ಕಾಯ್ಕಿಣಿ ಕಾಗದ : ಸುಪ್ತಸಾಗರ ದಾಟುವ ‘ಕಾಗದ’ದ ದೋಣಿ

– ಜಯಂತ ಕಾಯ್ಕಿಣಿ

ಸುಪ್ತಸಾಗರ ದಾಟುವ ‘ಕಾಗದ’ದ ದೋಣಿ   ಜಯಂತ ಕಾಯ್ಕಿಣಿ   ‘ನಾನು ಕಾಗದಗಳನ್ನು ಬರೆಯದೆ, ಯುಗಗಳೇ ಆದವು’-ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ಈಚೆ ತುಂಬಾ ಸಿಗುತ್ತಾರೆ. ‘ಏನಿದ್ದರೂ ಫೋನಿನಲ್ಲಿ ’It is fast, straight and latest to this moment ಎಂದು ಸಮರ್ಥಿಸಿಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ಯಾರಾದರೂ ಬರೆದ ಪತ್ರಕ್ಕೆ ಚುಟುಕಾಗಿ ಉತ್ತರಿಸಲೂ ಅವರಿಗಾಗುವುದಿಲ್ಲ. ಒಂದು ದಿನ ಕೂತು ವಿವರವಾಗಿ ಬರೆಯಬೇಕು ಅಂದುಕೊಳ್ಳುತ್ತ ಅದು ಕೊನೆಗೂ ಆಗುವುದಿಲ್ಲ.ಸೈಕಲ್ ತಳ್ಳಿಕೊಂಡು ಬರುವ ಅಂಚೆಯಣ್ಣನ ಕೈಲಿಯ ಕಟ್ಟು ನೋಡಿ. ಅವುಗಳಲ್ಲೂ ಡಿವಿಡೆಂಡ್ ಮಾಹಿತಿ ಪತ್ರಗಳು, ರೀಡರ್ಸ್ ಡೈಜೆಸ್ಟ್‌ನವರ ‘ಟೋಪಿ’ ಉಡುಗೊರೆ ಸ್ಕೀಮುಗಳ ನೋಟೀಸು, ಆಮಂತ್ರಣ ಪತ್ರಿಕೆ, ಟ್ಯುಟೋರಿಯಲ್ ಕ್ಲಾಸ್, ‘ಸ್ಯಾರಿ ಸೇಲ್’ ಗಳ ಹ್ಯಾಂಡ್ ಬಿಲ್-ಇಂಥ ಮುದ್ರಿತ ಕಾಗದಗಳದೇ ಮೇಲುಗೈ. ನರಮನುಷ್ಯನ ಹಸ್ತಾಕ್ಷರದ ಸುಳಿವೇ ಇಲ್ಲದ ಕಾಗದ ಪತ್ರಗಳು ಅವು. ಆ ರಾಶಿಯಲ್ಲಿ ಹಸಿರೆಲೆಗಳಂಥ ಅಂತರ್‌ದೇಶಿ ಪತ್ರಗಳು, ಹಣ್ಣೆಲೆಗಳಂಥ ಕಾರ್ಡುಗಳು ಕಂಡುಬಂದರೆ ಜೀವಕ್ಕೆ ಹಿತವಾಗುತ್ತದೆ.   ಮನೆಗೆ ಬರುವ ಅಂಚೆಯೂ ಅಷ್ಟೆ. ನೀವು ಮೊದಲು ಕೈಗೆತ್ತಿಕೊಳ್ಳುವುದು ಕೈಲಿ ಬರೆದಿರುವ ಕಾರ್ಡು, ಅಂತರ್ ದೇಶಿಗಳನ್ನು ಹೊರತು ಯಾವುದೇ ಮಹಾಸಂದೇಶ ಹೊತ್ತು ಬಂದಿರಬಹುದಾದ ಟೈಪ್ಡ್ ಲಕೋಟೆಗಳನ್ನಲ್ಲ. ನಗರೀಕರಣಗೊಂಡಷ್ಟೂ ಅಂಚೆಯಲ್ಲಿ ನಿರ್ಜೀವ ಕಾಗದಗಳು ಹೆಚ್ಚಾಗುತ್ತವೆ. ಇಂಥ ಅಂಚೆಯಲ್ಲಿ ಅಪರೂಪಕ್ಕೊಮ್ಮೆ ಯಾದರೂ ಬರುವ ಕೈಬರಹದ ಪತ್ರ ಮತ್ತೆ ಮತ್ತೆ ಓದಬೇಕೆನಿಸುತ್ತದೆ.ಏಕೆಂದರೆ ಇಂಥ ಪತ್ರ ಬರೇ ಒಂದು ಮಾಹಿತಿಯ ವಾಹಕವಾಗಿ ಬಂದಿರುವುದಿಲ್ಲ. ಅದು ನಿಮ್ಮ ಸ್ಪರ್ಶಕ್ಕಾಗಿ ತುಡಿಯುತ್ತಿರುವ ಮನಸ್ಸೇ ಆಗಿರುತ್ತದೆ. ಒಂದು ಕಾಗದದಲ್ಲಿ ಎರಡು ಮನಸ್ಸುಗಳ ಸಂವಾದ, ಸಂಯೋಗಗಳು ಯಾವ ಹಂಗಿಲ್ಲದೆ ಸಹಜವಾಗುತ್ತದೆ. ಕಾಗದ ಬರೆಯುವುದು ಅತ್ಯಂತ ಮಾನವೀಯವಾದ ಚಟುವಟಿಕೆ. ಕಾಗದ ಬರೆಯುವ ಮನಸ್ಸು ಆ ನೆಪದಲ್ಲಿ, ಆ ಮುಹೂರ್ತದಲ್ಲಿ ತನ್ನದೇ ಆದ ಅವಕಾಶ (space)ದಲ್ಲಿ ಬಾಯ್ಬಿಡುತ್ತದೆ. ತನ್ನೆಲ್ಲ ಕನಸು, ಎಚ್ಚರ, ನೆನಪುಗಳೊಂದಿಗೆ ಅದು ಮಾತಾಗುತ್ತಿರುತ್ತದೆ.ನೇರವಾಗಿ ಹೇಳಲಾಗದ ಆದರೆ ಹೇಳಲೇಬೇಕಾದ ಸೂಕ್ಷ್ಮ ಸಂಗತಿಗಳನ್ನು ಕಿಂಚಿತ್ತೂ ಕೃತಕವಾಗದಂತೆ, ಊನಗೊಳ್ಳದಂತೆ ಒಂದು ಪತ್ರ ಹೇಳಬಲ್ಲದು. ಸ್ನೇಹಿತರು, ಗುರುಹಿರಿಯರು, ತಂದೆ ತಾಯಿಗಳ ಕುರಿತಾದ ಗೌರವ ಪ್ರೀತಿಗಳನ್ನು ಮಾತಿನಲ್ಲಾಡಿ ತೋರಿಸುವ ಜಾಯಮಾನ ನಮ್ಮದಲ್ಲ. ಹಾಗಂತ ಆಡಿ ತೋರಿಸಿದರೇ ಅದು ಪ್ರೀತಿ ಅಂತಲೂ ಅಲ್ಲ. ನಮ್ಮ ವರ್ತನೆಗಳಲ್ಲಿ ಅದು ವೇದ್ಯವಾಗುತ್ತಲೇ ಇರುತ್ತದೆ. ಆದರೂ ಏಕಾಕಿತನ ಎನ್ನುವುದು ಈ ಕಾಲದ ಪ್ರಧಾನ ಲಕ್ಷಣವೇ ಆಗಿರುವಾಗ ಪತ್ರವೊಂದು ಮುರುಕು ಅಕ್ಷರದ ಎರಡು ಸಾಲುಗಳಲ್ಲಿ ಮನವನ್ನು ನೀವಿ ಹೋದರೆ ಅದಕ್ಕಿಂತ ಮಿಗಿಲಾದ ಬೇರೆ ಹಿತವಿಲ್ಲ. ಕಥೆ, ಕಾದಂಬರಿ, ಸಿನಿಮಾ, ಸೀರಿಯಲ್‌ಗಳಲ್ಲಿ ಪ್ರತಿ ಸಂಬಂಧಗಳೂ ಸಂಭಾಷಣೆಯ ಮೂಲಕ (ಅಥವಾ ಕೇವಲ ಸಂಭಾಷಣೆಯಲ್ಲಷ್ಟೆ) ಸಾಕಾರಗೊಳ್ಳುವುದನ್ನು ನೋಡಿ ನೋಡಿ ರೂಢಿಗಟ್ಟಿದ ನಮಗೆ, ವೈಯಕ್ತಿಕ ಜೀವನದಲ್ಲಿ ಹಾಗೆಲ್ಲ ಇದ್ದಿರಲಿಕ್ಕೂ ಸಾಕು ಎಂಬ ಅಳುಕು ಇರುತ್ತದೆ. ತೆರೆಯ ಮೇಲೆ ಅಮ್ಮಂದಿರನ್ನು ಬಿಗಿದಪ್ಪಿ ಎತ್ತಿ ಮುದ್ದಾಡುವ ತರುಣರು, ‘ನನಗೆ ನಿಮ್ ಪ್ರೀತಿ ಬೇಕು’ ಎಂದು ತಾಳಿ ಹಿಡಿದು ಯಾಚಿಸುವ ಹೆಂಡಂದಿರು, ‘ಗೆಳೆಯಾ, ನಿನಗಾಗಿ ಜೀವ ಕೊಡುತ್ತೇನೆ’ ಎನ್ನುವ ಸ್ನೇಹಿತರು- ನಮ್ಮಲ್ಲಿ ಕಸಿವಿಸಿ ಉಂಟು ಮಾಡುತ್ತಾರೆ. ಏಕೆಂದರೆ ಅಕ್ಕರೆಯ ಅಮ್ಮನೊಂದಿಗೆ, ಅಪ್ಪನೊಂದಿಗೆ-ಎಷ್ಟೋ ಕಾಲಾವಧಿಯ ನಂತರ ಸಿಕ್ಕರೂ ಅದೂ, ಇದು ಮಾತಾಡಿ, ಕೆಲವೊಮ್ಮೆ ಜಗಳವನ್ನೂ ಆಡಿ, ಕಿರಿಕಿರಿ ಮಾಡಿಕೊಂಡು ಬರುವ ನಮ್ಮನ್ನು ಭಾವನೆಗಳಿಗೂ ಮತ್ತು ಆಡುಮಾತುಗಳಿಗೂ ನಡುವಿರುವ ಅಂತರ ವ್ಯಾಕುಲಗೊಳಿಸುತ್ತದೆ. ಅದನ್ನು ಸರಿಪಡಿಸಲು ಹವಣಿಸುವ ಜಾಣಜಾಣೆಯರು ಸಂಬಂಧಗಳನ್ನು ಇನ್ನೂ ಹದಗೆಡಿಸಿಕೊಳ್ಳುವುದುಂಟು. ಪತ್ರದಲ್ಲಿ ಹಾಗಲ್ಲ. ದೈಹಿಕ, ಐಹಿಕ ರಗಳೆಗಳಿಲ್ಲದ ಮುಕ್ತ ಮಾತು ಇಲ್ಲಿ ಸಾಧ್ಯ. ತಪ್ಪೊಪ್ಪಿಗೆ, ಸಮಾಧಾನ, ಧೈರ್ಯ, ನಿಷ್ಠುರ, ಛೀಮಾರಿ ಎಲ್ಲವೂ ಒಂದು ಸಾತ್ವಿಕ ಮೌನದಲ್ಲಿ ಇಲ್ಲಿ ನಡೆಯುತ್ತದೆ. ಪತ್ರ ಬರೆಯುವಾಗ ವ್ಯಕ್ತಿ ತನ್ನೊಂದಿಗೂ ಮಾತಿನಲ್ಲಿ ತೊಡಗಿರುತ್ತಾನೆ.ಅದೊಂದು ‘ಪರಕಾಯ ಸ್ವಗತ’. ಅನುಮಾನ, ಅನಿಶ್ಚಿತತೆ, ಗೊಂದಲಗಳೆಲ್ಲ ಹುಬೇಹೂಬು ಹಾಗೇ ಇದ್ದುಕೊಂಡು,ಬರವಣಿಗೆಯ ದಾರಿಯಲ್ಲೇ ಸ್ಪಷ್ಟಗೊಳ್ಳುವ ಪವಾಡ ಇಲ್ಲಿ ಶಕ್ಯ.ಆದರೆ, ಖಚಿತತೆ ಮತ್ತು ಸ್ಪಷ್ಟತೆಗಳನ್ನು ಅವಲಂಬಿಸಿರುವ ಈ ಮಾಹಿತಿಗಳ ಯುಗದಲ್ಲಿ, ಮನುಷ್ಯ ತನ್ನ ಮನಸ್ಸಿನ ವಿಸ್ಮಯಗಳ ಜತೆ ಸಂತೋಷಗಳನ್ನೂ ಮುರಿದು ಕೊಂಡವನಂತಾಗಿರುವಾಗ, ಭೂಮಿಕೆಯನ್ನು, ನೆಲೆಯನ್ನು ಕಲ್ಪಿಸಿಕೊಡಬಲ್ಲ ಪತ್ರಲೇಖನವನ್ನೂ ನಿಲ್ಲಿಸಿಬಿಟ್ಟಿದ್ದಾನೆ. ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.ಕಾರ್ಡನ್ನೋ,ಅಂತರ್‌ದೇಶಿ ಪತ್ರವನ್ನೋ ಅಥವಾ ಒಂದು ಖಾಲಿ ಹಾಳೆಯನ್ನೋ ಎದುರಿಟ್ಟುಕೊಂಡು, ಬರೆಯಬೇಕಾದವರನ್ನು ನೆನೆಸಿಕೊಂಡು ತೊಡಗಿಬಿಡಿ. ಎರಡೇ ಸಾಲಿರಲಿ, ಎರಡು ಪುಟವೇ ಇರಲಿ.. ಬರೆದು ಅಂಚೆಗೆ ಹಾಕಿಬಿಡಿ.ಹಠಾತ್ತನೆ ಯಾರದೋ ನೆನಪಾಯಿತು. ಬರೆಯಬೇಕೆನಿಸಿತು. ಯೋಚಿಸಬೇಡಿ. ಸುಮ್ಮನೆ ಕಾರ್ಡೊಂದು ಗೀಚಿ ಹಾಕಿಬಿಡಿ. ಅಷ್ಟರಮಟ್ಟಿಗೆ ಹಗುರಾಗುತ್ತೀರಿ. ಪಯಣ ಸಲಿಲವಾಗುತ್ತದೆ.ಪತ್ರಲೇಖನಕ್ಕೆ ಪ್ರತಿಭೆ, ಶ್ರಮ, ಸಮಯ ಯಾವುದೂ ಬೇಡ. ಮನಸ್ಸಿದ್ದರೆ ಸಾಕು. ಅದು ನಿಮ್ಮ ಭಾವ ಭೂಮಿಕೆಯನ್ನು ವಿಸ್ತರಿಸುವುದಷ್ಟೇ ಅಲ್ಲ. ನಿಮ್ಮ ಆತ್ಮಿಕ ಸಂವಾದಕ್ಕೂ ನೆರವಾಗುತ್ತದೆ. ಮುಖತಃ ಚರ್ಚಿಸಲಾಗದ ನಿಮ್ಮ ಜೀವನ್ಮರಣದ ಪ್ರಶ್ನೆಗಳನ್ನು-ಎಲ್ಲೋ ಇರುವ ಅಗೋಚರ ಸ್ನೇಹಿತನೊಂದಿಗೆ-ತೋಡಿಕೊಳ್ಳಬಲ್ಲಿರಿ. ಯಾರಿಗೆ ಯಾರಿಲ್ಲ ‘ಇರವಿನ’ ಸಂಸಾರ ಎಂಬುದು ಎಂದಿನಿಂದ ಇದ್ದದ್ದೇ. ಹೇಳುವವರು ಇರಬಹುದು. ಕೇಳುವವರೂ (ಪ್ರಶ್ನಿಸುವವರು) ಇರಬಹುದು.ಆದರೆ ಗದ್ದಲವಿಲ್ಲದೆ ಆಲಿಸುವವರು ಯಾವತ್ತೂ ಕಡಿಮೆ. ಆಲಿಕೆಯ ಗೊಡವೆಯಿಲ್ಲದೆ ಹಂಚಿಕೊಳ್ಳುವ ಸುಖ ಪತ್ರದಲ್ಲೇ ಸಾಧ್ಯ.ಉತ್ತರಗಳ ಹಂಗಿಲ್ಲದ ಪತ್ರ ಬರೆಯುವುದು, ಆದರೂ ಉತ್ತರಕ್ಕಾಗಿ ಮನದಾಳದಲ್ಲೆಲ್ಲೋ ಕಾಯುತ್ತ ನಿಮ್ಮ ಚಟುವಟಿಕೆಯಲ್ಲಿ ಮಗ್ನವಾಗಿರುವುದು. ಎಣಿಕೆ ಹುಸಿಯಾಗದಂತೆ ಪರಿಚಿತ ಅಕ್ಷರಗಳಲ್ಲಿ ವಿಳಾಸ ಬರೆದಿರುವ ಒಡೆಯದ ಗರಿಮುರಿ ಪತ್ರವೊಂದು ಎಷ್ಟೋ ಮೈಲಿ ಪ್ರಯಾಣಿಸಿ ಎಷ್ಟೋ ಸಾರ್ಟಿಂಗ್ ಕೈಗಳನ್ನು ದಾಟಿ ನಿಮ್ಮ ತನಕ ಬಂದು, ನೀವು ಉಸಿರೂದಿ ಒಡೆಯುವುದನ್ನೇ ಕಾಯುತ್ತಿರುವುದು. ಈ ಉಲ್ಲಾಸ ಇನ್ನೆಲ್ಲಿ? ಈ ಕೆಂಪು ಡಬ್ಬಿಯನ್ನು ಬರೇ ಟಪ್ಪಾಲು ಡಬ್ಬಿಯೆಂದು ಉಡಾಫೆಯಿಂದ ನೋಡಬೇಡಿ. ಅದರಲ್ಲಿ ಬಿಡುಗಡೆಗೆ, ಸ್ಪರ್ಷಕ್ಕೆ ಕಾದ ನೂರು ಜೀವಗಳಿವೆ. ಪ್ರತಿದಿನ ಅದೆಷ್ಟು ಕಾಗದಗಳು ಬಟವಾಡೆಯಾಗುತ್ತವೋ ಅಷ್ಟೊಂದು ನಂಟುಗಳಿವೆ ಈ ಉಪಗ್ರಹದ ತುಂಬ.ಫೋನ್ ಮಾಡಿಯಾಗಿದೆ ಸರಿ. ಆದರೂ ಒಂದು ಕಾಗದ ಬರೆಯಿರಿ.ಈ ತನಕ ಹೊಳೆದೇ ಇರದ ಜೀವಕ್ಕೆ ಹಿತವುಣಿಸುವ ಎಷ್ಟೊಂದು ಸಂಗತಿಗಳು ಹೊಳೆಯುತ್ತವೆ ನೋಡಿ. ಪತ್ರ ಲೇಖನವೊಂದು ಕಲೆಯಲ್ಲ, ಅದು ಜೀವನ ಕಲೆ. ಸುಪ್ತ ಸಾಗರವನ್ನು ದಾಟಿಸುವ ‘ಕಾಗದ’ದ ದೋಣಿ.   -ವಾರ್ತಾ ಭಾರತಿ ಕೃಪೆ ***

ಸ್ನೇಹಿತರೆ ನೀವು ಕಡೆಯ ಸಲ ಪತ್ರ ಬರೆದದ್ದು ಯಾವಾಗ….?

 ]]>

‍ಲೇಖಕರು G

April 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

8 ಪ್ರತಿಕ್ರಿಯೆಗಳು

 1. Gopal Wajapeyi

  ”ಸ್ನೇಹಿತರೆ, ನೀವು ಕಡೆಯ ಸಲ ಪತ್ರ ಬರೆದದ್ದು ಯಾವಾಗ…?” ಅಂತ ಕೇಳಿದ್ದೀರಲ್ಲ ಜಯಂತ್… ಇನ್ನೂ ಬರೆದಿಲ್ಲ… ಯಾವಾಗ ಬರೆಯುತ್ತೇನೆ ಎಂಬುದೂ ಗೊತ್ತಿಲ್ಲ.
  ನಿಮ್ಮ ಬರೆಹ ಅನೇಕ ನೆನಪುಗಳನ್ನು ಮಾಡಿಕೊಟ್ಟಿತು.

  ಪ್ರತಿಕ್ರಿಯೆ
 2. Veena Bhat

  ನಿಜ..ಕಾಯ್ಕಿಣಿಯವರೇ… .ನನಗೂ ಹಾಗೆ ಅನಿಸುತ್ತೆ..ಸ್ನೇಹಿತರಿಗೆ ಬರೆಯದೆ ತುಂಬಾ ವರ್ಷಗಳಾದವು. ಪತ್ರಿಕೆ ಸಂಪಾದಕರಿಗೆ official ಪತ್ರ ಬರೆದದ್ದಿದೆ . ಕೆಲವೊಮ್ಮೆ ಪ್ರತ್ಯುತ್ತರ ಬರದಿದ್ದಾಗ ಪುನಃ ಬರೆಯುವ ಆಸಕ್ತಿ ಹೊರಟು ಹೋಗುತ್ತದೆ .ನಾನೂ ಇದೇ ರೀತಿ ಯೋಚಿಸಿ ,ಒಬ್ಬ ಸ್ನೇಹಿತರಿಗೆ ಈಗಾಗಲೇ ಪತ್ರ ಬರೆಯಲು ಪ್ರಾರಂಭಿಸಿರುವೆ. ಕನಿಷ್ಠ ೧೦ ಪುಟಗಳಾದರೂ ಬರೆಯಬೇಕೆಂದಿರುವೆ .ಯಾವಾಗ ಪೋಸ್ಟ್ ಮಾಡ್ತೀನಿ ಇನ್ನೂ ಗೊತ್ತಿಲ್ಲ….:)Thanks..avadhi…:)

  ಪ್ರತಿಕ್ರಿಯೆ
 3. keshav kulkarni

  ಕಮ್ಮೀ ಅಂದರೂ ಒಂದು ಧಶಕದ ಮೇಲಾಯಿತು ಮೇಲು ಮಾಡಿ. ಏನಿದ್ದರೂ ಫೋನು, ಎಸ್ಸೆಮ್ಮೆಸ್ಸು, ಇ-ಮೇಲು, ಚಾಟು, ಫೇಸ್‍ಬುಕ್ಕು, ಸ್ಕೈಪು…ಇತ್ಯಾದಿ ಇತ್ಯಾದಿ

  ಪ್ರತಿಕ್ರಿಯೆ
 4. manohar bs

  ಗುರುಗಳೇ ಹಿಂಗೆ ಇರೋದೆಲ್ಲ ಇದ್ದ್ದಿದ್ದಂಗೆ ಬರೆದು ಮೊದಲೇ ಬದುಕು ಯಾಂತ್ರಿಕವಾಗಿ ಹೋಗಿದೆ ಅಂತ ಕೊರಗುವ ನಮಗೆ ಮತ್ತಷ್ಟು ಕೊರಗುವಹಾಗೆ ಮಾಡುತ್ತಿರ, ಅದರೂ ನಿಮ್ಮ ಲೇಖನ ಓದಿ ಕೊರಗುವುದರಲ್ಲೂ ಮಜವಿದೆ

  ಪ್ರತಿಕ್ರಿಯೆ
 5. meghana.m.

  ಸರ್,ನಾನು ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೇನೆ.ನಿಮ್ಮ ಲೇಖನ ಓದಿದ ತಕ್ಷಣ ದೂರದೂರಿನಲ್ಲಿರುವ ಅಜ್ಜ,ಅಜ್ಜಿಗೆ ಪುಟಾಣಿ ಪತ್ರವೊಂದನ್ನು ಬರೆದು ಕಳಿಸಿದೆ.ಅರಳುವ ಅವರ ಮುಖಗಳನ್ನು ಊಹಿಸಿಕೊಂಡು ಖುಷಿಯಾಗುತ್ತಿದೆ.ವಂದನೆಗಳು.
  ಮೇಘನಾ.

  ಪ್ರತಿಕ್ರಿಯೆ
 6. ಸದಾಶಿವ ವೈದ್ಯ

  ಚೆನ್ನಾಗಿದೆ. ಈ ಲೇಖನ ಓದುತ್ತಿದ್ದ ಹಾಗೆನೇ ಹಿಂದೊಮ್ಮೆ ಓದಿದ ಆಪ್ತ ಲೇಖನವೊಂದು ನೆನಪಾಯ್ತು. ಪತ್ರಗಳ ಹಾಗೂ ಅಂಚೆಯ ಬಗ್ಗೆ ತುಂಬ ಪ್ರೀತಿಯಿಂದ ಬರೆದಿದ್ದಾರೆ ವೆಂಕಟರಮಣ ಭಟ್ಟರು ಓದಿ: http://roopantara.blogspot.in/2011/01/blog-post_29.html. ಈಗ್ಯಾಕೆ ಬ್ಲಾಗಿಸುತ್ತಿಲ್ಲವೋ ಗೊತ್ತಿಲ್ಲ.
  ~ಸದಾಶಿವ ವೈದ್ಯ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: