ಕಾರಾಗೃಹದಲ್ಲಿ ‘ಸಂದರ್ಶಕ…’

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ನನ್ನ ಜೈಲಿನ ಭೇಟಿ, ಅಲ್ಲಿ ಮಕ್ಕಳನ್ನು ಮಾತನಾಡಿಸಿದ್ದು, ಅವರನ್ನು ಕುರಿತು ನಾನು ಸಂಗ್ರಹಿಸಿದ ಮಾಹಿತಿ ಹಿಡಿದುಕೊಂಡು ಹಲವರೊಡನೆ ಮಾತನಾಡಿದೆ.‌ ಮುಖ್ಯವಾಗಿ ಸಿಕ್ರಂ ಸಂಸ್ಥೆಯ ಮಾಥ್ಯೂ ಫಿಲಿಪ್ಸ್‌, ಮಕ್ಕಳ ಕಲ್ಯಾಣ ಸಮಿತಿಯ ಹಿಂದಿನ ಅಧ್ಯಕ್ಷರಾಗಿದ್ದ ನೀನಾ ನಾಯಕ್‌, ಹ್ಯೂಮನ್‌ ರೈಟ್ಸ್‌ ಲಾ ನೆಟ್‌ವರ್ಕ್‌ (ಹೆಚ್.‌ಆರ್.‌ಎಲ್.‌ಎನ್.)‌ನ ವಕೀಲೆ ಶೀಲಾ ರಾಮನಾಥನ್, ಸಾಥಿ ಸಂಸ್ಥೆಯ ಗೆಳೆಯರು ಮತ್ತು ಬೆಂಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನನ್ನ ಸಹವರ್ತಿಗಳು.

ವಿವಿಧ ರೀತಿಯ ಸಲಹೆಗಳು ಬಂದವು. ಮಾಧ್ಯಮಗಳಿಗೆ ಹೇಳಿಬಿಡೋಣ. ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುವುದು, ರಾಜ್ಯದ ಉಚ್ಚ ನ್ಯಾಯಾಧೀಶರಿಗೆ ಮಾಹಿತಿ ಕೊಡುವುದು, ಕಾನೂನು ಸೇವಾ ಪ್ರಾಧಿಕಾರಕ್ಕೆ ಹೇಳುವುದು, ರಾಜ್ಯದ ಗೃಹ ಸಚಿವರನ್ನು ಭೇಟಿ ಮಾಡುವುದು… ಇದೆಲ್ಲದರ ಜೊತೆಯಲ್ಲಿ ಬಂದದ್ದು ಇನ್ನಷ್ಟು ಮಾಹಿತಿ ಸಂಗ್ರಹಿಸಬೇಕು. ಅದನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.

ಶೀಲಾ ರಾಮನಾಥನ್, ಸಹೋದ್ಯೋಗಿ ಸತೀಶ್‌ ಜಿ.ಸಿ. ಮತ್ತು ನಾನು ಸೇರಿ ಕಾರಾಗೃಹದಲ್ಲಿರುವ ಮಕ್ಕಳ ಸಮಗ್ರ ಮಾಹಿತಿ ಸಂಗ್ರಹಿಸಲು ಒಂದು ಪ್ರಶ್ನಾವಳಿ ಸಿದ್ಧ ಮಾಡಿಕೊಂಡೆವು. ಪ್ರಮುಖವಾಗಿ: ಹೆಸರು, (ಅಡ್ಡ ಹೆಸರು ಏನಾದರೂ ಇದ್ದರೆ), ಹುಟ್ಟಿದ ದಿನಾಂಕ, ವಯಸ್ಸು, ವಯಸ್ಸು ತೋರಿಸಲು ಇರುವ ಆಧಾರ, ಪೋಷಕರ ಹೆಸರು, ವಿಳಾಸ, ಯಾವ ರಾಜ್ಯ, ಜಿಲ್ಲೆ, ವಿದ್ಯಾಭ್ಯಾಸ, ಶಾಲೆಗೆ ಹೋಗಿದ್ದರೆ ಯಾರಾದರೂ ಪರಿಚಿತ ಶಿಕ್ಷಕ/ಶಿಕ್ಷಕಿಯ ಹೆಸರು, ಯಾರಾದರೂ ಸಂಬಂಧಿಗಳು ಮತ್ತು ಅವರ ಮೊಬೈಲ್‌/ಫೋನು ನಂಬರು, (ಇವರನ್ನು ಸಂಪರ್ಕಿಸಬಹುದೇನು), ಆಪಾದನೆಯ ಕ್ರೈಂ ನಂಬರು, ಐಪಿಸಿಯ ಯಾವ ಸೆಕ್ಷನ್‌ ಅಡಿ ಆಪಾದನೆ, ಯಾವಾಗ ದಸ್ತಗಿರಿ ಮಾಡಿದ್ದು, ಎಲ್ಲಿ ಮತ್ತು ಯಾವಾಗಿನಿಂದ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದಾರೆ, ಜಾಮೀನು ಅರ್ಜಿ ಹಾಕಿದ್ದಾರೆಯೋ ಇಲ್ಲವೋ, ಅವರನ್ನು ನೋಡಲು ಬಂಧುಗಳು ಯಾರಾದರೂ ಬಂದಿದ್ದರೇನು, ಈಗ ಜೈಲಿನಲ್ಲಿ ಏನು ಮಾಡುತ್ತಿದ್ದಾರೆ, ಅವರೆದುರಿಸುತ್ತಿರುವ ಕಷ್ಟಗಳಾವುವು, ಇತ್ಯಾದಿ.

ಈ ಬಾರಿಯೂ ಜೈಲು ಅಧಿಕಾರಿಗಳ ಅನುಮತಿ ಪಡೆದೇ ೨೦೦೮ರ ಮೇ ೨೨ರಂದು ಮತ್ತೆ ಪರಪ್ಪನ ಅಗ್ರಹಾರದಲ್ಲಿನ ಕಾರಾಗೃಹವನ್ನು ಬೆಳಗ್ಗೆಯೇ ಪ್ರವೇಶಿಸಿದೆವು. ನಮ್ಮೆದುರು ಇಡೀ ದಿನವಿತ್ತು. ಈ ಬಾರಿ ನನ್ನೊಡನೆ ಮಕ್ಕಳ ಕಲ್ಯಾಣ ಸಮಿತಿಯಲ್ಲಿನ ನನ್ನ ಸಹವರ್ತಿ ಮೀರಾ ಮಾಧವ ಮತ್ತು ಉಮಾದೇವಿ ಇದ್ದರು. ಜೊತೆಗೆ ಇಡೀ ಪ್ರಕರಣವನ್ನು ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ವಕೀಲೆ ಶೀಲಾ ರಾಮನಾಥನ್‌ ಇದ್ದರು. ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ೧೮ ವರ್ಷದೊಳಗಿನ ಮಕ್ಕಳನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸುವುದು.

ನಮ್ಮ ಮೊಬೈಲ್‌ ಬಾಗಿಲಲ್ಲೇ ಇಟ್ಟು, ಕೈಗೆ ʼಸಂದರ್ಶಕʼ ಎಂಬ ಸೀಲ್‌ ಹಾಕಿಸಿಕೊಂಡು ಒಳಹೋದೆವು. ನಮ್ಮ ಪ್ರಶ್ನಾವಳಿಗಳನ್ನು ಒಯ್ಯಲು ಅನುಮತಿ ಸಿಕ್ಕಿತು. ನಮ್ಮ ಜೊತೆ ಕಾರಾಗೃಹದ ಅಧಿಕಾರಿಗಳಾಗಿದ್ದ ಡಾ. ಅನಿತಾ ಹೆಜ್ಜೆ ಹಾಕಿದರು. ಮೊದಲೇ ಯೋಜಿಸಿಕೊಂಡಂತೆ ಕಾರಾಗೃಹದ ಗ್ರಂಥಾಲಯದ ಎದುರು ನಾವು ನಾಲ್ಕೂ ಜನ ಕುಳಿತೆವು. ಆಗಲೇ ನಮ್ಮನ್ನು ಹಿಂದೆ ನೋಡಿದ್ದ ಒಂದಷ್ಟು ಮಕ್ಕಳು ಭೇಟಿಯಾದರು. ಯಾರದೋ ಬಟ್ಟೆ ಒಗೆಯಲು ಒಯ್ಯುತ್ತಿದ್ದವರು, ಅಡುಗೆ ಮನೆ ಕೆಲಸಕ್ಕೆ ಓಡಾಡುತ್ತಿದ್ದವರು, ಕೈ ಮೈ ಸಿಮೆಂಟು ಕೆಸರು ಇದ್ದವರು, ಹೀಗೇ. ಅಷ್ಟರಲ್ಲೂ ಅವರನ್ನು ನಿಲ್ಲಿಸಿಕೊಂಡು ಮಾಹಿತಿ ಸಂಗ್ರಹಿಸಲು ಆರಂಭಿಸಿದೆವು. 

ಕೆಲವರು ಉತ್ಸಾಹದಿಂದ ಮಾಹಿತಿ ನೀಡಿದರೆ, ಒಂದಷ್ಟು ಹುಡುಗರಿಗೆ ಭಯ. ಇದೆಲ್ಲಾ ಯಾಕೆ, ನಮ್ಮ ಮನೆಗೆ ಫೋನು ಮಾಡಬೇಡಿ. ನಾನಿಲ್ಲಿರುವುದು ಮನೆಯಲ್ಲಿ ಗೊತ್ತಾದರೆ ಸತ್ತೋಗ್ತಾರೆ ಎಂದವರು, ಮೊದಲು ತಿಳಿಸಿ, ಯಾರಾದರೂ ಸಹಾಯಕ್ಕೆ ಬರಬಹುದು, ನಮ್ಮ ವಕೀಲರಿಗೆ ಹೇಳಿ ಬಿಡಿಸಿ ಎಂದು ಮುಂತಾದವರೂ ಇದ್ದರು.

ಕೆಲ ಹೊತ್ತಿನಲ್ಲೇ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿ ಹಿಂದಿನ ಅನುಭವದಂತೆಯೇ ಹುಡುಗರ ಗುಂಪು ಬಂದಿತು. ೧೮ ದಾಟಿದವರೂ ಇದ್ದರು. ಎಲ್ಲರನ್ನೂ ಮೊದಲೇ ಮಾತನಾಡಿಸಿ ೧೮ರೊಳಗಿನವರಿಗೆ ಮಾತ್ರ ಎಂದು ಸ್ಪಷ್ಟ ಮಾಡಲಾಯಿತು. ಕನ್ನಡ, ತಮಿಳು, ತೆಲುಗು, ಹಿಂದಿ, ಮತ್ತಿತರ ಭಾಷೆಗಳ ಕಲರವ. ನಾವು ನಾಲ್ಕು ಜನ ಮಾಹಿತಿ ಸಂಗ್ರಹಿಸಲು ಸುಮಾರು ೨೦೦ ಪ್ರಶ್ನಾವಳಿಗಳನ್ನು ತೆಗೆದುಕೊಂಡು ಹೋಗಿದ್ದೆವು. ಮಧ್ಯಾಹ್ನ ಸುಮಾರು ೩ರ ಹೊತ್ತಿಗೆ ತಮಗೆ ೧೮ ದಾಟಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಸುಮಾರು ೧೫೬ ಹುಡುಗರ ಮಾಹಿತಿ ಸಂಗ್ರಹಿಸಿದೆವು.

ಅಲ್ಲಿನ ಕೆಲವು ಹುಡುಗರೊಂದಿಗೆ ನಾನು ಕಾರಾಗೃಹದ ಎಲ್ಲ ಕಡೆ ಓಡಾಡಿದೆ. ಗ್ರಂಥಾಲಯ, ಅಡುಗೆ ಮನೆ, ವಿವಿಧ ಬ್ಯಾರಕ್‌ಗಳು, ಕಟ್ಟಡ ಕೆಲಸ ನಡೆಯುತ್ತಿದ್ದ ಸ್ಥಳ, ಬಚ್ಚಲ ಮನೆಗಳು, ಶೌಚಾಲಯ, ಬಟ್ಟೆ ಒಗೆಯುವ ಬಯಲು, ಆಟದ ಮೈದಾನ, ಇತ್ಯಾದಿ. ಕೆಲವು ವಯಸ್ಕರೊಡನೆಯೂ ಮಾತನಾಡಿದೆ. ಮಕ್ಕಳನ್ನು ಜೈಲಿನಲ್ಲಿ ಬಿಟ್ಟಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಬಹುತೇಕರಿಗೆ ಈ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ.

ಕಾರಾಗೃಹಕ್ಕೆ ವಿವಿಧ ಸ್ವಯಂಸೇವಾ ಸಂಘಟನೆಗಳ ಮತ್ತು ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಸದಾ ಕಾಲಕ್ಕೂ ಭೇಟಿ ನೀಡುತ್ತಾರೆ ಎನ್ನುವ ವಿಚಾರ ಗೊತ್ತಾಯಿತು. ಅವರಲ್ಲಿ ಬಹುತೇಕರು ಧಾರ್ಮಿಕ ಪ್ರಾರ್ಥನೆಗಳನ್ನು ನಡೆಸುವುದು, ಖೈದಿಗಳ ಕುಟುಂಬಗಳನ್ನು ಸಂಪರ್ಕಿಸಿ ಅವರಿಗೆ ಹಣಕಾಸು ನೆರವು, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸುತ್ತಾರೆ ಎನ್ನುವುದು ತಿಳಿಯಿತು. ಅವರು ಯಾರೂ ಜೈಲಿನಲ್ಲಿದ್ದ ಮಕ್ಕಳ ಬಗ್ಗೆ ಗಮನ ನೀಡಿರಲಿಲ್ಲ. ಜೈಲಿನಲ್ಲಿದ್ದ ಆಸ್ಪತ್ರೆಯ ವೈದ್ಯರು (ಅವರೂ ಖೈದಿಯೇ) ಮಕ್ಕಳ ಪರಿಸ್ಥಿತಿಯ ಬಗ್ಗೆ ಬಹಳ ನೊಂದುಕೊಂಡರು. ಒಂದು ಸಂಸ್ಥೆಯ ಪ್ರತಿನಿಧಿಗಳು ಮಾತ್ರ ಕಾನೂನು ಸೇವೆಯ ಬಗ್ಗೆ ಮಾಹಿತಿ ಕೊಡುತ್ತಾರೆಂದು ಕೆಲವರು ಹೇಳಿದರು.

ಬ್ಯಾರಕ್‌ ಕಟ್ಟಡದ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಂತೆ ಕಾಣುತ್ತಿದ್ದ ಒಬ್ಬನೊಡನೆ ಮಾತಾನಾಡಿದೆ. ಅವನ ಹತ್ತಿರ ಒಂದು ಪುಸ್ತಕ, ಅದರಲ್ಲಿ ಹೆಸರುಗಳು ಇತ್ತು. ಒಂದು ತರಹ ಹಾಜರಾತಿ ಪುಸ್ತಕ. ಅವನ ಜೊತೆ ಮಾತಿಗಿಳಿದಾಗ ಸಾಕಷ್ಟು ಆರಾಮವಾಗಿಯೇ ಮಾತನಾಡಿದ. ಆತನೂ ಒಬ್ಬ ಜೈಲು ವಾಸಿ. ಅವನೂ ೧೮ ವರ್ಷ ಆಗುವ ಮೊದಲೇ ಬಂಧನಕ್ಕೀಡಾದವನು. ಬಿಡುಗಡೆಯ ದಿನ ಮುಗಿದಿತ್ತು. ಆದರೆ ಕೆಲಸ ಆಗುವ ತನಕ ಕಾರ್ತಿಕ್‌ ಬಿಡಲ್ಲ ಎಂದ.

ಕಾರ್ತಿಕ್‌ ಕೂಡಾ ಜೈಲಿನಲ್ಲಿರುವವನೇ ಆಗಿದ್ದು ಒಂದು ತರಹ ಅವನು ಇಡೀ ಕಟ್ಟಡ ಕೆಲಸದ ಮೇಲ್ವಿಚಾರಕನಂತೆ. ಜೈಲಿನೊಳಗಿನ ಕಟ್ಟಡ ಕೆಲಸದ ಗುತ್ತಿಗೆ ಪಡೆದಿರುವವರು ಕಾರ್ತಿಕನೊಂದಿಗೆ ವ್ಯವಹರಿಸುತ್ತಾರೆಂದೂ ಹೇಳಿದ. ಸ್ವಲ್ಪ ಹೊತ್ತು ನಾನೂ ಅಲ್ಲಿನವನೇ, ಹೊಸಬನಿರಬೇಕೆಂದುಕೊಂಡಿದ್ದ ಅವನು, ಆಮೇಲೆ ನಾನು ಭೇಟಿಗೆ ಬಂದವನೆಂದು ಗೊತ್ತಾದ ಮೇಲೆ ಇದನ್ನ ಹೊರಗೆ ಹೇಳಬಾರದು ಎಂದೂ ತಮಗೆ ಕಷ್ಟವಾಗುತ್ತದೆಂದು ದುಂಬಾಲುಬಿದ್ದ.

ನಾವು ನಾಲ್ಕು ಜನ ಹೊರಗೆ ಬರುವ ಹೊತ್ತಿಗೆ ಸಾಕಷ್ಟು ಮಾನಸಿಕವಾಗಿ ಬಳಲಿದ್ದೆವು. ನಮ್ಮ ಮಾತುಗಳಲ್ಲಿ ಬೇಸರ ಇಣಕುತ್ತಿತ್ತು. ಕಾರಾಗೃಹದ ಮೇಲ್ವಿಚಾರಕರಾಗಿದ್ದ ಅಬ್ಬಾಯಿ ಅವರನ್ನು ಭೇಟಿಯಾಗಿ ಹೊರಡುವ ಇರಾದೆ ನಮ್ಮದಾಗಿತ್ತು. ಮೊದಲು ನಮಗೆ ಊಟದ ವ್ಯವಸ್ಥೆ ಮಾಡಿದ ಅವರು ನಮ್ಮ ಭೇಟಿ, ಮಾಹಿತಿ ಸಂಗ್ರಹ ಕುರಿತು ವಿವರವಾಗಿ ಮಾತನಾಡಿದರು.

ಒಳ್ಳೆಯ ಕೆಲಸ, ಈ ಮಕ್ಕಳು ಇಲ್ಲಿರಬಾರದು ಎಂದು ಹೇಳಿದರು ಕೂಡಾ. ಕ್ವಾರೆಂಟೈನ್‌ ನಲ್ಲಿ (ಪ್ರತ್ಯೇಕವಾಗಿ ಇರಿಸುವುದು) ಈ ಹುಡುಗರನ್ನು ಇರಿಸುವುದು ಅಂತಿದೆಯಲ್ಲ ಎಂದಾಗ, ಹೌದು, ರಾತ್ರಿ ಅವರೆಲ್ಲಾ ಪ್ರತ್ಯೇಕವಾಗಿರುತ್ತಾರೆ. ಹಗಲಿನಲ್ಲಿ ಏನೂ ಮಾಡಕ್ಕಾಗಲ್ಲ. ಜೊತೆಗೆ ಅವರಿಗೂ ಪುಡಿಗಾಸು ಸಿಗುತ್ತೆ ಅಂತ ಅವರಿವರ ಕೆಲಸ ಮಾಡಿಕೊಡುತ್ತಾರೆ. ಅದನ್ನೆಲ್ಲ ನಿಲ್ಲಿಸಲಿಕ್ಕೆ ಆಗಲ್ಲ ಎಂಬ ವಿವರಣೆ ಅವರಿಂದ ಬಂತು. 

ಆ ದಿನ ಸಂಗ್ರಹಿಸಿದ ಮಾಹಿತಿ ಮತ್ತು ಒಟ್ಟು ಮೂರೂ ಭೇಟಿಗಳನ್ನು ಆಧರಿಸಿಕೊಂಡು, ಸಹೋದ್ಯೋಗಿ ಜಿ ಸಿ ಸತೀಶ್‌ ನೆರವಿನೊಂದಿಗೆ ವಿವರವಾದ ವರದಿ ಸಿದ್ಧಪಡಿಸಿ ನಮ್ಮ ಮಕ್ಕಳ ಕಲ್ಯಾಣ ಸಮಿತಿ ಮತ್ತು ಇತರ ಆಸಕ್ತರೊಂದಿಗೆ ಚರ್ಚೆ ನಡೆಸಿದೆವು. ಒಂದಷ್ಟು ಪ್ರಶ್ನಾರ್ಹವಾದ, ಒಂದಷ್ಟು ಆತಂಕ ತರಿಸಿದ ಮಾಹಿತಿ: ೧೮ ವರ್ಷದೊಳಗಿನವರು ಎಂದು ಹೇಳಿಕೊಳ್ಳುವ ೧೫೬ ಹುಡುಗರನ್ನು ನಾವು ಭೇಟಿ ಮಾಡಿದ್ದು; ಆದರೆ ಒಬ್ಬ ಹುಡುಗನನ್ನು ಬಿಟ್ಟರೆ ಉಳಿದವರ ಬಳಿ ವಯಸ್ಸು ಪರಿಶೀಲನೆ ಮಾಡಲು ತಕ್ಷಣಕ್ಕೆ ಯಾವುದೇ ದಾಖಲೆಯಿರಲಿಲ್ಲ. ಆ ಒಬ್ಬ ಹುಡುಗನಿಗೆ ಮನೆಯವರು ಹೇಗೋ ಟಿಸಿ (ಶಾಲೆ ವರ್ಗಾವಣೆ ಪತ್ರ) ಮತ್ತು ಎಸ್‌.ಎಸ್.ಎಲ್‌.ಸಿ. ಅಂಕಪಟ್ಟಿ ಕೊಟ್ಟಿದ್ದರು. ಅದು ಒಪ್ಪಿತ ವಯಸ್ಸಿನ ದೃಢೀಕರಣ ಪತ್ರ. ತಮಗೆ ತಂದೆ ತಾಯಿ ಯಾರೂ ಇಲ್ಲ ಅನಾಥರು ಎಂದವರು ಎಂಟು ಹುಡುಗರು. ೨೧ ಹುಡುಗರ ಅರೆ ಅನಾಥರು; ಬಹುತೇಕ ಎಲ್ಲರೂ ತಮ್ಮ ವಿಳಾಸ ಕೊಟ್ಟರು.

ಯಾವ ಊರು, ರಾಜ್ಯ, ಯಾವ ಪೊಲೀಸ್‌ ಠಾಣೆಯವರು ವಶಕ್ಕೆ ತೆಗೆದುಕೊಂಡಿದ್ದು, ಎಷ್ಟು ದಿನದಿಂದ ಜೈಲಿನಲ್ಲಿದ್ದಾರೆ ಎಂಬ ವಿವರ ಕೊಟ್ಟರು. ವಯಸ್ಕರು ಮಾಡಿದ ಆಪರಾಧಿಕ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಹೇಳಿ ಕೆಲವು ಹುಡುಗರ ಮೇಲೆ ಆಪಾದನೆ ಮಾಡಿ ಬಂಧಿಸಲಾಗಿತ್ತು (ಅದರಲ್ಲಿ ವಯಸ್ಕರಿಗೆ ಜಾಮೀನು ಸಿಕ್ಕಿತ್ತು. ಆದರೆ ಮಕ್ಕಳು ಜೈಲಿನಲ್ಲಿಯೇ ಇದ್ದರು). 46 ಮಕ್ಕಳು ತಮ್ಮ ಸಂಬಂಧಿಗಳು, ಪೋಷಕರ ಮೊಬೈಲ್‌ ಸಂಖ್ಯೆ ಅಥವಾ ದೂರವಾಣಿ ಸಂಖ್ಯೆ ಕೊಟ್ಟರು. (ಆದರೆ ಅವುಗಳಲ್ಲಿ ಸಾಕಷ್ಟು ಸಂಖ್ಯೆಗಳು ಚಾಲನೆಯಲ್ಲಿರಲಿಲ್ಲ).

ಕರ್ನಾಟಕದ ವಿವಿಧ ಜಿಲ್ಲೆಗಳ ೮೭ ಮಕ್ಕಳಲ್ಲದೆ, ಆಂಧ್ರಪ್ರದೇಶದವರು ೭; ತಮಿಳುನಾಡು ೫; ಬಿಹಾರ್‌ ೪; ಅಸ್ಸಾಂ ೨; ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಒರಿಸ್ಸಾದವರು ತಲಾ ಒಬ್ಬೊಬ್ಬರು. ಮತ್ತು ೪೮ ಮಕ್ಕಳು ಸ್ಪಷ್ಟವಾಗಿ ತಮ್ಮ ರಾಜ್ಯದ ಹೆಸರು ಹೇಳಲಿಲ್ಲ. ಆದರೆ ಅವರಲ್ಲಿ ಜಮ್ಮು ಕಾಶ್ಮೀರದ ಕೆಲವು ಮಕ್ಕಳು ಮತ್ತು ಮಹಾರಾಷ್ಟ್ರದ ಮಕ್ಕಳು ಇದ್ದದ್ದು ಕಂಡುಬಂದಿತ್ತು. ಉಳಿದವರು ಉತ್ತರ ಪ್ರದೇಶದ ಆಸುಪಾಸಿನವರು ಎಂದು ಹೇಳಬಹುದಾಗಿತ್ತು.

ಚಿಕ್ಕಪುಟ್ಟ ಹೊಡೆದಾಟ, ಕಳ್ಳತನದಲ್ಲಿ ಸಿಲುಕಿದ್ದ ಮಕ್ಕಳು ಕೆಲವರು, ದೊಡ್ಡವರ ಜೊತೆ ಇದ್ದೆ, ಆದರೆ ಅಲ್ಲೇನಾಯಿತು ಎಂದು ಗೊತ್ತಿಲ್ಲ ಎಂದವರು, ನನಗೂ ನನ್ನ ಮೇಲೆ ಹಾಕಿರುವ ಆಪಾದನೆಗೂ ಯಾವುದೇ ಸಂಬಂಧವಿಲ್ಲ ಎಂದವರೂ, ಪೊಲೀಸರು ಬಿಟ್ಟುಬಿಡುತ್ತೇವೆ ಸುಮ್ಮನೆ ಹೇಳು ಎಂದು ಒಪ್ಪಿಸಿ ತಂದರು ಎಂದ ಮಕ್ಕಳೂ ಇದ್ದರು. ಇಷ್ಟರ ಮಧ್ಯ ಕೆಲವು ಮಕ್ಕಳು ತಾವು ಮನೆಯಿಂದ ಓಡಿ ಬಂದವರು ಇಲ್ಲಿ ಸಿಕ್ಕಿದ್ದೇವೆ, ಬಹುಶಃ ಮನೆಯವರು ಮಿಸ್ಸಿಂಗ್‌ ಕೇಸ್‌ ಹಾಕಿದ್ದಾರೋ ಇಲ್ಲವೋ ವಿಚಾರಿಸಬೇಕು ಎಂದು ಹೇಳಿಕೊಂಡಿದ್ದರು.

ಈ ಮಕ್ಕಳನ್ನು ಬಂಧಿಸಿದಾಗ ಬಹುತೇಕರು ಹೇಳಿದಂತೆ ಸಂಜೆ ಹೊತ್ತು ನ್ಯಾಯಾಧೀಶರ ಮನೆಯ ಹತ್ತಿರಕ್ಕೆ ಒಯ್ದು ಆ ನಂತರ ಜೈಲಿಗೆ ಒಯ್ದರು ಎಂಬುದು ಏನೇನೋ ಪ್ರಶ್ನೆಗಳಿಗೆ ಕಾರಣವಾಗಿತ್ತು. ಆ ನಂತರದಲ್ಲೂ (ನ್ಯಾಯಾಂಗ ಬಂಧನದಲ್ಲಿದ್ದರೂ) ಕಾಲಕಾಲಕ್ಕೆ ಮ್ಯಾಜಿಸ್ಟ್ರೇಟರನ್ನು ನೋಡಲು ಹೊರಗೆ ಹೋಗಿಯೇ ಇಲ್ಲ ಅಥವಾ ಕಾರಾಗೃಹದಲ್ಲೇ ಇದ್ದ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆಯಿದ್ದು ಅಲ್ಲಿಗೆ ಕರೆ ಬಂದರೂ ಅಲ್ಲಿ ಅವರಾಡುವ ಭಾಷೆ ಅರ್ಥವಾಗುವುದೇ ಇಲ್ಲ, ಅಲ್ಲಿಗೆ ಹೋಗುವುದು ಬರುವುದಷ್ಟೇ ಆಗುತ್ತದೆ ಎಂದು ನಮ್ಮ ತಂಡದಲ್ಲಿದ್ದ ವಕೀಲೆ ಶೀಲಾ ರಾಮನಾಥನ್‌ ಅವರ ಬಳಿ ಹುಡುಗರು ಹೇಳಿಕೊಂಡಿದ್ದರು.

ನಮ್ಮ ಗುಂಪಿನ ಚರ್ಚೆಯಲ್ಲಿ ನಿರ್ಧಾರವಾದಂತೆ ಮಕ್ಕಳು ಕೊಟ್ಟಿದ್ದ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಮುಂದಾದೆವು. ಸಂಗಡಿಗರಾದ ನಾಗಸಿಂಹ, ಶ್ವೇತಾ, ಸುಮನಾ ಮತ್ತು ನಾನು ಕರೆಗಳನ್ನು ಮಾಡಿದೆವು. ಸಾಕಷ್ಟು ಸಂಖ್ಯೆಗಳು ಚಾಲ್ತಿಯಲ್ಲಿರಲಿಲ್ಲ. ಕೆಲವರು ನೀವ್ಯಾರು, ಪೊಲೀಸರಾ, ನಿಮಗೆ ಈ ನಂಬರ್‌ ಕೊಟ್ಟವರಾರು, ಅವನು ಅಲ್ಲೇ ಬಿದ್ದಿರಲಿ, ಮನೆ ಹೆಸರು ಹಾಳು ಮಾಡಿದ ಎಂದವರು, ಅವರ ಮಗನ ಹೆಸರು ಹೇಳಿದ ಕೂಡಲೇ ಪೋನ್‌ ಸ್ವಿಚ್‌ ಆಫ್‌ ಮಾಡಿದವರು, ಜಾಮೀನು ಸಿಗುತ್ತಾ ಎಂದು ಆಶಿಸಿದವರು, ಈಗಲೇ ಬರ್ತೀನಿ ಏನಾದರೂ ಮಾಡಿ ಬಿಡಿಸಿಕೊಡಿ, ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದು ಹೇಳಿದವರೂ ಇದ್ದರು.

ಕಳೆದು ಹೋದ ಮಕ್ಕಳ ಪೋಷಕರ ಸಭೆ

ನಮ್ಮ ಗುಂಪಿನಲ್ಲಿ ನಿರ್ಧರಿಸಿದಂತೆ ನಮ್ಮ ಕರೆಗಳನ್ನು ಸ್ವೀಕರಿಸಿದ ಮತ್ತು ನಮ್ಮೊಡನೆ ಮಾತನಾಡಲು ಸಿದ್ಧ ಎಂದು ಹೇಳಿದ ಪೋಷಕರೊಡನೆ ಒಂದು ಸಭೆಯನ್ನು ಸಿಕ್ರಂ, ಸಾಥಿ, ಎಚ್‌.ಆರ್‌.ಎಲ್‌.ಎನ್‌. ಮತ್ತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಜಂಟಿಯಾಗಿ ಏರ್ಪಡಿಸಿದೆವು. ೧೩ ಶುಕ್ರವಾರ ಜೂನ್‌ ೨೦೦೮. ಮಕ್ಕಳ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಕೆಲವು ಸಹೃದಯರು ಸೇರಿದ್ದೆವು. ಆ ದಿನ ಸಭೆಗೆ ಬಂದ ಕೆಲವು ಪೋಷಕರು ತೋಡಿಕೊಂಡ ವಿಚಾರಗಳು ಮನಕಲಕಿತು.

ಅನೇಕರು ಹೆದರಿದ್ದರು. ತಮ್ಮ ಮಕ್ಕಳು ಕಳೆದು ಹೋಗಿದ್ದಾರೆಂದೇ ಅವರು ಪೊಲೀಸರ ಬಳಿಗೆ ಮೊದಮೊದಲು ಹೋಗಿದ್ದೆಂದೂ, ಆದರೆ ಮಕ್ಕಳು ಪೊಲೀಸರ ವಶದಲ್ಲಿರುವುದು ತಿಳಿದಾಗ ಗಾಬರಿಯಾಗಿತ್ತೆಂದು ಹೇಳಿದರು. ಈ ಸಭೆಗೆ ಬಂದಿರುವುದು ಪೊಲೀಸರಿಗೆ ಗೊತ್ತಾದರೆ ಏನಾಗುತ್ತದೆ, ತಮ್ಮ ಮಕ್ಕಳು ಬಿಡುಗಡೆ ಆಗಲು ಸಾಧ್ಯವೆ, ವಕೀಲರಿಗೆ ತಾವು ಬಹಳ ಹಣ ಕೊಟ್ಟಿರುವುದಾಗಿಯೂ ಆದರೆ ತಮ್ಮ ಮಕ್ಕಳಿಗೆ ಜಾಮೀನು ಸಿಕ್ಕಿಲ್ಲ ಏಕೋ ಏನೋ ಎಂದು ನೊಂದುಕೊಂಡರು. ಬಹುತೇಕರು ಆರ್ಥಿಕವಾಗಿ ದುರ್ಬಲರಾಗಿದ್ದ ಪೋಷಕರೇ ಆಗಿದ್ದರು.

ಈ ವಿಚಾರಗಳನ್ನು ಹಿರಿಯ ನ್ಯಾಯಧೀಶರ ಮುಂದೆ ಹೇಳಲು ಸಾಧ್ಯವೆ ಎಂಬ ಆಹ್ವಾನ ಕೊಟ್ಟೆವು. ಹಿಂದೆ ಮುಂದೆ ನೋಡಿ ಕೆಲವರು ಬರುವುದಾಗಿ ಒಪ್ಪಿಕೊಂಡರು. ನಾವು ಅಹವಾಲನ್ನು ನ್ಯಾಯಮೂರ್ತಿ ಗೋಪಾಲಗೌಡರ ಬಳಿಗೆ ಒಯ್ದೆವು.

ನ್ಯಾಯಮೂರ್ತಿಗಳೊಡನೆ ಸಭೆ

೨೦೦೮, ಶನಿವಾರ ಜೂನ್ ೨೮ರಂದು ನ್ಯಾಯಮೂರ್ತಿ ಗೋಪಾಲಗೌಡರು ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ನ್ಯಾಯದೇಗುಲದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಗೆ ಬಂದರು. ಸಭೆಗೆ ಮಾನವ ಹಕ್ಕುಗಳ ಆಯೋಗದ ಎಂ.ಎನ್.‌ ರೆಡ್ಡಿಯವರಿಗೆ, ಬೆಂಗಳೂರು ನಗರದ ಪೊಲೀಸ್‌ ಆಯುಕ್ತರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ, ಮಕ್ಕಳ ನ್ಯಾಯ ಮಂಡಳಿಯ ಅಧ್ಯಕ್ಷರಿಗೆ, ಕಾರಾಗೃಹಗಳ ಮಹಾ ನಿರ್ದೇಶಕರಿಗೆ ಆಹ್ವಾನ ಹೋಗಿತ್ತು. ದುರಾದೃಷ್ಟವಶಾತ್‌, ಖಂಡಿತಾ ಬರುತ್ತೇವೆ ಎಂದು ಹೇಳಿದ್ದ ಏಳು ಪೋಷಕರು ಬರಲೇಯಿಲ್ಲ. ಅವರಿಗೆಲ್ಲ ಮೊದಲೇ ನಿರ್ಧರಿಸಿದಂತೆ ದೂರವಾಣಿ ಮೂಲಕ ನೆನಪಿಸಲಾಗಿತ್ತು! ಒಬ್ಬರೇ ಒಬ್ಬರು ಪೋಷಕರು ಸಭೆ ಮುಗಿಯುವ ಹಂತದಲ್ಲಿದ್ದಾಗ ಬಂದರು. ತಮ್ಮ ಅಹವಾಲನ್ನು ನ್ಯಾಯಮೂರ್ತಿಗಳ ಮುಂದೆ ಹೇಳಿಕೊಂಡರು.

ನಮ್ಮ ತುಡಿತ, ಆದರೆ ಅಸಹಾಯಕ ನೋಟ ನ್ಯಾಯಮೂರ್ತಿಗಳಿಗೆ ಅರ್ಥವಾಗಿತ್ತು. ಆ ದಿನದ ಸಭೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾತ್ರ ಬಂದರು. ನ್ಯಾಯಾಧೀಶ ಗೋಪಾಲಗೌಡರೇ ಸ್ವತಃ ದೂರವಾಣಿ ಕರೆ ಮಾಡಿ ಪರಪ್ಪನ ಅಗ್ರಹಾರದ ಕಾರಾಗೃಹದ ಅಧಿಕಾರಿಗಳಿಗೆ ತಕ್ಷಣ ಬರಲು ಆಜ್ಞಾಪಿಸಿದರು. ಅವರು ಬಂದರು. (ಆ ದಿನ ಕಾರಾಗೃಹದಲ್ಲಿ ಖೈದಿಗಳಿಂದ ನಾಟಕ ಕಾರ್ಯಕ್ರಮವಿತ್ತಂತೆ). ನಾವು ಸಮಸ್ಯೆಯ ಬಗ್ಗೆ ಹೆಚ್ಚೇನೂ ಹೇಳಬೇಕಿರಲಿಲ್ಲ. ನ್ಯಾಯಮೂರ್ತಿಗಳೇ ಮಾತನಾಡಿದರು. ಯಾಕೆ ಹೀಗಾಯಿತು, ಇದನ್ನು ತಡೆಯುವ ಜವಾಬ್ದಾರಿ ಯಾರದು, ಮಕ್ಕಳನ್ನು ಯಾಕೆ ಮಕ್ಕಳ ನ್ಯಾಯ ಮಂಡಳಿ ಮುಂದೆ ತೆಗೆದುಕೊಂಡು ಹೋಗಲಿಲ್ಲ, ವಯಸ್ಸಿನ ದೃಢೀಕರಣದ ಬಗ್ಗೆ ಪೊಲೀಸರಿಗೆ ಯಾಕೆ ಮಾಹಿತಿಯಿಲ್ಲ ಎಂಬ ಮೂಲಭೂತ ಪ್ರಶ್ನೆಗಳನ್ನು ಅವರೇ ಎತ್ತಿಕೊಂಡು ವಿಶ್ಲೇಷಿಸಿದರು.

ಸಭೆಯ ಕೊನೆಯ ಹೊತ್ತಿಗೆ ಮಾರನೇ ದಿನವೇ ಬೆಂಗಳೂರಿನ ಎಲ್ಲ ಸೆಷನ್ಸ್‌ ನ್ಯಾಯಾಲಯಗಳ ನ್ಯಾಯಾಧೀಶರೊಡನೆ ನ್ಯಾಯದೇಗುಲದಲ್ಲಿ ಸಭೆ ನಡೆಸಿ ಈ ಕುರಿತು ವಿಶ್ಲೇಷಿಸಿ ಕ್ರಮ ಕೈಗೊಳ್ಳಬೇಕೆಂದು ಎಂದು ಮೌಖಿಕ ಸೂಚನೆ ನೀಡಿದರು. ಸಭೆಗೆ ನಾನು, ನೀನಾ ನಾಯಕ್‌ ಬರಬೇಕೆಂದು ನಿರ್ಧಾರವಾಯಿತು.

ಅಂತಿಮವಾಗಿ ಮತ್ತೊಮ್ಮೆ ಕಾರಾಗೃಹಕ್ಕೆ ಭೇಟಿ ನೀಡಿ ಸಂಪೂರ್ಣವಾಗಿ ತನಿಖೆ ನಡೆಸುವ ಸಲುವಾಗಿ ಈ ಕೆಳಗಿನವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.

ಶ್ರೀ ವೀರಣ್ಣ ಜಿ. ತಿಗಡಿ
ಶ್ರೀ ವಾಸುದೇವ ಶರ್ಮಾ, ಸಿ.ಆರ್.ಟಿ.
ಶ್ರೀ ಪ್ರಕಾಶ್‌, ಸಿಕ್ರೆಂ
ಶ್ರೀಮತಿ ನೀನಾ ನಾಯಕ್‌ 

೨೯ ಭಾನುವಾರ ಜೂನ್‌ ೨೦೦೮. ಆಹ್ವಾನಿತ ನ್ಯಾಯಾಧೀಶರೆಲ್ಲರೂ ತಮ್ಮ ಬಸ್‌ನಲ್ಲಿ ಬಂದಿಳಿದು ಸಭಾಭವನದಲ್ಲಿ ಕುಳಿತರು. ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳು ಸಭೆಯ ವಿಚಾರವನ್ನು ಪ್ರಸ್ತಾಪಿಸಿದರು. ಆ ದಿನ ನಾನು ಉದ್ವಿಗ್ನನಾಗಿದ್ದೆ. ನೀನಾ ನಾಯಕ್‌ ಅವರು ಹೆಚ್ಚೂ ಕಡಿಮೆ ನನ್ನ ತೊಡೆಯ ಮೇಲೆ ಕೈಯಿಟ್ಟು ಶಾಂತವಾಗಿರು, ಈಗಲೇ ಏನೂ ಹೇಳಬೇಡ, ಸಮಾಧಾನವಾಗಿರು ಎಂದು ಹೇಳುತ್ತಲೇ ಇದ್ದರು.

ವಿಚಾರದ ಚರ್ಚೆ ಆರಂಭವಾಗುವ ಮೊದಲೇ ಎಲ್ಲ ನ್ಯಾಯಧೀಶರ ಪರವಾಗಿ ಒಬ್ಬರು ಮಾತನಾಡಿ ತಮ್ಮೆದುರು ಏನು ಮಾಹಿತಿ ಬರುತ್ತದೋ ಮತ್ತು ಅವುಗಳಿಗೆ ಅನುಗುಣವಾಗಿ ಯಾವ ದಾಖಲೆಗಳು ಸಲ್ಲಿಕೆಯಾಗುತ್ತದೋ ಹಾಗೂ ಯಾವ ಹೇಳಿಕೆಗಳು ಬರುತ್ತದೋ ಅದನ್ನು ಆಧರಿಸಿ ನಿರ್ಧಾರಗಳು ಆಗುತ್ತದೆ. ನಾನು ತಾಳ್ಮೆ ಕಳೆದುಕೊಂಡಿಲ್ಲ ಎಂದುಕೊಂಡೇ ಕೆಲವು ಬಿಸಿಬಿಸಿ ಮಾತುಗಳನ್ನಾಡಿಬಿಟ್ಟೆ.

ನೀನಾ ನಾಯಕ್‌ ಶಾಂತವಾಗಿ ವಿವರಿಸಿದರು. ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಮಕ್ಕಳನ್ನು ಅಥವಾ ಮಕ್ಕಳಂತೆ ಕಾಣುವವರನ್ನು ಕುರಿತು ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಮಕ್ಕಳ ನ್ಯಾಯ ಕಾಯಿದೆ ಉಲ್ಲೇಖಿಸಿ ಹೇಳಿದರು. ಸುಮಾರು ಎರಡು ಗಂಟೆಗಳ ಮಾತುಕತೆಯ ನಂತರ ಎಂತಹ ದುರಸ್ಥಿ ಕ್ರಮ ಕೈಗೊಂಡರೆ ಮಕ್ಕಳನ್ನು ಕಾರಾಗೃಹದಿಂದ ಬೇರೆಡೆಗೆ (ಬಾಲಕರ ನಿರೀಕ್ಷಣಾ ಮಂದಿರ) ವರ್ಗಾಯಿಸಲು ಸಾಧ್ಯ ಎಂದು ಕಂಡುಕೊಳ್ಳಲು ನಿರ್ಧರಿಸಲಾಯಿತು.

ಸಭೆಯ ನಂತರ ನಾವೆಲ್ಲಾ ಪಕ್ಕದಲ್ಲೇ ಇರುವ ಮಾವಳ್ಳಿ ಟಿಫಿನ್‌ ರೂಮ್‌ನಲ್ಲಿ ಊಟ ಮಾಡಿದೆವು. ಊಟದ ಮಧ್ಯ ನ್ಯಾಯಾಧೀಶರುಗಳೊಡನೆ ಅನೌಪಚಾರಿಕ ಮಾತುಕತೆ ಮುಂದುವರಿಯಿತು. ವ್ಯಕ್ತಿಗಳ ದಸ್ತಗಿರಿ, ಅವರಿಂದ ಕದ್ದ ವಸ್ತುಗಳು ಅಥವಾ ಅಪರಾಧ ಕುರಿತು ಸಾಕ್ಷಿ ಸಂಗ್ರಹ, ಅವರನ್ನು ನ್ಯಾಯಧೀಶರ ಮುಂದೆ ಹಾಜರು ಪಡಿಸುವಲ್ಲಿ ಇರುವ ಸಂಕೀರ್ಣತೆ, ಜಾಮೀನು, ನ್ಯಾಯಾಂಗ ಬಂಧನ, ಸಿಬ್ಬಂದಿ ಕೊರತೆ, ಇತ್ಯಾದಿ ಕುರಿತು ಚರ್ಚೆ ಬಹಳ ಹೊತ್ತು ಸಾಗಿತು.

ಮುಂದಿನೆರೆಡು ವಾರದಲ್ಲಿ ಒಂದು ವಿಸ್ತೃತವಾದ ವರದಿ ತಯಾರಿಸಿದೆ. ಅದರಲ್ಲಿ ಕೆಲವು ಸಲಹೆಗಳನ್ನು ಕೂಡಿಸಿ ಸರ್ಕಾರದ ಪ್ರಮುಖರಿಗೆ ನ್ಯಾಯಾಲಯಕ್ಕೆ ಕಳುಹಿಸಿದೆ.

  • ಜೈಲು ಕಾಯ್ದೆ, ಕೈದಿಗಳ ಕಾಯ್ದೆ ಮತ್ತು ಕರ್ನಾಟಕ ಜೈಲು ಕೈಪಿಡಿ 1978, ಜೈಲುಗಳಿಗೆ ಭೇಟಿ ನೀಡುವವರಿಗೆ ಇರುವ ಮಾರ್ಗದರ್ಶಿ ಸೂತ್ರಗಳನ್ನು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಬದ್ಧತೆಗಳು, ಮಕ್ಕಳ ನ್ಯಾಯ ಕಾಯ್ದೆಯ ನಿಬಂಧನೆಗಳ ಆಶಯಗಳನ್ನು ಅನುಸರಿಸಿ ತಕ್ಷಣ ತಿದ್ದುಪಡಿ ಮಾಡಬೇಕಾಗಿದೆ.
  • ಕಾರಾಗೃಹಗಳಲ್ಲಿ ದಾಖಲಾಗಿರುವ ಶಂಕಿತ ಮಕ್ಕಳು ಎಂದು ಹೇಳಲಾಗುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಅವರನ್ನು ಅಲ್ಲಿಂದ ಬಿಡುಗಡೆ ಮಾಡಿಸಿ ಅಥವಾ ಮಕ್ಕಳ ವೀಕ್ಷಣಾಲಯಕ್ಕೆ ತಕ್ಷಣ ರವಾನಿಸಿ ಅಲ್ಲಿ ಮಕ್ಕಳ ನ್ಯಾಯ ಮಂಡಳಿಯೆದುರು ಹಾಜರುಪಡಿಸಿ.
  • ಮಕ್ಕಳ ವಯಸ್ಸನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಿ.
  • ಕಾರಾಗೃಹಗಳಲ್ಲಿರಬಹುದಾದ ಮಕ್ಕಳಿಗೆ ಕಾನೂನು ನೆರವು ಸೇವೆಗಳ ಪ್ರಾಧಿಕಾರದಿಂದ ಕಾನೂನು ನೆರವು ಒದಗಿಸಿ.
  • ಕಾರಾಗೃಹಗಳಲ್ಲಿರುವ ಮಕ್ಕಳ ಮನೆ ಸಂಪರ್ಕಿಸಲು ಅಥವಾ ಹುಡುಕಲು ಸ್ವಯಂಸೇವಾ ಸಂಘಟನೆಗಳ ಸಂಪರ್ಕ ಬೆಳೆಸಿ.
  • ಕಾರಾಗೃಹಗಳಲ್ಲಿ ಮಕ್ಕಳಿರುವ ಸಾಧ್ಯತೆಗಳನ್ನು ಪರಿಶೀಲಿಸಲು ಮಕ್ಕಳ ನ್ಯಾಯ ಮಂಡಳಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧಿಕೃತ ಅನುಮತಿ ನೀಡಬೇಕು.
  • ಜೈಲಿನಲ್ಲಿರಬಹುದಾದ ಮಕ್ಕಳ ವಯಸ್ಸಿನ ಪರಿಶೀಲನೆಗಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವಿಶೇಷ ಪ್ರೊಬೇಷನ್‌ ಅಧಿಕಾರಿಯನ್ನು ಒದಗಿಸಬೇಕು.
  • ಇಂಗ್ಲಿಷ್, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಕೆಳಗಿನ ಮಾಹಿತಿಯೊಂದಿಗೆ ಬೋರ್ಡ್ ಅನ್ನು ಕಾರಾಗೃಹಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಮತ್ತು ಜೈಲಿನಲ್ಲಿರುವ ಸಂದರ್ಶಕರ ಕೋಣೆಯಲ್ಲಿ ಪ್ರದರ್ಶಿಸಬೇಕು. ‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಜೈಲಿನಲ್ಲಿರಿಸಬಾರದು. ಸಹಾಯಕ್ಕಾಗಿ ತಕ್ಷಣ ಸಂಪರ್ಕಿಸಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಿಭಾಗ, ದೂರವಾಣಿ ಸಂಖ್ಯೆ ಮತ್ತು ವಿಳಾಸ ಹೊಂದಿರುವ ಸಂಪರ್ಕ ವ್ಯಕ್ತಿಯ ಹೆಸರುʼ.

ಕೆಲವೇ ದಿನಗಳಲ್ಲಿ ಕಾರಾಗೃಹದಲ್ಲಿದ್ದ ಶಂಕಿತ ಮಕ್ಕಳ ವಯಸ್ಸನ್ನು ನಿರ್ಧರಿಸಲು ಸರ್ಕಾರಿ ಆಸ್ಪತ್ರೆಗಳಿಗೆ ತಂಡಗಳಲ್ಲಿ ಕರೆದೊಯ್ಯಲಾಯಿತು ಎಂಬ ಸುದ್ದಿ ಬಂದಿತು. ಒಂದಷ್ಟು ಮಕ್ಕಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ಬಾಲಕರ ನಿರೀಕ್ಷಣಾ ನಿಲಯಕ್ಕೆ ವರ್ಗಾಯಿಸಲಾಯಿತು. ಬಹುತೇಕ ಮಕ್ಕಳನ್ನು ನ್ಯಾಯಾಧೀಶರುಗಳ ಮುಂದೆ ಹಾಜರುಪಡಿಸಿ ಜಾಮೀನಿನ ಮೇಲೆ ಹೊರತರಲಾಯಿತು. ನಾನು ಭೇಟಿಯಾಗಿದ್ದ ಎಲ್ಲ ಹುಡುಗರಿಗೆ ನನ್ನ ಮೊಬೈಲ್‌ ಸಂಖ್ಯೆ ನೀಡಿದ್ದೆ. ಒಬ್ಬ ಹುಡುಗ ಕರೆ ಮಾಡಿದ್ದ. ಬಿಡುಗಡೆಯಾಯಿತು. ತಾನು ತನ್ನ ಬದುಕು ಕಂಡುಕೊಳ್ಳಲು ಹೊರಟಿದ್ದೇನೆ ಎಂದು ಹೇಳಿದ್ದ.

ಈ ಎಲ್ಲ ಅನುಭವ ಚಿಂತನೆಗಳನ್ನು ಆಧರಿಸಿ ಸಾರ್ವಜನಿಕರ ಅವಗಾಹನೆಗೆಂದು ಒಂದು ಲೇಖನ ಬರೆದಿದ್ದೆ. ಅದನ್ನು ಆಗ ಸುಧಾ ವಾರ ಪತ್ರಿಕೆಯಲ್ಲಿ ಬಿ ಎಂ ಹನೀಫ್‌ ಮುಖಪುಟ ಲೇಖನವಾಗಿ ಪ್ರಕಟಿಸಿದ್ದರು (೪ ಡಿಸೆಂಬರ್‌ ೨೦೦೮). ಕೊನೆಯಲ್ಲಿ ನನ್ನ ಸಂಪರ್ಕ ಸಂಖ್ಯೆ ಇತ್ತು. ಏನಾಗಿರಬಹುದು ಊಹಿಸಿಕೊಳ್ಳಿ. ನಮ್ಮ ರಾಜ್ಯದ ಬೇರೆ ಬೇರೆ ಕಡೆಗಳಿಂದ ಅನೇಕರು ಫೋನು ಮಾಡಿ ಸಹಾಯ ಕೇಳಿದ್ದರು. ಸಹಾಯ ಮಾಡಲು ತಾವು ಸಿದ್ಧ ಎಂದು ಕೆಲವು ವಕೀಲರ ಮುಂದೆ ಬಂದಿದ್ದರು. ಕಕ್ಕುಲತೆಯಿಂದ ಈ ವಿಚಾರ ಕುರಿತು ಮಾತನಾಡಿದವರು ಬೆಂಗಳೂರಿನ ರಾಜ ಎನ್ನುವ ಹಿರಿಯರು. ಅವರು ಈಗಲೂ ಆಗಾಗ್ಗೆ ಇಂತಹ ವಿಚಾರಗಳು ವರದಿಗಳಾದಾಗ ಫೋನ್‌ ಮಾಡಿ ಮಾತನಾಡುತ್ತಾರೆ. 

೨೦೦೮ರ ಡಿಸೆಂಬರ್‌ ಕೊನೆಯ ವಾರ  ದೂರದ ಊರಿನಲ್ಲಿದ್ದ ಒಬ್ಬ ಹಿರಿಯ ಗೆಳೆಯರ ಫೋನ್‌ ಬಂದಿತ್ತು, ಅವರಿಗೆ ಈ ಎಲ್ಲ ಬೆಳವಣಿಗೆಗಳು ತಿಳಿದಿತ್ತು. ‘ವಾಸು ಎಲ್ಲಿದ್ದೀಯ? ಒಂದೆರಡು ತಿಂಗಳು ಏನೂ ಮಾಡದೆ ಸುಮ್ಮನಿದ್ದುಬಿಡು. ಎಲ್ಲಾದರೂ ಹೋಗಲು ಆಗುತ್ತದೆಯೋ ನೋಡು. ಹೆದರಿಸಕ್ಕಲ್ಲ. ನಮಗೆ ನೀನು ಬೇಕು ಅದಕ್ಕೆ.’ ಮನೆಯಲ್ಲಿ ಮತ್ತು ಸಹೋದ್ಯೋಗಿಗಳೊಡನೆ ಮಾತನಾಡಿದೆ. ಇದು ನನ್ನ ಊಹೆಯಲ್ಲ ಅಥವಾ ಹ್ಯಾಲುಸಿನೇಷನ್‌ ಅಲ್ಲ ಎಂದು ಖಚಿತಪಡಿಸಿಕೊಳ್ಳಬೇಕಿತ್ತು!

ಜೈಲಿಗೆ ಮೂರನೇ ಭೇಟಿ

ನಾನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನಾಗಿದ್ದಾಗ ೨೦೧೨ರಲ್ಲಿ ಸಿಕ್ಕಿದ ಒಂದು ಮಾಹಿತಿ ಆಧರಿಸಿ ೨೦೧೨ ಜೂನ್ ೧೩ರಂದು ಮೂರನೇ ಬಾರಿ ಪರಪ್ಪನ ಅಗ್ರಹಾರದ ಕಾರಾಗೃಹಕ್ಕೆ ಭೇಟಿ ಕೊಟ್ಟಿದ್ದೆ. ನನ್ನ ಜೊತೆಯಲ್ಲಿ ಒಬ್ಬ ವಕೀಲರು ಮತ್ತು ಸರ್ಕಾರಿ ದಂತವೈದ್ಯರಿದ್ದರು. ಸುಮಾರು ೨೨ ಹುಡುಗರು ೧೮ರೊಳಗಿರಬಹುದೆಂಬ ಅನುಮಾನವನ್ನು ದಂತವೈದ್ಯರು ಇತ್ತಿದ್ದರು. ಇಂತಹದು ಮರುಕಳಿಸಬಾರದೆಂದು ಆಯೋಗದ ಮೂಲಕ ಸರ್ಕಾರಕ್ಕೆ ಸೂಚನೆಗಳನ್ನು ಕೊಟ್ಟಿದ್ದೆವು.

ಈ ಸಂದರ್ಭಕ್ಕೆ ಮೊದಲು ೨೦೧೦ರ ಅಕ್ಟೋಬರ್‌ ೨೫ರಂದು ಮಕ್ಕಳ ಹಕ್ಕುಗಳನ್ನು ಕುರಿತು ಚೈಲ್ಡ್‌ಲೈನ್‌ ೧೦೯೮ರ ಕಾರ್ಯಕ್ರಮದಲ್ಲಿ ಒಬ್ಬ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರೊಡನೆ ವೇದಿಕೆ ಹಂಚಿಕೊಳ್ಳುವ ಪ್ರಸಂಗ ಬಂದಿತ್ತು. ಜೈಲಿನಲ್ಲಿದ್ದ ಮಕ್ಕಳನ್ನು ಕುರಿತು ನಾನು ನಡೆಸಿದ್ದ ಪರಿಶೀಲನೆಗಳು, ಕೊಟ್ಟಿದ್ದ ಸಲಹೆಗಳ ಕುರಿತು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕಾರ್ಯಕ್ರಮ ಆರಂಭವಾಗುವವರೆಗೆ ನನ್ನೊಡನೆ ಔಪಚಾರಿಕ ಕುಶಲೋಪರಿ ಮಾತನಾಡಿದ ಅವರು, ವೇದಿಕೆಯ ಮೇಲೆ ತಮ್ಮ ಭಾಷಣದಲ್ಲಿ ನನ್ನನ್ನು ನೋಡಿಕೊಂಡೇ ಇಂಗ್ಲಿಷ್‌ನಲ್ಲಿ ಹೇಳಿದ ಮಾತು ಈಗಲೂ ನೆನಪಿದೆ, ʼಕೆಲವರಿಗೆ ತೋಳ ಬಂತು ತೋಳ ಅಂತ ಕೂಗುವ ಅಭ್ಯಾಸ… ಏನು ಮಾಡುವುದು. ಅದನ್ನ ಅವರು ತಿದ್ದಿಕೊಳ್ಳಬೇಕುʼ ನಾನು ಮುಗುಳ್ನಕ್ಕಿದ್ದೆ.  

ಆ ದಿನ ಮನೆಗೆ ಬಂದು ನನ್ನ ಅನಿಸಿಕೆಗಳನ್ನು ತೋಡಿಕೊಂಡೆ.

ತೋಳ ತೋಳ ತೋಳ!

‘ತೋಳ ತೋಳ ತೋಳ!’
ನಿಜವಾಗಿಯೂ ತೋಳ!

ನಾಲಿಗೆ ಚಾಚಿ
ಬಾಚಿ ಹಲ್ಲು ಚುಚ್ಚಿ
ರಕ್ತ ಸುರಿಸಿ
ಕಚ್ಚಿ ಕಚ್ಚಿ ಮಾಂಸ ಎಳೆದು
ಮೂಳೆ ಮುರಿದು
ಚಪ್ಪರಿಸುತಿದೆ.
ಹತ್ತಿರ ಬಂದರೆ ಹುಶಾರೆಂದು
ಕೆಂಡ ಕಣ್ಣು ಹೆದರಿಸುತಿದೆ.
ಅಬ್ಬ ತೋಳ!

‘ತೋಳ ತೋಳ ತೋಳ!’
ಎಷ್ಟು ಕೂಗಿದರೂ ಬರಲಿಲ್ಲ ಯಾರೂ
ಮಾರು ದೂರದಲ್ಲಿದೆ ಜನರಿರುವ ಊರು
ಆದರೂ ಯಾರು ಬರರು!
ತೋಳ ಹೊಡೆಯಲು
ಕೋಲು, ಕತ್ತಿ, ಕುಡುಗೋಲು
ಎಂದಿಗೂ ತರರು.
ಯಾರೋ ಎಂದೋ ಬರೆದ ಕತೆಯನೋದಿ
ಅದಕೇ ಜೋತು ಬಿದ್ದಿಹರು.
‘ತೋಳವೂ ಇಲ್ಲ, ತುಡುಗೂ ಇಲ್ಲ
ಹುಡುಗರ ಕೂಗೆಲ್ಲಾ ಬರೀ ಸುಳ್ಳು’
ಸತ್ಯ ಕಿವಿಗೆ ಬಡಿದು
ಮಿದುಳು ಅದುರಿದರೂ
ಬೆಚ್ಚನೆಯ ಹಾಸಿಗೆಯ ಬಿಟ್ಟೇಳರು.
ಕಣ್ಣು ಬಿಟ್ಟು ಸಾಕ್ಷಿ ನೋಡರು.

‘ತೋಳ ತೋಳ ತೋಳ!’
ಊರ ರಾಜರು ಸಾಕಿದ ತೋಳ.
ರಾಜ ಭಟರೇ ಬಿಟ್ಟ ತೋಳ.
ಊರ ಜನರಿಗೆ ಹೆದರದ ತೋಳ.
ಎಲ್ಲರ ಎದುರೇ ಹಲ್ಲನು ಬಿಟ್ಟು
ಕಣ್ಣ ತಿರುಗಿಸಿ ನಾಲಗೆ ಚಾಚಿ
ಕಂಡವರನೆಲ್ಲಾ ಬಗೆಯುವ ತೋಳ

‘ತೋಳ ತೋಳ ತೋಳ!’
ಓ! ಮತ್ತೆ ಅದೇ ಹಳೇ ಕತೆ.
ಗೊತ್ತು ನಮಗೆ,
ತೋಳ ಬಂದೇ ಬರುವುದು
ಕುರಿಯ ಹೊಡೆಯುವುದು.
ಸುಮ್ಮನೆ ಕೂಗುವುದ್ಯಾತಕೆ?
ಹೋದರೆ ಹೋಗಲಿ ಒಂದು ಕುರಿ
ಯಾರದೋ ಮರಿ.
ತಪ್ಪಿಸಲಿಕ್ಕಾಗುತ್ತದೆಯೇ ರಾಜರ ಈ ಪರಿ.
ಸುಮ್ಮನೇಕೆ ಕಂಠ ಶೋಷಣೆ?
ಹೇಳುವುದೇ ಆದರೆ.
ಕೂಗುವುದೇ ಆದರೆ.
ಮೆಲ್ಲಗೆ ಹೇಳು
ಯಾರಿಗೂ ಕೇಳಿಸದಂತೆ.
‘ತೋಳ ತೋಳ ತೋಳ!’

‍ಲೇಖಕರು ವಾಸುದೇವ ಶರ್ಮ

January 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಬಹುರೂಪಿʼಯ ಪ್ರಕಟಣೆ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಭಾರತಿ ಬಿ ವಿ ಅವರ ಪ್ರವಾಸ ಕಥನ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ...

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೆಸರಿನಲ್ಲೇನಿದೆ ಎಂದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This