ಕಾಸು ಕುಡಿಕೆ: ನದಿ ದಾಟಲು ಹೊರಟ ಗುರುಗಳು ಮತ್ತು R.B.I

ಕಾಸು ಕುಡಿಕೆ -8.


-ಜಯದೇವ ಪ್ರಸಾದ ಮೊಳೆಯಾರ
“What has destroyed every previous civilization has been the tendency to the
unequal distribution of wealth and power”   -Henry George.
ಮೊದಲಿನ ಪ್ರತಿಯೊಂದು ನಾಗರಿಕತೆಯನ್ನೂ ನಾಶ ಪಡಿಸಿದ್ದು ಯಾವುದೆಂದರೆ
ಸಂಪತ್ತು ಮತ್ತು ಬಲದ ಅಸಮಾನ ಹಂಚೋಣದ ಪ್ರವೃತ್ತಿ.- ಹೆನ್ರಿ ಜೋರ್ಜ್.


ಕಾಸು ಕುಡಿಕೆಯ ಮೂರನೇ ಎಪಿಸೋಡಿನಲ್ಲಿ  ನನ್ನೊಡನೆ ಕುಳಿತು ಮಸಾಲೆ ದೋಸೆ ತಿಂದು ಕಾಪಿ ಕುಡಿದು, ತದನಂತರ ಬಿರಬಿರನೆ ಹೊರಟೇಹೋದ ‘ಬಾಂಡ್ ಫಂಡ್ ವ್ಯಾಮೋಹ’ದ ಗುರುಗುಂಟಿರಾಯರು ಆಮೇಲೆ ನನಗೆ ಸಿಗಲೇ ಇಲ್ಲ! ನಾನೂ ಕೂಡಾ ಆಮೇಲೆ ಶೇರು, ಚಿನ್ನ, ಜಿಲೇಬಿ, ಇತ್ಯಾದಿ ಪ್ರಸಂಗಗಳಲ್ಲಿ ಮುಳುಗಿಹೋಗಿದ್ದೆ. ಆದರೂ ‘ನಿಗದಿತ ಆದಾಯ (Fixed Income)’ ಹೂಡಿಕೆಯ ಬಗ್ಗೆ ಅಗಾಗ್ಗೆ ಯೋಚನೆ ತಲೆಹೊಕ್ಕಾಗಲೆಲ್ಲ ಗುರುಗುಂಟಿರಾಯರು ನೆನಪಾಗದೆ ಇರುತ್ತಿರಲಿಲ್ಲ.
ಮೊನ್ನೆ ಸೋಮವಾರ, ಸಂಜೆಯ ಸುಮಾರು ಆರು ಗಂಟೆ. ಮನೆಯಲ್ಲಿ ಉದಯವಾಣಿ ಓದುತ್ತಾ ಕುಳಿತಿದ್ದೆ. ಅಚಾನಕ್ಕಾಗಿ ಗುರುಗುಂಟಿರಾಯರ ಫೋನ್ ಬಂತು.
After ಉಭಯಕುಶಲೋಪರಿ, ರಾಯರ ದನಿ ಸೀರಿಯಸ್ಸಾಯಿತು. “ನಿಮ್ಮ ಜಿಲೇಬಿ, ಕಾಫಿ ಅಂತೆಲ್ಲ ಕತೆ ಓದ್ಲಿಕ್ಕೆ ಖುಶಿಯಾಗ್ತದೆ ಮಾರಾಯರೇ, ಆದ್ರೆ ನಮ್ಮಂತ ಡಯಾಬಿಟೀಸ್ ಕೇಸುಗಳು ಏನ್ ಮಾಡ್ಬೇಕು? ನಮ್ಮ ಬಗ್ಗೆ ಕೂಡಾ ಸ್ವಲ್ಪ ಬರೀರಿ. ನಮಗೆ ಚಿನ್ನ, ಶೇರು ಎಲ್ಲ ಹಿಡಿಸುವುದಿಲ್ಲ. ಗೊತ್ತಾಯ್ತಾ? ನಾವು ಇರುವ ದುಡ್ಡನ್ನೆಲ್ಲ ಭಕ್ತಿಯಿಂದ ಕೊಂಡು ಹೋಗಿ ಬ್ಯಾಂಕಿನಲ್ಲಿ ಎಫ್ ಡಿ ಮಾಡುವುದು. ಅದರಲ್ಲಿ ಬರುವ ಬಡ್ಡಿಯಲ್ಲಿ ಮಾತ್ರ ನಮಗೆ ಇಂಟರೆಸ್ಟ್. ಗೊತ್ತಾಯ್ತಾ?”
“ಹ್ಹುಂ.. “
“ನಿಮ್ಮ ಸುಡುಗಾಡು ಶೇರು ಮಾರ್ಕೆಟ್ ಎಲ್ಲ ನಮ್ಗೆ ಬೇಡ. ನಾವು ಅದ್ರಲ್ಲಿ ದುಡ್ಡು ಹಾಕುವುದೂ ಬೇಡ. ಮನೆಮಠ ಎಲ್ಲ ಕಳೆದುಕೊಳ್ಳುವುದೂ ಬೇಡ. ನಮ್ಮಂತವರಿಗಾಗಿಯೂ ಬರೀಬೇಕು ನೀವು.” ಅಂತ ತುಸು ಖಾರವಾಗಿಯೇ ಶುರು ಮಾಡಿದರು.
“ಬರ್ಯೋಣ ಅದಕ್ಕೇನಂತೆ. ಏನು ಬರಿಬೇಕು? ನೀವೇ ಹೇಳಿ, ಸಾರ್.” ಅಂದೆ.
“ಬರೀತೀರಾ, ಬರೀರಿ ಹಾಗಿದ್ರೆ. . , ಕಳೆದ ಒಂದು ವರ್ಷದಲ್ಲಿ ಎಲ್ಲದಕ್ಕೂ ಕ್ರಯ ಡಬ್ಬಲ್ ಆಗಿದೆ, ಬಡ್ಡಿ ದರ ಮಾತ್ರ ಸರೀ ಅರ್ಧ ಆಗಿದೆ. ಬಾಂಡ್ ಫಂಡ್ ಒಂದು ನೋಡುವಾ ಅಂತ ಹೊರಟ್ರೆ ‘ಸಧ್ಯಕ್ಕೆ ಬೇಡ’ ಅಂತ ಮೊದ್ಲೇ ನೀವು ಹೆದರಿಸಿ ಇಟ್ಟಿದ್ದೀರಿ. ಹಾಗಾದ್ರೆ, ನಾವೆಲ್ಲ ಬದುಕುವುದು ಹೇಗೆ? ಇದಕ್ಕೆ ನಿಮ್ಮ ‘ಕಾಸು-ಕುಡಿಕೆ’ಯಲ್ಲಿ ಏನಾದ್ರು ಉತ್ತರ ಉಂಟಾ? ಅದೊಂದು ಬರೀರಿ ನೋಡ್ವ.” ಪ್ರಶ್ನೆ ನೇರವಾಗಿ ತಲೆ ಮೇಲೆಯೇ ಏರಿ ಬಂತು.
“ನಾಡಿದ್ದು ಜ 29 ಕ್ಕೆ ರಿಸರ್ವ್ ಬ್ಯಾಂಕ್ ಮೀಟಿಂಗ್ ಉಂಟಲ್ವಾ, ಬಡ್ಡಿ ದರದ ಮೇಲೆ? ನಾವೆಲ್ಲ ಅದನ್ನೇ ನಂಬಿ ಬದುಕುವವರು. ಈ ಸಲ ಆದ್ರೂ ಬಡ್ಡಿ ದರ ಜಾಸ್ತಿ ಮಾಡ್ತಾರಂತಾ?” ರಾಯರು ಜೋರಾಗಿಯೇ ಹೇಳಿದರು.
ಕಳೆದ ವಾರದ ಜಿಲೇಬಿ-ಕಾಫಿ ಸಮಸ್ಯೆಗೆ  ಗಂಡ-ಹೆಂಡಿರೊಳಗೆ ಹೇಗೋ ಹೊಂದಾಣಿಕೆ ಮಾಡಿಸಿ ಅವರನ್ನು ಸಾಗಹಾಕಿದ್ದಾಯಿತು.  ‘ಈಗ ಈ ಗುರುಗುಂಟಿರಾಯರನ್ನು ಏನಪ್ಪಾ ಮಾಡೋದು?’ ಅಂತ ಗಾಢವಾದ ಯೋಚನೆಯಲ್ಲಿ ಮುಳುಗಿದೆ. ಸಮಸ್ಯೆ ಗಂಭೀರದ್ದೇ!

ಗುರುಗುಂಟಿರಾಯರಂತಹ ನಿವೃತ್ತರು ಹಲವರು – ತಮ್ಮ ಅಲ್ಪ ಸ್ವಲ್ಪ ಪಿಂಚಣಿ, ಎಫ್ ಡಿ ಮೇಲಿನ ಬಡ್ಡಿಯಲ್ಲಿ ಹೆದರಿ ಹೆದರಿ ಖರ್ಚು ಮಾಡುತ್ತಾ ತಮ್ಮ ಜೀವನ ಸಾಗಿಸುವ ಮತ್ತು ಮೊಮ್ಮಕ್ಕಳು ಮನೆಗೆ ಬಂದಾಗ ಮಾತ್ರ ಧಾರಾಳವಾಗಿ ಪರ್ಸ್ ಬಿಚ್ಚುವ ಹೃದಯವಂತರು. ಶೇರಿನ ರಿಸ್ಕ್ ಬೇಡ ಎಂಬವರು. ಅವರ ಆಸಕ್ತಿ, ನಿರ್ಧರಿತ ಹಾಗೂ ಭದ್ರ ಹೂಡಿಕೆಯಲ್ಲಿ. ಕಡೆಮೆಯಾದರೂ, ನಿಗದಿತ ಪ್ರತಿಫಲ ನೀಡುವ ಬಡ್ಡಿದರದ ಆಧಾರದಲ್ಲಿಯೇ ಜೀವನ ಸಾಗಿಸುವ ಇಂತಹ ನಿವೃತ್ತರ, ಆರ್ಥಿಕ ದುರ್ಬಲರ ಒಂದು ದೊಡ್ಡ ವರ್ಗವೇ ಇದೆ. ಅವರುಗಳಿಗೆ ಈ ‘ಏರುತ್ತಿರುವ ಬೆಲೆ ಮತ್ತು ಇಳಿಯುತ್ತಿರುವ ಬಡ್ಡಿ’ ಒಂದು ಅತಿ ಗಂಭೀರವಾದ ಸಮಸ್ಯೆಯೇ ಸರಿ.
ಈಗ ಒಂದು ಪುಟ್ಟ ಕತೆ ಕೇಳಿ:
‘ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಇದ್ದ. ಧಾರ್ಮಿಕ ಪ್ರವಚನ ಮಾಡುತ್ತಾ ಊರೂರು ತಿರುಗುತ್ತಾ ಇರುತ್ತಿದ್ದ. ಒಂದು ದಿನ ರಾತ್ರಿ ಒಂದು ಚಿಕ್ಕ ಹಳ್ಳಿಯಲ್ಲಿ ಪ್ರವಚನ ನಡೆಯಿತು. ಮರುದಿನ ಬೆಳಗ್ಗೆ ಅಲ್ಲಿಂದ ಒಂದು ನದಿ ದಾಟಿ ಇನ್ನೊಂದೂರಿಗೆ ಹೋಗುವ ಪ್ರೋಗ್ರಾಂ ಇತ್ತು. ದಿನದ ಪ್ರವಚನ ಮುಗಿಸಿ ಮಲಗಿದ ಗುರುವಿಗೆ ಸಡನ್ ಆಗಿ ನಡುರಾತ್ರಿಯಲ್ಲಿ ಒಂದು ಡೌಟೋದಯವಾಯಿತು – ಆ ನದಿಯ ಆಳ ಎಷ್ಟು? ದಾಟಲು ದೋಣಿಯೇ ಬೇಕೇ? ಅಲ್ಲ, ಹಾಗೆಯೇ ನಡೆದುಕೊಂಡೇ ದಾಟಬಹುದೇ? ಸರಿ, ಕೂಡಲೇ ಅವರ ಸೇವೆಗಾಗಿ ನಿಯುಕ್ತನಾಗಿದ್ದ ಹುಡುಗನೊಬ್ಬನಿಗೆ ಬೆಳಗ್ಗೆ ಬೇಗ ಹೋಗಿ ನದಿಯ ಆಳವನ್ನು ತಿಳಿದು ಬರುವಂತೆ ಆರ್ಡರ್ ಕೊಟ್ಟ. ಆ ಹುಡುಗನಾದರೋ ಮಹಾ ಮೇಧಾವಿ! ಬೆಳಗ್ಗೆ ಆದಷ್ಟು ಬೇಗ ಎದ್ದು ನದಿಯ ಬಳಿಗೆ ಹೋಗಿ ಯಾರನ್ನೋ ವಿಚಾರಿಸಿದ. ನದಿಗೆ ಒಂದೊಂದು ಕಡೆ ಒಂದೊಂದು ಆಳ ಎಂದು ತಿಳಿದು ಬಂತು. ಗುರುಗಳಿಗೆ ಏನೆಂದು ಹೇಳುವುದು? ಸರಿಯಾದ ಒಂದು ಉತ್ತರ ಕೊಡಬೇಕಲ್ಲವೇ? ಅದಕ್ಕೆ, ಒಂದು ಅಳತೆಗೋಲು ಹಿಡಿದುಕೊಂಡು ಒಂದು ಮರದ ಬೊಡ್ಡೆಯ ಮೇಲೆ ಏನೆಲ್ಲಾ ಕಸರತ್ತು ಮಾಡಿಕೊಂಡು ನದಿಯ ಹಲವು ಕಡೆಗಳಲ್ಲಿ ಆಳವನ್ನು ಅಳೆದ. ಆಮೇಲೆ ಯಾವುದೇ ಕಾಲ್ಕ್ಯುಲೇಟರ್ ಸಹಾಯ ಇಲ್ಲದೆ ತಲೆಯೊಳಗೇ ಏನೇನೋ ‘ಮಣ ಮಣ’ ಮಾಡಿಕೊಂಡು ಆಳದ ‘ಸರಾಸರಿ’ ಲೆಕ್ಕ ಹಾಕಿದ. ವಾಪಾಸು ಬಂದು ಗುರುವನ್ನು ಎಬ್ಬಿಸಿ ‘ನದಿಯ ಆಳ ೪ ಅಡಿ, ಗುರುಗಳೇ’ ಎಂದು ತನ್ನ ಸರ್ವೆ ರಿಪೋರ್‍ರ್ಟ್ ಒಪ್ಪಿಸಿದ. ಬಾಲಕನ 4 ಅಡಿ ಆಳದ ರಿಪೋರ್‍ರ್ಟ್ ನಂಬಿ ನಿಶ್ಚಿಂತೆಯಿಂದ ನದಿ ದಾಟ ಹೋದ ಆರಡಿಯ ಗುರುಗಳು ಈ ಜಗತ್ತನ್ನೇ ದಾಟಿ ಪರಲೋಕವನ್ನು ಸೇರಿದರು.’
ಇದು ಕತೆ.
ಇದೇ ರೀತಿ ನಮ್ಮ ಭಾರತ ಸರಕಾರದ ಬಳಿಯೂ ಒಂದು ಅಳತೆಗೋಲು ಇದೆ- ಸರಾಸರಿ ಮಾಪಲು. ದೇಶದ ಪ್ರಗತಿ, ಬೆಲೆಯೇರಿಕೆ ಇತ್ಯಾದಿ ಅಂಕಿ ಅಂಶಗಳನ್ನು ಕರಾರುವಕ್ಕಾಗಿ ಕಾಲ ಕಾಲಕ್ಕೆ ಬೇರೆ ಬೇರೆ ಆರ್ಥಿಕ ಕ್ಷೇತ್ರಗಳಲ್ಲಿ, ಬೇರೆ ಬೇರೆ ಜಾಗಗಳಲ್ಲಿ ಅಳತೆ ಮಾಡಿ; ಹಾಗೆ ಸಂಗ್ರಹಿಸಿದ ಬೆಟ್ಟದಷ್ಟು ಗಾತ್ರದ ಅಂಕೆ-ಸಂಖ್ಯೆಗಳನ್ನು ಕಂಪ್ಯೂಟರ್‌ಗಳ ಸಹಾಯದಿಂದ  ಸರಾಸರಿ ತೆಗೆಯುತ್ತಾರೆ. ವಾಸ್ತವದಲ್ಲಿ, ಈ ಅಂಕಿ-ಅಂಶಗಳು ಕೆಲವೆಡೆ ಜಾಸ್ತಿ, ಕೆಲವೆಡೆ ಕಡಿಮೆ, ಕೆಲವೆಡೆ ಏರು, ಕೆಲವೆಡೆ ತಗ್ಗು. ಕೆಲವೆಡೆ ಪ್ರಗತಿ, ಕೆಲವೆಡೆ ದುರ್ಗತಿ, ಕೆಲವೆಡೆ ದುಡ್ಡು, ಕೆಲವೆಡೆ ಬರೇ ಮಡ್ಡು. ಹುಡುಗನ ಅತ್ಯದ್ಭುತ ಮೇಧಾಶಕ್ತಿಯ ಸರಾಸರಿಯನ್ನು ನಂಬಿ ನದಿ ದಾಟಿದ ಗುರುವಿನಂತೆ ನಮ್ಮ ಸರಕಾರವೂ ಈ ಸರಾಸರಿ ಅಂಕಿಗಳನ್ನು ಹಿಡಿದುಕೊಂಡು ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ. ಜೊತೆಗೆ ನಮ್ಮನ್ನೂ ಕೈಹಿಡಿದು ಮುನ್ನಡೆಸುತ್ತದೆ.
ನಮ್ಮ ದೇಶದ ಹಣಕಾಸು ವ್ಯವಸ್ಥೆಯ ಹೊಣೆ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ನ ತಲೆಯ ಮೇಲಿದೆ. ಬಡ್ಡಿ ದರ, ಹಣದ ಹರಿವು ಇವೆರಡು ಅದರ ಕೈಯಲ್ಲಿ ಇರುವ ಅಸ್ತ್ರಗಳು. ಆರ್ಥಿಕ ಪ್ರಗತಿ ಬೇಕೆಂದಾಗ ಹಣದ ಹರಿವು ಜಾಸ್ತಿ ಮಾಡಿ ಬಡ್ಡಿದರ ಕಡಿಮೆ ಮಾಡೋದು. ಪ್ರಗತಿಯೊಡನೆ ಬೆಲೆಯೇರಿಕೆ ಜಾಸ್ತಿಯಾದಾಗ ಬಡ್ಡಿದರ ಏರಿಸಿ ಹಣದ ಹರಿವನ್ನು ಕಡಿಮೆ ಮಾಡುವುದು. ಇದೊಂದು ಸಿದ್ಧ ಮಾದರಿ (ಫಾರ್ಮುಲಾ). ಜನವರಿ  29 ರಂದು ಆರ್.ಬಿ.ಐ ತನ್ನ ಕ್ರೆಡಿಟ್ ಪಾಲಿಸಿಯ ತ್ರೈಮಾಸಿಕ ಅವಲೋಕನ ಮಾಡುತ್ತದೆ. ಸರಾಸರಿ ಬೆಲೆಯೇರಿಕೆ, ಸರಾಸರಿ ಪ್ರಗತಿಯನ್ನು ಗಮನದಲ್ಲಿ ಇಟ್ಟುಕೊಂಡು ತನ್ನ ಬಡ್ಡಿ ದರವನ್ನು ಅಗತ್ಯ ಕಂಡಲ್ಲಿ ಪರಿಷ್ಕರಿಸುತ್ತದೆ.
ಯಾವುದೇ ಅಂತಹ ‘ಸರಾಸರಿ’ ಪಾಲಿಸಿ ಬದಲಾವಣೆಯೂ ಎಲ್ಲರಿಗೂ ‘ಸರಾಸರಿ’ಯಾಗಿ ತಟ್ಟುವುದಿಲ್ಲ. ಒಂದೊಂದು ವರ್ಗದವರಿಗೆ ಒಂದೊಂದು ರೀತಿಯಲ್ಲಿ ತಟ್ಟುತ್ತದೆ. ಈ ಬಾರಿ ಬಡ್ಡಿ ದರವನ್ನು ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಇಟ್ಟಲ್ಲಿ ಅಥವ ಇನ್ನೂ ಇಳಿಸಿದಲ್ಲಿ ಉದ್ಯಮದವರಿಗೆ ಒಳಿತು. ಬೆಲೆಯೇರಿಕೆಯಿಂದ ಬಳಲುತ್ತಿರುವ ಗ್ರಾಹಕರಿಗೆ ಬಡ್ಡಿದರವನ್ನು ಏರಿಸಿ ಬೆಲೆಯೇರಿಕೆ ನಿಯಂತ್ರಿಸಿದರೇ ಒಳಿತು. ಗುರುಗುಂಟಿರಾಯರಂತಹ ನಿವೃತ್ತರಿಗೂ, ಇನ್ನೆಷ್ಟೋ ಮಂದಿ ಆರ್ಥಿಕ-ದುರ್ಬಲ ಮಹಿಳೆಯರಿಗೂ, ಮತ್ತು ಠೇವಣಿಯನ್ನೇ ನಂಬಿ ಬದುಕುವ ಇನ್ನಿತರ ಆರ್ಥಿಕ ಅಲ್ಪಸಂಖ್ಯಾತ ವರ್ಗದವರಿಗೂ ಬಡ್ಡಿ ದರ ಆದಷ್ಟು ಜಾಸ್ತಿಯಾಗಬೇಕಾಗಿರುವುದು ಬರೇ ಆಗ್ರಹ ಮಾತ್ರವಲ್ಲ, ಅಗತ್ಯ ಕೂಡಾ.
ಆದರೆ ಪ್ರಗತಿಯ ಹೆಸರಿನಲ್ಲಿ ಬಡ್ಡಿದರ ಕಡಿಮೆ ಮಾಡುತ್ತಾ ಹೋಗಿ ಜೊತೆ ಜೊತೆಗೆ ಹಣದುಬ್ಬರಕ್ಕೂ ಉತ್ತೇಜನ ನೀಡಿದರೆ, ಬಡ್ಡಿದರವನ್ನೇ ನಂಬಿ ಬದುಕುವ ಠೇವಣಿದಾರರ ಗತಿಯೇನು? ಇದನ್ನು ಅರ್.ಬಿ.ಐ ಆಗಲಿ, ಅಥವ ವಿತ್ತ ಮಂತ್ರಾಲಯವಾಗಲಿ  ವಿಶೇಷವಾಗಿ ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಹಿರಿಯ ನಾಗರಿಕರಿಗೆ ಅರ್ಧ ಶೇಖಡಾ ಜಾಸ್ತಿ ಬಡ್ಡಿದರ ಕೊಟ್ಟ ಮಾತ್ರಕ್ಕೆ ಈ ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಕೊಂಡಹಾಗೆ ಆಗುವುದಿಲ್ಲ ತಾನೇ?.
ಆರ್ಥಿಕ ಪ್ರಗತಿಗಿಂತ ಮಹತ್ವದ್ದು ಅದರ ಸಮಾನ ಹಂಚಿಕೆ (Equitable distribution). ಹಾಗಾದರೆ ಎಲ್ಲರೂ ಬದುಕಿಯಾರು. ಬರೇ ‘ಪ್ರಗತಿ, ಪ್ರಗತಿ’ ಎಂದು ಸರಾಸರಿ ಲೆಕ್ಕದಲ್ಲಿ ನದಿದಾಟ ಹೊರಟರೆ ಹಲವರು ಅದರ ಪ್ರವಾಹದಲ್ಲಿ ಕೊಚ್ಚಿ ಹೋಗುವ ಅಪಾಯವಿದೆ. ಸಧ್ಯದ ಪರಿಸ್ಥಿತಿಯಲ್ಲಿ ದೇಶದ ಪ್ರಗತಿ ಕೆಲವೆಡೆ ಮಾತ್ರ ಮಡುಕಟ್ಟಿದ್ದು, ಸರಕಾರದ ದೃಷ್ಟಿಯು ಅಭಿವೃದ್ಧಿಯನ್ನು ಎಲ್ಲಾ ಆರ್ಥಿಕ ವರ್ಗಗಳಲ್ಲೂ ಸಮಾನವಾಗಿ ಪಸರಿಸುವೆಡೆ ಇರಬೇಕಾದ್ದು ಅತಿಮುಖ್ಯ.

‍ಲೇಖಕರು avadhi

May 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

4 ಪ್ರತಿಕ್ರಿಯೆಗಳು

 1. K.VITTAL SHETTY

  I think this is written prior to 3rd quarter review of RBI credit policy in jan 2010.On 20th April 2010, RBI announced the Annual Credit Policy an made only marginal increase in interest rates much to the chagrin of all the depositors.
  After liberalisation in 1991,RBI is taking pro borrower policy rather than pro depositors policy taken till then,
  The depositors,investors,senior citizens associations is not as vocal and powerful as is CII,FICCI and industrial lobby.Both RBI and SEBI is seem to have abdicated its responsibility of protecting the interest of depositors and investors and instead supporting the cause of industrialists which is very antithesis to its preamble,Unless depositors associations protest this kind of injustice will continue

  ಪ್ರತಿಕ್ರಿಯೆ
 2. P.Sheshadri

  ಪ್ರಿಯ ಜಯದೇವ ಪ್ರಸಾದರೇ,
  ನಿಮ್ಮ ಬರಹಗಳನ್ನು ಓದಿದೆ.
  ಚನ್ನಾಗಿ ಬರೆಯುತ್ತೀರಿ… ನಿಮ್ಮನ್ನು ಸಂಪರ್ಕಿಸುವುದು ಹೇಗೆ?
  ಇದು ನನ್ನ ಇ ಮೇಲ್ ಐಡಿ.
  [email protected]
  ಪಿ.ಶೇಷಾದ್ರಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: