣ್ಣ ರೈಲು, ಕೊನೆಯಲ್ಲಿ ಮತ್ತೆ ಹಡಗು. ಜನುವರಿ ಮೂವತ್ತೊಂದನೇ ತಾರೀಕು ಸಂಜೆ ಧಾರವಾಡದಿಂದ ಹುಬ್ಬಳ್ಳಿಗೆ ಮೀಟರ್ ಗೇಜ್ ರೈಲಿನಲ್ಲಿ. ಹುಭ್ಭಳ್ಳಿಯಿಂದ ಮಧ್ಯರಾತ್ರಿ ಸುಮಾರಿಗೆ ಬಿಡುತ್ತಿದ್ದ ಮೀಟರ್ ಗೇಜ್ ರೈಲಿನಲ್ಲಿ ವಿಜಯವಾಡಕ್ಕೆ. ವಿಜಯವಾಡ ತಲುಪಿದ್ದು ಮರುದಿನ ಮಧ್ಯರಾತ್ರಿ. ಅಲ್ಲಿ ಪ್ಲಾಟ್ ಫಾರಂ ನಲ್ಲಿ ಸುಮಾರು ಐದು ತಾಸು ಕಾದನಂತರ ಮುಂಜಾನೆ ಐದೂವರೆ ಸುಮಾರಿಗೆ ತಲುಪಿದ ಮದ್ರಾಸ್ ಕಲ್ಕತ್ತರೈಲು ಏರಿ ಮರುದಿನ ಫೆಬ್ರುವರಿ ಮೂರನೇ ತಾರೀಕು ಮುಂಜಾವ ಹೌರ ಸ್ಟೇಷನ್. ಅಲ್ಲಿಂದ ನೆಟ್ಟನೆ ಸೀಯಾಲ್ಡ ಸ್ಟೇಷನ್. ಅಲ್ಲಿನ ರಿಟೈರಿಂಗ್ ರೂಮಿನಲ್ಲಿ ಸಾಮಾನು ಸರಂಜಾಮು ಬಿಟ್ಟು ಕಲ್ಕತ್ತ ನಗರದ ಭ್ರಮಣ. ಅಂದು ನಾನು ನಿಜವಾಗಲೂ ಮೊದಲಬಾರಿಗೆ ದೊಡ್ಡ ಪಟ್ಟಣ ನೋಡುತ್ತಿದ್ದ ಹಳ್ಳಿ ಗಮಾರ.
ರಾತ್ರಿ ಹತ್ತರ ಸುಮಾರಿಗೆ ಸ್ಟೇಷನ್ ಗೆ ವಾಪಸಾದಾಗ ಅಲ್ಲಿ ಗುಲ್ಲೋ ಗುಲ್ಲು. ಸ್ಟೇಷನ್ನಿನ ಹಮಾಲರೆಲ್ಲಾ ಪ್ಲಾಟ್ ಫಾರಂನಲ್ಲಿ ಸೇರಿ ಒಂದು ದೊಡ್ಡ ರಾಮಧುನ್ ನಡೆಸುತ್ತಿದ್ದರು. ಇದು ಏನಪ್ಪ. ಏನಾಗಿದೆ ಅಂತ ವಿಚಾರಿಸಿದಾಗ ನನಗೆ ಗೊತ್ತಾಯಿತು., ಅಂದು ರಾತ್ರಿ ಅಷ್ಟಗ್ರಹಗಳು ಒಂದಕ್ಕೊಂದು ಹೊಂದುಕೊಂಡಂತೆ ಒಂದೇ ಆರ್ಬಿಟ್ ನಲ್ಲಿ ಇರುತ್ತಂತೆ. ಅದರ ಪರಿಣಾಮ ಆ ರಾತ್ರಿ ಈ ಪೃಥಿವಿಯ ಅಂತ್ಯ. ಅರ್ಥಾತ್ ಪ್ರಳಯ. ಇನ್ನು ಕೆಲವೇ ತಾಸುಗಳಲ್ಲಿ ಪ್ರಳಯ ಆಗುವುದಿದ್ದರೆ ರಾಮಧುನ್ ಅರಚಿ ಏನು ಪ್ರಯೋಜನ? ಆ ದಿನಗಳಲ್ಲೇ ನನಗೆ ಅನ್ನಿಸಿತು, ನಾನು ನಿಜವಾಗಲೂ ಕೆಲವು ತಾಸುಗಳಲ್ಲಿ ಪ್ರಳಯ ಆಗುತ್ತೆ ಅಂತ ನಂಬಿದ್ದೇ ಆದರೆ ಆ ಉಳಿದಿರುವ ಸ್ವಲ್ಪ ಸಮಯವನ್ನು ಇನ್ನು ಯಾವುದಾದರೂ ಸುಖ ಸಂತೋಷಗಳ ಅರಸಿಕೆಯಲ್ಲಿ ಕಳೆಯುತ್ತೇನೆ ಅಂತ. ಆದರೆ ಬೆಳಿಗ್ಗೆ ಏಳು ಘಂಟೆಗೆ ಸೀಯಾಲ್ಡ ಸ್ಟೇಷನ್ ನಿಂದ ಬಿಡಲಿರುವ ದೊಡ್ದ ರೈಲು ಹಿಡಿಯಬೇಕು. ಆಗಾಗಲೇ ರಾತ್ರಿ ಹನ್ನೊಂದರ ಸುಮಾರು. ಪ್ರಳಯ ಆದರೆ ಮಲಗಿ ನಿದ್ದೆ ಮಾದುತ್ತಿದ್ದಾಗ ಆಗಲಿ ಅಂತ ಮಲಗಿದೆ.
ಬೆಳಿಗ್ಗೆ ಎದ್ದಾಗ ಪ್ರಳಯವಾಗಿರಲಿಲ್ಲ. ಆದರೆ ಪ್ರಯಾಣ ಮಾತ್ರ ಬಹಳ ಸುಖಕರವಾಗಿತ್ತು. ಆಮೇಲೆ ನನಗೆ ತಲುಪಿದ ವದಂತಿಗಳ ಪ್ರಕಾರ ಪ್ರಳಯ ಆಗುತ್ತೆ ಅನ್ನುವ ಚಿಂತೆ ಆತಂಕಗಳಲ್ಲಿ ಯಾವಗಲೂ ಸಾಧಾರಣವಾಗಿ ಪಯಣಿಸುತ್ತಿದ್ದ ಮಂದಿ ಅಂದು ಬಹಳ ಕಮ್ಮಿ. ಧಾರವಾಡದಲ್ಲಿ ತಿಕೆಟು ಕೊಂಡಾಗ ಅಲ್ಲಿನ ಸ್ಟೇಷನ್ ಮಾಸ್ತರ ಸಲಹೆಯಂತೆ ಧಾರವಾಡದಿಂದ ಹೌರಾವರೆಗೆ ಥರ್ಡ್ ಕ್ಲಾಸ್ ತಿಕೆಟ್; ಮತ್ತು ಸೀಯಾಲ್ಡದಿಂದ ಗುವಾಹತಿವರೆಗೆ ಫರ್ಸ್ಟ್ ಕ್ಲಾಸ್ ತಿಕೆಟ್ ಕೊಂಡಿದ್ದೆ. ಏಕೆಂದರೆ ಆತನ ಪ್ರಕಾರ ಆ ವಿಭಾಗಗಳಲ್ಲಿ, ಅಂದರೆ ಪೂರ್ವೋತ್ತರ ಮತ್ತು ಉತ್ತರಪೂರ್ವಸೀಮಾ ರೈಲ್ವೇ ವಿಭಾಗಳಲ್ಲಿ ಪಯಣಿಗರ ಗುಂಪು ಗದ್ದಲ ಗಲಾಟೆ ಜಾಸ್ತಿ. ಆ ಸಂದಣಿಯಲ್ಲಿ ಸಿಕ್ಕಿಕೊಳ್ಳದೆ ಫರ್ಸ್ಟ್ ಕ್ಲಾಸಿನಲ್ಲಿ ಹೋಗುವುದೇ ಉತ್ತಮ. ಆತನ ಸಲಹೆಯಂತೆ ಈ ವಿಭಾಗದಲ್ಲಿ ನನ್ನ ತಿಕೆಟು ಮೊದಲನೆಯ ದರ್ಜೆಯದು.
ಆದರೆ ಸೀಯಾಲ್ಡಾ ಸ್ಟೇಷನ್ ಬಿಟ್ಟಾಗ ಫರ್ಸ್ಟ್ ಕ್ಲಾಸ್ ಡಬ್ಬಿಗಳು ಮಾತ್ರ ಭರ್ತಿ. ಮೂರನೇ ದರ್ಜೆಯ ಡಬ್ಬಿಗಳು ಹೆಚ್ಚು ಕಮ್ಮಿ ಖಾಲಿ. ಏಕೆಂದರೆ ಪಯಣಿಸಲೇಬೇಕಾದ ವ್ಯಕ್ತಿಗಳು ಮಾತ್ರ ಅಂದು ಪಯಣಿಸುತ್ತಿದ್ದರು. ಅವರಲ್ಲಿ ಹೆಚ್ಚು ಭಾಗ ಸರಕಾರಿ ನೌಕರರು, ಬೇರೆಯವರ ಖರ್ಚಿನಲ್ಲಿ ಯಾತ್ರೆ ಮಾಡುತ್ತಿದ್ದವರು.
ಅಹುದು. ಪ್ರಳಯವಂತೂ ಆಗಲಿಲ್ಲ. ಯಾತ್ರೆ ಸುಖಕರವಾಗಿತ್ತು. ಅದರಲ್ಲೂ ಆ ರಾತ್ರಿ ಗಂಗಾ ನದಿಯನ್ನು ಜಹಾಜಿನಲ್ಲಿ ದಾಟಿದ ಅನುಭವ ಈಗಲೂ ನೆನಪಿನಲ್ಲಿದೆ. ಅಪ್ಪರ್ ಡೆಕ್ ನಲ್ಲಿನ ಡೈನಿಂಗ್ ರೂಮಿನಲ್ಲಿ ಬಡಿಸಿದ ಇಲೀಶ್ ಮೀನಿನ ಸಾಸುವೆ ಎರೆದು ತಯಾರಿಸಿದ್ದ ವ್ಯಂಜನ, ಪಾಟ್ನ ಅಕ್ಕಿ, ಅಡುಗೆಯಲ್ಲಿ ವ್ಯವಹರಿಸಿದ್ದ ಸಾಸುವೆ ಎಣ್ಣೆಯ ಘಮಲು. ಆ ಹಡಗಿಗಿಂತ ದೊಡ್ಡ, ಇನ್ನೂ ಹೆಚ್ಚು ಸುಸಜ್ಜಿತವಾದ ಹಡಗುಗಳಲ್ಲಿ ಪ್ರಯಾಣ ಮಾಡಿದ್ದೇನೆ; ಆ ಊಟಕ್ಕಿಂತ ರುಚಿಕರವಾದ ಊಟಗಳನ್ನು ಮಾಡಿದ್ದೇನೆ. ಆದರೂ ಜೀವನದ ಹಲವಾರು ಮೊದಲನೆಯ ಅನುಭವಗಳಂತೆ ಆ ಮೊದಲನೆಯ ಅನುಭವದ ಸುಖ, ರುಚಿಗಳನ್ನು ಇಂದಿಗೂ ಮರೆತಿಲ್ಲ. ಆ ಆಗದಿದ್ದ ಪ್ರಳಯವನ್ನೂ ಮರೆತಿಲ್ಲ.
ಈ ಬರುವ ಪ್ರಳಯ ಅಂದು ಬರದಿದ್ದ, ಆಗಲಿಲ್ಲದ ಪ್ರಳಯದ ಐವತ್ತು ವರುಷಗಳನಂತರ, ಬರುತ್ತಂತೆ, ಆಗುತ್ತಂತೆ. ಇದನ್ನು ಗುವಾಹತಿಯಲ್ಲಿ ಬರೆಯುತ್ತಿದ್ದೇನೆ. ಆದರೆ ನನ್ನ ದುರ್ಭಾಗ್ಯವಶಾತ್ ಆ ತಾರೀಕಿನ, ಅಲ್ಲ ತಾರೀಕುಗಳ, ಮುಂಚೆಯೇ ನಾನು ಗುವಾಹತಿ ಬಿಟ್ಟು ಹೋಗಬೇಕಾಗಬಹುದು. ಆದರೂ ಆ ಬರುವ ೨೦೧೨ರ ಫೆಬ್ರುವರಿ ೧೨ನೇ ತಾರಿಕೋ ಅಥವಾ ಡಿಸೆಂಬರ್ ೨೧ನೇ ತಾರೀಕೋ ಗುವಾಹತಿ ಬಿಟ್ಟು ಹೋಗಬೇಕಾಗಿತ್ತು ಅನ್ನಿಸ್ತಿದೆ.

‍ಲೇಖಕರು avadhi

January 25, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

3 ಪ್ರತಿಕ್ರಿಯೆಗಳು

 1. Gargas Manjappa

  Huchchigoo ondhu mithi idhe.kelavarige omme pralaya aadre saku emba chinthe.innu kelavarige yavaga emba
  chinte.ottare illada pralaya vannu sristisi janara
  jeevanadalli pralaya sristisi vikruthaananda padeyuthare.i

  ಪ್ರತಿಕ್ರಿಯೆ
 2. chandamaamaa

  intha vaichaarika lekhanagalu…chintanegalindala avashyakathe bahala ide.heege saralavaagi janamana muttuva maatugalu avashya bekive.
  dhanyavaadagalu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: