ಕಾಸು ಕುಡಿಕೆ: ಈಗ ಏನು ಮಾಡುವುದು ಮೊಳೆಯಾರ್ರೇ?

ಕಾಸು ಕುಡಿಕೆ -16 ಜಯದೇವ ಪ್ರಸಾದ ಮೊಳೆಯಾರ ‘ಮು.ದಿ. ತಾತಾ’ರ ವೃದ್ಧಾಪ್ಯ ಚಿಂತೆಗಳು

If one doesn’t know which port one is sailing to, no wind is favourable- Licius Seneca ಯಾವ ಬಂದರಿನತ್ತ ಹೊರಟೆನೆಂದು ತಿಳಿಯದವನಿಗೆ ಯಾವ ಗಾಳಿಯೂ ಅನುಕೂಲಕರವಾಗಲಾರದು- ಲೀಶಿಯಸ್ ಸೆನೆಕಾ
ಮುಂಗಟ್ಟುಮನೆ ದಿವಾಕರ ತಾತಾ ಅಥವ ‘ಮು.ದಿ. ತಾತಾ’ ಚಿಂತಾಕ್ರಾಂತರಾಗಿದ್ದರು. ಪೂರ್ಣ ಚಂದಿರನನ್ನು ಬೆಳ್ಳಿಮೋಡಗಳು ಮುತ್ತಿದಂತೆ ರಾಯರ ಮುಖವನ್ನು ಬಿಳಿಗಡ್ಡ ಆವರಿಸಿತ್ತು. ಬೇಸಗೆಯಲ್ಲಿ ಒಣಗಿದ ಹುಲ್ಗಾವಲಿನಂತೆ ತಲೆಯ ಮೇಲೆ ಅಲ್ಲಲ್ಲಿ ಒಂದಿಷ್ಟು ಕೂದಲುಗಳು ಗೋಚರಿಸುತ್ತಿದ್ದವು. ಮುಖ ಸೊರಗಿ ಕಂದಿತ್ತು. ಕಣ್ಣುಗಳು ಕಾಂತಿಹೀನವಾಗಿ ಬಳಲಿದ್ದವು. ಮನಸ್ಸು ಘಾಸಿಗೊಂಡಿತ್ತು. ಚಿತ್ತ ಜರ್ಜರಿತವಾಗಿತ್ತು. ತಮ್ಮ ಕೋಣೆಯ ಅರೆಕತ್ತಲ ಮೂಲೆಯಲ್ಲಿ ಕುಳಿತು ತಾತಾ ಸಿಗರೇಟು ಸೇದುತ್ತಾ ರೈಲ್ವೇ ಇಂಜಿನಿನಂತೆ ಸುರುಳಿ ಸುರುಳಿಯಾಗಿ ಹೊಗೆಯನ್ನು ಬಿಡುತ್ತಿದ್ದರು. . . . . ಇದೇನಪ್ಪಾ ಇದ್ದಕ್ಕಿದ್ದಂತೆ? ತಾತಾ ದಿಢೀರನೆ ಐವತ್ತನೇ ದಶಕದ ಪ್ರಗತಿಶೀಲ ಕಾದಂಬರಿಯನ್ನು ಹೊಕ್ಕಂತೆ ತೋರತೊಡಗಿತು. ಮೊನ್ನೆ ಮೊನ್ನೆ ತಾನೆ ಮದುವೆಯೊಂದರಲ್ಲಿ ನನ್ನೊಡನೆ ಕುಳಿತು ಎರಡು ಕವಂಗ ಪಾಯಸ ಕುಡಿದು ಹೋಗಿದ್ದರು. ಈಗ ಏನಾಯಿತು ಸಡನ್ನಾಗಿ, ಅಂತ ಗಾಬರಿಗೊಂಡೆ. ತಾತಾರ ಚಿಂತೆಗೆ ಕಾರಣವಿಷ್ಟೆ. ತಮಗೆ ರಿಟೈರ್ ಆಗಿದೆ. ಸರಕಾರ ಕೃಪಾಪೋಷಿತ ಬೆಲೆಯೇರಿಕೆಯ ಕರಾಳ ಮುಖ ನೋಡಿದರೆ ಬರುವ ಪಿಂಚಣಿಯಲ್ಲಿ ಹೇಗಪ್ಪಾ ದಿನ ದೂಡುವುದು ಎಂಬ ಭಯ ಆವರಿಸತೊಡಗಿದೆ. ಮಕ್ಕಳು ಐಟಿ-ಬಿಟಿ ಅಂತ ಕಾಲಿಫೋರ್ನಿಯಾ, ಅಮೇರಿಕಾ ಸುತ್ತುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಅವರಿಗೆ ಗೊತ್ತಿಲ್ಲ. ಅವರೆದುರು ಕೈಚಾಚಲು ತಾತಾಗೆ ಸ್ವಾಭಿಮಾನ ಬಿಡದು. ಮುಂದಿನ ಜೀವನದ ಬಗ್ಗೆ ಚಿಂತೆ ಆವರಿಸಿದೆ ಅವರಿಗೆ. ಈಗ ಏನು ಮಾಡುವುದು ಮೊಳೆಯಾರ್ರೇ? ನಮ್ಮಂತಹ ಲಿಮಿಟೆಡ್ ಆದಾಯದವರು ಮಾಡುವುದಾದರೂ ಏನು? ಬರುವ ಪಿಂಚಣಿ ಅಲ್ಪ ಸ್ವಲ್ಪ. ಉದ್ಯೋಗದಲ್ಲಿರುವಾಗ ಲಂಚ ಮುಟ್ಟಿಲ್ಲ, ಲಂಚ ಕೊಟ್ಟು ಇಂದಿಗೆ ಬೇಕಾದಂತೆ ಯಾವ ಅನುಕೂಲಗಳನ್ನು ಮಾಡಿಸಿಕೊಳ್ಳಲೂ ಇಲ್ಲ. ಬೇರೆ ಸೇವಿಂಗ್ಸ್ ಅಂತ ಏನೂ ಇಲ್ಲ. ಇರುವುದು ಇದೊಂದು ಮನೆ ಮಾತ್ರ. ಆದರೇನು ಮಾಡುವುದು? ಮನೆಯನ್ನು ತಿನ್ನಲು ಆಗುತ್ತದೆಯೇ? ನೀವೇ ಹೇಳಿ? ಅಂತ ಇನ್ನೊಮ್ಮೆ ದೀರ್ಘವಾಗಿ ಸಿಗರೇಟು ಎಳೆದು ಪ್ರೆಶರ್ ಕುಕ್ಕರ್ನಂತೆ ಹೊಗೆಯೂದಿದರು. ಹೀಗಾದರೆ ನಾವೆಲ್ಲಾ ಏನು ಮಾಡಬೇಕು? ನಾವುಗಳು ಜೀವನ ಪೂರ್ತಿ ದುಡಿದು ಸಾಧಿಸಿದ್ದಾದರೂ ಏನು? ಒಮ್ಮೊಮ್ಮೆ ಅನಿಸುತ್ತದೆ, ತಪ್ಪು ಮಾಡಿದೆವು ಅಂತ. ಈಗ ಎಲ್ಲಾ ದುಡ್ಡು. ದುಡ್ಡಿಗೆ ಮಾತ್ರ ಬೆಲೆ. ನಾವೆಲ್ಲಾ ಮರ್ಯಾದೆಗಾಗಿ ಬದುಕಿದೆವು. ದುಡ್ಡಿಗಾಗಿ ಬದುಕಲಿಲ್ಲ. ಎಂದೆಲ್ಲ ಆತ್ಮ ಶೋಧನೆ ಮಾಡತೊಡಗಿದರು. ಹೊರಗಿನಿಂದ ಪ್ರಗತಿಶೀಲವಾದರೆ ಒಳಗಿಂದ ಪಕ್ಕಾ ನವ್ಯ! ಹೊರಗಿನಿಂದ ಅ.ನ.ಕೃಷ್ಣರಾಯರಾದರೆ ಒಳಗಿನಿಂದ ಚಿತ್ತಾಲ! ರಾಯರೇ, ನೀವು ಇಷ್ಟು ಡೆಸ್ಪರೇಟ್ ಆಗಲು ಕಾರಣವಿಲ್ಲ. ನೀವು ‘ಮನೆಯನ್ನು ತಿನ್ನಲು ಆದೀತೇ’ ಅಂತ ಕೇಳಿದಿರಲ್ಲ? ಇದೀಗ ಮನೆಯನ್ನು ತಿನ್ನುವ ಒಂದು ಯೋಜನೆಯೂ ಮಾರುಕಟ್ಟೆಯಲ್ಲಿ ಬಂದಿದೆ. ಅದರ ಬಗ್ಗೆ ಬೇಕಿದ್ರೆ ಸ್ವಲ್ಪ ಮಾಹಿತಿ ಕೊಡ ಬಲ್ಲೆ; ನಿಮ್ಮ ಈ ಉಗಿ ಇಂಜಿನ್ ಸ್ವಲ್ಪ ಸ್ಟಾಪ್ ಮಾಡಿದರೆ ನನಗೆ ಮಾತನಾಡಲು ಸಹಾಯವಾಗತ್ತೆ ಅಂತ ಅವರ ಹೊಗೆಬಂಡಿಯ ಚೈನ್ ಎಳೆದೆ. ತಾತಾ ಬಂಡಿ ನಿಲ್ಲಿಸಿ, ಕಣ್ಣರಳಿಸಿ, ಮೈಯೆಲ್ಲ ಕಿವಿಯಾಗಿ (ಅದು ಹೇಗಿರುತ್ತೋ?) ಕೇಳತೊಡಗಿದರು. . . . . * * * * ‘ರಿವರ್ಸ್ ಮಾರ್ಗೆಜ್ ‘ ಅಂತಾರೆ. ಏನಿದು ರಿವರ್ಸ್ ಮಾರ್ಗೆಜ್ ? ಸುಲಭವಾಗಿ ಹೇಳುವುದಾದರೆ, ರಿವರ್ಸ್ ಮಾರ್ಗೆಜ್ ಅಂದರೆ ಮಾರ್ಗೆಜಿನ ರಿವರ್ಸು, ಅಥವ ವಿರುದ್ಧ ಎಂದು ಅರ್ಥ! ನಮ್ಮ ಕಂಪೆನಿಯಲ್ಲಿ ಈ ರೀತಿಯ ಉತ್ತರಕ್ಕೆ ‘ಚೇರ್ಮನ್’ಸ್ ರಿಪ್ಲೈ’ ಅಂತ ಕುಹಕವಾಡುತ್ತಿದ್ದರು. ಅಂದರೆ, ಒಂದು ಮಲ್ಟಿನಾಶನಲ್ ಕಂಪೆನಿಯ ಚೇರ್ಮನ್ ಆಗುವಂತಹ ಮೇಧಾವಿಗಳು ಮಾತ್ರವೇ ಇಂತಹ ‘Absolutely right, but totally useless’ ಉತ್ತರವನ್ನು ಕೊಡಬಲ್ಲರು ಎಂಬ ಕಾರಣಕ್ಕಾಗಿ. ಮತ್ತು ಅಂತಹ ಕುಹಕವನ್ನು ಚೇರ್ಮನ್ ಆಗಲಾರದ ನಮ್ಮಂತಹ ಹುಳಿ-ದ್ರಾಕ್ಷಿಗರೆಲ್ಲರೂ ಯಾವತ್ತೂ ಹೇಳುತ್ತಿದ್ದರು. ಅದು ಹೋಗಲಿ ಬಿಡಿ, ನಾನೀಗ ನಿಮಗೆ uselessಅಲ್ಲ, ಪಕ್ಕಾ ‘ಕಾಸು-ಕುಡಿಕೆ’ ಸ್ಟಾಂಡರ್ಡ್ ನ ಉಪಯೋಗಿ ಉತ್ತರವನ್ನೇ ಕೊಡುವಂತವನಾಗುತ್ತೇನೆ, ನೀವು ಓದುವಂತವರಾಗಿ. . . ಒಂದು ಸೊತ್ತನ್ನು ಬ್ಯಾಂಕಿನಲ್ಲಿ ಮಾರ್ಗೆಜ್ ಅಥವ ಅಡವಿಟ್ಟಾಗ ಅದರ ಮೇಲೆ ಒಂದು ಮೊತ್ತ ಏಕಗಂಟಿನಲ್ಲಿ ಸಾಲವಾಗಿ ಸಿಗುತ್ತದೆ. ಬಳಿಕ ಆ ಸಾಲವನ್ನು ಕಂತು ಕಂತಾಗಿ ತೀರಿಸುತ್ತಾ ಬಂದಂತೆ ಆ ಅಡವಿಟ್ಟ ಸಾಧನ ಹಂತ ಹಂತವಾಗಿ ನಮ್ಮದಾಗಿ ಕೊನೆಗೊಂದು ದಿನ ಸಾಲ ಸಂಪೂರ್ಣ ತೀರಿದ ಬಳಿಕ ಪೂರ್ತಿ ನಮ್ಮದಾಗುತ್ತದೆ. ಆವಾಗ ಆ ಸೊತ್ತನ್ನು ನಾವು ವಾಪಾಸು ಪಡೆದುಕೊಳ್ಳುತ್ತೇವೆ. ಇದು ಮಾರ್ಗೆಜ್. ಅದರ ಬದಲಾಗಿ, ಒಂದು ಸೊತ್ತನ್ನು ಬ್ಯಾಂಕಿನಲ್ಲಿ ರಿವರ್ಸ್ ಮಾರ್ಗೆಜ್ ಆಗಿ ಇಟ್ಟಾಗ ನಮಗೆ ಕಂತು ಕಂತಾಗಿ ಅವರೇ ಹಣ ನೀಡುತ್ತಾರೆ ಹಾಗೂ ಕ್ರಮೇಣ ಅದರ ಸಂಪೂರ್ಣ ಬೆಲೆ ನಮ್ಮ ಕೈ ಸೇರಿದಾಗ ಆ ಸೊತ್ತು ಪೂರ್ತಿಯಾಗಿ ಬ್ಯಾಂಕಿನದ್ದಾಗುತ್ತದೆ. ಇದು ರಿವರ್ಸ್ ಮಾರ್ಗೆಜ್. 2007 ರ ಬಜೆಟ್ಟಿನಲ್ಲಿ ಇದನ್ನು ಭಾರತದಲ್ಲಿ ವಾಸದ ಮನೆಗೆ ಅನ್ವಯಿಸುವಂತೆ ಆರಂಭಿಸಲಾಯಿತು. ಹಾಗಾಗಿ ಈಗ ನಮ್ಮ ವಾಸದ ಮನೆಯನ್ನು ನಾವು ವಾಸದಲ್ಲಿರುವಾಗಲೇ ರಿವರ್ಸ್ ಮಾರ್ಗೆಜ್ ಮಾಡಬಹುದಾಗಿದೆ. ಈ ಸ್ಕೀಂನಂತೆ, ಈಸೀಚೇರಿನಲ್ಲಿ ಕುಳಿತು ಸಿಗರೇಟು ಬೂದಿ ಮಾಡುವ ನಮ್ಮ ತಾತಾನಂತವರು ಯಾವುದೇ ಹೌಸಿಂಗ್ ಫೈನಾನ್ಸ್ ಅಥವ ರಾಷ್ಟ್ರೀಕೃತ ಬ್ಯಾಂಕಿಗೆ ಹೋಗಿ ತನ್ನ ವಾಸದ ಮನೆಯನ್ನು ರಿವರ್ಸ್ ಮಾರ್ಗೆಜ್ ಮಾಡಿ ತಿಂಗಳು ತಿಂಗಳು ದುಡ್ಡು ಕೈಗೆ ಬರುವಂತೆ ಮಾಡಬಹುದು. ಅಂದರೆ ಕೂತಲ್ಲೇ ಕೈಗೆ ದುಡ್ಡು, ಅದೂ ನಾವು ವಾಸಿಸುವ ಮನೆಯಿಂದಲೇ, ನಾವು ವಾಸಿಸುತ್ತಾ ಇರುವಾಗಲೇ!! ಇದು ಅವರ ಆರ್ಥಿಕ ಸಂಕಷ್ಟಗಳಿಗೆ ಕಣ್ಣೊರೆಸುವ ಪ್ರಯತ್ನವನ್ನು ಖಂಡಿತಾ ಮಾಡೀತು. ಇಲ್ಲಿ ಇನ್ನೂ ಮೂರು ಅತಿ ಮುಖ್ಯ ಅಂಶಗಳನ್ನು ಅವಶ್ಯ ಗಮನಿಸಬೇಕು. ಒಂದು, ನಾವು ಮತ್ತು ನಮ್ಮ ಠಿಠಣಜ (ಇದಕ್ಕೆ ಕನ್ನಡದಲ್ಲಿ ಏನು ಹೇಳುತ್ತಾರೆ, ಸ್ವಾಮೀ?) ಜೀವಂತವಾಗಿ ಇರುವವರೆಗೂ ಬ್ಯಾಂಕು ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಮ್ಳವ ಹಾಗಿಲ್ಲ. ಮಾರ್ಗೆಜ್ ನ ಅವಧಿ ಮುಗಿದು ಮಾರ್ಗೆಜ್ ಮೊತ್ತದ ಸಂಪೂರ್ಣವಾಗಿ ಫಲಾನುಭವಿಗಳ ಕೈ ಸೇರಿದರೂ ಕೂಡಾ ಬ್ಯಾಂಕು ನಾವು ಜೀವಂತವಾಗಿ ಇರುವವರೆಗೆ ಆ ಮನೆಯನ್ನು ವಶಕ್ಕೆ ತೆಗೆದುಕೊಳ್ಳುವಂತಿಲ್ಲ, ಫಲಪಡೆದ ನಮ್ಮನ್ನು ಬೀದಿಪಾಲು ಮಾಡುವಂತಿಲ್ಲ. ಈ ರೀತಿಯ ಸೌಲಭ್ಯ ಪಡೆದುಕೊಂಡ ಗಂಡ-ಹೆಂಡತಿಯರಿಬ್ಬರೂ ಕಾಲವಾಗುವವರೆಗೂ ಮನೆ ಅವರ ಕೈಯಲ್ಲೇ ಇರುತ್ತದೆ. ಎರಡನೆಯದಾಗಿ, ಮಾರ್ಗೆಜ್ ಫಲಪಡೆದ ದಂಪತಿಗಳು ತೀರಿಹೋದ ಬಳಿಕವೂ ಬ್ಯಾಂಕು ಆ ಮನೆಯನ್ನು ಮಾರ್ಗೆಜ್ ಮೊತ್ತವನ್ನು ಕಟ್ಟಿ ಖರೀದಿಸುವ ಅವಕಾಶವನ್ನು ಅವರ ಉತ್ತರಾಧಿಕಾರಿಗಳಿಗೆ ಮೊತ್ತ ಮೊದಲನೆಯದಾಗಿ ನೀಡುತ್ತದೆ. ಅವರಿಗೆ ಆಸಕ್ತಿಯಿಲ್ಲದಿದ್ದರೆ ಮಾತ್ರ ಮನೆಯನ್ನು ಏಲಂ ಮಾಡಿ ತಮ್ಮ ಹಣವನ್ನು ಮುರಿದುಕೊಂಡು ಉಳಿದ ಹಣ (ಉಳಿದಿದ್ದಲ್ಲಿ) ವನ್ನು ಉತ್ತರಾಧಿಕಾರಿಗಳಿಗೆ ನೀಡುತ್ತದೆ. ಮೂರನೆಯದಾಗಿ, ಏಲಂನಲ್ಲಿ ಬ್ಯಾಂಕಿಗೆ ನಷ್ಟವಾದರೆ ಅಂತಹ ನಷ್ಟವನ್ನು ಉತ್ತರಾಧಿಕಾರಿಗಳಿಂದ ಡಿಮಾಂಡ್ ಮಾಡುವುದಿಲ್ಲ. ಈ ಸೌಲಭ್ಯ ನಾಶನಲ್ ಹೌಸಿಂಗ್ ಬೋರ್ಡ್, ದೇವಾಂಗ್ ಹೌಸಿಂಗ್ ಫೈನಾನ್ಸ್, ಸ್ಟೇಟ್ ಬ್ಯಾಂಕ್, ಪಂಜಾಬ್ ನಾಶನಲ್, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇತ್ಯಾದಿ ಹೌಸಿಂಗ್ ಫೈನಾನ್ಸ್ ಮತ್ತು ಬ್ಯಾಂಕುಗಳಲ್ಲಿ ಲಭ್ಯ. ಇದರಲ್ಲಿ ಸ್ಥೂಲವಾಗಿ ಈ ಕೆಳಗಿನ ಅಂಶಗಳು ಇರುತ್ತವೆ: 1. ಸುಮಾರು ಅರವತ್ತು ವರುಷ ಪ್ರಾಯದ ಹಿರಿಯ ನಾಗರಿಕರಿಗೆ ಅನ್ವಯ. 2. ರಿವರ್ಸ್ ಮಾರ್ಗೆಜ್ ಮಾಡಲು ಸ್ವಂತ ವಾಸದ ಮನೆಯನ್ನು ಹೊಂದಿರಬೇಕು. 3. ಮನೆಯ ಮಾರುಕಟ್ಟೆಯ ಬೆಲೆಯ ಸುಮಾರು 60% ದಷ್ಟು ಒಟ್ಟು ಮೊತ್ತವನ್ನು ಮಾಸಿಕ/ವಾರ್ಷಿಕ ಕಂತು ಕಂತಾಗಿ (ಅಥವ ಏಕಗಂಟಿನಲ್ಲೂ) ಬ್ಯಾಂಕಿನಿಂದ ಪಡೆಯಬಹುದು. 4. ಈ ಸ್ಕೀಂ ಸುಮಾರು 15 ವರುಷಗಳ ಅವಧಿ ಚಾಲ್ತಿಯಲ್ಲಿರುತ್ತದೆ. 5. ಪ್ರತಿ ಐದು ವರ್ಷಗಳಿಗೊಮ್ಮೆ ಮನೆಯ ವಾಲ್ಯುವೇಶನ್ ಅನ್ನು ಮಾಡುತ್ತಾರೆ. ಅದರ ಪ್ರಕಾರ ಮಾಸಿಕ ಕಂತುಗಳನ್ನು ಏರಿಸುತ್ತಾರೆ ಅಥವ ಇಳಿಸುತ್ತಾರೆ. 6. ಇದು ಒಂದು ಸಾಲವಾದ ಕಾರಣ ಹೀಗೆ ಬರುವ ದುಡ್ಡಿನ ಮೇಲೆ ಯಾವುದೇ ಆದಾಯ ಕರವಿರುವುದಿಲ್ಲ. 7. ಇದರ ಮೇಲಿನ ಬಡ್ಡಿ ದರವನ್ನು ಗೃಹ ಸಾಲದಂತೆಯೇ ಫಿಕ್ಸ್ಡ್ ಅಥವ ಫ್ಲೋಟಿಂಗ್ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು. (ಫಿಕ್ಸ್ಡ್ ರೇಟು ಸರ್ವಕಾಲಿಕವಾಗಿ ಫಿಕ್ಸ್ಡ್ ಆಗಿರುವುದಿಲ್ಲ. ಐದು ವರ್ಷಗಳಿಗೊಮ್ಮೆ ಬದಲಾಗುತ್ತದೆ.) 8. ಇದರ ಮೇಲಿನ ಬಡ್ಡಿದರ ಸುಲಭವಾಗಿಯೇ ಇದೆ. ಈಗಿನ ಪರಿಸ್ಥಿತಿಯಲ್ಲಿ ಸುಮಾರು 10% ನಷ್ಟು ವರ್ಕ್-ಔಟ್ ಆಗುತ್ತದೆ. 9. ಯಾವಾಗ ಬೇಕಾದರೂ ಬಾಕಿಯ ದುಡ್ಡು ಕಟ್ಟಿ ಈ ಸ್ಕೀಂನಿಂದ ಹೊರ ಬರಬಹುದು. (ಸಂಸ್ಥೆಯಿಂದ ಸಂಸ್ಥೆಗೆ ಅಲ್ಪ ಸ್ವಲ್ಪ ಶರತ್ತುಗಳಲ್ಲಿ ವ್ಯತ್ಯಾಸವಿದೆ. ಮುಖತಃ ಭೇಟಿಯಿಂದ ತಿಳಿದುಕೊಳ್ಳಿ) ಇಳಿ ವಯಸ್ಸಿನಲ್ಲಿ ಸಂಪನ್ಮೂಲವಿಲ್ಲದವರಿಗೆ, ಇತರ ಆದಾಯವಿಲ್ಲದಿರುವವರಿಗೆ ಇತರ ಯಾವುದೇ ಸಾಲ ಸಿಗುವುದು ಕಷ್ಟವಾಗಿರುವಾಗ ಈ ಯೋಜನೆ ಒಂದು ವರದಾನವೇ ಆಗಿದೆ. ಇದು ಭಾರತದ ಸರಕಾರದ ವತಿಯಿಂದ ಜನಸಾಮಾನ್ಯರಿಗೆ ಬಂದ ಒಂದು ಉತ್ತಮವಾದ ಯೋಜನೆ. ಹೆಚ್ಚಾಗಿ ಪ್ರಳಯಾಂತಕ ಐಡಿಯಾಗಳನ್ನೇ ಉಣ ಬಡಿಸುವ ಚಿದಂಬರಂ ವತಿಯಿಂದ ಒಂದು ಸರ್ಪ್ರೈಸ್ ! ಆದರೆ ಎಲ್ಲಾ ಬಣ್ಣಗಳಿಗೂ ಮಸಿ ಮೆತ್ತುವುದರಲ್ಲಿ ಎತ್ತಿದ ಕೈಯಾದ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಈ ಯೋಜನೆಗೆ ಯಾವುದೇ ಪ್ರಚಾರ ಇಲ್ಲವೇ ಇಲ್ಲ. ಹೆಚ್ಚಿನವರಿಗೆ ಇದರ ಅರಿವೇ ಇಲ್ಲ. ಅದೇ ಬೇಸರದ ಸಂಗತಿ. ಆಲ್ಲವೇ? ಆಮೇಲೆ ನಮ್ಮ ಮಸಾಲೆ ದೋಸೆ ಪ್ರಿಯ ಗುರುಗುಂಟಿರಾಯರು ನಿಮಗೆ ದಾರಿಯಲ್ಲಿ ಎಲ್ಲಾದರು ಸಿಕ್ಕರೆ ಅವರಿಗೆ ಮಾತ್ರ ಈ ಮಾತನ್ನು ದಯವಿಟ್ಟು ತಿಳಿಸಬೇಡಿ. ಸುಡುಗಾಡು ಶೇರು ಮಾರ್ಕೆಟ್ನಲ್ಲಿ ದುಡ್ಡು ಕಳೆಯಲು ಪ್ರಚಾರ ಕೊಡ್ತಾರೆ, ಇದಕ್ಕೆ ಯಾಕೆ ಕೊಡಲ್ಲ? ಅಂತ ನಿಮ್ಮ ಮೇಲೇ ಹರಿಹಾಯ್ದಾರು. ಜಾಗ್ರತೆ. ಅವರ ಫ್ಯೂಸ್ ವಯರ್ ಸ್ವಲ್ಪ ವೀಕ್. ಆಮೇಲೆ ನಾನು ಎಚ್ಚರಿಸಲಿಲ್ಲವೆಂದು ನನ್ನನ್ನು ದೂರಬೇಡಿ. ನಮಸ್ಕಾರ. ಬರ್ತೇನೆ. ಉಳಿದದ್ದು ಮುಂದಿನ ವಾರ, ಔರ್ ತಬ್ ತಕ್ ಕೇ ಲಿಯೇ, ಧನ್ಯವಾದ್, ಶುಕ್ರಿಯಾ, ಶುಭರಾತ್ರಿ, ಶಬ್ಬಾಖೈರ್ and please take very very good care of your money! * * * * ಕೊಸರು: ಕಳೆದ ಸೋಮವಾರ ಬೆಳ್ಳಂಬೆಳಗ್ಗೆ ನನ್ನನ್ನು ನಿದ್ದೆಯಿಂದ ಎಬ್ಬಿಸಿ ‘ಎಲ್ಲಿದ್ದಾರೆ ಮಾರಾಯ್ರೆ ನಿಮ್ಮ ಭಲ್ಲೂಕರಾಯರು? ಮಣಿಪಾಲ ಸ್ಟೇಶನ್ನಿಗೆ ಹೋಗಿ ಒಂದು ಈ..ಖ ಮಾಡ್ಬೇಕಾ ಹೇಗೆ?’ ಎಂದು ಫೋನ್ ಮಾಡಿ ಕೇಳಿದವರು ಸಾಹಿತಿ-ಕವಿ ಅಂಶುಮಾಲಿ. ‘ಇಲ್ಲ. ಬರ್ತಾರೆ, ಬರ್ತಾರೆ ಮುಂದಿನವಾರ’ ಅಂತ ಆಶ್ವಾಸನೆ ಕೊಟ್ಟೆ ಅವರಿಗೆ. ಆದರೆ ಈ ವಾರವೂ ಭಲ್ಲೂಕರಾಯರ ಪತ್ತೆ ಇಲ್ಲ. ಈಗ ನಿಜಕ್ಕೂ ನನಗೇ ಚಿಂತೆ ಶುರುವಾಗಿದೆ. ಎಲ್ಲಿ ಹೋಗಿರಬಹುದು ಅವರು – ನಮ್ಮ ಗೂಳಿತ್ತಾಯರ ಜಾನೀ ದುಷ್ಮನ್ ಭಲ್ಲೂಕರಾಯರು? ಹೀರೋ ಎಂಟ್ರಿ ಯಾವತ್ತೂ ಹಾಗೆಯೇ, ಸ್ವಲ್ಪ ಲೇಟ್. ]]>

‍ಲೇಖಕರು avadhi

June 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

೧ ಪ್ರತಿಕ್ರಿಯೆ

  1. D.Manjunatha, IFS

    Hi,
    The above information is really good not only for above 60, for others also till they become eligible. Thank u

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ D.Manjunatha, IFSCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: