ನಾ ಕಾರಂತ ಪೆರಾಜೆ ಒಂದು ರೀತಿಯಲ್ಲಿ ಶ್ರೀಪಡ್ರೆ ಅವರ ಗರಡಿಯಲ್ಲಿ ಪಳಗಿದವರು. ಪುತ್ತೂರಿನಿಂದ ಪ್ರಕಟವಾಗುವ ‘ಅಡಿಕೆ ಪತ್ರಿಕೆ’ ಬಳಗದ ಕಾರಂತರು ಕೃಷಿ ವಿಚಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರು. ಕೃಷಿ ಪತ್ರಿಕೋದ್ಯಮವನ್ನು ಗಂಭೀರವಾಗಿ ಕೈಗೆತ್ತಿಕೊಂಡಿರುವ ಇವರಿಗೆ ಈಗಾಗಲೇ ಚರಕ, ಕ್ಯಾಮ್ ಪ್ರಶಸ್ತಿಗಳು ಸಂದಿವೆ. ನಾಡಿನ ಎಲ್ಲಾ ಪತ್ರಿಕೆಗಳಿಗೆ ಹೊಸ ನೋಟದ ಬರಹ ಬರೆದ ಇವರು ಈಗ ಬ್ಲಾಗ್ ಅಂಗಳಕ್ಕೆ ಬಂದಿದ್ದಾರೆ- ‘ಹಸಿರು ಮಾತು’ ಮೂಲಕ.
ಇವರ ಒಂದು ಬರಹದ ಮೂಲಕ ಕಾರಂತ ಪೆರಾಜೆ ಅವರನ್ನು ಬ್ಲಾಗ್ ಅಂಗಳಕ್ಕೆ ಸ್ವಾಗತಿಸುತ್ತಿದ್ದೇವೆ.
ಧಾರವಾಡದ ಸುತ್ತೂರಿನ ಮಲ್ಲಯ್ಯ ಹಿರೇಮಠ್ ಇವರ ಮನೆಗೂ, ಹೈನು ಕುಟೀರಕ್ಕೂ ಹತ್ತು ನಿಮಿಷದ ದಾರಿ. ಕೃಷಿ ಕೆಲಸವೆಂದ ಮೇಲೆ ಅತ್ತಿಂದಿತ್ತ, ಇತ್ತಿಂದಿತ್ತ ಪ್ರಯಾಣ ಸಹಜ. ದ್ವಿಚಕ್ರ ವಾಹನವಿದ್ದರೂ ಪೆಟ್ರೋಲ್ ಧಾರಣೆಯಿಂದಾಗಿ ಮಿತ ಬಳಕೆ. ಇವರ ‘ರಾಕಿ’ ಕುದುರೆಯು ಕೃಷಿ ಓಡಾಟ ಕೆಲಸವನ್ನು ಹಗುರಮಾಡಿದೆ ಎಂದರೆ ನಂಬ್ತೀರಾ?
ರಾಕಿ 2006ರ ಮೋಡೆಲ್! ಮಲ್ಲಯ್ಯರ ಮಗ ಸಂಗಯ್ಯ ರಾಕಿಯ ಚಾಲಕ. ಇವರಿಗೆ ಬಾಲ್ಯದಿಂದಲೂ ಕುದುರೆ ಸಾಕುವ ಮತ್ತು ಸವಾರಿ ಕಲಿವ ಆಸಕ್ತಿ. ರಾಕಿ ಹುಟ್ಟಿದ್ದೇ ಇವರ ಮನೆ ಪಕ್ಕದಲ್ಲಿ. ಅದರ ಒಡೆಯನಿಗೆ 1200 ರೂ. ಕೊಟ್ಟು ಖರೀದಿ. ಅಲ್ಲಿಂದ ಇವರ ಮನೆಯ ಸದಸ್ಯ.
ಸಂಗಯ್ಯರಿಗೆ ಕುದುರೆ ಸವಾರಿಯ ಕಲಿಕೆ ಗೊತ್ತಿಲ್ಲ. ರಾಕಿ ದೊಡ್ಡದಾಗುತ್ತಿದ್ದಂತೆ, ‘ಬೆನ್ನೇರುವುದು, ಬೀಳುವುದು, ಗಾಯಮಾಡಿಕೊಳ್ಳುವುದು’ ನಡೆದೇ ಇದ್ದಂತೆ, ಸಂಗಯ್ಯ-ರಾಕಿ ಮಧ್ಯೆ ಒಪ್ಪಂದವಾಯ್ತು! ಹಾಗಾಗಿ ಸಂಗಯ್ಯ ಹೊರತಾಗಿ ಯಾರೇ ಬೆನ್ನೇರಿದರೂ ಅವರು ನೇರ ಆಸ್ಪತ್ರೆಗೆ!
ಬೆಳಿಗ್ಗೆ ಮತ್ತು ಸಂಜೆ ಮನೆಗೆ ಹಾಲೊಯ್ಯುವುದು, ಮನೆಯಿಂದ ‘ಹಟ್ಟಿ ಕುಟೀರ’ಕ್ಕೆ ತಿಂಡಿ, ಭೋಜನ ತರಲು….ಇವರಿಗೆ ಬೈಕ್ ಬೇಡ. ‘ರಾಕಿ ಇದ್ದಾಗ ಕಾಲ್ನಡಿಗೆ ಯಾಕೆ’ ಎನ್ನುತ್ತಾ ಬೆನ್ನೇರುತ್ತಾರೆ ಸಂಗಯ್ಯ. ದನಗಳನ್ನು ಗುಡ್ಡಕ್ಕೆ ಮೇಯಲು ಬಿಟ್ಟಾಗ, ಅವುಗಳು ಸಂಜೆ ಹಟ್ಟಿಗೆ ಬಂದಿಲ್ಲವನ್ನಿ, ಅವುಗಳನ್ನು ಹುಡುಕಲು ರಾಕಿಯೇ ಬೇಕು.
ಮನೆಗೆ ನೆಂಟರು ಬಂದರು, ತುರ್ತಾಗಿ ಬೇಕರಿಯಿಂದ ತಿಂಡಿ ಬೇಕು. ಪೇಟೆ ದೂರವಿದೆ. ಆಗ ರಾಕಿಯನ್ನೇರಿ ಪೇಟೆಗೆ ಹೊರಟಾಗಿನ ಸಂಗಯ್ಯ ಇವರ ಠೀವಿ ನೋಡಿಯೇ ಅನುಭವಿಸಬೇಕು! ಇವರಜ್ಜಿ ಗಂಗಮ್ಮ. ನಿತ್ಯ ಹೂಹಾರ ಹಾಕಿ ಪೂಜೆ ಮಾಡ್ತಾರಂತೆ. ಏನಿಲ್ಲವೆಂದರೂ ದಿನಕ್ಕೆ 25 ಕಿಲೋಮೀಟರ್ ಪ್ರಯಾಣ.
ಸಂಜೆ ತೋಟಕ್ಕೆ ಒಂದು ಸುತ್ತು ಇದರಲ್ಲೇ ರೈಡ್. ‘ಕತ್ತಲೆಯಲ್ಲೂ ಓಡುತ್ತದೆ. ಲೈಟ್ ಬೇಡ. ಬ್ಯಾಟರಿ ಬೇಡ’ ಮಲ್ಲಯ್ಯ ನಗೆಯಾಡುತ್ತಾರೆ. ಇವರ ಮನೆಯಲ್ಲಿ ಜರ್ಸಿ ಹೋರಿ ಒಂದಿದೆ. ಚಕ್ಕಡಿಯಲ್ಲಿ ಹುಲ್ಲು ತರಲು ಹೋರಿ ಮತ್ತು ರಾಕಿಯ ಬಳಕೆ. ಒಳ್ಳೆಯ ಜತೆ! ರಾಕಿ ಬಯಲಲ್ಲಿ ಎಲ್ಲೇ ಮೇಯುತ್ತಿರಲಿ, ಸಂಗಯ್ಯ ಶಿಳ್ಳೆ ಹಾಕಿದರೆ ಸಾಕು, ಓಡಿ ಬಂದುಬಿಡುತ್ತದೆ. ನೀವೊಮ್ಮೆ ಶಿಳ್ಳೆ ಹಾಕಿ. ಉಹೂಂ. ಕದಲದು! ರಾತ್ರಿ ಆವರಣಕ್ಕೆ ಯಾರೇ ಬರಲಿ, ತನ್ನ ಮೂಕಭಾಷೆಯಿಂದ ಸಂಗಯ್ಯರನ್ನು ಎಚ್ಚರಿಸುತ್ತದೆ.
ಹೇಗಿದೆ? ಕೃಷಿಯಲ್ಲೂ ಕುದುರೆಯ ಬಳಕೆ. ‘ಇಲ್ಲೆಲ್ಲಾ ಕುದುರೆ ಸಾಕುವುದು ಬಳಕೆಯಲ್ಲಿದೆ. ಅದರೆ ಅದನ್ನು ತಮ್ಮ ಆವಶ್ಯಕತೆಗೆ ತಕ್ಕಂತೆ ಬಳಸುವುದರಲ್ಲಿ ಜಾಣತನ’ ದನಿಗೂಡಿಸುತ್ತಾರೆ ಕೃಷಿ ಅಧಿಕಾರಿ ಆರ್.ಬಿ.ಹಿರೇಮಠ್.
karanthara krushi lekanagalu
hasyamaya
odisuthaa hoguthe.
avara blog kooda swarasyavagide.
ellaru odale beku.
blog bete jasti aga beku.
harini