'ಕಾಮರೂಪಿ' ಬರೆದ ಹದಿನೆಂಟು ಹೊಸಿಲುಗಳು

-ಎಂ ಎಸ್ ಪ್ರಭಾಕರ್
ಕಾಮರೂಪಿ
ಎಲ್ಲಾ ಸಸ್ಯಗಳು ಮತ್ತು ಜಂತುಗಳು ಜೀವಂತ ವಸ್ತುಗಳು. ಆದರೆ ನಿರ್ಜೀವಿಯಂತೆ ಕಾಣುವ ಒಂದು ಕಲ್ಲು, ಒಂದು ಮನೆ, ಒಂದು ಕುರ್ಚಿ ಅಥವಾ ಮೇಜು ಇವುಗಳೂ ಜೀವಂತ ವಸ್ತುಗಳು.  ಹುಟ್ಟುತ್ತವೆ, ಅಥವಾ ತಯಾರಿಸಲ್ಪಡುತ್ತವೆ.  ಕೆಲವು ಕಾಲ ಕಾಲ ಕೆಲಸಕ್ಕೆ ಬರುತ್ತವೆ. ಕಾಲ ಕಳೆದಂತೆ ಅವುಗಳ ಶಕ್ತಿ, ಕೆಲಸಕ್ಕೆ ಬರುವ ಸಾಧ್ತ್ಯತೆ ಮತ್ತು ಬಲಿಷ್ಠತೆ ಕಮ್ಮಿ ಆಗುತ್ತೆ.  ಮನೆ ಗೋಡೆಯೊಂದು ಕುಸಿಯುತ್ತೆ, ಕುರ್ಚಿಯ ಕಾಲೊಂದು ಮುರಿಯುತ್ತೆ.  ಸರಿ, ರಿಪೇರಿ ಮಾಡಿಸಿಕೋಬಹುದು. ಆದರೆ ಒಮ್ಮೆ ರಿಪೇರಿಗೆ ಹೋದಮೇಲೆ ಮೊದಲಿನ ಧಾರ್ಡ್ಯ ಇರುವುದಿಲ್ಲ.
3206134461_51c6c8166aಚಿತ್ರ: ಬಾಲು ಮಂದರ್ತಿ
ಕಾಡಿನಲ್ಲೇ ಬೇಟೆಮಾಡಿ ಊಟ ಸಂಪಾದಿಸಿಕೊಳ್ಳುವ ಹುಲಿಚಿರತೆತೋಳಗಳು ಅಥವಾ ಬೇರೊಬ್ಬರಿಂದ ಪೋಷಿಸಿಕೊಂಡ ನಾಯಿ ಬೆಕ್ಕುಗಳು ಮತ್ತು ಇವುಗಳ ಮೇಲೆ ಅಧಿಕಾರ ಚಲಾಯಿಸಬಲ್ಲೆ ಎಂದು ಹೆಮ್ಮೆ ಪಡುವ ಮಾನವರಿಗೂ ಏನಾದರೂ ವ್ಯತ್ಯಾಸ ಇದೆಯೇ?  ಅಪ್ಪ ಕಟ್ಟಿದ ಮನೆಯಲ್ಲಿ ಬೆಳೆದು ಮನೆಯೂಟ ತಿಂದು ಜೋಪಾನವಾಗಿ ದೊಡ್ಡವರಾಗಿ ವಿದ್ಯಾಭ್ಯಾಸ ಮಾಡಿ ಸಂಬಳ ಬರುವ ಕೆಲಸಕ್ಕೆ ಸೇರಿ ಮದುವೆ ಮಾಡಿಕೊಂಡು ಸಂಸಾರ ಮಾಡಿ ಮಕ್ಕಳನ್ನು ದೊಡ್ಡವರಾಗಿಸಿ ಅವರನ್ನೂ ಸಂಸಾರವಂದಿಗರಾಗಿ ಮಾಡಿ ತಕ್ಕಮಟ್ಟಿಗೆ ಆಸ್ತಿ ಮಾಡಿಕೊಳ್ಳದಿದ್ದರೂ ತನ್ನ ಕೊನೆಗಾಲದಲ್ಲಿ ಸ್ವಂತ ಮನೆಯೊಂದನ್ನು ಬೆಂಗಳೂರಿನಲ್ಲಾಗಲೀ ಅಥವಾ ಅಂತಹ ಅರ್ಥಿಕ ಕ್ಷಮತೆ ಇಲ್ಲದಿದ್ದರೆ ಇನ್ನು ಯಾವುದಾದರೂ ಕೊಂಪೆಯಲ್ಲಾಗಲೀ ಮಾಡಿಕೊಂಡು, ಅಥವಾ ಅಂತಹ ಕಳಪೆ ಕ್ಷಮತೆಯೂ ಇಲ್ಲದಿದ್ದರೆ ಅಪ್ಪ ಕಟ್ಟಿದ್ದ ಕುಸಿದುಬೀಳುತ್ತಿರುವ ಪಾಳುಮನೆಯಲ್ಲೇ sit on your arse for fifty years and hang your hat on a pension ಅಂತ ಅಳವಳಿಸಿಕೊಂಡ ಕವಿಯ ಉಕ್ತಿಯಂತೆ ಕೊನೆಯ ಹಂತದ ಜೀವನ ನಡೆಸಿ ಸಾಯುವವರದೂ ಇದೇ ಕತೆ. ವಾಕ್ಯ ಸ್ವಲ್ಪ ಉದ್ದವಾಯ್ತಲ್ವಾ?  ಏನು ಮಾಡ್ಲಿ, ಕನ್ನಡ ಬರೆಯೋದ್ನ ಇನ್ನಷ್ಟು ಲಕ್ಷಣ್ವಾಗಿ ಕಲ್ತುಕೋಬೇಕು.  ಇರಲಿ.
ಉದಾಹರಣೆಗೆ ಕೋಲಾರದ ಕಠಾರಿಪಾಳ್ಯದಲ್ಲಿ ಅಪ್ಪ ಕಟ್ಟಿದ ಹದಿನೆಂಟು ಹೊಸಿಲುಗಳಿರುವ ಈ ಮನೆ, ಮತ್ತು ಈಗ ಇಲ್ಲಿ ವಾಸಮಾಡಿಕೊಂಡು ಕಾಯುತ್ತಿರುವ ಈ ಮನೆಗಿಂತ ಮೂರು ವರುಷ ಮುದಿಯನಾದ ನಾನು, ನನ್ನ ಅಪ್ಪ ಮತ್ತು ಅಮ್ಮನ ಹನ್ನೊಂದನೆಯ ಮತ್ತು ಕೊನೆಯ ಸಂತಾನ. ಈ ಮನೆ ಕಟ್ಟಿ ಮುಗಿಸಿದ್ದು ಸನ್ ಸಾವಿರದೊಂಭೈನೂರಮುವ್ವತ್ತೊಂಭತ್ತರಲ್ಲಿ; ನಾನು ಹುಟ್ಟಿದ್ದು ಸನ್ ಸಾವಿರದೊಂಭೈನೂರಮುವ್ವತ್ತಾರರಲ್ಲಿ. ನನ್ನ ಹದಿನೇಳನೇ ವಯಸ್ಸಿನಲ್ಲಿ ಈ ಮನೆ ಬಿಟ್ಟವನು ಈಗ, ನನ್ನ ಎಪ್ಪತ್ನಾಲ್ಕನೇ ವಯಸ್ಸಿನಲ್ಲಿ, ವಾಪಸಾಗಿದ್ದೇನೆ.
ಏಕೆ ವಾಪಸಾದೆ ನನಗೇ ಸರಿಯಾಗಿ ಗೊತ್ತಾಗಿಲ್ಲ.  ಕೆಲವು ಪರಿಚಯಸ್ಥರ ಪ್ರಕಾರ ಈ ವಾಪಸಾತಿ ಒಂದು ರೀತಿ ಹಳೆಯ ನೆನಪುಗಳನ್ನು ಅರಸಿ ಬಂದ ಒಭ್ಭ ಮುದುಕನ ಯಾತ್ರೆ. Nostalgia trip.  ಇವರುಗಳ ಪ್ರಕಾರ ಈ ಮನೆಯನ್ನು ನಾನು ಬಿಟ್ಟಿರಲಾರೆ. ಏಕೆಂದರೆ ಈ ಮನೆಯ ನೆನಪುಗಳು ನನಗೆ ಬಹಳ, ಬಹಾಳ ಸವಿ.   ಆದರೆ ಈ ಮನೆಯ ನೆನಪುಗಳು ಎಷ್ಟು ಸವಿ, ಎಷ್ಟು ನೋವು, ಕೋಪ, ವಾಕರಿಕೆ ಬರಿಸುತ್ತೆ ಇದು ನನಗೇ ಗೊತ್ತು.
ಇವೆ, ಕೆಲವು ಸವಿ ನೆನಪುಗಳಿವೆ.  ಆದರೆ ಇವುಗಳೆಲ್ಲಾ ಈ ಊರು ಬಿಟ್ಟು ಹೋದಮೇಲೆ ಕೆಲವೊಮ್ಮೆ, ಕೆಲವು ದಿನಗಳಿಗೆ ಮಾತ್ರ ವಾಪಸಾದಾಗ ನನಗೆ ನಾನೇ ಕಲ್ಪಿಸಿದೊಂಡು ಸೃಷ್ಟಿಸಿಕೊಂಡ ನೆನಪುಗಳು. ವಯಸ್ಸಾದಂತೆ ಈ ಕಲ್ಪಿತ ಸವಿ ನೆನಪುಗಳನ್ನು ತಯಾರಿಸಿಕೊಳ್ಳುವ ಚಟ ಬೆಳೆಯುತ್ತೆ.  ಕತೆ ಕಟ್ಟುವಂತೆ ನೆನಪುಗಳನ್ನೂ ಕಟ್ಟಲು ಸಾಧ್ಯ.  ಕಟ್ಟುಕತೆ ಹೇಳುವಷ್ಟೇ ಸಹಜ.
ಆದರೂ ಈ ದಿನಗಳಲ್ಲಿ ಕೆಲಸವಿಲ್ಲದೆ ಕಾಯಲೇಬೇಕಾದ ಘಳಿಗೆಗೆ ಕಾಯುತ್ತಿರುವಾಗ ಈ ಮನೆಯ ಒಳಗಿನ ಪರಿವೇಷದ ಬಗ್ಗೆ ಒಮ್ಮೊಮ್ಮೆ ನನ್ನ ಊಹಾಪೋಹ ತಲೆ ಕೆಡಿಸುತ್ತೆ.  ಉದಾಹರಣೆಗೆ ಈ ಮನೆಗೆ ಏಕೆ ಇಷ್ಟೊಂದು ಹೊಸಿಲುಗಳು? ಮನೆಯ ಮುಂದಿನ ಆಂಗಳಕ್ಕೆ ತೆರೆಯುವ ಮುಂಬಾಗಿಲು, ಹಿತ್ತಿಲಿಗೆ ತೆರೆಯುವ ಹಿಂಬಾಗಿಲು ಮತ್ತು ವರಾಂಡದಲ್ಲಿನ ಎಡಪಕ್ಕದಲ್ಲಿನ ಕೋಣೆಯಿಂದ ಮಾಡಿಯ ಮೆಟ್ಟಲುಗಳನ್ನು ಹೊರಗಿನಿಂದ ಹತ್ತಿ ಹೋಗಲು ಅನುಕೂಲಿಸಿರುವ ಹೊರಬಾಗಿಲು, ಈ ಮೂರು ಬಾಗಿಲುಗಳನ್ನು ಬಿಟ್ಟರೆ ಮಿಕ್ಕೆಲ್ಲ ಬಾಗಿಲುಗಳೂ ಮನೆಯ ಒಳಗಿನ ಕೋಣೆಗಳವು. ಇವುಗಳಿಗೆ ಹೊಸಿಲು ಏಕೆ ಬೇಕು? ಅದಕ್ಕೂ ಮೀರಿ ಇಷ್ಟು ಭಾರವಾದ ತೇಗದಮರದಿಂದ ತಯಾರಿಸಿದ ಬಾಗಿಲುಗಳ ಅಗತ್ಯವೇ ಏನಿತ್ತು? ಅವುಗಳ ಮೇಲಿನ, ಕೆಳಗಿನ, ಮಧ್ಯದ ಗೆಡೆಗಳು, ಚಿಲಕಗಳು, ಮೇಲೆಕೆಳಗಿನ ತಾಪಾಳುಗಳು ಏಕೆ ಇಷ್ಟು ಬಲಿಷ್ಠವಾಗಿರಬೇಕು? ಹೊರಬಾಗಿಲುಗಳೇ ಇಲ್ಲದ ಅಡುಗೆಮನೆ ದೇವರಮನೆ ಮಧ್ಯದಲ್ಲಿನ ಬಾಗಿಲು ಇಷ್ಟು ಮಜಬೂತಾಗಿರಬೇಕೆ?  ಅರ್ಥವಿಲ್ಲದ ಪ್ರಶ್ನೆಗಳು. ಆದರೂ ಇವು ನನ್ನನ್ನು ಒಮ್ಮೊಮ್ಮೆ ಕಾಡುತ್ತವೆ.
ಮನೆಯ ಹೊರಬಾಗಿಲುಗಳಿಗೆ ಹೊಸಿಲಿನ ಅಗತ್ಯ  ಒಂದು ಚೂರು ಅರ್ಥ ಆಗುತ್ತೆ.  ಮಳೆಯ ನೀರು ಒಳಗೆ ನುಗ್ಗಬಾರದು, ಸಣ್ಣ ದೊಡ್ಡ, ಅಪಾಯವಿಲ್ಲದ ಅಥವಾ ಅಪಾಯಕಾರಿ ಕ್ರಿಮಿಗಳು ಅಷ್ಟು ಸುಲಭವಾಗಿ ಮನೆಯೊಳಗೆ ನುಗ್ಗಬಾರದು, ಹಾವು ಚೇಳುಗಳಿಗೆ ಒಂದು ಕೆಲಸಕ್ಕೆ ಬಾರದ ಅಡಚಣೆ, ಆದರೂ ಒಂದು ಪುಟ್ಟ ಅಡಚಣೆ. ಆದರೆ ಮನೆಯೊಳಗೆ ಯಾಕೆ ಇಂತಹ ಅಡಚಣೆಗಳು?  ಹೊಸಿಲನಲ್ಲಿ ಮುಗ್ಗುರಿಸಿದಾಗೆಲ್ಲಾ ಇದೇ ಪ್ರಶ್ನೆ.
ಹೊಸಿಲು ಒಂದು ರೀತಿ ಮನೆಯ ಆಚೆ, ಈಚೆ, ಮನೆಯ ಹೊರಗಿನವರನ್ನು ಮತ್ತು ಒಳಗಿರುವನ್ನು ಗುರುತಿಸುವ ಗುರುತು ಅಲ್ಲವಾ? ಇಂಗ್ಲಿಷ್ ನಲ್ಲಿ threshold marker ಅನ್ನುವಂತೆ.  ಅಪ್ಪನ ಕಾಲದಲ್ಲಿ ಹತ್ತಿರದ ಸಂಬಂಧಿಗಳನ್ನು ಬಿಟ್ಟು ಮನೆಯ ಕಡೆ ಬಂದ ಮಿಕ್ಕವರೆಲ್ಲ ಅವರ ಕೆಲಸ ಮಾತುಕತೆಗಳನ್ನು ಹೊರಗಿನ ವರಾಂಡದಲ್ಲೇ ಮುಗಿಸಿಕೊಂಡು ಹೋಗುತ್ತಿದ್ದರು. ಕೆಲವರಂತೂ ಅಂಗಳದಿಂದಲೇ ತಮ್ಮ ಕೆಲಸ ಮುಗಿಸಿಕೊಳ್ಳುತ್ತಿದ್ದರು. ಮನೆಯೊಳಗೆ ಬಂದವರಿಗೂ ನಿಯಮಿಸಿದ ಜಾಗ, ಕೋಣೆ, ಹಾಸಿಗೆಗಳಿರುತ್ತಿದ್ದವು. ಮನೆಯವರೇ ಆದವರಿಗೆ ಮಾತ್ರ ಮನೆಯೊಳಗೆ ಪೂರ್ಣ ಪ್ರವೇಶ.
ಈ ಹೊರಗಿನವರು, ನಮ್ಮವರು ಅನ್ನುವ ಮನೋಭಾವನೆಯ ಹಿಂದೆ ಅಷ್ಟೇನೂ ಲುಪ್ತವಾಗಿರಲಿಲ್ಲದಿದ್ದ  ಹೊರಗಿನವರ  ಬಗ್ಗೆ  ಒಂದು ರೀತೆ ಭಯ, ಹೇಸಿಗೆ ಇತ್ತು.  ಅಂತಹವರನ್ನು ಸಾಧ್ಯವಾದ ಮಟ್ಟಿಗೆ ಹೊರಗೇ, ಹೊಸಿಲನಾಚೆ, ಇಡುವ ಪದ್ಧತಿ.  ಇದು ಎಲ್ಲ ದೇಶದವರೂ, ಎಲ್ಲ ಜಾತಿ ಸಂಪ್ರದಾಯದವರೂ ಪಾಲಿಸುವ ನಡವಳಿಕೆ. ಇಂಗ್ಲಿಷ್ ಲೇಖಕ Evelyn Waugh ತನ್ನ ಮನೆಯ ಗೇಟಿನ ಒಳಗೆ ನಿಂತು ರಸ್ತೆಯಲ್ಲಿ ಹೋಗುತ್ತಿದ್ದ ಪರಿಚಿತ ವ್ಯಕ್ತಿಗಳ ಜೊತೆ ಘಂಟೆಗಟ್ಟಲೆ ಹರಟೆ ಹೊಡೆಯತ್ತಿದ್ದನಂತೆ. ಆದರೆ ಅವರನ್ನು ಎಂದೆಂದೂ ಮನೆಯೊಳಗಿನ ಮಾತು ಬೇರೆ, ಗೇಟಿನ ಒಳಗೂ ಕರೆಯುತ್ತಿರಲ್ಲವಂತೆ. ಇರಬಹುದು, ಇದು ಸ್ವಾಭಾವಿಕ ಪ್ರವೃತ್ತಿ.  ಆದರೂ ಆಚಿನವರ ಬಗ್ಗೆ ಇದ್ದ ಆ ಭಯ ಹೇಸಿಗೆ ತಿರಸ್ಕಾರಗಳ ಪ್ರತೀಕವೆನ್ನಬಹುದಾದ ಈ ಹೊಸಿಲು ಮನೆಯೊಳಗೆ ಏಕೆ ನುಗ್ಗಿತು?  ಇದರ ಅರ್ಥ ಒಂದೇ ಇರಬೇಕು: ಮನೆಯೊಳಗಿನವರಾದ ನಾವುಗಳೂ ಮನೆಯೊಳಗೆ ಕಾಲಿಡುವಾಗ ಮತ್ತು ಓಡಾಡುವಾಗ ಹುಷಾರಾಗಿರಬೇಕು.
ಈ ಮನೆಯ ಪ್ರತಿಯೊಂದು ಕೋಣೆಗೂ ಅಂದಿನ ದಿನಗಳಲ್ಲಿ ಒಂದು ಪರಿಚಯಿಸುವ ಹೆಸರಿತ್ತು. ಗೇಟು ತೆಗೆದು ಮುಂದಿನ ಅಂಗಳ ದಾಟಿ ಹದಿನೇಳು ಅಡಿ ಅಗಲವಾಗಿರುವ ಕಲ್ಲಿನ ಮೂರು ಮೆಟ್ಟಲುಗಳನ್ನು ಏರಿದರೆ ಮನೆಯ ಹೊರಬಾಗಿಲು.  ಅದರ ಹೊಸಿಲನ್ನು ದಾಟಿದರೆ ಮನೆಯ ಮುಂದಿನ ಕೊಠಡಿ, ವರಾಂಡ. ಬಲಕ್ಕೆ ಅಪ್ಪನ ರೂಮು. ಎಡಕ್ಕೆ ಅದೇ ಉದ್ದ ಅಗಲ ಅಳತೆಯ, ಆ ದಿನಗಳಲ್ಲಿ ಮುಟ್ಟಿನಲ್ಲಿದ್ದ ಹೆಂಗಸರು ಮೂರು ದಿನ ಅಲ್ಲಿ ಕೂತು ಕಾಲ ಕಳೆಯುವ ಮುಟ್ಟಿನ ರೂಮು.  ವರಾಂಡದಿಂದ ಒಳಗೆ ಬಂದರೆ ಮನೆಯ ಮಧ್ಯದಲ್ಲಿನ ಹಾಲು,  ಮಿಕ್ಕ ಎಲ್ಲಾ ಕೊಠಡಿಗಳಿಗಿಂತಾ ಆ ದಿನಗಳ ಸಣ್ಣ ಹುಡುಗನ ಭ್ರಮೆಯಲ್ಲಿ ಅತಿ ದೊಡ್ಡ ಕೊಠಡಿ.  ಈಗ ನಾನು ಕಂಡಿಕೊಂಡಿರುವಂತೆ ಅಂತಹ ಅಸಾಮಾನ್ಯ ಉದ್ದಳತೆ ಏನೂ ಇಲ್ಲ. ಹದಿನೇಳು ಅಡಿ ಅಗಲ, ಹದಿಮೂರು ಅಡಿ ಉದ್ದ. ೨೨೧ ಅಡಿ ಚದರ. ಇಲ್ಲಿ ಮತ್ತು ಇದರ ಎಡಕ್ಕಿರುವ ದೇವರ ಮನೆಯಲ್ಲಿ ನನ್ನ ಪುಸ್ತಕಗಳ ಗೋಡೌನಿಗೆ ಜಾಗ ಇಲ್ಲ. ಹಾಲಿನ ಬಲದಲ್ಲಿ ಬಾಣಂತಿ ರೂಮು. ಒಂದು ಕಾಲದಲ್ಲಿ ನೆಲದ ಕೆಳಗೆ ಹಗೇವಿತ್ತು. ಆಪ್ಪ ತನ್ನ ಕುಂಟ ಸಣ್ಣಮಗನ ಜೀವನಕ್ಕೆ ಬರಲಿ ಅಂತ ಕೊಂಡಿದ್ದ ಚೂರುಪಾರು ಭೂಮಿಯನ್ನು ಅಪ್ಪ ತೀರಿಕೊಂಡ ಕೆಲವು ವರುಷಗಳಲ್ಲಿ ಮಾರಿದನಂತರ ಆ ಹಗೇವು ಮುಚ್ಚಿದ್ದಾಯಿತು.  ಇನ್ನೂ ಒಳಗೆ ಬಂದರೆ ವರಾಂಡಕ್ಕೆ ಸರಿಸಮಾನವಾದ ಊಟದ ಮನೆ. ಅದರ ಎಡಕ್ಕೆ, ದೇವರ ಮನೆಗೆ ಸೇರಿಕೊಂಡಂತೆ ಅಡುಗೆ ಮನೆ, ಬಲಕ್ಕೆ ಸ್ನಾನದ ಮನೆ.  ಕಕ್ಕಸು ಹಿತ್ತಿಲಿನ ದೂರದ ಮೂಲೆಯಲ್ಲಿ. ಎಲ್ಲ ಕೊಠಡಿಗಳ ಬಾಗಿಲಲ್ಲೂ ಒಂದು ಹೊಸಿಲು. ಏಕೆ, ಹಿತ್ತಿಲಿನಲ್ಲಿ ಬೀದಿಗೆ ಸೇರಿಕೊಂಡಿದ್ದ, ಬಹಳ ಅಪರೂಪಕ್ಕೆ ತೆರೆಯುತ್ತಿದ್ದ ಬಾಗಿಲಿಗೂ ಒಂದು ಹೊಸಿಲು. ಮನೆಯೊಳಗೆ ಬರುವಾಗಲೂ, ಮನೆಯಾಚೆ ಹೋಗುವಾಗಲೂ, ಮನೆಯೊಳಗೇ ಓಡಾಡುವಾಗಲೂ ಎಡವಿ ಬೀಳುವ ಅಪಾಯದ ಬಗ್ಗೆ ಜಾಗರೂಗತೆ ಬೇಕು.
ಹೊಸಿಲಿನ ಬಗ್ಗೆ ನಂಬಿಕೆಗಳು ಅಗಣ್ಯ.  ಹೊಸಿಲು ಯಾವಾಗಲೂ ದಾಟಬೇಕು, ತುಳಿಯಬಾರದು. ಹೊಸಿಲಿನಮೇಲೆ ಕೂರಬಾರದು. ಹೊರಗಿನ ಹೊಸಿಲು ದಾಟಿದಮೇಲೆ ಮನೆಯೊಳಗೆ ಬರಬೇಕಾದರೆ ಒಂದೆರಡು ಕ್ಷಣ ಕೂತು ಮತ್ತೆ ಹೊಸಿಲು ದಾಟಿ ವಾಪಸಾಗಬೇಕು. ಅನೇಕ ಗಾದೆಗಳೂ ಇದ್ದವು. ಈಗ ನೆನಪಿನಲ್ಲಿರುವುದು ಒಂದೆರಡು ಮಾತ್ರ. ಒಂದು ಗಾದೆಯ ಪ್ರಕಾರ ಹೆಂಗಸು ಹೊಸಿಲು ದಾಟಬಾರದು. ಭಾಗ್ಯ, ಇದನ್ನು ಈಗ ಯಾರೂ ಪಾಲಿಸೊಲ್ಲ. ಇನ್ನೊಂದು: ಹೊಸಿಲಿನಾಚೆಯ ರಂಗೋಲಿ.  ಈ ಗಾದೆಯ ಗೂಢಾರ್ಥವೇನೋ ನನಗೆ ಗೊತ್ತಾಗಿಲ್ಲ. ಆದರೂ ಹೊಸಿಲನ್ನು ತೊಳೆದು ಪೂಜೆ ಮಾಡುತ್ತಿದ್ದ ನೆನಪು ಇದೆ. ರಂಗೋಲಿ ಹೊಸೆಲಿನಾಚೆ ಹಾಕಿದರೂ ಹೊಸಿಲಿನ ಎರಡು ಕೊನೆಯಲ್ಲಿ ಅದೇ ಒದ್ದೆ ರಂಗೋಲಿಯ ಮೂರು ಗೆರೆಗಳನ್ನು ಎಳೆಯುತ್ತಿದ್ದರು. ಹೊಸಿಲಿನ ಮುಂದಿನ ಮಧ್ಯಭಾಗಕ್ಕೆ ಅರಿಸಿನ ಕುಂಕುಮ ಹಚ್ಚುತ್ತಿದ್ದದೂ ನೆನಪಿದೆ.
ಇಂತಹ ನಂಬಿಕೆಗಳು ಬೇರೆ ಸಮಾಜಗಳಲ್ಲೂ ಇದೆ. ಮದುವೆಯಾದ ವಧುವನ್ನು ಗಂಡ ಹೊತ್ತು ಹೊಸಿಲಿನ ಒಳಗೆ ತರುವುದು ಒಂದು ಪದ್ಧತಿ ಇತ್ತು.  ಆಂದರೆ ಆ ಹೊಸಿಲಿನಂತಹಾ ಇಕ್ಕಟ್ಟನ್ನು ನವವಧು ತಾನೇ ಪಾರಾಗಿ ತನ್ನ ಹೊಸ ಸಂಸಾರದ ಮನೆಯೊಳಗೆ ಕಾಲಿಡದೆ ಅವಳ ಗಂಡನೇ ಅವಳು ಆ ಗಡಿಯನ್ನು ಪಾರು ಮಾಡಲು ಸಹಾಯ ಮಾಡುತ್ತಿದ್ದ.
ಕೆಲವು ದಿನಗಳ ಹಿಂದೆ ಬೇಲಾರೂಸಿನಿಂದ ತಲುಪಿದ ವರದಿಯೊಂದರ ಪ್ರಕಾರ ಅಲ್ಲಿನ ಗಂಡಂದಿರು ವರುಷಕ್ಕೊಮ್ಮೆ ನಡೆಸುವ ಪಂದ್ಯವೊಂದರಲ್ಲಿ ತಮ್ಮ ಹೆಂಡಂದಿರನ್ನು ಹೊತ್ತಿಕೊಂಡು ಅತಿ ಕಂಟಕಗಳಿಂದ ತುಂಬಿರುವ ಹಾದಿಯೊಂದರಲ್ಲಿ ಓಡಿ ಗುರಿ ಮುಟ್ಟಬೇಕಂತೆ. ಆದೂ ಒಂದು ರೀತಿ ಹೆಂಡತಿಯನ್ನು ಹೊಸಿಲು ದಾಟಿಸುವ ಪರಂಪರೆಯ ಯೂರೋಪಿಯನ್ ರೂಪಾನಾ?
ಒಂದು ಕಾಲದಲ್ಲಿ ಹೊಸಿಲು ದಾಟಿ ಹೋಗಿಬಿಟ್ಟೆ ಅನ್ನುವ ಭ್ರಮೆಯಲ್ಲಿದ್ದ ಅಂದಿನ ಯುವಕನಿಗೆ ಈಗಿನ ಮುದಿತನದಲ್ಲಿ ಮನೆಯೊಳಗಿನ ಹೊಸಿಲುಗಳನ್ನು ಎಡವದೇ ದಾಟುವುದೇ ಒಂದು ಸಾಹಸದ ಮಾತು. ನಾಳೆ?  ನಾಳೆ ಮಾತು ಈಗ್ಯಾಕೆ? ಯಾರಾದರೂ ಹೊಸಿಲಿನಾಚೆ ಸಾಗಿ ಹಾಕುತ್ತಾರೆ.

‍ಲೇಖಕರು avadhi

October 18, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Berlinder

  ಉತ್ತಮ ಲೇಖನಕ್ಕೆ ಶುಭಾಶಯಗಳು. ಓದಿ ಬರೆದೆ ದೀರ್ಘ ವಿವೇಚನೆ.
  ಎರಡು ಪುಟ ತುಂಬಿತು ಪತ್ರಕವನ. ಇಲ್ಲಿ ಅಂಟಿಸಲು ಅನಿಖರ ಆಲೋಚನೆ.
  ನಿಮ್ಮ ವಿದ್ಯುತ್ ವಿಳಾಸದಲಿ ಸುಲಭವಾಗುತಿತ್ತು ಖಡತ ರವಾನಿಸಲು.
  ವಿಶ್ವಾಸದಲಿ – ವಿಜಯಶೀಲ – ಬೆರ್ಲಿನ್, ೨೧.೧೦.೨೦೦೯
  [email protected]

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ BerlinderCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: