‘ಕಾವ್ಯ ಹಕ್ಕಿಗಳ ಹಾರಾಟದಂತೆ’

ಒಳಗೂ..ಹೊರಗೂ..ವಿನ ಅಲೆಮಾರಿ ನಿಮಗೆ ಸಲಾಂ. ಸುಂದರ ಸಾಹಿತ್ಯವನ್ನು ನಮ್ಮ ಮುಂದೆ ಇಡುತ್ತಿರುವುದಕ್ಕೆ. ಮೀನಾ ಕಂದಸ್ವಾಮಿಯನ್ನು ಪರಿಚಿಯಿಸಿದ್ದಕ್ಕೆ.
***
‘ಕಾವ್ಯ ನಿ-ಶಬ್ದವಾಗಬೇಕು
ಹಕ್ಕಿಗಳ ಹಾರಾಟದಂತೆ’
ಹೀಗೆನ್ನುತ್ತಾರೆ ಮೀನಾ ಕಂದಸ್ವಾಮಿ. ಈಕೆಗೀಗ ೨೩-೨೪ ವಯಸ್ಸು. ತನ್ನ ಕಾವ್ಯದ ಮೂಲಕ ದೇಶದ ಕಾವ್ಯ ಪ್ರೇಮಿಗಳು, ಕವಿಗಳ ಗಮನ ಸೆಳೆದವರು. ಸ್ತ್ರೀತ್ವ, ತಮಿಳುತನ ಮತ್ತು ಕೆಳ ಜಾತಿಗಳ ಬಗ್ಗೆ ಕೀಳರಿಮೆ ಇಲ್ಲ. ಅವುಗಳನ್ನು ಗರ್ವದಿಂದ ಧರಿಸುತ್ತೇನೆ, ಸಂಭ್ರಮಿಸುತ್ತೇನೆ ಎನ್ನುವ ಈಕೆಗೆ ಕಾವ್ಯವೇ ಎಲ್ಲ.
ಬರವಣಿಗೆ ತನ್ನ ಐಡೆಂಟಿಟಿ. ತನ್ನ ಬರವಣಿಗೆ ಮೂಲಕವೇ ಜಗತ್ತಿಗೆ ತೆರೆದುಕೊಳ್ಳಲು ಬಯಸುವ ಹಂಬಲಿಸುವಾಕೆ. ಕಾವ್ಯದ ಕಡು ವ್ಯಾಮೋಹಿ. ಈಕೆಗೆ ತನ್ನ ಆಕ್ರೋಶ, ಅಸಮಾಧಾನ, ಅಭಿವ್ಯಕ್ತಿ ಎಲ್ಲಕ್ಕೂ ಕಾವ್ಯವೇ ಅಸ್ತ್ರ.
ರಾಜಕೀಯ ಕಾವ್ಯದ ಬಗ್ಗೆ ಒತ್ತಿ ಹೇಳುವ ಈಕೆಯ ಕವಿತೆಯ ಸಾಲುಗಳು ದಂಗು ಬಡಿಸುವಷ್ಟು ಪವರ್‌ಫುಲ್ ಆಗಿ ಹರಿಯುತ್ತವೆ. ಅಳುಕಿಲ್ಲದ ಪ್ರಾಮಾಣಿಕ ಅಭಿವ್ಯಕ್ತಿ. ಪದ ಪದದಲ್ಲೂ ಅಂತಾರಾಳದ ಶಕ್ತಿ ಎದ್ದು ಕಾಣುತ್ತದೆ. ಒಂದೊಂದು ಸಾಲಲ್ಲೂ ಅಚ್ಚರಿಯಿದೆ. ಅಸಮಾಧಾನವಿದೆ. ಆಕ್ರೋಶವಿದೆ. ಹಾಗಂತ ಈಕೆಯ ಕಾವ್ಯ ಎನ್ನುವುದು ಶಸ್ತ್ರಾಗಾರ ಎನ್ನುತ್ತಿಲ್ಲ. ಅಷ್ಟೇ ನವಿರಾದ ಭಾವಗಳು ಸುಮ್ಮನೆ ಸುಗಂಧದ ಹಾಗೆ ಸುತ್ತಿಕೊಳ್ಳುತ್ತವೆ.
ಆಕೆಯ ದಿ ಫ್ಲೈಟ್ ಆಫ್ ಬರ್ಡ್ಸ್, ನಾನ್ ಕನ್‌ವರ್ಸಸೇಷನ್ ವಿತ್ ಎ ಲವರ್, ಮೈ ಲವರ್ ಸ್ಪೀಕ್ಸ್ ಆಫ್ ರೇಪ್, ಹೌ ದೆ ಪ್ರಾಸ್ಟಿಟ್ಯೂಟ್ ಎ ಪೊಯಮ್ ಪದ್ಯಗಳನ್ನು ಇತ್ತೀಚೆಗೆ ಓದಿ ಮುಗಿಸಿದೆ. ಕಿರಿಯ ವಯಸ್ಸಿಗೆ ಅಕಾಡೆಮಿಕ್ ಓದಿಗೆ ಶರಣು ಹೊಡೆದ ಈಕೆ ಹೋರಾಟದ ಬದುಕಿಗೆ ಹೆಜ್ಜೆ ಹಾಕಲಾರಂಭಿಸಿದರು. ಅತ್ಯಂತ ಕಿರಿಯ ವಯಸ್ಸಿಗೆ ದಲಿತ್ ಲಿಟರೇಚರ್ ಅನ್ನುವ ಪತ್ರಿಕೆಯೊಂದಕ್ಕೆ ೨ ವರ್ಷಗಳ ಕಾಲ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತನ್ನ ಕಾವ್ಯದ ಮೂಲಕ ರಾಷ್ಟ್ರದ ಗಮನ ಸೆಳೆದ ಮೀನಾ ಪ್ರಖರವಾದ ಚಿಂತನೆಯುಳ್ಳ ಯುವತಿ ಎನ್ನುವುದು ‘udderly fanatic ’ನಂಥ ಲೇಖನಗಳಿಂದ ಸ್ಪಷ್ಟವಾಗುತ್ತವೆ. ‘ಟಚ್’ ಎನ್ನುವ ಇಂಗ್ಲಿಷ್ ಪದ್ಯಗಳ ಸಂಕಲನವೊಂದನ್ನು ಹೊರತಂದಿದ್ದಾರೆ ಈ ಮೀನಾ. ಇದಕ್ಕೆ ಮುನ್ನುಡಿ ಬರೆದವರು ಕಮಲಾದಾಸ್. ‘ಈಕೆಯ ಕಾವ್ಯ ಓದಿ ಬಹಳ ವರ್ಷಗಳ ನಂತರ ಪ್ರಾಮಾಣಿಕತೆಯ ಶಕ್ತಿಯೊಂದಿಗೆ ಮತ್ತೆ ಸಂಪರ್ಕಕ್ಕೆ ಬಂದ ಹಾಗಿದೆ’ ಎಂದಿದ್ದಾರೆ. ಆಕೆಯ ಕಾವ್ಯವನ್ನು ಹರಸಿದ್ದಾರೆ. ಹೀಗೊಬ್ಬ ಹಿರಿಯ ಕವಿಯಿಂದ ಮೆಚ್ಚಿಗೆ ಗಳಿಸಿದ ಮೀನಾಗೆ ಕಾವ್ಯದ ಶಕ್ತಿಯ ಅರಿವಿದೆ. ಕಾವ್ಯದ ಬಗ್ಗೆ ತನ್ನದೇ ಆದ ನಿಲುವನ್ನು ಒಂದು ಪದ್ಯದಲ್ಲಿ ಹೀಗ ಹೇಳುತ್ತಾರೆ;
ಕಾವ್ಯ ನಿ-ಶಬ್ಧವಾಗಬೇಕು ಹಕ್ಕಿಯ ಹಾರಾಟದಂತೆ. ars poetica ಸಾಲಿನ ಉಲ್ಲೇಖದೊಂದಿಗೆ ಆರಂಭವಾಗುವ ದಿ ಫ್ಲೈಟ್ ಆಫ್ ಬರ್ಡ್ಸ್ ಪದ್ಯವಿದು.
ಹಕ್ಕಿಯ ತೆಕ್ಕೆಯಲಿ ಬರೆಯಲು ಬಹಳಷ್ಟಿದೆ.
ಅವುಗಳ ಬರಹಕ್ಕಿಲ್ಲ ಬಹಿಷ್ಕಾರ.
ಆಗಸದಲ್ಲೇ ಕಾವ್ಯ
ಬರೆಯಲು ಅವು ಸ್ವತಂತ್ರ,
ಮರಳಿ, ನಮ್ಮಡೆಗೆ
ಕಾವ್ಯ ಹರಿಸುತ್ತವೆ.
ಎನ್ನುತ್ತಲೇ ಮೀನಾ ನಮ್ಮ ಅರ್ಥವಿಲ್ಲದ ಬದುಕಿನ ಚಿತ್ರಗಳನ್ನುಕೊಡುತ್ತಾಳೆ. ನಾವು ಹಕ್ಕಿ ಹರಿಸಿದ ಕಾವ್ಯವನ್ನು ಸ್ವೀಕರಿಸದಷ್ಟು ಕ್ರೂರರು ಎನ್ನುತ್ತಾರೆ. ಹಾಗೆ ಕಡೆಗೆ ಅದರ ಹಾಡನ್ನಾದರೂ ಕೇಳುತ್ತೇವೆ ಎಂದು ಸಮಾಧಾನವಾಗುತ್ತಾರೆ. ಜೊತೆಗೆ ನಾವೇ ಕಟ್ಟಿಕೊಳ್ಳುವ ಜಾತಿಯ ಗೋಡೆಗಳು, ಬಡತನ, ಹಿಂಸೆಯನ್ನು ಚಿತ್ರಿಸುತ್ತಾರೆ. ಹಕ್ಕಿ ಬರೆಯುವ ಕಾವ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ನಾವೇನು ಮಾಡಬೇಕು. ಅಂಥದ್ದೇ ಕಾವ್ಯ ನಮ್ಮಿಂದಲೂ ಹೇಗೆ ಸೃಷ್ಟಿಯಾಗಲು ಸಾಧ್ಯವೆನ್ನುವುದನ್ನು ಮೀನಾ ವಿವರಿಸುತ್ತಾರೆ. ಹೀಗೆ ಸಮಾಧಾನ ಧ್ಯಾನಚಿತ್ತದಲ್ಲಿ ಕವಿತೆಯ ಬಗ್ಗೆ ಮಾತನಾಡುವ ಕವಿ ನಾವು ಹೇಗೆ ಕಾವ್ಯದ ಹಾದರ ಮಾಡುತ್ತೇವೆ ಎನ್ನುವುದನ್ನು ಮತ್ತೊಂದು ಪದ್ಯದಲ್ಲಿ ಕಿಡಿಯಾಗಿ ಸಿಡಿಸುತ್ತಾರೆ. How they prostitute a poemನಲ್ಲಿ ಅಂಥ ಕಿಡಿಗಳಿವೆ.
ಕೆಲವರು ಬೇಗ ಕಲಿಯುತ್ತಾರೆ
ಕಾವ್ಯದ ಸೂಳೆಗಾರಿಕೆಯನ್ನು
ಪ್ರಜ್ಞಾಪೂರ್ವಕವಾಗಿ,
ತಮ್ಮ ಅಗತ್ಯ
ತುಂಬುವ ಸರಳ ಉಪಮೆಗಳಿಗೆ
ಜಾಲಾಡುತ್ತಾರೆ.
ಇಂಥ ಜಲಗಾರರಿಂದ ರೂಪ ತಾಳುವ ಪದ್ಯ ಹೇಗಿರುತ್ತದೆ?
ಆದರೆ ಪದ್ಯ
ಇಂಥ ಸುಳ್ಳು ಅಸ್ತಿತ್ವದಲ್ಲಿ
ಪಳಗಿದ, ದಣಿದ
ಸೂಳೆಯಾಗುತ್ತದೆ.
ಒಂದು ನಕ್ಷತ್ರಗಳ ರಾತ್ರಿ
(ಪ್ರೀತಿ ಜೀವಂತಿಕೆ ಇಲ್ಲದ
ಶುಷ್ಕ, ಮಂದ, ನಿರಾಸಕ್ತ)
ಪದ್ಯ ತೆರೆದುಕೊಳ್ಳುತ್ತದೆ;
ಹಣಕ್ಕಾಗಿ ತೆರೆದುಕೊಳ್ಳುವ
ತೊಡೆಗಳ ಹಾಗೆ…!!

 

ಮೀನಾ ಸಾಲುಗಳ ಬಗ್ಗೆ ನೀವೇನಂತೀರಿ?
ಮೀನಾ ಅನಂತಮೂರ್ತಿ ಅವರ ಸಂಸ್ಕಾರ ಅನುವಾದ ಮಾಡುವವರಿದ್ದಾರಂತೆ. ಕನ್ನಡ ಸಾಹಿತ್ಯದ ಜೊತೆಗೆ ಆಕೆಯ ಸಂಪರ್ಕ ಏರ್ಪಡಲಿ, ಭಿನ್ನ ಕಾವ್ಯ ಪರಂಪರೆಗಳ ಸಂಗಮವಾಗಲಿ. ಆಕೆಯ ಕವಿತೆಗಳು ಮತ್ತು ಇತರೆ ಬರಹಗಳನ್ನು ಓದುವ ಆಸಕ್ತಿ ಇದ್ದರೆ ಇಲ್ಲಿಗೆ ಹೋಗಬಹುದು…

‍ಲೇಖಕರು avadhi

April 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೊಸ ಕೃತಿ ‘ಖಾನಾಬದೋಶ್’

ಹೊಸ ಕೃತಿ ‘ಖಾನಾಬದೋಶ್’

ರೇಣುಕಾ ನಿಡಗುಂದಿ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. 'ಅಲೆಮಾರಿಯೊಬ್ಬಳ ಆತ್ಮವೃತ್ತಾಂತ' ಬಹುಬೇಗ ನಿಮ್ಮ...

ಮಹಾಶ್ವೇತಾದೇವಿಯವರ ‘ರುಡಾಲಿ’

ಮಹಾಶ್ವೇತಾದೇವಿಯವರ ‘ರುಡಾಲಿ’

ರುಡಾಲಿ ಹೆಸರಾಂತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿಯವರ ಕಿರು ಕಾದಂಬರಿ. ಇದು ಹಿಂದಿಭಾಷೆಯಲ್ಲಿ ಕಲ್ಪನಾ ಲಾಜ್ಮಿ ಅವರ ನಿರ್ದೇಶನದಲ್ಲಿ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಗಾಣಧಾಳು ಶ್ರೀಕಂಠCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: