ಕಾರ್ ಕಾರ್ ಕಾರ್ ಕಾರ್ ‘ಹೆಲ್’ ನೋಡಿ ಕಾರ್!…

-ಸೂತ್ರಧಾರ ರಾಮಯ್ಯ

ಉದ್ಯಾನ ನಗರಿಯಲ್ಲಿ, ಒಂದಾನೊಂದು ಕಾಲದಾಗ ಏಟೊಂದು ರೋಡಿತ್ತಾ. ಏಟೊಂದು ರೋಡಿತ್ತಾ, ರೋಡ್ ಬದಿಗೆ ಪುಟ್ ಪಾತಿತ್ತ, ಅಲ್ಲಲ್ಲಿ ಒಂದೆರಡು ಕಾರಿತ್ತಾ. ಸಾರಿಗೆಗೆ ಬಿ.ಟಿ.ಎಸ್ ಬಸ್ಸಿತ್ತಾ. ಜಗದಗಲ ರಸ್ತೆಗಳು, ಇಕ್ಕೆಲಗಳಲ್ಲಿ ವೃಕ್ಷಗಳು, ಬಸ್ಸಿನಲ್ಲ್ಲಿ ಕೂತು ಹಸಿರು ಸೊಬಗ ನೋಡುತ್ತಾ, ಆನಂದದಿಂದ ಪಯಣಿಸುತ್ತಿದ್ದದ್ದನ್ನು ನೆನೆಸಿಕೊಂಡು “ಅಯ್ಯೋ ಹೋಯಿತೆ ಆ ನಾಕ !” ಈಗ ದಿನನಿತ್ಯ ಜಾಮ್, ಹೊಗೆ,ಶಬ್ದ ಮಾಲಿನ್ಯ, ಬಿರುಬಿಸಿಲ ದಗೆಗೆ ಬೇಸತ್ತು  “ಅಯ್ಯೋ ಬಂದಿತೆ ಈ ನರಕ!”  ಅನ್ನುತ್ತಾ ‘ಕಾರ್’ ಕೊಳ್ತಾರೆ ಹಿರಿಯ , ಕಿರಿ-ಕಿರಿಯ ಬೆಂಗಳೂರು ಜನಾ! ‘ಕಾರ್ ಕೊಳಚೆ ಪ್ರದೇಶ’ ಅಂತ ಡಿಕ್ಲೇರ್ ಮಾಡೋದಷ್ಟೆ ಉಳಿದಿರೋ ಸಂ-ಗತಿ.

ಬೆಂಗಳೂರಿನಲ್ಲಿ ಇರುವಷ್ಟು ವಾಹನ ದಟ್ಟಣೆ ಬೇರಾವ ನಗರದಲ್ಲೂ ಇಲ್ಲವಂತೆ. ಅದರಲ್ಲೂ ಮಧ್ಯಮ ಮತ್ತು ಕೆಳಮಧ್ಯಮರು ಯಾಕಿಷ್ಟು ಕಾರ್-ಕೊಳ್ತಾರೆ ಅಂದರೆ, ಸರ್ವೆ ಮೇರೆಗೆ ಬಹುತೇಕ ದೊಡ್ದಸ್ತಿಕೆಗಂತೆ. ರಸ್ತೆಯ ಅಭಾವವಿದ್ದರೂ, ಕಾರ್ ತಯಾರಕರ ಪ್ರಭಾವಕ್ಕೆ, ಧಾರಾಳವಾಗಿ ಲೋನ್ ಕೊಡುವ ಬ್ಯಾಂಕುಗಳ ದಾಕ್ಷಿಣ್ಯಕ್ಕೆ ಬಲಿಯಾಗಿ ,ಕಾರ್ ನಿಲ್ಲಿಸೋಕೆ ತಾವಿಲ್ಲದಿದ್ದರು(ಗ್ಯಾರೇಜ್) ಕಾರ್ ಕೊಂಡು ತಂದರು, ಸಂಬಂಧಿಗಳ ಮನೆಗೆ ವಾರಕ್ಕೊಮ್ಮೆ-ತಿಂಗಳಿಗೊಮ್ಮೆ ಹೋಗಿಬಂದರು, ಆಮೇಲೆ ಬಹುತೇಕ ಬುರುಕ ಹಾಕಿ ರಸ್ತೆಯಲ್ಲಿ,ಫುಟ್ ಪಾತುಗಳಲ್ಲಿ ನಿಲ್ಲಿಸಿದರು. ಕಡೆಗೆ ಕಂಸರ್ವೆನ್ಸಿ ರಸ್ತೆಯನ್ನೂ ಬಿಡಲಿಲ್ಲ ಈ ಕಾರ್ ಮಾಯೆ!

ಯು ಆರ್ ನಾಟ್ ಅ-ಲೋನ್ ಅನ್ನುವಂತೆ ರಿಟೈರ್ ಆದ ನಮ್ಮಂತಾ ಕಾರ್ ಕೂನರಿಗೂ ಲಭ್ಯವಾಯಿತು ಸಾಲ. ಪರಿಣಾಮ ಕಾರನ್ನು ಕೊಂಬಾಗ ಸಾಲೋಗರುಂಡಂತೆ ಜಾಮಿನಲಿ ಸಿಕ್ಕು ಹೊಗೆ ಕುಡಿದು ಕಣ್ಣು ಕೆಂಪಾದಾಗಲೇ ಈ ಕಾರ್ ಕೋಟಕ ವಿಷ-ಯ ಗಮನಕ್ಕೆ ಬರೋದು!
ಕಾರೆಂಬ ಸುಳ್ಳು ಸುಳ್ಳೇ ಸುಖ ದಿಂದ ಬೇಕಾರ್ ಆದರೂ, ಅದನ್ನು ‘ಅಗಲಿ’ರಲಾರದೆ ರಸ್ತೆಯನ್ನು ಅಗಲೀ ಕರಿಸಿ ಎಂಬ ಕೂಗು ಬೇರೆ. ಆನಂದವಾಗಿ ಬೆಳೆದು, ಒಳ್ಳೆ ಗಾಳಿ ಮತ್ತು ನೆರಳನ್ನು ನೀಡಿದ ತಪ್ಪಿಗೆ, ರಸ್ತೆ ಬದಿಯ ವೃಕ್ಷಗಳಿಗೆ ಮರ-ಣ ದಂಡನೆಯಾದರೂ    ಪರವಾಗಿಲ್ಲ! ಒಟ್ಟಾರೆ,ರಸ್ತೆಯಲ್ಲಿ ಹೊಗೆಯ ಕಾರ್ ಮೊಡವೇ ಕವಿದು,ಪಾಲಿಕೆ ಅಧಿಕಾರಿಗಳು ‘ದಾರಿ’ ಕಾಣದಾಗಿದೆ ಅನ್ನುತ್ತಿದ್ದಾರೆ .

ಮಧ್ಯೆ ಜಾಮ್ ನಲ್ಲಿ ಸಿಕ್ಕಿಕೊಂಡು ಚೀರುವ ಆಂಬುಲೆನ್ಸ್ ಗೋಳು ವಾಹನಾರಣ್ಯರೋಧನವೇ ಸರಿ! ಇನ್ನಾದರೂ, ಕಡೇ ಪಕ್ಷ ಪೀಕ್ ‘ಅವಧಿ’ಯಲ್ಲಾದರು ಪೀಕಲಾಟ ತಪ್ಪಿಸಲು, ಕಾರುಳ್ಳವರು ತಕರಾರು ತೆಗೆಯದೆ, ಈ ಶೋಕವನ್ನು ನೀಗಲು’ಅಶೋಕರ ‘ಸಾರ್ವಜನಿಕ ಸಾರಿಗೆಯನ್ನು ಬಳಸುವಂತಾಗಲಿ. ಎಪ್ಪತ್ತು ಜನರು ಪ್ರಯಾಣಿಸುವ ಬಸ್ ನ ಒಂದುಸೈಲೆನ್ಸರ್(ಹೊಗೆಕೊಳವೆ)ಬಳಸಿ, ಹೊಗೆಯುಗುಳುವ, ರಸ್ತೆ ನುಂಗುವ ಅರವತ್ತೊಂಬತ್ತು ಕಾರ್ ಸೈಲೆನ್ಸರ್ಗಳನ್ನು ಸೈಲೆಂಟ್ ಆಗಿ ಇಡುವಂತ ಕಾನೂನು ನಿಯಮಗಳು ಜಾರಿಗೆ- ದಾರಿಗೆ ಬರಲಿ ಅಂತಾನೆ ಸುಸೂತ್ರ ಧಾರಿ.


‍ಲೇಖಕರು avadhi

October 28, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This