ಕಾಯಕದ ಸಹಜ ನಶೆ!

gali.gif

“ಗಾಳಿ ಬೆಳಕು” ಕಾಲಂ 

ನಟರಾಜ್ ಹುಳಿಯಾರ್ 

ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಮಿತ್ರರೊಬ್ಬರು ಸಿಮ್ಲಾದಿಂದ ಫೋನ್ ಮಾಡಿದರು. “ಎಲ್ಲಿದ್ದೀರಿ” ಎಂದರೆ, “ಕಚೇರಿಯಲ್ಲಿದ್ದೇನೆ” ಎಂದರು. “ಕಚೇರಿಯಲ್ಲಿ? ಆಲ್ಕೋಹಾಲ್ ಆಶ್ರಯದಲ್ಲಿ?” ಎಂದೆ.

“ಇಲ್ಲ ಮಾರಾಯ. ಬೆಳಗ್ಗೆ ಎಂಟೂವರೆಗೆ ಕೆಲಸ ಶುರುಮಾಡುತ್ತೇನೆ. ಹತ್ತು, ಹನ್ನೊಂದರ ಹೊತ್ತಿಗೆ ಕೆಲಸ ಮುಗಿಯುತ್ತದೆ. ಆಲ್ಕೋಹಾಲ್ ಗೀಲ್ಕೋಹಾಲ್ ಗೆಲ್ಲ ಬಿಡುವೇ ಇಲ್ಲ” ಎಂದರು.

“ಮನೆಯಲ್ಲಿ ಕಾಯುತ್ತಿರುವ ಹೆಂಡತಿ, ಮಕ್ಕಳು ಬೈಯುವುದಿಲ್ಲವೇ?”

“ಆ ಭಯವೂ ಇಲ್ಲ! ಅವರಿಬ್ಬರೂ ಡೆಲ್ಲಿಯಲ್ಲಿದ್ದಾರೆ. ಅವಳಿಗೆ ಬ್ಯಾಂಕಿನಲ್ಲಿ ಕೆಲಸ. ನಾನು ಇಲ್ಲಿ. ಇಡೀ ದಿವಸ ಕೆಲಸದಲ್ಲಿ ಮುಳುಗಿದ್ದರೆ ಯಾವ ನೆನಪೂ ಬರಲ್ಲ.”

“ಇದೆಲ್ಲ ತೀರಾ ಯಾಂತ್ರಿಕ ಎನ್ನುತ್ತಾರಲ್ಲ, ನಿಮಗೆ ಹಾಗನ್ನಿಸುವುದಿಲ್ಲವೇ?”

“ಅದೇನೋ ಗೊತ್ತಿಲ್ಲ. ನನ್ನ ಕೆಲಸ ಎಂದರೆ ಬರೀ ಶ್ರಮ ಅಂತಲ್ಲ. ಆ ಕೆಲಸದಲ್ಲಿ ನನಗೇ ಖುಶಿಯಾಗುವ ಡಿಸೈನುಗಳನ್ನು ಮಾಡುವುದು, ಕೆಲಸ ಮಾಡಿಸುವುದು ಎಲ್ಲವೂ ಸೇರಿದೆ. ಇದು ಯಾಂತ್ರಿಕವೋ ಅಲ್ಲವೋ ಎಂದು ನಿಮ್ಮಂಥ ರೈಟರುಗಳು ಹೇಳಿದರೆ ತಿಳಿದುಕೊಳ್ಳಬಹುದು”

-ಹೀಗೇ ಅವರು ಅರ್ಧ ಗಂಟೆ ಮಾತಾಡಿದಾಗ ಒಂದು ಸತ್ಯ ಹೊಳೆಯತೊಡಗಿತು: ರಾತ್ರಿ ನಿದ್ದೆಗೆ ಶರಣಾಗುವ ತನಕ ನಮ್ಮ ಇಡೀ ದೇಹ, ಮನಸ್ಸು ಯಾವ ಯಾವುದರಲ್ಲೋ ತೊಡಗಿದ್ದರೆ ಇದೆಲ್ಲ ಯಾಂತ್ರಿಕವೋ, ಅಲ್ಲವೋ ಎಂಬ ಪ್ರಶ್ನೆಗಳೇ ಬರುವುದಿಲ್ಲವೇನೋ ಎಂಬುದು ಅರಿವಿಗೆ ಬರತೊಡಗಿತು. ಆ ಮಿತ್ರರು ಕೆಲಸದಲ್ಲಿ ಮುಳುಗಿ ತಮ್ಮ ಎಲ್ಲ ಜೀವಕೋಶಗಳನ್ನು ಕಳೆದುಕೊಂಡಂತಿರಲಿಲ್ಲ. ಬಿಡುವಾದಾಗ ಅಲ್ಲೇ ತಮ್ಮ ಪ್ರಿಯವಾದ ಪುಸ್ತಕಗಳನ್ನು ಓದುತ್ತಿದ್ದರು. ಬೆಂಗಳೂರಿನಿಂದ ಈಚಿನ ಒಳ್ಳೆಯ ಕನ್ನಡ ಪುಸ್ತಕಗಳನ್ನು ತರಿಸಿಕೊಂಡಿದ್ದರು. ಹ್ಯಾರಿ ಪಾಟರ್ ಸರಣಿಯ ಕೊನೆಯ ಪುಸ್ತಕಕ್ಕಾಗಿ ಕಾಯುತ್ತಿದ್ದರು. ಅದರ ನಡುವೆ ಕಛೇರಿಯ ಜನರ ಮೇಲೆ ನಿಗಾ ಇಟ್ಟು ಕೆಲಸ ತೆಗೆಯುತ್ತಿದ್ದರು. ದಣಿದ ನಂತರ ರಾತ್ರಿ ನಿದ್ದೆ; ಬೆಳಗ್ಗೆ ಎಂಟೂವರೆಗೆ ಕೆಲಸ ಶುರು.

ಅವರ ಜೀವನ ಶೈಲಿಯ ಒಂದು ಸಾಮಾನ್ಯ ಮಾದರಿ ಈ ಮೇಲಿನ ಹಾಗೆ ಇರುತ್ತದೇನೋ ಎಂದು ಕಲ್ಪಿಸಿಕೊಂಡೆ. ಅವರು ಕೆಲಸದಲ್ಲಿ ಹೀಗೆ ಮುಳುಗದಿದ್ದರೆ, ದೆಹಲಿಯಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟು ಇಲ್ಲಿದ್ದೀನಲ್ಲ ಎಂಬ ಚಿಂತೆಯಲ್ಲೇ ನಾಶವಾಗಿರುತ್ತಿದ್ದರು. ಅಥವಾ ಸಂಜೆಯಾದರೆ ವಿನಾಶಕರ ಅಭ್ಯಾಸಗಳ ದಾಸರಾಗಿಬಿಡುತ್ತಿದ್ದರು. ಇಲ್ಲವೇ ಸ್ವಂತದಲ್ಲೇ ಮುಳುಗುವ ದುಃಖಿಯಾಗುತ್ತಿದ್ದರು. ಎಲ್ಲವನ್ನೂ ಮೀರುವ ಹಾಗೆ, ತನಗೇ ಗೊತ್ತಿಲ್ಲದ ಹಾಗೆ ಕೆಲಸದಲ್ಲಿ ತೊಡಗಿಕೊಂಡಿರುವ ಸೌಭಾಗ್ಯ ಅವರದಾಗಿತ್ತು. “ಸೌಭಾಗ್ಯ” ಎಂದು ಯಾಕೆ ಹೇಳುತ್ತಿದ್ದೇನೆಂದರೆ, ಕೆಲವು ಸರ್ಕಾರಿ ಕಚೇರಿಗಳಲ್ಲಿ ಹೀಗೆ ಹಗಲು ರಾತ್ರಿ ದುಡಿದು ಪ್ರತಿನಿತ್ಯ ಜನರ, ಅಧಿಕಾರಿಗಳ ಒತ್ತಡ ಹಾಗೂ ಜಟಾಪಟಿಯಲ್ಲಿ ಸಿಕ್ಕು ಹೈರಾಣಾಗಿ ಬರುವ ಮಿತ್ರರನ್ನೂ ನಾನು ಕಂಡಿದ್ದೇನೆ.

ಈ ನಡುವೆಯೂ ಎಲ್ಲ ವಲಯಗಳಲ್ಲೂ ಕೆಲಸದಲ್ಲಿ ಮುಳುಗಿ ಸುಖವಾಗಿರುವ ಜನರನ್ನೂ ಕಂಡಿರುವೆ. ಹಿಂದೊಮ್ಮೆ ಇಂಗ್ಲಿಷಿನ “ವರ್ಕ್ ಆಲ್ಕೋಹಾಲಿಕ್ ಎಂಬ ಶಬ್ದವನ್ನು “ಕಾಯಕ ನಶಾಜೀವಿ” ಎಂದು ಅನುವಾದಿಸಿಕೊಂಡಿದ್ದೆ. ಬಸವಣ್ಣ “ಕಾಯಕವೇ ಕೈಲಾಸ” ಎಂಬ ಮಾತನ್ನು ಹೆಚ್ಚು ಕಡಿಮೆ ಈ ಅರ್ಥದಲ್ಲೇ ಬಳಸಿರಬಹುದು. ಆಧ್ಯಾತ್ಮದ ಭಾಷೆಯಲ್ಲಿ “ಕೈಲಾಸ” ಎನ್ನುವುದು ಎಲ್ಲವನ್ನೂ ಮೀರಿದ ಆನಂದದ ಸ್ಥಿತಿಯ ಸಂಕೇತ ತಾನೆ?

ಸಿಮ್ಲಾದ ಮಿತ್ರ “ತಮ್ಮ ಬಿಡುವಿಲ್ಲದ ದಿನಚರಿಯ ಸುಖ”ದ ಬಗ್ಗೆ ಹೇಳಿದ್ದನ್ನು ಮೆಲುಕು ಹಾಕುತ್ತಿದ್ದ ಸಮಯದಲ್ಲೇ ಸಾಹಿತ್ಯದ ವಿದ್ಯಾರ್ಥಿಯೊಬ್ಬರು ಮೊನ್ನೆ ಆರ್ಟ್ ಆಫ್ ಲೀವಿಂಗ್ ಕೋರ್ಸಿಗೆ ಹೋಗಿ ಬಂದದ್ದನ್ನು ಮೆಲ್ಲಗೆ ಮುಜುಗರದಿಂದ ಹೇಳಿಕೊಂಡರು. ಅದು ಅವರಿಗೆ ನೆಮ್ಮದಿ ಕೊಟ್ಟಿದ್ದರೆ ಅದು ಅವರ ಆಯ್ಕೆಯ ಹಾದಿ ಎಂದುಕೊಂಡೆ. ಆದರೆ ಅವರನ್ನು ಆ ಬಗ್ಗೆ ಸ್ವಲ್ಪ ಒತ್ತಿ ಕೇಳಿದರೆ, “ಒಂದು ವಾರ ಎಲ್ಲ ನೆಮ್ಮದಿಯಾದಂತಿತ್ತು. ಆಮೇಲೆ…” ಎಂದು ರಾಗ ಎಳೆದರು.

“ಒಂದು ವಾರ ಎಲ್ಲ ಸರಿಯಾಗಿದ್ದದ್ದು ಯಾಕೆ ಎಂದು ಹೇಳಲೆ?” ಎಂದೆ.

“ಹೇಳಿ ನೋಡೋಣ?” ಎಂದರು.

“ಇದು ನನ್ನ ಊಹೆ. ಅದು ಸರಿ ಇಲ್ಲದೆಯೂ ಇರಬಹುದು. ನೀವು ಒಂದು ವಾರ ಬೆಳಗಾಗೆದ್ದು ನಿಮ್ಮ ಮನೆಯ ಕೆಲಸ ಮುಗಿಸಿ, ಆನಂತರ ಆಫೀಸಿಗೆ ಹೋಗಿ, ಸಂಜೆ ಈ ಆರ್ಟ್ ಆಫ್ ಲೀವಿಂಗ್ ಕಡೆಗೆ ಹೋಗಿ ಬಂದು, ಮಾಡುತ್ತಿದ್ದಿರಲ್ಲ? ಆಗ ನಿಮಗೆ ನಿಮ್ಮ ತಾಪತ್ರಯಗಳ ಬಗೆಗೇ ಯೋಚಿಸುತ್ತಾ ಅದನ್ನೇ ದೊಡ್ಡದು ಮಾಡಿಕೊಂಡು ನಿಮ್ಮ ಬಗೆಗೇ ನೀವು ಮರುಗುವ ಲಕ್ಷುರಿಗೆ ಸಮಯವಿರಲಿಲ್ಲ ಅಲ್ಲವೆ? ಇದು ಕೇವಲ ಊಹೆ ಎಂದರೂ, ಇದು ನಿಜವೂ ಇರಬಹುದು ಎನ್ನುವ ಧೈರ್ಯ ಮಾಡುತ್ತೇನೆ. ಯಾಕೆಂದರೆ, ನಾನು ಮೂರು ನಾಲ್ಕು ಕೆಲಸಗಳಲ್ಲಿ ಬಿಜಿಯಾದ ದಿನ ನನ್ನ ಎನರ್ಜಿ ಹೆಚ್ಚು ಉಕ್ಕುತ್ತಿರುವಂತೆ ತೋರುತ್ತದೆ. ಯಾವತ್ತಾದರೂ ಒಂದೆರಡು ಗಂಟೆಯ ಕೆಲಸ ಮುಗಿಸಿ ಉಳಿದಂತೆ ಸೋಮಾರಿಯಾಗಿ ಕಳೆದ ದಿನ ಎಂಥದೋ ಮಂಕು ಆವರಿಸಿದಂತೆ ಕಾಣುತ್ತದೆ. ಮಗು ಶಾಲೆಯಿಂದ ಬರುವುದು ಎರಡು ನಿಮಿಷ ತಡವಾಯಿತು, ಮಾರ್ಕೆಟಿಗೆ ಹೋದ ಹೆಂಡತಿ ಅರ್ಧ ಗಂಟೆಯಾದರೂ ಬಂದಿಲ್ಲವಲ್ಲ ಏನಾಯಿತೋ… ಮುಂತಾದ ಅಸಂಬದ್ಧ ಧಾವಂತಗಳು ಹುಟ್ಟುವುದು ಇಂಥ ಸೋಮಾರಿ ಬಿಡುವಿನ ದಿನಗಳಲ್ಲೇ! ಹಾಗೆಯೇ ನಿಮ್ಮ ಇಂಥ ಬಿಡುವಿನ ದಿನಗಳನ್ನೂ ನೆನಪಿಸಿಕೊಳ್ಳಿ: ಸಣ್ಣತನ, ಸಂಚು, ಪ್ರತಿಸಂಚುಗಳು ಯಾರನ್ನೋ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಬಯಕೆ-ಇವೆಲ್ಲಾ ಹೆಚ್ಚು ಹುಟ್ಟುವುದು ಇಂಥ ಖಾಲಿ ದಿನಗಳಲ್ಲೇ…”

– ಹೀಗೆ, ಈ ಧಾಟಿಯಲ್ಲಿ ಆವತ್ತು ಹೇಳಲಾಗಲಿಲ್ಲ. ಮಾತಾಡುವಾಗ ಎಷ್ಟೋ ಸಲ ನಾವು ನಮ್ಮೊಳಗೇ ಹುಡುಕೊಳ್ಳದೆ ಸುಮ್ಮನೆ ಮಾತಾಡುವುದರಿಂದ ಇಷ್ಟಾದರೂ ಸರಿಯಾಗಿ ಹೇಳುವುದು ಆಗದೇ ಇರಬಹುದು. ಇದನ್ನೆಲ್ಲಾ ನಾನು ವಿದ್ಯಾರ್ಥಿಯೊಬ್ಬರಿಗೆ ಹೇಳಬೇಕಾಗಿ ಬಂದಿತ್ತು. ನೀವು ಸಾರ್ವಜನಿಕ ಜೀವನದಲ್ಲಿದ್ದರೆ, ಮೇಷ್ಟ್ರಾಗಿದ್ದರೆ, ಯಾವುದಾದರೂ ಸಂಸ್ಥೆಯ ಮುಂಚೂಣಿಯಲ್ಲಿದ್ದರೆ ಅಥವಾ ಒಳ್ಳೆಯ ಮಿತ್ರರಾಗಿದ್ದರೆ ಅನೇಕರ ಕಷ್ಟಗಳು ನಿಮ್ಮ ಕಷ್ಟಗಳು ಎನಿಸತೊಡಗುತ್ತದೆ. ಅವುಗಳಲ್ಲಿ ಮುಳುಗುವುದು, ಭಾಗಿಯಾಗುವುದು ಕೂಡ ಅನೇಕ ಸಲ ಅರ್ಥಪೂರ್ಣವಾಗಿ ಕಾಣತೊಡಗುತ್ತದೆ. ಸಣ್ಣಪುಟ್ಟ ಊರುಗಳಲ್ಲಿ ಯಾವುದೇ ಮನೆಯಲ್ಲಿ ಖಾಯಿಲೆ, ಸಾವು ಏನೇ ಆದರೂ ಹಾಜರಾಗುವ ಕೆಲವರನ್ನು ನೀವು ನೋಡಿರಬಹುದು. ನಾನು ಈ ಹಿಂದೆ ಇಂಥವರನ್ನು ಕಂಡಾಗಲೆಲ್ಲ, ಇವರೆಲ್ಲ ಪಾಪ, ಕೆಲಸವಿಲ್ಲದೆ ಇರುವುದರಿಂದ ಈ ಬಗೆಯ ಚಟುವಟಿಕೆಗಳಲ್ಲಿ ಹುರುಪಿನಿಂದ ತೊಡಗಿಸಿಕೊಂಡಿದ್ದಾರೇನೋ ಎಂದುಕೊಳ್ಳುತ್ತಿದ್ದೆ. ಆದರೆ ಈಗ ಹಿಂತಿರುಗಿ ನೋಡಿದರೆ, ಆ ಕೆಲಸಗಳು ಅವರ ಒಳಗನ್ನು ಸಂಪೂರ್ಣ ಆವರಿಸಿಕೊಂಡಿದ್ದವು ಎನ್ನುವುದು ಗೊತ್ತಾಗುತ್ತದೆ.

“ಹೀಗೆ ನಿಮಗೇ ಅರಿವಿಲ್ಲದೆಯೇ ಪೂರ್ಣವಾಗಿ ತೊಡಗುವ ಯಾವ ಕೆಲಸವಿದೆ ನೋಡಿ” ಎಂದು ಆ ಆರ್ಟ್ ಆಫ್ ಲೀವಿಂಗ್ ಗೆ ಹೋಗಿದ್ದ ನಿದ್ಯಾರ್ಥಿಯನ್ನು ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರಗಳನ್ನು ನೋಡಿದರೆ ಅವರ ಬಹುತೇಕ ಅಭ್ಯಾಸಗಳು ಕಷ್ಟಪಟ್ಟು ಒಗ್ಗಿಸಿಕೊಳ್ಳಲೆತ್ನಿಸಿದಂತಿದ್ದವು. ಈ ಬಗೆಯ ಪ್ರಜ್ಞಾಪೂರ್ವಕ ಪ್ರಯತ್ನ ಕೂಡ ನಮ್ಮನ್ನು ನಮ್ಮಿಂದ ಹೊರ ತರಲಾರದು. ನಾವು ಯೋಚನೆಗಳನ್ನು ಮರೆಯೋಣವೆಂದು ಸಂಗೀತದ ಮೊರೆ ಹೋದರೆ ಅಲ್ಲಿ ದುಃಖದ ಛಾಯೆಯ ರಾಗಗಳು ನಮ್ಮ ದುಃಖವನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇರುತ್ತದೆ! ಆದ್ದರಿಂದ ಕೃತಕವಾಗಿ ಮೀರುವ ಎಲ್ಲಾ ಕ್ರಮಗಳೂ ತಾತ್ಕಾಲಿಕವಾಗಿ ಕೊಂಚ ಉಪಯುಕ್ತವಾದರೂ ಅವುಗಳ ಊರುಗೋಲು ಹಿಡಿದು ಬಹುದೂರ ಸಾಗುವುದು ಸಾಧ್ಯವಿಲ್ಲ. ಬದಲಿಗೆ, ನಮಗೇ ಅರಿವಿಲ್ಲದೆ ಯಾವುದರಲ್ಲಾದರೂ ತೊಡಗುವುದೊಂದೇ ಬಿಡುಗಡೆಯ ಮಾರ್ಗ ಎನಿಸತೊಡಗಿತು.

ಆದರೆ ಎಲ್ಲಾ ಕಾಲದಲ್ಲೂ ಮಾನವನ ಕಷ್ಟ ಇದು. ಅವನಿಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಗಳು ಗೊತ್ತಿದ್ದರೂ ಅವು ಅವನ ಬಿಕ್ಕಟ್ಟಿನ ಗಳಿಗೆಗಳಲ್ಲಿ ನೆರವಿಗೆ ಬರದೇ ಹೋಗಬಹುದು. ನಾವು ಇತರರಿಗೆ ಸಲೀಸಾಗಿ ಸೂಚಿಸುವ ಪರಿಹಾರಗಳು ನಮ್ಮ ತುರ್ತಿನ ಸಂದರ್ಭದಲ್ಲಿ ನಮಗೇ ದಾರಿ ತೋರಿಸದೇ ಹೋಗುವುದೇ ಹೆಚ್ಚು. ಅದರಲ್ಲೂ ಬದುಕನ್ನಾಗಲೀ, ಸ್ವಾತಂತ್ರ್ಯವನ್ನಾಗಲೀ ಹತ್ತಿರದಿಂದ, ಗಂಭೀರವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುವವರು ಯಾವುದಕ್ಕೇ ಆಗಲಿ, ಸರಳವಾದ ಉತ್ತರಗಳನ್ನು ಹುಡುಕುವುದು, ಕೊಡುವುದು ಕಷ್ಟವಾಗುತ್ತದೆ. ಆದರೆ ನಮ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹತ್ತಿರದ ಗೆಳೆಯ, ಗೆಳತಿಯರು ಚೈತನ್ಯವಿಲ್ಲದೆ ಕುಸಿದಿದ್ದಾಗ ಅವರ ಜೊತೆ ನಾವೂ ಸೇರಿ ಈ ಸ್ಥಿತಿಯಿಂದ ಹೊರಬರುವ ತಾತ್ಕಾಲಿಕ ದಾರಿಯನ್ನಾದರೂ ಹುಡುಕಬೇಕೆನ್ನಿಸುತ್ತಿರುತ್ತದೆ; ಅದು ನಮ್ಮೆಲ್ಲರ ಹುಡುಕಾಟವೂ ಆಗುತ್ತದೆ…

ಚೈತನ್ಯ ಮಂಕಾಗಿದ್ದಾಗ ಸಾಮಾನ್ಯವಾಗಿ ಎಲ್ಲರೂ ಏನೂ ತೋಚದವರಂತೆ ಕೂತಿರುತ್ತಾರಲ್ಲವೆ? ಈ ಸ್ಥಿತಿ ಹಲವು ನಿಮಿಷ, ಗಂಟೆ, ದಿನಗಳ ಕಾಲ ಹಾಗೇ ಮುಂದುವರಿಯಬಹುದು. ಆದರೆ ಪ್ರತಿಯೊಬ್ಬರೂ ತಾವು ಆಗಾಗ್ಗೆ ಈ ಸ್ಥಿತಿಯಿಂದ ಹೇಗೆ ಹೊರಬಂದೆವು ಎಂಬುದನ್ನು ಒಮ್ಮೊಮ್ಮೆ ಹಿಂತಿರುಗಿ ನೋಡಿಕೊಂಡು ಕೆಲವು ಸರಳ ಮಾರ್ಗಗಳನ್ನು ಕೊಂಡುಕೊಳ್ಳಬಹುದೇನೋ. ಅಂದರೆ ಕುಸಿದಿದ್ದ ನಮ್ಮ ಎನರ್ಜಿ ಹೇಗೆ ವಾಪಸ್ ಬಂತು ಎಂಬುದನ್ನು ನಮಗೆ ನಾವೇ ಪರೀಕ್ಷೆ ಮಾಡಿಕೊಳ್ಳುವ ಕೆಲಸ ಇದು. ಆತ್ಮೀಯರ ಜೊತೆ ಮಾತುಕತೆ, ಪರನಿಂದನೆ, ಗಾಸಿಪ್ ಅಥವಾ ನಾವು ತಿನ್ನುವ ಯಾವುದೋ ತಿನಿಸಿನಿಂದಾಗಿ ಕೂಡ ಎಷ್ಟೋ ಸಲ ನಮ್ಮ ಎನರ್ಜಿ ವಾಪಸ್ ಬಂದಂತಿದೆಯಲ್ಲವೆ? ಸುಮ್ಮನೆ ಸುಳಿದ ಪ್ರಿಯವಾದ ವ್ಯಕ್ತಿಗಳ ನೆನಪು, ಎಲ್ಲೋ ಹಾದಿಯಲ್ಲಿ ನಿರ್ನಿಮಿತ್ತವಾಗಿ ಕಂಡ ಒಂದು ನಗೆ, ಒಂದು ಆಕರ್ಷಕ ದೇಹ, ಯಾವುದೋ ಒಂದು ಆತ್ಮೀಯ ವರ್ತನೆ… ಹೀಗೆ ಯಾವುದು ಬೇಕಾದರೂ ನಮ್ಮಲ್ಲಿ ಎನರ್ಜಿ ಉಕ್ಕಿಸಬಹುದು. ಒಮ್ಮೆ ದಾರಿಯಲ್ಲಿ ಸಾಧಾರಣ ಹುಡುಗಿಯೊಬ್ಬಳು ಪುಟ್ಟ ಹುಡುಗನ ಕೈ ಹಿಡಿದುಕೊಂಡು ಹೋಗುತ್ತಿದ್ದಳು. ಆಗ ಅಲ್ಲೇ ಬದಿಯಲ್ಲಿ ಮೋಟಾರ್ ಬೈಕಿನಲ್ಲಿ ಮಿಂಚಿ ಮಾಯವಾದ ಸುಂದರ ಹುಡುಗನೊಬ್ಬನನ್ನು ಕಂಡ ಅವಳು ಉದ್ವೇಗದಿಂದ “ಪಾಪೂ ಪಾಪೂ, ಆ ಹುಡುಗನನ್ನ ನೋಡಿದೆಯಾ?” ಎಂದು ಕಿರುಚುವ ದನಿಯಲ್ಲಿ ಕೇಳುತ್ತಾ ಅದೇ ಆಗ ತನ್ನಲ್ಲಿ ಹಠಾತ್ತನೆ ಹುಟ್ಟಿದ ಆನಂದವನ್ನು ಹೆಚ್ಚಿಸಿಕೊಳ್ಳುತ್ತಿದ್ದಳು. ಇದು ಎಲ್ಲರಲ್ಲೂ ಆಗುತ್ತಿರುತ್ತದೆ. ಇವನ್ನೆಲ್ಲಾ ನಾವು ನೀತಿ, ಅನೀತಿ, ಮಡಿ, ಮರ್ಯಾದೆಗಳ ಗಡಿ ಬಿಟ್ಟು ನೋಡಬೇಕಾಗುತ್ತದೆ. ಇವೆಲ್ಲ ದಿನನಿತ್ಯ ನಮ್ಮ ಚೈತನ್ಯವನ್ನು ಉಕ್ಕಿಸುವ ಸಹಜ ಭಾವಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಈ ಬಗ್ಗೆ ಅನಗತ್ಯವಾಗಿ ನಾಚಿಕೆ, ಭಯ, ಮುಜುಗರ ಅನುಭವಿಸುವುದು ತಪ್ಪುತ್ತದೆ.

ಯಾವುದು ನಮ್ಮಲ್ಲಿ ವಿಚಿತ್ರವಾದ ಮಾನಸಿಕ ಎನರ್ಜಿ ಉಕ್ಕಿಸುತ್ತದೋ ಅದರಿಂದ ತೀರಾ ಯಾರಿಗೂ ನೋವು, ಹಾನಿ ಆಗದಂತಿದ್ದರೆ ಅದನ್ನು ಕೊನೆಯ ಪಕ್ಷ ನಮ್ಮೊಳಗೆ ನಾವೇ ಗುರುತಿಸಿಕೊಳ್ಳುವುದು ಆರೋಗ್ಯಕರ ನಡವಳಿಕೆ. ನಮ್ಮ ನಮ್ಮ ಭಾವನೆಗಳ ಬಗ್ಗೆ ನಾವು ಸಹಜವಾಗಿರಬೇಕಾದ್ದನ್ನು ಕುರಿತು ಹೇಳುವ ಫ್ರಾಯ್ಡ್ ಇದನ್ನು ಅದ್ಭುತವಾಗಿ ವಿವರಿಸಿದ್ದಾನೆ. ಈ ಸಹಜತೆಯ ಜೊತೆಗೇ ನಾವು ಅತ್ಯಂತ ಸಹಜವಾಗಿ ತೊಡಗುವಂಥ ಕೆಲಸವಿದ್ದರೆ ಅದು ಇನ್ನೂ ಲವ್ಲಿಯಾಗಿರುತ್ತದೆ.

“….. ಸಹಜ ಎಂದರೆ ಸಹ+ಜ; ಅಂದರೆ, ಜೊತೆಯಲ್ಲೇ ಹುಟ್ಟಿದ್ದು” ಎಂಬ ಅರ್ಥವನ್ನು ಕಿ.ರಂ.ನಾಗರಾಜರು ಪದೇ ಪದೇ ಯಾಕೆ ಜ್ಞಾಪಿಸುತ್ತಿರುತ್ತಾರೆ ಎಂಬುದು ಈಗ ಸರಿಯಾಗಿ ಹೊಳೆಯುತ್ತಿದೆ!

‍ಲೇಖಕರು avadhi

July 24, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This