ಕಾಸು ಕುಡಿಕೆ: ‘ಚಿನ್ನದ ಮೆರಗೂ, ಶೇರಿನ ಬೆರಗೂ. . . . .’

ಕಾಸು ಕುಡಿಕೆ -7

– ಜಯದೇವ ಪ್ರಸಾದ ಮೊಳೆಯಾರ

ಇತ್ತೀಚೆಗೆ ನಾನು ಸಭೆ ಸಮಾರಂಭಗಳಿಗೆ ಹೋದಾಗ ಕೆಲ ಹೆಂಗಸರು ಶೇರುಗಳ ಅಪಾಯದ ಬಗ್ಗೆ ನಾನು ಬರೆದ ಲೇಖನಗಳನ್ನು ಉಲ್ಲೇಖಿಸಿ ನನ್ನನ್ನು ಅಭಿನಂದಿಸುತ್ತಾರೆ. ನನ್ನ ಶೇರು ಲೇಖನಗಳು ಅವರಿಗೆ ತಮ್ಮ ಮನೆಯಲ್ಲಾಗುವ ಗೃಹ ಕದನಗಳಲ್ಲಿ ಉತ್ತಮ ಅಸ್ತ್ರವಾಗಿ ಉಪಯೋಗವಾಗುತ್ತದೆ ಎಂದು ತೋರುತ್ತದೆ. ಅವರ ಮನೆಯ’ಅವರು’ ಕೂಡಾ ಜೊತೆಯಲ್ಲಿ ಇದ್ದರೆ ಅವರ ಕಂದಿದ ಮುಖದಿಂದಲೇ ಅದು ಸತ್ಯ ಎಂದು ಖಚಿತವಾಗುತ್ತದೆ. ಅಲ್ಲದೆ, ನಾನು ಇತ್ತೀಚೆಗೆ ಬಂಧು ಬಾಂಧವರ ಮನೆಗೆ ಭೇಟಿ ನೀಡಿದಾಗಲೆಲ್ಲಾ ಕಾಫಿ, ಸ್ನಾಕ್ಸ್ ಜೊತೆಗೆ ಸ್ವಲ್ಪ ಸ್ವೀಟ್ಸ್ ಕೂಡಾ ತಟ್ಟೆಯಲ್ಲಿ ಕಾಣಸಿಗುತ್ತದೆ – ಬೋನಸ್ ಆಫರ್ನಂತೆ!

ಕಾಲಂ ಬರೆಯುತ್ತಾ ದೊರೆಯುವ ಈ ಟಾಕ್ಸ್-ಫ್ರೀ ಪರ್ಕ್ಸ್ ಸವಿಯುತ್ತಾ ಮೊನ್ನೆ ಒಬ್ಬ ಸ್ನೇಹಿತನ ಮನೆಯಲ್ಲಿ ಕುಳಿತಿದ್ದೆ. ಮನೆಯೊಡತಿ ನನ್ನನ್ನು ಶೇರ್ ಮಾರ್ಕೆಟ್ ರಿಸ್ಕ್ ಬಗ್ಗೆ ತನ್ನ ಪತಿಯ ಎದುರು ಮಾತಿಗೆಳೆದರು – ಅವರ ವಾದಕ್ಕೆ ನಾನೊಬ್ಬ ಅಧಿಕೃತ ಸಾಕ್ಷಿಯೋ ಎಂಬಂತೆ. ಶೇರುಗಳ ರಿಸ್ಕ್ ಬಗ್ಗೆ ಮಾತು ಬೆಳೆದಷ್ಟೂ ‘ಯೆಸ್, ಯೆಸ್, ರೈಟ್, ರೈಟ್’ ಅಂತ ಗೋಣುಹಾಕಿ ಜಿಲೇಬಿ ಮೆಲ್ಲುತ್ತಿದ್ದೆ. ಆದರೆ ವಿಷಯ ಅಲ್ಲಿಂದ ಹೊರಳಿ ಚಿನ್ನದ ಬಗ್ಗೆ ಶುರುವಾಯಿತು. ಇನ್ನೊಂದು ಜಿಲೇಬಿ ನನ್ನ ಪ್ಲೇಟ್ಗೆ ಇಳಿಸಿ ‘ಇರುವುದರಲ್ಲಿ ಅತ್ಯುತ್ತಮ ಇನ್ವೆಸ್ಟ್ಮೆಂಟ್ ಅಂದರೆ ‘ಚಿನ್ನ’ ಅಲ್ವ ಮೊಳೆಯಾರ್ರೇ. . .’ ಅಂತ ರಾಗ ಎಳೆದು ತನ್ನ ಪತಿಯತ್ತ ನೋಟ ಹಾಯಿಸಿದಾಗ ನಾನು ಎಂತಹ ಚಕ್ಕರ್ ನಲ್ಲಿ ಸಿಕ್ಕಿ ಬಿದ್ದಿದ್ದೇನೆ ಎಂಬ ಪ್ರಾಥಮಿಕ ಅರಿವು ಉಂಟಾಯಿತು. ಆದರೂ ತಿಂದ ಜಿಲೇಬಿಯ ಉಪ್ಪಿನ ಋಣಕ್ಕೋ, ಇನ್ನೂ ತಿನ್ನಬೇಕಾಗಿರುವ ಜಿಲೇಬಿ- ಲಂಚದ ಆಮಿಷಕ್ಕೋ, ಗೊತ್ತಿಲ್ಲ; ಆ ಪ್ರಶ್ನೆಗೂ ‘ಯೆಸ್, ಯೆಸ್’ ಎಂದೇ ಗೋಣು ಹಾಕಿದೆ.

ಮರುದಿನ ಆಫೀಸಿನಲ್ಲಿ ಸಿಕ್ಕ ಆ ನನ್ನ ಸ್ನೇಹಿತ ನನ್ನನ್ನು ಚೆನ್ನಾಗಿಯೇ ಬೆಂಡೆತ್ತಿದ. ಅಲ್ಲ ಮಾರಾಯ, ನಿನ್ನನ್ನು ಒಳ್ಳೆ ಫ್ರೆಂಡ್ ಅಂತ ಮನೆಗೆ ಎಂಟ್ರಿ ಕೊಟ್ರೆ ಅಲ್ಲಿ ಬಂದು ನಮ್ಗೇ ಹಚ್ಚಿ ಹಾಕುದಾ? ಅಂತ ಶುರು ಮಾಡಿದ.

ಯಾಕೆ ಮಾರಾಯ? ಏನಾಯ್ತು? ಎಂದೆ, ಒಂದು plain ಅಮಾಯಕ ಮುಖವಾಡ ಧರಿಸಿ.

ಯಾಕೆ? ಅಷ್ಟೂ ಗೊತ್ತಾಗುದಿಲ್ವಾ? ನೀನೂ ಮದ್ವೆ ಆದವನು ಹೀಗೆ ಕೇಳುದಾ? ನಮ್ ಮನೆಯಲ್ಲಿ ನಂಗೆ ಶೇರು ಹುಚ್ಚು.  I want to invest in shares. ಅವಳಿಗೆ ಶೇರ್ ಕಂಡ್ರೆ ಆಗುದಿಲ್ಲ. ಅವಳದ್ದು ಚಿನ್ನದಲ್ಲಿ ಇನ್ವೆಸ್ಟ್ ಮಾಡೋಣ ಅಂತ ಹಠ, for obvious reasons! ಒಮ್ಮೆ ಚಿನ್ನ ಹೆಂಗಸರ ಕೈವಶ ಆದ್ರೆ ಮತ್ತೆ ನಮ್ಗೆ ಅದು ವಾಪಾಸು ಸಿಗ್ಲಿಕ್ಕುಂಟಾ? ನೀನೂ ಅದಕ್ಕೆ‘yes, yes’ ಅಂತ ತಲೆ ಆಡಿಸುವುದಾ? ಎಲ್ಲಾ ಜಿಲೇಬಿ ಮಹಾತ್ಮೆ!!’ ಅಂತ ತನ್ನ ರಿಪೇರಿ ಕೆಲಸ ಆರಂಭಿಸಿದ.

ಇದೊಳ್ಳೆ ಪೇಚಾಟ ಆಯ್ತಲ್ಲ ಮರಾಯ್ರೇ!! ಶೇರು ತ/ ಚಿನ್ನ. ಚಿನ್ನ ಮೇಲೋ, ಶೇರು ಮೇಲೊ? ಹೆಂಡತಿ ಮೇಲೋ, ಗಂಡ ಮೇಲೋ? ಆಫೀಸ್ನಲ್ಲಿ ಸ್ನೆಹಿತ ಕೊಡ್ಸೋ ಪುಕ್ಸಟ್ಟೆ ಕಾಫಿ ಮೇಲೋ, ಮನೆಗೆ ಹೋದ್ರೆ ಅವ್ನ ಹೆಂಡ್ತಿ ಕೊಡೋ ಜಿಲೇಬಿ ಮೇಲೋ?

‘ಮುಂದಿನ ಕಾ.ಕು ನಲ್ಲಿ ಸರಿಯಾಗಿ ಸ್ಟಡಿ ಮಾಡಿ ಒಂದು ಆರ್ಟಿಕಲ್  ಕುಟ್ಟು ಮರಿ’ ಅಂತ ಅಪ್ಪಣೆ ಹೊರಡಿಸಿಯೇ ಬಿಟ್ಟ ದೋಸ್ತ! ‘ಇಲ್ದಿದ್ರೆ ನನ್ನ ಪುಕ್ಸಟ್ಟೆ ಬೈಟೂ ಕಾಫಿ ಬಂದ್!’

So, here it goes . . . .

ಹೂಡಿಕೆಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಬೆಲೆಯುಳ್ಳದ್ದು ಚಿನ್ನವೇ ಸರಿ. ಆದರೆ, ಚಿನ್ನಕ್ಕೆ ಯಾಕೆ ಅಷ್ಟು ಬೆಲೆ? ಯಾವುದೇ ಆರ್ಥಿಕ ಉಪಯುಕ್ತತೆ ಅಥವ ಯುಟಿಲಿಟಿ ಇಲ್ಲದ ಆ ಲೋಹದ ತುಂಡಿಗೆ  ಯಾಕೆ ನಾವು ಇಷ್ಟು ಬೆಲೆ ಕಟ್ಟುತ್ತೇವೆ? ಇದು ಆರ್ಥಿಕ ತಜ್ಞರು ಕೇಳುವ ಮೂಲಭೂತ ಪ್ರಶ್ನೆ. ಹೌದು. ಚಿನ್ನವನ್ನು ತಿನ್ನಲಾಗುವುದಿಲ್ಲ. ಅದರಲ್ಲಿ ಫಾಕ್ಟರಿಯಂತೆ ಸರಕು ತಯಾರಿಗಾಗಿ ಉಪಯೋಗಿಸಲಾಗುವುದಿಲ್ಲ. ಅದರ ಉಪಯುಕ್ತತೆ ಏನಿದ್ದರೂ ಭಾವನಾತ್ಮಕ ಮಾತ್ರ. ಅದಕ್ಕೇ ಹೇಳುವುದು,‘Gold has value because we think it has value’ ಅಂತ.

ಅದೇನೇ ಇರಲಿ, ರಾಜ ಮಹಾರಾಜರ ಕಾಲದಿಂದ ಹಿಡಿದು ವರ್ಲ್ಡ್ ವಾರ್ ನ ಬಳಿಕದ ಅಮೇರಿಕನ್ ಸರಕಾರದವರೆಗೆ ಎಲ್ಲರೂ ಚಿನ್ನವನ್ನೇ ಸಂಪತ್ತೆಂದು ಪರಿಗಣಿಸಿ ಸಂಗ್ರಹಿಸಿ ಕೂಡಿಟ್ಟದ್ದಂತೂ ನಿಜ. ಎರಡನೇ ಜಾಗತಿಕ ಯುದ್ಧದ ಮೊದಲಿನ ‘ಗೋಲ್ಡ್ ಸ್ಟಾಂಡರ್ಡ್ ವ್ಯವಸ್ಥೆ ಹಾಗೂ ಬಳಿಕ ಜಾರಿಗೊಂಡ ‘ಬ್ರೆಟ್ಟನ್-ವೂಡ್ಸ್’ ಸಿಸ್ಟಂ ಅಥವ ‘ಗೋಲ್ಡ್-ಡಾಲರ್ ಸ್ಟಾಂಡರ್ಡ್’ ವ್ಯವಸ್ಥೆಗಳೆಲ್ಲವೂ ಒಂದು ದೇಶದ ಹಣದ ಮೌಲ್ಯವನ್ನು ಆ ದೇಶದ ಖಜಾನೆಯಲ್ಲಿರುವ ಚಿನ್ನದ ಪ್ರಮಾಣಕ್ಕೆ ಗಂಟು ಹಾಕಿತು. ಈ ವ್ಯವಸ್ಥೆಯನ್ನು 1971ರ ಬಳಿಕ ರದ್ದು ಪಡಿಸಿದರೂ ಜಗತ್ತಿನ ಎಲ್ಲಾ ಸರಕಾರಗಳೂ ಚಿನ್ನವನ್ನು ಆಪದ್ಧನ ಎಂಬ ನೆಲೆಯಲ್ಲಿ ಕೂಡಿಡುವುದನ್ನು ನಿಲ್ಲಿಸಲಿಲ್ಲ.

ಏನಿದು ಆಪದ್ಧನ? ಅಂದರೆ, ಒಂದು ಮಹಾ ವಿಪತ್ತು ಸಂಭವಿಸಿದಾಗ, ಆರ್ಥಿಕತೆಯೇ ಕುಸಿದು ಬಿದ್ದಾಗ, ಬೇರೆಲ್ಲ ಹೂಡಿಕೆಗಳೂ ವಿಫಲವಾದಾಗ, ಬರೇ ನಮ್ಮ ಕೈ ಮುಷ್ಟಿಯಲ್ಲಿಯೇ ನಮ್ಮೆಲ್ಲ ಸಂಪತ್ತನ್ನು ಎತ್ತಿಕೊಂಡು ಸಿಕ್ಕಲ್ಲಿ ಓಡಿ ಹೋಗಿ, ಅಲ್ಲಿ ಜೀವನವನ್ನು ಪುನಃ ಕಟ್ಟುವ ಸೌಲಭ್ಯ ಚಿನ್ನದಲ್ಲಿ ಮಾತ್ರವೇ ಸಿಗುತ್ತದೆ. ಆ ನಿಟ್ಟಿನಲ್ಲಿ ಚಿನ್ನ ಒಂದು ಅತ್ಯುತ್ತಮ ಆಪದ್ಧನವಾಗಿ ಕೆಲಸ ಮಾಡುವುದು ನಿಜ.

ಚಿನ್ನವು ಭಾರೀ ಹೈ ಪ್ರತಿಫಲ ನೀಡುತ್ತದೆ ಎಂಬ ಬಹಳ ಪ್ರಚಲಿತ ಭಾವನೆ ಇದೆ. ಆದರೆ, ವಾಸ್ತವದಲ್ಲಿ ಚಿನ್ನದ ಹೂಡಿಕೆಯಲ್ಲಿ ರಿಟರ್ನ್ ಅಥವಾ ಪ್ರತಿಫಲ ಕಡಿಮೆ ಎಂದರೆ ಯಾರಿಗೂ ಅಚ್ಚರಿಯಾದೀತು. ಕಳೆದ ಮೂವತ್ತು ವರ್ಷಗಳಲ್ಲಿ ಚಿನ್ನದ ರಿಟರ್ನ್ ಜಾಗತಿಕ ಮಟ್ಟದಲ್ಲಿ (ಡಾಲರ್ ಲೆಕ್ಕದಲ್ಲಿ) ಬರೇ 4-5 % ಹಾಗೂ ಭಾರತದಲ್ಲಿ (ರೂಪಾಯಿ ಲೆಕ್ಕದಲ್ಲಿ) ಸುಮಾರು 7-8%. ಅದೇ ಸಮಯದಲ್ಲಿ ಬಾಂಬೆ ಸೂಚ್ಯಂಕ ಶೇರುಗಳಲ್ಲಿ (BSE-30)ವಿನಿಯೋಗಿಸಿದ ಹಣ ಸರಾಸರಿ 19-20 % ರಿಟರ್ನ್ ಕೊಟ್ಟಿದೆ. ಯಾಕೆಂದರೆ ಶೇರು ಒಂದು ‘ಪ್ರೊಡಕ್ಟಿವ್ ಎಸೆಟ್’. ಸರಕುಗಳನ್ನು ಉತ್ಪಾದಿಸಿ ಮಾರಿ, ಲಾಭಮಾಡಿಕೊಳ್ಳಬಲ್ಲುದು. ಚಿನ್ನವು ಹಾಗೆ ಮಾಡಲಾರದು. ಆದರೂ, ಶೇರುಗಳಲ್ಲಿ ಸಾವಿರಾರು ಶೇಖಡಾ ಪ್ರತಿಫಲ ಕೊಟ್ಟ ಶೇರುಗಳೂ ಇವೆ ; ಭಾರೀ ನಷ್ಟ ಪಟ್ಟು ಇಡೀ ಇಡುಗಂಟನ್ನೇ ಕಳೆದುಕೊಂಡು ನಿರ್ನಾಮವಾದ ಶೇರುಗಳೂ ಇವೆ. ಹಾವು-ಏಣಿ ಆಟದಂತೆ ಶೇರುಗಳು ಯದ್ವಾ ತದ್ವಾ ಮೇಲಕ್ಕೂ ಕೆಳಕ್ಕೂ ಏರಿಳಿಯುತ್ತವೆ. ಚಿನ್ನದಲ್ಲಿ ಹಾಗೆ ಆಗುವುದಿಲ್ಲ. ಹಾಗಾಗಿ, ಶೇರುಗಳು ‘ಹೈ ರಿಸ್ಕ್ ಹೈ ರಿಟರ್ನ್’ ಆದರೆ ಚಿನ್ನ ‘ಲೋ ರಿಸ್ಕ್ ಲೋ ರಿಟರ್ನ್’ ಎಂದು ಧಾರಾಳವಾಗಿ ಹೇಳಬಹುದು.

‘ಚಿನ್ನದ ಬೆಲೆ ಎಂದೆಂದಿಗೂ ಏರುತ್ತಲೇ ಹೋಗುತ್ತದೆ. ಇಳಿಯುವ ಪ್ರಶ್ನೆಯೇ ಇಲ್ಲ. ಹಾಗಾಗಿ ಆದಷ್ಟು ಬೇಗನೆ ಆದಷ್ಟು ಮಟ್ಟಿಗೆ ಚಿನ್ನದಲ್ಲಿ ದುಡ್ಡು ಹಾಕಬೇಕು’ ಎಂಬ ಇನ್ನೊಂದು ಪ್ರಚಲಿತ ಭಾವನೆ ಇದೆ. (ಬಹುತೇಕ ಮಹಿಳೆಯರೇ ಈ ಮಾತನ್ನು ಹೇಳುತ್ತಾರೆನ್ನುವುದು ಬೇರೆ ವಿಚಾರ). ಆದರೆ,  ಇದು ಸತ್ಯಕ್ಕೆ ದೂರ. ಕೆಲವು ಬಾರಿ ಚಿನ್ನದ ಬೆಲೆ ಇಳಿದಿವೆ. ವರುಷಗಟ್ಟಲೆ ಸ್ಥಗಿತವಾಗಿ ತೆವಳುತ್ತಾ ಇದ್ದದ್ದೂ ಇದೆ. ಚಿನ್ನಕ್ಕೆ ಬೆಲೆ ಕುದುರಿದ್ದೇ 2000 ಇಸವಿಯ ಬಳಿಕ. (ಗ್ರಾಫ್ ನೋಡಿ) ಚಿನ್ನವು ಯಾವಾಗಲಾದರು ಒಮ್ಮೆ ಜಾಗತಿಕ ವಿಪತ್ತಿನ ಸಮಯಗಳಲ್ಲಿ ಮಾತ್ರ ಭಾರೀ ಬೆಲೆಯೇರಿಕೆ ಕಾಣುತ್ತದೆ.  2009 ರ ಒಂದೇ ವರ್ಷದಲ್ಲಿ  ರಿಸೆಶನ್ ಹಿನ್ನೆಲೆಯಲ್ಲಿ ಚಿನ್ನದ ಬೆಲೆ 25% ಏರಿದೆ. ಈ ರೀತಿಯ ಏರಿಕೆ, ‘ಚಿನ್ನ ಒಂದು ಆಪದ್ಧನ’ ಎಂಬ ಮಾತನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.

ಕಳೆದ 35 ವರ್ಷಗಳ ಚಿನ್ನದ ಜಾಗತಿಕ ಬೆಲೆ (ಡಾಲರ್ ಪ್ರತಿ ಔನ್ಸಿಗೆ)

ಚಿನ್ನ ಒಂದು ಭದ್ರವಾದ, ಲೋ ರಿಸ್ಕ್, ಲೋ ರಿಟರ್ನ್ ಮತ್ತು ಆಪತ್ತಿನ ಸಮಯದಲ್ಲಿ ಕೈಹಿಡಿಯುವ ಎಸೆಟ್. ಒಂದು ನಿಜವಾದ ಆಪದ್ಧನ. ಹೋಲಿಕೆಯಲ್ಲಿ, ಶೇರು ಹೈ ರಿಸ್ಕ್, ಹೈ ರಿಟನರ್್ ಮತ್ತು ಆಪತ್ತಿನ ಸಮಯದಲ್ಲಿ ಕೈಕೊಡುವ ಎಸೆಟ್. 2008 ರಲ್ಲಿ ರಿಸೆಶನ್ ಸಲುವಾಗಿ ಶೇರು ಬೆಲೆ ಅರ್ಧಕ್ಕರ್ಧ ಇಳಿದಿತ್ತು.

ಚಿನ್ನಕ್ಕೆ ಅದರದ್ದೇ ಆದ ಮೆರಗು ಇದೆ.  ಹಾಗೂ ಶೇರಿಗೆ ಅದರದ್ದೇ ಆದ ಬೆರಗೂ ಇದೆ. ನಮಗೆ ಎರಡೂ ಬೇಕು. ಚಿನ್ನವೂ ಬೇಕು, ಶೇರೂ ಬೇಕು. ಭದ್ರತೆಯೂ ಬೇಕು, ಪ್ರಗತಿಯೂ ಬೇಕು, ಜಿಲೇಬಿಯೂ ಬೇಕು, ಬ್ಶೆಟೂ ಕಾಫಿಯೂ ಬೇಕು. ಕಾಫಿಯಿಲ್ಲದೆ ಬರೇ ಜಿಲೇಬಿ ರುಚಿಸದು. ಹಾಗೆಯೇ ಚಿನ್ನವೂ, ಒಟ್ಟಿಗೆ ಒಂದಿಷ್ಟು ಎಚ್ಚರಿಕೆಯಿಂದ ಹದವರಿತು ಶೇರೂ  ಖರೀದಿಸಿಟ್ಟರೆ ವಿತ್ತ ಸಾಮರಸ್ಯವೂ ಇರುತ್ತದೆ, ದಾಂಪತ್ಯ ಸಮರಸವೂ ಇರುತ್ತದೆ.

ಚಿನ್ನ-cum-ಶೇರು – Gold ETF !!

Gold ETF (Exchange Tradeable Fund). ಇದು ಚಿನ್ನವೂ ಹೌದು, ಶೇರೂ ಹೌದು. ಚಿನ್ನದಲ್ಲಿ ದುಡ್ಡು ಹೂಡುವ ಶೇರು. ದಾಂಪತ್ಯ ಸಾಮರಸ್ಯಕ್ಕೆ ಸಿದ್ಧೌಷದವೋ ಎಂಬಂತೆ ಧರೆಗಿಳಿದಿದೆ.

ಭಾರತದಲ್ಲಿ ಈಗ 6 ಮ್ಯೂಚುವಲ್ ಫಂಡ್ಗಳ ಇ.ಟಿ.ಏಫ್ಗಳು ಇವೆ. ಈ ಫಂಡ್ಗಳು ನಮ್ಮಿಂದ ದುಡ್ಡು ಸಂಗ್ರಹಿಸಿ ಒಟ್ಟುಗೂಡಿಸಿ ಬಜಾರಿನಲ್ಲಿ ಚಿನ್ನ ಖರೀದಿಸಿ ಶೇಖರಿಸಿಡುತ್ತವೆ. ಒಂದು ರೀತಿಯ ಪರ್ಚೇಸ್ -ಕಮ್-ಲಾಕರ್ ಸಿಸ್ಟಂ. ಆದರೆ ಚಿನ್ನ ನಮ್ಮ ಕೈಸೇರುವುದಿಲ್ಲ. ಅವರೇ ಇಟ್ಟುಕೊಳ್ಳುತ್ತಾರೆ. ನಮ್ಮ ಕೈಗೆ ಬರುವುದು ಆ ಮ್ಯೂಚುವಲ್ ಫಂಡಿನ ಯುನಿಟ್ಸ್ ಮಾತ್ರ. ಇದರ ಹೆಗ್ಗಳಿಕೆ ಏನೆಂದರೆ, ಇದನ್ನು ಯಾವಾಗ ಬೇಕಾದರೂ ಶೇರು ಮಾರುಕಟ್ಟೆಯಲ್ಲಿ ಆ ದಿನದ ಚಿನ್ನದ ಬೆಲೆಗೆ ಮಾರಾಟ ಮಾಡಿ ದುಡ್ಡು ಜೇಬಿಗೇರಿಸಬಹುದು.

ಆದರೆ ಇದು ಮಹಿಳೆಯರಿಗೆ ಇಷ್ಟವಾಗಲಿಲ್ಲ. ಯಾಕೆಂದರೆ ಚಿನ್ನ ಆಭರಣ ರೂಪದಲ್ಲಿ ಕೈಸೇರುವುದಿಲ್ಲ. ಬರೇ ಸರ್ಟಿಫಿಕೆಟ್  ಧರಿಸಿ ಮದುವೆ, ಮುಂಜಿಗಳಿಗೆ ಹೋಗಲಾದೀತೇ? ಇದು ಗಂಡಸರಿಗೂ ಇಷ್ಟವಾಗಲಿಲ್ಲ. ಯಾಕೆಂದರೆ ಹೂಡಿಕೆ ಚಿನ್ನದಲ್ಲಿ ಮಾತ್ರ. ಕಂಪೆನಿ ಶೇರುಗಳಂತೆ ಹಾವೇಣಿಯಾಟದ ‘ಕಿಕ್’ ಕೊಡುವುದಿಲ್ಲ.

ಹಾಗಾಗಿ ಗೋಲ್ಡ್ ಇ.ಟಿ.ಎಫ್ ಗಳು ಇಂದು ಅಲ್ಲೂ ಸಲ್ಲದ ಇಲ್ಲೂ ಸಲ್ಲದ ಎಡಬಿಡಂಗಿಗಳಾಗಿ ಉಳಿದಿವೆ.

‍ಲೇಖಕರು avadhi

April 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

4 ಪ್ರತಿಕ್ರಿಯೆಗಳು

  1. Sudhakar Baliga K

    An Informative peice..Thank you Jayadeva. Mundina sala insurance (Life as well as mediclaim) bagge heli kodi.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: