ಕಾಸು ಕುಡಿಕೆ:’ಮೀನಾ ಮತ್ತು ಗೃಹಸಾಲ’

ಕಾಸು ಕುಡಿಕೆ -24 -ಜಯದೇವ ಪ್ರಸಾದ ಮೊಳೆಯಾರ Always borrow from a pessimist, he never expects it back.. . . . . . . Anonymous. . ಯಾವತ್ತೂ ಒಬ್ಬ ನಿರಾಶಾವಾದಿಯಿಂದಲೇ ಸಾಲ ತೆಗೆದುಕೊಳ್ಳಿ, ಆತ ಅದನ್ನು ವಾಪಾಸು ನಿರೀಕ್ಷಿಸುವುದಿಲ್ಲ.. . ಅನಾಮಿಕ. ಇದು ಒಳ್ಳೆ ಫಚೀತಿ ಆಯ್ತಲ್ಲ ಮಾರಾಯ್ರೆ, ಇದ್ದಕ್ಕಿದ್ದಂತೆ ಈ ಮೀನಾ ಎಂಬ ಚತುರೆ ಯಾವ ರಾಶಿಯಿಂದ ಎದ್ದು ಬಂದಳು? ನಾನು ಆರನೇ ಪೇಜಿನಲ್ಲಿ ಪ್ರತಿಷ್ಠಾಪನೆ ಮಾಡಿದ ಗುರುಗುಂಟಿರಾಯರನ್ನು ಅಲ್ಲಿಂದ ಕಿಡ್ನಾಪ್ ಮಾಡಿ ಮೊನ್ನೆಯ ಸಾಪ್ತಾಹಿಕದ ಎರಡನೆಯ ಪೇಜಿನಲ್ಲಿ ಇಂಟರ್‌ವ್ಯೂ ಮಾಡಿ ಛೂ ಬಿಟ್ಟ ಈ ಮಹಾನುಭಾವಳು ಯಾರು? ಇದು ಮೊತ್ತ ಮೊದಲನೆಯ ಪ್ರಶ್ನೆ.

ಎರಡನೆಯದಾಗಿ ಈ ಗುರುಗುಂಟಿರಾಯರಿಗೆ ನನ್ನ ಮೇಲೆ ಯಾಕಿಷ್ಟು ಸಿಟ್ಟೋ ಆ ದೇವನೇ ಬಲ್ಲ. ನಾನು ಅವರಿಗೆ ಇನ್ಸಲ್ಟ್ ಮಾಡಿದ್ದೇನಂತೆ, ಕೆಟ್ಟ ಟ್ರೀಟ್ಮೆಂಟ್ ನೀಡಿದ್ದೇನಂತೆ. ಅಬ್ಬಬ್ಬ ರಾಯರ ಕಂಪ್ಲೈಂಟ್ ಒಂದಾ ಎರಡಾ? ನಾನೇನೋ ವಸ್ತು ನಿಷ್ಠವಾಗಿ ಇದ್ದುದನ್ನು ಇದ್ದಂತೆ ಹೇಳಿದರೆ ಅವರಿಗೆ ಯಾಕಪ್ಪಾ ಇಷ್ಟು ಕೆಂಡದಂತ ಕೋಪ? ಇದು ಎರಡನೆಯ ಪ್ರಶ್ನೆ. ಈ ಎರಡೂ ಪ್ರಶ್ನೆಗಳಿಗೆ ಒಂದು ಸಿ.ಬಿ.ಐ ಎನ್‌ಕ್ವಯರಿ ಆಗಲೇ ಬೇಕು. ಅದೇನೇ ಇರಲಿ, ನನಗೆ ಮಾತ್ರ ಗುರುಗುಂಟಿರಾಯರ ಮೇಲೆ ಯಾವುದೇ ರೀತಿಯ ಅಸಮಧಾನವಾಗಲಿ, ಕೋಪ-ಬೇಸರಗಳಾಗಲಿ ಇಲ್ಲವೇ ಇಲ್ಲ. ಅವರು ನನಗೆ ಬಹಳ ಆಪ್ತರೇ. ಅವರನ್ನು ಬಹಳ ಮೊದಲಿನಿಂದಲೇ ಮೆಚ್ಚಿಕೊಂಡು ಬಂದವರಲ್ಲಿ ನಾನೂ ಒಬ್ಬ. ನಾನು ಅವರನ್ನು ಮೊತ್ತ ಮೊದಲನೆಯದಾಗಿ ಭೇಟಿಯಾದದ್ದು ಬರವಣಿಗೆ ಶಾಸ್ತ್ರದಲ್ಲಿ ನನ್ನ ಗುರುಗಳಾದ ಶಾಂತಾರಾಮ ಸೋಮಯಾಜಿಯವರ ’ನಾವು ಮತ್ತು ನಮ್ಮ ಮನಸ್ಸು’ (sಸುಮುಖ ಪ್ರಕಾಶನ) ಎಂಬ ಪುಸ್ತಕದಲ್ಲಿ. ಆ ಪುಸ್ತಕ ಆರಂಭವಾಗುವುದೇ ಈ ರೀತಿ – ರಾಯರ ಹೆಸರಿನೊಂದಿಗೆ: ’ಗುರುಗುಂಟಿರಾಯರು ವಾಕ್ ಹೊರಡುತ್ತಾರೆ. ಮನೆಯಿಂದ ಹೊರಬಂದು ಗೇಟ್ ದಾಟಿ, ಸಣ್ಣ ಕಾಲು ಹಾದಿಯಲ್ಲಿ ಚಪ್ಪಲಿಯಿಂದ ಧೂಳಿ ಕೆದಕಿಕೊಂಡು ನಡೆಯುತ್ತಾರೆ. ಮತ್ತೆ ಡಾಮಾರು ಮಾರ್ಗಕ್ಕೆ ಕಾಲಿಟ್ಟು ಕಾರು, ಬೈಕು, ಲಾರಿ, ಬಸ್ಸುಗಳಿಂದ ಆದಷ್ಟು ದೂರದಲ್ಲಿ ಹೆಜ್ಜೆ ಹಾಕುತ್ತಾರೆ.’ ಮನಸ್ಸಿನ ಬಗ್ಗೆ ವ್ಯಕ್ತಿಗತ ನೆಲೆಯಲ್ಲೂ, ಸಾಮೂಹಿಕ ನೆಲೆಯಲ್ಲೂ, ವೈಜ್ಞಾನಿಕ ಮತ್ತು ರಾಶನಲ್ ವಿಚಾರ ವಿಶ್ಲೇಷಣೆಗಳನ್ನೊಳಗೊಂಡ ಈ ಪುಸ್ತಕದಷ್ಟೇ ಅದರಲ್ಲಿ ಬರುವ ಗುರುಗುಂಟಿರಾಯರೂ ನನಗೆ ಇಷ್ಟವಾದರು; ನನ್ನ ಹೃದಯದಲ್ಲಿ ಒಂದೆಕ್ರೆ ಜಾಗ ಎನ್‌ಕ್ರೋಚ್ ಮಾಡಿ ಪರ್ಮನೆಂಟ್ ಆಗಿ ಅಲ್ಲೇ ಸೆಟ್ಲ್ ಆದರು. ಬಳಿಕ ಮುಂದೊಮ್ಮೆ ’ಕಾಸು-ಕುಡಿಕೆ’ಯ ರೂಪ-ರೇಷೆಗಳ ಬಗ್ಗೆ ಸೋಮಯಾಜಿಯವರ ಸಲಹೆ ಪಡೆಯುತ್ತಿರಬೇಕಾದರೆ, ’ನಿಮ್ಮ ಗುರುಗುಂಟಿರಾಯರನ್ನು ನಂಗೆ ಕೊಡ್ತೀರಾ ಸಾರ್? I want to use him’ ಅಂತ ಕೇಳಿಕೊಂಡೆ. ಆ ರೀತಿ ಸಾದರ ಬರಮಾಡಿಕೊಂಡ ರಾಯರನ್ನು ನಾನೆಂತು ಇನ್ಸಲ್ಟ್ ಮಾಡಿಯೇನು? ನೀವೇ ಹೇಳಿ. ಅವರಿಗೆಲ್ಲೋ ’ಗಲತ್ ಫೇಮಿ’ ಆಗಿರಬೇಕು. ಇಲ್ಲದಿದ್ದರೆ ಈಗ ತಾನೇ ಮೊಟ್ಟೆಯೊಡೆದು ಹೊರಬಂದ ಆ ಮಿಸ್ ಮೀನಾ ಜೊತೆ ಹಾಗೆಲ್ಲ ಹೇಳುತ್ತಿರಲಿಲ್ಲ. ಈ ಮಿಸ್ ಅಂಡರ್ಸ್ಟಾಂಡಿಂಗನ್ನು ಆದಷ್ಟು ಬೇಗನೆ ಸರಿಪಡಿಸಿಕೊಳ್ಳಬೇಕು. ಯಾಕೆಂದರೆ, ಅವರಿಲ್ಲದೆ ಕಾಸು-ಕುಡಿಕೆ ಮುಂದುವರಿಯಲಾರದು. ಗುರುಗುಂಟಿರಾಯರೇ ಕಾಕುವಿನ ಪರೇಷ್ ರಾವಲ್, ಅಲ್ಲವೆ? ರಾಯರ ಈ ಎಲ್ಲಾ ಕಿತಾಪತಿ ನಡೆಯುತ್ತಿರಬೇಕಾದರೆ ಜನಪ್ರಿಯ ಸಾಹಿತಿ ವಿವೇಕಾನಂದ ಕಾಮತರ ಫೋನ್ ಬಂತು. ’ಜಯದೇವ್, ನಿಮ್ಮ ಲೇಖನಗಳೆಲ್ಲವೂ ಬಹಳ ಚೆನ್ನಾಗಿಯೇ ಮೂಡಿ ಬರ್ತಾ ಇದೆ. ಆದರೆ ಶೇರುಗಳ ಜೊತೆ ಜೊತೆಗೆ ಲೋನ್‌ಗಳ ಬಗ್ಗೆ ಕೂಡಾ ಸ್ವಲ್ಪ ವಿಶ್ಲೇಷಣೆ ಬರೆಯಿರಿ. ಯಾಕೆಂದರೆ, ಎಲ್ಲರೂ ಶೇರಿನಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಬಹಳಷ್ಟು ಮಧ್ಯಮ ವರ್ಗದ ಜನರು ಒಂದಲ್ಲ ಒಂದು ರೀತಿಯ ಸಾಲದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಾರೆ. ಹಾಗಾಗಿ ಅದರ ಬಗ್ಗೆ ಬರೆದರೆ ಅಂಥವರಿಗೆ ಜಾಸ್ತಿ ಉಪಕಾರವಾದೀತು’ ಅಂತ ಹೇಳಿದರು. ಇಂತಹ ವಿಷಯಗಳಿಗೆ ಯಾವತ್ತೂ ಉತ್ತಮ ಒಗ್ಗರಣೆ ನೀಡುವ ಗುರುಗುಂಟಿರಾಯರನ್ನೇ ಮುಖ್ಯ ಭೂಮಿಕೆಯಲ್ಲಿ ಇಟ್ಟು ಮುಂದೊಮ್ಮೆ ಲೋನ್ ಬಗ್ಗೆ ಬರೆಯಬೇಕೆಂದು ಅಂದುಕೊಂಡೇ ಇದ್ದೆ. ಆದರೆ ಈಗ ವಿವೇಕಾನಂದ ಕಾಮತರೇ ಹೇಳಿದ ಮೇಲೆ ಮುಗಿಯಿತು. ಇದೋ ಇಲ್ಲಿದೆ, ಎಲ್ಲಾ ಸಾಲಗಳ ರಾಜ ಗೃಹಸಾಲದ ಬಗ್ಗೆ ಒಂದಿಷ್ಟು . . . . . * * * ಸಾಲ ತಗೊಂಡು ಮಾನೆಕಟ್ಟುವುದು ಮಹಾ ಪಾಪವೇನೋ ಎಂಬ ಭಯಂಕರ ಭೀತಿಯ ಕಾಲದಿಂದ ಸಾಲ ಎಷ್ಟು ತಗೊಂಡರೂ ಸಾಲದು ಎಂಬ ಇಂದಿನ ಸಾಲ-ಕಾಲದವರೆಗೆ ಧೋರಣೆ ಎಷ್ಟೋ ಬದಲಾಗಿದೆ. ಜೀವನದಲ್ಲಿ ಒಂದು ಮನೆಕಟ್ಟುವುದು ಎಲ್ಲಾ ದಂಪತಿಗಳದ್ದೂ ಒಂದು ಗುರಿಯಾಗಿದೆ. ಒಂದು ಚಿಕ್ಕ, ಸುಂದರ, ನಮ್ಮ ಸೌಕರ್ಯಕ್ಕೆ, ಅಭಿರುಚಿಗೆ ತಕ್ಕಂತೆ ಮನೆ ಕಟ್ಟುವುದು ಮದುವೆಯಾದಷ್ಟೇ, ಮಕ್ಕಳಾದಷ್ಟೇ ಪ್ರಾಮುಖ್ಯ. ನಮಗೆಲ್ಲ. ಆದರೆ ಬಹುತೇಕ ಗುಜರಾತಿ, ರಾಜಸ್ಥಾನಿ, ಮಾರ್ವಾಡಿ ಬಿಸಿನೆಸ್‌ಜನರು ತಮ್ಮ ದುಡ್ಡನ್ನು ಮನೆಕಟ್ಟುವುದರಲ್ಲಿ, ಅದರನ್ನು ಮೈನ್‌ಟೈನ್ ಮಾಡುವುದರಲ್ಲಿ ವಿನಿಯೋಗಿಸುವುದಿಲ್ಲ. ಬಾಡಿಗೆ ಮನೆಯಲ್ಲಿರುತ್ತಾರೆ. ಯಾಕೆಂದರೆ ಉಳಿದ ಬಿಸಿನೆಸ್‌ನಂತೆ ಮನೆಗೆ ಹಾಕಿದ ದುಡ್ಡಿನಿಂದ ಯಾವುದೇ ರಿಟರ್ನ್ ಇಲ್ಲ. ಆದರೆ ನಮಗೆಲ್ಲಾ ಇದು ರಿಟರ್ನ್‌ಗಿಂತ ಜಾಸ್ತಿ ಅಭಿರುಚಿಯ, ಕನಸು ಸಾಕಾರಗೊಳಿಸುವ ಬಾಬ್ತು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು? ಇದೆಲ್ಲಾ ಅವರವರ ವೈಯಕ್ತಿಕ ಮನೋಧರ್ಮಕ್ಕೆ ಬಿಟ್ಟದ್ದು. ಅದೇನೇ ಇರಲಿ, ಸ್ವಂತಕ್ಕೊಂದು ಮನೆ ಬೇಕು ಅಂತ ಅನಿಸಿದಾಗ ನಮ್ಮ ನೆರವಿಗೆ ಬರುವುದು ಹೌಸಿಂಗ್ ಲೋನ್. ೧. ಈಗ ಗೃಹ ಸಾಲಗಳು ಎಲ್ಲಾ ಬ್ಯಾಂಕುಗಳಲ್ಲೂ ಲಭ್ಯ. ಸರಿಯಾದ ಕಾಗದಪತ್ರಗಳ, ಗ್ಯಾರಂಟಿಗಳ ಜೊತೆ ಅರ್ಜಿಹಾಕಬೇಕು ಅಷ್ಟೆ. ಸಾಲ ಅಂದಾಕ್ಷಣ ಮೊತ್ತ ಮೊದಲು ಮನಸ್ಸಿನಲ್ಲಿ ಪ್ರತ್ಯಕ್ಷವಾಗುವುದು ಅದರ ಬಡ್ಡಿ ದರ – Fixed ಯಾ Floating, ಅದರ ಮರುಪಾವತಿಯ ಅವಧಿ, ಮಾಸಿಕ ಕಂತುಗಳು, ಇತರ ಖರ್ಚುಗಳು, ಅವಧಿಪೂರ್ವ ಮರುಪಾವತಿಗೆ ದಂಡ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರು ನೀಡುವ ಕಷ್ಟ-ಮಾರ್ ಸರ್ವಿಸ್!!. ಇವಕ್ಕೆಲ್ಲ ಬ್ಯಾಂಕು-ಬ್ಯಾಂಕುಗಳ ನಡುವೆ ವ್ಯತ್ಯಾಸಗಳಿವೆ. ನಾವು ಎಲ್ಲವನ್ನೂ ಸರಿಯಾಗಿ ಸ್ಟಡಿ ಮಾಡಬೇಕು, ಅನುಭವಸ್ಥರನ್ನು ಕೇಳಿ ತಿಳಿದುಕೊಳ್ಳಬೇಕು, ಒಂದು ಮದುವೆಯಾಗಲು ಹೊರಟಂತೆ. ಫ್ಲೋಟಿಂಗ್ ಬಡ್ಡಿದರದಲ್ಲಿ ಪ್ರತಿ ಬಾರಿ RBI ಯ ಬಡ್ಡಿ ದರ ಬದಲಾದಾಗಲೂ ನಮ್ಮ ಸಾಲದ ಬಡ್ಡಿದರ ಬದಲಾಗುತ್ತದೆ. ಫಿಕ್ಸ್ಡ್‌ದರ ಪದ್ದತಿಯಲ್ಲಿ ಬಡ್ಡಿದರವು ಒಂದು ಕಾಲಾವಧಿಯವರೆಗೆ ಮಾತ್ರ ಸ್ಥಿರವಾಗಿ ನಿಲ್ಲುತ್ತದೆ. ಸುಮಾರಾಗಿ ಇದು ಮೂರು ಇಲ್ಲವೇ ಐದು ವರ್ಷಗಳವರೆಗೆ Fixedಆಗಿ ಉಳಿಯುತ್ತದೆ. ಆ ಬಳಿಕ ಈ ಸ್ಥಿರವಾದ ದರವೂ ಬದಲಾಗುತ್ತದೆ. ಸ್ಥಿರ ಎಂದೊಡನೆ ಬಡ್ಡಿ ದರವು ಮಂಗಳೂರಿನ ಬಾವುಟ ಗುಡ್ಡೆಯಂತೆ ಸದಾ ಕಾಲ ಸ್ಥಿರವಾಗಿ ನಿಲ್ಲುತ್ತದೆ ಎಂಬ ಭ್ರಮೆ ಬೇಡ. ಈ ಬಗ್ಗೆ ಬ್ಯಾಂಕುಗಳಲ್ಲಿ ಸರಿಯಾಗಿ ಕೇಳಿ ತಿಳಿದುಕೊಳ್ಳಬೇಕು. ಫಿಕ್ಸ್ಡ್ ರೇಟಿಗೆ ಪ್ರತಿಯೊಂದು ಬ್ಯಾಂಕಿನದ್ದೂ ತಮ್ಮ ತಮ್ಮ ರೂಲ್ಸಾನುಸಾರ ಬೇರೆ ಬೇರೆ ವ್ಯಾಖ್ಯೆ ಇರುತ್ತದೆ. ’ಧ್ವನ್ಯಾರ್ಥ ಪೀಡೆ’ಗೆ ಬಲಿಯಾಗದಿರಿ. ಫಿಕ್ಸ್ಡ್ ಬಡ್ಡಿ ದರವು ಫ್ಲೋಟಿಂಗ್ ದರಕ್ಕಿಂತ ಸುಮಾರು ೦.೭೫%-೧% ದಷ್ಟು ಜಾಸ್ತಿಯೇ ಇರುತ್ತದೆ. ಎರಡನ್ನೂ ತೂಗಿ ನೋಡಿದರೆ ಫ್ಲೋಟಿಂಗ್ ದರವೇ ಉತ್ತಮವಾದೀತು, ಯಾಕೆಂದರೆ ಅದು ಸಮಯಾನುಸಾರ ಇದ್ದ ದರವನ್ನು ಇದ್ದಂತೆ ನಮಗೆ ಹೇರುತ್ತದೆ. ಫಿಕ್ಸ್ಡ್ ದರದಲ್ಲಿ ಬಡ್ಡಿದರದ ಏರಿಳಿತದ ರಿಸ್ಕ್ ಬ್ಯಾಂಕಿಗೆ ಇರುವುದರಿಂದ ಅದನ್ನು guess ಮಾಡಿ, ಸಂಭಾವ್ಯ ಏರಿಳಿತಗಳನ್ನು ಕೂಡಾ ಅದರಲ್ಲಿ ಸೇರಿಸುತ್ತಾರೆ. ಆದ್ದರಿಂದ, ಸರಳ ಸುಂದರ ಫ್ಲೋಟಿಂಗ್ ದರವನ್ನು ತೆಗೆದುಕೊಳ್ಳುವುದು ಒಳಿತೇನೋ. ಬಡ್ಡಿದರದ ಮಟ್ಟಿಗೆ ಬ್ಯಾಂಕನ್ನು double guess ಮಾಡುವ ಸಾಹಸಕ್ಕೆ ನಾಗರಿಕರಾದ ನಾವು ಎಂದಿಗೂ ಕೈ ಹಾಕಬಾರದು. ೨. ಯಾವುದೇ ಕಾರಣಕ್ಕೂ ಕಿವಿಯಲ್ಲಿ ಹೆಜ್ಜೇನು ಸುರಿದಂತಹ ಧ್ಯನ್ಯಾರ್ಥ ಬರುವ ಜಾಹೀರಾತಿಗೆ ಮರುಳಾಗದಿರಿ. ಇದು ಸರಕಾರಿ ಸಂಸ್ಥೆ, ಇಲ್ಲಿ ಎಲ್ಲವೂ ಪಾರದರ್ಶಕ ಎಂಬ ಭ್ರಮೆಗೂ ಒಳಗಾಗದಿರಿ. ಜಾಹೀರಾತಿನ ಮೋಡಿ ವಿದ್ಯೆಯನ್ನು ಈಗ ಎಲ್ಲಾ ಸಂಸ್ಥೆಗಳೂ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಅಥವ ಇದು ಖಾಸಗಿ ಬ್ಯಾಂಕು, ಇಲ್ಲಿ ಹೋದರೆ ಟೊಪ್ಪಿ ರಟ್ಟೀತು ಎಂಬ ಪೂರ್ವಾಗ್ರಹಕ್ಕೂ ಬಲಿಯಾಗದಿರಿ. ೩. ಬಡ್ಡಿ ದರದ ಶೇಖಡಾ ಅಂಕೆ (೮%,೯%, ಇತ್ಯಾದಿ) ನೋಡಿ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಡಿ. ಅದನ್ನು ಯಾವ ರೀತಿ ಲೆಕ್ಕ ಹಾಕಿದ್ದಾರೆ ಎಂಬ ಬಗ್ಗೆ ಸ್ವಲ್ಪ ಆಳವಾಗಿ ಪರಿಶೀಲಿಸಿ. ಬ್ಯಾಂಕಿಗೆ ಕಟ್ಟಲು ಮಾಸಿಕ ಕಂತುಗಳು (EMI – Equated Monthly Installment. ಈ ಕಂತುಗಳಲ್ಲಿ ಅಸಲೂ ಬಡ್ಡಿಯೂ ಎರಡೂ ಮಿಳಿತವಾಗಿರುತ್ತದೆ.) ಎಷ್ಟು ಬರುತ್ತವೆ ಎಂಬುದು ಅತ್ಯಂತ ಮುಖ್ಯ ವಿಚಾರ. ಇದರಲ್ಲಿ ತೀವ್ರ ಗಮನವಿರಲಿ. ಅದುವೇ ಫೈನಲ್ ೪. ಸಧ್ಯದ ಕರನೀತಿಯನ್ವಯ, (ಮುಂದೆ ಗೊತ್ತಿಲ್ಲ) ಯಾವ ಮೂಲದಿಂದಲಾದರೂ ಪಡೆದ ಸ್ವಂತ ಉಪಯೋಗದ ಗೃಹ ಸಾಲದ ಮೇಲೆ ಸರಕಾರ ರೂ. ೧,೫೦,೦೦೦ ದಷ್ಟು ಬಡ್ಡಿ ಪಾವತಿಯ ಮೇಲೆ ಪೂರ್ಣ ಆದಾಯ ವಿನಾಯತಿ ನೀಡುತ್ತಿದೆ. ಅಂದರೆ, ಮರುಪಾವತಿಸುವ ಮೊತ್ತದಲ್ಲಿನ ಬಡ್ಡಿಯ ಭಾಗವನ್ನು ಒಂದೂವರೆ ಲಕ್ಷದಷ್ಟರ ಮಟ್ಟಿಗೆ ಒಟ್ಟು ಆದಾಯದಿಂದ (Income from House Property, section 24 ಮೂಲಕ) ಕಳೆಯಬಹುದಾಗಿದೆ. ೫. ಇಬ್ಬರಿಗೂ ಸ್ವಂತ ಆದಾಯವಿರುವ ಪತಿ-ಪತ್ನಿಯರು ಜಂಟಿ ಹೆಸರಿನಲ್ಲಿ ಸಾಲ ತೆಗೆದುಕೊಂಡರೆ ಇಬ್ಬರೂ ಒಂದೂವರೆ, ಒಂದೂವರೆ; ಒಟ್ಟು ಮೂರು ಲಕ್ಷದಷ್ಟು ತೆರೆಗೆ ವಿನಾಯಿತಿಯನ್ನು ಒಂದೇ ಮನೆಯ ಮೆಲೆ ಪಡೆಯುವ ಅವಕಾಶವಿದೆ. ೬. ಸ್ವಂತ ಉಪಯೋಗಕ್ಕಲ್ಲದೆ, ಬಾಡಿಗೆ ಕೊಡಲು ಕಟ್ಟಿದ ಮನೆಗೆ ಬಡ್ಡಿ ಪಾವತಿಯ ಒಂದೂವರೆ ಲಕ್ಷದ ಮಿತಿಯೂ ಇರುವುದಿಲ್ಲ- ಇಲ್ಲಿ ಮಿತಿಯಿಲ್ಲದ ಬೆನಿಫಿಟ್. ಆದರೆ ಇಲ್ಲಿ ಬಾಡಿಗೆಯನ್ನು ಆದಾಯವಾಗಿ ಕೂಡಾ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗೂ ವಾರ್ಷಿಕ ಮೈನ್‌ಟೆನನ್ಸ್ ವೆಚ್ಚ ಅಂತ ಬಾಡಿಗೆಯ ಮೊತ್ತದ ೩೦% ವನ್ನು ಕೂಡಾ ಕಳೆಯಬಹುದಾಗಿದೆ. ೭. ಸ್ವಂತ ವಾಸ ಮತ್ತು ಬಾಡಿಗೆಗೆ ಎಂಬ ಪರಿಭಾಷೆ ಹೇಗೆ? ಒಬ್ಬ ವ್ಯಕ್ತಿ ಕಟ್ಟುವ ಮೊದಲನೆಯ ಮನೆಯನ್ನು, ಅದರಲ್ಲಿ ತಾನು ವಾಸವಿಲ್ಲದಿದ್ದರೂ ಸ್ವಂತವಾಸದ ಮನೆ ಎಂದು ತೆಗೆದುಕೊಳ್ಳುವ (deemed)ಅವಕಾಶಗಳಿವೆ. ಆತ ಗೃಹಸಾಲ ಮಾಡಿ ಮನೆಕಟ್ಟಿ ಸ್ವತಃ ಬಾಡಿಗೆ ಮನೆಯಲ್ಲಿದ್ದು ಅತ್ಲಾಗಿ H.R.A ಪ್ರಯೋಜನವನ್ನೂ, ಇತ್ಲಾಗಿ ತೆರಿಗೆ ವಿನಾಯಿತಿ – ಎರಡನ್ನೂ ಒಟ್ಟೊಟ್ಟಿಗೇ ಪಡೆಯುವ ಅವಕಾಶಗಳೂ ಇವೆ. ಹಾಗೆಯೇ ಎರಡನೆಯ ಮನೆಸಾಲವನ್ನು ಬಾಡಿಗೆಗೆ ಎಂದೇ ತೆಗೆದುಕೊಳ್ಳಬೇಕು, ಆತ ಅದನ್ನು ಬಾಡಿಗೆಗೆ ಕೊಟ್ಟಿರಲಿ, ಕೊಡದಿರಲಿ. ಬಾಡಿಗೆಗೆ ಕೊಡದಿದ್ದಲ್ಲಿ ಮಾರುಕಟ್ಟೆ ದರವನ್ನು ಬಾಡಿಗೆಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ೮. ಅದಲ್ಲದೆ, ಸ್ವಂತ ಉಪಯೋಗದ ಮನೆಗಾಗಿ ಮಾಡಿದ ಬ್ಯಾಂಕು ಮೂಲದ ಸಾಲದ ಮರುಪಾವತಿಯಾದರೆ, ಅಸಲಿನ ಭಾಗವನ್ನು ಕೂಡಾ ರೂ ೧,೦೦,೦೦೦ ದಷ್ಟರ ಮಟ್ಟಿಗೆ ಸೆಕ್ಷನ್ ೮೦ ರ ಅಡಿಯಲ್ಲಿ ಕಳೆಯಬಹುದಾಗಿದೆ. ಈ ರೀತಿ ತಮ್ಮ ತಮ್ಮ ಆದಾಯದ ಸ್ಲಾಬ್, ತೆರಿಗೆದರಗಳ ಅನುಸಾರ ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯ ಬೆನಿಫಿಟ್ ಸಿಗುತ್ತದೆ. ೯. ಗೃಹಸಾಲದ ಕರವಿನಾಯಿತಿ ಹಲವಾರು ಗೋಜಲುಮಯ ಒಳ ವಿವರಗಳನ್ನು ಒಳಗೊಂಡಿದೆ. ಇವುಗಳು ‘*Conditions apply’ ಜೊತೆಗೇ ಬರುತ್ತವೆ. ನಿಮ್ಮ ನಿಮ್ಮ ವ್ಯಕ್ತಿಗತ ವಿವರಗಳನ್ನು ನುರಿತ C.A ಜೊತೆ ಚರ್ಚಿಸಿಯೇ ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಿ. ಇಲ್ಲಿ ಕೆಲವು ಆಸಕ್ತಿದಾಯಕ ಸಾಧ್ಯತೆಗಳನ್ನು ಮಾತ್ರ ಸ್ಥೂಲವಾಗಿ ಚಿಂತನೆಗೆ ಎತ್ತಿಕೊಂಡಿದ್ದೇನೆ. ೧೦. ಎಷ್ಟು ಸಾಲ ತೆಗೆದುಕೊಳ್ಳಬೇಕು ಎನ್ನುವುದು ಕೂಡಾ ಮುಖ್ಯ. ಎಷ್ಟೋ ಬಾರಿ ಜನರು ಗೃಹಸಾಲವನ್ನೂ ಪಡೆಯುತ್ತಾರೆ. ಜೊತೆಗೆ ತೀರಾ ಕಡಿಮೆ ಬಡ್ಡಿದರ ಸಿಗುವಂತಹ ಕಡೆಗಳಲ್ಲಿ ತಮ್ಮ ದುಡ್ಡನ್ನು ಠೇವಣಿ ಕೂಡಾ ಇಡುತ್ತಾರೆ (ಎಸ್.ಬಿ ಎಕೌಂಟ್ ಸಹಿತ). ಇದು ಸರಿಯಲ್ಲ. ಇದು ನಷ್ಟಕರ. ಗೃಹಸಾಲ ಪಡೆಯುವವರು ಅದನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಇತರ ಹೂಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಗೃಹಸಾಲದ ಬಡ್ಡಿದರ (ಆದಾಯತೆರಿಗೆ ವಿನಾಯತಿ ಸೇರಿಸಿ) ಕ್ಕಿಂತ ಜಾಸ್ತಿ ಆದಾಯ ಬರುವ ಹಾದಿಗಳಿದ್ದಲ್ಲಿ (ಆದಾಯ ತೆರಿಗೆ ಕಳೆದು) ಮಾತ್ರ ಅವುಗಳಲ್ಲಿ ಹಣ ಹೂಡಬೇಕು. ಇಲ್ಲದಿದ್ದಲ್ಲಿ ಅವುಗಳನ್ನು ಮುರಿದು ಅವನ್ನು ಮೊತ್ತ ಮೊದಲು ಗೃಹನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಬೇಕು. ಈ ತತ್ವಪಾಲನೆ ಬಹಳ ಮುಖ್ಯ. ದಯವಿಟ್ಟು ಗಮನಿಸಿ. ೧೧. ಸಧ್ಯಕ್ಕೆ ಇಳಿಸಿದ ದರದ (೮% ಆಸುಪಾಸಿನ) ಗೃಹಸಾಲದ ಆಕರ್ಷಕ ಸ್ಕೀಂ(teaser) ಇನ್ನೂ ಕೆಲವು ಬ್ಯಾಂಕುಗಳಲ್ಲಿ ಮುಂದುವರಿಯುತ್ತಾ ಇದೆ. ಇದು ಮೇಲೇರುವ ಮೊದಲು ಅದರ ಲಾಭ ಪಡೆದುಕೊಳ್ಳುವುದು ಉತ್ತಮ.]]>

‍ಲೇಖಕರು avadhi

August 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: