ಕಾಯ್ಕಿಣಿ ನೆಪದಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸೋಣ ಬನ್ನಿ

ಜಯಂತ ಕಾಯ್ಕಿಣಿ ತಮ್ಮ ಇಷ್ಟು ವರ್ಷಗಳ ವಿಶೇಷಾಂಕ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ವಿಶೇಷಾಂಕ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲೂ ತನ್ನದೇ ಒಂದು ಗುರುತು, ಹಸಿರು ನೆನಪು ಮೂಡಿಸಿರುತ್ತದೆ.
ನೀವು ಓದಿದ, ಮೆಚ್ಚಿದ , ಇಲ್ಲವೇ ಬೇಜಾರು ಮಾಡಿಕೊಂಡ, ಇಲ್ಲಾ ಹೀಗಿರಲಿ ಎಂದುಕೊಂಡ ವಿಶೇಷಾಂಕಗಳ ಬಗ್ಗೆ ಇಲ್ಲಿ ಹಂಚಿಕೊಳ್ಳಿ. ಜಯಂತ ಕಾಯ್ಕಿಣಿ ಅವರ ಈ ಬರಹವನ್ನೂ ನೆಪವಾಗಿಟ್ಟುಕೊಂಡು ಮತ್ತೊಂದು ಸುತ್ತಿನ ಚರ್ಚೆ ನಡೆಸೋಣ ಬನ್ನಿ-
ಕೃಪೆ: ‘ಅಪಾರ’ ಬ್ಲಾಗ್
‘ವಿಶೇಷಾಂಕ’ – ಎಂಬ ಶಬ್ದ ಉಚ್ಚರಿಸುವಾಗಲೇ ಅದರಲ್ಲೊಂದು ಹಬ್ಬದ ಸಡಗರ ತಂತಾನೇ ಹೊಮ್ಮುತ್ತದಲ್ಲ – ಅದರಲ್ಲೇ ಒಂದು ಸಾಮಾಜಿಕ, ಸಾಂಸ್ಕೃತಿಕ ಲಕ್ಷಣವಿದೆ. ಹಬ್ಬ, ಉತ್ಸವ ಎನ್ನುವುದೊಂದು ಸಾಮೂಹಿಕ, ಸಾಮುದಾಯಿಕ ಚಟುವಟಿಕೆಯಾಗಿದ್ದರೂ, ಅದರ ಸರಭರದ ನಡುವೆಯೇ ಖಾಸಗಿಯಾದ ಪುಟವನ್ನೊಂದು ತೆರೆದು ಓದುವ ಅಪ್ಪಟ ಸ್ವಂತ ಆವರಣ ವಿಶೇಷಾಂಕದ್ದು.
ದೀಪಾವಳಿ/ಯುಗಾದಿ ಅಂದರೆ ಬರೇ ವರುಷಕ್ಕೊಂದೇ ಬಾರಿ ಲಭಿಸುವ ಹೊಸ ಬಟ್ಟೆ, ನಕ್ಷತ್ರ ಕಡ್ಡಿ ಪೆಟ್ಟಿಗೆ, ಸಿಹಿತಿಂಡಿಯಲ್ಲ. ಬದಲಿಗೆ ಗರಿಗರಿಯಾಗಿ ಬಂದ ವಿಶೇಷಾಂಕ ಕೂಡ ಹೌದು. ಮನೆಯಲ್ಲಿ ಅದನ್ನು ಮೊದಲು ತೆರೆದು ಓದುವವನೇ ಮಹಾ ಭಾಗ್ಯಶಾಲಿ. ಇತರರ ಕಣ್ತಪ್ಪಿಸಿ ಅದನ್ನು ಅಡಗಿಸಿಡುವವನು ಮಹಾದುಷ್ಟ. ‘ಈಗ ತಂದು ಕೊಟ್ಟೆ’ ಎಂದು ತೆಗೆದುಕೊಂಡು ಹೋಗಿ ನಾಪತ್ತೆಯಾದ ನೆರೆಮನೆಯ ಅಕ್ಕ ಮಹಾ ದಗಾಖೋರಳು. ‘ಜನಪ್ರಗತಿ’, ‘ಕರ್ಮವೀರ’, ‘ಗೋಕುಲ’, ಪ್ರಜಾವಾಣಿ’, ‘ಉದಯವಾಣಿ’, ‘ಕನ್ನಡ ಪ್ರಭ’, ‘ವಿಜಯ ಕರ್ನಾಟಕ’, ‘ಸುಧಾ’, ‘ತರಂಗ’, ‘ಕಸ್ತೂರಿ’ ಎಷ್ಟೆಲ್ಲ ವಿಶೇಷಾಂಕಗಳು ಎಷ್ಟೋ ದಶಕಗಳಿಂದ ಅಗಣಿತ ಕನ್ನಡ ಮನೆಗಳಲ್ಲಿ ಹಬ್ಬಗಳನ್ನು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ಆಚರಣೆಗಳನ್ನಾಗಿಸುತ್ತ ಬಂದಿವೆ.
‘ಈ ಸಲ ನಿಮ್ಮ ಮನೆಯಲ್ಲಿ ಯಾವುದು ತಗೊತೀರಿ? ನಾವು ಇದನ್ನು ತಗೋತೇವೆ ’ ಎಂಬ ಮಾತು, ವೆಹಿಕಲ್ ಬಗೆಗಿನದಲ್ಲ, ಫ್ರಿಜ್, ಟೀವಿ ಬಗೆಗಿನದಲ್ಲ, ವಿಶೇಷಾಂಕಗಳ ಕುರಿತಾದದ್ದು. ಕನ್ನಡದಲ್ಲಂತೂ ಸಾಹಿತ್ಯ, ಕತೆ, ರಂಗಭೂಮಿ, ಸಾಮಾಜಿಕ ವಿದ್ಯಮಾನಗಳ ವಾರ್ಷಿಕ ಖಾನೆಸುಮಾರಿಯಂತೆ ವಿಶೇಷಾಂಕಗಳು ರೂಪುಗೊಂಡು ಬಂದಿವೆ. ಲಂಕೇಶ್, ಅನುಪಮಾ ನಿರಂಜನ, ಬಸವರಾಜ ಕಟ್ಟೀಮನಿ… ಇವರೆಲ್ಲರ ಹೆಸರುಗಳನ್ನು ಮೊದಲು ಕಂಡಿದ್ದು ವಿಶೇಷಾಂಕಗಳಲ್ಲೆ. ಬಿಸ್ಮಿಲ್ಲಾ ಖಾನ್, ಸತ್ಯಜಿತ್ ರೇ, ಪು.ತಿ.ನ, ಶಿವರಾಮ ಕಾರಂತರಂಥ ಮಹನೀಯರ ಅಪರೂಪದ ಸಂದರ್ಶನಗಳನ್ನು ಅವರ ಮಾತಿನ ವಿವಿಧ ಭಂಗಿಗಳ ಭಾವಚಿತ್ರಗಳೊಂದಿಗೆ ಓದಿದ್ದ್ದು ವಿಶೇಷಾಂಕಗಳಲ್ಲಿ. ದೇವನೂರರ ‘ಒಡಲಾಳ’, ತೇಜಸ್ವಿಯವರ ‘ನಿಗೂಢ ಮನುಷ್ಯರು’, ಭಾರತೀಸುತರ ‘ಎಡಕಲ್ಲು ಗುಡ್ಡದ ಮೇಲೆ’, ಚಂದ್ರಶೇಖರ ಪಾಟೀಲರ ‘ಗುರ್ತಿನವರು’ – ಸಿಕ್ಕಿದ್ದು ವಿಶೇಷಾಂಕಗಳಲ್ಲಿ.
ಆಯಾ ವರುಷದ ಸಾಹಿತ್ಯಿಕ ಸಂದರ್ಭಗಳ ಕುರಿತ ವಿಚಾರ ಮಂಥನಗಳು, ಸಂಗೀತ-ಕಲೆ ಇತ್ಯಾದಿಗಳ ಕುರಿತ ವಿಚಾರ ಮಂಥನಗಳು, ಸಂಗೀತ-ಕಲೆ ಇತ್ಯಾದಿಗಳ ಕುರಿತ ಆಸ್ವಾದಕ ಲೇಖನ ಮಾಲೆಗಳು, ಜತೆ ಹೊಸ ಚಿಗುರು-ಹಳೆ ಬೇರುಗಳ ಕತೆ, ಕವಿತೆಗಳು. ಕನ್ನಡ ನವ್ಯೋತ್ತರ ಪೀಳಿಗೆಯ ಬಹುತೇಕ ಕತೆಗಾರರ ಆರಂಭದ ಆಡುಂಬೊಲ – ಈ ವಿಶೇಷಾಂಕದ ಕಥಾಸ್ಪರ್ಧೆಗಳು. ಬೊಳುವಾರು, ಕುಂ.ವೀ, ಅಶೋಕ ಹೆಗಡೆ, ವಿವೇಕ ಶಾನಭಾಗ, ಮೊಗಳ್ಳಿ ಗಣೇಶ್, ಎಂ.ಎಸ್. ಶ್ರೀರಾಮ್, ಅಮರೇಶ ನುಗಡೋಣಿ, ಎಚ್. ನಾಗವೇಣಿ, ಕೃಷ್ಣಮೂರ್ತಿ ಹನೂರು, ಕಾಳೇಗೌಡ ನಾಗವಾರ, ಎಸ್. ದಿವಾಕರ್, ರಾಘವೇಂದ್ರ ಪಾಟೀಲ, ಮಿತ್ರಾ ವೆಂಕಟರಾಜ, ಶ್ರೀಧರ ಬಳಗಾರ ಮುಂತಾದ ಪ್ರಚಲಿತ ಲೇಖಕರೆಲ್ಲರೂ ಒಂದಲ್ಲಾ ಒಂದು ಹಂತಲ್ಲಿ ವಿಶೇಷಾಂಕಗಳ ಕಥಾಸ್ಪರ್ಧೆಗಳ ವಿಜೇತರೇ.
ಕಳೆದ ಮೂರ‍್ನಾಲ್ಕು ದಶಕಗಳ ಈ ವಿಶೇಷಾಂಕಗಳ ಸ್ಪರ್ಧೆಗಳ ಕಥೆಗಳನ್ನು ಸಂಕಲಿಸಿ, ತೀರ್ಪುಗಾರರ ಟಿಪ್ಪಣಿಗಳೊಂದಿಗೆ ಓದಿಕೊಂಡರೆ ಅದೊಂದು ನಮ್ಮ ಕಥನ ವಿನ್ಯಾಸದ ವಿಕಾಸದ ವಿಶಿಷ್ಟ ದಾಖಲೆಯಾದೀತು. ಮತ್ತು ವಿಶೇಷಾಂಕಗಳ ಸ್ಪರ್ಧೆಗಳೇ ಹೇಗೆ ಕನ್ನಡದ ಕಳೆದೆರಡು ದಶಕಗಳ ಕಥನ ಕಲೆಯನ್ನು ನಿರ್ದೇಶಿಸುತ್ತ ಬಂದಿವೆ ಎಂಬುದು ಮನವರಿಕೆಯಾದೀತು. ಸಾಕ್ಷಿ, ಸಂಕ್ರಮಣ, ಕವಿತಾ, ರುಜುವಾತು, ಶೂದ್ರ, ಸಂವಾದ, ಸಂಚಯ, ಸೃಜನವೇದಿಯಂಥ ಸಾಹಿತ್ಯಿಕ ಪತ್ರಿಕೆಗಳು ರೂಪಿಸಿದ ಸಂವೇದನೆಗಳಿಗೆ ಒಂದು ಬಗೆಯ ಸಾರ್ವಜನಿಕ ಅಧಿಕೃತತೆಯನ್ನು ಕೊಡುವ ಪಾತ್ರವನ್ನು ಕನ್ನಡ ವಿಶೇಷಾಂಕಗಳು ನಿರ್ವಹಿಸಿದವು. ಜತೆಗೆ ಚಿತ್ರಲೇಖನ, ಹವ್ಯಾಸಿ ಛಾಯಾಗ್ರಹಣ, ಪ್ರವಾಸ ಲೇಖನಗಳನ್ನು ಇವು ಪೋಷಿಸಿದವು.
ನಾನು ಮುಂಬಯಿಯಲ್ಲಿದ್ದಾಗ ಅಲ್ಲಿನ ಮರಾಠಿ ದೀಪಾವಳಿ/ಯುಗಾದಿ ವಿಶೇಷಾಂಕಗಳ ಮೋಹಿತನಾಗಿದ್ದೆ. ನಮ್ಮ ಕನ್ನಡದ ವಿಶೇಷಾಂಕಗಳು ಅಬ್ಬಬ್ಬ ಎಂದರೆ ನಾಲ್ಕು ಅಥವಾ ಐದು ಎನ್ನೋಣ. ಮರಾಠಿಯಲ್ಲಿ ಎಷ್ಟು ವಿಶೇಷಾಂಕಗಳು ಇದ್ದಿರಬಹುದು ಊಹಿಸಿ. ಮುನ್ನೂರು ! ಹೌದು ಮುನ್ನೂರಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಮರಾಠಿಯಲ್ಲಿ ದೀಪಾವಳಿ ಸಂಚಿಕೆಗಳು ಎಷ್ಟೋ ವರುಷಗಳಿಂದ ಚಾಲ್ತಿಯಲ್ಲಿವೆ. ಮನೋಹರ್, ಮೌಝ್, ಅಕ್ಷರ್, ಕಿರ್ಲೋಸ್ಕರ್, ಮೇನಕಾ, ಆವಾಝ್, ಕಾಲನಿರ್ಣಯ, ಲಲಿತ, ಹಂಸ, ವಸಂತ, ಸ್ತ್ರೀ, ಅನುರಾಧಾ, ದೀಪೋತ್ಸವ, ಮೋಹಿನಿ…ಇತ್ಯಾದಿ ನೂರಾರು ಆಕರ್ಷಕ ಮೋಹಕ ಸಂಚಿಕೆಗಳು. ಅಂದರೆ ಎಷ್ಟೆಲ್ಲ ಲೇಖಕರಿಗೆ, ಎಷ್ಟೊಂದು ಚಿತ್ರಕಲೆಗಾರರಿಗೆ ಅವಕಾಶ ! ಅವರು ಜನೆವರಿಯಿಂದಲೇ ಮುಂಗಡ ಚೆಕ್‌ಗಳನ್ನು ಕೊಟ್ಟು ಲೇಖಕರನ್ನು ಕಟ್ಟಿ ಹಾಕುತ್ತಾರೆ. ಖ್ಯಾತ ಪತ್ರಿಕೆಗಳ ವಿಶೇಷಾಂಕಗಳು ಒಂದೆಡೆಯಾದರೆ, ಕೇವಲ ದೀಪಾವಳಿ/ಯುಗಾದಿಗೆಂದೇ ವಿಶೇಷಾಂಕ ತರುವ ಪ್ರಕಾಶನ ಸಂಸ್ಥೆಗಳು ನೂರಾರಿವೆ. ಅಂದರೆ ಪುಸ್ತಕ ಪ್ರಕಾಶನ ಸಂಸ್ಥೆಗಳು ಸಹ ವರುಷಕ್ಕೊಂದು ಇಂಥ ಸಂಚಿಕೆಯನ್ನು ರೂಪಿಸುತ್ತವೆ. ಜತೆಗೆ ಹತ್ತಾರು ಗೆಳೆಯರು ಸೇರಿ ಪಾಲುದಾರರಾಗಿ ಕೂಡಿ ವಿಶೇಷಾಂಕವನ್ನು ಹೊರತರುತ್ತಾರೆ. ಮರಾಠಿಯಲ್ಲಿ ಓದುವ ಸಂಸ್ಕೃತಿಯೂ ಚೇತೋಹಾರಿಯಾಗಿದೆ. ಪ್ರತಿ ಗಲ್ಲಿಗಳಲ್ಲಿ ಪುಟ್ಟ ಪುಟ್ಟ ಖಾಸಗಿ ಗ್ರಂಥಾಲಯಗಳಿರುವಂತೆ, ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಫ್ಲಾಟ್‌ಗಳೆಲ್ಲವೂ ವಂತಿಗೆ ಹಾಕಿ ಒಟ್ಟಾಗಿ ನೂರಾರು ವಿಶೇಷಾಂಕಗಳನ್ನು ಕೊಂಡು ಆಮೇಲೆ ವರುಷವಿಡೀ ಹಂಚಿಕೊಂಡು ಓದುತ್ತವೆ. ಖ್ಯಾತನಾಮ ಲೇಖಕರಿಗಂತೂ ಈ ವಿಶೇಷಾಂಕಗಳಿಗೆ ಬರೆದುಕೊಡುವುದರಲ್ಲೇ ಕೈ ಬಿದ್ದು ಹೋಗುತ್ತದೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಈ ದೀಪಾವಳಿ ಸಂಚಿಕೆಗಳ ಹೂರಣ, ಓರಣಗಳಿಗಾಗಿಯೇ ಕೆಲವು ಸಂಸ್ಥೆಗಳು ಸ್ಪರ್ಧೆ ನಡೆಸುತ್ತವೆ. ಅವುಗಳ ಮುಖಪುಟ ವಿನ್ಯಾಸಗಳಿಗೂ ಬಹುಮಾನಗಳಿವೆ. ಮೌಝ್, ಅಕ್ಷರ್, ಮನೋಹರ್ ಇಂಥ ವಿಶೇಷಾಂಕಗಳನ್ನು ತಿರುವಿ ಹಾಕುವುದೇ ಒಂದು ಹಬ್ಬ. ನಾನು ಮುಂಬಯಿಯಲ್ಲಿದ್ದಾಗಲೇ ಸಂಗ್ರಹಿಸಿದ್ದ ಇಂಥ ಕೆಲವು ಸಂಚಿಕೆಗಳ ವಿನ್ಯಾಸವೇ ನನ್ನ ‘ಭಾವನಾ’ ಪತ್ರಿಕೆಯ ರೂಪ ರೇಖೆಗೆ ಸ್ಫೂರ್ತಿಯಾಗಿತ್ತು. ಕವಿತೆಗಳನ್ನು ಬಿಡಿಬಿಡಿಯಾಗಿ ಅನಾಥ ಫಿಲ್ಲರ್‌ಗಳಂತೆ ಬಳಸದೆ ಒಟ್ಟಿಗೇ ಪರಸ್ಪರ ಸಹಯೋಗದಲ್ಲಿ ಬಳಸುವುದನ್ನು ಮರಾಠಿ ಸಂಚಿಕೆಗಳಲ್ಲೇ ನಾನು ಕಂಡಿದ್ದೆ.
ಮರಾಠಿಯಷ್ಟೇ ಪ್ರಭಾವಿಯಾದ ವಿಶೇಷಾಂಕಗಳ ಸಂಸ್ಕೃತಿ ಬಂಗಾಲಿಯಲ್ಲೂ ನಡೆದುಕೊಂಡು ಬಂದಿದೆ. ಅಲ್ಲಿ ಅದು ದುರ್ಗಾಪೂಜಾ ಅಥವಾ ನವರಾತ್ರಿ ವಿಶೇಷಾಂಕವೆಂದು ಪ್ರಸಿದ್ಧ. ಮುನ್ನೂರಕ್ಕೂ ಹೆಚ್ಚು ಅಂಕಗಳು ಅಲ್ಲಿ ಜನಾನುರಾಗ ಗಳಿಸಿವೆ. ಅಲ್ಲಿ ಕಾದಂಬರಿಗಳ ಆಕರ್ಷಣೆ ಹೆಚ್ಚು. ಹೆಚ್ಚು ಕಡಿಮೆ ಪ್ರತಿಯೊಂದು ವಿಶೇಷಾಂಕದಲ್ಲೂ ಕಾದಂಬರಿಯೊಂದು ಅಡಕಗೊಂಡಿರುತ್ತದೆ. ಬಂಗಾಲಿ ಮತ್ತು ಮರಾಠೀ ವಿಶೇಷಾಂಕಗಳ ಮುಖ್ಯ ಆಕರ್ಷಣೆ ಅವುಗಳ ರೇಖಾಚಿತ್ರ ವಿನ್ಯಾಸ. ‘ರೇಖಕ’ರ ಅದ್ಭುತ ಪರಂಪರೆಯನ್ನೇ ಹೊಂದಿರುವ ಬಂಗಾಲಿ ವಿಶೇಷಾಂಕಗಳಲ್ಲಿ ಕಲಕತ್ತೆಯ ನಾಮಾಂಕಿತರ ಸ್ವೋಪಜ್ಞ ಕೊಡುಗೆಗಳಿವೆ. ಸತ್ಯಜಿತ್ ರೇ ಅವರು ‘ಸಂದೇಶ್’ ಪತ್ರಿಕೆಗೂ ಅದರ ವಿಶೇಷಾಂಕಗಳಿಗೂ ರಚಿಸಿದ ರೇಖಾಚಿತ್ರಗಳನ್ನು ಅಭಿಮಾನಿಗಳು ಈಗಲೂ ಕಾದಿರಿಸಿದ್ದಾರೆ. ಅದೇ ಥರ ಮರಾಠಿಯಲ್ಲಿ ಅನಿಲ್ ಆವಚಟ್ ಅವರ ವಿಲಕ್ಷಣ ರೇಖಾಚಿತ್ರಗಳಿಗಾಗಿ, ವಿನ್ಯಾಸಗಳಿಗಾಗಿ ಓದುಗ ವಿಶೇಷಾಂಕಗಳ ಪುಟ ತಿರುವುತ್ತಿರುತ್ತಾನೆ. ಒಂದು ಮರಾಠೀ ಅಥವಾ ಬಂಗಾಲೀ ಕುಟುಂಬ ವರ ಪರೀಕ್ಷೆ ಅಥವಾ ವಧು ಪರೀಕ್ಷೆಯ ಭೇಟಿಯಲ್ಲಿ ಪರಸ್ಪರ ಮನೆತನಗಳ ಅಭಿರುಚಿಯ ತಾಳೆ ನೋಡಲು, ಕಪಾಟಿನಲ್ಲಿರುವ ಪುಸ್ತಕಗಳ ಶೀರ್ಷಿಕೆಗಳ ಜತೆ ಟೀಪಾಯ್ ಮೇಲಿರಿಸಿದ ಚಾಲ್ತೀ ದೀಪಾವಳಿ/ಯುಗಾದಿ ವಿಶೇಷಾಂಕಗಳನ್ನೂ ವಿಶೇಷ ಕಣ್ಣುಗಳಿಂದ ಗಮನಿಸಿದರೆ ಖಂಡಿತ ಆಶ್ಚರ್ಯವಿಲ್ಲ.
ಈ ನಿಟ್ಟಿನಲ್ಲಿ ಕನ್ನಡದಲ್ಲಿ ವಿಶೇಷಾಂಕಗಳ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ಅನಿವಾರ್ಯತೆ ಈಗ ಉಂಟಾಗಿದೆ ಅನಿಸುತ್ತಿದೆ. ತುಂಬ ವಾಡಿಕೆಯಾಗಿ ಹೋಗಿರುವ ‘ಸಿಲೆಬಸ್’ ಒಂದರಲ್ಲಿ ವಿಶೇಷಾಂಕಗಳು ಸಿಕ್ಕು ಬಿದ್ದಿವೆ. ಎಂಟು ಕತೆಗಳು, ಹತ್ತು ಕವಿತೆಗಳು, ವರ್ಷ ಭವಿಷ್ಯ, ‘ಮೊದಲ ಬಾರಿ ಮಾವನ ಮನೆಗೆ ಹೋದಾಗ’ ಇಂಥ ತೀರ ಗೊಡ್ಡು ವಿಷಯಗಳ ‘ಓದುಗರ ಅಂಕಣ’ಗಳು, ಕಣ್ಣಿಗೆ ಹಬ್ಬವಾದರೂ ಮನಸ್ಸಿಗೆ ಗ್ರಾಸ ಒದಗಿಸದ ಚಿತ್ರಲೇಖನಗಳು.. ಹೀಗೆ ತುಂಬ ಪ್ರೆಡಿಕ್ಟೆಬಲ್ ಆದ ಸಂಚಿಕೆಗಳ ದಿನಾಂಕದಲ್ಲಿ ಮಾತ್ರ ಬದಲಾವಣೆ ಆಗಿದೆ ಅನಿಸುತ್ತದೆ ಹೊರತು, ಒಬ್ಬ ಓದುಗನನ್ನು ಚಿಂತನಶೀಲನಾಗಿ ಮತ್ತು ಅಷ್ಟೇ ರಂಜನೀಯವಾಗಿ ಕೆಣಕಬಲ್ಲ, ಸೆಳೆಯಬಲ್ಲ, ಸ್ಪಂದನಶೀಲ ಹೊಸತನದ ಹಾಜರಿ ಇಲ್ಲ. ತಾಂತ್ರಿಕತೆ, ವರ್ಣವಿನ್ಯಾಸ, ಫೋಟೋಶಾಪ್, ಗ್ರಾಫಿಕ್ಸ್ ಇತ್ಯಾದಿಗಳು ಎಷ್ಟೋ ಮುಂದುವರೆದಿದ್ದರೂ, ಸಂಚಿಕೆಯ ಹಿಂದೆ ಕೆಲಸ ಮಾಡಿರುವ ಮನಸ್ಸು ಒಂದು ಬಗೆಯ ಕುರುಡು ವ್ಯಾಮೋಹದಲ್ಲಿ ಸಾಹಸಕ್ಕೆ ತೊಡಗದೇ ಹೋದರೆ ಇಂದಿನ ನಿತ್ಯದ ಸಾವಿರ ಸಂಚಾರಿಭಾವಗಳಿಗೆ ಸ್ಪಂದಿಸಬಲ್ಲ ಹೊಸ ಅಭಿವ್ಯಕ್ತಿ ರೂಪಗಳಿಗೆ ಹವಣಿಸದೆ ಹೋದರೆ, ಸಂವೇದನೆಯ ಪರಿಷ್ಕಾರದ ವಿಶೇಷ ಅವಕಾಶವೊಂದನ್ನು ಸುಮ್ಮನೆ ಪೋಲು ಮಾಡಿಕೊಂಡಂತೆ.
ಮುಖ್ಯಧಾರೆಯ ದಿನಪತ್ರಿಕೆಗಳ ವಾರ್ಷಿಕ ವಾಡಿಕೆಯಾಗಿಯೇ ಮುಂದುವರೆದಿರುವ ಈ ಸಂಸ್ಕೃತಿ ತುಸು ಖಾಸಗೀ ಬಳಗಗಳಲ್ಲಿ ಕವಲೊಡೆದರೆ, ಸಣ್ಣ ಸಣ್ಣ ಗೆಳೆಯರ ಆಪ್ತ ಪ್ರಕಾಶನ ಕೂಟಗಳ ಮೂಲಕ ಬೆಳೆದರೆ, ಒಂದು ಹೊಸ ಓದು ಸಂಸ್ಕೃತಿಯನ್ನು ಬೆಳೆಸಬಹುದಾಗಿದೆ. ವರುಷಕ್ಕೆ ಒಂದೇ ಸಂಚಿಕೆಯನ್ನು ರೂಪಿಸುವುದು ಅಂಥ ಕಷ್ಟದ ಸಂಗತಿ ಅಲ್ಲ. ಸಪ್ನಾ, ಅಂಕಿತ, ಅತ್ರಿ, ಗೀತಾ, ಸಾಹಿತ್ಯ ಭಂಡಾರ, ಅಭಿನವ, ಸುಮುಖ, ಮನೋಹರ ಇತ್ಯಾದಿ ಪ್ರಕಾಶನ ಸಂಸ್ಥೆಗಳು ಇಂಥದೊಂದು ಉಪಕ್ರಮ ಆರಂಭಿಸಿದರೆ ಹೊಸ ಬಗೆಯ ಅಲೆಯೊಂದು ಸಾಧ್ಯವಾಗಬಹುದು.
ಬಾಲ್ಯದ ದಿನಗಳನ್ನು ನೆನೆದರೆ ಈ ವಿಶೇಷಾಂಕಗಳು ನಮ್ಮ ಮನೆಯಲ್ಲಿ ನಿಯಮಿತವಾಗಿ ಪ್ರತಿ ವರ್ಷ ಎಬ್ಬಿಸುತ್ತಿದ್ದ ಕೋಲಾಹಲ ನೆನಪಾಗುತ್ತದೆ. ನನ್ನ ತಂದೆಯವರ ಲೇಖನಗಳು ‘ಜನಪ್ರಗತಿ’, ‘ಗೋಕುಲ’, ‘ಕರ್ಮವೀರ’, ‘ಪ್ರಜಾವಾಣಿ’, ‘ರಾಯಭಾರಿ’ ಇತ್ಯಾದಿ ಅಂಕಗಳಲ್ಲಿ ಪ್ರಕಟವಾದಾಗೆಲ್ಲ ಆ ಪತ್ರಿಕೆಯವರು ಗೌರವ ಪ್ರತಿ ಅಂಚೆಯಲ್ಲಿ ಕಳಿಸುವುದಿತ್ತು. ನನ್ನ ತಂದೆ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದುದರಿಂದ ಅಂಚೆ ಸೀದ ಅಲ್ಲಿಗೇ ಹೋಗುತ್ತಿತ್ತು. ಅಲ್ಲಿಂದ ಈ ವಿಶೇಷಾಂಕಗಳು ಮನೆಗೇ ಬರುತ್ತಿರಲಿಲ್ಲ. ಇತರ ಶಿಕ್ಷಕರು ಅದನ್ನು ಓದಲು ಒಯ್ದು ಬಿಡುತ್ತಿದ್ದರು. ಮನೆಯಲ್ಲಿ ರಂಪವೋ ರಂಪ. ಎರಡು ಮೂರು ವಾರದ ತನಕ ಅಮ್ಮ ಅಪ್ಪರ ನಡುವಿನ ಈ ರಂಪ ನಡೆಯುತ್ತಿತ್ತು. ನಂತರ ಕೆಲವು ಮನೆಗಳಿಗೆ ಅಮ್ಮ ನನ್ನನ್ನು ‘ದೀಪಾವಳಿ ವಿಶೇಷಾಂಕ ಕೊಡಬೇಕಂತೆ’-ಎಂದು ಸಂಭಾಷಣೆ ಹೇಳಿಕೊಟ್ಟು ಕಳಿಸಿದ್ದೂ ಇದೆ. ಒಮ್ಮೆ ಯಾರದೋ ಮನೆಗೆ ‘ಚಾ ಪಾರ್ಟಿ’ಗೆ ಹೋದಾಗ ಅವರ ಮನೆಯ ದೊಡ್ಡ ರೇಡಿಯೋದ ಬದಿ ಇದ್ದ ದೀಪಾವಳಿ ಸಂಚಿಕೆಯನ್ನು ತೋರಿಸುತ್ತ ಅಮ್ಮ ‘ಅದು ಖಂಡಿತ ನಮ್ಮದು’.. ಎಂದು ಪಿಸುಗುಟ್ಟಿದ್ದೂ ಇದೆ.
ನನ್ನ ಓದಿನ ರುಚಿ ಹೆಚ್ಚಾಗಿದ್ದೂ ವಿಶೇಷಾಂಕಗಳಿಂದಲೇ. ಗಂಗಾಧರ ಚಿತ್ತಾಲರ ‘ಸಂಪರ್ಕ’, ನಿಸಾರ್ ಅಹಮದರ್ ‘ಕ್ಯಾಕ್ಟಸ್’, ಕೆ.ಎಸ್.ನ ರ ‘ಸಾಕುಮಗ’ ಕವಿತೆಗಳನ್ನು ನಾನು ಮೊದಲ ಬಾರಿಗೆ ಓದಿದ ಜಾಗ, ಬೆಳಕು, ವಾತಾವರಣದ ಗಂಧ, ಒದಗಿದ್ದ ಮೈಮರವು – ಈಗಲೂ ತೀವ್ರವಾಗಿ ಆವರಿಸಿಕೊಳ್ಳುತ್ತವೆ. ಈ ವಿಶೇಷಾಂಕಗಳ ಸ್ಪರ್ಧೆಗಳಿಗೆ ಕಥೆಗಳನ್ನು ಕಳಿಸಿದ ನಂತರ, ಮೂರ‍್ನಾಲ್ಕು ತಿಂಗಳು ಸುಮ್ಮನೆ ಫಲಿತಾಂಶಕ್ಕೆ ಕಾಯುವ ವಿಚಿತ್ರ ಖುಶಿಯೇ ಬೇರೆ. ನನ್ನ ‘ಇದ್ದಾಗ ಇದ್ಧಾಂಗ’ ಕಥೆಗೆ ಬಹುಮಾನ ಬಂದಾಗ, ನಾನೊಬ್ಬನೆ ಮುಂಬೈ ವಿ.ಟಿ.ಯ ಮಾರುತಿ ಲೇನ್‌ನ ಸಾಲ್ಯಾನ್‌ರ ವಿದ್ಯಾನಿಧಿ ಬುಕ್ ಡಿಪೋದಿಂದ ಸಂಚಿಕೆ ಕೊಂಡು ಕಂಪಿಸುವ ಕೈಗಳಲ್ಲಿ ತೆರೆಯುತ್ತ ಫೌಂಟನ್ನಿನಿಂದ ನಾರಿಮನ್ ಪಾಯಿಂಟ್ ತನಕ ನಡೆಯುತ್ತಲೇ ಓದಿಕೊಂಡೇ ಹೋದ ನೆನಪು ಅತ್ಯಂತ ಅಮೂಲ್ಯ. ನಂತರ ಒಂದು ಸಾರ್ವಜನಿಕ ಬೂಥ್‌ನಿಂದ ಚಿತ್ತಾಲರಿಗೆ, ಅರವಿಂದ ನಾಡಕರ್ಣಿ ಅವರಿಗೆ ಫೋನ್ ಮಾಡಿ ತಿಳಿಸಿದ್ದೆ. ನನ್ನ ‘ಕಣ್ಣಿಗೊಂದು ಕ್ಷಿತಿಜ’ ಕಥೆಗೆ ಬಹುಮಾನ ಬಂದಾಗ, ನನ್ನ ತಂದೆ ಕಣ್ಣಿನ ಆಪರೇಷನ್‌ಗೆಂದು ನಾನಾವಟಿಯಲ್ಲಿ ದಾಖಲಾಗಿದ್ದರು. ನಾನು ಸಂಚಿಕೆ ತರಲು ವಾರ್ಲೆ, ಸಾಂತಾಕ್ರೂಜ್, ಅಂಧೇರಿ ಸ್ಟೇಷನ್‌ಗಳಲ್ಲೆಲ್ಲ ಅಲೆದು ಅದು ಸಿಗದೆ ಖಿನ್ನನಾಗಿ ಬಂದಿದ್ದೆ. ಆಪರೇಷನ್‌ಗಿಂತ ಅದೇ ಮಹಾ ದೊಡ್ಡ ಸಂಗತಿಯಾಗಿತ್ತು ನನಗೆ !
ಯಾವ ಪ್ರತಿಸ್ಪಂದನವೂ ಇಲ್ಲದ ಒಂದು ಬಗೆಯ ಮುಕ್ತ ಮಂಬಯಿ ಆವರಣದಲ್ಲಿ ಬರೆಯುತ್ತಿದ್ದವನಿಗೆ ಈ ಬಹುಮಾನಗಳು ಕೊಟ್ಟ ಸ್ಥೈರ್ಯ ಅಂತಿಂಥದಲ್ಲ. ಸ್ಪರ್ಧೆಯ ಹಂತ ದಾಟಿದ ನಂತರ ವಿಶೇಷಾಂಕದ ಸಂಪಾದಕರುಗಳ ಕೋರಿಕೆಯೇ ನನ್ನ ಕತೆಗಾರಿಕೆಗೆ ದೊಡ್ಡ ಕುಮ್ಮಕ್ಕಾಯಿತು. ವರುಷಕ್ಕೆ ಒಂದೆರಡು ಕತೆಗಳು… ಐದು ವರುಷಕ್ಕೆ ಒಂದು ಸಂಕಲನ ! ಇದೇ ನನ್ನ ಬರವಣಿಗೆಯ ಗ್ರಾಫ್ ! ಯಾವ ಮಹಾ ಆಂತರಿಕ ಒತ್ತಡ ತಲ್ಲಣ ಗಿಲ್ಲಣ ಪ್ರೇರಣೆ ಇತ್ಯಾದಿ ನಾನು ಕೊಚ್ಚಿಕೊಳ್ಳುವ ಹಾಗೇ ಇಲ್ಲ. ನನ್ನ ಕಾಲು ಶತಮಾನದ ಕತೆಗಳೆಲ್ಲದರ ಕುಮ್ಮಕ್ಕು ಸಂಪಾದಕರ ಕೋರಿಕೆಯ ಪತ್ರ. ನೆನಪಿಸುವ ಟೆಲಿಗ್ರಾಂಗಳೇ ಆಗಿವೆ. ನನ್ನ ಈ ತನಕದ ಅರುವತ್ತು ಕಥೆಗಳಲ್ಲಿ ತೊಂಭತ್ತೊಂಬತ್ತು ಪ್ರತಿಶತ ಕಥೆಗಳು ಪ್ರಕಟಗೊಂಡಿರುವುದು ದೀಪಾವಳಿ/ಯುಗಾದಿ ವಿಶೇಷಾಂಕಗಳಲ್ಲಿಯೇ ! ಇದನ್ನು ಬರೆಯುತ್ತಿರುವಾಗ ಈ ಅಂಶ ಹಠಾತ್ತನೆ ಹೊಳೆದು ಮೈಜುಮ್ಮೆನ್ನುತ್ತದೆ. ಎಂ.ಬಿ. ಸಿಂಗ್, ವೈ.ಎನ್.ಕೆ., ಈಶ್ವರಯ್ಯ, ರಂಗನಾಥ ರಾವ್, ಲಂಕೇಶ್, ಸಂತೋಷ ಕುಮಾರ್ ಗುಲ್ವಾಡಿ, ಶರತ್ ಕಲ್ಕೋಡ್, ಗುರುರಾಜ್, ಡಾ. ವಿಜಯಮ್ಮ… ಇವರೆಲ್ಲರೂ ತಾವು ರೂಪಿಸಿದ ವಿಶೇಷಾಂಕಗಳ ಮೂಲಕ ನನ್ನ ಕತೆಗಾರಿಕೆಯನ್ನು ಪೋಷಿಸಿದ್ದಾರೆ. ದೀಪಾವಳಿ, ಯುಗಾದಿ ವಿಶೇಷಾಂಕಗಳಿಲ್ಲದೇ ಹೋಗಿದ್ದರೆ ನಾನು ಕತೆಗಳನ್ನು ಖಂಡಿತ ಬರೆಯುತ್ತಿರಲಿಲ್ಲ. ಈ ಪಾತಕದ ಡಿಸ್‌ಕ್ರೆಡಿಟ್ ಖಂಡಿತ ವಿಶೇಷಾಂಕಗಳದ್ದು.
ಹೀಗಾಗಿ ಈಗಲೂ ನನಗೆ ದೀಪಾವಳಿ ಅಥವಾ ಯುಗಾದಿ ಬಂತು ಅಂದರೆ ಅದು ಬರವಣಿಗೆಗೆ ಸಂಬಂಧಿಸಿದ ಒಂದು ಸೂಕ್ಷ್ಮ ಅನಿರ್ವಚನೀಯ ಸಂಭ್ರಮದ ಹಬ್ಬವೆಂದೇ ಅನಿಸುತ್ತದೆ. ಅಂಗಡಿಯವನು ಚಿಲ್ಲರೆ ವಾಪಾಸು ಮಾಡುವಷ್ಟರಲ್ಲೇ ಪರಿವಿಡಿಯ ಪುಟದಲ್ಲಿ ಫಕ್ಕೆಂದು ಮುಳುಗಿಬಿಡುವ ಆ ತಲ್ಲೀನತೆಯ ಸುಖಕ್ಕೆ ಸಾಟಿಯಾದದ್ದು ಇನ್ನೆಲ್ಲಿದೆ?
(ಈ ಸಲದ ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕಕ್ಕೆ ಬರೆದದ್ದು)

‍ಲೇಖಕರು avadhi

March 28, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

8 ಪ್ರತಿಕ್ರಿಯೆಗಳು

 1. ಶ್ರೀವತ್ಸ ಜೋಶಿ

  ವಿಶೇಷಾಂಕಗಳ ಬಗ್ಗೆ ಜಯಂತ್ ಬರೆಹ ವಿಶೇಷವಾಗಿ ಗಮನ ಸೆಳೆಯಿತು. ನಾನೂ ಬಾಲ್ಯದಿಂದಲೂ ’ವಿಶೇಷಾಂಕ’ಗಳಿಗೆ ಮರುಳಾದವನು. ಇಲ್ಲಿ ಅಮೆರಿಕದಲ್ಲಿರುವಾಗಲೂ ದೀಪಾವಳಿ/ಯುಗಾದಿ ಸಂದರ್ಭಗಳಲ್ಲಿ ಯಾರಾದರೂ ಭಾರತದಿಂದ ಬರುವವರಿದ್ದರೆ ಅವರ ಮೂಲಕ ವಿಶೇಷಾಂಕಗಳನ್ನು ತರಿಸಿ ಓದುತ್ತೇನೆ. ಒಮ್ಮೆ ಎಚ್.ಆರ್.ರಂಗನಾಥ್ (ಆಗ ಅವರು ಕನ್ನಡಪ್ರಭ ಸಂಪಾದಕರಾಗಿದ್ದರು) ವಾಷಿಂಗ್ಟನ್ ಡಿಸಿ.ಗೆ ಅಕ್ಟೋಬರ್ ತಿಂಗಳಲ್ಲಿ ಬರುವವರಿದ್ದಾರೆಂದು ತಿಳಿದು ಅವರ ಮೂಲಕ ಪ್ರಜಾವಾಣಿ ಮತ್ತು ಉದಯವಾಣಿ ವಿಶೇಷಾಂಕಗಳನ್ನು ತರಿಸಿದ್ದೆ!
  =======
  ಐದು ವರ್ಷಗಳ ಹಿಂದೆ ನನ್ನ ’ವಿಚಿತ್ರಾನ್ನ’ ಅಂಣದಲ್ಲಿ ಒಂದು ಬರೆಹವನ್ನು “ವಾಷಿಂಗ್ಟನ್ – ಲಾಸ್‌ಏಂಜಲೀಸ್ ವಿಮಾನಪ್ರಯಾಣದ ವೇಳೆ ಉದಯವಾಣಿ ದೀಪಾವಳಿ ವಿಶೇಷಾಂಕ ಓದು”ಅನ್ನೇ ಆಧಾರವಾಗಿಸಿ ಬರೆದಿದ್ದೆ. ಆಸಕ್ತರು ಅದನ್ನು ಇಲ್ಲಿ ಓದಬಹುದು.

  ಪ್ರತಿಕ್ರಿಯೆ
  • Sadananda Adiga

   vijayakarnataka visheshankagalu marketnalli siguvudilla. deepavali visheshanka bahala kastapattu thrisikonde aadare ugadiyadu sigalilla

   ಪ್ರತಿಕ್ರಿಯೆ
   • karunaa p s

    ಸಕಾಱರಿ ಸೇವೆಯಲ್ಲಿರುವ ನನ್ನ ಸ್ನೇಹಿತರೊಬ್ಬರ ಪ್ರಕಾರ ‘ವಿಜಯಕನಾಱಟಕ’ ಪತ್ರಿಕೆಯು ವಿಶೇಷಾಂಕ ತರುವುದು ಜಾಹೀರಾತುಗಳಿಗಾಗಿ ಮಾತ್ರ. ಓದುಗರಿಗಾಗಿ ಅಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ದೊಡ್ಡ ಮೊತ್ತದ ಸರ್ಕಾರಿ/ ಖಾಸಗಿ ಜಾಹೀರಾತುಗಳನ್ನು ಸಂಗ್ರಹಿಸಲು ವಿಶೇಷಾಂಕ ೊಂದು ನೆಪ. ಻ವರು ಕಳೆದ ಬಾರಿಯ ದೀಪಾವಳಿ ವಿಶೇಷಾಂಕವನ್ನು ನನಗೆ ನೀಡಿದಾಗ ನೀರಸವಾದ ಕೆಲವು ಕಾಟಾಚಾರದ ಲೇಖನಗಳನ್ನು ಜಾಹೀರಾತು ಮಧ್ಯದಲ್ಲಿ ತೂರಿಸಿ ಸಂಚಿಕೆಯನ್ನು ರೂಪಿಸಿದ್ದು ಸ್ಪಷ್ಟವಾಯಿತು. ಕರುಣಾ ಪಿ ಎಸ್

    ಪ್ರತಿಕ್ರಿಯೆ
 2. arundati

  ಇಂದಿಗೂ ಕೊಂಡು ಮಾತ್ರವಲ್ಲ ಕೇಳಿ ಪಡೆದು ಸಂಗ್ರಹಿಸಿದ
  ವಿಶೇಷಾಂಕಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾಗುತ್ತಿವೆ.
  ಮೆಚ್ಚಿನ ಲೇಖಕರ, ಕಥೆಗಾರರ ಕಾರಣಕ್ಕಾಗಿಯೇ ತಂದ ವಿಶೇಷಾಂಕಗಳು
  ತಮ್ಮ ವಿಶೇಷತೆಯನ್ನು ಉಳಿಸಿಕೊಂಡೆ ಮುಂದಿನವುಗಳ
  ಕೊಂಡಿಯಾಗುತ್ತಿವೆ.

  ಪ್ರತಿಕ್ರಿಯೆ
 3. ವೀರೇಶ್

  ಜಯಂತ್ ಹೇಳುವ ಹಾಗೆ ನಮ್ಮ ಕನ್ನಡ ವಿಶೇಷಾಂಕಗಳಲ್ಲಿ ಕ್ರಿಯಾಶೀಲತೆಯ ಅಗತ್ಯವಿದೆ. ಸಪ್ನಾ, ಅಂಕಿತದಂತ ಪ್ರಕಾಶನ ಸಂಸ್ಥೆಗಳು ಈ ದೆಸೆಯಲ್ಲಿ ಗಮನ ಹರಿಸಲಿ.

  ಪ್ರತಿಕ್ರಿಯೆ
 4. ಸಂಜು

  ನಮಸ್ತೇ ಸರ್ . .ಈ ಮಾಸಿಕ ಬೇಕಾದರೆ ಎನು ಮಾಡಬೇಕು ಎಕೆಂದರೆ ನಾನು ದೂರದ ಗದುಗಿನಲ್ಲಿರುತ್ತೆನೆ ಅದಕ್ಕೆ ದಯಮಾಡಿ ನನಗೊಂದಿ ಮೇಲ್ ಮಾಡ್ತಿರಾ . . .Plz . .!

  ಪ್ರತಿಕ್ರಿಯೆ
 5. d.s.ramaswamy

  ಹೊಸ ಬಟ್ಟೆ, ಸಿಹಿ ತಿಂಡಿಗಳ ಜೊತೆಜೊತೆಗೆ ಯುಗಾದಿ-ದೀಪಾವಳಿ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳು ಪ್ರಕಟಿಸುವ ವಿಶೇಷಾಂಕಗಳು ಹೊತ್ತು ತರುವ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳು ಬೌದ್ಧಿಕ ವಿಕಸನಕ್ಕೆ ನೆರವಾಗುತ್ತಲೇ ಬಂದಿವೆ. ಇಷ್ಟಪಟ್ಟು ಹೊಲಿಸಿಕೊಂಡ ಬಟ್ಟೆ ಹರಿದುಹೋಗಿದೆ. ಸಿಹಿತಿಂಡಿಗಳ ಸ್ವರೂಪವೂ, ವೈವಿಧ್ಯವೂ ಬದಲಾಗುತ್ತಲೇ ಇದೆ. ಆದರೆ ಅದೆಷ್ಟೋ ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡೇ ಬರುತ್ತಿರುವ ವಿಶೇಷಾಂಕಗಳ ಸಂಗ್ರಹ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಸಾಗಿದೆ. ಬೇಕಾದಾಗ, ಬೇಜಾರಾದಾಗ ತನ್ನ ತೆಕ್ಕೆಯೊಳಕ್ಕೆಳೆದುಕೊಂಡು ಸಾಂತ್ವನ ಹೇಳುತ್ತಲೇ ಇದೆ.
  ವಿಶೇಷಾಂಕಗಳ ಕತೆ, ಕವಿತೆಗಳ ಜೊತೆಜೊತೆಗೇ ಆಯಾ ಕಾಲದ ಬಹುಚರ್ಚಿತ ಸಂಗತಿಗಳ ಮೇಲಣ ಚಿಕ್ಕ ಚೊಕ್ಕ ಬರಹಗಳು ಆಯಾ ಕಾಲಮಾನದ ಸಾಂಸ್ಕೃತಿಕ ಸಂಗತಿಗಳ ಮಾಪಕಗಳಾಗಿ ಉಳಿದಿವೆ. ಯಾವತ್ತೂ ಕಾಡುತ್ತಲೇ ಇರುವ ಮನುಷ್ಯ ಸಹಜ ನಿರಂತರ ಕಟ್ಟುವಿಕೆಯ ಸಾಕ್ಷಿಯಾಗಿ ಭವಿಷ್ಯದ ಭಾಷ್ಯ ಬರೆಯತ್ತಲೇ ವರ್ತಮಾನದ ಪುರಾವೆಗಳಾಗಿವೆ.
  ವಿಶೇಷಾಂಕಗಳಿಗೆಂದೇ ನಡೆಸುವ ಕವಿತೆ-ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದವರೇ ಆಯಾ ಕಾಲದ ಸಾಹಿತ್ಯ ಸಂದರ್ಭದ ಮುಖವಾಣಿಗಳಾಗಿ ಬೆಳೆದು ನಿಂತ ಸಂಗತಿ ನೆನಪಿಸಿಕೊಂಡಾಗಲೆಲ್ಲ, ಈ ವಿಶೇಷ ಸಂಚಿಕೆಗಳು ನಮ್ಮ ಬರಹಗಾರರನ್ನು ಬೆಳೆಸಿದ, ಪೋಷಿಸಿದ ಬಗೆಗೆ ಹೆಮ್ಮೆ ಗೌರವ ಮೂಡುತ್ತದೆ.
  ಸಾಹಿತ್ಯ ಪತ್ರಿಕೆಗಳ ವಿಶೇಷಾಂಕಗಳ ಪರಿಮಳವಂತೂ ವಾಣಿಜ್ಯೋದ್ದೇಶದ ಬಹುಪ್ರಸಾರದ ಪತ್ರಿಕೆಗಳಿಗಿರುವ ಜಾಹೀರಾತಿನ ಬಲವಿಲ್ಲದೆಯೂ ಅವುಗಳೊಳಗಿರುವ ಸತ್ವಪೂರ್ಣ, ಸರ್ವಕಾಲೀಕ ಚರ್ಚೆಗಳ ಮೂಲಕ ನಮ್ಮೆಲ್ಲರ ಚಿಂತನೆಗಳಿಗೆ ಹೊಸದಿಕ್ಕು ದೆಶೆ ತೋರಿವೆ, ತಪ್ಪು ತಿಳುವಳಿಕೆಗಳನ್ನು ದೂರಾಗಿಸಿವೆ. ಸಿನಿಮಾ, ರಂಗಭೂಮಿ, ಶಿಕ್ಷಣ, ಭಾಷೆ, ತಂತ್ರಜ್ಞಾನ, ಫ್ಯಾಷನ್ ಹೀಗೆ ಹಲವು ಹತ್ತು ಸಂಗತಿಗಳ ಮೇಲಣ ಕೇಂದ್ರೀಕೃತ ಲೇಖನಗಳು ಹೊಸ ಚರ್ಚೆಗಳನ್ನು ಹುಟ್ಟುಹಾಕಿದಂತೆಯೇ ಅವನ್ನು ದಕ್ಕಿಸಿಕೊಳ್ಳುವ ಸುಲಭೋಪಾಯಗಳನ್ನೂ ಗ್ರಹಿಸಿವೆ, ಸಮರ್ಥಿಸಿವೆ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿಗೆ ನೂರು ತುಂಬಿದ ಸಂದರ್ಭವನ್ನು ವಿಶೇಷ ಸಂಚಿಕೆಯ ವಿಷಯವನ್ನಾಗಿ ಆಯ್ದು ಕೊಳ್ಳುವ ಸಂಪಾದಕ ಇತಿಹಾಸಕ್ಕೆ ತಲೆಬಾಗುತ್ತಲೇ ಭವಿಷ್ಯವನ್ನು ಕುರಿತಂತೆ ಆಲೋಚಿಸುತ್ತಲೂ ಇರುತ್ತಾನೆನ್ನುವುದಕ್ಕೆ ಪುರಾವೆಯೊದಗಿಸುತ್ತದೆ.
  ಋತು ವಿಶೇಷಗಳನ್ನು ಪ್ರಾಚೀನ ಅರ್ವಾಚೀನ ಕೃತಿಗಳಿಂದ ಸಂಗ್ರಹಿಸಿ ವರ್ತಮಾನದ ವಾತಾವರಣದೊಂದಿಗೆ ಬೆಸೆಯಿಸಿ ವರ್ಷವೊಂದರಲ್ಲಿ ಆರು ವಿಶೇಷಾಂಕಗಳನ್ನು ಪ್ರಕಟಿಸಿದ್ದ ಮಾಸಿಕವೊಂದರಲ್ಲಿ ಅಡಗಿಸಿದ್ದ ಮಾಹಿತಿಗಳು ಅಂತರ್ಜಾಲದಲ್ಲೂ ಲಭ್ಯವಿಲ್ಲದಿರುವುದನ್ನು ಗಮನಿಸಿದರೆ ಇಂಥ ಸಂಚಿಕೆಗಳನ್ನು ರೂಪಿಸುವ ಹಿಂದಿನ ಕಷ್ಟಗಳು ಅರಿವಾಗುತ್ತವೆ. ಆ ಸಂಚಿಕೆಗಳನ್ನು ರೂಪಿಸುವ ಹೃದಯ ಬುದ್ಧಿಗಳಿಗೆ ನಮೋ ಎನ್ನಲೇ ಬೇಕಾಗುತ್ತದೆ. ಏಕೆಂದರೆ ಮಾಹಿತಿ ಸಂಗ್ರಹಣೆಯ ಜೊತೆಜೊತೆಗೇ ಅವನ್ನು ವರ್ತಮಾನದ ಆವಶ್ಯಕತೆಗಳಿಗನುಗುಣವಾಗಿ ಬಳಸಿಕೊಳ್ಳುವ ಜಾಣ್ಮೆ ಮತ್ತು ಕುಶಲತೆ ಎರಡೂ ಇಲ್ಲಿ ಮುಖ್ಯವಾಗಿರುತ್ತವೆ.
  ಆದರೂ ಏಕವ್ಯಕ್ತಿ ಪ್ರದರ್ಶನದ ಸ್ಥಳೀಯ ಪತ್ರಿಕೆಗಳು, ಟ್ಯಾಬ್ಲಾಯ್ಡ್ ಪತ್ರಿಕೆಗಳು ಜಾಹೀರಾತಿನ ಆಸರೆ (ಆಸೆ)ಯಿಂದ ಅತಿರಂಜಿತ ಕಪೋಲಕಲ್ಪಿತ ಸಂಗತಿಗಳನ್ನು ಕುರಿತೇ ವಿಶೇಷ ಸಂಚಿಕೆಗಳನ್ನು ರೂಪಿಸ ಹೋಗಿ ಸೋತು ಕೈ ಚೆಲ್ಲಿವೆ. ಅಂತೆಯೇ ವಿಶೇಷಾಂಕಗಳ ಪರಂಪರೆಗಿರುವ ಚರಿತ್ರೆಗೂ ಮಸಿ ಬಳಿದಿವೆ.
  ಅಂತರ್ಜಾಲದಲ್ಲಿ ಜಾಲಾಡಿ ಕ್ಷಣಾರ್ಧದೊಳಗೆ ಮಾಹಿತಿ ಸಂಗ್ರಹಿಸಬಹುದಾದ ಈ ಕಾಲದ ಮಂದಿಗೆ ನಾಗಂದಿಗೆಯ ಮೇಲಿನ ಪುಸ್ತಕದ ಕಟ್ಟಿನ ಧೂಳು ಝಾಡಿಸಿ ಯಾವುದೋ ವಿಶೇಷಾಂಕವೊಂದರಲ್ಲಿ ಪ್ರಕಟವಾಗಿದ್ದ ಲೇಖನವೊಂದನ್ನು ಹೆಕ್ಕಿ ತೆಗೆಯುವುದು ಬಲು ಬೇಜಾರಿನ ಕೆಲಸವೇ ಹೌದಾದರೂ ಕಳೆದ ಇಪ್ಪತ್ತು ವರ್ಷಗಳ ಬಹುತೇಕ ಎಲ್ಲ ಪತ್ರಿಕೆಗಳ ವಿಶೇಷಾಂಕಗಳನ್ನೂ ಜತನವಾಗಿ ಕಾಪಾಡಿಕೊಂಡು ಬಂದಿರುವ ನನಗೆ ನನ್ನ ಈ ಸಂಗ್ರಹ ಬಲು ಬೇಜಾರಿನ ಕ್ಷಣಗಳ ಆಪ್ತ ಸಖನಾಗಿ, ಸಾಹಿತ್ಯಕ ಸಂಗತಿಗಳ ಸಂಗಾತಿಯಾಗಿ ಹಾಗೇ ಬೇಕು ಬೇಕಾದ ಮಾಹಿತಿಗಳ ಕಣಜವಾಗಿ ಕಂಡಿದೆ, ಕಾಣುತ್ತಿದೆ.
  (ಇದೇ ವಿಶೇಷಾಂಕದಲ್ಲಿ ಪ್ರಕಟವಾಗಿರುವ ನನ್ನ ಲೇಖನದ ಪೂರ್ಣಪಾಠ)

  ಪ್ರತಿಕ್ರಿಯೆ
 6. ರಂಜಿತ್

  ವಿಶೇಷಾಂಕಗಳೇ ಹಬ್ಬವನ್ನು ಹೊತ್ತು ತರುತ್ತಿದ್ದವಾ ಅನ್ನಿಸುವಂತೆ ಮಾಡುತ್ತಿತ್ತು ಬಾಲ್ಯ. ಟೀವಿ ಇನ್ನೂ ಮನೆ ಹೊಕ್ಕಿರಲಿಲ್ಲವಾದ್ದರಿಂದ ಅಮ್ಮ ಅಡುಗೆಮನೆಯಲ್ಲಿ ವ್ಯಸ್ತವಾಗಿರುತ್ತಿದ್ದರೆ ನಾವು ವಿಶೇಷಾಂಕಗಳಲ್ಲಿ. ವಿಚಿತ್ರವೆಂದರೆ ಈಗ ಕೆಲವೊಮ್ಮೆ ಪಾಯಸದ ಪರಿಮಳ ಮೂಗಿಗಡರುವಾಗ ವಿಶೇಷಾಂಕ ನೆನಪಾಗುತ್ತದೆ!!
  ನಿಜವಾದ ಸುಖ ಅಂದರೆ ಅಪ್ಪ ದುಡ್ಡು ಕೊಟ್ಟು ವಿಶೇಷಾಂಕ ತಾ ಅಂತ ಕಳಿಸಿದಾಗ ” ಅಂಗಡಿಯವನು ಚಿಲ್ಲರೆ ವಾಪಾಸು ಮಾಡುವಷ್ಟರಲ್ಲೇ ಪರಿವಿಡಿಯ ಪುಟದಲ್ಲಿ ಫಕ್ಕೆಂದು ಮುಳುಗಿಬಿಡುವ ಆ ತಲ್ಲೀನತೆಯ ಸುಖ” ವೇನೆ!!

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸಂಜುCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: