ಕಾಸು ಕುಡಿಕೆ: 'ಅರ್ಜೆಂಟ್ ಸಾಲ'…

ಕಾಸು ಕುಡಿಕೆ -26
-ಜಯದೇವ ಪ್ರಸಾದ ಮೊಳೆಯಾರ

If you owe the bank $100 that’s your problem. If you owe the bank $100 million,
that’s the bank’s problem…………. J.Paul Getty.
ನೀವು ಬ್ಯಾಂಕಿಗೆ ನೂರು ಡಾಲರು ಕೊಡಬೇಕಾಗಿದ್ದಲ್ಲಿ ಅದು ನಿಮ್ಮ ಸಮಸ್ಯೆ. ಬದಲು, ನೀವು ನೂರು ಮಿಲಿಯ ಡಾಲರು ಕೊಡಬೇಕಾಗಿದ್ದಲ್ಲಿ ಅದು ಬ್ಯಾಂಕಿನ ಸಮಸ್ಯೆ !!. . . . . . . .  ಜೆ. ಪೌಲ್ ಗೆಟ್ಟಿ.
ಹಾಲ್‌ನಲ್ಲಿ ಕುಳಿತು ಕಂಪ್ಯೂಟರ್ ಮೇಲೆ ‘ಕಾಕು-೨೬’ ಅಂತ ಫಾಂಟ್ ಸೈಜ್   ಹದಿನೆಂಟರಲ್ಲಿ ಕುಟ್ಟಿ, ಅದರ ಕೆಳಗೆ ‘ಅರ್ಜೆಂಟ್ ಸಾಲ’ ಅಂತ ಫಾಂಟ್ ಸೈಜ್ ಮೂವತ್ತಾರರಲ್ಲಿ ಕುಟ್ಟಿ, ಇವತ್ತು ಇದರಲ್ಲಿ ಗುರುಗುಂಟಿರಾಯರು ಬೇಕೇ ಬೇಡವೇ? ಮಸಾಲೆ ದೋಸೆ ಬೇಕೇ ಬೇಡವೇ? ಅಂತ ತಲೆಕೆರೆದುಕೊಂಡು ಸ್ಕ್ರೀನನ್ನು ನೋಡುತ್ತಾ ಆಲೋಚಿಸುತ್ತಿರುವಾಗ ‘ಸರ್. .  ’ ಎಂಬ ಹೆಣ್ಣುದನಿ ಸಣ್ಣಗೆ ಕೇಳಿದಂತಾಗಿ ಬಾಗಿಲೆಡೆ ತಲೆಯೆತ್ತಿ ನೋಡಿದೆ.
ಒಂದು ಸಾದಾರಣ ಸೀರೆಯುಟ್ಟ, ಮುಖದಲ್ಲಿ ಸಾಕಷ್ಟು ಚಿಂತೆ ಗಾಬರಿಗಳ ಛಾಯೆಯನ್ನು ಹೊತ್ತ ಸುಮಾರು ನಡುವಯಸ್ಸಿನ ಹೆಂಗಸೊಬ್ಬರು ನನ್ನ ಮನೆ ಬಾಗಿಲಲ್ಲಿ ನಿಂತು ‘ಒಳಗೆ ಬರಲೇ?’ ಎಂಬ ಭಾವವನ್ನು ಕಣ್ಣಿನಲ್ಲೇ ಸೂಚಿಸುತ್ತಾ ಕೈ ಹಿಸುಕುತ್ತಿದ್ದರು. ಅಸಹಾಯಕರಾಗಿ ಕಂಡುಬಂದ ಹೆಂಗಸನ್ನು ಅರೆಕ್ಷಣ ಹಾಗೆಯೇ ನೋಡಿದೆ. ಗುರುತಾಗಲಿಲ್ಲ. ಕುರ್ಚಿಯಿಂದೆದ್ದು ‘ಬನ್ನಿ ಒಳಗೆ’ ಎನ್ನುತ್ತಾ ಸ್ವಾಗತಿಸಲು ಬಾಗಿಲೆಡೆಗೆ ಸಾಗಿದೆ.
‘ನನ್ನ ಹೆಸರು ವಿಮಲ.
ಸ್ವಲ್ಪ ಅರ್ಜೆಂಟು ಮಾತನಾಡ್ಲಿಕ್ಕೆ ಉಂಟು, ಸರ್’ ಎನ್ನುತ್ತಾ ಒಳ ಬಂದು ನಾನು ತೋರಿಸಿದ ಕುರ್ಚಿಯಲ್ಲಿ ನಿಧಾನವಾಗಿ ಕುಳಿತರು.
ಇನ್ನೂ ಗುರುತಾಗಲಿಲ್ಲ. ಯಾರೋಪ್ಪ. ಏನ್ ಕತೆಯೋ?’ ಎನ್ನುತ್ತಾ ನಾನೂ ಅವರೆದುರು ಕುಳಿತು “ಹೇಳಿ ವಿಮಲ, ಏನ್ ವಿಷಯ?” ಅಂತ ವಿಚಾರಿಸಿದೆ.
ವಿಮಲ ಇನ್ನಷ್ಟೂ ಗಂಭೀರರಾದರು. ಮುಖದಲ್ಲಿ ದುಃಖ ಬೇಸರಗಳು ಮುಖದಿಂದ ಒಡೆದು ಹರಿಯುವಂತೆ ಭಾಸವಾಯಿತು. ಚಿಕ್ಕ ಮೋರೆ ಮಾಡಿ ಸ್ವಲ್ಪ ಹೊತ್ತು ಮಾತನಾಡಲು ಶಬ್ದಗಳಿಗಾಗಿ ತಡಕಾಡುತ್ತಾ ಕುಳಿತರು. ಮಹಿಳೆ ಏನೋ ದೊಡ್ಡ ಕಷ್ಟದಲ್ಲಿ ಇದ್ದಂತೆ ತೋರುತ್ತಿತ್ತು.
“ನಾನು ನಿಮ್ಮ ನೇಬರ್. . . ಇಲ್ಲೇ ಹತ್ರ ಸೆಕೆಂಡ್ ಕ್ರಾಸ್. ನಾವು ಸ್ವಲ್ಪ ಸಾಲದ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಮನೆಯವರು. . . , ಮನುಷ್ಯ ಸ್ವಲ್ಪ ದುಬಾರಿ. ಸಿಕ್ಕಿದ್ದಕ್ಕೆಲ್ಲ ಖರ್ಚು ಮಾಡ್ತಾರೆ. ಕಂಡದ್ದೆಲ್ಲ ಬೇಕು. ಇದ್ದಷ್ಟೂ ಸಾಲ್ದು. ಮತ್ತೆ ಸಾಲ ಮಾಡ್ತಾರೆ, ಒಂದು ಸಾಲ ಮುಚ್ಚಲು ಇನ್ನೊಂದು ಕಡೆ ಹೋಗಿ ಸಾಲ ಮಾಡ್ತಾರೆ.
ಹೀಗೆ ಅಲ್ಲಿ ಇಲ್ಲಿ ಅಂತ ಸಿಕ್ಕಿದ ಫೈನಾನ್ಸ್ ಕಂಪೆನಿಗಳಲ್ಲೆಲ್ಲಾ ಹೋಗಿ ಸಿಕ್ಕಪಟ್ಟೆ ಸಾಲ ಮಾಡಿದ್ದಾರೆ. ವಾಪಾಸು ಕಟ್ಟಲು ನಮ್ಮಲ್ಲಿ ದುಡ್ಡು ಇಲ್ಲ. ಈಗ ರಿಕವರಿ ಅಂತ ಮನೆ ಹತ್ರ ಯಾರ್ಯಾರೋ ಬರ್ತಾರೆ. ಗಲಾಟೆ ಮಾಡಿ ಹೋಗ್ತಾರೆ. ಒಟ್ಟಿನಲ್ಲಿ ನನಗೆ ಹೆದರಿಕೆ ಆಗ್ತದೆ. ಏನು ಮಾಡುವುದು ಅಂತ ಗೊತ್ತಾಗುದಿಲ್ಲ. . . “ ನಿಧಾನವಾಗಿ ವಿಮಲ ತಮ್ಮ ಸಮಸ್ಯೆಯನ್ನು ಬಿಡಿಸಿಟ್ಟರು.
“ಹೌದಾ, ಎಲ್ಲಿದ್ದಾರೆ ನಿಮ್ಮ ಮನೆಯವರು? ಏನ್ ಮಾಡ್ತಾರೆ?”
“ಅವರಿಗೆ ಇಲ್ಲೇ ಶಾಲೆಯಲ್ಲಿ ಕೆಲಸ, ಮಾಸ್ಟ್ರಲ್ಲ, ಆಫೀಸಿನಲ್ಲಿ. ಇವತ್ತು ಶಾಲೆಗೆ ಹೋಗಿದ್ದಾರೆ. ನಾನು ಇಲ್ಲಿ ಬಂದದ್ದು ಅವರಿಗೆ ಗೊತ್ತಿಲ್ಲ. ಈಗ ಎಂತ ಮಾಡುದು ಅಂತ ಗೊತ್ತಾದ್ರೆ ನಾನು ಮತ್ತೆ ಅವರತ್ರ ಮಾತಾಡ್ತೇನೆ. ಇಲ್ಲದಿದ್ರೆ ಅವರನ್ನೇ ಒಮ್ಮೆ ನಿಮ್ಮತ್ರ ಬರ್ಲಿಕ್ಕೆ ಹೇಳ್ತೇನೆ.”
“ಅವರು ಎಲ್ಲಿ, ಎಷ್ಟು ಸಾಲ ಮಾಡಿದ್ದಾರೆ ಗೊತ್ತುಂಟಾ?”
“ಗೊತ್ತಿಲ್ಲ”
“ಅದಿಕ್ಕೆ ಎಷ್ಟು ಬಡ್ಡಿ ಅಂತ ಗೊತ್ತುಂಟಾ?”
“ಇಲ್ಲ, ಅದುಸಾ ಗೊತ್ತಿಲ್ಲ”
“ಯಾಕೆ, ಅವರು ನಿಮ್ಮತ್ರ ಹೇಳುದಿಲ್ವಾ ಸಾಲ ಮಾಡುವಾಗ?”
“ಹೆಂಗಸರತ್ರ ಇದೆಲ್ಲ ಯಾರು ಹೇಳ್ತಾರೆ ಸರ್? ದುಡ್ಡಿನ ವೈವಾಟು ಎಲ್ಲಾ ಎಲ್ಲ ಅವ್ರೇ ನೋಡುದಲ್ವಾ? ನಮ್ಗೆ ಹೇಳ್ಲೇ ಬೇಕು ಅಂತ ಏನಿಲ್ಲ.
ಆದ್ರೆ ಹೀಗೆ ದೊಡ್ಡ ಪ್ರಾಬ್ಲೆಂ ಬಂದ್ರೆ ಮಾತ್ರ ನಂಗೆ ಟೆನ್ಷನ್ ಆಗ್ತದೆ. ಕಷ್ಟ ಅನುಭವಿಸುವಾಗ ಒಟ್ಟಿಗೆ ನಾವೂ ಅನುಭವಿಸ್ಲೇ ಬೇಕಲ್ವಾ?”
“ಕರೆಕ್ಟ್, ಆದ್ರೆ ಹೆಂಗಸರೂ ಆಸಕ್ತಿ ತೆಗೆದುಕೊಳ್ಳುವುದಿಲ್ಲ, ಹೇಳಿದ್ರೆ ಅವರಿಗೆ ಅರ್ಥ ಆಗುವುದಿಲ್ಲ, ಸುಮ್ನೆ ಕಿರಿಕಿರಿ ಮಾಡ್ತಾರೆ  ಅಂತ ಗಂಡಸರದ್ದೂ ಕಂಪ್ಲೈಂಟ್ ಉಂಟಲ್ವ? ನೀವೂ ಸ್ವಲ್ಪ ಆಸಕ್ತಿವಹಿಸಿ ಹಣಕಾಸು ಬಗ್ಗೆ ಸ್ವಲ್ಪ ಆದ್ರೂ ತಿಳ್ಕೊಳ್ಬೇಕಲ್ವ ಅಮ್ಮ?”
“ಹ್ಹೂಂ! ಅದೂ ಹೌದು” ಅರೆಕ್ಷಣ ತಡೆದು, “ಈಗ ನಾವು ಏನು ಮಾಡ್ಬೇಕು ಸರ್?” ಅಂತ ನನ್ನನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟರು.
*   *   *   *
ಕೆಲವರಿಗೆ ಇದ್ದರೂ ಸಾಲ; ಇಲ್ಲದಿದ್ದರೂ ಸಾಲ. ಇನ್ನು ಕೆಲವರಿಗೆ ಎಷ್ಟಿದ್ದರೂ ಸಾಲ.
ಅದೇನೇ ಇರಲಿ; ಈಗ, ಸಾಲಗಳಲ್ಲಿ ಹಲವಾರು ವಿಧ. ಬೇರೆ ಬೇರೆ ಕಾರಣಕ್ಕಾಗಿ ಸಾಲಗಳು ಸಿಗುತ್ತವೆ – ಗೃಹ ಸಾಲ, ವಿದ್ಯಾ ಸಾಲ, ವಾಹನ ಸಾಲ, ಕೃಷಿ ಸಾಲ ಇತ್ಯಾದಿಗಳಲ್ಲದೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿಯೂ ‘ಅರ್ಜೆಂಟಾಗಿ ಸ್ವಲ್ಪ ದುಡ್ಡು ಬೇಕು’ ಅಂತ ಹೇಳಿ ತೆಗೆಯ ಬಹುದಾದ ಚಿನ್ನ, ಆಸ್ತಿ/ವಿತ್ತಪತ್ರಗಳ ಮೇಲಿನ ಅಡಮಾನ ಸಾಲಗಳು ಅಥವಾ ಯಾವುದೇ ಅಂತಹ ಅಡವು, ಶ್ಯೂರಿಟಿ/ಗ್ಯಾರಂಟಿಗಳಿಲ್ಲದ ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಲೋನ್‌ಗಳು. ಪ್ರತಿಯೊಂದಕ್ಕೂ ಬೇರೆ ಬೇರೆ ಕಾರಣಗಳು, ಶ್ಯೂರಿಟಿ/ಗ್ಯಾರಂಟಿಗಳು ಹಾಗೂ ಬಡ್ಡಿದರಗಳಿರುತ್ತವೆ.
ಇವೆಲ್ಲವುಗಳ ಬಗ್ಗೆಯೂ ಅರಿವು ಅಗತ್ಯ. ವಿತ್ತೀಯ ಸಂಸ್ಥೆಯ ದೃಷ್ಟಿಯಿಂದ ನೋಡುವುದಾದರೆ ಕೊಟ್ಟ ಸಾಲ ವಾಪಾಸು ಬರದಿರುವ ರಿಸ್ಕ್ ಜಾಸ್ತಿಯಾದಂತೆ ಬಡ್ಡಿದರವೂ ಅದಕ್ಕನುಗುಣವಾಗಿ ಜಾಸ್ತಿಯಾಗುತ್ತದೆ. ಹಾಗೂ ರಿಸ್ಕ್ ಕಡಿಮೆಯಾಗಿ ಭದ್ರತೆ ಜಾಸ್ತಿಯಾದಂತೆ ಬಡ್ಡಿದರವೂ ಕಡಿಮೆ ಮಾಡಲಾಗುತ್ತದೆ. ಇದು ಬಡ್ಡಿದರದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವ ಒಂದು ತತ್ವ.
ಒಬ್ಬ ವ್ಯಕ್ತಿಗೆ ಮದುವೆ, ಪ್ರಯಾಣ, ದೈನಂದಿನ ಖರ್ಚುವೆಚ್ಚ, ಮೆಡಿಕಲ್, ಇತ್ಯಾದಿ ಯಾವುದೇ ವೈಯಕ್ತಿಕ ಕಾರಣಗಳಿಗಾಗಿ ದುಡ್ಡು ಬೇಕಾಗಿ ಬಂದಾಗ ಅತ್ಯಂತ ಸುಲಭವಾಗಿ ಯಾವುದೇ ಶ್ಯೂರಿಟಿ/ಗ್ಯಾರಂಟಿಯಿಲ್ಲದೆ, ಅದಾಯದ ಬಗ್ಗೆ ಪುರಾವೆ ಮಾತ್ರದಿಂದಲೇ ಶೀಘ್ರವಾಗಿ (ಕೆಲವೊಮ್ಮೆ ಅದೇ ದಿನ) ಸಿಗುವ ಸಾಲವೇ ಪರ್ಸನಲ್ ಲೋನ್. ಹೆಚ್ಚಿನ ಸಣ್ಣ ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಅಲ್ಲದೆ ಬ್ಯಾಂಕುಗಳೂ ಕೂಡಾ ಈ ಸೌಲಭ್ಯನ್ನು ನೀಡುತ್ತದೆ.
ಕೆಲವು ಸಂಸ್ಥೆಗಳಂತೂ ಫೋನ್/ಈಮೇಲ್ ಮೂಲಕ ಉತ್ತಮ ಕೆಲಸ/ಸಂಬಳಗಳಿರುವವರನ್ನು ಸಂಪರ್ಕಿಸಿ ೧೦-೧೫ ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್‌ಗಳ ಆಫರ್ ನೀಡುತ್ತವೆ. ಇವುಗಳು ಬೇರೆ ಬೇರೆ ಅವಧಿ ಮತ್ತು ಬಡ್ಡಿದರಗಳೊಂದಿಗೆ ಬರುತ್ತವೆ.
ಹೆಚ್ಚಾಗಿ ಪರ್ಸನಲ್ ಲೋನ್‌ಗಳು ಭದ್ರತೆಯಿಲ್ಲದಿರುವುದರಿಂದ ಬಹಳ ಜಾಸ್ತಿ ಬಡ್ಡಿದರಗಳೊಂದಿಗೆ ಬರುತ್ತವೆ – ಸುಮಾರು ೧೪%-೨೫% ವರೆಗೆ ಹಾಗೂ ಒಮ್ಮೊಮ್ಮೆ ೩೦-೩೫% ರವರೆಗೂ; ಬೇರೆ ಬೇರೆ ಸಂಸ್ಥೆಗಳಲ್ಲಿ.
ಶ್ಯೂರಿಟಿ/ಗ್ಯಾರಂಟಿ ಭದ್ರತೆಗಳಿಲ್ಲದೆ ನೀಡುವ ಈ ಸಾಲವನ್ನು ಸಂಸ್ಥೆಗಳು ವಾಪಾಸು ಪಡೆಯುವುದಾದರೂ ಹೇಗೆ? ಪಡೆಯದಿದ್ದರೆ ಸಂಸ್ಥೆಯ ಹಾಗೂ, ಅದರಲ್ಲಿ ಡೆಪಾಸಿಟ್ ಇಟ್ಟ ಗ್ರಾಹಕರ ಗತಿ?? ಹಾಗಾಗಿ ಸಣ್ಣ ಪುಟ್ಟ ಕಂಪೆನಿಗಳು ತಮ್ಮದೇ ಆದ ರಿಕವರಿ ಸೂತ್ರಗಳನ್ನು ಕಂಡುಕೊಂಡಿವೆ.
ಅಷ್ಟೇ ಏಕೆ?, ಆ ಬಗ್ಗೆ ರಿಸರ್ವ್ ಬ್ಯಾಂಕಿನ ನಿಷೇಧವಿದ್ದರೂ, ಒಂದು ಪ್ರತಿಷ್ಟಿತ ಬ್ಯಾಂಕಿನ ವೆಬ್ ಸೈಟಿನಲ್ಲಿ ಇಂದಿಗೂ ಈ ಗೆರೆಗಳು ಕಂಡುಬರುತ್ತವೆ. “Bank may, at its sole discretion, utilise the services of external service provider/s or agent/s and on such terms as required or necessary, in relation to its products”  ಪರ್ಸನಲ್ ಸಾಲ ಪಡೆಯುವವರು ಈ ವಿವರವನ್ನೂ ಗಮನದಲ್ಲಿ ಇಟ್ಟುಕೊಂಡಿರಬೇಕು.
ವೈಯಕ್ತಿಕ ಕಾರಣಗಳಿಗಾಗಿ ಈ ರೀತಿ ಅರ್ಜೆಂಟ್ ಸಾಲ ಬೇಕಾದಾಗ ಲಭ್ಯವಿರುವ ಎಲ್ಲಾ ಇತರ ದಾರಿಗಳನ್ನು ಮೊತ್ತ ಮೊದಲು ನೋಡುವುದು ಒಳ್ಳೆಯದು. ಒಂದು ವೇಳೆ ನಿಮ್ಮಲ್ಲಿ ಎಲ್ಲೈಸಿ ಪಾಲಿಸಿ ಇದೆಯಾದರೆ, ಎಲ್ಲೈಸಿಗೇ ಹೋಗಿ. ಅಲ್ಲಿ ನಿಮ್ಮ ಪಾಲಿಸಿಯ ವಿಧ, ಅದರಲ್ಲಿ  ಈವರೆಗೆ ಜಮೆಯಾದ ದುಡ್ಡು ಇತ್ಯಾದಿ ವಿವರಗಳನ್ನು ಗಮನಿಸಿ ಸರೆಂಡರ್ ಮೌಲ್ಯ ಲೆಕ್ಕ ಹಾಕಿ, ಅದರ ಆಧಾರದಲ್ಲಿ ಎಲ್ಲೈಸಿಯು ನಿಮಗೆ ಸುಲಭ ಬಡ್ಡಿದರದಲ್ಲಿ ಸಾಲ (ಸಧ್ಯಕ್ಕೆ ೯%) ನೀಡುವುದು.
ಚಿನ್ನದ ಅಡಮಾನ ಸಾಲ ಇತ್ತೀಚೆಗೆ ಬಹಳವಾಗಿ ಪ್ರಚಾರದಲ್ಲಿರುವ ಒಂದು ಸಾಲದ ಪ್ರಕಾರ. ಸುಮಾರು ೧೧-೧೩% ಆಸುಪಾಸಿನ ಬಡ್ಡಿಗೆ ಚಿನ್ನವನ್ನು ಅಡವಾಗಿಟ್ಟುಕೊಂಡು ಅದರ ಬೆಲೆಯ ೯೦% ದವರೆಗೂ ಶೀಘ್ರವಾಗಿ ಸಾಲ ನೀಡುವ ಸಂಸ್ಥೆಗಳು ಪ್ರಚಲಿತವಾಗಿವೆ. ಇವುಗಳ ಬಡ್ಡಿದರಗಳು ಅಡವಿನ ಭದ್ರತೆಯಿರದ ಪರ್ಸನಲ್ ಲೋನ್‌ಗಳಿಗಿಂತ ತೀರಾ ಕಡಿಮೆ. ಸಾಲ ಬೇಕಾದವರು ಈ ಆಯ್ಕೆಯನ್ನೂ ಸರಿಯಾಗಿ ಅಭ್ಯಾಸ ಮಾಡಿ ಮುಂದುವರಿಯುವುದು ಒಳ್ಳೆಯದು.
ಆದರೆ ಚಿನ್ನವು ಒಂದು ಚರ ಸಂಪತ್ತು ಆದಕಾರಣ ನಿಮ್ಮ ಚಿನ್ನದೊಡನೆ ರಾತ್ರೋ ರಾತ್ರಿ ಪರಾರಿಯಾಗಬಹುದಾದ ‘ಬ್ಲೇಡ್ ಕಂಪೆನಿ’ಗಳ ಬಗ್ಗೆಯೂ ಎಚ್ಚರವಿರಲಿ. ಕಂಪೆನಿಯ ಹಿನ್ನೆಲೆ ಮತ್ತು ಚರಿತ್ರೆಯನ್ನು ಗಮನಿಸಿಯೇ ನಿಮ್ಮ ಚಿನ್ನವನ್ನು ಅಲ್ಲಿಗೆ ಅಡವಿಡಲು ಕೊಂಡೊಯ್ಯಿರಿ.
ಸುಮ್ಮನೇ ಲಾಕರ್‌ಗಳಲ್ಲೋ, ಮನೆಯಲ್ಲೋ ಕುಂಭಕರ್ಣನಂತೆ ಗಾಢನಿದ್ರೆ ಮಾಡಿಕೊಂಡಿರುವ ಚಿನ್ನಾಭರಣಗಳು ತಮ್ಮ ಕುಟುಂಬಕ್ಕೆ ಕಷ್ಟಕಾಲದಲ್ಲಿ ಸುಲಭ ಬಡ್ಡಿದರದಲ್ಲಿ ಸಾಲ ರೂಪದಲ್ಲಿ ದುಡ್ಡು ಒದಗಿಸಬಹುದಾದರೆ ಯಾಕಾಗಬಾರದು? ಈಗಾಗಲೇ ಜಾಸ್ತಿ ಬಡ್ಡಿಯ ಪರ್ಸನಲ್ ಸಾಲ ಇದ್ದರೆ ಈ ಸುಲಭ ದರದ ಚಿನ್ನದ ಸಾಲ ತೆಗೆದು ಅದನ್ನು ಮುಚ್ಚಬಹುದು.
ಅದರಿಂದ ಸ್ವಲ್ಪ ಹಣ ಉಳಿತಾಯವಾದೀತು.
ಕಾರ್ ಕೊಳ್ಳುವವರು ಅರ್ಜೆಂಟ್ ಬೇಕು ಎಂದು ಹೆಚ್ಚಿನ ಬಡ್ಡಿದರದಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಿಲ್ಲ. ಬ್ಯಾಂಕುಗಳಲ್ಲಿ ಕಾರಿಗಾಗಿಯೇ ೧೦-೧೩% ಬಡ್ಡಿದರದ ಆಸುಪಾಸಿನಲ್ಲಿ ಕಾರ್ ಲೋನ್‌ಗಳು ಲಭ್ಯ.
ಇನ್ನು ಆಸ್ಥಿಯ ಮೇಲೆ ಅಥವ ವಿತ್ತಪತ್ರಗಳ ಮೇಲಿನ ಸಾಲ. ಬ್ಯಾಂಕೇತರ ಅಥವ ಬ್ಯಾಂಕುಗಳ ‘ಪರ್ಸನಲ್ ಲೋನ್’ ಸ್ಕೀಂಗಳ ಸಾಲಕ್ಕಿಂತ ಕಡಿಮೆದರದಲ್ಲಿ ಈ ಸಾಲವೂ ಲಭ್ಯ. ಎಲ್ಲೈಸಿ ಪಾಲಿಸಿ, ಪೋಸ್ಟಲ್ ಸೇವಿಂಗ್ಸ್, ಬ್ಯಾಂಕು ef .ಡಿ, ಶೇರು, ಭೂಮಿ, ಮನೆ ಇತ್ಯಾದಿ ಪತ್ರಗಳ ಆಧಾರದ ಮೇಲೆ ಬ್ಯಾಂಕು ಮತ್ತು ಇತರ ವಿತ್ತೀಯ ಸಂಸ್ಥೆಗಳಲ್ಲಿ ಸುಮಾರು ೧೨-೧೭% ಬಡ್ಡಿ ದರಗಳಲ್ಲಿ ಸಾಲಗಳು ಲಭ್ಯ. ಇವುಗಳ ವಿವರಗಳು ಸ್ಕೀಮಿನಿಂದ ಸ್ಕೀಮಿಗೆ, ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ.
ಈ ಎಲ್ಲಾ ವಿಧದ ಸಾಲಗಳಲ್ಲೂ ಬಡ್ಡಿ ದರ, ಸಾಲದ ಅವಧಿ, ಪ್ರೊಸೆಸಿಂಗ್ ಫ಼ೀ, ತಡವಾದ ಪಾವತಿಗೆ ದಂಡ, ಬೇಗನೆ ಪಾವತಿಗೆ ದಂಡ, ಅವುಗಳ ಮೇಲಿನ ಸೇವಾಕರಗಳು, ಇವೆಲ್ಲ ‘ಇವೆಯೇ-ಏನು-ಎಷ್ಟು’ ಎಂದು ಕೂಲಂಕುಶವಾಗಿ ಸ್ಟಡಿ ಮಾಡಿಯೇ ನಿರ್ಧಾರ ತೆಗೆದುಕೊಳ್ಳಬೇಕು.
ಆದರೂ, ಎಷ್ಟೋ ಜನರು ಯಾವುದೋ ಕಾರಣಕ್ಕಾಗಿ ‘ಅರ್ಜೆಂಟ್ ಸಾಲ’ ಬೇಕಾದವರು ಅತ್ಯಂತ ಹೆಚ್ಚು ಬಡ್ಡಿದರದ ಪರ್ಸನಲ್ ಲೋನ್‌ಗೇ ಮೊರೆ ಹೋಗುತ್ತಾರೆ. ಇದು ಸುಲಭ ಹಾಗೂ ಅತಿಶೀಘ್ರವಾಗಿ ಸಿಗುವುದೇ ಅದಕ್ಕೆ ಒಂದು ಮುಖ್ಯ ಕಾರಣ. ಅದರ ಬದಲು, ಒಂದು ವ್ಯವಸ್ಥಿತ ರೂಪದಲ್ಲಿ ದುಡ್ಡಿನ ಅವಶ್ಯಕತೆಯನ್ನು ಲೆಕ್ಕ ಹಾಕಿ, ಬೇರೆ ಬೇರೆ ಸಾಲಸೆಲೆಗಳನ್ನು ತುಲನೆಮಾಡಿ ಇರುವ ಆಸ್ತಿ, ಚಿನ್ನ, ಹೂಡಿಕೆಗಳನ್ನೇ ಉಪಯೋಗಿಸಿಕೊಂಡು ಕಮ್ಮಿ ಬಡ್ಡಿದರಕ್ಕೆ ಸಾಲ ಪಡೆದುಕೊಳ್ಳುವ ವಿತ್ತಶಿಸ್ತನ್ನು ರೂಪಿಸಿಕೊಳ್ಳಬೇಕು.
ಬೇಕಾಬಿಟ್ಟಿ ಮನಬಂದಂತೆ ಕೈಸಾಲ-ಮೈಸಾಲ ಮಾಡಿಕೊಂಡು ಬಡ್ಡಿ ಕೊಡಲು ಪರದಾಡುತ್ತಾ, ಮತ್ತೆ ಅದನ್ನು ಕೊಡಲು ಇನ್ನೊಂದು ಹೊಸ ಸಾಲ ಮಾಡುತ್ತಾ, ಸಾಲಚಕ್ರದಲ್ಲಿ ಸುತ್ತುತ್ತಾ ಸುತ್ತುತ್ತಾ ಸಾಲಕೂಪ (debt trap) ಕ್ಕಿಳಿಯದಂತೆ ಅಗತ್ಯವಿರುವ ವಿತ್ತಜ್ಞಾನವನ್ನು ಬೆಳೆಸಿಕೊಳ್ಳಬೇಕು – ಪುರುಷರೂ, ಮಹಿಳೆಯರೂ, ಎಲ್ಲರೂ!

‍ಲೇಖಕರು avadhi

September 9, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

3 ಪ್ರತಿಕ್ರಿಯೆಗಳು

  1. somashekar

    Thanks for an eye opening article that too i read this article in the early morning let me try to implement atleast 50% so that we can lead a peace full life…….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: