ಕಾವ್ಯದ ಔಷಧ ಗುಣ

ura11.jpg 

 

 

 

 

ಯು ಆರ್ ಅನಂತಮೂರ್ತಿ

ಕಾವ್ಯವನ್ನು ಕೇಳಿಸಿಕೊಳ್ಳುವ ಜನ ಇದ್ದಾರೆ ಎಂದಾಗ ಒಂದು ರೀತಿಯ ಕಾವ್ಯ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಕಾವ್ಯವನ್ನು ಕೇಳಿಸಿಕೊಳ್ಳುವ ಜನ ಇಲ್ಲವೇ ಇಲ್ಲ, ಇದ್ದರೂ ಅವರು ಕೆಲವೇ ಕೆಲವು ಜನರಿರುತ್ತಾರೆ ಎಂದಾಗ ಇನ್ನೊಂದು ರೀತಿಯ ಕಾವ್ಯ ಹುಟ್ಟಿಕೊಳ್ಳುತ್ತದೆ. ಯಾರೂ ತನ್ನನ್ನು ಕೇಳಿಸಿಕೊಳ್ಳುವುದಿಲ್ಲ ಎನ್ನುವಂಥ ಕಾಲದಲ್ಲಿ ಇಂಗ್ಲಿಷಿನಲ್ಲಿ ಬ್ಲೇಕ್ ನಂಥವನು, ಹಾಪ್ಕಿನ್ಸ್ ನಂಥವನು ಘನವಾದ, ಆಳವಾದ ಕಾವ್ಯವನ್ನು ಬರೆದದ್ದಿದೆ. ಜನ ಕೇಳಿದರೂ ಆಯಿತು, ಕೇಳದಿದ್ದರೂ ಆಯಿತು ಎಂದುಕೊಂಡಾಗಲೂ ಅಲ್ಲಮ ಬರೆದಂಥ ಕಾವ್ಯ ಹುಟ್ಟಿಕೊಳ್ಳುವುದು ಸಾಧ್ಯ.

ಜನ ಉತ್ಸಾಹದಲ್ಲಿ ಕಾವ್ಯಕ್ಕೆ ಸ್ಪಂದಿಸುವುದು ಇಡೀ ಸಮುದಾಯದ ಆರೋಗ್ಯವನ್ನು ಸೂಚಿಸುತ್ತದೆ. ಅಪಾರವಾದ ಸಹೃದಯತೆಯ ನಿರೀಕ್ಷೆಯಲ್ಲಿ ಬಹಳ ದೊಡ್ಡ ಕಾವ್ಯ ಹುಟ್ಟಿಕೊಳ್ಳುವುದು ಸಾಧ್ಯ. ಕುವೆಂಪು ಮತ್ತು ಬೇಂದ್ರೆಯವರು ಭಿನ್ನ ಭಿನ್ನ ರೀತಿಯಲ್ಲಿ ಈ ಬಗೆಯ ಕಾವ್ಯವನ್ನು ಅಂದರೆ ಜನಾಭಿಮುಖವಾದ ಕಾವ್ಯವನ್ನು ಸೃಷ್ಟಿಸಿದರು. ಈ ಕವಿಗಳು ಮತ್ತು ಅನಂತರದಲ್ಲಿ ಗೋಪಾಲಕೃಷ್ಣ ಅಡಿಗರು ಆಗೀಗ ಏಕಾಕಿಯಾಗಿ ಭಾವಿಸಬೇಕಾಗಿ ಬಂದಾಗಲೂ ಅವರ ಕಾವ್ಯ ಶಕ್ತಿಯುತವಾಗಿ, ಸಂವಹನ ಸಾಧುವಾಗಿಯೇ ಉಳಿದಿತ್ತು. ಅವರು ಜನಾಭಿಮುಖರಾಗಿ ಇದ್ದಾಗಲೂ ಜನಪ್ರಿಯರಾಗಲು ತಮ್ಮ ಶಕ್ತಿಯನ್ನು ವ್ಯಯ ಮಾಡಿಕೊಳ್ಳಲಿಲ್ಲ.

ಎಪಿಕ್ ಎಂದು ಕರೆಯುವ ಮಹಾಕಾವ್ಯ ಹುಟ್ಟುವುದು ಕವಿ ಇಡೀ ಸಮುದಾಯದ ವಾಣಿ ಎನ್ನಿಸಿದಾಗ. ಕವಿ ಆಗ ತಾನೊಂದು ನೆಪ ಮಾತ್ರ ಎಂದು ತಿಳಿಯುತ್ತಾನೆ. ಲಿಪಿಕಾರ ಕುಮಾರವ್ಯಾಸ ಎನ್ನುವುದರ ಅರ್ಥ ಇದು. “ಕುವೆಂಪು ಸೃಜಿಸಿದೀ ರಾಮಾಯಣಂ” ಅಂದರೆ ಕುವೆಂಪು ಸೃಷ್ಟಿಸಿದ ರಾಮಾಯಣವಲ್ಲ, ಕುವೆಂಪುವನ್ನೇ ಸೃಷ್ಟಿಸಿದ ರಾಮಾಯಣ.

ಒಳ್ಳೆಯ ಕಾವ್ಯ ಜನಕ್ಕೆ ಅರ್ಥವಾಗುತ್ತಿದೆ ಎನ್ನಿಸಿದಾಗಲೂ, ಇನ್ನೂ ಅರ್ಥವಾಗಬೇಕಾದದ್ದು ಉಳಿದಿದೆ ಎನ್ನಿಸುವಂತಿರಬೇಕು. ಆದ್ದರಿಂದ ಯಾವುದು ಮತ್ತೆ ಮತ್ತೆ ಓದಬಲ್ಲಂಥದ್ದೊ, ಓದುತ್ತಾ ಹೋದಂತೆ ಹೊಸ ಅರ್ಥಗಳನ್ನು ಹುಟ್ಟಿಸಬಲ್ಲದೊ ಅದನ್ನೇ ಉತ್ತಮ ಕಾವ್ಯ ಎನ್ನಬಹುದು.

ಜನರಿಗೆ ಕಾವ್ಯ ಪ್ರಿಯವಾಗುವುದು ಸಮುದಾಯದ ಆರೋಗ್ಯಕ್ಕೆ ಎಷ್ಟು ಅಗತ್ಯ, ಮತ್ತು ಅದು ಆರೋಗ್ಯದ ದ್ಯೋತಕ ಎನ್ನುವ ಮಾತನ್ನು ಹೇಳಿದೆ. ಇದರ ಜೊತೆಗೆ ಒಂದು ಎಚ್ಚರಿಕೆಯ ಮಾತನ್ನೂ ನಮಗೆ ನಾವು ಹೇಳಿಕೊಳ್ಳಬೇಕು. ಒಮ್ಮೊಮ್ಮೆ ಕಾವ್ಯ ಸಾಮಾಜಿಕ ಸ್ತರದಲ್ಲಿ ಹೌದೆನ್ನಿಸುವ ಮಟ್ಟಕ್ಕೆ ಇಳಿದುಬಿಡುವುದಿದೆ. ಆದರೆ ಶಕ್ತಿಯುತವಾದ ಕಾವ್ಯ ಸಾಮಾಜಿಕವಾಗಿ ನಮಗೆ ಅಪ್ರಿಯವಾದದ್ದನ್ನು ಹೇಳುವ ಶಕ್ತಿಯನ್ನು ಪಡೆದಿರುತ್ತದೆ. ವಚನಕಾರರಲ್ಲಿ ಆ ಶಕ್ತಿಯಿತ್ತು. ನಾವು ಭಾವಿಸಲು ಹೆದರುವ ಹಲವು ಸತ್ಯಗಳು ರೂಪಕಗಳಾಗಿ ಹೊರಹೊಮ್ಮುವುದುಂಟು. ಎಲ್ಲಾ ದೊಡ್ಡ ಕವಿಗಳಲ್ಲೂ ಈ ಬಗೆಯ ಶಕ್ತಿ ಇರುತ್ತದೆ. ನಾವು ಈ ಶಕ್ತಿಯನ್ನು ನಮ್ಮ ಒಳಬಾಳಿನಲ್ಲಿ ಮೌನವಾಗಿ ಕಂಡುಕೊಳ್ಳಬೇಕಾಗುತ್ತದೆ. ಹಲವು ಅಪ್ರಿಯ ಸತ್ಯಗಳನ್ನು ಎದುರಿಸುತ್ತಲೇ ಮಾಗಬೇಕಾದರೆ ನಮ್ಮಂತಹ ಮನುಷ್ಯರಿಗೆ ಸಾಹಿತ್ಯದ ಈ ಔಷಧ ಗುಣ ಬಹಳ ಅಗತ್ಯವಾಗಿರುತ್ತದೆ.

(“ವಾಲ್ಮೀಕಿಯ ನೆವದಲ್ಲಿ” ಕೃತಿಯಲ್ಲಿನ ಲೇಖನವೊಂದರ ಆಯ್ದ ಭಾಗ)

‍ಲೇಖಕರು avadhi

December 3, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This