ಕಾವ್ಯ ಕಡಮೆ ಅವರ ‘ದೂರದೇಶವೆಂಬ ಪಕ್ಕದ ಮನೆ’

ಪ್ರಸನ್ನ ಸಂತೇಕಡೂರು

ಇದು ಕಾವ್ಯ ಕಡಮೆ ನಾಗರಕಟ್ಟೆ ಅವರ ಪ್ರಬಂಧ ಸಂಕಲನದ ಹೆಸರು. ನಮಗೆ ತಿಳಿದ ಹಾಗೆ ಅಮೆರಿಕಾ ದೇಶದ ಬಗ್ಗೆ ಗೊರೂರು ರಾಮಸ್ವಾಮಿ ಅಯ್ಯಂಗಾರರು ‘ಅಮೆರಿಕಾದಲ್ಲಿ ಗೊರೂರು’, ಬಿ.ಜಿ.ಎಲ್. ಸ್ವಾಮಿಯವರು ‘ಅಮೆರಿಕಾದಲ್ಲಿ ನಾನು’, ಮೂರ್ತಿರಾಯರು ‘ಅಪರವಯಸ್ಕನ ಅಮೆರಿಕಯಾತ್ರೆ’, ಪ್ರಭುಶಂಕರರ ‘ನಾನು ಮತ್ತು ಶಾಂತಿ’, ಚಂದ್ರಶೇಖರ ಆಲೂರರ ‘ಅಮೆರಿಕಾದಲ್ಲಿ ಆಲೂರು’ ಬರೆದಿದ್ದಾರೆ. ಇನ್ನು ಹಲವು ಲೇಖಕ ಲೇಖಕಿಯರು ಅಮೆರಿಕಾದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.

ಈ ಎಲ್ಲಾ ಪುಸ್ತಕಗಳು ಅಮೆರಿಕಾದ ಪ್ರವಾಸ ಕಥನಗಳೇ ಆಗಿವೆ. ಹಾಗಾದರೆ ಕಾವ್ಯ ಅವರ ‘ದೂರದೇಶವೆಂಬ ಪಕ್ಕದಮನೆ’ ಪುಸ್ತಕ ಹೇಗೆ ಭಿನ್ನವಾಗಿ ನಿಲ್ಲುತ್ತದೆ ? ಕಾರಣ ಇಷ್ಟೇ ಕಾವ್ಯ ಅವರು ಅಮೆರಿಕಾದಲ್ಲಿ ನೆಲೆಸಿ ಆ ದೇಶವನ್ನು ಒಳಗಿನಿಂದ ನಿಂತು ನೋಡಿ ಈ ಪುಸ್ತಕ ಬರೆದಿದ್ದಾರೆ. ಇಲ್ಲಿ ಇಪ್ಪತ್ತಮೂರು ಬೇರೆ ಬೇರೆ ವಿಷಯದ ಪ್ರಬಂಧಗಳಿವೆ.

ಈ ಪ್ರಬಂಧಗಳ ಬಗ್ಗೆ ತಿಳಿಯುವುದಕ್ಕಿಂತ ಮೊದಲು ಕೆಲವು ಘಟನೆಗಳನ್ನು ಇಲ್ಲಿ ಹೇಳಬೇಕು. ನನ್ನ ಬಾಲ್ಯದಲ್ಲಿ ನಮ್ಮ ಅಜ್ಜಿ ನಮ್ಮ ಶಿವಮೊಗ್ಗ ಜಿಲ್ಲೆಯ ನನ್ನೂರು ಸಂತೇಕಡೂರಿನಿಂದ ತುಮಕೂರು ಜಿಲ್ಲೆಯ, ಕುಣಿಗಲ್ ಪಕ್ಕದ ಕೊತ್ತಗೆರೆಗೆ ಹೋಗಿ ಬರುವಾಗ ನಮ್ಮ ದೇಶಕ್ಕೆ ಹೋಗಿ ಬಂದೆ ಅಥವಾ ನಮ್ಮ ಸೀಮೆಗೆ ಹೋಗಿ ಬಂದೆ ಎಂಬ ಮಾತನ್ನು ಹೇಳುತ್ತಿದ್ದದ್ದನ್ನು ಕೇಳಿದ್ದೇನೆ. ಅದೇ ಅಜ್ಜಿ ಹಾಸಿಗೆ ಹಿಡಿದು ತನ್ನ ಬದುಕಿನ ಕೊನೆ ದಿನಗಳನ್ನು ಕಳೆಯುತ್ತಿದ್ದಾಗ ಆಂಧ್ರ ಪ್ರದೇಶದ ಶ್ರೀಶೈಲಗಿರಿಯ ಪಕ್ಕದಲ್ಲಿರುವ ಅಕ್ಕನ ಕದಳಿವನಕ್ಕೆ (ಅಕ್ಕನ ಗುಹೆ) ಕರೆದುಕೊಂಡು ಹೋಗಿ ಎಂದು ಕೇಳಿಕೊಳ್ಳುತ್ತಿದ್ದದ್ದನ್ನು ನಾನು ನೋಡಿದ್ದೇನೆ.

ನಮ್ಮ ಆರ್ಥಿಕ ಸ್ಥಿತಿ ನಮ್ಮ ಅಜ್ಜಿಯನ್ನು ಆ ಸ್ಥಿತಿಯಲ್ಲಿ ಆ ದುರ್ಗಮವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡುವಂತಿರಲಿಲ್ಲ. ಅಂದರೆ ಹಿಂದೆ ಎರಡು ಜಿಲ್ಲೆಗಳನ್ನು ದಾಟಿ ಮೂರನೇ ಜಿಲ್ಲೆ ಅಥವಾ ಪಕ್ಕದ ರಾಜ್ಯದಲ್ಲಿರುವ ಒಂದು ಊರಿಗೆ ಹೋಗುವುದು ಬಹು ಕಷ್ಟದ ಕೆಲಸವಾಗಿತ್ತು. ಆ ದೂರ ನಮಗೆ ಬಹು ದೂರ ಎಂದು ಅನಿಸುತಿತ್ತು. ಆದರೆ, ಜಾಗತೀಕರಣದ ನಂತರ ಇಡೀ ಜಗತ್ತೇ ಒಂದು ಹಳ್ಳಿಯಾಯಿತು. ದೂರದ ದೇಶ ನಮಗೆ ಪಕ್ಕದಮನೆಯಾಯಿತು ಎಂದರೆ ತಪ್ಪಾಗಲಾರದು.

ದೂರದ ದೇಶದಲ್ಲಿ ನಡೆಯುವ ಘಟನೆಗಳು ಕೆಲವೇ ನಿಮಿಷಗಳಲ್ಲಿ ನಮ್ಮ ಮುಂದೆ ಕಾಣುತ್ತಿರುತ್ತವೆ. ಫೇಸ್ಬುಕ್, ಟ್ವಿಟ್ಟರುಗಳ ಮೂಲಕ ಸುದ್ದಿ ಮತ್ತು ವಿಷಯಗಳು ಇನ್ನು ವೇಗವಾಗಿ ಜಗತ್ತಿನ ಮೂಲೆಮೂಲೆಗೂ ತಲುಪುತ್ತಿವೆ. ಅದು ಏನೇ ಇರಲಿ. ಇಲ್ಲಿ ನಾನು ಹೇಳಹೊರಟಿರುವುದು ಕಾವ್ಯ ಅವರ ‘ದೂರದೇಶವೆಂಬ ಪಕ್ಕದಮನೆ’ ಎಂಬ ಒಂದು ಒಳ್ಳೆಯ ಪುಸ್ತಕದ ಬಗ್ಗೆ. ಅಮೆರಿಕಾ ವಲಸಿಗರ ದೇಶ. ಆ ದೇಶಕ್ಕೆ ಮೊಟ್ಟ ಮೊದಲು ಕೊಲಂಬಸ್ ಮತ್ತು ಅವನ ಸಂಗಡಿಗರು ಕಾಲಿಟ್ಟರು. ಅವರ ನಂತರ ವಲಸಿಗರ ದಂಡು ಜಗತ್ತಿನ ಎಲ್ಲಾ ದೇಶಗಳಿಂದಲೂ ಸಾಗರೋಪಾದಯಲ್ಲಿ ಹೋಗಿ ನೆಲೆಸಿತು. ಇಂದಿಗೂ ನಿರಂತರವಾಗಿ ವಲಸಿಗರು ಕಾಲಿಡುತ್ತಿದ್ದಾರೆ. ಆ ಕಾರಣದಿಂದ ಆ ದೇಶ ವಲಸಿಗರ ದೇಶವೆಂದರೆ ತಪ್ಪಾಗಲಾರದು. ಈ ರೀತಿ ಆ ದೇಶ ವಲಸಿಗರಿಂದಲೇ ತುಂಬಿರುವ ದೇಶ. ಅಲ್ಲಿ ಜಗತ್ತಿನ ಎಲ್ಲಾ ವರ್ಣದವರನ್ನು, ಜನಾಂಗದವರನ್ನು ಭಾರತದಲ್ಲಿರುವ ಎಲ್ಲಾ ಜಾತಿಯವರನ್ನು ಕಾಣಬಹುದು. ಅಲ್ಲಿ ಅವಿಭಜಿತ ಆಂಧ್ರ ಪ್ರದೇಶದ, ಗುಜರಾತಿನ, ಪಂಜಾಬಿನ ಜನರನ್ನು ಅತೀ ಹೆಚ್ಚಾಗಿ ಕಾಣಬಹುದು.

ಇಲ್ಲಿ ಲೇಖಕಿ ಪ್ರತಿನಿತ್ಯ ಬದುಕಿನಲ್ಲಿ ಕಂಡ ದೃಶ್ಯಗಳನ್ನು ಮತ್ತು ಘಟನೆಗಳನ್ನು ಪ್ರಬಂಧವಾಗಿಸಿದ್ದಾರೆ. ಸುಂದರವಾದ ಪಾರ್ಕಿನಲ್ಲಿ ವಾಯುವಿಹಾರಕ್ಕೆ ಹೊರಟಾಗ ಸಿಗುತ್ತಿದ್ದ ಮಹಿಳೆ. ಗ್ರಂಥಾಲಯದಲ್ಲಿ ಸಿಕ್ಕ ವಿಚ್ಛೇದಿತ ಬಡ ಮಹಿಳೆ ಅವರ ಬದುಕಿನ ಕತೆ ಎಲ್ಲವನ್ನು ನಮ್ಮ ಮುಂದೆ ಕಾವ್ಯರವರು ತೆರೆದಿಟ್ಟಿದ್ದಾರೆ. ಸಾಮಾನ್ಯವಾಗಿ ಭಾರತದಲ್ಲಿರುವವರಿಗೆ ಅಮೆರಿಕಾದ ಬಗ್ಗೆ ತಮ್ಮದೇ ಆದ ಪೂರ್ವನಿರ್ಧಾರಿತ ಕಲ್ಪನೆ ಇರುತ್ತದೆ. ಅದೇನೆಂದರೆ ಅಮೆರಿಕಾ ಅತೀ ಶ್ರೀಮಂತ ದೇಶ, ಅಲ್ಲಿ ಬಡವರೇ ಇರುವುದಿಲ್ಲ, ಅಲ್ಲಿ ಯಾರು ಕೂಡ ರಸ್ತೆಯಲ್ಲಿ ಕಸವನ್ನೇ ಹಾಕುವುದಿಲ್ಲ. ಅಲ್ಲಿ ಬರಿ ಬಿಳಿಯರೇ ಇರುತ್ತಾರೆ ಎಂಬುದು. ಇಲ್ಲಿ ವೀಸಾ ಎಂದರೇನು? ಗ್ರೀನ್ ಕಾರ್ಡ್ ಎಂದರೇನು? ಅಮೆರಿಕಾದ ಪೌರತ್ವ ಎಲ್ಲದರ ಬಗ್ಗೆಯೂ ತಿಳಿಯಬಹುದು.

ಅಲ್ಲಿ ಮನೆಯನ್ನು ಯಾರು ತಾವೇ ಮುಂದೆ ನಿಂತು ಕಟ್ಟಿಸುವುದಿಲ್ಲ. ಅಲ್ಲಿ ಯಾವುದೋ ಕಂಪೆನಿಯವರೋ ರಿಯಲ್ ಎಸ್ಟೇಟ್ ನವರೋ ಕಟ್ಟಿಸಿರುತ್ತಾರೆ. ಮನೆ ಬೇಕಾದವರು ಬ್ಯಾಂಕಿನಿಂದ ಸುಲಭವಾಗಿ ಸಾಲ ಪಡೆದು ಕಂತಿನ ಮೇಲೆ ಸಾಲತೀರಿಸಲು ನಿರ್ಧರಿಸಿ ಆ ಮನೆಯನ್ನು ಕೊಂಡುಕೊಳ್ಳುತ್ತಾರೆ. ಆ ಮನೆಯ ಯಾರಿಗೂ ಬಗ್ಗೆಯೂ ತೀರಾ ವ್ಯಾಮೋಹವಿರುವುದಿಲ್ಲ. ಬೇಕಾದಾಗ ಬಿಟ್ಟು ಇನ್ನೊಂದು ರಾಜ್ಯಕ್ಕೆ ಸುಲಭವಾಗಿ ಹೋಗುತ್ತಾರೆ. ಇಲ್ಲಿ ಕಾವ್ಯರವರು ಕುವೆಂಪುರವರ “ನನ್ನ ಮನೆ” ಕವಿತೆಯನ್ನು ಉದಾಹರಣೆಯಾಗಿ ಕೊಟ್ಟು ಅಮೆರಿಕಾದಲ್ಲಿ ತಾವು ಮನೆ ಕೊಂಡಾಗ ಏನೆಲ್ಲಾ ಪ್ರಕ್ರಿಯೆಗಳು ನಡೆದವು ಎಂದು ತೋರಿಸುತ್ತಾರೆ. ಇನ್ನೊಂದು ಪ್ರಬಂಧದಲ್ಲಿ ಅಮೆರಿಕಾದಲ್ಲೂ ಬಡವರಿದ್ದಾರೆ ಎಂಬುದನ್ನು ತೋರಿಸುತ್ತಾರೆ.

ಯಂತ್ರವೊಂದು ಜೀವ ಬೇಡುವಾಗ ಎಂಬ ತಮ್ಮ ಪ್ರಬಂಧದಲ್ಲಿ ಅಮೆರಿಕಾದ ಗನ್ ಸಂಸ್ಕೃತಿ ಹೇಗೆ ದೇಶದ ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಅಲ್ಲಾಡಿಸುತ್ತಿದೆ ಎಂದು ಚಿತ್ರಿಸಿದ್ದಾರೆ. ಒಂದು ಪ್ರಬಂಧದಲ್ಲಿ ಅಮೆರಿಕಾದಲ್ಲೂ ಲಿಂಗತಾರತಮ್ಯ ಹೇಗಿದೆ, ಅಮೆರಿಕಾ ದೇಶ ಸ್ವಾತಂತ್ರ್ಯ ಪಡೆದು ಸುಮಾರು ವರ್ಷಗಳಾಗಿದ್ದರೂ ಅಲ್ಲಿ ಇನ್ನು ಮಹಿಳೆಯೊಬ್ಬರು ರಾಷ್ಟಾಧ್ಯಕ್ಷೆಯಾಗಲು ಸಾಧ್ಯವಾಗದೆ ಇರುವುದರ ಬಗ್ಗೆ ಹೇಳುತ್ತಾರೆ. ಜೊತೆಗೆ ಹಿಲರಿ ಕ್ಲಿಂಟನ್ ಚುನಾವಣೆಗೆ ನಿಂತಿದ್ದಾಗ ಮಹಿಳೆಯರಲ್ಲಿ ಭರವಸೆ ಹೇಗೆ ಇತ್ತು ಎಂಬುದರ ಬಗ್ಗೆಯೂ ಇಲ್ಲಿ ಕಾಣಬಹುದು.  

ಅಮೆರಿಕಾದ ಕೆಲವು ರಾಜ್ಯಗಳಲ್ಲಿ ವರ್ಷದ ಆರು ತಿಂಗಳುಗಳ ಕಾಲ ಚಳಿಗಾಲವಿರುತ್ತದೆ. ಇನ್ನು ಕೆಲವು ಕಡೆ ನಾಲ್ಕರಿಂದ ಐದು ತಿಂಗಳುಗಳ ಕಾಲ ಚಳಿ ಇರುತ್ತದೆ. ಆ ಕಾರಣದಿಂದ ಅಲ್ಲಿನ ಜನರು ವಸಂತ ಋತು ಮತ್ತು ಬೇಸಿಗೆಕಾಲದ ಆಗಮನವನ್ನೇ ಕಾಯುತ್ತಿರುತ್ತಾರೆ. ವಸಂತ ಕಾಲ ಮನುಷ್ಯನಲ್ಲಿ ಮತ್ತು ಪ್ರಕೃತಿಯಲ್ಲಿ ಹೊಸ ಭರವಸೆ ಮತ್ತು ಚಿಗುರುಗಳನ್ನು ಮೂಡಿಸುತ್ತದೆ ಎಂದು ಹೇಳುತ್ತಾರೆ.

ಕನ್ನಡ ಎನೆ ಕುಣಿದಾಡುವುದೆನ್ನೆದೆ ಎಂಬ ಪ್ರಬಂಧದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮಾತೃ ಭಾಷೆಯ ಅವಶ್ಯಕತೆ ಎಷ್ಟು ಅದರಲ್ಲೂ ಅಮೆರಿಕಾದಂತಹ ಪರದೇಶದಲ್ಲಿದ್ದಾಗ ನಮ್ಮದೇ ಆದ ಭಾಷೆಯ ಮಹತ್ವ ಹೇಗೆ ತಿಳಿಯುತ್ತದೆ ಎಂಬುದನ್ನು ಕಾಣಬಹುದು.

ದೂರದೇಶವೆಂಬ ಪಕ್ಕದಮನೆ ಪ್ರಬಂಧದಲ್ಲಿ ಇಪ್ಪತ್ತನೇ ಶತಮಾನದ ಅರವತ್ತರ ದಶಕಕ್ಕೂ ಇಪ್ಪತ್ತೊಂದನೇ ಶತಮಾನದ ಎರಡನೆಯ ದಶಕಕ್ಕೂ ಕಾಲ ಹೇಗೆ ಬದಲಾಗಿದೆ, ಅಮೆರಿಕಾದ ರಾಜಕೀಯದಲ್ಲೂ ಭಾರತೀಯ ಮೂಲದ ವ್ಯಕ್ತಿಗಳು ಹೇಗೆಲ್ಲಾ ಮುಂದೆ ಇದ್ದಾರೆ ಮತ್ತು ಟಿವಿ ಮಾಧ್ಯಮದಲ್ಲಿ, ಹಾಲಿವುಡಿನಲ್ಲೂ ಭಾರತೀಯರ ಪ್ರತಿಭೆ ಹೇಗೆಲ್ಲಾ ತೋರಲ್ಪಡುತ್ತಿದೆ ಎಂದು ಕಾಣಬಹುದು. ಕನ್ನಡ ಬಳಗಗಳು ಎಲ್ಲಾ ಊರಿನಲ್ಲೂ ಇವೆ ಎಂದು ತಿಳಿಯಬಹುದು. ನಾದಮಯ ಈ ಲೋಕವೆಲ್ಲ ಎಂಬ ಪ್ರಬಂಧದಲ್ಲಿ ಅಮೆರಿಕಾದಲ್ಲಿ ಚಳಿಗಾಲದ ಬೇರೆ ಬೇರೆ ರೂಪದ ಬಗ್ಗೆ ಚಿತ್ರಿಸಿದ್ದಾರೆ.

ಇದು ತೂಕದ ವಿಷಯ ಎಂಬ ಪ್ರಬಂಧ ಈ ಪ್ರಬಂಧ ಸಂಕಲನದ ಅತ್ಯುತ್ತಮ ಪ್ರಬಂಧ ಎಂದು ಹೇಳಬಹುದು. ಈ ಪ್ರಬಂಧದಲ್ಲಿ ಕಾವ್ಯರವರು ಆಧುನಿಕ ಜಗತ್ತಿನ ಅತೀ ದೊಡ್ಡ ಮಾನವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಾಗಾದರೆ ಯಾವುದು ಆಧುನಿಕ ಮಾನವನ ಅತೀ ದೊಡ್ಡ ಸಮಸ್ಯೆ? ಅದು ಬೊಜ್ಜಿನ ಸಮಸ್ಯೆ. ಅಭಿವೃದ್ದಿ ಹೊಂದುತ್ತಿರುವ ಜಗತ್ತಿನ ಹಲವು ದೇಶಗಳು ಕೆಲವೇ ವರ್ಷಗಳ ಹಿಂದೆ ಆಹಾರ ಸಮಸ್ಯೆ ಅಪೌಷ್ಟಿಕತೆಯಿಂದ ನರಳುತ್ತಿದ್ದವು. ಆದರೆ ಇಂದು ಆ ದೇಶಗಳ ಬಹಳಷ್ಟು ಜನರು ಬೊಜ್ಜು ಮತ್ತು ಸ್ಥೂಲಕಾಯತೆಯಿಂದ ನರಳುತ್ತಿದ್ದಾರೆ. ಇಲ್ಲಿ ಕಾವ್ಯರವರು ಅಮೆರಿಕಾದಲ್ಲಿ ಬೊಜ್ಜಿನ ಸಮಸ್ಯೆ ಹೇಗೆಲ್ಲಾ ಕಾಡುತಿದೆ ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

ಹ್ಯಾಲೋವೀನ್ ಹಬ್ಬ ಅಮೆರಿಕಾದಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ. ಇದು ಭಾರತದಲ್ಲಿ ಇತ್ತೀಚೆಗೆ ಹೊಸತಲೆಮಾರಿನ ಮಕ್ಕಳಲ್ಲೂ ಕಾಣಬಹುದು. ಇದು ತಮ್ಮ ಹಿರಿಯರ ಅಥವಾ ಪೂರ್ವಜರ ನೆನೆಯುವುದಕ್ಕೆ ನಾವು ಹಿರಿಯರ ಪೂಜೆ ಮಾಡುವ ರೀತಿಯಲ್ಲಿ ಮಾಡುವ ಹಬ್ಬ. ಅಲ್ಲಿ ನಮ್ಮ ಹೋಳಿ ಹುಣ್ಣಿಮೆಯ ಅಥವಾ ಕಾಮಣ್ಣನ ಹಬ್ಬದ ಹುಡುಗರ ಹಾಗೆ ಏನಾದರೂ ಒಂದು ಕೀಟಲೆ ಅಥವಾ ತರಲೆ ಕೆಲಸ ಮಾಡಲು ಮಕ್ಕಳು ಮುಂದೆ ಬರುತ್ತಾರೆ. ಅವರಿಗೆ ಚಾಕೊಲೇಟ್ ಅಥವಾ ಬೇರೆ ಏನಾದರೂ ತಿನ್ನುವ ಪದಾರ್ಥ ಕೊಟ್ಟು ಕಳಿಸುವುದು ಅಲ್ಲಿಯ ವಾಡಿಕೆ. ಇಲ್ಲಿ ಕಾವ್ಯರವರು ಹ್ಯಾಲೋವೀನ್ ಹಬ್ಬದಲ್ಲಿ ಕುಂಬಳ ಕಾಯಿಯನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಮತ್ತು ಅದರ ಮಹತ್ವದ ಬಗ್ಗೆ ತಿಳಿಸುತ್ತಾರೆ.

ಇಲ್ಲಿ ಕಾವ್ಯರವರು ತಮ್ಮ ಬದುಕಿನ ಘಟನೆಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವರು ಅಮೆರಿಕಾಗೆ ತಮ್ಮ ಪತಿಯ ಜೊತೆ ಬಂದದ್ದು. ನ್ಯೂ ಜೆರ್ಸಿಯಲ್ಲಿನ ತಮ್ಮ ಮನೆ, ಅಲ್ಲಿನ ಪಾರ್ಕು, ನದಿ, ತಮ್ಮ ಮಗುವಿನ ಆಗಮನದ ಕಾತುರ, ಅಲ್ಲಿನ ಇಂಡಿಯನ್ ಗ್ರೋಸರಿ. ಆನ್ಲೈನ್ ಕನ್ನಡ ಪತ್ರಿಕೆಗಳಾದ ಅವಧಿ, ಕೆಂಡಸಂಪಿಗೆ, ಚುಕ್ಕುಬುಕ್ಕು ಎಲ್ಲದರ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ.

ಇನ್ನು ಆಧುನಿಕ ಸುದ್ದಿ ಮಾಧ್ಯಮಗಳು, ಸಾಮಾಜಿಕ ತಾಣಗಳಲ್ಲಿ ಹರಿಯುವ ಸುದ್ದಿಗಳು ಹೇಗೆಲ್ಲಾ ಜಗತ್ತಿನ ಆಗುಹೋಗುಗಳನ್ನು ನಿರ್ಧರಿಸುತ್ತವೆ ಎಂಬುದನ್ನು ಕಾಣಬಹುದು. ಇಲ್ಲಿ ಸ್ತ್ರೀ ಸ್ವಾತಂತ್ರ್ಯದ ಪ್ರಶ್ನೆಗಳು, ತಮ್ಮಿಷ್ಟದ ಉಡುಪಿನ ಆದ್ಯತೆ, ಮೀ ಟೂ ಚಳುವಳಿ, ಮತ್ತೇ ಇತ್ತೀಚಿಗೆ ವಾಟ್ಸಪ್ಪ್ ಫೇಸ್ಬುಕ್ ಗಳು ವ್ಯಕ್ತಿಯ ವೈಯುಕ್ತಿಕ ಸ್ವಾತಂತ್ರ್ಯ ಹರಣ ಮಾಡುತ್ತಿರುವ ಬಗ್ಗೆಯೂ ಕಾವ್ಯರವರು ಪ್ರಸ್ತಾಪಿಸಿರುವುದನ್ನು  ಇಲ್ಲಿ ಪ್ರಕಾಣಬಹುದು.

ಜೊತೆಗೆ ಜಗತ್ ಪ್ರಸಿದ್ದ ಕವಿ ಶೇಕ್ಸ್ ಪಿಯರನಿಗೊಬ್ಬ ಅಷ್ಟೇ ಪ್ರತಿಭಾವಂತ ತಂಗಿ ಇದ್ದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯ ಪ್ರಬಂಧವಿದೆ. ಇದು ಮೂಲತಃ ಖ್ಯಾತ ಲೇಖಕಿ ವರ್ಜಿನೀಯಾ ವೂಲ್ಫ್ ಕೇಳಿದ ಪ್ರಶ್ನೆ.

ಅಂಟಿದ ನಂಟಿನಲ್ಲೊಂದು ತೆರೆದ ಆಯ್ಕೆ ಎಂಬ ಪ್ರಬಂಧ ಆಧುನಿಕ ಕಾಲದಲ್ಲಿ ಸಂಗಾತಿಗಳ ಆಯ್ಕೆಯ ಕುರಿತು ಇರುವುದನ್ನು ನೋಡಬಹುದು. ಇಲ್ಲಿ ಹುಡುಗನೋ ಹುಡುಗಿಯೋ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ವತಂತ್ರವಾಗಿ ಮುಂದೆ ಹೋಗುತ್ತಿರುವುದನ್ನು ಕಾಣಬಹುದು. ಜೊತೆಗೆ ಇಂದಿಗೂ ಬಹಳಷ್ಟು ಮಡಿವಂತಿಕೆಯ ಜನರು ಇರುವುದನ್ನು ಕಾಣಬಹುದು. ಸಂಗಾತಿಯ ಆಯ್ಕೆ ಶಿಲಾಯುಗಲ್ಲಿ ಹೇಗೆ ಇತ್ತು ಎಂಬುದು ಕೂಡ ನಮ್ಮ ಕಣ್ಣನ್ನು ತೆರೆಸುತ್ತದೆ.  

ಇದೊಂದು ಒಳ್ಳೆಯ ಪ್ರಬಂಧ ಸಂಕಲನ. ಇಲ್ಲಿನ ಹಲವಾರು ವಿಷಯಗಳು ಕನ್ನಡ ಓದುಗರಿಗೆ ಹೊಸ ವಿಷಯಗಳು ಎಂದು ಖಂಡಿತ ಹೇಳಬಹುದು.

ಕಾವ್ಯ ಕಡಮೆ ನಾಗರಕಟ್ಟೆ ಹಲವಾರು ವರ್ಷಗಳಿಂದ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಅವರು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದು ಹೊಸ ತಲೆಮಾರಿನ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಕವಿತೆ, ನಾಟಕ, ಕಾದಂಬರಿ, ಪ್ರಬಂಧ, ಹೀಗೆ ಹತ್ತು ಹಲವು ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಂದ ಇನ್ನು ಹೆಚ್ಚು ಕೃತಿಗಳು ಮೂಡಿಬರಲಿ ಎಂದು ಶುಭ ಹಾರೈಸುತ್ತಿದ್ದೇನೆ.

February 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ...

೧ ಪ್ರತಿಕ್ರಿಯೆ

  1. T S SHRAVANA KUMARI

    ಕೃತಿ ಪರಿಚಯ ಚೆನ್ನಾಗಿ ಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: