ಕಾಸು ಕುಡಿಕೆ: ನಮ್ಮ ಗೂಳಿತ್ತಾಯರಿಗೆ ಇದೊಂದು ಹುಚ್ಚು

ಕಾಸು ಕುಡಿಕೆ -೧೪ ಜಯದೇವ ಪ್ರಸಾದ ಮೊಳೆಯಾರ

‘ಫ್ಯೂಚರ್ಸ್ ಟ್ರೇಡಿಂಗ್ ಎಂಬ ಸಮೂಹನಾಶಕ ಶಸ್ತ್ರಾಸ್ತ್ರ!!’ Derivatives are the financial weapons of mass destruction. . . . . . Warren Buffet ಡಿರೈವೇಟಿವ್ಸ್ ಎನ್ನುವುದು ವಿತ್ತೀಯ ಸಮೂಹನಾಶಕ ಶಸ್ತ್ರಾಸ್ತ್ರ. . . . . . . .. .ವಾರನ್ ಬಫೆಟ್. ಹೋದ ವಾರದ ಕಾಕುವಿನಲ್ಲಿ ಡೇ ಟ್ರೇಡಿಂಗ್ ಬಗ್ಗೆ ಬರೆದ ಎಚ್ಚರಿಕೆ ಲೇಖನವನ್ನು ಓದಿದ ಶೇರುಲೋಕದ ಎಂಟೆದೆಯ ಬಂಟರಾದ ಗೂಳಿತ್ತಾಯರು ನನಗೆ ಫೋನ್ ಮಾಡಿ ಗಹಗಹಿಸಿ ನಕ್ಕರು. ಯಕ್ಷಗಾನದಲ್ಲಿ ಅಸುರಾದಿಗಳು ನಗ್ತಾರಲ್ವ? ಹಾಗೆ. ಅವರು ತಮ್ಮ ನಗೆ ನಿಲ್ಲಿಸಿ ನನಗೆ ಮಾತನಾಡಲು ಅವಕಾಶ ಕೊಡುತ್ತಾರೋ ಅಂತ ಕಾಯುತ್ತಾ ‘ಇವರು ಇಷ್ಟು ಜೋರಾಗಿ ನಗುವುದು ಯಾಕಿರಬಹುದು?’ ಅಂತ ಯೋಚನೆಗೆ ತೊಡಗಿದೆ. ಅಂತೂ ಕೊನೆಗೊಮ್ಮೆ ನಗೆ ನಿಲ್ಲಿಸಿ ಅವರೇ ಕೇಳಿದರು, “ಅಲ್ಲ, ನೀವು ಇಷ್ಟು ಬೇಗ ಟೆನ್ಶನ್ ತಗೊಂಡ್ರೆ ಹೇಗೆ ಮಾರಾಯ್ರೇ? ನಿಮ್ಮ ಆ ಜುಜುಬಿ ‘ಡೇ ಟ್ರೇಡಿಂಗ್’  ಏನೂ ಅಲ್ಲ. ಡೇ ಟ್ರೇಡಿಂಗ್ ಮಾಡೋರೆಲ್ಲ ಪುಟುಗೋಸಿಗಳು. ಅವತ್ತು ತಗೊಂಡ ಶೇರು ಅವತ್ತೇ ಮಾರಿ ಕೈ ತೊಳ್ಕೊಳ್ತಾರೆ. ನಿಜವಾದ ಗಂಡಸ್ತನ ಇರುವುದೇ ನಮ್ಮ ‘ಪೊಸಿಶನ್’ ಅನ್ನು ಮುಂದುವರಿಸ್ಕೊಂಡು ಹೋಗುವುದರಲ್ಲಿ. ರಾತ್ರೋ ರಾತ್ರೆ ಎನಾದ್ರೂ ಆಗಬಹುದು. ಅಂತಹ ಸಂದರ್ಭದಲ್ಲೂ ನಮ್ಮ ಪೊಸಿಶನ್ ಇಟ್ಕೊಂಡೇ ಹೋಗೋನೇ ನಿಜವಾದ ಗಂಡಸು.” ಅಂತ ಇನ್ನೊಮ್ಮೆ ರಾಕ್ಷಸ ವೇಷಧಾರಿಯಂತೆ ದೀರ್ಘ ಅಟ್ಟಹಾಸ ನೀಡಿದರು.
ಈ ಗೂಳಿತ್ತಾಯರು ಶೇರು ವಿಷಯದಲ್ಲಿ ಒಬ್ಬ ಜಗಜಟ್ಟಿಯೇ ಸರಿ. ಸಿಕ್ಕಾಬಟ್ಟೆ ರಿಸ್ಕ್ ತಗೊಂಡು ಅಗ್ರೆಸ್ಸಿವ್ ಆಗಿ ಶೇರು ಮಾರುಕಟ್ಟೆಯಲ್ಲಿ ಗೂಳಿಯೇ ಹೆದರಿ ಹೋಗುವಂತೆ ಮುನ್ನುಗ್ಗುವ ಗೂಳಿತ್ತಾಯರಿಗೆ ಯಾವ ಭಯವೂ ಇಲ್ಲ. ಅವರ ಧೈರ್ಯ ನೋಡಿ ಬೇರೆಯವರೇ ಹೆದರಬೇಕಷ್ಟೆ ಹೊರತು ಅವರು ಹೆದರಿ ಹಿಂಜರಿಯುವ ಕುಳವಾರು ಖಂಡಿತವಾಗಿಯೂ ಅಲ್ಲ.  ಪಿತ್ರಾರ್ಜಿತವಾಗಿ ಬಂದ ಸಂಪತ್ತಿನ ಅರ್ಧಭಾಗವನ್ನು  ಶೇರು ಹೋಮದಲ್ಲಿ ಈಗಾಗಲೇ ಕಳೆದುಕೊಂಡಿದ್ದಾರೆ. ಆದಷ್ಟು ಬೇಗನೇ ಇನ್ನರ್ಧವನ್ನೂ ಮುಳುಗಿಸಿ ಸಂತ ಶೇರುದಾಸರಾಗಿ ಕಾವಿಯುಟ್ಟು, ಮಾಲೆ ತೊಟ್ಟು, “ನೀರ ಮೇಲಣ ಗುಳ್ಳೆ, ನಿಜವಲ್ಲವೋ ಹರಿಯೆ. . . ‘ ಅಂತ ಕೀರ್ತನೆ ಹಾಡುತ್ತಾ ಮನೆ ಮನೆ ಸುತ್ತುತ್ತಾ ಒಂದು ದಿನ ನಿಮ್ಮ ಮನೆಗೂ ಬಂದಾರೆಂದು ಊರವರ ಅಂಬೋಣ. ಗೂಳಿತ್ತಾಯರು, ಅವರೇ ಹೇಳಿದಂತೆ ಡೇ ಟ್ರೇಡಿಂಗ್‌ಗೆ ಕೈ ಹಾಕುವುದಿಲ್ಲ. ಅವರು ಹಾಕಿದ್ರೆ ಪಟಿಯಾಲ ಮಾತ್ರ, ಇಲ್ದಿದ್ರೆ ಇಲ್ಲ. ‘ಹುಲಿ ಹಸಿದಿದೆಯಾದ್ರೂ ಎಂದಾದರು ಹುಲ್ಲು ತಿನ್ನುವುದೇ?’ ಅಂತ ಅಮರೀಶ್ ಪುರಿ ಕಣ್ಣು ಕೆಕ್ಕರಿಸಿ ಕೇಳಿರಲಿಲ್ಲವೇ? ಹಾಗೆ. ನನಗೆ ಫೋನಾಯಿಸಿದ ಗೂಳಿತ್ತಾಯರು, “ಫ್ಯೂಚರ್ಸ್ ಟ್ರೇಡಿಂಗ್ ಬಗ್ಗೆ ಬರೀರಿ, ಸಾರ್. ಅದರ ಎಲ್ಲಾ ರಿಸ್ಕ್ ಬಗ್ಗೆಯೂ ಬರೀರಿ. ಮತ್ತೆ ಹಾಂ! ಅದರಲ್ಲಿ ನಾನೂ ಒಬ್ಬ ತೆಂಡೂಲ್ಕರ್ ಅಂತ ಬರೆಯುದನ್ನು ಮಾತ್ರ ಮರೀಬೇಡಿ. ಬೇಕಿದ್ರೆ ಫೋಟೋ ಕಳಿಸ್ತೇನೆ. ಪಾಸ್‌ಪೋರ್ಟ್ ಸೈಜು. . . . . . ” ರಾವಣನ ಭಂಗಿ ಬಿಟ್‌ಬಿಟ್ಟು ಪಕ್ಕಾ ವ್ಯಾವಹಾರಿಕ ಸ್ಟೈಲಿಗೆ ಇಳಿದರು ಗೂಳಿತ್ತಾಯರು. ಇವರೇ ನಮ್ಮ ಗೂಳಿತ್ತಾಯರು – ಗುರುಗುಂಟಿರಾಯರ ವಿರೋಧ ಪದ! ಒಬ್ಬರದ್ದು ಹುಚ್ಚು ಧೈರ್ಯವಾದರೆ ಇನ್ನೊಬ್ಬರದ್ದು ಹುಚ್ಚು ಹೆದರಿಕೆ. ಕಾಸುಕುಡಿಕೆಯಲ್ಲಿ ನಮಗೆ ಇಬ್ಬರೂ ಆಪ್ತರೇ. ಆದರೆ ಅವರಿಬ್ಬರು ಮುಖಾಮುಖಿಯಾದರೆ ಒಂದು ‘೨೦೧೨‘ಏ ಆದೀತೋ ಏನೊ? ಇದುವರೆಗೆ ಆಗಿಲ್ಲ. ನಾವು ಬದುಕಿದೆವು! ಮುಂದೊಮ್ಮೆ ಎಂದಾದರೂ ಆದೀತೋ ಏನೊ? ಬಲ್ಲವರಾರು? ಅದಿರಲಿ, ಸಧ್ಯಕ್ಕೆ ಫೂಚರ್ಸ್ ಟ್ರೇಡಿಂಗ್‌ನ ಬಗ್ಗೆ ವಿವರಣೆ ಕೊಡಬೇಕೆಂದು ಗೂಳಿತ್ತಾಯರು ಅಪ್ಪಣೆ ಕೊಡಿಸಿದ್ದಾರೆ. So, there you go. . . . ******* ಶೇರುಗಳ ಡಿರೈವೇಟಿವ್‌ಗಳಲ್ಲಿ ಫ್ಯೂಚರ್ಸ್ ಮತ್ತು ಆಪ್ಶನ್ಸ್ ಎಂಬ ಎರಡು ರೀತಿಯ ವ್ಯವಹಾರದ ಅವಕಾಶ ಇರುತ್ತದೆ. ಫ್ಯೂಚರ್ಸ್ ಬಗ್ಗೆ ಮಾತನಾಡೋಣ, ಆಪ್ಶನ್ಸ್ ಇನ್ನೊಮ್ಮೆ ನೋಡೋಣ. ಬಹಳ ಸರಳವಾಗಿ ತಿಳ್ಕೊಳ್ಳಬೇಕು ಎಂದಿದ್ದರೆ, ಫ್ಯೂಚರ್ಸ್ ಟ್ರೇಡಿಂಗ್ ಎಂದರೆ, ಭವಿಷ್ಯತ್‌ನಲ್ಲಿ ಒಂದು ದಿನ ಒಂದು ಶೇರನ್ನು ಕೊಡುವ ಅಥವ ಕೊಳ್ಳುವ ಕರಾರು. ಉದಾಹರಣೆಗೆ ನೀವು ಗೂಳಿತ್ತಾಯರೊಡನೆ  ಎಪ್ರಿಲ್ ೩೦ ರಂದು  ೧೦೦ ಸ್ಟೇಟ್ ಬ್ಯಾಂಕು ಶೇರುಗಳನ್ನು  ಶೇರೊಂದರ ರೂ ೧೬೦೦ ಕ್ಕೆ ಕೊಳ್ಳುವ ಕರಾರು ಮಾಡಿಕೊಳ್ಳುತ್ತೀರಿ. ಅವರು ಕೊಡುವ, ನೀವು ಕೊಳ್ಳುವ ಕರಾರು, ಅಷ್ಟೆ. ಅದುವೇ ಫ್ಯೂಚರ್ಸ್ ಟ್ರೇಡಿಂಗ್. ಇದಕ್ಕೂ ಡೇ ಟ್ರೇಡಿಂಗ್ ತರಹ ಪೂರ್ತಿ ದುಡ್ಡು ನಿಮ್ಮಲ್ಲಿರಬೇಕಾದ ಅಗತ್ಯವಿಲ್ಲ. ಬ್ರೋಕರುಗಳು ವಿಧಿಸಿದ ಮಾರ್ಜಿನ್ ಮನಿ ಕೊಟ್ಟು ಈ ಕರಾರು ಮಾಡಿಕೊಳ್ಳಬಹುದು. ಆದರೆ ಡೇ ಟ್ರೇಡಿಂಗ್ ತರಹ ಇಲ್ಲಿ ಕೂಡಾ ಶೇರುಗಳ ಹಸ್ತಾಂತರ ಅಥವ ಡೆಲಿವರಿ ನಡೆಯುವುದೇ ಇಲ್ಲ. ಕರಾರಿನ ಪ್ರಕಾರ ಎಪ್ರಿಲ್ ೩೦ ರಂದು ಆ ಶೇರುಗಳ ಮಾರುಕಟ್ಟೆಯ ಮಾರಾಟ ದರ ನಿಮ್ಮದಾಗುತ್ತದೆ. ನಿಮ್ಮ ನಿಗದಿತ ದರಕ್ಕೂ ಮಾರುಕಟ್ಟೆಯ ದರಕ್ಕೂ ಇರುವ ವ್ಯತ್ಯಾಸದನ್ವಯ ಉಂಟಾಗುವ ಲಾಭ ಅಥವ ನಷ್ಟ ನಿಮ್ಮ ಖಾತೆಗೆ ಬರುತ್ತದೆ. ಆ ದಿನದ ಮೊದಲೇ ಯಾವಾಗ ಬೇಕಾದರೂ ಡೀಲ್ ಕ್ಲೋಸ್ ಮಾಡಿಕೊಳ್ಳಲೂ ಬಹುದು. ಇದೂ ಕೂಡಾ ಡೇ ಟ್ರೇಡಿಂಗ್‌ನಂತೆ ಸ್ವಲ್ಪ ಹಣದಲ್ಲಿ ಜಾಸ್ತಿ ಕೊಳ್ಳುವ ‘ಗೇರ್’ ಉಳ್ಳ ಸಲಕರಣೆ; ಹಾಗೂ ವಾಸ್ತವದಲ್ಲಿ ಶೇರುಗಳ ಹಸ್ತಾಂತರ ಇರುವುದಿಲ್ಲ. ಈಗ ಗೂಳಿತ್ತಾಯರು ಹೇಳುವ ರಿಸ್ಕ್: ನೀವು ಸ್ವಲ್ಪವೇ (೧೦%-೨೦%-೩೦% ಇತ್ಯಾದಿ) ಮಾರ್ಜಿನ್ ಮನಿ ಕೊಟ್ಟು ಈ ಕರಾರನ್ನು ಕೊಂಡಕಾರಣ ಶೇರು ಬೆಲೆಯ ದೈನಂದಿನ ಏರಿಳಿಕೆಯನ್ನು ಹೊಂದಿಕೊಂಡು ಬ್ರೋಕರ್ ನಿಮ್ಮಲ್ಲಿ ಹೆಚ್ಚುವರಿ ಮಾರ್ಜಿನ್ ಡಿಮಾಂಡ್ ಮಾಡಬಹುದು. ಉದಾ, ನೀವು ರೂ ೧೬೦೦ ಕ್ಕೆ ಕರಾರು ಮಾಡಿಕೊಂಡ ಸ್ಟೇಟ್ ಬ್ಯಾಂಕು ಶೇರು ಇವತ್ತು ರೂ ೧೫೦೦ ಕ್ಕೆ ಇಳಿಯಿತೆಂದಾದರೆ ಶೇರೊಂದರ ೧೦೦ ರೂಪಾಯಿಗಳ ಇಳಿಕೆಯಾದಂತಾಯಿತು. ಈ ಸಂಭಾವಿಕ ನಷ್ಟವನ್ನು ಬ್ರೋಕರ್ ನಿಮ್ಮ ಖಾತೆಯಿಂದ ದಿನದ ಅಂತ್ಯದಲ್ಲಿ ಮುರಿಯುತ್ತಾರೆ. ಮರುದಿನ, ರೂ ೧೭೦೦ ಕ್ಕೆ ಏರಿದರೆ, ಆ ಸಂಭಾವಿಕ ಲಾಭವನ್ನು ನಿಮ್ಮ ಖಾತೆಗೆ ತುಂಬುತ್ತಾರೆ. ಹೀಗೆ ಪ್ರತಿದಿನ ನಿಮ್ಮ ಕರಾರಿನ ಮೌಲ್ಯವನ್ನು ಮಾರುಕಟ್ಟೆ ದರಕ್ಕೆ ಸಮೀಕರಿಸುತ್ತಾ ನಿಮ್ಮ ಅಕೌಂಟ್ ಡೆಬಿಟ್/ಕ್ರೆಡಿಟ್ ಮಾಡುತ್ತಲೇ ಇರುತ್ತಾರೆ. ಡೇ ಟ್ರೇಡಿಂಗ್ ಒಂದೇ ದಿನದ ವ್ಯವಹಾರವಾದ ಕಾರಣ ಈ ರೀತಿಯ ದೈನಂದಿನ ಕ್ರೆಡಿಟ್/ಡೆಬಿಟ್‌ಗಳು ಇರುವುದಿಲ್ಲ. ಈ ಪದ್ಧತಿಯನ್ನು ಮಾರ್ಕ್-ಟು-ಮಾರ್ಕೆಟ್ ಅನ್ನುತ್ತಾರೆ. ಈ ದೈನಂದಿನ ಏರಿಳಿತಗಳ ಹೊಡೆತವನ್ನು ಸಹಿಸಿಕೊಳ್ಳಲು ನಿಮ್ಮ ಖಾತೆಯಲ್ಲಿ ಸಾಕಷ್ಟು ದುಡ್ಡು ಇರಬೇಕಾಗುತ್ತದೆ. ಇಲ್ಲದವರು ತಮ್ಮ ಶೇರುಗಳನ್ನೇ ದುಡ್ಡಿನ ಬದಲಾಗಿ ಅಡವಿಟ್ಟಿರುತ್ತಾರೆ. ಜಾಸ್ತಿ ಹಣದಾಸೆಗೆ ಇದ್ದ ದುಡ್ಡನ್ನೆಲ್ಲ ಮಾರ್ಜಿನ್ ಮನಿಯಾಗಿ ಉಪಯೋಗಿಸಿದರೆ, ಮಾರ್ಕ್-ಟು-ಮಾರ್ಕೆಟ್ ಹೊಡೆತಕ್ಕೆ ಯಾವುದೇ ದುಡ್ಡು ಲಭ್ಯವಿಲ್ಲದೆ ನಿಮ್ಮ ಖಾತೆಯಲ್ಲಿರುವ ಅಡವಿಟ್ಟ ಉತ್ತಮ ಶೇರುಗಳನ್ನೇ  ಕಂಪ್ಯೂಟರ್ ನಿಮಗೆ ಅರಿವಿಲ್ಲದೆಯೇ ಮಾರಿ ನಿಮ್ಮ ಡೀಲ್ ಅನ್ನು ಕ್ಲೋಸ್ ಮಾಡಿ ಬಿಡುತ್ತದೆ. ನೀವು ಬರೇ ಅಸಹಾಯಕರಾಗಿ ಕೈ ಹಿಸುಕುತ್ತಾ ನೋಡುತ್ತಾ ಕೂರಬೇಕಷ್ಟೆ. ಅಂತಹ ಸಂದರ್ಭದಲ್ಲಿ ಕಂಪ್ಯೂಟರ್ ನಿಮ್ಮ ಕೈಬಿಟ್ಟು, ನಿಮ್ಮ ಪರವಾಗಿ ಡೀಲ್ ಮಾಡಿ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುತ್ತದೆ. ಹೀಗೆ ಇರುವ ಶೇರುಗಳನ್ನೂ ಕಳೆದುಕೊಳ್ಳುತ್ತೀರಿ, ಅದೂ ಕೂಡಾ ಅತಿ ಕಡಿಮೆ ಬೆಲೆಗೆ. ಡೀಲ್‌ನಲ್ಲಿ ಬಂದ ನಷ್ಟ ಬೇರೆ. ಆ ಬಳಿಕ ಮಾರುಕಟ್ಟೆ ವಾಪಾಸು ಚೇತರಿಸಿದರೂ ನಿಮಗದರಿಂದ ಯಾವುದೇ ಪ್ರಯೋಜನವಿರುವುದಿಲ್ಲ. ನೀವು ಕಳೆದುಕೊಂಡ ಉತ್ತಮ ಶೇರುಗಳು ವಾಪಾಸು ಬರಲಾರವು. ಅವು ಹೋದ ಲೆಕ್ಕವೇ. ಹೀಗೆ ಫ್ಯೂಚರ್ಸ್‌ನಲ್ಲಿ ಖರೀದಿ ಮಾಡಿಟ್ಟುಕೊಂಡವರಿಗೆ ರಾತ್ರಿ ಬೆಳಗಾಗುವುದರೊಳಗೆ ಮಾರುಕಟ್ಟೆ ಯಾವುದೇ ನ್ಯೂಸ್‌ಗೆ ಗೋತಾ ಹೊಡೆದರೆ, ಅಥವ ಶಾರ್ಟ್ ಸೇಲ್ ಮಾಡಿಟ್ಟುಕೊಂಡವರಿಗೆ ಮಾರುಕಟ್ಟೆ ಯಾವುದೇ ನ್ಯೂಸ್‌ಗೆ ಮೇಲೆ ಹೋದರೂ ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ. ಈ ಪ್ರಕಾರ ಫ್ಯೂಚರ್ಸ್ ಟ್ರೇಡಿಂಗ್‌ನಲ್ಲಿ ಸರ್ವಸ್ವವನ್ನೂ ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಬೇಸರದ ಸಂಗತಿ ಏನೆಂದರೆ ಅವರಲ್ಲಿ ಹೆಚ್ಚಿನವರು ಅಮಾಯಕರು- ಫ್ಯೂಚರ್ಸ್ ಟ್ರೇಡಿಂಗ್‌ನ ಬಗ್ಗೆ ಏನೇನೂ ವಿವರಗಳನ್ನು ತಿಳಿದುಕೊಳ್ಳದೆ ಅತಿದುಡ್ಡಿನಾಸೆಗೆ ಬೆಂಕಿಯತ್ತ ಆಕರ್ಷಿತರಾದ ಹಾತೆಗಳು. ಸರಕಾರ ಅನಿರೀಕ್ಷಿತವಾಗಿ ಬಿದ್ದರೆ, ಮಾರುಕಟ್ಟೆಯಲ್ಲಿ ಹಗರಣವಾದರೆ, ಇಲ್ಲವೇ ಯಾವುದೇ ಇನ್ನಿತರ ಅತಿದೊಡ್ಡ ಆಪತ್ತು ಬಂದ ದಿನ ಆಗುವ ಅಲ್ಲೋಲ ಕಲ್ಲೋಲದಿಂದ ಟ್ರೇಡಿಂಗ್‌ನಲ್ಲಿ ಮಿತಿಮೀರಿ ಹಣಹೂಡಿದವರ ಮಾರಣಹೋಮವಾಗುತ್ತದೆ. ಫೂಚರ್ಸ್ ಹಿಂದೆ ಹೋದವರ ಫ್ಯೂಚರ್ರೇ ನಿರ್ನಾಮವಾಗಿ ಬಿಡುತ್ತದೆ. ಸಡ್ಡಾಂ ಹುಸೇನನ ಸಮೂಹ ಮಾರಕ ಶಸ್ತ್ರಾಸ್ತ್ರದಂತೆ ಕೆಲಸ ಮಾಡುತ್ತದೆ. ಈ ಮಾತನ್ನು ಹೇಳಿದ್ದು ನಾನಲ್ಲ, ವಾರನ್ ಬಫೆಟ್. ಜಗತ್ತಿನ ಎರಡನೆಯ ಅತಿ ಶ್ರೀಮಂತ ವ್ಯಕ್ತಿಯಾದ ವಾರನ್ ಬಫೆಟ್ ತನ್ನೆಲ್ಲಾ ಸಂಪತ್ತನ್ನು ಶೇರು ಬಜಾರಿನಲ್ಲಿಯೇ ಕಮಾಯಿಸಿದ. ಆತನಿಗೆ ಬಜಾರಿನ ಜೂಜಾಟದಲ್ಲಿ ಎಳ್ಳಷ್ಟೂ ಆಸಕ್ತಿ ಇಲ್ಲ. ಆತನದು ಏನಿದ್ದರೂ ನೇರವಾದ ಡೆಲಿವರಿಯಾಧಾರಿತ ದೀರ್ಘಕಾಲಿಕ ಹೂಡಿಕೆ. ಆತನು ಡಿರೈವೇಟಿಸ್ ಬಗ್ಗೆ ನೀಡಿದ ಅದೊಂದು ‘ವಿತ್ತೀಯ ಸಮೂಹ ನಾಶಕ ಮಾರಕಾಸ್ತ್ರ’  ಎಂಬ ಹೇಳಿಕೆ ಸತ್ಯಸ್ಯ ಸತ್ಯ. ಆತನು ಆ ಮಾತನ್ನು ಅಮೇರಿಕದ ಡಿರೈವೇಟಿವ್ಸ್ ಸಂದರ್ಭಗಳಲ್ಲಿ ಹೇಳಿದ್ದರೂ ಭಾರತದ ಫ್ಯೂಚರ್ಸ್ ಟ್ರೇಡಿಂಗ್ ಕತೆ ಹೆಚ್ಚೇನೂ ಭಿನ್ನವಾದದ್ದಲ್ಲ. ವಿಷಯವರಿಯದವರು ಇದರಿಂದ ದೂರವಿರುವುದೇ ಒಳ್ಳೆಯದು. ಹಲವಾರು ನಿಯಮಗಳನ್ನೊಳಗೊಂಡ ಫ್ಯೂಚರ್ಸ್ ಅನ್ನು ಅರ್ಥಮಾಡಿಕೊಳ್ಳುವುದು ಅತಿ ಸುಲಭವಲ್ಲ. ಹೂಡಿಕೆದಾರರು ಈ ವ್ಯವಹಾರವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಅಲ್ಲದೆ, ಆರಂಭಿಸುವಾಗಲೂ ಒಂದು ಕನಿಷ್ಟ ಮೊತ್ತದೊಂದಿಗೆ ಆರಂಭಿಸಿ ಸಾಕಷ್ಟು ಪರಿಣಿತಿ ಗಳಿಸಿ ಫ್ಯೂಚರ್ಸ್‌ನ ಎಲ್ಲಾ ಆಯಾಮಗಳನ್ನೂ ಚೆನ್ನಾಗಿ ಅರಿತಮೇಲೆಯೇ ಮುಂದುವರಿಯಬೇಕಾಗಿ ಕಾಸು-ಕುಡಿಕೆಯ ವತಿಯಿಂದ ಕಳಕಳಿಯ ವಿನಂತಿ. ನಮ್ಮ ಗೂಳಿತ್ತಾಯರಿಗೆ ಇದೊಂದು ಹುಚ್ಚು. ಅಂತಹ ಹಲವು ಸಾಹಸೀ ವ್ಯಸನಿಗಳು ಮಾರುಕಟ್ಟೆಯಲ್ಲಿದ್ದಾರೆ. ]]>

‍ಲೇಖಕರು avadhi

June 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This