ಕಾಶಿಯ ಮಹದೇವನನ್ನು ಬೇಡುವ ಸ್ಥಿತಿ ಬದಲಾಗಲೇ ಇಲ್ಲ..!

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ದೆಹಲಿಯ ಪ್ರತಿಷ್ಠಿತ ಹೋಟೆಲ್ ಒಂದರ ವಿಶಾಲವಾದ ಹಾಲ್. ಪಾನ ಗೋಷ್ಠಿಗಳಿಗೆ ವ್ಯವಸ್ಥೆ ಮಾಡಿರುವ ಟೇಬಲ್ ಗಳು. ಘಮಘಮಿಸುವ ಮೃಷ್ಟಾನ್ನದ ವ್ಯವಸ್ಥೆ. ಮಂದವಾದ ದೀಪದ ಬೆಳಕಿಗೆ ಸುಗಂಧ ಬೆರೆತ ವಾತಾವರಣ. ಮಿನುಗುವ ಬಿಗಿಯಾದ ಧಿರಿಸಿನಿಂದ ಬಳುಕುತ್ತಾ ಹೊರ ಬಂದ ಲಲನೆಯರ ನೋಡಿ ಒಮ್ಮೆಲೇ ಎಲ್ಲರ ಮನಸ್ಸುಗಳಲ್ಲಿ ಬೆಳಕು ಕೋರೈಸಿತ್ತು. ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಅಪ್ರತಿಮ ಸುಂದರಿಯರು. ಅವರ ಮೈಮಾಟ, ನೃತ್ಯದ ಭಂಗಿ ನೋಡಿದ, ಅಲ್ಲಿ ಕುಳಿತು ನಿಧಾನವಾಗಿ ಪಾನೀಯಗಳ  ಹೀರುತ್ತಿದ್ದ ಮನಸ್ಸುಗಳಿಗೆ ಮತ್ತೇರಿಸುವಂತಿದ್ದವು. ಮೊದಲೇ ಕಾಯ್ದಿರಿಸಿದ್ದ ಆಸನಗಳ ವ್ಯವಸ್ಥೆ ಮಾತ್ರ ಅಲ್ಲಿದ್ದುದು. ಇಡೀ ವಾತಾವರಣ ಪರಸ್ಪರ ಪರಿಚಿತವಾಗಿದ್ದವು. 

ಪ್ರೇಕ್ಷಕರ ಕಡೆಯಿಂದ “ಕುಸುಮ್ ಕುಸುಮ್ ಕುಸುಮ್” ಅನ್ನೋ ಉದ್ಘಾರ ಪ್ರತಿಧ್ವನಿಸ್ತು. ಅಷ್ಟರಲ್ಲಿ ಇಪ್ಪತ್ತು – ಇಪ್ಪತ್ತೆರಡು ವಯೋಮಾನದ ಬಳುಕುವ ತರುಣಿಯೊಬ್ಬಳು ತನ್ನನ್ನು ಪ್ರದರ್ಶಿಸುತ್ತಾ ಅಡಿಯಿಟ್ಟಳು. ಅವಳು ಒಳ ಬಂದೊಡನೇ ಇಡೀ ವಲಯಕ್ಕೆ ವಿದ್ಯುತ್ ಸಂಚಾರವಾದಂತಾಯ್ತು. ಸಂಗೀತದ ಅಲೆಗಳು ತಮ್ಮ ತರಂಗವನ್ನು ಹೆಚ್ಚಿಸಿಕೊಂಡವು. ಮೊದಲೇ ಪ್ರವೇಶಿಸಿದ್ದ ತರುಣಿಯರು ಕುಸುಮ್ ಳ ಸುತ್ತ ಹೆಜ್ಜೆ ಹಾಕಲು ಆರಂಭಿಸಿದ್ರು. ಇಡೀ ದೇಹದಲ್ಲಿ ಮೂಳೆಗಳೇ ಇಲ್ಲವೇನೋ ಎಂಬಂತೆ ದೇಹವನ್ನು ತನ್ನ ನಿಯಂತ್ರಣಕ್ಕೊಳಪಡಿಸಿ ನೃತ್ಯ ಮಾಡ್ತಾ ಇದ್ದಳು ಕುಸುಮ್. ಅದಕ್ಕೆ ತಕ್ಕ ಸಂಗೀತ. ಅವಳು ಮೋಹಕ ನೋಟದೊಂದಿಗೆ ಕಲಾರಾಧಕರೂ, ರಸಿಕರೂ ಆದ ಪ್ರೇಕ್ಷಕರ ಸನಿಹ ಬಂದರಂತೂ ಅವಳೊಂದಿಗೆ ತೂರಾಡುತ್ತಾ ಹೆಜ್ಜೆ ಹಾಕುವವರು ಸ್ವರ್ಗದ ಕಲ್ಪನೆಯಲ್ಲಿ ತೇಲಾಡ್ತಾ ಇದ್ರು. ಅವಳ ನೃತ್ಯ ತನ್ನ ಗತಿಯನ್ನು ಹೆಚ್ಚಿಸಿದಂತೆಲ್ಲಾ ಅಲ್ಲಿ ನೆರೆದಿದ್ದವರ ಮತ್ತಿನ ಗತಿಯೂ ಏರುತ್ತಿತ್ತು. ಮೈಮರೆತು ಅವಳ ಉದ್ದಕ್ಕೂ ನೋಟಿನ ಮಳೆಯೇ ಸುರಿಯುತ್ತಿತ್ತು. ಅದನ್ನು ಮತ್ತೆ ಮತ್ತೆ ಉತ್ತೇಜಿಸುವಂತೆ ಅವಳ ನಡವಳಿಕೆಯೂ ಇರುತ್ತಿತ್ತು.

ಬಣ್ಣಬಣ್ಣಗಳ ಬೆಳಕಿನಾಟ, ಸಂಗೀತದ ಜೊತೆಯಾಟ, ಕುಸುಮಳ ಮೈಮಾಟ ಬೆರೆತ ಆ ರಾತ್ರಿ ಇನ್ನೊಂದು ಕಾಮುಕನ ಹಿಡಿತಕ್ಕೆ ಸಿಲುಕುವ ಪ್ರವೇಶಿಕೆಯನ್ನು ತಯಾರು ಮಾಡುತ್ತಿತ್ತು. ಮತ್ತೇರಿದ ಉತ್ತುಂಗದಲ್ಲಿ ಎಲ್ಲವೂ ಬಿಕರಿಯಾಯ್ತು. ಅಲಂಕಾರ ಮತ್ತು ಉತ್ಸಾಹದ ವಾತಾವರಣ ನಿಸ್ತೇಜವಾಯ್ತು. ಅಲ್ಲಿ ನೆರೆದಿದ್ದವರಲ್ಲಿ ಒಬ್ಬ ಶ್ರೀಮಂತ ಕುಸುಮಳ ಆ ರಾತ್ರಿಯ ಮಾಲೀಕನಾದ!! ಯಾರು ಈ ಕುಸುಮ್? ಪ್ರಶ್ನೆಗೆ ಬಬಿತಾ ದೀದಿ ಕೇಳಿ, ಅನ್ನೋ ಉತ್ತರ ಬಂತು. ಬಬಿತಾಳನ್ನು ಕೇಳಿದಾಗ, ಕುಸುಮ್ ವಾರಣಾಸಿಯ ಶಿವದಾಸಪುರದವಳು ಎಂದಳು.

ವಾರಣಾಸಿ!! ಇಷ್ಟು ಅದ್ಭುತ ನೃತ್ಯಗಾರ್ತಿ ಕುಸುಮ್ ಶಿವದಾಸಪುರದವಳಾ? ಹುಬ್ಬೇರಿಸಿದೆ. ಬಬಿತಾ ತನ್ನ ಎಲ್ಲ ನೆನಪುಗಳನ್ನು ಬಿಚ್ಚಿಟ್ಟಳು. ಹೌದು. ಕುಸುಮ್ ವಾರಣಾಸಿಯ ಶಿವದಾಸ ಪುರದವಳು. ನನ್ನ ಸಂಬಂಧಿಯೇ ಆಗಬೇಕು. ಇವಳ ಅಮ್ಮ ಮಹಿಮಾ ಶಿವದಾಸ ಪುರದ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದಳು. ವಾರಣಾಸಿಯ ನವರಾತ್ರಿ ಸ್ಮಶಾನ ನೃತ್ಯ ಮಾಡುವಲ್ಲಿ ಖ್ಯಾತಳಾಗಿದ್ಲು. ಚಿಕ್ಕ ವಯಸ್ಸಿನಲ್ಲೇ ನಿಧನಳಾಗಿದ್ಲು. ಕುಸುಮ್ ಆಗ ನಾಲ್ಕೈದು ವರ್ಷದ ಮಗು. ಅವಳಿಗೆ ಈ ನಾಟ್ಯ ಕಲೆ ಅಮ್ಮನ ಬಳುವಳಿಯಾಗಿ ಬಂದಿದೆ. ಅಮ್ಮ ಸತ್ತ ಮೇಲೆ ಈ ಅನಾಥ ಮಗುವನ್ನು ಶಿವದಾಸಪುರದವರೇ ನೋಡ್ಕೊಳ್ತಿದ್ರು. ಅವರ ನಡುವೆಯೇ ಬೆಳೆದ ಮಗು ಕುಸುಮ್. ನಾನೂ ಅಲ್ಲಿಯವಳೇ.

ನಾನು ಒಮ್ಮೆ ನವರಾತ್ರಿ ಸ್ಮಶಾನೇಶ್ವರ ಮಹದೇವ್ ನೃತ್ಯೋತ್ಸವಕ್ಕೆ ಹೋಗಿದ್ದೆ. ಅಲ್ಲಿ ಕುಸುಮ್ ಸ್ಥಿತಿ ನೋಡಿ ನನ್ನ ಜೊತೆ ಕರ್ಕೊಂಡು ಬಂದೆ. ಅವಳಿಗೆ ಮನೆಯಲ್ಲಿಯೇ ನೃತ್ಯಾಭ್ಯಾಸ ಮಾಡಿಸಿದೆ. ಮೂಲತಃ ನಮಗೆಲ್ಲ ನೃತ್ಯ ಕಲೆ ರಕ್ತಗತವಾಗಿ ಬಂದಿರೋದ್ರಿಂದ ಬಹಳ ಬೇಗ ಹೊರಜಗತ್ತಿನ ನೃತ್ಯದಲ್ಲೂ ಕುಸುಮ್ ಪ್ರವೀಣೆಯಾದಳು.

ಪ್ರೌಢಾವಸ್ಥೆಗೆ ಬಂದನಂತರ ಹೀಗೇ ಪ್ರತಿಷ್ಠಿತ ಸ್ಥಳಗಳಲ್ಲಿ ನೃತ್ಯ ಮಾಡ್ತಾಳೆ. ನಂತರ ರಾತ್ರಿ ಗಿರಾಕಿಯೊಂದಿಗೆ ಹೋಗ್ತಾಳೆ. ಬಬಿತಾ ಕೂಡ ಶಿವದಾಸಪುರದ, ಅಪ್ಪನ ಹೆಸರಿಲ್ಲದವಳೇ ಆಗಿದ್ದು ತಾನು ಕಂಡ ಶಿವದಾಸಪುರದ ನೆನಪುಗಳನ್ನು ಮೆಲುಕು ಹಾಕ್ತಾಳೆ. ಅವು ನವರಾತ್ರಿಯ ರಾತ್ರಿಗಳು. ಅಮ್ಮನ ಜೊತೆ ವಾರಣಾಸಿಯ ಸ್ಮಶಾನ ನೃತ್ಯಕ್ಕೆ ಹೋಗಲು ಅಜ್ಜಿ ನನ್ನನ್ನೂ ಚೆನ್ನಾಗಿ ಶೃಂಗರಿಸಿದ್ದಳು. ಅಲ್ಲಿಗೆ ನಾವಿದ್ದ ಶಿವದಾಸ್ ಪುರ, ಮಾಂಡುಡಿಹ್, ಚುನಾರ್ ಮತ್ತು ದಲ್ಮಂಡಿ ರೆಡ್ ಲೈಟ್ ಏರಿಯಾದಿಂದ ನೂರಾರು ವೇಶ್ಯೆಯರು ನೃತ್ಯ ಮಾಡಲು ಬರ್ತಿದ್ದರು.

ಸುಮಾರು 450 ವರ್ಷಗಳಿಂದಲೂ ವೇಶ್ಯೆಯರು ಮಾತ್ರ ಈ ಮಹಾ ಸ್ಮಶಾನ ನೃತ್ಯ ಮಾಡುತ್ತಾ ಬಂದಿದ್ದಾರೆ. ಅಮ್ಮನೊಂದಿಗೆ ನಾನೂ ಹೊರಟೆ. ಅದು ಬಹು ದೊಡ್ಡ ಸ್ಮಶಾನ. ಅಲ್ಲಿ ಹಗಲು ರಾತ್ರಿಗಳೆನ್ನದೆ ಸದಾ ಮೃತ ದೇಹಗಳ ಅಂತ್ಯಕ್ರಿಯೆ ನಡೆಯುತ್ತಲೇ ಇರುತ್ತದೆ. ಬೆಂಕಿ ಧಗಧಗಿಸುತ್ತಲೇ ಇರುತ್ತದೆ. ಅದಕ್ಕೆ ಅದನ್ನು ಮಹಾಸ್ಮಶಾನ ಅಂತಾರೆ. ಹಾಗೆ ಉರಿಯುತ್ತಿರುವ ಚಿತೆಯ ಸುತ್ತಲೂ ವೇಶ್ಯೆಯರು ನೃತ್ಯ ಮಾಡುತ್ತಲೇ ಇರುತ್ತಾರೆ. ಪಾಪನಾಶಿನಿ ಗಂಗೆಯೇ, ಜಗದ್ ರಕ್ಷಕ ಮಹಾದೇವನೇ ನಮ್ಮನ್ನು ಶುದ್ಧಗೊಳಿಸು ದೇವಾ, ನಮಗೆ ಉತ್ತಮ ಪುನರ್ಜನ್ಮ ನೀಡು, ನಮಗೆ ಒಳ್ಳೆಯ ಬದುಕು ಕೊಡು ಎಂದು ಗುಂಪು ಗುಂಪಾಗಿ ಹಾಡುತ್ತಾರೆ. ವಿನಮ್ರವಾಗಿ ಚಿತೆಯ ಸುತ್ತ ನೃತ್ಯ ಮಾಡುತ್ತಾರೆ. ನಮ್ಮ ನೃತ್ಯವನ್ನು ನೋಡಲು ಅದೆಷ್ಟೋ ಜನ ಅಲ್ಲಿ ನೆರೆದಿರುತ್ತಾರೆ. ಅಲ್ಲಿಯೇ ಊಟ, ಗಾಂಜಾ, ಕುಡಿತವೂ ಸಾಂಗವಾಗಿ ನಡೀತಿರುತ್ತದೆ. ಈ ಸಂಪ್ರದಾಯ ಪಾರಂಪರಿಕವಾಗಿ ನಡ್ಕೊಂಡು ಬಂದಿದೆ. ಅದನ್ನು ‘ಸ್ಮಶಾನೇಶ್ವರ ಮಹಾದೇವನ ಶೃಂಗಾರ’ ಅಂತ ಕರೀತಾರೆ. ಅಂದಿನ ನವರಾತ್ರಿಯ ಉತ್ಸವದಲ್ಲಿ ಮಹಾದೇವನ ನೆನೆಯುತ್ತಾ ನೃತ್ಯ ಮಾಡಿದ್ದೆ.

ದೆಹಲಿಯ ಜಿ.ಬಿ.ರಸ್ತೆಯಿಂದ ಬಂದಿದ್ದ ಸೌಧಾಮಿನಿ ಅಜ್ಜಿಯ ಜೊತೆ ಸುದೀರ್ಘವಾಗಿ ಮಾತಾಡಿದ್ಲು. ಶಿವದಾಸಪುರದಲ್ಲಿ ವೃತ್ತಿ ಮಾಡಿ ಸಾಯುವವರೆಗೂ ದುಡಿದರೂ ಬದುಕು ಮೂರಾಬಟ್ಟೆಯೇ ಆಗಿರುತ್ತೆ. ತಿನ್ನಲು, ಉಡಲು, ತೊಡಲು ಸದಾ ಬಡತನವೇ ಬೆನ್ನಿಗಂಟಿ ಕೊಂಡಿರುತ್ತದೆ. ನನ್ನೊಂದಿಗೆ ಕಳಿಸು, ದೆಹಲಿಯಲ್ಲಿ ದುಡಿದು ನಿನಗೊಂದು ಸೂರಾದ್ರೂ ಮಾಡ್ತಾಳೆ ಅಂತ ಅಜ್ಜಿಯನ್ನು, ಅಮ್ಮನನ್ನು ಒಪ್ಪಿಸಿದ್ಲು. ಹೇಗೂ ಇಲ್ಲಿಯ ಬದುಕು ದುಸ್ತರವೇ ಅಂತ ನಿರ್ಧರಿಸಿದ ಅಜ್ಜಿ, ಅಮ್ಮ ನನ್ನನ್ನು ಸೌಧಾಮಿನಿ ಜೊತೆ ಕಳಿಸಿಕೊಟ್ಟರು. 

ದೆಹಲಿಗೆ ಬಂದಾಗ ಮೊದಮೊದಲು ಅವಳು ಹೇಳಿದಂತೆ ಕೇಳಿಕೊಂಡೇ ಜಿಬಿ ರಸ್ತೆಯ ಆ ಕೊಳಕು ಕಿಷ್ಕಿಂದೆಯ ಮನೆಯಲ್ಲಿಯೇ ಇದ್ದೆ. ನಂತರ ಬದುಕಲು ಕಲಿಯಲೇ ಬೇಕೆನಿಸಿತು. ನನಗೆ ಚೆನ್ನಾಗಿ ಗೊತ್ತಿದ್ದ ನೃತ್ಯದಿಂದ ಡ್ಯಾನ್ಸ್ ಬಾರ್ ಗಳಲ್ಲಿ ಸೇರಿಕೊಂಡೆ. ಡ್ಯಾನ್ಸ್ ಬಾರ್ ನವರೇ ಗಿರಾಕಿಗಳನ್ನು ಗೊತ್ತು ಮಾಡೋರು. ನನಗೂ ಸ್ವಲ್ಪ ದುಡ್ಡು ಕೊಡೋರು. ಹೇಗೋ ಹೆಣಗಾಡಿ ಬಾರ್ ನ ಗೆಳೆಯನೊಬ್ಬನ ಸಹಕಾರದಿಂದ ಬಾಡಿಗೆ ಮನೆಯೊಂದನ್ನು ಹಿಡಿದೆ.

ಶಿವದಾಸಪುರದಿಂದ ಅಜ್ಜಿಯನ್ನು ಕರ್ಕೊಂಡು ಬಂದೆ. ಪ್ರತಿಬಾರಿ ನವರಾತ್ರಿ ನೃತ್ಯ ಉತ್ಸವಕ್ಕೆ ಹೋದಾಗಲೂ ಒಬ್ಬಿಬ್ಬರು ಹುಡುಗಿಯರನ್ನು ಕರ್ಕೊಂಡು ಬರ್ತಿದ್ದೆ. ಅವರಿಗೆ ಇನ್ನೂ ಹೆಚ್ಚಿನ ನೃತ್ಯಾಭ್ಯಾಸ ಮಾಡಿಸಿ ಡ್ಯಾನ್ಸ್ ಬಾರ್ ಗಳು, ಲೈವ್ ಬ್ಯಾಂಡ್ ಗಳಿಗೆ ಕಳಿಸ್ತೀನಿ. ಅದೆಲ್ಲಾ ಜವಾಬ್ದಾರಿ ನಿರ್ವಹಿಸ್ತಾನೇ ನಾನೂ ಸಂಪಾದನೆ ಮಾಡ್ಕೊಂಡು, ಅವರ ಅಮ್ಮಂದಿರಿಗೂ ಸ್ವಲ್ಪ ಹಣ ಕಳುಹಿಸುವ ವ್ಯವಸ್ಥೆ ಮಾಡ್ತಿದ್ದೀನಿ. ಆ ಹುಡುಗಿಯರನ್ನೂ ಚೆನ್ನಾಗಿ ನೋಡ್ಕೊಂಡಿದ್ದೀನಿ. ಏನು ಮಾಡಿದರೂ ನಮ್ಮ ಪಾಪವಿಮೋಚನೆಗಾಗಿ ಆ ಕಾಶಿಯ ಮಹದೇವನನ್ನು ಬೇಡುವ ಸ್ಥಿತಿಯಂತೂ ಬದಲಾಗಲೇ ಇಲ್ಲ..!

‍ಲೇಖಕರು ಲೀಲಾ ಸಂಪಿಗೆ

December 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This